ಕಲೆಯ ಆರಾಧಕ ‘ಕಾಂತರಾಜ್‌’

ಕಲೆಯ ಆರಾಧಕ ‘ಕಾಂತರಾಜ್‌’

ಜಲವರ್ಣದಲ್ಲಿ ಆಸಕ್ತಿ ಬೆಳೆಯಲು ತಂದೆಯ ಪರಿಸರದೊಂದಿಗಿನ ಒಡನಾಟ, ತಾಯಿಯಲ್ಲಿದ್ದ ರಂಗೋಲಿ ಕಲೆಯೇ ಕಾರಣ ಎನ್ನುವ ಕಾಂತರಾಜ್‌ ಎನ್‌. ಕಳೆದ 18 ವರ್ಷಗಳಿಂದ ಕಲೋಪಾಸನೆಯಲ್ಲಿ ತೊಡಗಿದ್ದಾರೆ. ರಾಷ್ಟ್ರ, ಅಂತರಾಷ್ಟ್ರೀಯ ಚಿತ್ರ ಪ್ರದರ್ಶನಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿವೆ.

ಚಿತ್ರಕಲೆಗಳಲ್ಲಿ ಎಷ್ಟೇ ಜನಪ್ರಿಯ ಬಗೆಗಳಿದ್ದರೂ ಜಲವರ್ಣ ಕಲೆಯು ಇಂದಿಗೂ ತನ್ನ ವಿಶಿಷ್ಟ ಸ್ಥಾನವನ್ನು  ಉಳಿಸಿಕೊಂಡಿದೆ. ಭಾರತದ ಪಾರಂಪರಿಕ ಶ್ರೀಮಂತಿಕೆಯನ್ನು ಬಿಂಬಿಸುವ ಕಲೆ ಇದು. ಹದಿನೆಂಟು ವರ್ಷಗಳಿಂದ ಈ ಕಲೆಯ ಆರಾಧನೆಯಲ್ಲಿ ತೊಡಗಿದ್ದಾರೆ ಮಾರತ್ತಹಳ್ಳಿ ನಿವಾಸಿ ಕಾಂತರಾಜ್‌ ಎನ್‌. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.

‘ಬಾಲ್ಯದಿಂದಲೇ ಕಲೆಯ ಬಗ್ಗೆ ಆಸಕ್ತಿ ಇತ್ತು. ಕ್ರೀಡಾ ಚಟವಟಿಕೆಗಳಲ್ಲಿಯೂ ಭಾಗವಹಿಸುತ್ತಿದ್ದೆ. ವಾಲಿಬಾಲ್‌ನಲ್ಲಿ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪ್ರತಿನಿಧಿಸಿದ್ದೆ ಕಾಲೇಜು ದಿನಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿಯೇ ತಲ್ಲೀನನಾಗಿದ್ದ ನಾನು ದ್ವಿತೀಯ ಪಿಯುಸಿಯಲ್ಲಿ ಅನುತೀರ್ಣನಾದೆ’ ಎನ್ನುವಾಗ ಅವರ ದನಿಯಲ್ಲಿ ಬೇಸರವಿರಲ್ಲಿಲ್ಲ. ಜೀವನದಲ್ಲಿ ಯಶಸ್ಸುಗಳಿಸಿರುವುದರಿಂದ ಈ ಅಂಕಗಳಿಗೆ ಹೆಚ್ಚು ಮಹತ್ವ ನೀಡಲಿಲ್ಲ ಎನ್ನುತ್ತಾರೆ ಅವರು

ಹನುಮಂತನಗರದ ಕಲಾಮಂದಿರ ಕಲಾ ಶಾಲೆಯಲ್ಲಿ ಫೈನ್‌ ಆರ್ಟ್ಸ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ ಅವರು, ಚೇತನ ಲಲಿತ ಕಲಾ ಮಹಾವಿದ್ಯಾಲಯದಿಂದ ಆರ್ಟ್‌ ಮಾಸ್ಟರ್‌ ಪದವಿ ಪಡೆದಿದ್ದಾರೆ. ಹುಬ್ಬಳ್ಳಿಯ ವಿಜಯ ಮಹಾಂತೇಶ್ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ.

ಇತ್ತೀಚೆಗಷ್ಟೇ ಬಾಂಗ್ಲಾದೇಶದಲ್ಲಿ ನಡೆದ ‘ಇಂಟರ್‌ನ್ಯಾಷನಲ್‌ ವಾಟರ್‌ಕಲರ್ ಬಿನಾಲೆ ಅವಾರ್ಡ್‌’ ಪ್ರದರ್ಶನದಲ್ಲಿ ಕಾಂತರಾಜ್ ಭಾಗವಹಿಸಿದ್ದರು. ವಿಶ್ವದ ಪ್ರಸಿದ್ಧ ಕಲಾವಿದರ 600 ಉತ್ತಮ ಕಲಾಕೃತಿಗಳನ್ನು ಈ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು. ಅಲ್ಲಿ ‘ಬೆಸ್ಟ್‌ ಪೇಂಟಿಂಗ್‌ ಆಫ್ ಶೋ ಅವಾರ್ಡ್‌’ ಪಡೆದಿದ್ದು ಕಾಂತರಾಜು ಅವರ ಪ್ರತಿಭೆಗೆ ಸಂದ ಮತ್ತೊಂದು ಗರಿ. ಸದ್ಯ ಇಟಲಿಯಲ್ಲಿ ಇವರ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ.

ಐದು ಸಾವಿರಕ್ಕೂ ಹೆಚ್ಚು ಲ್ಯಾಂಡ್‌ ಸ್ಕೇಪ್‌ ಕಲಾಕೃತಿಗಳನ್ನು ರಚಿಸಿದ್ದಾರೆ. ಬಾದಾಮಿ, ಪಟ್ಟದಕಲ್ಲು, ಐಹೊಳೆ ಸೇರಿದಂತೆ ರಾಜ್ಯದ ವಿವಿಧ ಐತಿಹಾಸಿಕ ಸ್ಥಳಗಳು ಇವರ ಕುಂಚದಲ್ಲಿ ಸುಂದರವಾಗಿ ಅರಳಿವೆ. ಹಳ್ಳಿ ಜೀವನವನ್ನು ಪ್ರತಿಬಿಂಬಿಸುವ ಕಲಾಕೃತಿಗಳಿಗೆ ಅವರದ್ದೇ ಆದ ನವೀನ ವಿನ್ಯಾಸ ರೂಢಿಸಿಕೊಂಡಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಹಳ್ಳಿ ಸೊಗಡನ್ನು ಪರಿಚಯಿಸುತ್ತಿದ್ದಾರೆ. ಬಾದಾಮಿಯ ಬನಶಂಕರಿ ದೇವಾಲಯದ ಸಮೀಪದಲ್ಲಿರುವ ಕಲ್ಯಾಣಿಯೊಂದನ್ನು ಹಿನ್ನೆಲೆಯಾಗಿರಿಸಿಕೊಂಡು ಅವರು ರಚಿಸಿದ ಕಲಾಕೃತಿ ಬಾಂಗ್ಲಾದಲ್ಲಿ ನಡೆದ ಪ್ರದರ್ಶನದಲ್ಲಿ ಮೆಚ್ಚುಗೆ ಗಳಿಸಿತ್ತು.

ಕೆಂಪೇಗೌಡ ಉತ್ಸವ ಪ್ರಶಸ್ತಿ, ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಬೆಂಗಳೂರು ಕಲಾ ಪ್ರತಿಷ್ಠಾನದ ಕಲಾ ಸಂಸ್ಕಾರ್‌, ರಾಷ್ಟ್ರೀಯ ರಂಗೋತ್ಸವ ಪ್ರಶಸ್ತಿ, ವರ್ಲ್ಡ್‌ ವೈಡ್ ಆರ್ಟ್‌ ಮೂಮೆಂಟ್‌ ವತಿಯಿಂದ ‘ಇಂಟರ್‌ನ್ಯಾಷನಲ್‌ ಆರ್ಟ್ ಮಿಶ್ರೊ ಅವಾರ್ಡ್‌’ ಪ್ರಶಸ್ತಿ ಸೇರಿದಂತೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಅನೇಕ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.

ಖಾಸಗಿ ಕಂಪೆನಿಯೊಂದರಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಂತರಾಜ್ ಸಂಜೆ ಸಮಯವನ್ನು ಕಲೆಗಾಗಿ ಮೀಸಲಿಡುತ್ತಿದ್ದಾರೆ. ವಾರಾಂತ್ಯಗಳಲ್ಲಿ ವಿವಿಧ ಪ್ರದೇಶಗಳಿಗೆ ತೆರಳಿ ಲ್ಯಾಂಡ್‌ಸ್ಕೇಪ್ ಚಿತ್ರಿಸುತ್ತಾರೆ.

‘ಕಲಾವಿದನಾಗಿ ಕಲಾಕೃತಿ ರಚಿಸುವುದಷ್ಟೇ ನನ್ನ ವೃತ್ತಿ. ಮಾರಾಟಮಾಡುವುದು ನನ್ನ ಕೆಲಸವಲ್ಲ’ ಎನ್ನುವ ಕಾಂತರಾಜ್‌ ಮಾರಾಟದತ್ತ ಹೆಚ್ಚು ಒಲವು ತೋರಿಲ್ಲ. ಆದಾಗ್ಯೂ ಆಪ್ತವಲಯಕ್ಕೆ ಹಾಗೂ ಗ್ಯಾಲರಿಗಳಿಗೆ ಕಲಾಕೃತಿಗಳನ್ನು ಮಾರಾಟ ಮಾಡುತ್ತಾರೆ. ಒಂದು ಕಲಾಕೃತಿ ಕನಿಷ್ಠ ರೂ20,000 ದಿಂದ ರೂ1.25 ಲಕ್ಷದ ವರೆಗೂ ಮಾರಾಟವಾಗುತ್ತದೆ ಎಂದು ಮಾಹಿತಿ ನೀಡುತ್ತಾರೆ.

‘ಸಾಂಪ್ರದಾಯಿಕ ಕಲೆಯಾದ ಜಲವರ್ಣ ಕರ್ನಾಟಕದಲ್ಲಿ ಕ್ರಮೇಣ ನಶಿಸುತ್ತಿದೆ. ಎಲ್ಲರೂ ಕ್ಯಾನ್ವಾಸ್‌ ಕಲೆಗಳತ್ತ ಮುಖಮಾಡುತ್ತಿದ್ದಾರೆ. ರಾಜ್ಯದಲ್ಲಿ ಅನೇಕರಿಗೆ ಜಲವರ್ಣ ಕಲಾಕೃತಿ ರಚನೆಯಲ್ಲಿ ಆಸಕ್ತಿ ಇದೆ. ಆದರೆ, ಅವರಿಗೆ ಸೂಕ್ತ ವೇದಿಕೆ ಹಾಗೂ ಮಾರ್ಗದರ್ಶನ ಇಲ್ಲ. ಅಂತಹವರಿಗೆ ಪ್ರೋತ್ಸಾಹಿಸುವ ಸಲುವಾಗಿ ‘ಪ್ಲೇನ್‌ ಏರ್ ಪೇಂಟರ್ಸ್‌ ಬೆಂಗಳೂರು’ ಎಂಬ ಫೇಸ್‌ಬುಕ್‌ ಸಮೂಹ ರಚಿಸಿಕೊಂಡು ಮಾರ್ಗದರ್ಶನ ನೀಡುತ್ತಿದ್ದೇನೆ. ‘ಆರ್ಟ್‌ಹೌಸ್‌’ ಹೆಸರಿನ ತಂಡ ಕಟ್ಟಿಕೊಂಡಿದ್ದು, ಅದರ ಮೂಲಕ 10 ವಾರಗಳ ವಾಟರ್ ಕಲರ್‌ ಪೇಂಟಿಂಗ್ ಶಿಬಿರ ನಡೆಸುತ್ತಿದ್ದೇವೆ. ಪ್ರತಿ ಭಾನುವಾರ ಆ ದಿನದ ವಿಷಯಕ್ಕೆ ಅನ್ವಯವಾಗಿ ನಗರದ ವಿವಿಧ ಪ್ರದೇಶಗಳಲ್ಲಿ ತರಬೇತಿ ನಡೆಯುತ್ತದೆ’ ಎನ್ನುತ್ತಾರೆ.

ಅ‍ಪಾರ ತಾಳ್ಮೆ, ಅಮೂಲ್ಯ ಸಮಯ ಬೇಡುವ ಈ ಕಲೆಗೆ ಬ್ರಷ್‌, ಬಣ್ಣ, ಹಾಗೂ ಪೇಪರ್‌ ಅಷ್ಟೇ ಕಚ್ಚಾವಸ್ತುಗಳು. ‘ಅರ್ಚೀಸ್‌’ನಂತಹ ದುಬಾರಿ ಪೇಪರ್‌ಗಳ ಮೇಲೆ ಕ್ಯಾನ್ವಸ್‌ ಅನ್ನೂ ನಾಚಿಸುವಂತೆ ಚಿತ್ರ ಮೂಡಿಸಬಹುದು. ಕಾಂತರಾಜ್‌ ಸಾಮಾನ್ಯವಾಗಿ ಕ್ಯಾಮೆಲ್ ಪೇಯಿಂಟ್‌ ಹಾಗೂ ಮಿಷನ್‌ ಗೋಲ್ಡ್ ಪೇಂಟ್‌ ಬಳಸುತ್ತಾರೆ. ಪ್ರತಿ ವರ್ಷ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ‘ಇಂಟರ್‌ನ್ಯಾಷನಲ್‌ ವಾಟರ್ ಕಲರ್ ಪೇಂಟಿಂಗ್ ಬಿನಾಲೆ’ ನಡೆಯುತ್ತದೆ. ಈ ವರ್ಷದ ಈ ಜಲವರ್ಣದ ಹಬ್ಬಕ್ಕೆ ಕಾಂತರಾಜ್‌ ಕರ್ನಾಟಕದ ಸಂಘಟಕರಾಗಿ ತೊಡಗಿಕೊಂಡಿದ್ದಾರೆ.

ಕಾಂತರಾಜ್‌ ಎನ್‌.

Courtesy : Prajavani.net

http://www.prajavani.net/news/article/2018/05/08/571462.html

Leave a Reply