“ಬದುಕು ನಿಮ್ಮ ನಿಯಂತ್ರಣದಲ್ಲಿ ಇರಲಿ!”,

ಜೀವನ ನಿಂತ ನೀರಲ್ಲ. ಅದು ಸದಾ ಹರಿಯುತ್ತಲೇ ಇರಬೇಕು. ಇದು ಪ್ರತಿಯೊಬ್ಬರ ಜೀವನಕ್ಕೆ ಅನ್ವಯವಾಗುವಂತಹದ್ದು. ಆದರೆ, ಕೆಲವೊಮ್ಮೆ ಕಸಿವಿಸಿ ಕಾಡುತ್ತಿರುತ್ತದೆ. ಅಂದರೆ, ಗತ ಕಾಲದ ವಿಷಯಗಳಿಗೆ ನಮ್ಮ ಮನಸ್ಸು ಕಮರಿ ಹೋಗುತ್ತದೆ. ಇದರಿಂದ ಮಾನಸಿಕ ಬಂಧನಕ್ಕೆ ಒಳಪಟ್ಟ ಮನಸ್ಸು ವರ್ತಮಾನದ ಸೌಂದರ್ಯವನ್ನು ಆನಂದಿಸುವುದರಲ್ಲಿ ವಿಫಲವಾಗುತ್ತದೆ. ಹೌದು, ಅದೆಷ್ಟೋ ವ್ಯಕ್ತಿಗಳ ಜೀವನ ನಿಂತ ಕೆಸರು ನೀರಿನಂತಾಗಿವೆ. ಅಷ್ಟೇ ಯಾಕೆ? ಹಿಂದೆ ಆದ ಅನೇಕ ಕಹಿ ಘಟನೆಗಳಿಂದ ಹೊರ ಬರಲಾಗದೇ ಅದರಲ್ಲೇ ಬಂಧಿಯಾಗಿ, ವಿಲವಿಲ ಒದ್ದಾಡುತ್ತಿರುತ್ತಾರೆ. ಯಾವುದೋ ವಿಷಯ ನಿಯಂತ್ರಣದೊಳಗೆ ನಮ್ಮನ್ನು ತಳ್ಳಿ ಬಿಡುತ್ತದೆ. ಹೀಗಾದಾಗ ಸಂತೋಷ ಕೇವಲ ಕನಸಿನ ಮೂಟೆಯಂತಾಗುತ್ತದೆ. ಗತಕಾಲ, ಬೇರೆಯವರ ಅಭಿಪ್ರಾಯ, ಆಲೋಚನೆಗಳು ಮತ್ತು ತೀರ್ಪು, ನಿಗದಿತ ನಂಬಿಕೆಗಳು, ಸಂಬಂಧಗಳು ಇತ್ಯಾದಿಗಳು ನಮ್ಮನ್ನು ನಿಯಂತ್ರಿಸುವ ಅಂಶಗಳಾಗಿವೆ. ಆದರೆ, ಇವುಗಳಿಂದ ನಮ್ಮನ್ನು ನಾವು ದೂರವಿರಿಸಿಕೊಂಡಷ್ಟು ನಿರ್ಬಂಧಗಳ ಬೇಲಿಯೊಳಗಿಂದ ಹೊರ ಬರುವುದು ಸಾಧ್ಯವಿದೆ. ನಮ್ಮನ್ನು ನಿಯಂತ್ರಿಸುವ ಅಂಶಗಳಿಂದ ದೂರವಿರಬೇಕು. ಗತಕಾಲ ವರ್ತಮಾನಕಾಲ ಮತ್ತು ಭವಿಷ್ಯವನ್ನು ಗತಕಾಲ ನಿಯಂತ್ರಿಸದಂತೆ ನೋಡಿಕೊಳ್ಳಬೇಕು. ಗತದ ಅಂಧಕಾರವನ್ನು ಬಿಟ್ಟು ಬದುಕಿದರೆ ಮಾತ್ರ ಉಜ್ವಲ ಭವಿಷ್ಯದ ಬೆಳಕು ಆರಿ ಹೋಗುವುದಿಲ್ಲ. ಅನ್ಯಾಯ, ಕ್ರೂರ, ಕಷ್ಟಕರ ಯಾವುದೇ ಘಟನೆಗಳಾಗಿರಬಹುದು. ಅವುಗಳಿಂದ ಯಾವುದೇ ಪ್ರಯೋಜನವಿಲ್ಲ. ಜೀವನದಲ್ಲಿ ಗೆಲ್ಲಬೇಕೆಂದು ಬಯಸಿದರೆ ಭವಿಷ್ಯದ ಮೇಲೆ ಮಾತ್ರ ಗಮನ ಹರಿಸಬೇಕು. ನಿಗದಿತ ನಂಬಿಕೆಗಳು ಯಾವುದೇ ಕಾರಣಕ್ಕೂ ವೈಯಕ್ತಿಕ ಸೀಮಿತ ನಂಬಿಕೆಗಳಿಂದ ಜೀವನವನ್ನು ನಿಯಂತ್ರಿಸಲು ಬಿಡಬಾರದು. ನಂಬಿಕೆಯನ್ನು ನಿಯತದಿಂದ ಅನಿಯಮಿತಕ್ಕೆ ಬದಲಾಯಿಸಿಕೊಂಡರೆ ವೈಯಕ್ತಿಕ ಸಾಮರ್ಥ್ಯ ಕೂಡ ಅನಿಯಮಿತವಾಗುತ್ತ ಹೋಗುವುದರಲ್ಲಿ ಸಂಶಯವಿಲ್ಲ. ಬೇರೆಯವರ ಅಭಿಪ್ರಾಯ ಪ್ರತಿಯೊಬ್ಬರ ಜೀವನ ಶೈಲಿ ಶ್ರೇಷ್ಠವಾದುದ್ದು. ಅದನ್ನು ಬೇರೆ ವ್ಯಕ್ತಿಗಳ ಅಭಿಪ್ರಾಯ ಮತ್ತು ಆಲೋಚನೆಗಳು ನಿಯಂತ್ರಿಸದಂತೆ ನೋಡಿಕೊಳ್ಳಬೇಕು. ಜೀವನದ ಪ್ರತಿ ಹೆಜ್ಜೆ ಇಡುವ ಮುನ್ನ ಒಂದು ಬಾರಿ ನಮ್ಮಲ್ಲಿಯೇ ನಮ್ಮ ಮನಸ್ಸಿನಲ್ಲೇ ಪ್ರಶ್ನಿಸಿಕೊಳ್ಳಬೇಕು. ಬೇರೆಯವರ ಅಭಿಪ್ರಾಯಕ್ಕೆ ಕಟ್ಟುಬಿದ್ದು ಮುನ್ನಡೆಯುತ್ತಿದ್ದೇನಾ?! ಎಂದು ಒಮ್ಮೆ ಮೌನವಾಗಿ ಪ್ರಶ್ನಿಸಿಕೊಳ್ಳಬೇಕು. ಬೇರೆಯವರ ಅಭಿಪ್ರಾಯಗಳು ನಮ್ಮ ಜೀವನವನ್ನು ನಿಯಂತ್ರಿಸಿದರೆ ಅದು ನಿಜಕ್ಕೂ ನಮ್ಮ ಬದುಕಾಗಿರುವುದಿಲ್ಲ. ಸಂಬಂಧಗಳು ಬದುಕಿನಲ್ಲಿ ಮಾನವೀಯ ಬದುಕು ಭಾವನಾತ್ಮಕತೆಯಿಂದ ಕೂಡಿರುತ್ತೆ. ಹಾಗೆ ನಾವು ಸಂತೋಷವಾಗಿರಲು ಅಥವಾ ಪರಿಪೂರ್ಣವಾಗಲು ಬೇರೆಯವರ ಅಗತ್ಯವಿದೆ ಎಂದು ಭಾವಿಸುವುದು ಸರಿಯಲ್ಲ. ಒಂದು ವೇಳೆ ಆ ವ್ಯಕ್ತಿ ಬಿಟ್ಟು ಹೋದಾಗ ಅಥವಾ ಸಂಬಂಧ ಉತ್ತಮವಾಗಿ ಸಾಗದೇ ಇದ್ದಾಗ ಜೀವನ ಮುಗಿದೇ ಹೋಯಿತೆಂಬಂತೆ ಕುಸಿದು ಬೀಳುತ್ತೇವೆ. ಹಾಗಂತ ಸಂಬಂಧಗಳೇ ಬೇಡವೆಂದಲ್ಲ. ಸಂಬಂಧಗಳ ವಿಷಯದಲ್ಲಿ ಮನಸ್ಸು ಆದಷ್ಟು ಗಟ್ಟಿಯಾಗಿರಬೇಕು. ಬಿಟ್ಟು ಹೋಗುವ ಸಂಬಂಧಗಳಿಂದ ದೂರವಿದ್ದು ಬದುಕಲು ಕಲಿಯಬೇಕು. ಹಣ ಜಗತ್ತಿನಲ್ಲಿ ಎಲ್ಲರ ಜೀವನ ಹಣದಿಂದ ನಿಯಂತ್ರಿಸಲ್ಪಟ್ಟಿವೆ. ಹಣವಿದ್ದರೆ ದುನಿಯಾ ಎಂಬಂತೆ ಬದುಕುತ್ತಿದ್ದೇವೆ. ಹಣವಿಲ್ಲದಿದ್ದರೆ ಜೀವನವಿಲ್ಲ ಎಂಬಂತಾಗಿದೆ. ಹಣ ಬೇಕು. ಆದರೆ, ಜೀವನವನ್ನೇ ನಿಯಂತ್ರಿಸುವಷ್ಟು ಅಲ್ಲ. ಸ್ವತಂತ್ರವಾಗಿ ಬದುಕಬೇಕು. ಉತ್ತಮ ರೀತಿಯಲ್ಲಿ ಬದುಕು ನಿರ್ವಹಿಸಬೇಕು ಎಂದಾದಲ್ಲಿ ನಮ್ಮನ್ನು ನಿಯಂತ್ರಿಸುವ ವಿಷಯಗಳಿಂದ ದೂರವಿರಬೇಕು. ನಿಯಂತ್ರಣದಲ್ಲಿಟ್ಟುಕೊಂಡು ಸಂತಸದಿಂದ ಬದುಕಬೇಕು. ಪ್ರತಿಯೊಬ್ಬರಲ್ಲಿ ಒಬ್ಬ ದೇವರಿದ್ದಾನೆ. ಆದರೆ, ಪ್ರತಿಯೊಬ್ಬರು ಕೂಡ ದೇವರಾಗಲಾರರು. ಹಾಗೆಯೇ, ಸಮಸ್ಯೆಗಳ ನಡುವೆ ನಾವೇ ಅವಕಾಶಗಳನ್ನು ಹುಡುಕಬೇಕು. ಬದಲಾಗಿ, ಬರೀ ತೊಂದರೆಗಳತ್ತ ಗಮನ ಹರಿಸುತ್ತೇವೆ. ಹೀಗಾಗಿ ಬದುಕನ್ನು ಸುಂದರಗೊಳಿಸಲು ನಾವೇ ಪ್ರಯತ್ನಿಸಬೇಕೆ ವಿನಃ ಕಳೆದು ಹೋದ ದಿನಗಳನ್ನು ನೆನೆದು ಕೊರಗುವುದಲ್ಲ.

courtsey:prajavani.net

“author”: “ಪ್ರೇಮಾ”

https://www.prajavani.net/artculture/article-features/life-649598.html

Leave a Reply