ಇದು ಅಗಲಿಕೆಯ ಸಮಯ!

ಇದು ಅಗಲಿಕೆಯ ಸಮಯ!

                                          – ಹೊಸ್ಮನೆ ಮುತ್ತು

1

ಭವ್ಯ ಭವಿತವ್ಯಕ್ಕಾಗಿ, ಮೇರು ಬದುಕಿಗಾಗಿ ವಿದ್ಯಾರ್ಥಿಗಳು ಎದುರು ನೋಡುತ್ತಿದ್ದಾರೆ. ಅದನ್ನು ಸಾಕಾರಗೊಳಿಸಲೆಂದೇ ಉನ್ನತ ಶಿಕ್ಷಣದ ಕನಸಿನ ಬೆನ್ನೇರಿ ನಗರ, ಪಟ್ಟಣ, ಮೆಟ್ರೊ ಸಿಟಿಗಳಿಗೆ ಹೊರಟು ನಿಂತಿದ್ದಾರೆ. ಅವರ ಹೆಗಲಿನ ಮೇಲೆ ಹೆತ್ತವರ ಹಾಗೂ ತನ್ನದೇ ಕನಸುಗಳನ್ನು, ನಿರೀಕ್ಷೆಗಳನ್ನು ಸಾಕಾರಗೊಳಿಸಿಕೊಳ್ಳುವ ದೊಡ್ಡ ಜವಾಬ್ದಾರಿಯಿದೆ. ವಿದ್ಯಾಭ್ಯಾಸದ ಗುಣಮಟ್ಟದ ದೃಷ್ಟಿಯಿಂದ ಆ ಕಾಲೇಜೇ ಸರಿ, ಈ ಕ್ಯಾಂಪಸ್ಸೇ ಸರಿ ಎಂದು ಪೋಷಕರೇನೋ ನಿರ್ಧರಿಸಿ ಕಳುಹಿಸಲು ತಿರ್ಮಾನಿಸಿಬಿಟ್ಟಿದ್ದಾರೆ. ಮನೆಯಿಂದ ಹೊರಡುವುದು ಖಾತ್ರಿಯೆಂದು ನಿರ್ಧರಿಸಿಕೊಂಡ ಬಳಿಕವೂ ವಿದ್ಯಾರ್ಥಿಗಳ ಮನದಲ್ಲೇನೋ ದುಗುಡ ಮನೆ ಮಾಡಿದೆ. ಹೊರಡುವ ಘಳಿಗೆ ಹತ್ತಿರ ಬಂದಂತೆಲ್ಲ ಭಾವುಕ ಮನಸ್ಸಿನ ವಿದ್ಯಾರ್ಥಿಗಳು ಅಮ್ಮನನ್ನು ಎಷ್ಟು ಕಣ್ಣು ತುಂಬಿಕೊಂಡರೂ ಕೊರತೆ ಅನ್ನಿಸಿ, ಮಿಡುಕಾಡುವುದಿದೆ.
ಹೊಸ ವಾತಾವರಣ, ಸುತ್ತಲೂ ಅಪರಿಚಿತ ಮುಖಗಳು, ಆವರೆಗೂ ಮನೆಯ ಬೆಚ್ಚಗಿನ, ನೆಚ್ಚಿನ ಆರೈಕೆಯ ಆವರಣದಲ್ಲೇ ಬೆಳೆದವರು, ಶಿಕ್ಷಣ ಎಂದರೆ ಕರಿನೀರ ಶಿಕ್ಷೆ ಎಂದು ಭಾವಿಸಿದರೆ ಅಚ್ಚರಿಯಿಲ್ಲ. ಮನೆಯ ಅಕ್ಕ, ಅಣ್ಣ, ಓಡಿ ಆಡಿ ಬೆಳೆದ ಮನೆ, ಓಣಿಯ ಓರಗೆಯ ಗೆಳೆಯ-ಗೆಳತಿಯರನ್ನೆಲ್ಲ ತೊರೆದು ಸಾಗುವುದರಿಂದ ಅವರ ಸ್ಥಿತಿ ಬೆಚ್ಚನೆಯ ಗೂಡಿನಿಂದ ಜಾರಿಬಿದ್ದ ಗುಬ್ಬಚ್ಚಿ ಮರಿಯ ಚಡಪಡಿಕೆ.

ಹೊಸ ಭೌಗೋಳಿಕ ಪರಿಸರ, ಸಂಸ್ಕøತಿ, ಕೊಂಚ ಭಿನ್ನವಾದ ಆಹಾರ ಪದ್ಧತಿ, ಜೊತೆಗೆ ಹೊಸ ಸಹಪಾಠಿಗಳು, ಯಾರನ್ನು ನಂಬಬೇಕು, ಬಿಡಬೇಕು ಎಂದು ತಿಳಿಯದೇ ಶಿಕ್ಷಕರ ಎದುರು ಕೆಲಕಾಲ ವಾಮನನಂತಾಗಿ ಹೋಂಸಿಕ್‍ನ ತುದಿ ಮೊದಲಿಲ್ಲದ ದುಗುಡವನ್ನು ಅನುಭವಿಸುವುದು ಸುಳ್ಳಲ್ಲ. ನೆನಪಿನ ಸುರುಳಿಯೊಂದು ಹಾಗೇ ಬಿಚ್ಚಿಕೊಳ್ಳುತ್ತದೆ. ನೆನಪಿನ ಪಯಣಕ್ಕೆ ಯಾವ ಸಿಗ್ನಲ್ಲು, ಯಾವ ಟ್ರಾಫಿಕ್ಕು…?

ಮನೆ, ಮನೆಯೊಳಗಿನ ಮಂದಿ ನೆನಪಾದಾಗಲೆಲ್ಲ ಎದೆಯೊಳಗೆ ಮಡುಗಟ್ಟಿನ ನೋವಿನ ಮೋಡ ಫಳ್ಳನೆ ಒಡೆದು ಕಣ್ಣಂಚಿನಲ್ಲಿ ಹನಿಗೂಡುತ್ತದೆ. ಪ್ರತಿದಿನವೂ ತಲೆಬಾಗಿಲಲ್ಲಿ ನಿಂತು ಆದರಿಸಿ, ಅಕ್ಕರೆಯಿಂದ ಮೈದಡವಿ ಸಂತೈಸುವ ಮನೆಮಂದಿಯ ಆ ಶುದ್ಧ ಅಂತಃಕರಣ ಪರಿಯ ಮರೆಯುವುದಾದರೂ ಹೇಗೆ ಸಾಧ್ಯ? ಅವು ಮನದ ತುಂಬ ಹಸಿರಾಗಿ ಹಂದರ ಎಬ್ಬಿಸಿ ಅಂಬರಕ್ಕೆ ಕುಡಿಚಾಚಿ ಒಡಲನ್ನು ಮೀಟುತ್ತಿರುತ್ತವೆ.

ಕೆಲವೊಮ್ಮೆ ಒಂಟಿಯಾಗಿ ನಿಂತು ಧ್ಯಾನಿಸುವಾಗ ಊರಿಗೆ ಹೋಗಿ ಬಿಡುವ ತರ್ಕ ಮೊದಲಾದರೂ, ಪೋಷಕರು, ಭವಿಷ್ಯದ ವೈಶಾಲ್ಯತೆ ಮತ್ತು ಭರವಸೆಗಳು ಹಾಗೇ ಅಲ್ಲಿಯೇ ಕಾಲೂರುವಂತೆ ಮಾಡಿ ಬಿಡುತ್ತವೆ. ನಮ್ಮ ಪರಿಸರ, ಪರಿಜನರಿಂದ ದೂರವಾಗಿರುವ ಭಾವದಿಂದ ಪರಿತಪಿಸುತ್ತಾ ಆ ಹೊಸ ಪರಿಸರದಲ್ಲಿ ಒಂಟಿ ಕಾಲಲ್ಲಿ ನಿಂತು ಕಾಯುತ್ತಿರುವ ಕೆಲಮಂದಿಗೆ ತನ್ನವರಿಂದ ಏನಾದರೂ ದೂರವಾಣಿಯೋ, ಸುದ್ದಿಯೋ ಸಿಕ್ಕಿತೆಂದಾದರೆ ವಿಚಿತ್ರ ಖುಷಿಯಲ್ಲಿ ಮುಳುಗೇಳುತ್ತಾರೆ. ದಿನಗಳು ನರಳಿ, ಹೊರಳಿ ತಿಂಗಳುಗಳು ಬದಲಾದಂತೆ ಮೆಲ್ಲನೆ ಕಾಲೇಜು, ಅಲ್ಲಿನ ಪರಿಸರ, ಸಹಪಾಠಿಗಳ ಸ್ನೇಹ-ಸಹಕಾರ, ತಮಾಷೆ, ಪ್ರೀತಿ-ಸಲುಗೆ, ತರಗತಿಯ ಪಾಠ-ಪ್ರವಚನಗಳು ಜೊತೆಗೆ ಉಪನ್ಯಾಸಕರ ಸಾಂತ್ವನ, ರಜಾ ದಿನಗಳ ಮೋಜು-ಮಸ್ತಿಗಳು ತಮ್ಮ ತೆಕ್ಕೆಗೆ ತೆಗೆದುಕೊಂಡು ತಮ್ಮವರನ್ನಾಗಿ ಮಾಡಿಕೊಂಡು ಬಿಡುತ್ತವೆ. ಎಲ್ಲರಿಗೂ ಇಷ್ಟವಾಗುವ ಹಾಗೆ ಬದುಕಿನ ಎಳೆಗಳು ಬಲಗೊಳ್ಳುತ್ತಲೇ ಹೋಗುತ್ತವೆ. ಅಷ್ಟಕ್ಕೂ ಸಂವೇದನಾ ಭರಿತ ಮಾತುಗಳಿಂದ, ನಡವಳಿಕೆಗಳಿಂದ ಒಂದು ವಿಶಿಷ್ಟ ವಾತಾವರಣ ಹುಟ್ಟು ಹಾಕುವುದು ಅಸಾಧ್ಯವೇನೂ ಅಲ್ಲ. ವಿದ್ಯಾರ್ಥಿಗಳ ಈ ಎಲ್ಲ ಭಾವನೆಗಳೇನೋ ಸರಿ, ಆದರೆ ಕೊಂಚ ತಾಳ್ಮೆ ಮೈಗೂಡಿಸಿಕೊಂಡರೆ ಅವರದೇ ಪರಿಸರ ಅಲ್ಲಿ ಸೃಷ್ಟಿಸಿಕೊಳ್ಳುವುದರ ಜೊತೆಗೆ, ಇರುವ ಪರಿಸರವನ್ನೇ ತಮ್ಮದೆಂದು ಹೊಂದಿಕೊಳ್ಳುವ ಭಾವ ಬೆಳೆಯುತ್ತದೆ. ಅವರ ಇಷ್ಟದ ಚೌಕಟ್ಟು ಅಲ್ಲಿಯೇ ಕೈಗೂಡಿ, ಭಾವನಾತ್ಮಕ ಸೆಲೆಗಳು ಇದ್ದಲ್ಲಿಯೇ ಚಿಮ್ಮತೊಡಗುತ್ತವೆ. ಯಾರದೋ ಮಾತಿಗೆ, ಆದರಕ್ಕೆ, ಆತ್ಮಿಯತೆಗೆ ಕಾಯುತ್ತಿದ್ದವರು ಅವೆಲ್ಲವನ್ನೂ ತಮ್ಮ ಕೈಹಾಸಿನಲ್ಲೇ ದಕ್ಕಿಸಿಕೊಂಡು ತೃಪ್ತಿ ಪಡೆಯುವ ಸ್ಥಿತಿ ನಿರ್ಮಾಣವಾಗುತ್ತದೆ. ದಿಕ್ಕಪಾಲಾಗಿ ಚೆದುರಿ ಹೋಗುವ ಯೋಚನೆಗಳನ್ನು ಹಿಡಿದಿಟ್ಟುಕೊಂಡು ಒಂದಷ್ಟು ಹೊತ್ತು ತೀರಾ ಗಟ್ಟಿ ಸಹನೆಯೊಂದಿಗೆ ನಮ್ಮನ್ನು ನಾವು ಕಟ್ಟಿಹಾಕಿಕೊಳ್ಳಲೇಬೇಕು. ಹೀಗಾದಾಗ ಮೈಮನಸುಗಳು ನಿರಾತಂಕವಾದಾವು!

ಕೊನೆಗೂ ಆಗಬೇಕಾದದ್ದು ಇಷ್ಟೆ, ಅತ್ಯಂತ ತಾಳ್ಮೆಯಿಂದ ಅನವರತ ಶೃದ್ಧೆಯಿಂದ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳುವುದು. ಎಲ್ಲ ಸವಾಲುಗಳನ್ನು ಮೀರಿ ಮುಂದುವರೆಯುವ ಚೈತನ್ಯ ಸದಾ ಜಾಗೃತವಾಗಲಿ. ಒಂದು ಕ್ರಿಯಾಶೀಲ ಮನಸ್ಸು ಏನೆಲ್ಲ ಅದ್ಭುತಗಳನ್ನು ಸೃಷ್ಟಿ ಮಾಡಬಲ್ಲದು. ನೆನಪಿರಲಿ. ಆಸೆ-ಕನಸು-ಮನಸ್ಸು ಒಂದಾದರೆ ಅದರಿಂದ ಹೊರಹೊಮ್ಮುವ ಪರಿಣಾಮ ನಿಜಕ್ಕೂ ಊಹಿಸಲು ಅಸಾಧ್ಯ. ಹೀಗಾಗಿ, ಇಚ್ಛಾಶಕ್ತಿಯನ್ನು ಮಾತ್ರ ಜತನದಿಂದ ಕಾಯ್ದುಕೊಳ್ಳಬೇಕು.

Leave a Reply