“ಕಥೆ | ಸುಪ್ತ”,

ನನಗೂ ವಿಶ್ವನಿಗೂ ಮೈಸೂರಿನಲ್ಲಿ ಕಾಲೇಜು ಓದುವ ದಿನಗಳಿಂದಲೂ ನಂಟು. ಒಂದೇ ಕ್ಲಾಸಿನಲ್ಲಿ ಓದುತ್ತಿದ್ದುದಷ್ಟೇ ನಮ್ಮ ಒಡನಾಟಕ್ಕೆ ಕಾರಣವಾಗಿರಲಿಲ್ಲ. ಪರಸ್ಪರ ಸಹಾಯಕ್ಕೆ ಒದಗುತ್ತಿದ್ದುದೇ ನಮ್ಮ ನಿಡುಗಾಲದ ಸ್ನೇಹಕ್ಕೆ ಹೇತುವಾಗಿತ್ತು. ಅವನ ಓದಿಗೆ ಸಹಾಯಕನಾಗಿ ನನ್ನನ್ನು ಆಶ್ರಯಿಸಿದ್ದ. ಊರಿನಿಂದ ತಡವಾಗಿ ತಲಪುತ್ತಿದ್ದ ಮನಿಯಾರ್ಡರ್‌ನಿಂದ ಅಡಚಣೆಯಾಗುತ್ತಿದ್ದ ನನಗೆ ಬೇಕಾದಾಗ ವಿಶ್ವನ ಕೈಯಿಂದ ಸಾಲ ಸೌಲಭ್ಯ ಸಿಗುತ್ತಿತ್ತು. ಮೇಲಾಗಿ ಹೊರಗೆ ಸುತ್ತಾಡಲು ಹೋಗಬೇಕಾದರೆ ನನ್ನನ್ನು ಎಂದೂ ಅವನು ಬಿಟ್ಟು ಹೋಗುವವನಲ್ಲ. ಹಾಗೆ ಬೆಳೆದ ಒಡನಾಟ ಕಾಲೇಜು ಮುಗಿಯುವ ಹೊತ್ತಿಗೆ ಭಾವನಾತ್ಮಕವಾಗಿ ನಮ್ಮನ್ನು ಬೆಸೆದಿತ್ತು. ನಾನು ಒಂದು ನೌಕರಿ ಹಿಡಿದರೆ ಅವನು ಮಂಗಳೂರಿನಲ್ಲಿ ಹೋಟೆಲ್ ಉದ್ಯಮಕ್ಕೆ ಕೈಹಾಕಿದ್ದ. ಮೊದಮೊದಲು ನನಗೆ ಬರುತ್ತಿದ್ದ ಪಗಾರ ಖರ್ಚಿಗೆ ಅಲ್ಲಿಂದಲ್ಲಿಗೆ ಸಾಕಾಗುತ್ತಿತ್ತು. ಎಂಟು-ಹತ್ತು ವರ್ಷಗಳಲ್ಲಿ ನಾಲ್ಕು ಕಾಸು ಕೈಯ್ಯಲ್ಲಿ ಉಳಿಯತೊಡಗಿತ್ತು. ಅಂತಹ ಒಂದು ದಿನ ವಿಶ್ವ ನನ್ನನ್ನು ಹುಡುಕಿ ಆಗ ನಾನಿದ್ದ ಪುಣೆಗೆ ಬಂದಿದ್ದ. ನಮ್ಮ ಒಡನಾಟ ಫೋನ್ ಮುಖಾಂತರವೂ, ಒಂದೊಮ್ಮೆ ಭೇಟಿಯಿಂದಲೂ ಮುಂದುವರಿದಿತ್ತು. ವರ್ಗವಾಗುತ್ತಾ ದೂರವಾದರೂ ಬಂ→ಧ ಮಾತ್ರ ಹಾಗೇ ಉಳಿದಿತ್ತು. ಕಳೆದ ಒಂದು ದಶಕದಲ್ಲಿ ವಿಶ್ವ ಭೌತಿಕವಾಗಿ ಬದಲಾದಂತೆ ನನಗೆ ಅನಿಸಿತು. ಜೀವದಲ್ಲಿ ಕುಗ್ಗಿ ಹೋಗಿದ್ದ. ಯಾವುದೋ ಚಿಂತೆ ಮುಖದಲ್ಲಿ ಕಾಣುತ್ತಿತ್ತು. ಸಂಜೆ ಆಫೀಸು ಮುಗಿದಮೇಲೆ ವಿಶ್ವನನ್ನು ಕರೆದುಕೊಂಡು ಹೋಟೆಲಿಗೆ ನಡೆದೆ. ಕಷ್ಟ-ಸುಖಗಳನ್ನೆಲ್ಲಾ ಮಾತನಾಡಿಕೊಂಡೆವು. ವಿಶ್ವನ ಮುಖದಲ್ಲಿ ಕಾಣುತ್ತಿದ್ದ ಚಿಂತೆಯ ಬಗ್ಗೆ ನಾನೇ ಮಾತು ತೆಗೆದೆ. ಅದನ್ನೇ ಕಾಯುತ್ತಿದ್ದಂತಿದ್ದ ವಿಶ್ವ ಬುಳಬುಳನೆ ತನ್ನ ವ್ಯವಹಾರವನ್ನು ಬಿಚ್ಚಿಟ್ಟ. ‘ನಾನು ನಡೆಸುತ್ತಿರುವ ಹೋಟೆಲ್ ಈಗ ಮಾರಾಟಕ್ಕಿದೆ. ನಾನೇ ಖರೀದಿಸಲು ಯೋಚಿಸುತ್ತಿದ್ದೇನೆ. ಹಣದ ಹೊಂದಾಣಿಕೆ ಆಗುತ್ತಿಲ್ಲ. ಏನಾದರೂ ಸಹಾಯ ಕೇಳಲು ನಿನ್ನನ್ನು ಹುಡುಕಿಕೊಂಡು ಬಂದೆ’ ಎನ್ನುತ್ತಾ ನನ್ನ ಮುಖ ನೋಡಿದ. ಕಾಲೇಜು ದಿನಗಳ ಒಂದುರೀತಿಯ ಋಣಭಾವಕ್ಕೆ ಒಳಗಾಗಿದ್ದೆ ನಾನು. ಅವನು ನಿರೀಕ್ಷಿಸುತ್ತಿದ್ದ ಮೊತ್ತ ಆ ದಿನಗಳಲ್ಲಿ ಮಹತ್ವದ್ದಾದರೂ ನಾನು ಕೊಡಲಾರದ ಮೊತ್ತವಾಗಿರಲಿಲ್ಲ. ‘ಈಗ ನನ್ನ ಬಳಿ ಇರುವುದು ಈ ಚಿನ್ನದ ಸರ ಮಾತ್ರ’ ಎಂದು ಕೊರಳಿನಿಂದ ಸರವನ್ನು ಬಿಚ್ಚಿಕೊಡಲು ಮುಂದಾದ. ನಾನು ಕೈಹಿಡಿದು ಬಲವಂತವಾಗಿ ನಿರಾಕರಿಸುವವರೆಗೆ ಅವನು ಒತ್ತಾಯ ಮಾಡುತ್ತಲೇ ಇದ್ದ. ಕೊನೆಗೆ ಯಾವುದೇ ದಾಖಲೆಗಳಿಲ್ಲದೆ ಅವನು ನಿರೀಕ್ಷಿಸಿದ ಹಣವನ್ನು ಹೊಂದಿಸಿ ಕೊಟ್ಟೆ. ಅದೇ ದಿನದ ರಾತ್ರಿ ಬಸ್ಸಿಗೆ ಹೊರಡುವಾಗ ‘ಅನಂತು, ಯಾವುದೇ ದಾಖಲೆ ಇಲ್ಲದೆ ಇಷ್ಟೊಂದು ಹಣ ಕೊಟ್ಟಿದ್ದಿಯಾ. ನನಗೆ ಬಂಧುಗಳು, ಸ್ನೇಹಿತರು ಯಾರೂ ಸಹಾಯ ಮಾಡಲಿಲ್ಲ. ನೀನು ಇಲ್ಲಿಗೆ ವರ್ಗವಾದ ಮೇಲಿಂದ ನಿನ್ನ ಫೋನ್‌ ನಂಬರು ನನ್ನ ಬಳಿ ಇರಲಿಲ್ಲ. ಮೊನ್ನೆ ನಿನ್ನ ಗೆಳೆಯ ರಾಜೀವ ಊರಿನಲ್ಲಿ ಸಿಕ್ಕಿದ್ದ. ಅವನು ನಿನ್ನ ನಂಬರು, ವಿಳಾಸ ಎಲ್ಲ ಕೊಟ್ಟ. ನಾನು ಖರೀದಿಸುವ ‘ರುಚಿ ಹೋಟೆಲು’ ಕದ್ರಿಯಲ್ಲಿದೆ. ಆ ಕಡೆ ಬಂದಾಗ ಖಂಡಿತಾ ಬಾ’ ಎಂದು ಕೈಬೀಸಿ ವಿದಾಯ ಹೇಳಿದ್ದ. ಈ ವ್ಯವಹಾರವಾಗಿ ಹತ್ತು-ಹನ್ನೆರಡು ವರ್ಷಗಳೇ ಸಂದಿವೆ. ವಿಶ್ವ ಪ್ರತಿತಿಂಗಳು ನಾನು ಕೊಟ್ಟ ಮೊತ್ತದ ಬಡ್ಡಿಯೆಂದು ನನ್ನ ಬ್ಯಾಂಕ್ ಖಾತೆಗೆ ನಿಯಮಿತವಾಗಿ ಹಣ ಕಳುಹಿಸುತ್ತಿದ್ದ. ಆಗೊಮ್ಮೆ ಈಗೊಮ್ಮೆ ವ್ಯಾಪಾರ ಚೆನ್ನಾಗಿ ನಡೆಯುತ್ತಿರುವ ಬಗ್ಗೆಯೂ ತಿಳಿಸುತ್ತಿದ್ದ. ಹಾಗೆ ಏಳೆಂಟು ವರ್ಷ ಸಾಲದ ಬಾಬತ್ತು ಕಂತು ಸರಾಗ ಬರುತ್ತಿತ್ತು. ಎರಡು ಮೂರು ವರ್ಷಗಳಿಂದ ಹಣ ಸಂದಾಯ ನಿಂತು ಹೋಯಿತು. ವಿಶ್ವನಿಗೆ ಫೋನು ತಾಗುತ್ತಲೂ ಇರಲಿಲ್ಲ. ನಾನು ಕೊಟ್ಟ ಮೊತ್ತದ ಬಹುಪಾಲು ಹಣವೂ ಬಡ್ಡಿಯೂ ನನಗೆ ಬಂದಿರುವುದರಿಂದ ನಾನೂ ಆ ವ್ಯವಹಾರದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಏನೋ ಸಕಾರಣವಿರಬಹುದೆಂದು ಸುಮ್ಮನಾದೆ. ಎಂದಾದರೂ ಮಂಗಳೂರು ಕಡೆ ಹೋದರೆ ಸುಖದುಃಖ ವಿಚಾರಿಸಿ ಬಂದರಾಯಿತು ಎಂದುಕೊಂಡೆ. ಆಗಾಗ ವರ್ಗವಾಗಿ ಇಲ್ಲಿಂದಲ್ಲಿಗೆ ಹೋಗಬೇಕಾದ ಅನಿವಾರ್ಯತೆ, ಶಿರಸಿಯಲ್ಲಿ ಅಮ್ಮನ ಅನಾರೋಗ್ಯ ಹೀಗೆ ಹತ್ತು ಹಲವು ಬಾಬತ್ತುಗಳ ಕಾರಣದಿಂದಾಗಿ ನೆನಪಿನಂಗಳದಲ್ಲಿ ಎಲ್ಲವೂ ಸುಪ್ತವಾಗಿ ಹೋಯಿತು. ಇತ್ತೀಚೆಗೆ ನನ್ನ ಮೊಬೈಲು ಕಳೆದುದರಿಂದ ಕೊನೆಯ ಕೊಂಡಿಯೂ ಕಡಿದುಕೊಂಡಿತು. ಉಳಿದದ್ದು ಕಾಲೇಜಿನ ದಿನಗಳಲ್ಲಿ ಅವನು ಹೇಳುತ್ತಿದ್ದ ಅಕ್ಕಾಯಕ್ಕನ ಹೆಸರು ಮತ್ತು ಊರಿನ ಹೆಸರಾದ ಸೀತಾಂಗುಳಿಯ ಹತ್ತಿರದ ಸಾಮಂತಬಯಲು ಮಾತ್ರ. ಶಿರಸಿಯ ಗ್ರಾಮಾಂತರದವನಾದ ನನಗೆ ವಿಶ್ವನ ಊರು ಮಹಾ ದೂರವೆಂದೇ ತೋರುತ್ತಿತ್ತು. ಮುಂಬೈ ಸೇರಿದ ಮೇಲಂತೂ ಇನ್ನೂ ದೂರವೆಂಬ ಭಾವ ನೆಲೆಸಿಬಿಟ್ಟಿತು. ಹೀಗಿರುವ ಒಂದುದಿನ ನನ್ನ ಮಗಳ ಲಗ್ನ ನಿಮಿತ್ತ ಮಾತುಕತೆಗೆ ಮಂಗಳೂರಿಗೆ ಹೋಗುವ ಅನಿವಾರ್ಯತೆ ಬಂತು. ಹಣದ ಬಗ್ಗೆಯಲ್ಲದಿದ್ದರೂ ಆತ್ಮೀಯ ಗೆಳೆಯನ ಸುಖದುಃಖ ವಿಚಾರಿಸುವ ಕುರಿತು ನೆನಪಿಸಿಕೊಂಡೆ. ಮಂಗಳೂರಿನ ಭಾವೀ ಬೀಗರ ಮನೆಯ ಕೆಲಸವೆಲ್ಲ ಮುಗಿದ ಮೇಲೆ ಬಿಡುವು ಮಾಡಿ ಕದ್ರಿಯಲ್ಲಿದ್ದ ರುಚಿ ಹೋಟೆಲ್ ಹುಡುಕಿ ತೆಗೆದೆ; ಚಿಕ್ಕದಾದರೂ ಜನ ಓಡಾಡುವ ಜಾಗದಲ್ಲಿತ್ತು. ವಿಶ್ವ ಅಲ್ಲಿರಲಿಲ್ಲ. ಅವನು ಆರೋಗ್ಯ ಕೆಟ್ಟು ಹೋಟೆಲ್ ಮಾರಾಟ ಮಾಡಿ ಊರು ಸೇರಿದ ವಿಚಾರವಷ್ಟೇ ಗೊತ್ತಾಯಿತು. ಮರುದಿನ ಸೀತಾಂಗೋಳಯಲ್ಲಿ ಬಸ್ಸಿಳಿದು ನನ್ನ ಬಳಿ ಇದ್ದ ಮಾಹಿತಿಯನ್ನು ಹೇಳಿದಾಗ ಹಿರಿಯರೊಬ್ಬರು ದಾರಿ ತೋರಿದರು. ವಾಹನ ಓಡುವ ಜಾಗವಲ್ಲದ ಕಾರಣ ನಡೆದುಕೊಂಡೇ ಹೊರಟೆ. ಗುಡ್ಡದ ಬದಿಯಿಂದ ನಡೆದು, ತೋಟದ ಮಧ್ಯೆ ಬತ್ತಿದ ಹೊಳೆ ದಾಟಿ, ಕಲ್ಲು ಹಾಸಿದ ಮೆಟ್ಟಲುಗಳನ್ನು ಏರಿ ಎತ್ತರದಲ್ಲಿದ್ದ ಬೀಡಿನ ಅಂಗಳಕ್ಕೆ ಬಂದು ನಿಂತರೆ ಬಯಲು ಹಸಿರು ಹೊದ್ದು ನಿಂತಿತ್ತು ಆ ಬಿರು ಬೇಸಿಗೆಯಲ್ಲಿ. ಹೊಳೆಯ ಬದಿಯ ತಾಳೆ ಮರ ಪಾಳೆಗಾರನ ಹಾಗೆ ತಲೆಎತ್ತಿ ನಿಂತಂತೆ ಭಾಸವಾಯಿತು. ಮನೆ ನಿಶ್ಶಬ್ದವಾಗಿತ್ತು. ನಾನು ಒಂದು ಬಾರಿ ಸುತ್ತಲೂ ಕಣ್ಣಾಡಿಸಿದೆ. ಆಗ್ನೇಯ ಮೂಲೆಯಲ್ಲಿ ಹೊಸದಾಗಿ ಹೆಂಚು ಹೊದಿಸಿದ ದೈವಸ್ಥಾನ. ಅಂಗಳದ ಮಧ್ಯದಲ್ಲಿ ಉತ್ತರಕ್ಕೆ ಮುಖಮಾಡಿ ನಿಂತ ದೊಡ್ಡ ಮನೆ. ಅಂಗಳದ ಪಶ್ಚಿಮಕ್ಕೆ ಉದ್ದಕ್ಕೆ ಚಾಚಿದ ಜಾನುವಾರುಗಳ ಹಟ್ಟಿ. ಅದರಾಚೆ ರಬ್ಬರು ಮರಗಳ ದಟ್ಟ ಕಾಡು. ನಿರ್ಜನತೆ ಒಂದು ರೀತಿಯ ಭಯಕ್ಕೆ ಕಾರಣವಾಯಿತು. ಸುಮ್ಮನೆ ನಿಂತೇ ಇದ್ದೆ. ‘ಯಾರು ಬೇಕಿತ್ತು’ ಮನೆಯೊಳಗಿಂತ ಇಣುಕಿದ ಮಧ್ಯ ವಯಸ್ಕ ಹೆಣ್ಣು, ಸ್ವರ ಸ್ವಾಂತನ ನೀಡಿತು. ಮಾಸಲು ಸೀರೆ ಉಟ್ಟ, ಕೆದರಿದ ಕೂದಲಿನ ಹೆಂಗಸೊಬ್ಬರು ಹೊರಗೆ ಬಂದರು. ಎತ್ತರದ ನಿಲುವು. ಕಂಡರೆ ಗೌರವ ಮೂಡಿಸುವಂತಿತ್ತು ‘ವಿಶ್ವ…. ವಿಶ್ವನಾಥಣ್ಣ ಅವರನ್ನು ನೋಡಲು ಬಂದೆ. ಅವರ ಹಳೆಯ ಗೆಳೆಯ ಅನಂತು ನಾನು. …. ಅವರನ್ನು ನೋಡಿ ಹತ್ತು ಹನ್ನೆರಡು ವರ್ಷಗಳ ಮೇಲಾಯಿತು. ಅವರು ಪುಣೆಗೆ ಬಂದಿದ್ದಾಗ ಕಂಡದ್ದೇ ಕೊನೆ…’ ಎಂದು ಒಂದೇ ಉಸಿರಿಗೆ ಹೇಳಿದೆ. ನನ್ನನ್ನು ನೋಡಿ ಸಂಶಯದಿಂದ ಬಾಗಿಲು ಮುಚ್ಚದಿರಲಿ ಎಂಬ ಉದ್ದೇಶವಿತ್ತು – ಉಸಿರಿಗೂ ಅವಕಾಶ ಕೊಡದ ನನ್ನ ಅವಸರದ ಮಾತುಗಳಿಗೆ. ‘ನಾನು ಸಂಧ್ಯಾ- ವಿಶ್ವನಾಥರ ಹೆಂಡತಿ. ಬನ್ನಿ. ದೂರದಿಂದ ಬಂದಂತಿದೆ. ಬಾಯಾರಿಕೆ ತರುತ್ತೇನೆ. ಕುಳಿತುಕೊಳ್ಳಿ’ ಎಂದು ಉಪಚರಿಸಿದರು. ನನ್ನ ಹೆಗಲಿಗೆ ಹಾಕಿದ್ದ ಸಣ್ಣ ಬ್ಯಾಗನ್ನು ಬೆಂಚಿನ ಮೇಲಿಟ್ಟು ಚಾವಡಿಯ ಶಿಲ್ಪದ ಮರದ ಕೆತ್ತನೆಯನ್ನು ನೋಡತೊಡಗಿದೆ. ಗೋಡೆಗೆ ನೇಲಿಸಿದ ಮಸುಕಾದ ಕಪ್ಪು ಬಿಳುಪು ಫೋಟೊ ನೋಡುತ್ತಾ ನಿಂತೆ. ಕೆಲವು ಚಿತ್ರಗಳಂತೂ ಕೀಟಗಳು ತಿಂದು ವಿವರ್ಣವಾಗಿದ್ದುವು. ವಿಶ್ವ ಮುಖವೇನಾದರೂ ಇದೆಯೇ ಎಂದು ಕುತೂಹಲದಿಂದ ಇಣುಕಿದೆ. ಮಾಸಿದ ಆ ಫೋಟೊಗಳಲ್ಲಿ ಯಾರನ್ನಾದರೂ ಗುರುತಿಸುವುದುಂಟೇ ಎಂದುಕೊಂಡೆ! ಬಾಯಾರಿಕೆಯಾಗಿತ್ತು. ಅವರು ತಂದ ಅಷ್ಟೂ ನೀರನ್ನು ಗಟಗಟನೆ ಕುಡಿದೆ. ಅವರು ಒಂದು ಮರದ ಕುರ್ಚಿ ಎಳೆದುಕೊಂಡು ನನ್ನ ಎದುರು ಕುಳಿತರು. ನನ್ನ ಯೋಚನಾಲಹರಿ ನಡೆಯುತ್ತಿದ್ದಂತೆ ಸಂಧ್ಯಕ್ಕ ಹೇಳಿದರು: ‘ನೀವು ಬಂದ ವಿಚಾರ’ ನಾನು ಬಂದ ವಿಚಾರ ತಿಳಿಸಿದೆ. ‘ವಿಶ್ವ ಕಾಣುವುದಿಲ್ಲ…. ಹೊರಗೆ ಹೋಗಿದ್ದಾರಾ?’ ಎಂದೆ. ‘ಅವರು ಇಲ್ಲ…’ ಎನ್ನುತ್ತಾ ಒಂದು ಬಾರಿ ಹಿಂದಿರುಗಿ ನೋಡಿ ಸ್ವಲ್ಪ ಹೊತ್ತಿನ ಬಳಿಕ ನಿಟ್ಟುಸಿರುಬಿಟ್ಟರು. ಮುಂದೆ ಏನು ಕೇಳಬೇಕೆಂದು ತೋಚಲಿಲ್ಲ. ‘ಅವರು ಎಲ್ಲಿಗೆ ಹೋಗಿದ್ದಾರೆ’ ಎಂಬ ಪ್ರಶ್ನೆ ಅಯಾಚಿತವಾಗಿ ನನ್ನ ಬಾಯಿಂದ ಹೊರಟಿತು. ಅಚ್ಚರಿಯೇನೂ ಅನಿಸದ ಹಾಗೆ ಅವರು ಹೇಳಿದರು: ‘ಅವರು ಇಲ್ಲ…’ ಅವರ ಮಾತಿನಲ್ಲಿ ಯಾವುದೇ ಉದ್ವೇಗವಿರಲಿಲ್ಲ. ಮುಂದಿನ ಮಾತುಕತೆಗೆ ವಿಷಯ ಸಿಗದ ಕಾರಣ ನಾನು ನಮ್ಮ ಕಾಲೇಜಿನ ದಿನಗಳಿಂದ ಅವರನ್ನು ಪುಣೆಯಲ್ಲಿ ಭೇಟಿಯಾದ ಸಮಯದವರೆಗಿನ ಎಲ್ಲವನ್ನೂ ಹೇಳಿದೆ – ನಮ್ಮ ವ್ಯವಹಾರದ ವಿಷಯವನ್ನು ಬಿಟ್ಟು. ಅವರ ಮುಖದಲ್ಲಿ ನನ್ನ ಮಾತುಗಳನ್ನು ಕೇಳಿಸಿಕೊಳ್ಳುವ ಕುತೂಹಲವೂ ಆಸ್ಥೆಯೂ ಇದ್ದಂತಿತ್ತು. ಸಂಜೆ ಮೆಲ್ಲಗೆ ಬಾಡುತ್ತಿತ್ತು. ‘ಇಷ್ಟು ದೊಡ್ಡ ಮನೆಯಲ್ಲಿ ಯಾರೂ ಕಾಣುವುದಿಲ್ಲ’ ಸ್ವಲ್ಪ ಕುತೂಹಲದಿಂದ ಹೇಳಿದೆ. ‘ಯಾರಿಗೆ ಬೇಕು ಈ ಹಾಳು ಕೊಂಪೆ. ಆ ಕಡೆ ಕಾಣುತ್ತದಲ್ಲ ದೈವಸ್ಥಾನ .. ಪ್ರತಿದಿನ ಉಳ್ಳಾಲ್ತಿಗೆ ಬೆಳಿಗ್ಗೆ-ಸಂಜೆ ದೀಪ ಇಡಬೇಕು. ಅದಕ್ಕೆ ನಾನೊಬ್ಬಳು ಇಲ್ಲಿ ಸೇರಿಕೊಂಡಿದ್ದೇನೆ…. ಫೋನು ಕೂಡ ತಾಗದ ಈ ಕಾಡಿನಲ್ಲಿ’ ಅವರ ಮಾತಿನಲ್ಲಿ ವಿಷಾದವಿತ್ತು. ಪುನಃ ವಿಶ್ವನ ಬಗ್ಗೆ ಕೇಳುವುದು ಸರಿಯಲ್ಲವೆಂದು ನನ್ನ ಚೀಲದಿಂದ ಮದುವೆಯ ಆಮಂತ್ರಣ ಪತ್ರ ತೆಗೆದು ಸ್ವಲ್ಪ ಯೋಚಿಸಿ ‘ಶ್ರೀಮತಿ ಸಂಧ್ಯಾ’ ಎಂದು ಬರೆದು ಮುಂದೆ ಚಾಚಿದೆ. ಮನೆಯೊಳಗಿಂದ ಸದ್ದಾಯಿತೆಂದು ಆ ಕಡೆ ನೋಡಿದರೆ ಪಟಾಪಟಿ ನಿಕ್ಕರು ಮತ್ತು ಬನಿಯನು ಧರಿಸಿದ್ದವರು ಕಾಲೆಳೆಯುತ್ತಾ ಬರುವುದು ಕಾಣಿಸಿತು. ಎಲುಬಿನ ಹಂದರ ನಡೆದು ಬರುವಂತೆ ಅನಿಸಿತು ನನಗೆ. ಆಮಂತ್ರಣ ಪತ್ರಿಕೆ ನನ್ನ ಕೈಯ್ಯಲ್ಲಿ ಇತ್ತು. ಮನೆಯ ಮಂದ ಬೆಳಕಿನಲ್ಲಿ ಬರುತ್ತಿರುವುದು ಯಾರೆಂದು ನನಗೆ ಗೊತ್ತಾಗಲಿಲ್ಲ. ಇಷ್ಟು ಹೊತ್ತು ಶಾಂತರಾಗಿದ್ದ ಸಂಧ್ಯಕ್ಕ: ‘ನೀವ್ಯಾಕೆ ಈಚೆಗೆ ಬಂದದ್ದು ಏಳಲಿಕ್ಕಾಗದವರು? ಬಿದ್ದು ಎಲುಬು ಮುರಿಯಲಿಕ್ಕಾ…. ’ ಎನ್ನುತ್ತಾ ಓಡಿ ಹೋಗಿ ಅವರ ಕಡ್ಡಿಯಂತಿದ್ದ ತೋಳುಗಳನ್ನು ಹಿಡಿದು ನಡೆಸಿಕೊಂಡು ಬಂದು ಕುರ್ಚಿಯಲ್ಲಿ ಕೂರಿಸಿದರು. ನಾನು ಬೆರಗಿನಿಂದ ನೋಡುತ್ತಾ ನಿಂತಿದ್ದೆ. ವಿಶ್ವ ಗುರುತೇ ಸಿಗದಷ್ಟು ಕ್ಷಯಿಸಿದ್ದ. ಮುಖದಲ್ಲಿ ಬಹುದಿನಗಳ ಗಡ್ಡ ಹಾಗೇ ಬೆಳೆದಿತ್ತು. ತಲೆಗೂದಲು ಉದುರಿ ತಲೆ ನುಣುಪಾಗಿತ್ತು. ದೇಹ ಎಲುಬಿನ ಹಂದರದಂತಿತ್ತು. ಅಂಗೈ ಮುಷ್ಟಿ ಹಿಡಿದಂತಿತ್ತು. ‘ಅನಂತು… ಗುರುತು ಸಿಗಲಿಲ್ಲವೇ?’ ತೊದಲಿದ ಮಾತು ಅಸ್ಪಷ್ಟವಾಗಿತ್ತು. ‘ಹಾಂ… ’ ಎಂದೆ. ನಿಜಕ್ಕೂ ಆ ಕ್ಷಣ ನನ್ನ ಯೋಚನಾ ಶಕ್ತಿ ನಷ್ಟಹೊಂದಿತ್ತು. ‘ನಿನ್ನ ಗುರುತವೇ ಸಿಕ್ಕಲಿಲ್ಲ ವಿಶ್ವ…’ ಎನ್ನುತ್ತಾ ಎದ್ದು ಹೋಗಿ ಕುಳಿತಲ್ಲಿಯೇ ಅವನನ್ನು ಆಲಂಗಿಸಿದೆ. ಎಲುಬಿನ ಹಂದರವನ್ನು ಅಪ್ಪಿದ ಅನುಭವ. ಯಾಕೋ ಕೊರಳಿಗೆ ನೀರಿನ ಹನಿ ತಾಗಿದಂತೆನಿಸಿತು. ಅವನ ಮುಖ ನೋಡಿದೆ. ಅವನ ಕಣ್ಣಾಲಿಗಳು ತುಂಬಿದ್ದುವು. ‘ನಿಮ್ಮ ಮಾತು ಒಳಗೆ ಕೇಳುತ್ತಿತ್ತು. ಪಾರ್ಶ್ವವಾಯ ಬಡಿದು ಕೆಲವು ವರ್ಷಗಳಾದುವು. ಹೋಟೆಲು ನಡೆಸಲಾಗಲಿಲ್ಲ. ಇಲ್ಲಿ ಯಾವ ಫೋನಿನ ಸಂಪರ್ಕವೂ ಕೆಲಸ ಮಾಡುವುದಿಲ್ಲ. ಈ ಅವಸ್ಥೆಯಲ್ಲಿ ಯಾಕೆ ಸಂಬಂಧಗಳನ್ನು ಉಳಿಸಿಕೊಳ್ಳಬೇಕೆಂಬ ಉದಾಸೀನವೂ ಸೇರಿತು. ಪರಾವಲಂಬಿಯಾಗಿ ಯಾವ ಪುರುಷಾರ್ಥಕ್ಕೆ ಜೀವ….’ ಕೈ ನಡುಗತೊಡಗಿತು ಉದ್ವೇಗದಿಂದ. ‘ನಿಮ್ಮ ಆ ಭಾವದಿಂದಾಗಿ ‘ನೀವು ಇಲ್ಲಿ ಇಲ್ಲ’ ಎಂದು ಅವರಿಗೆ ಹೇಳಿದೆ’ ಸಂಧ್ಯಕ್ಕ ತಾನು ಹೇಳಿದ ಅಸತ್ಯವನ್ನು ಸಮರ್ಥಿಸುವಂತಿತ್ತು ಆ ಮಾತು. ‘ಇವಳು ನಿನ್ನನ್ನು ಹಾಗೇ ಕಳಿಸಿ ಕೊಟ್ಟಾಳು ಎನಿಸಿತು. ಅವಳಿಗೇನು ಗೊತ್ತು ನಮ್ಮ ಬಾಂಧವ್ಯ. ನಾನು ಲಕ್ವ ಬಡಿದ ಮೇಲೆ ಮಂಚದಿಂದ ಇಳಿದದ್ದು ಇದೇ ಮೊದಲು. ನನ್ನ ಬದುಕನ್ನು ಬದಲಿಸಿದ ನಿನ್ನ ಜೊತೆ ಮಾತನಾಡದಿದ್ದರೆ ನನಗೆ ಪಾಪ ತಟ್ಟೀತು. ನೀನು ಕೊಟ್ಟ ಬಂಡವಾಳ ನನಗೆ ಅದೃಷ್ಟವಾಯಿತು. ಆದರೆ ಉಳ್ಳಾಲ್ತಿ ಒಂದು ಪಾರ್ಶ್ವ ತೆಗೆದುಬಿಟ್ಟಳು. ಈ ದಿನ ನಿನ್ನನ್ನು ಮಾತನಾಡಿಸಲೇಬೇಕು ಎಂದು ಮಂಚದಿಂದ ಇಳಿಯಲು ಧೈರ್ಯಮಾಡಿದೆ. ಲಕ್ವ ಸೋತಿತು… ನಾನು ಗೆದ್ದೆ’ ಎಂದು ನಕ್ಕ. ಆಪ್ತತೆ ಇತ್ತು ಆ ನಗುವಿನಲ್ಲಿ ‘ಕೈಕೊಡು ಅನಂತು…’ ಆದೇಶದಂತಿತ್ತು ಅವನ ಮಾತು. ಏನೆಂದು ಅರ್ಥವಾಗದೆ ಬಲಗೈಯನ್ನು ಮುಂದೆ ಚಾಚಿದೆ. ವಿಶ್ವನ ಮುಚ್ಚಿದ್ದ ಮುಷ್ಟಿ ನನ್ನ ಅಂಗೈ ಮೇಲೆ ಕುಳಿತಿತು. ಸ್ವಾಧೀನವಿಲ್ಲದೆ ನಿಧಾನವಾಗಿ ಅರಳುತ್ತಿದ್ದ ವಿಶ್ವನ ಬೆರಳುಗಳ ಎಡೆಯಿಂದ ಚಿನ್ನದ ಸರ ಹೊರಗಿಣುಕಿತು. ಹಾವು ತುಳಿದವನಂತೆ ವಿಶ್ವನ ಅಂಗೈಯನ್ನು ಪುನಃ ಮುಚ್ಚಿಸಲು ನನ್ನ ಎರಡೂ ಅಂಗೈಗಳನ್ನು ಒಟ್ಟು ಸೇರಿಸಿದೆ. ಅವನ ಬೆರಳುಗಳು ಅರಳುವುದನ್ನು ತಡೆಯಲು ನನ್ನಿಂದ ಆಗಲಿಲ್ಲ. ಚಿನ್ನದ ಸರ ನನ್ನ ಅಂಗೈ ಸೇರುವವರೆಗೂ ಅವನ ಬೆರಳುಗಳು ತೆರೆಯುತ್ತಲೇ ಹೋದವು. ನೋಡುತ್ತಾ ನಿಂತಿದ್ದ ಸಂಧ್ಯಕ್ಕ ಹೇಳಿದರು: ‘ಈ ಸರವನ್ನು ಯಾರಿಗೋ ಕೊಡಲಿಕ್ಕಿದೆ ಎಂದು ಬೇರೆ ತೆಗೆದಿಟ್ಟಿದ್ದರು ಕವಾಟಿನಲ್ಲಿ … ನಿಮಗೆಂದು ಗೊತ್ತಿರಲಿಲ್ಲ. … ಕ್ಷಮಿಸಿ’ ‘ನಾನಿನ್ನು ನಿಶ್ಚಿಂತೆಯಿಂದ …’ ಎನ್ನುತ್ತಾ ನಿಟ್ಟುಸಿರು ಬಿಟ್ಟ ವಿಶ್ವ. ‘ನಾನು ಇದನ್ನು ನಿರೀಕ್ಷಿಸಿರಲಿಲ್ಲ ವಿಶ್ವ…’‘ನಾನೂ…’ ಎಂದು ಅವನೂ ತೊದಲಿದ.

courtsey:prajavani.net

https://www.prajavani.net/artculture/short-story/essay-647703.html

Leave a Reply