ತಲಸ್ಪರ್ಶಿ ಅಧ್ಯಯನದ ಸಮಚಿತ್ತದ ವಿಮರ್ಶಕ

ತಲಸ್ಪರ್ಶಿ ಅಧ್ಯಯನದ ಸಮಚಿತ್ತದ ವಿಮರ್ಶಕ

| ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ

ಗಿರಡ್ಡಿಯವರು ನಾಡಿನ ಪ್ರಮುಖ ದನಿಯಾಗಿದ್ದರೂ ಅಧಿಕಾರಸ್ಥ ವಲಯದಲ್ಲಿ ಎಂದೂ ಕಾಣಿಸಿಕೊಂಡವರಲ್ಲ. ಎಲ್ಲರೊಡನೆ ಸಮಭಾವದಿಂದ ನಡೆದುಕೊಳ್ಳುವ ಸಮಚಿತ್ತವನ್ನು ಎಂದೂ ಕಳೆದುಕೊಳ್ಳಲಿಲ್ಲ. ಅನೇಕ ಪ್ರಮುಖ ಪ್ರಶಸ್ತಿ ಸಮಿತಿಗಳಲ್ಲಿ ಅವರಿದ್ದು ಅನೇಕ ಅರ್ಹರಿಗೆ ಪ್ರಶಸ್ತಿ ಸಿಗಲು ಕಾರಣರಾಗಿದ್ದಾರೆ. ಹೀಗಾಗೇ ಕೆಲವು ಪ್ರಶಸ್ತಿಗಳಿಂದ ಅವರು ಹೊರಗುಳಿಯುವಂತಾಯಿತೇನೋ!

ಮೊನ್ನೆ ರಾತ್ರಿ ಸರಿಸುಮಾರು ರಾತ್ರಿ ಒಂಭತ್ತರ ಆಸುಪಾಸು. ನನ್ನ ಮೊಬೈಲ್​ಗೆ ಒಂದು ಆಘಾತಕರ ಸುದ್ದಿ ಬಂದಿತು. ಕೆಟ್ಟಸುದ್ದಿ ಎಂದೇ ಹೇಳಿ ಅದನ್ನು ರವಾನಿಸಿದ್ದರು. ನನಗೆ ನಂಬಲಾಗಲಿಲ್ಲ. ಧಾರವಾಡದ ನನ್ನ ಗೆಳೆಯರಿಗೆ ಫೋನ್ ಮಾಡಿದೆ. ಯಾರೂ ತೆಗೆದುಕೊಳ್ಳುತ್ತಿಲ್ಲ. ಏನು ಮಾಡಲೂ ತೋಚದೆ ಮನಸ್ಸು ಮಂಕಾಗಿತ್ತು. ಒಂದೆರಡು ನಿಮಿಷಗಳಲ್ಲಿ ಗೆಳೆಯ ಮಲ್ಲಿಕಾರ್ಜುನ ಹಿರೇಮಠ ಫೋನ್ ಮಾಡಿದರು. ಹಲೋ ಎಂದರೆ ಅವರು ಮಾತನಾಡುತ್ತಿಲ್ಲ. ನಾನೇ ‘ನಿಜವೇ?’ ಎಂದೆ. ಅವರದು ಮೊದಲೇ ಮೆಲುದನಿ. ಈಗ ಮತ್ತೂ ಮೆಲ್ಲಗೆ ‘ಹೌದು’ ಎಂದರು. ನನ್ನ ಮನಸ್ಸು ಒಪ್ಪಿಕೊಳ್ಳಲು ಸಿದ್ಧವಿಲ್ಲ. ‘ಡಾಕ್ಟರು ದೃಢಪಡಿಸಿದರೇ?’ ಎಂದೆ. ನನ್ನ ಮನಸ್ಥಿತಿ ಅರ್ಥವಾದವರಂತೆ ಹಿರೇಮಠರು ‘ನಮ್ಮ ಗಿರಡ್ಡಿಯವರು ಇನ್ನಿಲ್ಲ’ ಎಂದು ಗದ್ಗದಿತರಾದರು. ಹೌದು, ಕೆಲವೊಮ್ಮೆ ಸತ್ಯವನ್ನು ಮನಸ್ಸು ಒಪ್ಪಿಕೊಳ್ಳಲು, ಅಥವಾ ಅರಗಿಸಿಕೊಳ್ಳಲು ಹಿಂದೆಗೆಯುತ್ತದೆ. ನನಗೂ ಹಾಗೇ ಆಯಿತು. ವಾಸ್ತವವನ್ನು ಒಪ್ಪಿಕೊಂಡ ಮೇಲೆ ನೆನಪುಗಳು ನುಗ್ಗಿಬಂದವು. ಅಷ್ಟರಲ್ಲಿ ಗೆಳೆಯ ಎಚ್​ಎಸ್​ವಿ ಫೋನ್ ಮಾಡಿದರು. ಆಪ್ತರೊಬ್ಬರನ್ನು ಕಳೆದುಕೊಂಡ ದುಃಖದಲ್ಲಿ ಮಾತನಾಡಲಾರದ ಮನೋಭಾರದಲ್ಲಿ ನಾವು ಸುಮಾರು ಹೊತ್ತು ನೆನಪಿನ ಲೋಕಕ್ಕೆ ಜಾರಿದೆವು. ಕಂಬಾರ ಸರ್ ಫೋನ್ ಮಾಡಿ ‘ಏನಯ್ಯಾ ಇದು ಅನ್ಯಾಯ!’ ಎಂದು ತಮ್ಮ ತಾರುಣ್ಯದ ಒಡನಾಟದ ದಿನಗಳನ್ನು ಮೆಲುಕು ಹಾಕಿದರು. ಅನೇಕರ ಕರೆ. ಎಲ್ಲರಿಗೂ ಇದು ಆಘಾತದ ಸುದ್ದಿ. ಈ ಧಾರವಾಡದ ಮಂದಿಯೇ ಹಾಗೆ! ಆಗಾಗ ಷಾಕ್ ನೀಡುತ್ತಿರುತ್ತಾರೆ. ಗಿರಡ್ಡಿಯವರು ಆರೋಗ್ಯವಾಗಿಯೇ ಇದ್ದರು. ವಯೋಸಹಜವಾಗಿ ಕಿವಿ ಮಂದವಾಗಿದ್ದು ಬಿಟ್ಟರೆ ಚಟುವಟಿಕೆಯಿಂದಿದ್ದರು. ಇಂತಹ ಯಾವ ಮುನ್ಸೂಚನೆಯೂ ಯಾರಿಗೂ ಇರಲಿಲ್ಲ. ಕಳೆದ ವಾರ ಮಾತನಾಡಿದಾಗ ಮನೋಹರ ಗ್ರಂಥಮಾಲೆಯ ತಮ್ಮ ಹೊಸ ಯೋಜನೆಗಳ ಬಗ್ಗೆ ರ್ಚಚಿಸಿದ್ದರು. ಸದಾ ಒಂದಿಲ್ಲೊಂದು ಸಾಹಿತ್ಯಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಗಿರಡ್ಡಿಯವರಿಗೂ ಇಂತಹ ಅನಿರೀಕ್ಷಿತ ಘಟನೆಯ ಬಗ್ಗೆ ಅರಿವಿರಲಿಲ್ಲವೆನ್ನಿಸುತ್ತದೆ. ಅವರ ಹೆಂಡತಿ ಮಾರುಕಟ್ಟೆಗೆ ಹೋಗಿ ಮನೆಗೆ ಬರುವ ವೇಳೆಗೆ ಅವರಿಗೂ ಅನಿರೀಕ್ಷಿತ ಆಘಾತವುಂಟುಮಾಡಿ ಗಿರಡ್ಡಿಯವರು ತಮ್ಮ ಬಾಳ ಪಯಣವನ್ನೇ ಮುಗಿಸಿಬಿಟ್ಟಿದ್ದರು.

ಗಿರಡ್ಡಿಯವರ ಜತೆ ನನ್ನದು ಹಳೆಯ ನಂಟು. ಸುಮಾರು ನಾಲ್ಕು ದಶಕಗಳಿಗೂ ಮಿಕ್ಕಿ ಒಡನಾಟ. ಯಾವ ಸಂದರ್ಭದಲ್ಲೂ ಸಮಚಿತ್ತ ಕಳೆದುಕೊಳ್ಳದ ಪಕ್ವ ಮನಸ್ಸು. ಸ್ವಭಾವತಃ ಗಂಭೀರ ವ್ಯಕ್ತಿ. ಆದರೆ ಗೆಳೆಯರೊಡನೆ ಉಲ್ಲಾಸದಿಂದ ಹರಟುತ್ತಿದ್ದರು. ಎಂತಹ ಸ್ಥಿತಿಯಲ್ಲಿಯೂ ತಮ್ಮದೇ ಆದ ಖಚಿತ ನಿಲುವು ಹೊಂದಿರುತ್ತಿದ್ದ ಅವರು ಸನ್ನಿವೇಶದ ಸಮೂಹಸನ್ನಿಗೆ ಎಂದೂ ಒಳಗಾದವರಲ್ಲ. ಎಷ್ಟೇ ಪ್ರೀತಿಯ ಒಡನಾಟವಿದ್ದರೂ ತಮ್ಮ ನಿಲುವನ್ನು ಅದಕ್ಕಾಗಿ ಬದಲಾಯಿಸಿದವರಲ್ಲ. ಚಂದ್ರಶೇಖರ ಪಾಟೀಲ, ಗಿರಡ್ಡಿ ಗೋವಿಂದರಾಜ ಹಾಗೂ ಸಿದ್ಧಲಿಂಗ ಪಟ್ಟಣಶೆಟ್ಟಿ ಮೂವರೂ ಕೂಡಿ ‘ಸಂಕ್ರಮಣ’ ಆರಂಭಿಸಿದರು. ಒಂದು ಹಂತದಲ್ಲಿ ಸಂಪಾದಕರಲ್ಲಿ ಭಿನ್ನಮತ ಮೂಡಿದಾಗ ಗಿರಡ್ಡಿಯವರು ಅಲ್ಲಿಂದ ಹೊರಬಂದರು. ನಂತರವೂ ಅವರ ಸಂಬಂಧ ಹಾರ್ದಿಕವಾಗಿಯೇ ಇತ್ತು. ಆದರೆ ಪರಸ್ಪರ ಭಿನ್ನ ನಿಲುವುಗಳನ್ನು ಹೊಂದಿದ್ದರು. ಸಂದರ್ಭ ಬಂದಾಗ ಸಾಹಿತ್ಯಕ ವಾಗ್ವಾದ ನಡೆಸುತ್ತಿದ್ದರು. ಇತ್ತೀಚೆಗೆ ಚಂಪಾ ಅವರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣವನ್ನು ಗಿರಡ್ಡಿ ಕಟುಮಾತುಗಳಲ್ಲಿ ಖಂಡಿಸಿದ್ದರು. ಚಂಪಾ ಅದಕ್ಕೆ ತಮ್ಮ ಎಂದಿನ ಶೈಲಿಯಲ್ಲಿಯೇ ಉತ್ತರಿಸಿದ್ದರು. ಭಿನ್ನಮತ ಪ್ರಜಾಪ್ರಭುತ್ವದ ಮೂಲನೆಲೆ. ಗಿರಡ್ಡಿಯವರು ಭಿನ್ನಾಭಿಪ್ರಾಯಗಳನ್ನು ಗೌರವಿಸುತ್ತಿದ್ದರು. ಸಂವಾದಕ್ಕೆ ಅವಕಾಶ ಕಲ್ಪಿಸುತ್ತಿದ್ದರು. ಗಿರಡ್ಡಿಯವರೊಡನೆ ನಾವು ಭಿನ್ನಾಭಿಪ್ರಾಯ ಹೊಂದಿದ್ದೂ ಆಪ್ತ ಒಡನಾಟ ಇಟ್ಟುಕೊಳ್ಳುವುದು ಸಾಧ್ಯವಿತ್ತು.

ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ 1939ರ ಸೆಪ್ಟೆಂಬರ್ 22ರಂದು ಅಂದಾನಪ್ಪ, ಸಂಗವ್ವ ದಂಪತಿಯ ಮಗನಾಗಿ ಜನಿಸಿದ ಗಿರಡ್ಡಿ ಗೋವಿಂದರಾಜ ಕೃಷಿಕ ಮನೆತನಕ್ಕೆ ಸೇರಿದವರು. ಮಗ ಒಕ್ಕಲುತನ ಮಾಡಲಿ ಎಂಬುದು ಹಿರಿಯರ ಹಂಬಲವಾಗಿತ್ತು. ಆದರೆ ಗಿರಡ್ಡಿ ಸಾಹಿತ್ಯ ಕೃಷಿಯನ್ನು ಕಡೆಯುಸಿರಿನ ತನಕ ಶ್ರದ್ಧೆಯಿಂದ ಮಾಡಿದರು. ಹತ್ತನೆಯ ತರಗತಿಯಲ್ಲಿದ್ದಾಗಲೇ ‘ಶಾರದಾ ಲಹರಿ’ ಎಂಬ ದೀರ್ಘ ಕವಿತೆಯೊಂದನ್ನು ಬರೆದು ಪುಟ್ಟ ಹೊತ್ತಿಗೆಯಾಗಿ ಪ್ರಕಟಿಸಿದ್ದರು. ಗಿರಡ್ಡಿಯವರೇ ಹೇಳುವಂತೆ ಬೇಂದ್ರೆಯವರ ಮೇಘದೂತ ಛಂದಸ್ಸಿನಲ್ಲಿ ಬರೆದ ಕವಿತೆಯದು. ಕಾವ್ಯಶಕ್ತಿಯನ್ನು ಕೊಡಬೇಕೆಂದು ಶಾರದೆಯನ್ನು ಪರಿಪರಿಯಾಗಿ ಬೇಡಿಕೊಳ್ಳುವುದು ಅದರ ವಸ್ತು. ಅದು ಈಗ ಲಭ್ಯವಿಲ್ಲ. ಅವರ ‘ಸಮಗ್ರ ಸೃಜನ’ ಸಂಪುಟದಲ್ಲೂ ಅದನ್ನು ಅವರು ಸೇರಿಸಿಲ್ಲ.

ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಅಲ್ಲಿನ ಸಾಹಿತ್ಯಕ ಪರಿಸರದಲ್ಲಿ ಗಿರಡ್ಡಿಯವರ ಸೃಜನಶೀಲತೆಗೆ ಇಂಬು ದೊರಕಿತು. ಅಲ್ಲಿನ ಕರ್ನಾಟಕ ಸಂಘದಿಂದ ಅವರೂ ಪಾಟೀಲರೂ ಸೇರಿ ‘ಭೃಂಗನಾದ’ ಎಂಬ ಹೆಸರಿನ ವಿದ್ಯಾರ್ಥಿ ಕವಿಗಳ ಸಂಕಲನವೊಂದನ್ನು ಪ್ರಕಟಿಸಿದ್ದರು. ಮುಂದೆ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ ಅವರ ‘ರಸವಂತಿ’ ಕವನ ಸಂಕಲನ ಪ್ರಕಟವಾಯಿತು. ವಿ.ಕೃ. ಗೋಕಾಕರ ಮುನ್ನುಡಿ, ಚೆನ್ನವೀರ ಕಣವಿಯವರ ಬೆನ್ನುಡಿಯೊಂದಿಗೆ ಪ್ರಕಟವಾದ ‘ರಸವಂತಿ’ ಆ ಕಾಲಕ್ಕೆ ಗಮನಾರ್ಹ ಸಂಕಲನವೆನ್ನಿಸಿತ್ತು. ಮುಂದೆ ಕರ್ನಾಟಕ ಕಾಲೇಜಿನಲ್ಲಿಯೇ ಇಂಗ್ಲಿಷ್ ಅಧ್ಯಾಪಕರಾಗಿ ಸೇರಿದ ಸನಿಹದಲ್ಲಿ ‘ಮರ್ಲಿನ್ ಮನ್ರೊ’ ಎಂಬ ಎರಡನೆಯ ಕವನ ಸಂಕಲನವನ್ನು ಗಿರಡ್ಡಿ ಪ್ರಕಟಿಸಿದರು. ತರುಣ ಗಿರಡ್ಡಿಯವರಿಗೆ ‘ಕವಿ’ಯಾಗುವ ಆಸೆಯಿತ್ತು.

ಗಿರಡ್ಡಿಯವರ ಎರಡು ಕಥಾಸಂಕಲನಗಳು ಪ್ರಕಟವಾಗಿವೆ- ‘ಆ ಮುಖಾ ಈ ಮುಖಾ’ ಹಾಗೂ ‘ಒಂದು ಬೇವಿನಮರದ ಕತೆ’. ಈ ಸಂಕಲನಗಳಲ್ಲಿಯೇ ಅವರಿಗೆ ಜನಪ್ರಿಯತೆ ತಂದುಕೊಟ್ಟ ‘ಹಂಗು’ ಹಾಗೂ ‘ಮಣ್ಣು’ ನೀಳ್ಗತೆಯೂ ಸೇರಿವೆ. ಪುಟ್ಟಣ್ಣ ಕಣಗಾಲರು ಮೂರು ಸಣ್ಣಕತೆಗಳನ್ನು ಸೇರಿಸಿ ‘ಕಥಾಸಂಗಮ’ ಎಂಬ ಚಿತ್ರ ನಿರ್ದೇಶಿಸಿದ್ದರು. ಅದರಲ್ಲಿ ‘ಹಂಗು’ ಮೊದಲನೆಯದು; ಸಾಕಷ್ಟು ಯಶಸ್ವಿಯಾಗಿ ಜನಪ್ರಿಯವಾಗಿತ್ತು. ಸಾವು ವ್ಯಕ್ತಿಯ ಅಂತರಂಗ ಬಹಿರಂಗದ ಜಗತ್ತಿನಲ್ಲಿ ಉಂಟುಮಾಡುವ ಪರಿಣಾಮಗಳನ್ನು ಅವರ ‘ಮಣ್ಣು’ ನೀಳ್ಗತೆ ದಟ್ಟ ಅನುಭವ ತೀವ್ರತೆಯೊಂದಿಗೆ ಹಿಡಿಯುತ್ತದೆ. ಎಪ್ಪತ್ತರ ದಶಕದಲ್ಲಿ ಪ್ರಕಟವಾದ ಈ ನೀಳ್ಗತೆ ಗಿರಡ್ಡಿಯವರ ಕಥನ ಕೌಶಲವನ್ನು ಪರಿಚಯಿಸುತ್ತದೆ. ಹೀಗೆ ಕವಿತೆ, ಕತೆ, ನೀಳ್ಗತೆಗಳೊಂದಿಗೆ ಸಾಹಿತ್ಯಕ ಪಯಣವನ್ನು ಆರಂಭಿಸಿದ ಗಿರಡ್ಡಿಯವರು ನಂತರ ನಮಗೆ ವಿಮರ್ಶಕರಾಗಿ ಹೆಚ್ಚು ಪರಿಚಿತರಾಗಿದ್ದಾರೆ.

‘ಸಂಕ್ರಮಣ’ ಪತ್ರಿಕೆ ಆರಂಭಿಸಿದಾಗ ಅದರಲ್ಲಿ ವಿಮರ್ಶೆಗೆ ಹೆಚ್ಚಿನ ಪ್ರಾಮುಖ್ಯ ನೀಡಬೇಕೆಂಬುದು ಸಂಪಾದಕ ಮಂಡಲಿಯ ಅಪೇಕ್ಷೆ. ಆದರೆ ಒಳ್ಳೆಯ ವಿಮರ್ಶಾಲೇಖನಗಳು ಸಿಗುತ್ತಿರಲಿಲ್ಲ. ಹೀಗಾಗಿ ಗಿರಡ್ಡಿಯವರೇ ಆ ಜವಾಬ್ದಾರಿ ವಹಿಸಿಕೊಂಡು ವಿಮರ್ಶೆ ಬರೆಯತೊಡಗಿದರು. ಕನ್ನಡ ನವ್ಯಕತೆಗಳನ್ನು ಕುರಿತು ಒಂದು ಲೇಖನ ಬರೆಯಹೊರಟು ‘ಸಣ್ಣ ಕತೆಯ ಹೊಸ ಒಲವುಗಳು’ ಎಂಬ ಪುಸ್ತಕವನ್ನೇ ಪ್ರಕಟಿಸಿದರು. ಇದು ಒಂದು ರೀತಿ ಅವರ ಸಾಹಿತ್ಯ ಬದುಕಿಗೆ ತಿರುವು ನೀಡಿತು. ಮುಂದೆ ಕವಿತೆ, ಕತೆ ಬರೆಯುವುದು ಕಡಿಮೆಯಾಗಿ ವಿಮರ್ಶಾ ಲೇಖನಗಳನ್ನೇ ಬರೆಯಬೇಕಾದ ಒತ್ತಡ ಸೃಷ್ಟಿಯಾಯಿತು. ಕಡೆಗೆ ವಿಮರ್ಶೆಯೇ ಅವರ ಮಾಧ್ಯಮವಾಗಿ ನಮ್ಮ ಶ್ರೇಷ್ಠ ವಿಮರ್ಶಕರಲ್ಲೊಬ್ಬರಾಗಿ ಪ್ರಸಿದ್ಧರಾದರು. ಗಿರಡ್ಡಿಯವರು 14 ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಸಾಹಿತ್ಯದ ಎಲ್ಲ ಪ್ರಕಾರಗಳ ಬಗೆಗೂ ಅವರು ಬರೆದಿದ್ದಾರೆ. ಇಂಗ್ಲಿಷ್ ಪ್ರಾಧ್ಯಾಪಕರಾದರೂ ತಮ್ಮ ವಿಮರ್ಶೆ ಕನ್ನಡವಾಗುವಂತೆ ಅವರು ನೋಡಿಕೊಂಡಿದ್ದಾರೆ. ಪಾಶ್ಚಾತ್ಯ ಸಾಹಿತ್ಯದ ಅಧ್ಯಯನದಿಂದ ತಮ್ಮ ವಿಮರ್ಶಾ ಪರಿಕರಗಳನ್ನು ರೂಢಿಸಿಕೊಂಡರೂ ಕನ್ನಡ ಪರಂಪರೆಯ ಆಳವಾದ ಅಧ್ಯಯನ, ತಿಳಿವಳಿಕೆ ಅವರ ವಿಮರ್ಶಾ ಬರವಣಿಗೆಯ ವಿನ್ಯಾಸವನ್ನು ರೂಪಿಸಿದೆ. ವಿಮರ್ಶಾ ಬರವಣಿಗೆಗಳ ಮೂಲಕ ಗಿರಡ್ಡಿಯವರು ಕನ್ನಡ ಪರಂಪರೆಯೊಂದನ್ನು ರೂಪಿಸಲು ಪ್ರಯತ್ನಪಟ್ಟಿದ್ದಾರೆ. ಮರೆತುಹೋದ ಅನೇಕ ಲೇಖಕರನ್ನು ಮರುಚಿಂತನೆಗೆ ಒಳಪಡಿಸಿದ್ದಾರೆ. ಹಳಗನ್ನಡ ಸಾಹಿತ್ಯವನ್ನು ಹೊಸ ದೃಷ್ಟಿಕೋನದಿಂದ ಅರ್ಥೈಸಿ ಅದರ ಪ್ರಸ್ತುತತೆಯನ್ನು ಗುರ್ತಿಸಿದ್ದಾರೆ. ಅವರ ವಿಮರ್ಶೆಯ ಹಿಂದೆ ಸಂಶೋಧಕನೊಬ್ಬನ ಪರಿಶ್ರಮವಿದೆ, ಸಾಹಿತ್ಯಾಭ್ಯಾಸಿಯ ಸೂಕ್ಷ್ಮ ಒಳನೋಟವಿದೆ, ಸೃಜನಶೀಲ ಮನಸ್ಸಿನ ಸಂವಾದವಿದೆ. ಹೀಗಾಗಿಯೆ ಅವರ ವಿಮರ್ಶೆ ಶಾಸ್ತ್ರದ ಶಿಸ್ತು ಹಾಗೂ ಕಲೆಯ ಸ್ವಾಯತ್ತತೆ ಎರಡನ್ನೂ ಒಳಗೊಂಡಿದೆ.

ಗಿರಡ್ಡಿಯವರು ಎಂದೂ ಹಗುರಾಗಿ ಮಾತನಾಡಿದವರಲ್ಲ. ಹರಟೆಯ ಸಂದರ್ಭದಲ್ಲೂ ಗಾಸಿಪ್​ನಿಂದ ದೂರವಿರುತ್ತಿದ್ದರು. ಶಂಬಾ-ಬೇಂದ್ರೆ ಪುರಾಣವನ್ನು ಅವರು ಒಂದು ಸಾಹಿತ್ಯಕ ಪ್ರಸಂಗವೆಂಬಂತೆ ವಿವರಿಸುವಾಗಲೂ ಅದರ ಹಿಂದೆ ಆಳವಾದ ಸಂಶೋಧನೆಯಿರುತ್ತಿತ್ತು. ನಮ್ಮ ಸಾಹಿತ್ಯಕ ಸಂದರ್ಭದಲ್ಲಿ ತಮ್ಮ ಲಘುಮಾತುಗಳಿಂದ ಯಾರ ವ್ಯಕ್ತಿತ್ವವನ್ನಾದರೂ ಹನನ ಮಾಡುವ ಚಾಳಿ ಪ್ರಬಲವಾಗಿರುವಾಗ ಗಿರಡ್ಡಿಯವರ ರೀತಿ ನಮಗೆ ಮಾದರಿಯಂತಿದೆ.

ಗಿರಡ್ಡಿಯವರು ಇತ್ತೀಚೆಗೆ ಲಲಿತ ಪ್ರಬಂಧ ಬರೆಯುವುದರಲ್ಲಿ ಆಸಕ್ತಿ ತೋರಿದ್ದರು. ‘ಹಿಡಿಯದ ಹಾದಿ’, ‘ಆತ್ಮೀಯ’, ‘ಸಾಹಿತ್ಯ ಲೋಕದ ಸುತ್ತಮುತ್ತ’ ಮೊದಲಾದವು ಭಿನ್ನ ರೀತಿಯ ಬರವಣಿಗೆಗಳು. ಅವರ ಆರಂಭದ ಸೃಜನಶೀಲ ಮನಸ್ಸು ಇಲ್ಲಿ ಹೊಸರೂಪ, ವಿನ್ಯಾಸಗಳಲ್ಲಿ ಕಾಣಿಸಿಕೊಂಡಂತೆ ತೋರುತ್ತದೆ.

ಕಳೆದ ಆರು ದಶಕಗಳಿಂದ ಕನ್ನಡ ಸಾಹಿತ್ಯದೊಡನೆ ನಿಕಟ ಒಡನಾಟವಿಟ್ಟುಕೊಂಡು ಕನ್ನಡ ಪರಂಪರೆಯೊಡನೆ ಸಂವಾದಿಸುತ್ತ ಬಂದ ಗಿರಡ್ಡಿಯವರಿಗೆ ಇತ್ತೀಚೆಗೆ ಕನ್ನಡ ಪರಿಸರದಲ್ಲಿ ಸಂವಾದವೇ ಸಾಧ್ಯವಾಗದ ಸ್ಥಿತಿ ನಿರ್ವಣವಾಗಿದೆ ಎಂದು ತೀವ್ರವಾಗಿ ಅನ್ನಿಸಿತ್ತು. ಮಾತು ಜಗಳವಾಗುತ್ತಿರುವ ಸಂದರ್ಭದಲ್ಲಿ ಮಾತಿಗೆ ಮತ್ತೆ ಘನತೆ ತರುವುದು ಹೇಗೆ ಎಂದು ಅವರು ಗಂಭೀರವಾಗಿ ಚಿಂತಿಸುತ್ತಿದ್ದರು. ಎಲ್ಲ ತಲೆಮಾರಿನ ಸಂವೇದನಾಶೀಲ ಮನಸ್ಸುಗಳನ್ನು ಒಂದು ವೇದಿಕೆಯಲ್ಲಿ ತರುವುದರ ಮೂಲಕ ಜಡವಾಗುತ್ತಿರುವ ಪರಿಸರದಲ್ಲಿ ಚಲನಶೀಲತೆಯನ್ನು ತರಬೇಕೆಂದು ಪ್ರಯತ್ನಿಸಿ, ಕೆಲವು ಗೆಳೆಯರೊಡನೆ ಸೇರಿ ‘ಸಾಹಿತ್ಯ ಸಂಭ್ರಮ’ ಎಂಬ ಸಮಾವೇಶವನ್ನು ಆರಂಭಿಸಿದರು. ಕನ್ನಡದಲ್ಲಿ ಇದೊಂದು ಹೊಸ ರೀತಿಯ ಪ್ರಯೋಗ. ಆರಂಭದಲ್ಲಿ ಇದಕ್ಕೂ ಸಾಕಷ್ಟು ಪ್ರತಿರೋಧ ವ್ಯಕ್ತವಾಯಿತು. ಆದರೆ ಗಿರಡ್ಡಿಯವರು ಇದೆಲ್ಲವನ್ನೂ ಎದುರಿಸಿ ತಮ್ಮ ನಿಲುವಿನಲ್ಲಿ ರಾಜಿ ಮಾಡಿಕೊಳ್ಳದೆ ಮುಂದುವರಿದರು. ಕಳೆದ ಆರು ವರ್ಷಗಳಿಂದ ನಡೆಯುತ್ತಿರುವ ‘ಸಾಹಿತ್ಯ ಸಂಭ್ರಮ’ ಸಾಹಿತ್ಯ ಜಾತ್ರೆಗೆ ಒಂದು ಪರ್ಯಾಯ ಸಾಧ್ಯತೆಯನ್ನು ತೋರಿಸುವ ಒಂದು ಪ್ರಾಮಾಣಿಕ ಪ್ರಯತ್ನ.

ಗಿರಡ್ಡಿಯವರು ನಾಡಿನ ಪ್ರಮುಖ ದನಿಯಾಗಿದ್ದರೂ ಎಂದೂ ವ್ಯವಸ್ಥೆಯ ಸುತ್ತ ಸುಳಿದಾಡಿದವರಲ್ಲ. ಅಧಿಕಾರಸ್ಥ ವಲಯದಲ್ಲಿ ಅವರು ಕಾಣಿಸಿಕೊಂಡವರಲ್ಲ. ಎಲ್ಲರೊಡನೆ ಸಮಭಾವದಿಂದ ನಡೆದುಕೊಳ್ಳುವ ಸಮಚಿತ್ತವನ್ನು ಎಂದೂ ಕಳೆದುಕೊಳ್ಳಲಿಲ್ಲ. ಅನೇಕ ಪ್ರಮುಖ ಪ್ರಶಸ್ತಿ ಸಮಿತಿಗಳಲ್ಲಿ ಅವರಿದ್ದು ಅನೇಕ ಅರ್ಹರಿಗೆ ಪ್ರಶಸ್ತಿ ಸಿಗಲು ಕಾರಣರಾಗಿದ್ದಾರೆ. ಹೀಗಾಗಿಯೇ ಕೆಲವು ಪ್ರಶಸ್ತಿಗಳಿಂದ ಅವರು ಹೊರಗುಳಿಯುವಂತಾಯಿತೇನೋ! ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಅವರು ಹಾಕಿಕೊಂಡು ಅನುಷ್ಠಾನಗೊಳಿಸಿದ ಯೋಜನೆಗಳು ಕನ್ನಡ ಸಾಹಿತ್ಯ ಚರಿತ್ರೆಯನ್ನು ಹೊಸ ರೀತಿಯಲ್ಲಿ ಬರೆಯುವ ಪ್ರಯತ್ನಗಳು. ಕನ್ನಡ ಅಧ್ಯಯನಕ್ಕೆ ವಿಸ್ತಾರ ವೇದಿಕೆಯನ್ನು ಕಲ್ಪಿಸುವ ಸಾಧ್ಯತೆಗಳು. ಗಿರಡ್ಡಿಯವರು ಸದಾ ಹೊಸ ಹೊಸ ಚಿಂತನೆಗಳಲ್ಲಿ ಆಸಕ್ತರಾಗಿದ್ದರು. ಕನ್ನಡ ಸಂಸ್ಕೃತಿಯನ್ನು ಸಮಕಾಲೀನಗೊಳಿಸುವುದು ಹೇಗೆಂಬ ಆಲೋಚನೆಗಳಲ್ಲಿ ಸಹ ಸಂವೇದನಾಶೀಲರೊಡನೆ ರ್ಚಚಿಸುತ್ತಿದ್ದರು. ಚಿಂತನೆಗಳನ್ನು ಕಾರ್ಯಗತಗೊಳಿಸುವ ಕ್ರಿಯಾಶೀಲ ಶಕ್ತಿ ಅವರಿಗಿತ್ತು. ಅವರು ಅಕಾಡೆಮಿ ಅಧ್ಯಕ್ಷರಾಗಿದ್ದಾಗ ನನ್ನಿಂದ ‘ನವ್ಯತೆ’ ಪುಸ್ತಕ ಬರೆಸಿದರು. ಇತ್ತೀಚೆಗಿನ ‘ಸಾಹಿತ್ಯ ಸಂಭ್ರಮ’ ಸಮಾವೇಶದಲ್ಲಿ ‘ಆಶಯ ಭಾಷಣ’ ಮಾಡಲು ಆಹ್ವಾನಿಸಿದ್ದರು. ಲೆಕ್ಕವಿಲ್ಲದಷ್ಟು ಸಲ ಅವರೊಡನೆ ವೇದಿಕೆ ಹಂಚಿಕೊಂಡಿದ್ದೇನೆ. ಅವರ ನಿಷ್ಕಲ್ಮಶ ಪ್ರೀತಿ ಸವಿದ ಅನೇಕರಲ್ಲಿ ನಾನೂ ಒಬ್ಬ. ಹೊಸ ತಲೆಮಾರಿನ ಬಗ್ಗೆ ಅವರಿಗೆ ಸದಾ ಆಸಕ್ತಿ, ಪ್ರೀತಿ.

ಕನ್ನಡ ಪರಂಪರೆಯ ಹಿರಿಯ ಜೀವವೊಂದನ್ನು ನಾವು ಕಳೆದುಕೊಂಡಿದ್ದೇವೆ. ಅವರು ಅನೇಕ ಎಳೆಯ ಸಾಹಿತ್ಯಾಸಕ್ತರಿಗೆ ಹಿರಿಯಣ್ಣನಂತಿದ್ದರು. ಅವರದು ಮಾರ್ಗದರ್ಶಕ ಚೇತನ. ಧಾರವಾಡ ಮತ್ತೊಮ್ಮೆ ಬರಡಾಗಿದೆ. ಹಿರಿಯ ಆಪ್ತ ಗೆಳೆಯರಾದ ಗಿರಡ್ಡಿಯವರಿಗೆ ನಾಡವರ ಪರವಾಗಿ ನನ್ನ ಕೃತಜ್ಞತೆಯ ನುಡಿನಮನ.

Courtesy : Vijayavani.net

http://vijayavani.net/samayika-column-by-dr-narahalli-balasubrahmanya-3/

Leave a Reply