ಮಹಾ ಮಹೋಪಾಧ್ಯಾಯ ಡಾ. ಪಾಂಡುರಂಗ ವಾಮನ ಕಾಣೆ

Panduranga Vamana Kane    ಮಹಾ ಮಹೋಪಾಧ್ಯಾಯ ಡಾ. ಪಾಂಡುರಂಗ ವಾಮನ ಕಾಣೆ

    ಮರಾಠಿ, ಸಂಸ್ಕೃತ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ 15,000ಕ್ಕೂ ಹೆಚ್ಚು ಪುಟಗಳ ಸಾಹಿತ್ಯವನ್ನು ಪ್ರಕಟಿಸಿದ  ಕೀರ್ತಿ ಮಹಾ ಮಹೋಪಾಧ್ಯಾಯ ಡಾ. ಪಾಂಡುರಂಗ ವಾಮನ ಕಾಣೆಯವರದು. ತನ್ನ ಇಪ್ಪತ್ತನೆಯ            ವಯಸ್ಸಿಗೆ ‘ಬಾಣ’ ಕವಿಯ ಕಾದಂಬರಿಯನ್ನು ಸಂಪಾದಿಸಿದ ಅವರು ವಿಶ್ವನಾಥನ ‘ಸಾಹಿತ್ಯ ದರ್ಪಣ’,  ‘ಭವಭೂತಿಯ ‘ಉತ್ತರರಾಮ ಚರಿತೆ’, ಬಾಣನ ‘ಹರ್ಷ ಚರಿತೆ’, ಭಟ್ಟ ನೀಲಕಂಠನ ‘ವ್ಯವಹಾರ  ಮಯೂಖ’ಮುಂತಾದ ಗ್ರಂಥಗಳ ಸಂಪಾದಿತ ಆವೃತ್ತಿಗಳನ್ನು, ಪ್ರಾಚೀನ ಮಹಾರಾಷ್ಟ್ರದ ಭೂಗೋಳ, ಸಾಂಸ್ಕೃತಿಕ ಜೀವನದ ಕುರಿತಾದ ಗ್ರಂಥ, ಕಾತ್ಯಾಯನನ ‘ಸ್ಮೃತಿ ಸಾರೋದ್ಧಾರ’ ದ ಇಂಗ್ಲೀಷ್ ಅನುವಾದ, ಹಿಂದೂ ಸಂಪ್ರದಾಯಗಳು ಮತ್ತು ಆಧುನಿಕ ಕಾನೂನು ಮೊದಲಾದ ಗ್ರಂಥಗಳನ್ನು ಪ್ರಕಟಿಸಿದರು.

ಐದು ಸಂಪುಟಗಳು ಮತ್ತು ಎಂಟು ಭಾಗಗಳಲ್ಲಿ 6,000ಕ್ಕೂ ಹೆಚ್ಚು ಪುಟಗಳನ್ನು ಹೊಂದಿರುವ ಅವರು ಬರೆದ ‘History of Dharmashastra’ (ಧರ್ಮಶಾಸ್ತ್ರದ ಇತಿಹಾಸ) ಭಾರತದ ಸಮಗ್ರ ಪರಿಚಯವನ್ನು ಮಾಡಿಕೊಡುವ ಗ್ರಂಥ. 1930ರಲ್ಲಿ ‘History of Dharmashastra’ ಮೊದಲ ಸಂಪುಟ ಪ್ರಕಟವಾಯಿತು. ಇದರಲ್ಲಿ ಮನು, ಹಿರಣ್ಯಕೇಶಿ, ಬೋಧಾಯನ, ಗೌತಮ, ಯಾಜ್ಞವಲ್ಕ್ಯ, ಪರಾಶರ, ಆಪಸ್ತಂಭ ಮೊದಲಾದ ಮಹಾಮುನಿಗಳ ಸಿದ್ಧಾಂತಗಳ ಪರಿಚಯವಿದೆ. ಕೌಟಿಲ್ಯನ ಅರ್ಥಶಾಸ್ತ್ರ ಮತ್ತು ಸಂಸ್ಕೃತ ಭಾಷೆಯ ಮಹಾಕಾವ್ಯಗಳ ಪರಿಚಯವಿದೆ. 1941ರಲ್ಲಿ ಪ್ರಕಟವಾದ ‘History of Dharmashastra’ ದ ಎರಡನೆಯ ಸಂಪುಟದಲ್ಲಿ ವರ್ಣ, ಆಶ್ರಮ, ಸಂಸ್ಕಾರ, ಆಹ್ನಿಕ, ಆಚಾರ, ದಾನ, ವ್ರತ ಪೂಜಾದಿಗಳು, ದಶಾವತಾರಗಳೇ ಮೊದಲಾದ ವಿಷಯಗಳ ಬಗೆಗೆ ಮಾಹಿತಿಯಿದೆ. 1946ರಲ್ಲಿ ಪ್ರಕಟವಾದ ಮೂರನೆಯ ಸಂಪುಟದಲ್ಲಿ ಸದಾಚಾರ, ವ್ಯವಹಾರ, ರಾಜನೀತಿಯ ಕುರಿತಾದ ವಿವರಗಳಿವೆ. 1953ರಲ್ಲಿ ಪ್ರಕಟವಾದ ನಾಲ್ಕನೆಯ ಸಂಪುಟದಲ್ಲಿ ಜೀವನಕ್ಕೆ ಸಂಬಂಧಿಸಿದ ಪಾತಕಗಳು, ಪ್ರಾಯಶ್ಚಿತ್ತಗಳು, ಕರ್ಮವಿಪಾಕ, ಅಂತ್ಯೇಷ್ಟಿ. ಅಶೌಚ, ಶುದ್ಧಿ, ಶ್ರಾದ್ಧ ಕರ್ಮಾದಿಗಳು ಮತ್ತು ತೀರ್ಥಯಾತ್ರಾ ಎಂಬ ಎಂಟು ಪ್ರಕರಣಗಳ ಕುರಿತಂತೆ ವಿಸ್ತಾರವಾದ ಮಾಹಿತಿಯಿದೆ. ಕೊನೆಯದಾದ ಐದನೆಯ ಸಂಪುಟದ 1958ರಲ್ಲಿ ಪ್ರಕಟವಾದ ಮೊದಲ ಭಾಗದಲ್ಲಿ ವ್ರತ ಉತ್ಸವಾದಿಗಳು, ಭಾರತೀಯ ಖಗೋಳ ಶಾಸ್ತ್ರ, ಮತ್ತು ಜ್ಯೋತಿಷ್ಯ ವಿಜ್ಞಾನದ ಕುರಿತಂತೆ ಮಾಹಿತಿಗಳಿವೆ. ಈ ಸಂಪುಟದ ಎರಡನೆಯ ಭಾಗವು 1962ರಲ್ಲಿ ಪ್ರಕಟವಾಗಿ ಅದರಲ್ಲಿ ಪುರಾಣ, ಪುನರ್ಜನ್ಮ, ಕರ್ಮ, ಯೋಗ, ಪೂರ್ವಮೀಮಾಂಸಾ, ತರ್ಕ, ತಂತ್ರಗಳ ಬಗೆಗೆ ವಿಸ್ತೃತ ಮಾಹಿತಿಯಿದೆ. ಅಂದಿನ ರಾ‍ಷ್ಟ್ರಪತಿಗಳಾದ ಡಾ|| ರಾಧಾಕೃಷ್ಣನ್ ಅವರು ಈ ಮಹಾಗ್ರಂಥದ ಮುಕ್ತಾಯವನ್ನು ಅಧಿಕೃತವಾಗಿ ಘೋಷಿಸಿ ಈ ಕೃತಿರಚನೆಯುಲ್ಲಿ ತಮ್ಮನ್ನು 32 ವರ್ಷಗಳಿಂದ ತೊಡಗಿಸಿಕೊಂಡ ಪಿ.ವಿ. ಕಾಣೆಯವರ ವಿದ್ವತ್ತನ್ನು ಮತ್ತು ಪರಿಶ್ರಮವನ್ನು ಪ್ರಶಂಶಿಸಿದರು.

ಶ್ರೀ ಪಿ.ವಿ. ಕಾಣೆಯವರು ಬರೆದ ‘History of Dharmashastra’ ದ ನಾಲ್ಕನೆಯ ಸಂಪುಟಕ್ಕೆ 1956ನೆಯ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಲಭಿಸಿತು. ಇಂತಹ ಒಂದು ಮಹದ್ಗ್ರಂಥವನ್ನು ಯಾವುದೇ ಸಂಶೋಧಕರ ನೆರವಿಲ್ಲದೆ ಸ್ವತಃ ಕಾಣೆಯವರೇ ರಚಿಸಿದ್ದಾರೆಂಬುದು ಯಾರಾದರೂ ಅಚ್ಚರಿಪಡುವ ವಿಷಯವೇ ಆಗಿದೆ. ಈ ಬೃಹದ್ಗ್ರಂಥವು ಹಿಂದೂ ಧರ್ಮದ ಕುರಿತಾದ ಸಮಗ್ರ ಮಾಹಿತಿಯನ್ನು ನೀಡುವ ವಿಶ್ವಕೋಶವೆನ್ನಬಹುದು. ಇಂದಿಗೂ ವಿದ್ವಾಂಸರು ಕಾಣೆಯವರ ಈ ಗ್ರಂಥವನ್ನು ಪ್ರಮಾಣಕ್ಕಾಗಿ ಆಕರಗ್ರಂಥವನ್ನಾಗಿ ಉಪಯೋಗಿಸುತ್ತಾರೆ ಎಂಬುದು ನಾವು ಚಿತ್ಪಾವನರು ಹೆಮ್ಮೆಪಡಬೇಕಾದ ಸಂಗತಿ.ಭಾರತದಲ್ಲಿ ಕಾನೂನು ಬದ್ಧವಾಗಿ 1950ರಲ್ಲಿ ಅಸ್ಪೃಶ್ಯತಾ ನಿವಾರಣೆಯು ಘೋಷಿಸಲ್ಪಟ್ಟಿದ್ದರೂ ಕಾಣೆಯವರು ಇದಕ್ಕಿಂತ 23 ವರ್ಷ ಮೊದಲು ಅಂದರೆ ಗಾಂಧೀಜಿಯವರ ಅಸ್ಪೃಶ್ಯತಾ ನಿವಾರಣಾ ಆಂದೋಲನಕ್ಕೆ ಮೊದಲೇ 1927ರ ಮುಂಬಯಿಯ ಬ್ರಾಹ್ಮಣ ಸಬಾದ ಅಧ್ಯಕ್ಷರಾಗಿದ್ದ ಕಾಣೆಯವರು ಸಾರ್ವಜನಿಕ ಗಣೇಶೋತ್ಸವದಲ್ಲಿ ಆಗ ಅಸ್ಪೃಶ್ಯರಾಗಿದ್ದ ‘ಮಹಾರ್’ (ಮಾದಿಗ) ಜನಾಂಗಕ್ಕೆ ಗಣೇಶ ದರ್ಶನಕ್ಕೆ ಅವಕಾಶ ಮಾಡಿಕೊಟ್ಟವರು.

1880 ಮೇ 7ರಂದು ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಚಿಪ್ಳೂಣ್ ಗ್ರಾಮದ ಪರಶುರಾಮ್ ಎಂಬಲ್ಲಿ ಜನಿಸಿದರು. ಅವರ ತಂದೆ ವಾಮನ ಕಾಣೆಯವರು ತಾಲೂಕು ಕೋರ್ಟಿನಲ್ಲಿ ವಕೀಲರಾಗಿದ್ದರು.ವಿದ್ಯಾರ್ಥಿ ಜೀವನದಿಂದಲೇ ಪ್ರತಿಭಾವಂತರಾಗಿದ್ದ ಕಾಣೆಯವರು ಎಂ.ಎ., ಎಲ್.ಎಲ್.ಬಿ., ಮತ್ತು ಎಲ್.ಎಲ್. ಎಂ. ಪರೀಕ್ಷೆಗಳಲ್ಲಿ ಮುಂಬಯಿ ಪ್ರಾಂತಕ್ಕೆ ಮೊದಲಿಗರಾಗಿ ತೇರ್ಗಡೆಯಾದವರು. ತಮ್ಮ38ನೆಯ ವರ್ಷಕ್ಕೆ ಹೈಕೋರ್ಟ್ ವಕೀಲರಾದ ಕಾಣೆಯವರು . ತಮ್ಮ ವಕೀಲಿ ವೃತ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದವರು ಮತ್ತು ಶೋಷಣೆಗೊಳಗಾದವರಿಗೆ ನ್ಯಾಯವೊದಗಿಸಲು ಹೋರಾಟ ನಡೆಸಿದವರು. ರಾಜ್ಯಸಭಾ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ ಈ ಉದ್ದಾಮ ಪಂಡಿತ, ವಕೀಲ, ಸಮಾಜ ಸೇವಕ ಪಾಂಡುರಂಗ ವಾಮನ ಕಾಣೆಯವರಿಗೆ ಭಾರತ ಸರಕಾರವು 1963ರಲ್ಲಿ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು. 92 ವರ್ಷಗಳ ಸುದೀರ್ಘ ಜೀವನ ಯಾತ್ರೆಯನ್ನು ಮುಗಿಸಿದ ಕಾಣೆಯವರು 1972ರಲ್ಲಿ ಭಗವವಂತನಲ್ಲಿ ಲೀನವಾದರು.

Leave a Reply