ನೆನಪು
“ಎಂಬತ್ತನಾಲ್ಕು ಲಕ್ಷ ಜೀವರಾಶಿಗಳಿಗೂ, ಮುನ್ನೂರ ಅರವತ್ತೈದು ದಿನವೂ ಒಂದಲ್ಲಾ ಒಂದು ತಾಪತ್ರಯ ಇದ್ದಿದ್ದೇ ತಗಾ…” – ಅಮ್ಮ ಆಗಾಗ ಹೇಳುತ್ತಿದ್ದ ನಿಗೂಢ, ಸೂಕ್ಷ್ಮ ಮತ್ತು ಅರ್ಥಪೂರ್ಣ ಮಾತಿದು. ಯಾರಾದರೂ ಅಸಹಾಯಕ ಪರಿಸ್ಥಿತಿಯಲ್ಲಿದ್ದಾಗ, ವಂಚನೆಗೊಳಗಾಗಿಯೋ, ಕಾಯಿಲೆ-ಕಸಾಲೆಯೆಂದು ಕಂಗೆಟ್ಟು ನಿಂತಾಗಲೋ, ಒಳಗೊಳಗೇ ನೊಂದುಕೊಳ್ಳುತ್ತ ಸಮಾಧಾನ ಮಾಡುತ್ತಿದ್ದ ಅಮ್ಮನ ನೆನಪು ಈಗ ಮರುಕಳಿಸುತ್ತಿದೆ. ಅವಳ ನಿರ್ವ್ಯಾಜ ಪ್ರೀತಿ, ನನ್ನ ಕಣ್ಣ ದೃಷ್ಟಿಯ ಪರಿಧಿಯಾಚೆಗೂ ವಿಸ್ತರಿಸಿಕೊಳ್ಳುವ ಅಂತ್ಯವೇ ಇಲ್ಲದ ಸಮುದ್ರ. ಆ ವಿಸ್ತೀರ್ಣ ಕೊನೆಗೂ ನನಗೆ ದಕ್ಕಲೇ ಇಲ್ಲ. ಅವಳ ಚಿಂತನೆಗಳು ಯಾವ ಕಾಲದಲ್ಲೂ, ಯಾವ ಅರ್ಥದಲ್ಲೂ ಅಲ್ಲಗಳೆಯಲಾಗದಷ್ಟು ಪ್ರಖರ, ಸಹಜ.
ಬಡತನವನ್ನೇ ಹಾಸಿ ಹೊದ್ದ ಕುಟುಂಬದಿಂದ ಬಂದ ಆಕೆ, ಬಡತನವನ್ನೂ ಒಂದು ಜೀವನ ಮೌಲ್ಯವೆಂದೇ ಭಾವಿಸಿ ಜೀವನ ಸವೆಸಿದಳು. ತುಂಬು ಕುಟುಂಬ ಸಾಗಿಸಲು ಬಿಸಿಲು, ಮಳೆ, ಚಳಿ, ಗಾಳಿ ಎನ್ನದೆ ಅಡಿಕೆ ತೋಟದಲ್ಲಿ, ಗದ್ದೆಯಲ್ಲಿ ದುಡಿದು ಕುಟುಂಬವನ್ನು ಸಲುಹಿದ ಅವಿರತ ಶ್ರಮಶೀಲೆ. ಅಂದಿನ ಕೆಲಸವನ್ನು ಅಂದೇ, ಸಾಧ್ಯವಾದರೆ ನಾಳಿನ ಕೆಲಸವನ್ನೂ ಅಂದೇ ಮಾಡುವ ಜಾಯಮಾನ.
ಜೀವನಾನುಭವದ ಕುಲುಮೆಯಲ್ಲಿ ಪರಿಶುದ್ಧಗೊಂಡು ಬಂದ ಅವಳ ಚಿಂತನೆಗಳಲ್ಲಿ ಹೆಚ್ಚು ಸ್ಪಷ್ಟತೆ ಇತ್ತು. ಸಣ್ಣಪುಟ್ಟ ಸಂಗತಿಗಳಲ್ಲೂ ಬೆರಗು ಕಾಣುತ್ತ ಸಂಭ್ರಮಿಸುವ ಪರಿ, ಚಿಕ್ಕಪುಟ್ಟ ವಿಚಾರಗಳನ್ನೂ ಆಸ್ಥೆಯಿಂದ ಆಲಿಸಿ ಸ್ಪಂದಿಸುವ ರೀತಿ, ಹಿರಿಯರು-ಕಿರಿಯರಲ್ಲಿ ಭೇದವೆಣಿಸದೆ ಬೆರೆಯುವ ಬಗೆ… ಹೀಗೆ ಸಾಕಷ್ಟು ವಿಶೇಷಗಳಿವೆ. ನನ್ನ ಬಾಳಿನಲ್ಲಿ ಆಕೆ ಮೂಡಿಸಿದ ಹೆಜ್ಜೆ ಗುರುತುಗಳು ಮತ್ಯಾರ ಅರಿವಿಗೂ ನಿಲುಕುವಂಥದ್ದಲ್ಲ.
ಕೆಲವೊಂದು ಪ್ರಸಂಗಗಳು ತುಂಬಾ ಕುಗ್ಗಿಸಿ ತಣ್ಣಗೆ ಮಾಡಿದಾಗೆಲ್ಲ ನನ್ನೆಡೆಗೆ ಧಾವಿಸಿ, ತಿಳಿ ಹೇಳಿ, ಸಮಸ್ಯೆಯ ಸಿಕ್ಕುಗಳಿಂದ ಮುಕ್ತಿಗೊಳಿಸಿ ಬದುಕಿನ ಬಂಡಿಯನ್ನು ಮತ್ತೆ ಹಳಿ ಮೇಲೆ ತಂದು ನಿಲ್ಲಿಸಿದ್ದರಲ್ಲಿ ಆಕೆಯ ಮಾಂತ್ರಿಕ ಸ್ಪರ್ಶವಿದೆ. ತನ್ನ ಬುದ್ಧಿವಂತಿಕೆ, ಕೌಶಲ್ಯವನ್ನೆಲ್ಲ ಧಾರೆ ಎರೆದು, ನಾನು ನನ್ನ ಕಾಲ ಮೇಲೆ ನಿಲ್ಲುವಂತೆ ಮಾಡಿದಳಾಕೆ. ಆಕೆಯ ಸಾಮೀಪ್ಯದಿಂದ ಬದುಕಿನ ದಾರಿಯಲ್ಲಿ ಬೆಳಕನ್ನೂ ಭಾಗ್ಯವನ್ನೂ ಕಂಡವನು ನಾನು. ಬಟ್ಟಲುಗಣ್ಣುಗಳ ಮೃದುನೋಟದಲ್ಲೇ ಮನಸ್ಸನ್ನು ಹಿತವಾಗಿ ನೇವರಿಸುತ್ತಿದ್ದ ಆ ಪ್ರೀತಿಯನ್ನು ‘ಅಮ್ಮಾ…’ ಎಂಬುದರ ಹೊರತು ಇನ್ಯಾವ ಹೆಸರಿನಿಂದ ಕೂಗಲಿ!
ಅಮ್ಮ ತೀರಿಹೋಗಿ ಹದಿನಾರು ಸಂವತ್ಸರಗಳೇ ಉರುಳಿದವು. ಇಂದಿಗೂ ಆಕೆಯ ರೂಪ, ಆಕೃತಿ ಕಣ್ಣಿಗೆ ಕಟ್ಟಿದಂತಿದೆ. ಭೌತಿಕವಾಗಿ ಆಕೆ ನನ್ನಿಂದ ದೂರವಾಗಿದ್ದರೂ ಅವಳೊಂದಿಗಿನ ಬಾಳ್ವೆಯ ದಿನಗಳು ಮಾನಸಿಕವಾಗಿ ನನ್ನ ಜೊತೆಯಲ್ಲೆ ಇರುವಂತೆ ಅನಿಸುತ್ತದೆ. ತೇವಗೊಂಡ ಕಣ್ಣಲ್ಲೂ ತನ್ನ ಭರವಸೆಯ ಮಾತಿನಿಂದ ನಗೆ ಮಿಂಚಿಸುತ್ತಿದ್ದ ಅವಳು ಹೋದ ನಂತರ ನನ್ನ ಹೃದಯದ ಒಂದು ಭಾಗ ಇಲ್ಲದಂತಾಗಿದೆ. ಎಲ್ಲವಿದ್ದೂ ಎಲ್ಲರಿದ್ದೂ ಒಮ್ಮೊಮ್ಮೆ ಎದೆ ಹಳವಂಡವಾದಾಗ ಅವಳ ನೆನಪೇ ನನಗೆ ಆಸರೆ. ಇಂಥ ಅಮ್ಮಂದಿರು ಅದೃಷ್ಟಕ್ಕೆ ಸಿಗುತ್ತಾರಷ್ಟೆ. ನನ್ನನ್ನು ಎತ್ತಿ ಮುದ್ದಾಡುತ್ತಿದ್ದ, ಅಪಮಾನದಿಂದ ರೋದಿಸುತ್ತಿದ್ದಾಗ ತಬ್ಬಿ ಸಮಾಧಾನ ಮಾಡುತ್ತಿದ್ದ ಅಮ್ಮನ ಬಗ್ಗೆ ಬರೆಯುತ್ತಿದ್ದಂತೆ ಕಣ್ಣಾಲಿಗಳ ಹಿಂದೆ ಹರಿದು ಬರುವ ಕಂಬನಿ ಈಗಲೋ, ಆಗಲೋ ಎನ್ನುವಂತೆ ಉರುಳಲು ನಿಂತಿದೆ…ಮತ್ಯಾಕೆ ಮಾತು?
You must log in to post a comment.