“ಶಂಕರಯಾತ್ರೆಗೊಂದು ಕೈಪಿಡಿ”,

‘ಶಾಸ್ತ್ರದ ತಾತ್ಪರ್ಯವನ್ನು ಅರಿತುಕೊಳ್ಳಲು ಹೊರಟವನು ಅದರಲ್ಲಿ ತೊಡಗುವ ಮೊದಲೇ ರಾಗ–ದ್ವೇಷಗಳ ಹಿಡಿತದಿಂದ ದೂರವಿರಬೇಕು (ಶಾಸ್ತ್ರಾರ್ಥೇ ಪ್ರವೃತ್ತಃ ಪೂರ್ವಮೇವ ರಾಗದ್ವೇಷಯೋಃ ವಶಂ ನಾಗಚ್ಛೇತ್‌) – ಇದು ಶಂಕರಾಚಾರ್ಯರ ಮಾತು. ಯಾವುದಾದರೊಂದು ಸಂಗತಿಯನ್ನು ತಿಳಿದುಕೊಳ್ಳುವ ಮೊದಲು ಪೂರ್ವಗ್ರಹಗಳಿಂದ ದೂರವಿರಬೇಕು. ಈ ಪೂರ್ವಗ್ರಹಕ್ಕೆ ಪ್ರಮುಖ ಕಾರಣಗಳು ಎರಡು: ತಿಳಿಯಲು ಹೊರಟಿರುವ ಸಂಗತಿಯು ನನ್ನದು ಎಂಬ ಅಭಿಮಾನದ ಕಾರಣದಿಂದ, ‘ನನ್ನದು ಹೇಗಿದ್ದರೂ ಅದನ್ನು ಮೆಚ್ಚಲೇಬೇಕು’ ಎಂಬ ಪ್ರೀತಿ ಉಂಟಾಗುತ್ತದೆ. ಇದೇ ರಾಗ. ಇನ್ನೊಂದು ಕಾರಣ: ಆ ಸಂಗತಿ ನನಗೆ ಸೇರಿದ್ದಲ್ಲ ಎಂಬ ದುರಭಿಮಾನದ ಕಾರಣದಿಂದ, ‘ನನ್ನದಲ್ಲದ್ದು ಹೇಗಿದ್ದರೂ ಮೆಚ್ಚತಕ್ಕದ್ದಲ್ಲ; ಹೇಗಾದರೂ ಖಂಡಿಸತಕ್ಕದ್ದು’ ಎಂದಾಗುತ್ತದೆ. ಇದೇ ದ್ವೇಷ. ಈ ಎರಡೂ ಪಕ್ಷಗಳಿಂದ ವಿಮುಖರಾದಾಗ ಮಾತ್ರವೇ ಸರಿಯಾದ ತಿಳಿವಳಿಕೆ ಉಂಟಾಗುತ್ತದೆ. ಆಚಾರ್ಯ ಶಂಕರರ ಈ ಮಾತನ್ನು ಆದರ್ಶವಾಗಿಟ್ಟುಕೊಂಡು ರಚಿತವಾಗಿರುವ ಕೃತಿಯೇ ‘ಶಂಕರ ವಿಹಾರ; ಆಧುನಿಕನೊಬ್ಬನ ಅದ್ವೈತಯಾತ್ರೆ’; ಇದು ಶಂಕರಾಚಾರ್ಯರ ಜೀವನ–ಸಿದ್ಧಾಂತವನ್ನು ಕುರಿತಾದುದೇ ಹೌದು.ಶಂಕರಾಚಾರ್ಯರನ್ನು ಕುರಿತು ಕನ್ನಡವೂ ಸೇರಿ ಹಲವು ಭಾಷೆಗಳಲ್ಲಿ ನೂರಾರು ಕೃತಿಗಳು ಹೊರಬಂದಿವೆ. ಆದರೆ ಈ ಎಲ್ಲ ಕೃತಿಗಳ ನಡುವೆಯೂ ಕೆ. ವಿ. ಅಕ್ಷರ ಅವರ ‘ಶಂಕರ ವಿಹಾರ’ ವಿಶಿಷ್ಟವಾಗಿ ನಿಲ್ಲುತ್ತದೆ. ;ನಮ್ಮ ಕಾಲಕ್ಕೆ ಒದಗಬಹುದಾದ ಅಥವಾ ಒದಗಬೇಕಾದ ಶಂಕರಾಚಾರ್ಯರನ್ನು ಈ ಕೃತಿ ಕಂಡರಿಸಿಕೊಡುತ್ತದೆ. ‘ಶಂಕರಾಚಾರ್ಯರನ್ನು ಅವರ ತತ್ತ್ವ–ಸಿದ್ಧಾಂತಗಳ ಸೀಮಿತ ಆವರಣದಿಂದ ಮೇಲೆತ್ತಿ ಸಮಕಾಲೀನ ಕಾಳಜಿಗಳ ಜತೆಗಿನ ಸಂವಾದದಲ್ಲಿ ಪರಿಚಯಿಸಲು ಹೊರಟಿರುವ ಮಹತ್ವಾಕಾಂಕ್ಷೆ ಈ ಕೃತಿಯಲ್ಲಿದೆ. ಶಂಕರರು ನಮಗೆ ಇವತ್ತಿನ ಕಾಲದೇಶಗಳಲ್ಲಿ ಹೇಗೆ ಉಪಯುಕ್ತ ಎಂಬುದನ್ನು ಕಾಣಿಸುವ ಸಮಗ್ರದೃಷ್ಟಿಯ ಕಥನವೊಂದನ್ನು ಮಾಡುತ್ತದೆ’ ಎಂಬ ಸುಂದರ್‌ ಸರುಕ್ಕೈ ಅವರ ಬೆನ್ನುಡಿಯ ಮಾತುಗಳು ಇಲ್ಲಿ ಉಲ್ಲೇಖಾರ್ಹ ಲೇಖಕರು ಹೊರಗಿನ ಶೀರ್ಷಿಕೆಯಲ್ಲಿ ಈ ಕೃತಿಯನ್ನು ‘ಯಾತ್ರೆ’ ಎಂದು ಕಾಣಿಸಿದ್ದರೂ ಒಳಗಿನ ವಿವರಗಳಲ್ಲಿ ‘ಪ್ರವಾಸಕಥನ’ ಎಂಬುದಾಗಿಯೇ ವಿವರಿಸಿದ್ದಾರೆ. ಪ್ರವಾಸ ಕಥನಗಳಲ್ಲಿ ಇರಬಹುದಾದ ಗುಣ–ದೋಷಗಳೆರಡನ್ನೂ ಈ ಕೃತಿಯಲ್ಲೂ ಕಾಣಬಹುದಾಗಿದೆ. ಕೃತಿಯ ಆರಂಭದಲ್ಲಿಯೇ ಲೇಖಕರು ರಾಗ–ದ್ವೇಷಗಳ ಎರಡು ಧ್ರುವಗಳನ್ನು ಕಾಣಿಸಿದ್ದಾರೆ; ಒಂದು: ದೀರ್ಘಕಾಲದ ವಸಾಹತು ಅನುಭವದ ದೆಸೆಯಿಂದಾಗಿ ‘ಈ ನಾಡಿನ ಗತಕಾಲದ ಸಮಾಜ ಮತ್ತು ಸಂಸ್ಕೃತಿಯನ್ನು ಹಲವು ರೀತಿಯ ಅವಿಚಾರ, ಅಂಧತ್ವ, ಅನ್ಯಾಯಗಳ ಆಗರ’ ಎಂದು ಚಿತ್ರಿಸುವ ಕೀಳರಿಮೆ; ಇನ್ನೊಂದು: ಈ ಕೀಳರಿಮೆಯನ್ನು ಮೀರುವ ನೆಪದಲ್ಲಿ ನಮ್ಮಲ್ಲಿ ಆವಾಹಿಸಿಕೊಂಡಿರುವ ‘ಗತಕಾಲದ ಸಮರ್ಥನೆಯ ಚಾಪಲ್ಯ’. ಈ ಎರಡು ಅತಿರೇಕಗಳಿಂದ ಬಿಡಿಸಿಕೊಂಡು ‘ಶಂಕರಪ್ರವಾಸ, ಶಂಕರವಿಕಲ್ಪ, ಶಂಕರವಿಚಾರ, ಶಂಕರದರ್ಶನ, ಶಂಕರವಿಧಾನ, ಶಂಕರಸಂಬಂಧ, ಶಂಕರ ಅನ್ವಯ, ಶಂಕರಸಮಾಜ, ಶಂಕರಚರಿತೆ, ಶಂಕರಸಂಧಾನ’ ಎಂಬ ಹತ್ತು ನೆಲೆಗಳಿಂದ ಶಂಕರಾಚಾರ್ಯರನ್ನು ಕಾಣಿಸುತ್ತಾರೆ. ಇದೊಂದು ಪ್ರವಾಸಕಥನವೇ ಆದುದರಿಂದ, ಪ್ರವಾಸಿಗೊಬ್ಬನಿಗೆ ಶಂಕರಶಿಖರ ಎಷ್ಟು ದಕ್ಕಬಲ್ಲದ್ದು – ಎಂಬ ಪ್ರಶ್ನೆಯೂ ಏಳದಿರದು. ಲೇಖಕರಿಗೂ ಈ ಮಿತಿಯ ಬಗ್ಗೆ ಅರಿವಿಲ್ಲದೇ ಇಲ್ಲ. ಆದರೆ ‘ಪ್ರವಾಸ ಹೋಗಿಬಂದವರಿಗೆ ತಮಗಿಂತ ಭಿನ್ನವಾಗಿ ಈ ಪ್ರವಾಸವು ಹೇಗೆ ನಿರೂಪಿತವಾಗಿದೆಯೆಂಬ ಕುತೂಹಲವನ್ನು ತಣಿಸೀತು ಮತ್ತು ಕೆಲವರಿಗೆ ಇಂಥ ಕಥನಗಳನ್ನು ಓದಿಯೇ ತಾವೂ ಪ್ರವಾಸ ಮಾಡಬೇಕೆಂಬ ಹಂಬಲವೂ ಹುಟ್ಟಿತು’ ಎಂಬ ಅವರ ನಿರೀಕ್ಷೆಯನ್ನು ಮಿಥ್ಯೆ ಎನ್ನಲಾಗದು. ಈ ಪ್ರವಾಸದಲ್ಲಿ ನಮಗೆ ಕೇವಲ ಶಾಂಕರಕ್ಷೇತ್ರಗಳು ಮಾತ್ರವಲ್ಲದೆ – ಬುದ್ಧ, ಅಭಿನವಗುಪ್ತ, ರಾಮಾನುಜಾಚಾರ್ಯರು, ಮಧ್ವಾಚಾರ್ಯರು, ಕಾಂಟ್‌, ಹೆಗೆಲ್‌, ಸಚ್ಚಿದಾನಂದ ಸರಸ್ವತೀಸ್ವಾಮಿಗಳು, ಪ್ರಿಟ್ಸ್‌ ಸ್ಟಾಲ್‌, ನಂಬೂದಿರಿಪಾಡ್‌, ಪೂರ್ಣಚಂದ್ರ ತೇಜಸ್ವಿ, ಡಿ. ಆರ್‌. ನಾಗರಾಜ್‌, ಜೊನಾರ್ದನ್‌ ಗಣೇರಿ, ಕೆ. ವಿ. ಸುಬ್ಬಣ್ಣ, ಆರ್‌. ಗಣೇಶ್‌, ಪ್ರಭಾಕರ ಜೋಷಿ – ಹೀಗೆ ಹಲವರ ವಿಚಾರಕ್ಷೇತ್ರಗಳ ದರ್ಶನವೂ ಒದಗುತ್ತದೆ. ಶಂಕರಗಿರಿಯನ್ನು ಸಮಗ್ರವಾಗಿ ಕಾಣಿಸಲು ಬೇಕಾದ ಬೌದ್ಧಿಕ ಮತ್ತು ಮಾನಸಿಕ ಕಸುವನ್ನು ನಮಗೆ ದಕ್ಕಿಸುವುದೇ ಈ ಎಲ್ಲ ತಂಗುದಾಣಗಳ ಉದ್ದೇಶ. ಶಂಕರಾಚಾರ್ಯರು ಜಗತ್ತು ಕಂಡಿರುವ ಶ್ರೇಷ್ಠ ದಾರ್ಶನಿಕರಲ್ಲಿ ಪ್ರಮುಖರು. ಸಾವಿರದ ಇನ್ನೂರು–ಮುನ್ನೂರು ವರ್ಷಗಳ ಹಿಂದೆ ಜೀವಿಸಿದ್ದ ಅವರ ಕಾಣ್ಕೆಯನ್ನು ಈಗ ಹೇಗೆ ಅರ್ಥ ಮಾಡಿಕೊಳ್ಳುವುದು? ಏಕಾದರೂ ಅರ್ಥಮಾಡಿಕೊಳ್ಳಬೇಕು? ಇಂಥ ಪ್ರಶ್ನೆಗಳಿಗೆ ಸಮಾಧಾನವನ್ನು ಕೊಡುವುದೇ ‘ಶಂಕರ ವಿಹಾರ’ದ ಹೆಗ್ಗಳಿಕೆ. ಸಾವಿರಾರು ವರ್ಷಗಳ ಹಿಂದಿನ ಶಂಕರಾಚಾರ್ಯರ ಗ್ರಂಥಗಳ ಪರಿಭಾಷೆಯ ಜಾಲವನ್ನು ಇಂದಿನ ಪರಿಭಾಷೆಗಳ ಮೂಲಕ ತಿಳಿದುಕೊಳ್ಳುವುದು ಸುಲಭವಲ್ಲ. ಇನ್ನು ಅವರ ಸಿದ್ಧಾಂತದಲ್ಲಿ ಸಾರ್ವಕಾಲಿಕ ಯಾವುದು, ದೇಶ–ಕಾಲಬದ್ಧವಾದುದು ಯಾವುದು – ಎಂಬ ವಿವೇಕವನ್ನು ದಕ್ಕಿಸಿಕೊಂಡು ಮೌಲ್ಯಕಟ್ಟುವಂಥ ಸಹೃದಯತೆಯನ್ನೂ ಅಧ್ಯಯನಶೀಲತೆಯನ್ನೂ ನಾವು ಕಳೆದುಕೊಳ್ಳುತ್ತಿದ್ದೇವೆ. ಸಂಪ್ರದಾಯವನ್ನು ವಿರೋಧಿಸುವುದೇ ಆಧುನಿಕತೆ – ಎಂಬ ಹಠಸೂತ್ರವೇ ದಿಟವಾದ ವೈಚಾರಿಕತೆ ಎಂಬ ದುಡುಕುತನದಿಂದ ಒದಗುತ್ತಿರುವ ಒತ್ತಡದಲ್ಲಿರುವ ಮನಸ್ಸಿಗೆ ಈ ಕೃತಿ ಔಷಧವಾಗಬಲ್ಲದು. ಶಂಕರರ ಸಿದ್ಧಾಂತ ‘ಅದ್ವೈತ’ (ಅವರು ತಮ್ಮ ಕಾಣ್ಕೆಯನ್ನು ಹೀಗೆ ಹೆಸರಿಸಿಲ್ಲ!); ಎಂದರೆ ಇರುವುದು ಒಂದೇ; ಎರಡಿಲ್ಲ. ಆದರೆ ಈ ತಿಳಿವಳಿಕೆ ನಮ್ಮ ‘ಅನುಭವ’ಕ್ಕೆ ವಿರುದ್ಧವಾಗಿರುವಂತೆ ತೋರುತ್ತದೆ. ‘ದಿಟವಾಗಿ ಇರುವ ಆ ಒಂದು ಯಾವುದು?’ ಇದನ್ನು ಸಾಧಿಸಿ–ತೋರಿಸಿ–ಅನುಭವಕ್ಕೆ ದಕ್ಕಿಸಿಕೊಡುವುದೇ ಶಾಂಕರಸಿದ್ಧಾಂತದ ತಿರುಳು. ಈ ಪ್ರಕ್ರಿಯೆಯಲ್ಲಿ ನಮಗೆ ನಮ್ಮ ನಿತ್ಯದ ಅನುಭವಗಳು, ಕಲಾನುಭವ, ತಾರ್ಕಿಕತೆ ನೆರವಾಗುತ್ತವೆ. ಈ ಸಂಗತಿಗಳ ಮೂಲಕ ಪ್ರಸ್ತುತ ಕೃತಿ ಶಂಕರದರ್ಶನವನ್ನು ಮಾಡಿಸುತ್ತದೆ. ಶಂಕರರ ಬಗ್ಗೆ ಇರುವ ಆಕ್ಷೇಪಣೆಗಳಲ್ಲಿ ಕೆಲವನ್ನು ಪ್ರಸ್ತಾಪಿಸುತ್ತ, ಈ ಆರೋಪಗಳ ನಿರಾಧಾರತೆಯನ್ನು ಸ್ಥಾಪಿಸುವ ಪ್ರಯತ್ನವನ್ನೂ ಮಾಡುತ್ತದೆ. ಇಕ್ಬಾಲ್‌ ಅಹ್ಮದ್‌ ಅವರ ರೇಖಾಚಿತ್ರಗಳು ಶಂಕರರ ಜೀವನ–ವಿಚಾರಗಳಿಗೆ ಮೂರ್ತರೂಪವನ್ನು ಒದಗಿಸಿವೆ. ಕೃತಿಯ ಉದ್ದಕ್ಕೂ ಲೇಖಕರ ಉತ್ಸಾಹದ ‘ವೈಖರೀ’ಶಕ್ತಿ ಎದ್ದುಕಾಣುತ್ತದೆ. ಕೆಲವೊಮ್ಮೆ ಇದೊಂದು ಮಿತಿಯೂ ಆಗಿ, ವಿಚಾರದ ಮೊನಚನ್ನು ಮೊಂಡುಮಾಡುವಂತಿದೆ. ‘ಶಾಸ್ತ್ರ ಎನ್ನುವುದು ಜ್ಞಾಪಕವೇ ಹೊರತು ಅದೇ ಮುಂದೆ ನಿಂತು ಏನನ್ನೂ ಉಂಟುಮಾಡದು’ ಎನ್ನುತ್ತಾರೆ, ಶಂಕರರು. ಇಂದಿನ ಪೀಳಿಗೆಗೆ, ಮರೆತಿರುವ ಶಂಕರರನ್ನು ಜ್ಞಾಪಿಸಿಕೊಡುವ ಸುಲಭ–ಸುಂದರ ಕೈಪಿಡಿಯೇ ‘ಶಂಕರ ವಿಹಾರ’.

courtsey:prajavani.net

“author”: “ಎಸ್‌. ಸೂರ್ಯಪ್ರಕಾಶ ಪಂಡಿತ್‌”,

https://www.prajavani.net/artculture/book-review/shankara-vihara-655590.html

Leave a Reply