“ಆಧುನಿಕ ನಗರದ ಪಾರಂಪರಿಕ ಚಿತ್ರಣ”,

ಬೆಂಗಳೂರು ವಿಶ್ವದ ಅತ್ಯಂತ ಪ್ರತಿಷ್ಠಿತ ನಗರವಾಗಿದೆ. ವಿವಿಧ ಭಾಷಿಕ ವಲಸಿಗರಿಂದ ಬೆಂಗಳೂರು ಎಂದರೆ ಕೇವಲ ಆಧುನಿಕತೆಯನ್ನು ಮಾತ್ರ ಆವಾಹಿಸಿಕೊಂಡಿರುವ ಮಹಾನಗರ ಎಂಬ ಭಾವನೆ ಅನೇಕರಲ್ಲಿ ಮನೆಮಾಡಿದೆ. ಇಂತಹ ಸಂದರ್ಭದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಡಾ.ಎಸ್.ಕೆ. ಅರುಣಿಯವರ ‘ಬೆಂಗಳೂರು ಪರಂಪರೆ: ಇತಿಹಾಸ ಸಂಶೋಧನೆಯ ಹೊಸ ನೋಟಗಳು’ ಎಂಬ ಕೃತಿ ಈ ನಗರಕ್ಕೆ ಇರುವ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮುಖವನ್ನು ಅಚ್ಚುಕಟ್ಟಾಗಿ ಅನಾವರಣಗೊಳಿಸುತ್ತದೆ. ನಮಗೆ ಈ ಕೃತಿ ಮುಖ್ಯವಾಗುವುದು ಸ್ಥಳೀಯ ಚರಿತ್ರೆಯನ್ನು ಕಟ್ಟಿಕೊಡುವ ಅಸಾಧಾರಣ ಮಾದರಿಯಿಂದಾಗಿ. ಇದಕ್ಕಾಗಿ ಆದಷ್ಟೂ ಮೂಲ ಆಕರಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಒಬ್ಬ ಸೂಕ್ಷ್ಮ ಇತಿಹಾಸ ಲೇಖಕನ ಮಾದರಿಯಲ್ಲಿ ಬರೆದಿರುವ ಲೇಖನಗಳಾದರೂ, ಶುಷ್ಕ ಪಾಂಡಿತ್ಯ ಪ್ರದರ್ಶನದಿಂದ ಈ ಕೃತಿ ಹೊರತಾಗಿದೆ. ಬೆಂಗಳೂರು ನಗರದ ವಸಾಹತು ಪೂರ್ವ ಕಾಲದ ಸ್ಮಾರಕಗಳನ್ನು ಪರಿಚಯಿಸುತ್ತಲೇ ಬೆಂಗಳೂರು ಹೇಗೆ ಕಾಲಕಾಲಕ್ಕೆ ಪ್ರವರ್ಧಮಾನಕ್ಕೆ ಬಂದು ಜನಮಾನಸದಲ್ಲಿ ನೆಲೆಯೂರಿತು ಎಂಬುದನ್ನು ಕೃತಿಯು ಕಟ್ಟಿಕೊಡುತ್ತದೆ. ಲೇಖಕರು ಈ ಕೃತಿಗಾಗಿ ನಡೆಸಿದ ಕ್ಷೇತ್ರಕಾರ್ಯವನ್ನು ಈ ಕೃತಿಯಲ್ಲಿ ಮನಗಾಣಬಹುದು. ‘ಬೆಂಗಳೂರು ಪರಿಸರದ ಪ್ರಾಗೈತಿಹಾಸಿಕ ಸಂಸ್ಕೃತಿ’ ಎಂಬ ಮೊದಲ ಲೇಖನವು ಬೆಂಗಳೂರು ಪರಿಸರದಲ್ಲಿ ಮಾನವನ ಚಟುವಟಿಕೆಗಳನ್ನು ಪ್ರಾಗೈತಿಹಾಸಿಕ ನೆಲೆಗಳ ಮೂಲಕ ಪರಿಚಯಿಸುತ್ತದೆ. ಇದು ಮುಖ್ಯವಾಗಿ ಪ್ರಾಗೈತಿಹಾಸಿಕ ಕಾಲದ ಬೆಂಗಳೂರು ಪರಿಸರದ ಅರ್ಕಾವತಿ ಮತ್ತು ಪಿನಾಕಿನಿ ನದಿ ಸೀಮೆಗಳ ನಡುವಿನ ಸಾಂಸ್ಕೃತಿಕ ಭಿನ್ನತೆಗಳನ್ನು ಗುರುತಿಸುತ್ತದೆ. ಇನ್ನುಳಿದ ಲೇಖನಗಳು ಬೆಂಗಳೂರಿನ ಸಂಸ್ಕೃತಿ ಹಾಗೂ ಇತಿಹಾಸವನ್ನು ನಾನಾ ಮಗ್ಗಲುಗಳ ಮೂಲಕ ಮನವರಿಕೆ ಮಾಡಿಕೊಡುತ್ತವೆ. ಈ ಕೃತಿಯಲ್ಲಿ ಬೆಂಗಳೂರು ನಗರ ನಿರ್ಮಾಣ ಪ್ರಕ್ರಿಯೆಗೆ ಸಂಬಂಧಿಸಿದ ವಿವರಗಳಿಗೆ ವಿಶೇಷ ಒತ್ತನ್ನು ನೀಡಲಾಗಿದೆ. ‘ಬೆಂಗಳೂರು ಪೇಟೆಯ ಮೂಲ ರಚನೆ ಮತ್ತು ವಿಸ್ತಾರ’, ‘ಬೆಂಗಳೂರು ಕೋಟೆ’ಯ ಬಗ್ಗೆ ಹೆಚ್ಚು ಅಧಿಕೃತವಾಗಿ ಬರೆಯಲಾಗಿದೆ. ವಸಾಹತು ಕಾಲಘಟ್ಟದಲ್ಲಿ ನಿರ್ಮಾಣವಾದ ಚಿತ್ರಕಲಾಕೃತಿಗಳು ಹಾಗೂ ವರದಿಗಳ ಆಧಾರದ ಮೇಲೆ ಇದನ್ನು ಪುನಾರಚಿಸಲಾಗಿದೆ. ಕೆಂಪೇಗೌಡರು ಹಾಗೂ ಹೈದರ್-ಟಿಪ್ಪು ಸುಲ್ತಾನರ ಕಾಲದಲ್ಲಿ ನಿರ್ಮಾಣವಾದ ಅನೇಕ ಸ್ಮಾರಕಗಳ ಕುರಿತು ದೀರ್ಘವಾಗಿ ಚರ್ಚಿಸಿರುವ ಲೇಖನಗಳಿವೆ. ನಮಗೆ ಅತ್ಯಂತ ಕುತೂಹಲಕರ ವಿಷಯವನ್ನು ತಿಳಿಸುವ ಇನ್ನೆರಡು ಲೇಖನಗಳಿವೆ. ‘ಕೆಂಪೇಗೌಡರ ಕಾಲದಲ್ಲಿ ದಸರಾ ಹಬ್ಬ’ವನ್ನು ಕೂಡ ಆಚರಿಸಲಾಗುತ್ತಿತ್ತು ಎಂಬ ಅಂಶ ವಿಶೇಷವಾದದ್ದು. ಜನಮಾನಸದಲ್ಲಿ ಹುದುಗಿದ್ದ ಕೆಂಪೇಗೌಡರ ಹಜಾರ ಎಂಬ ಮಾತಿನ ಬೆಂಬೆತ್ತಿ ಹುತ್ರಿದುರ್ಗ, ಸಾವನದುರ್ಗ, ಮಾಗಡಿ ಹಾಗೂ ಶಿವಗಂಗೆ ಪ್ರದೇಶಗಳಲ್ಲಿರುವ ನಿರ್ದಿಷ್ಟ ವಾಸ್ತುವಿಶೇಷಗಳ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ನಡೆಯುತ್ತಿದ್ದ ದಸರಾ ಹಬ್ಬದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಈ ಪುಸ್ತಕದ ಅತ್ಯಂತ ಮುಖ್ಯವಾದ ಸೈದ್ಧಾಂತಿಕ ಲೇಖನಗಳೆಂದರೆ ‘ಬೆಂಗಳೂರಿನ ಮೂರು ಯುದ್ಧಗಳು ಮತ್ತು ಸಾಂಸ್ಕೃತಿಕ ಪಲ್ಲಟಗಳು’ ಹಾಗೂ ‘ಪ್ರವಾಸಿಗರ ಕಣ್ಣಲ್ಲಿ ಬೆಂಗಳೂರು’ ಎಂಬ ಎರಡು ಲೇಖನಗಳು. ಇದರಲ್ಲಿ ಮೊದಲನೆಯ ಲೇಖನವು ಬೆಂಗಳೂರು ಪರಿಸರದಲ್ಲಿ ನಡೆದ ಮೂರು ಕದನಗಳು ಹೇಗೆ ಬೆಂಗಳೂರಿನ ಸಾಂಸ್ಕೃತಿಕ ಚಿತ್ರಣವನ್ನು ಬದಲಾಯಿಸಿತು ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ತಿಳಿಸುತ್ತದೆ. ‘ಬೆಂಗಳೂರು ರಕ್ಷಣೆಗೆ ಬಲಿದಾನವನ್ನು ಮಾಡಿದ ಕಿಲ್ಲೇದಾರ್ ಬಹದ್ದೂರ್‌ ಖಾನ್’ ಬಗೆಗಿನ ಮಾಹಿತಿಯಂತೂ ಕನ್ನಡಿಗರಿಗೆ ತೀರ ಹೊಸದು. ಅರುಣಿಯವರು ತಮ್ಮ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ತೆಗೆದ ಚಿತ್ರಗಳ ಜೊತೆಗೆ ಮೂಲ ಆಕರಗಳನ್ನು ಪಾರಂಪರಿಕ ವರ್ಣಚಿತ್ರಗಳು, ಮೂಲ ನಕ್ಷೆಗಳನ್ನು ನೋಡುವ ಅವಕಾಶವನ್ನು ಕೂಡ ಮಾಡಿಕೊಟ್ಟಿದ್ದಾರೆ. ವರ್ಣಚಿತ್ರ ಸಂಪುಟವೊಂದನ್ನು ನೋಡುತ್ತಿರುವ ಅನುಭವವನ್ನೂ ಈ ಪುಸ್ತಕ ಒದಗಿಸುತ್ತದೆ.

courtsey:prajavani.net

“author”: “ಸುಂಕಂ ಗೋವರ್ಧನ”,

https://www.prajavani.net/artculture/book-review/book-650923.html

Leave a Reply