ಅಮ್ಮ ಎಂಬ ವಾತ್ಸಲ್ಯದ ಒರತೆ

ಅದು ವಿಪರೀತ ಕಷ್ಟಗಳ ಕಾಲ. ಒಂದಾದ ಮೇಲೊಂದರಂತೆ ಬಂದೆರಗುವ ಯಾತನೆಗಳ ಬರಸಿಡಿಲು ಹಣಿದು ಹೈರಾಣಿಗಿಸಿತ್ತು. ಕೈ ಇಟ್ಟ ಕಡೆಗೆಲ್ಲ ಸೋಲುಗಳ ಸುರಿಮಳೆ. ಅಡಿಯ ಇಡುವೆಡೆಯಲ್ಲ ಹತಾಶೆಯ ಮುಳ್ಳುಗಳು, ಭರವಸೆಯನ್ನೇ ಬುಡಮೇಲು ಮಾಡುವಂತಹ ಅನುಭವಗಳು. ಸುತ್ತಲ ಜಗತ್ತಿನಲ್ಲಿ ಸೆರೆಯಾದ ನೋಟವನ್ನು ಹೊರತಂದು ವೈಯಕ್ತಿಕ ಬದುಕಿನತ್ತ ದಿಟ್ಟಿಯನಿಟ್ಟರೆ, ಅಲ್ಲಿ ದಿಕ್ಕುದಿಕ್ಕಿಗೂ ದಿವಿನಾಗಿ ತೊರುವವಳು ನನ್ನ ‘ಆಯಿ’. ಬದುಕಿನ ಎಲ್ಲ ಯಶಸ್ಸಿಗೂ ಸಾಕ್ಷಿಯಾಗಿ ನಿಂತಿರುವ ಕಲ್ಪವೃಕ್ಷ ಕಾಮಧೇನು. ಜೀವನದ ದುರ್ಬರ ಘಟ್ಟವೊಂದರಲ್ಲಿ ಸಿಲುಕಿ ಇನ್ನು ಆಗದೆಂದು ಕೈಚೆಲ್ಲಿ ಕುಳಿತಾಗ, ತಿಳಿ ಹೇಳಿ, ಸಮಸ್ಯೆಯ ಸಿಕ್ಕುಗಳಿಂದ ಮುಕ್ತಿಗೊಳಿಸಿ ಬದುಕಿನ ಬಂಡಿಯನ್ನು ಮತ್ತೆ ಹಳಿ ಮೇಲೆ ತಂದು ನಿಲ್ಲಿಸಿದರಲ್ಲಿ ಆಕೆಯ ಮಾಂತ್ರಿಕ ಸ್ಪರ್ಶವಿದೆ.

ಬದುಕಿನ ದಾರಿಯನ್ನೀಗ ಹಿಂತಿರುಗಿ ನೋಡಿದಾಗ ಆ ಕೊರಕಲಿನ ಅಪಾಯದಿಂದ ಸೆಳೆದು ತಂದ ಆಕೆಯ ಬಗ್ಗೆ ಅಚ್ಚರಿ ಎನಿಸಿಬಿಡುತ್ತದೆ. ಆಕೆಯ ಮಾರ್ಗದರ್ಶನದಲ್ಲಿ ನನ್ನ ಸ್ವಭಾವನ್ನು ಸಂಸ್ಕರಿಸಿಕೊಳ್ಳುತ್ತ, ವಿಸ್ತರಿಸಿಕೊಳ್ಳುತ್ತ ಹೋದೆ. ಆಕೆಯ ಸಾಮೀಪ್ಯದಿಂದ ಬದುಕಿನ ದಾರಿಯಲ್ಲಿ ಬೆಳಕನ್ನು ಕಂಡವನು ನಾನು. ಬದುಕಿನ “ಧಿಮಾಕು”ಗಳು ಹೆದರಿಸಿ ತಣ್ಣಗೆ ಮಾಡಿದಾಗಲೆಲ್ಲ ಆಕೆ ನನ್ನೆಡಗೆ ಧಾವಿಸಿ ದಾರಿ ತೋರುತ್ತಿದಳು. ರಾಡಿಯಾದ ಮನಃಸ್ಥಿತಿಯನ್ನು ಮೆಲ್ಲನೆ ಅಲ್ಲಾಡಿಸಿ ಗೆಲವು ಸಿಂಪಡಿಸುವ ಆಕೆಯ ಕೈಚಳಕಕ್ಕೆ ಬೆರಗಾಗಿದ್ದೇನೆ. ನಿತ್ಯದ ಬವಣೆಯನ್ನು ಜಾಣತನದಿಂದ ನಿಭಾಯಿಸುವ, ಹಠತ್ತಾನೆ ಬಂದೆರಗುವ ಸಂಕಟಗಳಿಗೆ ಎದೆಯೊಡ್ಡಿ ನಿಲ್ಲುವ, ಭವಿಷ್ಯವನ್ನು ಭರವಸೆಯ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳುವಂತೆ ಮಾಡುವಲ್ಲಿ ಆಕೆಯ ಪಾತ್ರ ಹಿರಿದು. ಕಷ್ಟ ಕಳೆದು ಸುಖದೆಡಗೆ, ಕೃತ್ರಿಮ ಕಳೆದು ನೈಜದೆಡಗೆ ಕೈ ಹಿಡಿದು ನಡೆಸಿದಳು ಅಮ್ಮ.

ಆಕೆಯ ಎಲ್ಲ ಗುಣ- ಸ್ವಭಾವಗಳಲ್ಲಿ ಗುರುತರವಾದ ಮಾನವೀಯ ಗುಣವೊಂದು ಹೆಪ್ಪುಗಟ್ಟಿದ್ದು ನಿಚ್ಚಳವಾಗಿ ಕಾಣುತ್ತಿತ್ತು. ಸೋದರ ಸಂಬಂಧಿಯೊಬ್ಬ ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡು, ತಂದೆಯಿಂದ ‘ಪರಿತ್ಯಕ್ತ’ ನಾಗಿ ಚಿಕ್ಕಮ್ಮನಿಂದಲೂ ‘ತಿರಸ್ಕೃತ’ ನಾಗಿ, ದಿಕ್ಕು ಕಾಣದೆ ನಿಂತಾಗ, ಅಯೀಯೇ ಮುಂದೆ ನಿಂತು ಸಾಂತ್ವನ ಹೇಳಿ ಮನೆಗೆ ಕರೆತಂದಳು. ಯಾವುದೇ ಭೇದವೇಣಿಸದೆ ತನ್ನ ಮಕ್ಕಳೊಟ್ಟಿಗೆ ಆತನನ್ನೂ ಮತೊಬ್ಬ ಮಗನಂತೆ ಬೆಳಿಸಿ, ಮಾಡುವೆ ಮಾಡಿ ಆತನನ್ನು ಬದುಕಿನ ಮುಖ್ಯವಾಹಿನಿಗೆ ತಂದು ನಿಲ್ಲಿಸಿದ್ದು ಸಾಮಾನ್ಯದ ಮಾತೇ? ಘಟನೆ ಸಣ್ಣದೆಂದು ಅನ್ನಿಸಬಹುದು. ಕನ್ನಡಿ ದೊಡ್ಡದಿರಲಿ, ಚಿಕ್ಕದಿರಲಿ ಅದರಲ್ಲಿ ಮೂಡುವ ಪ್ರತಿಬಿಂಬ ಮಾತ್ರ ಮೂಲದ ಪರಿಚಯವನ್ನು ಸಮನಾಗಿಯೇ ಮಾಡಿಕೊಡುತ್ತದೆ. ಕಾಣಲು ಅಪರೂಪವಾದ ಈ ಗುಣ ಆಕೆಯ ಜಾಯಮಾನವೇ ಆಗಿತ್ತೆಂದರೆ ಅದು ಉತ್ಪ್ರೇಕ್ಷೆಯ ಮಾತಲ್ಲ. ಇದು ವಿಸ್ಮಯವೇ ಅಲ್ಲವೇ …!?

ಬತ್ತದ ಜೀವನೋತ್ಸಾಹ, ಹಿತ ಕೆಡದ ರೀತಿ ಸಾಹಸಕ್ಕಿಳಿಯುವ ಮನಸ್ಸು. ದಿನನಿತ್ಯದ ಶ್ರಮವನ್ನು ಸರಸವಾಗಿ ನಿಭಾಯಿಸುತ್ತಾ, ಸಿಟ್ಟು ಸೆಡವುಗಳಿಲ್ಲದೆ, ನಮ್ಮ ದುಡುಕು- ದುಮ್ಮಾನಗಳನ್ನು ಶಾಂತವಾಗಿ ಪರಿಗ್ರಹಿಸುತ್ತಿದ್ದದ್ದು ಆಕೆಯ ದೊಡ್ದಸ್ತಿಕೆಯೇ ಸರಿ. ದೊಡ್ಡ ಸಂಸಾರದ ಪುಟ್ಟ ಹೆಗ್ಗಡತಿ ಆಕೆ. ಹಾಗಾದರೆ ಅಕೆಗೆ ನೋವು ಇರಲಿಲ್ಲವೇ? ಎಂದು ಕೇಳಿದರೆ ಖಂಡಿತ ಇತ್ತು. ಆದರೆ ತನ್ನ ನಗು, ಅದಮ್ಯ ಉತ್ಸಾಹಗಳಿಂದ ತನ್ನ ಒಳಗಿನ ನೋವು ಕಾಣಿಸದಂತೆ ಇದ್ದುಬಿಡುತ್ತಿದಳು ಅಮ್ಮ. ಒಳಗೆ ನೋವು ಹೆಪ್ಪುಗಟ್ಟಿದ್ದರೋ ಹೊರಗೆ ನಗು!

ನಾವಿಂದು ಬಹಿರಂಗದ ಯಶಸ್ಸನ್ನೇ ಯಶಸ್ಸೆಂದು ಗುರುತಿಸುತ್ತಿದ್ದೇವೆ. ದುಡ್ಡು-ದುಗ್ಗಾಣಿ, ಮನೆ, ಒಡವೆ-ವಸ್ತ್ರ, ಆಳು- ಕಾಳುಗಳ ತಿರುಗಣಿಯನ್ನು ಮೆಟ್ಟಿ ನಿಂತು ಅಂತರಂಗದ ಯಶಸ್ಸಿನೆಡೆಗೆ ಸಾಗುವ ದಾರಿಗೆ ಕೈಮರವಾದಳು. ಸ್ವಾಭಿಮಾನಿಯಾಗಿ, ಸ್ವಂತದ ಬದುಕು ಕಟ್ಟಿಕೊಳ್ಳಲು ಆಕೆ ಚಿಮ್ಮು ಹಲಗೆಯಾದಳು. ಜೀವನದ ಪಯಣದ ಎಲ್ಲ ಹಂತಗಳಲ್ಲಿ, ನೋವು-ನಲಿವುಗಳಲ್ಲಿ, ಏಳು-ಬೀಳುಗಳಲ್ಲಿ ಆಕೆಯ ಸಹಭಾಗಿತ್ವ ಇತ್ತು. ಆಕೆಯ ಕಣ್ಣುಗಳಲ್ಲಿ ಸೋಲಿನ ಸವಾಲನ್ನು ಹಿಮ್ಮೆಟ್ಟಿಸುವ ಹೊಳಪೊಂದು ಬೆಳಗುವ ನಕ್ಷತ್ರದಂತೆ ಮಿನುಗುತ್ತಿತ್ತು. ಆಕೆ ಹೇಳುತ್ತಿದ್ದ ಮಾತೊಂದು ಕಲ್ಲಲ್ಲಿ ಕೊರೆದಂತೆ ನನ್ನಲ್ಲಿನ್ನೂ ಉಳಿದುಬಿಟ್ಟಿದೆ. ಅದು ‘ಮಾಣಿ, ನೀನು ದೊಡ್ಡವ ಅನಿಸಿಕೊಂಡರೆ ಸಾಲದು. ದೊಡ್ಡತನವನ್ನು ನಿಜವಾಗಿಯೂ ನಿನ್ನಲ್ಲಿ ಬೆಳೆಸಿಕೊಳ್ಳಕ್ಕು’ ಎನ್ನುವುದು.
‘ಅಮ್ಮ’ ನ ಬಗ್ಗೆ ಹೇಳುತ್ತಾ ಹೋದರೆ ಮಾತಿಗೆ ಕೊನೆ ಎಂಬುದು ಉಂಟೇ? ನೆನಪು ಒಮ್ಮೆ ಸುರುಳಿ ಬಿಚ್ಚಿಕೊಳ್ಳತೊಡಗಿದರೆ ಕೊನೆಯ ಹಂತ ಮುಟ್ಟುವವರೆಗೊ ನಿಲ್ಲುವದಿಲ್ಲ, ಸಾಗರದ ಅಲೆಯಂತೆ ಪುಟಿದೇಳುತ್ತಲೇ ಇರುತ್ತದೆ. ‘ಆಯಿ’ಯ ಪ್ರೀತಿ ಅದು ಬತ್ತದ ಒರತೆ; ಅದು ನೆನಪು ಮಾಡಿಕೊಂಡಷ್ಟು ಸಂತೋಷ ನೀಡುತ್ತದೆ
ಆಕೆ ಇಂದು ಉಳಿದಿಲ್ಲ. ಆದರೆ ಆಕೆಯ ಮಾತು, ಬದುಕು, ತೋರಿದ ವಾತ್ಸಲ್ಯ, ಕರುಣೆಗಳು ಕೊನೆಯ ಉಸಿರು ಇರುವವರೆಗೂ ಮರೆಯುವಂತಿಲ್ಲ. ಆಕೆ ನರನಾಡಿಗಳಲ್ಲಿ ನಿರಂತರವಾಗಿ ತುಂಬಿ ಹರಿಯುತ್ತಲೇ ಇರುವ ಪಾವನಗಂಗೆ. ಒಬ್ಬನೇ ಕುಳಿತಾಗ ಆಗಾಗ ನೆನಪಿನ ಉಗ್ರಾಣದಿಂದ ಹೊರಬಂದು ಮನದೊಳಗಿಂದ ಜಾರುತ್ತಿದ್ದಂತೆ, ಎಂಥದೋ ಅದ್ರರ್ ದ್ರವ ಅರಿವಿಲ್ಲದಂತೆ ಕೆನ್ನೆ ಮೇಲೆ ಜಿನುಗುತ್ತದೆ.

ಚಿತ್ರ: ಗೂಗಲ್

Leave a Reply