“ನಗರಗಳ ಹಸಿರು ಜಗತ್ತಿನ ಅನಾವರಣ”,

ಸಸ್ಯ ವಿಜ್ಞಾನ, ಪ್ರಾಣಿವಿಜ್ಞಾನ, ಪರಿಸರ ವಿಜ್ಞಾನ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಸಾಮಾನ್ಯವಾಗಿ ಕಬ್ಬಿಣದ ಕಡಲೆಯಾಗಿರುತ್ತವೆ. ಆಯಾ ಕ್ಷೇತ್ರಗಳ ತಜ್ಞರು ಮಾತ್ರ ಅದನ್ನು ಅರ್ಥ ಮಾಡಿಕೊಳ್ಳಬಲ್ಲರು. ಇದಕ್ಕೆ ಅಪವಾದಗಳು ಇಲ್ಲವೆಂದಲ್ಲ. ಡಿವಿಜಿ ಅವರ ಪುತ್ರ ಸಸ್ಯಶಾಸ್ತ್ರಜ್ಞ ಡಾ. ಬಿ.ಜಿ. ಎಲ್. ಸ್ವಾಮಿ ಅವರು ‘ಹಸಿರು ಹೊನ್ನು’, ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ’ದಂತಹ ಕೃತಿಗಳ ಮೂಲಕ ಸಸ್ಯಗಳ ಬಗ್ಗೆ ಸಾಮಾನ್ಯರಲ್ಲೂ ಪ್ರೀತಿ ಹುಟ್ಟುವಂತೆ ಮಾಡಿದ್ದರು.‘ಸಿಟೀಸ್ ಆಂಡ್ ಕ್ಯಾನೋಪಿಸ್’ (ನಗರಗಳು ಮತ್ತು ಶಿರಗುಚ್ಛಗಳು) ಸಹ ಅಂತಹದ್ದೇ ಒಂದು ಪುಸ್ತಕ. ಬೆಂಗಳೂರಿನ ಡಾ. ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದಲ್ಲಿ ಸುಸ್ಥಿರತೆ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಡಾ. ಹರಿಣಿ ನಾಗೇಂದ್ರ ಮತ್ತು ಅಭಿವೃದ್ಧಿ ವಿಭಾಗದ ಉಪನ್ಯಾಸಕಿ ಸೀಮಾ ಮುಂಡೋಳಿ ಅವರು ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ ಮೊದಲಾದ ನಗರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮರಗಳು, ಅವುಗಳ ಐತಿಹಾಸಿಕ ಮಹತ್ವ, ಉಪಯುಕ್ತತೆ ಬಗ್ಗೆ ಪುಸ್ತಕದಲ್ಲಿ ತುಂಬ ಆಕರ್ಷಕವಾಗಿ ನಿರೂಪಿಸುತ್ತ ಹೋಗಿದ್ದಾರೆ.ಸಸ್ಯಶಾಸ್ತ್ರೀಯ ಅಧ್ಯಯನದ ದೃಷ್ಟಿಯಿಂದಲೇನೂ ಅವರು ಈ ಪುಸ್ತಕವನ್ನು ಬರೆದಿಲ್ಲ. ತಜ್ಞರಿಗಾಗಿ ನಾವು ಈ ಪುಸ್ತಕ ಬರೆದಿಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ. ಸಾಮಾನ್ಯರೂ ಮರಗಳ ಮಹತ್ವ ಅರಿಯಬೇಕು. ನಗರ ಪ್ರದೇಶದಲ್ಲಿ ಪರಿಸರ ಸಮತೋಲನ ಕಾಪಾಡಲು, ಜೈವಿಕ ಸರಪಳಿ ಮುಂದುವರಿಸಲು ಮರಗಳು ಅಗತ್ಯ ಎಷ್ಟಿದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು ಎನ್ನುವುದು ಅವರ ಉದ್ದೇಶ.ಹಾಗೆ ನೋಡಿದರೆ ಹರಿಣಿ ಮತ್ತು ಸೀಮಾ ಇಬ್ಬರೂ ಸಸ್ಯ ವಿಜ್ಞಾನ ಓದಿದವರಲ್ಲ. ಹರಿಣಿ ಅವರು ರಸಾಯನ ವಿಜ್ಞಾನ, ಪ್ರಾಣಿ ವಿಜ್ಞಾನ, ಸೂಕ್ಷ್ಮಾಣು ಜೀವಿ ವಿಜ್ಞಾನ ಓದಿ ಆನಂತರ ಭಾರತೀಯ ವಿಜ್ಞಾನ ಸಂಸ್ಥೆಯ ‘ಸೆಂಟರ್ ಆಫ್ ಎಕಲಾಜಿಕಲ್ ಸೈನ್ಸ್’ನಲ್ಲಿ ಸಂಶೋಧನೆ ಕೈಗೊಂಡವರು. ಸೀಮಾ ‘ಅಭಿವೃದ್ಧಿ’ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಆದರೆ, ಇಬ್ಬರೂ ಸಸ್ಯಪ್ರೇಮಿಗಳು. ನಗರ ಪ್ರದೇಶದಲ್ಲಿ ಸಂಪನ್ಮೂಲಗಳ ಸುಸ್ಥಿರತೆ ಕುರಿತು ಜಂಟಿಯಾಗಿ ಅಧ್ಯಯನ ನಡೆಸಿದ್ದಾರೆ. ಪ್ರಬಂಧಗಳನ್ನು ಮಂಡಿಸಿದ್ದಾರೆ. ಬೆಂಗಳೂರಿನ ಕೆರೆಗಳ ಅಭಿವೃದ್ಧಿ, ಕೆರೆ ಪುನಶ್ಚೇತನ ಇತ್ಯಾದಿಗಳ ಬಗ್ಗೆಯೂ ಒಟ್ಟಾಗಿ ಕೆಲಸ ಮಾಡಿದ್ದಾರೆ. 2016ರಲ್ಲಿ ಹರಿಣಿ ಅವರ ‘ನೇಚರ್ ಇನ್ ದಿ ಸಿಟಿ: ಪಾಸ್ಟ್, ಪ್ರೆಸೆಂಟ್ ಆಂಡ್ ಫ್ಯೂಚರ್’ ಎಂಬ ಕೃತಿ ಹೊರಬಂದಿತ್ತು.ಪುಸ್ತಕದ ವೈಶಿಷ್ಟ್ಯ ಇರುವುದು ಅದರ ಸರಳತೆಯಲ್ಲಿ. ಹತ್ತನೇ ತರಗತಿ ಕಲಿತವರೂ ಓದಬಹುದಾದಷ್ಟು ಸರಳ ಇಂಗ್ಲಿಷ್‍ನಲ್ಲಿವೆ ಇಲ್ಲಿನ ಬರಹಗಳು. ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಆಲದ ಮರ, ತೆಂಗಿನ ಮರ, ನುಗ್ಗೇ ಮರ, ಹುಣಸೆ ಮರ, ಕಹಿಬೇವಿನ ಮರಗಳ ಬಗ್ಗೆ ಅಪರೂಪದ ಮಾಹಿತಿಗಳನ್ನು ನೀಡಲಾಗಿದೆ. ಅವುಗಳ ಐತಿಹಾಸಿಕ ಮಹತ್ವವೇನು, ಯಾವ ಕಾಲಘಟ್ಟದಲ್ಲಿ ಈ ಮರಗಳು ಭಾರತೀಯ ಉಪಖಂಡ ಪ್ರವೇಶಿಸಿದವು, ಇದರ ಹಿಂದಿನ ರಾಜಕೀಯವೇನು, ಈ ಮರಗಳ ಜೊತೆ ಭಾರತೀಯರಿಗೆ ಇರುವ ಧಾರ್ಮಿಕ, ಸಾಂಸ್ಕೃತಿಕ ನಂಟಿದೆಯೇ ಎಂಬ ವಿಷಯಗಳನ್ನು ಚರ್ಚಿಸುತ್ತಾ, ಬಾಲ್ಯದ ನೆನಪುಗಳನ್ನೂ ಮುತ್ತು ಪೋಣಿಸಿದಂತೆ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಕಲಾವಿದೆ ಅಲಿಷಾ ದತ್ ಇಸ್ಲಾಂ ಮಾಡಿರುವ ಸ್ಕೆಚ್‍ಗಳು ಪುಸ್ತಕದ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ.ಭಾರತದ ಬಹುತೇಕ ಭಾಗಗಳಲ್ಲಿ ತೆಂಗಿನ ಮರ ಇಲ್ಲದ ಊರುಗಳೇ ಇಲ್ಲ. ಸಿಂಧೂ ನಾಗರಿಕತೆಯ ಅವಶೇಷಗಳಲ್ಲೂ ತೆಂಗಿನ ಮರವನ್ನು ಹೋಲುವ ಚಿತ್ರವಿರುವ ಫಲಕಗಳು ಸಿಕ್ಕಿವೆ. ದೇಶದ ಉದ್ದಗಲಕ್ಕೂ ತೆಂಗಿನಕಾಯಿಯನ್ನು ಪವಿತ್ರ ಸಂಕೇತವೆನ್ನುವಂತೆ ನೋಡಲಾಗುತ್ತದೆ. 1820ರಷ್ಟು ಹಿಂದೆಯೇ ಶ್ರೀಲಂಕಾದಿಂದ ತೆಂಗಿನೆಣ್ಣೆ ಇಂಗ್ಲೆಂಡ್‍ಗೆ ರಫ್ತಾಗುತ್ತಿತ್ತು. ತೆಂಗಿನ ತೋಪುಗಳು ಬ್ರಿಟಿಷರಿಗೆ ಸಾಕಷ್ಟು ಆದಾಯ ತಂದುಕೊಡುತ್ತಿದ್ದವು. ಅಂದಹಾಗೆ, ನಾವು ಅಡುಗೆಗೂ ದೇವರ ಪೂಜೆಗೂ ಬಳಸುವ ತೆಂಗಿನಕಾಯಿಯ ಮೂಲ ಯಾವುದು ಗೊತ್ತೆ? ಮಲೇಷ್ಯಾ..! ಮಲೆನಾಡು, ಬಯಲುಸೀಮೆ, ಕರಾವಳಿ ಎನ್ನದೇ ಎಲ್ಲಕಡೆ ವ್ಯಾಪಿಸಿರುವ ಹುಣಸೆ ಮರದ ವೈಜ್ಞಾನಿಕ ಹೆಸರು `ಟ್ಯಾಮರಿಂಡಸ್ ಇಂಡಿಕಾ’. ಕ್ರಿ.ಶ. 600ರ ಹೊತ್ತಿಗೆ ಭಾರತದ ಜೊತೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅರಬ್ಬರು ಹುಣಸೆಕಾಯಿಯನ್ನು ‘ಟ್ಯಾಮರ್-ಇ- ಹಿಂದ್’ ಅಥವಾ ಹಿಂದೂಸ್ತಾನದ ಖರ್ಜೂರ ಎಂದು ಕರೆದರು. ಈ ಹಣ್ಣನ್ನು ಮಧ್ಯಪ್ರಾಚ್ಯಕ್ಕೆ, ಯುರೋಪಿಯನ್ನರಿಗೆ ಪರಿಚಯಿಸಿದರು. ಆದರೆ, ಹುಣಸೆಮರದ ಮೂಲ ಮಧ್ಯ ಆಫ್ರಿಕಾ. ಆಫ್ರಿಕಾದ ಸವನ್ನಾ ಕಾಡುಗಳಲ್ಲಿ ಇದು ನೈಸರ್ಗಿಕವಾಗಿ ಬೆಳೆಯುತ್ತದೆ. ತೊಕ್ಕು, ಚಟ್ನಿ, ಉಪ್ಪಿನಕಾಯಿ, ಸಾಂಬಾರ್, ಪುಳಿಯೋಗರೆಗಳಿಗೆ ಹುಣಸೆಹಣ್ಣು ಬೇಕೇಬೇಕು. ಆಫ್ರಿಕಾದಲ್ಲಿ ಅದು ಕಾಡು ಮರವಾದರೂ ಈ ಮರ ನಮ್ಮ ಬದುಕಿನ ಭಾಗವಾಗಿಬಿಟ್ಟಿದೆ. ಹಾಗೆಯೇ ಮರದ ಹೆಸರಿನಲ್ಲಿ ಭಾರತದ ಹೆಸರೂ ಅಂಟಿಕೊಂಡುಬಿಟ್ಟಿದೆ.ಪುಸ್ತಕದ ಪುಟ–ಪುಟದಲ್ಲೂ ಇಂತಹ ಕುತೂಹಲಕಾರಿ ಅಂಶಗಳನ್ನು ಹೂವಿನ ಗುಚ್ಛದಂತೆ ಪೋಣಿಸಲಾಗಿದೆ.ಸ್ಥಳೀಯ ಮರಗಿಡಗಳೇ ಇರಲಿ, ವಿದೇಶಿ ಮೂಲದ್ದೇ ಆಗಿರಲಿ, ಆಲಂಕಾರಿಕ ಮರಗಳಾಗಿರಲಿ, ಅಡುಗೆ, ಔಷಧಿ ಗಿಡಮೂಲಿಕೆಗಳೇ ಆಗಿರಲಿ, ರಾಜ, ಮಹಾರಾಜರ ಪ್ರೀತಿಗೆ ಪಾತ್ರವಾಗಿದ್ದ, ಜನಸಾಮಾನ್ಯರು ಇಷ್ಟಪಡುವ ಮರಗಳು ನಗರ ಪ್ರದೇಶಕ್ಕೆ ಕಳೆ ತರುತ್ತವೆ. ಮರಗಳ ಶಿರಗುಚ್ಛಗಳು ಪಕ್ಷಿ, ಪ್ರಾಣಿಗಳಿಗೆ ಆಶ್ರಯವನ್ನೂ ಜನರಿಗೆ ನೆರಳನ್ನೂ ನೀಡುತ್ತವೆ. ಜೀವವೈವಿಧ್ಯದ ಆಗರವಾಗಿರುವ, ನಗರ ಸೌಂದರ್ಯವನ್ನು ಹೆಚ್ಚಿಸುವ ಮರಗಳನ್ನು ಪ್ರೀತಿಸುವ ಅಗತ್ಯ ಹಿಂದೆಂದಿಗಿಂತ ಈಗ ಹೆಚ್ಚಾಗಿದೆ. ಕೃತಿಯುದ್ದಕ್ಕೂ ಹರಿಣಿ ಮತ್ತು ಸೀಮಾ ಇದನ್ನೇ ಪ್ರತಿಪಾದಿಸುತ್ತಾ ಬಂದಿದ್ದಾರೆ.

courtsey:prajavani.net

“author”: “ಮಾಲತಿ ಭಟ್”,

https://www.prajavani.net/artculture/book-review/cities-and-canopies-647657.html

Leave a Reply