Need help? Call +91 9535015489

📖 Print books shipping available only in India. ✈ Flat rate shipping

ಪುರೋ(ಅ)ಹಿತ ವರ್ತನೆ

ಪುರೋ(ಅ)ಹಿತ ವರ್ತನೆ
                                             – ರಘೋತ್ತಮ ಕೊಪ್ಪರ್

ಮೊನ್ನೆ ಒಂದು ಮಠಕ್ಕೆ ಹೋದಾಗ ನಡೆದ ಪ್ರಸಂಗವಿದು. ಅಲ್ಲಿ ಒಬ್ಬ ಮಧ್ಯ ವಯಸ್ಕ ತನ್ನ ತಾಯಿಯ ಶ್ರಾದ್ಧ ಮಾಡಿಸುತ್ತಿದ್ದ. ಅವನು ಅತಿ ವಿನಯದಿಂದ ಪುರೋಹಿತನ ಮುಂದೆ ಮುಂದೆ ಹೋಗಿ ಕುಳಿತುಕೊಂಡ. ‘ಏನ್ರಿ ಅದನ್ನು ತರಲಿಲ್ಲ ಇದನ್ನು ತರಲಿಲ್ಲ..’ ಹೀಗೆ ಆ ಪುರೋಹಿತ ಅವನ ಅವನ ಮೇಲೆ ರೇಗುತ್ತಿದ್ದ. ಆತ ಮಾತ್ರ ಇಲ್ಲ.. ಇಲ..್ಲ ಎಂದು ತಪ್ಪಿತಸ್ಥ ಭಾವನೆಯಿಂದ ಅವರ ಮುಂದೆ ತಲೆ ತಗ್ಗಿಸಿದ್ದ. ಅದಾದ ನಂತರ ಕರ್ಮವಿಧಿಗಳನ್ನು ಶುರು ಮಾಡಿದರು. ಕರ್ಮವಿಧಿವಿಧಾನಗಳ ಬಗೆಗೆ ಸರಿಯಾದ ತಿಳಿವಳಿಕೆ ಹೇಳುವ ವ್ಯವಧಾನ ಪುರೋಹಿತನಿಗೆ ಇರಲಿಲ್ಲ. ಆತ ಕೂಗಾಡುತ್ತ, ಚೀರಾಡುತ್ತ ಒಟ್ಟು ಶ್ರಾದ್ಧಕರ್ಮಗಳನ್ನು ಮಾಡಿಸಿದ. ಎಲ್ಲ ಮುಗಿದ ನಂತರ ಆ ಪುರೋಹಿತನು ಶ್ರಾದ್ಧ ಮಾಡಿಸಿದವನಿಗೆ, ‘ನೋಡಿ ದಿನವೂ ತಪ್ಪದೇ ಸಂಧ್ಯಾವಂದನೆ ಮಾಡಬೇಕು’ ಎಂದು ಜೋರು ಮಾಡಿ ಹೇಳಿ ಹೇಳಿ ಹೋದನು. ಈತ ಮಾತ್ರ ತಪ್ಪಿತಸ್ಥನಂತೆ ಬೆಪ್ಪು ಮೋರೆ ಹಾಕಿಕೊಂಡು ಮುಂದಿನ ಸಾರಿ ಎಲ್ಲ ಸರಿಯಾಗಿ ತರಬೇಕು, ಈ ಪುರೋಹಿತನ ಕಡೆಗೆ ಬೈಯಿಸಿಕೊಳ್ಳಬಾರದು ಎಂದು ತನ್ನ ಕುಟುಂಬದ ಇತರ ಸದಸ್ಯರಿಗೆ ತಿಳಿಸಿದ. ಅರೇ ಇದೇನು ವಿಚಿತ್ರ. ತನ್ನ ತಾಯಿಯ ಶ್ರಾದ್ಧ! ತಾನು ದುಡ್ಡು ಖರ್ಚು ಮಾಡಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುವ ಸಮಯದಲ್ಲಿ ಈತನ ಮನಸ್ಸಿಗೆ ಶಾಂತಿಯಿರಲಿಲ್ಲ ಎಂಬುದೇ ವಿಪರ್ಯಾಸ.

ಇದು ಒಂದು ನಿದರ್ಶನ. ಇಂತಹ ಅನೇಕ ಉದಾಹರಣೆಗಳನ್ನು ನಾವು ನೀವೆಲ್ಲ ನೋಡುತ್ತ ಬಂದಿದ್ದೇವೆ. ಪುರೋಹಿತ ವರ್ಗದ ಇಂತಹ ಉಪಟಳಗಳು ಜಗತ್ತಿನಾದ್ಯಂತ ಎಲ್ಲ ಜನಾಂಗಗಳಲ್ಲಿ, ಎಲ್ಲ ಮತಗಳಲಿ,್ಲ ಎಲ್ಲ ಸಮುದಾಯಗಳಲ್ಲಿ ಹಾಗೂ ಎಲ್ಲ ಕಾಲಗಳಲ್ಲಿಯೂ ಕಂಡುಬಂದ ಸಾಮಾನ್ಯ ಸಂಗತಿಯಾಗಿದೆ. ಯಾಕೆ ಹೀಗೆ? ಪೌರೋಹಿತ್ಯ ಮಾಡುವ (ಎಲ್ಲರೂ ಅಲ್ಲ) ಕೆಲವರು ತಮ್ಮನ್ನು ತಾವು ಅತಿ ಜ್ಞಾನಿಗಳೆಂದು ತಿಳಿದುಕೊಂಡಿರುತ್ತಾರೆಯೇ? ಅಥವಾ ಅವರನ್ನು ಬಿಟ್ಟು ಬೇರೆಯವರು ಸಾಂಪ್ರದಾಯಿಕತೆಯನ್ನೇ ಮರೆತಿದ್ದಾರೆ ಎಂಬ ಧೋರಣೆಯೇ? ಅಥವಾ ಪೂಜೆ ಪುನಸ್ಕಾರ ಕರ್ಮಾದಿಗಳು ಇದ್ದಾಗ ಮಾತ್ರ ತಮ್ಮನ್ನು ಮಾತನಾಡಿಸುತ್ತಾರೆ; ಬೇರೆ ಸಮಯದಲ್ಲಿ ಹತ್ತಿರವೂ ಸುಳಿಯುವುದಿಲ್ಲ ಎಂಬ ಆಕ್ರೋಶವೇ?

ಸಾಮಾನ್ಯವಾಗಿ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಪೂಜೆ ಮುಗಿಸಿಕೊಂಡು ಆಫೀಸ್‍ಗೆ ಹೋಗುತ್ತಾರೆ. ಅವರು ಹೊರಗಡೆ ಬಂದಾಗ ಗಂಧ ಅಥವಾ ವಿಭೂತಿ ಹಚ್ಚಿಕೊಂಡಿರುವುದಿಲ್ಲ. ಅದರರ್ಥ ಅವರು ಪೂಜೆಯೇ ಮಾಡುವುದಿಲ್ಲ ಎಂದಲ್ಲ. ಎಲ್ಲರೂ ವೇದ, ಪುರಾಣ, ಧರ್ಮ, ದೇವರು ಹೀಗೆ ಎಲ್ಲ ವಿಷಯಗಳ ಬಗ್ಗೆ ತಿಳಿದುಕೊಂಡಿರುತ್ತಾರೆ. ಕೇವಲ ಅವರ ಬಟ್ಟೆ ನೋಡಿ ಅವರು ಮಾಡರ್ನ್ ಆಗಿದ್ದಾರೆ ಎಂದು ತಿಳಿದುಕೊಳ್ಳುವುದು ತಪ್ಪಲ್ಲವೇ?

ಇದು ಬರಿ ಶ್ರಾದ್ಧಕ್ಕೆ ಸೀಮಿತವಲ್ಲ, ಕೆಲವು ಮಂದಿರಗಳ ಪೂಜಾರಿಗಳು ತಾವೇ ದೇವರೆಂಬಂತೆ ವರ್ತಿಸುತ್ತಾರೆ. ಹಾಗೆ ವರ್ತಿಸುವ ಬದಲು ಬಂದವರಿಗೆ ಪ್ರೀತಿಯಿಂದ (ಸಿಡುಮುಖ ಬಿಟ್ಟು) ತೀರ್ಥ, ಪ್ರಸಾದ ಕೊಟ್ಟರೆ ಭಕ್ತರಿಗೂ ಮಾನಸಿಕ ಸಮಾಧಾನ ಸಿಗುವುದಲ್ಲವೇ? ದೇವಾಲಯಗಳಲ್ಲಿ ಧನಾತ್ಮಕ ಶಕ್ತಿ ಇರುತ್ತದೆ, ಇಲ್ಲಿ ಭೇಟಿ ನೀಡಿದರೆ ದಿನವಿಡಿ ಮನಸ್ಸು ಉಲ್ಲಸಿತವಾಗಿರುತ್ತದೆ ಎಂದು ಎಲ್ಲರೂ ಬರುತ್ತಾರೆ. ಪೂಜೆ ಅಥವಾ ಕರ್ಮಾದಿಗಳನ್ನು ಮಾಡಿಸುವಾಗ ಆಯಾ ವಿಧಾನಗಳ ಅರ್ಥವೇನು, ಅವುಗಳನ್ನು ಮಾಡಿಸಲು ಕಾರಣವನ್ನು ಸಂಕ್ಷಿಪ್ತವಾಗಿ ವಿವರಿಸಿದರೂ ಸಾಕು, ಮಾಡುವ ಸತ್ಕಾರ್ಯದ ಸಾರ್ಥಕ್ಯ ಭಾವ ಭಕ್ತರಲ್ಲಿ ಕಾಣಬಹುದು. ನಾನು ಇಲ್ಲಿ ಹೇಳಿದ್ದು ಒಂದು ನಿದರ್ಶನವಷ್ಟೇ..

ಇಂತಹ ಅನೇಕ ಸನ್ನಿವೇಶಗಳನ್ನು ನೀವೂ ನೋಡಿರಬಹುದು. ಕೆಲವು ಪುರೋಹಿತರ ಇಂತಹ ವರ್ತನೆ ಇಡೀ ಪುರೋಹಿತ ಕುಲಕ್ಕೆ ಕಳಂಕದ ಛಾಯೆಯನ್ನು ಮೂಡಿಸುತ್ತದೆ. ಪುರೋಹಿತರು ಪ್ರೀತಿ ವಿಶ್ವಾಸದಿಂದ ಜನರಿಗೆ ಮಾರ್ಗದರ್ಶನ ಮಾಡುವುದಾದರೆ ದೈವತ್ವದ ಅನುಭವವನ್ನು ಉಂಟುಮಾಡಿದಂತಾಗುತ್ತದೆ. ಪ್ರತಿಯೊಂದು ಆತ್ಮವು ದೈವಿಕ ಸ್ವರೂಪವಾದ್ದರಿಂದ ಭಗವಂತನನ್ನು ಮಾನವರಲ್ಲಿಯೇ ಕಾಣಲು ಯತ್ನಿಸುವುದು ತೀರ ಅಗತ್ಯ.

One comment

  1. Shrinivas Huddar

    ನಿಮ್ಮ ಸಾಮಾಜಿಕ ಕಳಕಳಿ ಮೆಚ್ಚುವಂತಹದು. ಪುರೋಹಿತ ವರ್ಗ ಇದನ್ನು ಅರಿತುಕೊಳ್ಳಬೇಕಿದೆ. ಇಲ್ಲವಾದಲ್ಲಿ ಜನರು ಅವರಿಂದ ದೂರವಾಗಬಹುದು.

Leave a Reply

This site uses Akismet to reduce spam. Learn how your comment data is processed.