ಸಂತನ ಕಂಡೀರಾ, ಎಲ್ಲಾದರೂ?

ಸಂತನ ಕಂಡೀರಾ, ಎಲ್ಲಾದರೂ?

-ನಾರಾಯಣ ಎ

ಸಂತನಿಗೆ ಯಾರೂ ಅನ್ಯರಲ್ಲ, ಯಾವ ಧರ್ಮದಲ್ಲೇ ಉದಿಸಿರಲಿ ಸಂತನಿಗೆ ನಿರ್ದಿಷ್ಟ ಮತ ಧರ್ಮ ಇರುವುದಿಲ್ಲ.

ಸಂತತ್ವ  ಸ್ವೀಕರಿಸಿದ ಯಾರಾದರೂ ಒಬ್ಬ ವ್ಯಕ್ತಿ ಸಾಮಾನ್ಯವಾಗಿ ತನ್ನನ್ನು ತಾನು ಸಂಬೋಧಿಸುವಾಗ ‘ನಾನು’ ಎನ್ನುವ ಪದ ಬಳಸುವುದಿಲ್ಲ. ನಾನು ಎನ್ನಬೇಕಾದಲ್ಲಿ ‘ನಾವು’ ಎನ್ನುತ್ತಾನೆ. ಸಂತತ್ವ ಎನ್ನುವುದು ‘ನಾನು’ ಅಥವಾ ಅಹಂ ಅನ್ನು ಮೀರಿದ ಸ್ಥಿತಿ ಎನ್ನುವುದರ ಸೂಚಕವಾಗಿ  ಹೀಗೊಂದು ಪದ್ಧತಿ ಪ್ರಾರಂಭವಾಗಿರಬೇಕು.  ಈ ‘ನಾವು’ ಎನ್ನುವ  ಪದ  ಬಹಳ  ವಿಚಿತ್ರವಾದದ್ದು. ‘ನಾವು’ ಎಂದರೆ ಯಾರು?  ‘ನಾವು’ ಎನ್ನುವ ಪದವನ್ನು ಕೇವಲ ಎರಡು ವ್ಯಕ್ತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಳಸಬಹುದು ಅಥವಾ ಇಡೀ ಮನುಷ್ಯ ಕುಲವನ್ನೇ ಸೂಚಿಸುವುದಕ್ಕಾದರೂ ಬಳಸಬಹುದು. 

ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ‘ನಾವು’  ಎನ್ನುವುದರ ವ್ಯಾಪ್ತಿ ಸಮಸ್ತ  ಅಖಿಲಾಂಡ ಕೋಟಿ ಬ್ರಹ್ಮಾಂಡದ ಅನಂತ ಚರಾಚರ ಜಗತ್ತನ್ನೆಲ್ಲಾ ಒಳಗೊಳ್ಳಬಹುದು. ಹೀಗೆ ‘ನಾವು’ ಎನ್ನುವ ಪದಕ್ಕೆ  ಈರ್ವರು ಎನ್ನುವ ಸೀಮಿತಾರ್ಥವೂ ಇದೆ,  ಎಲ್ಲರೂ ಅಥವಾ ಎಲ್ಲವೂ ಎನ್ನುವ  ಅಮಿತವಾದ ಅರ್ಥವೂ ಇದೆ. ಓರ್ವ ಸಂತನ ಸಂತತ್ವದ ಗುಣಮಟ್ಟ ಎಷ್ಟು ಎನ್ನುವುದರ ನಿರ್ಣಯವಾಗುವುದು ಆತ ‘ನಾನು’ ಎನ್ನಬೇಕಾದಲ್ಲಿ ಬಳಸುವ ‘ನಾವು’ ಎನ್ನುವ ಪದವನ್ನು ಎಷ್ಟು ವಿಶಾಲವಾದ ಅರ್ಥದಲ್ಲಿ ಕಲ್ಪಿಸಿಕೊಂಡಿದ್ದಾನೆ ಎನ್ನುವುದರ ಆಧಾರದ ಮೇಲೆ.

ಆದುದರಿಂದ ಸಂತ ಎಂದು ಕರೆಸಿಕೊಳ್ಳುವ ವ್ಯಕ್ತಿ ಅಥವಾ ಭಾರತದ ಸಂದರ್ಭದಲ್ಲಾದರೆ ‘ಸ್ವಾಮಿ’ ‘ಶ್ರೀ’ ಎಂದೆಲ್ಲಾ ಕರೆಸಿಕೊಳ್ಳುವ ವ್ಯಕ್ತಿ ‘ನಾವು’ ಎನ್ನುವ ಪದವನ್ನು ಕೇವಲ ತನ್ನ ಪರಿವಾರದ ಅಥವಾ ತನ್ನ ಜಾತಿಯ ಅಥವಾ ತನ್ನ ಮತ– ಮಠ– ಪಂಥದ ವ್ಯಾಪ್ತಿಯಲ್ಲಿ ಬಳಸಿಕೊಂಡರೆ ಆತ ಸಂತನಾಗುವುದಿಲ್ಲ, ಆತ ಕೇವಲ ಕುಲಗುರು ಅಷ್ಟೇ ಆಗುತ್ತಾನೆ.  ‘ನಾವು’ ಎನ್ನುವಲ್ಲಿ  ಆತ  ತನ್ನ ಪರಿವಾರವನ್ನು ಮೀರಿ ತನ್ನ ಧರ್ಮದ ಎಲ್ಲಾ ಅನುಯಾಯಿಗಳನ್ನು   ದೃಷ್ಟಿಯಲ್ಲಿರಿಸಿಕೊಂಡಿದ್ದರೆ ಕೂಡಾ ಆತ ಸಂತನಾಗುವುದಿಲ್ಲ. ಹೆಚ್ಚೆಂದರೆ ಅಂತಹ ವ್ಯಕ್ತಿಯನ್ನು ನಾವು ಧರ್ಮಕಾರಣಿ ಎಂದು ಕರೆಯಬಹುದೇನೋ– ರಾಜಕಾರಣಿಗಳ ಧಾರ್ಮಿಕ ಆವೃತ್ತಿಗಳು ಎನ್ನುವ ಅರ್ಥದಲ್ಲಿ.

ಎಲ್ಲಾ ಧರ್ಮಗಳನ್ನು ಮೀರಿ ಎಲ್ಲಾ ರೀತಿಯ ಗಡಿಗಳನ್ನೂ ಮೀರಿ ಇಡೀ ಮಾನವ ಕೋಟಿಯನ್ನೇ ವ್ಯಾಪಿಸಿದ ಅರ್ಥದಲ್ಲಿ  ‘ನಾವು’ ಎನ್ನುವ ವ್ಯಕ್ತಿ ಮಾತ್ರ ಸ೦ತತ್ವಕ್ಕೆ ಏರಿದವ. ಸಂತನಾದವನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬಹುದು. ಆತ ‘ನಾವು’ ಎನ್ನುವ ತನ್ನ ಪರಿಕಲ್ಪನೆಯಲ್ಲಿ ಮಾನವ ಕೋಟಿ ಮಾತ್ರವಲ್ಲ, ಅದರಾಚೆಗಿನ ಸಮಸ್ತ ಜೀವ ಜಗತ್ತು, ಸಮಗ್ರ ಚರಾಚರ ವಿಶ್ವ ಕೂಡಾ ಸೇರಿವೆ ಎಂದು ಭಾವಿಸಬಹುದು. ಹೀಗೆ ಭಾವಿಸುವ ವ್ಯಕ್ತಿ ನಿಜವಾದ ಸಂತ, ನಿಜವಾದ  ಜಗದ್ಗುರು, ನಿಜವಾದ ಯೋಗಿ,  ನಿಜವಾದ ಸನ್ಯಾಸಿ, ನಿಜವಾದ ‘ಶ್ರೀಗಳು’ (ಶ್ರೀ + ಶ್ರೀ = ಶ್ರೀಗಳು). ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ವಿವರಿಸಿದ  ‘ಸರ್ವಭೂತಾತ್ಮಭೂತಾತ್ಮ’ ಸ್ಥಿತಿ ಇದು (ಅಧ್ಯಾಯ 5, ಸ್ತೋತ್ರ 7). ಈ ಸ್ಥಿತಿ ತಲುಪಿದವ ಎಲ್ಲವನ್ನೂ, ಎಲ್ಲರನ್ನೂ ತನ್ನಲ್ಲಿ ಕಾಣುತ್ತಾನೆ;  ಎಲ್ಲದರಲ್ಲೂ, ಎಲ್ಲರಲ್ಲೂ ತನ್ನನ್ನು ಕಾಣುತ್ತಾನೆ.

ಒಬ್ಬ ಸಂತನಿಗೆ ಯಾರೂ ಅನ್ಯರಲ್ಲ. ಆತ ಯಾವ ಧರ್ಮದಲ್ಲೇ ಉದಿಸಿರಲಿ ಅವನಿಗೆ ನಿರ್ದಿಷ್ಟ ಮತ ಧರ್ಮ ಇರುವುದಿಲ್ಲ ಮತ್ತು ಇರಬಾರದು. ಆ ಕಾರಣಕ್ಕೆ ಆತನಿಗೆ ಪ್ರಪಂಚದ ಯಾವುದೇ ಆಚಾರ ವಿಚಾರ ಅನುಸರಿಸುವವರೂ ಅನ್ಯಧರ್ಮೀಯರು, ಅನ್ಯಮತೀಯರು ಎಂದಾಗುವುದಿಲ್ಲ ಮತ್ತು ಆಗಬಾರದು. ಕೃಷ್ಣ ಗೀತೆಯಲ್ಲಿ ಹೇಳುತ್ತಾನೆ ‘ಯೋಗಿಯಾದವನು ಪಂಡಿತೋತ್ತಮನಾದ ಬ್ರಾಹ್ಮಣನನ್ನೂ, ಆನೆಯನ್ನೂ, ದನವನ್ನೂ, ನಾಯಿಯನ್ನೂ, ನಾಯಿಯ ಮಾಂಸ ತಿನ್ನುವವನನ್ನೂ’ ಹೀಗೆ ಯಾರೇ ಅಗಲೀ ‘ಎಲ್ಲರನ್ನೂ ಸಮನಾಗಿ ತನ್ನವರೆಂದೇ ಕಾಣಬೇಕು’ (ಅಧ್ಯಾಯ 5, ಸ್ತೋತ್ರ 18). 

ಇಷ್ಟಾದ ಮೇಲೆ ಆತ ಎಲ್ಲಾ ವಿಧದ ಪ್ರಾರ್ಥನೆಗಳನ್ನೂ ಸಮಾನ ಎಂದು ಕಾಣಬೇಕಾಗುತ್ತದೆ. ಆತನ ದೃಷ್ಟಿಯಲ್ಲಿ ಯಾವ ಪ್ರಾರ್ಥನೆಯೂ ಅಪವಿತ್ರ ಆಗಬಾರದು. ಯಾವುದೋ ರೀತಿಯ ಪ್ರಾರ್ಥನೆ ಆತನ ಪಕ್ಕದಲ್ಲೇ ನಡೆಯಲಿ, ಮಾರು ದೂರದಲ್ಲಿ ನಡೆಯಲಿ, ಸಂತನಾದವನು  ಅದನ್ನು ಸಮಾನವಾಗಿ ಸ್ವೀಕರಿಸುತ್ತಾನೆ ಮತ್ತು ಸ್ವೀಕರಿಸಬೇಕಾಗುತ್ತದೆ. ‘ನಿಮ್ಮ ಬಳಿ ಬಂದು ಅನ್ಯರು ಅವರದೇ ವಿಧಾನದಿಂದ ಪ್ರಾರ್ಥಿಸಿದ ಕಾರಣ ನೀವು ಮತ್ತು ನೀವು ಪ್ರತಿನಿಧಿಸಿದ್ದು ಎಲ್ಲವೂ ಅಪವಿತ್ರವಾಯಿತು’ ಎಂದು ಕ್ರೋಧಾತ್ಮರಾದ ಕೆಲವರು ಹೇಳಿದರೆ, ಓರ್ವ ಸಂತನಾದವನು  ಗೀತಾಚಾರ್ಯ ಹೇಳಿದ್ದನ್ನೇ ಉದ್ಧರಿಸಿ ಅವರಿಗೆ ಉತ್ತರ ನೀಡಬಹುದು ಮತ್ತು ನೀಡಬೇಕು.

ಅದು ಬಿಟ್ಟು ನಾವು ‘ಅನ್ಯಮತ’ದವರನ್ನು ತುಂಬಾ ಹತ್ತಿರ ಬಿಟ್ಟಿಲ್ಲ, ದೂರದಲ್ಲಿ ಅವರು ಏನೋ ಪ್ರಾರ್ಥನೆ ಮಾಡಿಕೊಂಡ ಕಾರಣ ನಮ್ಮ ಪಾವಿತ್ರ್ಯಕ್ಕೇನೂ ಧಕ್ಕೆಯಾಗಿಲ್ಲ; ಅವರು ಸಾರ್ವಜನಿಕ ಸ್ಥಳದಿಂದಾಚೆ ಬರಲಿಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿ ಕ್ರೋಧಾತ್ಮರ ವಾದವನ್ನೇ ಪರೋಕ್ಷವಾಗಿ ಒಪ್ಪುವವರು ಸಂತರಾಗುವುದಿಲ್ಲ. ಅವರು ಕುಲಗುರುಗಳೋ, ಧರ್ಮಕಾರಣಿಗಳೋ ಆಗುತ್ತಾರೆ. ಕುಲಗುರುಗಳಿಗೂ, ಧರ್ಮಕಾರಣಿಗಳಿಗೂ ಕ್ರೋಧಾತ್ಮರ ಜತೆ ಸೆಣಸಲು ಸಾಧ್ಯವಿಲ್ಲ. ಅದು  ಸಾಧ್ಯ  ಇರುವುದು ಸಂತರಿಗೆ ಮತ್ತು ಅವರ ಸಂತತ್ವಕ್ಕೆ ಮಾತ್ರ. ಒಂದೆಡೆ ಕ್ರೋಧಾತ್ಮರ ಕ್ರೌರ್ಯ, ಇನ್ನೊಂದೆಡೆ ಧರ್ಮಕಾರಣಿಗಳು ಮತ್ತು ಕುಲಗುರುಗಳ ಎಡಬಿಡಂಗಿತನ. ಇವೆರಡೂ ಎಲ್ಲಾ ಧರ್ಮಗಳನ್ನೂ ಒಳಗೊಳಗೇ ಕೊಲ್ಲುತ್ತಿವೆ.

ಕುಲಗುರುಗಳ ಮತ್ತು ಧರ್ಮಕಾರಣಿಗಳ  ಕೈಗೆ ಸಿಕ್ಕು ನಲುಗುತ್ತಿರುವ ಧರ್ಮಗಳು  ಒಡ್ಡುತ್ತಿರುವ ಅಪಾಯದಿಂದ ಜಗತ್ತನ್ನು ಪಾರು ಮಾಡಲು ಎಲ್ಲಾ ಧರ್ಮಗಳಲ್ಲೂ ಸಂತರು ಉದಯಿಸಬೇಕಾದ ಅಗತ್ಯವಿದೆ. ‘ನಿಂದಕರಿರಬೇಕು ಜಗದಲ್ಲಿ…’ ಎಂದು ದಾಸವರೇಣ್ಯರು ಹೇಳಿದಂತೆ ಸಂತರಿರಬೇಕು ಜಗದಲ್ಲಿ.  ಸಂತರು ಯಾಕೆ ಬೇಕು ಎಂದರೆ ಕೆಲವೊಂದು ಕೆಲಸವನ್ನು ಒಂದು ಸಮಾಜದಲ್ಲಿ ಸಂತರು ಮಾತ್ರ  ಮಾಡುವುದಕ್ಕೆ ಸಾಧ್ಯ ಎನ್ನುವ ಕಾರಣಕ್ಕೆ. ಯಾವುದು ಆ ಕೆಲಸ? ಇಂಗ್ಲಿಷ್‌ನಲ್ಲಿ ಒಂದು ಮಾತಿದೆ. Speaking Truth to Power ಅಂತ. ಅಂದರೆ ಪ್ರಬಲರಾದವರಿಗೆ ಕೆಲ ಅಪ್ರಿಯ ಸತ್ಯಗಳನ್ನು ಹೇಳಲು. 

ಪ್ರಬಲರು ಎಂದರೆ ರಾಜಕೀಯ ಅಧಿಕಾರ ಹೊಂದಿದ ಆಳುವವರು ಆಗಿರಬಹುದು ಅಥವಾ ರಾಜಕೀಯೇತರ ಅಧಿಕಾರದಿಂದ ಮೆರೆಯುವ ಧರ್ಮಾಂಧ, ಜಾತ್ಯಂಧ ಶಕ್ತಿಗಳಿರಬಹುದು. ಇವರಿಗೆಲ್ಲಾ  ಅವರವರು ನಂಬಿದ ಸತ್ಯಗಳಿಗಿಂತ ಅತೀತವಾದ ಮಾನವೀಯ ಸತ್ಯಗಳನ್ನು ತಿಳಿ ಹೇಳಬೇಕು ಎಂದಾದರೆ ಅದಕ್ಕೆ ವಿಶೇಷವಾದ ಧೈರ್ಯ ಬೇಕು. ಅದು ಅಂಗುಲಿಮಾಲನ ಎದುರು ನಿಂತ ಬುದ್ಧನ ಧೈರ್ಯ.

ಅದು ಕೊಂದುತಿನ್ನುವೆನೆಂಬ ಹುಲಿಯ ಬಳಿ ಹಿಂತಿರುಗಿದ ಪುಣ್ಯಕೋಟಿ ಹಸುವಿನ ಧೈರ್ಯ. ಅದು ಸೃಷ್ಟಿಕರ್ತ ನಿರ್ಮಿಸಿದ ಆಹಾರ ಶೃಂಖಲೆಯಲ್ಲಿರುವ ಕ್ರೌರ್ಯವನ್ನು ಪ್ರತಿಭಟಿಸಿ ಬೆಟ್ಟದ ತುದಿಯಿಂದ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟ ಪುಣ್ಯಕೋಟಿಯ ಕತೆಯ ಅರ್ಭುತ ಎಂಬ ವ್ಯಾಘ್ರನ ಧೈರ್ಯ. ಅದು ಕೋಮುದಳ್ಳುರಿಯ ಕೆನ್ನಾಲಿಗೆಗಳ ನಡುವೆ ನೌಕಾಲಿಯಲ್ಲಿ ಕೇವಲ ಊರುಗೋಲು ಹಿಡಿದು ನಡೆದಾಡಿದ ಗಾಂಧಿಯವರ ಧೈರ್ಯ. ಅದು ಸತ್ಯ ಹೇಳಿದರೆ ಒಬ್ಬಂಟಿಯಾಗಿಬಿಡುತ್ತೇನೆ ಎಂಬ ಅಂಜಿಕೆಯನ್ನು ಮೀರಿದ ಧೈರ್ಯ. ಅದು ಸಂತತ್ವದ ಧೈರ್ಯ. ವರ್ತಮಾನ ಜಗತ್ತಿನಲ್ಲಿ  ಓರ್ವ ಸಂತ ತೋರಬೇಕಾದದ್ದು ಇಂತಹ ಧೈರ್ಯ ಅಥವಾ ವರ್ತಮಾನ ಜಗತ್ತಿಗೆ ಬೇಕಿರುವುದು ಇಂತಹ ಧೈರ್ಯ ತೋರಬಲ್ಲ ಓರ್ವ ಸಂತನ ಬಲ.

ಇನ್ನೂ  ನೇರವಾಗಿ ಹೇಳಬೇಕು ಎಂದಾದರೆ ಧರ್ಮವನ್ನು ರಕ್ಷಿಸಿದವರನ್ನು ಅದು ರಕ್ಷಿಸುತ್ತದೆ ಎಂದೇನೋ ಅಂದುಕೊಂಡು ರಕ್ತ ಚೆಲ್ಲುತ್ತಿರುವ ಕ್ರೋಧಾತ್ಮಗಳನ್ನು ನೇರಾ ನೇರಾ ಎದುರಿಸಲು ಜಗತ್ತಿಗೆ ಒಬ್ಬ ಸಂತನ ಅಗತ್ಯವಿದೆ. ನಿಜವಾದ ಧರ್ಮವನ್ನು ಯಾವತ್ತೂ ಅಸುರಕ್ಷತೆ ಕಾಡುವುದಿಲ್ಲ ಎಂದು ಹೇಳಲು ಸಂತನೊಬ್ಬ ಈಗ ಬೇಕಿದ್ದಾನೆ. ಎಲ್ಲರೂ ತಮ್ಮ ತಮ್ಮ ಧರ್ಮದ ಮಾನವೀಯ ಸಂದೇಶವನ್ನು ಅನುಸರಿಸಿದರೆ ಧರ್ಮ ರಕ್ಷಣೆಗೆ ಇನ್ನೇನೂ ಬೇಕಿಲ್ಲ ಎಂಬ ಮಂತ್ರವನ್ನು ಕ್ರೋಧಾತ್ಮಗಳ ಕಿವಿಗಳಲ್ಲಿ ಉಸುರಬಲ್ಲ ಸಂತನ್ನೊಬ್ಬ ಬೇಕಿದ್ದಾನೆ.

ನಮ್ಮ ಧರ್ಮ ಅಪಾಯದಲ್ಲಿದೆ ಎನ್ನುವ ಅಸುರಕ್ಷತೆ ಯಾರಿಗಾದರೂ ಕಾಡಿದರೆ ಅದಕ್ಕೆ ಕಾರಣವನ್ನು ಆಯಾ ಧರ್ಮಗಳು ತಮ್ಮ ಒಳಗೆ ಹುಡುಕಬೇಕೇ ಹೊರತು ಹೊರಗಲ್ಲ ಎನ್ನುವ ಮಾತನ್ನು ಮನಮುಟ್ಟುವಂತೆ ತಿಳಿಸಲು ಸಂತನೊಬ್ಬ ಬೇಕಾಗಿದ್ದಾನೆ. ಧರ್ಮದ ಹೆಸರಲ್ಲಿ ಕೊಲ್ಲುವುದು ಎಂದರೆ ಧರ್ಮವನ್ನೇ ಕೊಂದಂತೆ ಎಂದು ಅಂಜದೆ, ಅಳುಕದೆ ಸಾರಲು ಸಂತನೊಬ್ಬ ಬೇಕಿದ್ದಾನೆ.

ಇಷ್ಟನ್ನು ಗಟ್ಟಿಯಾಗಿ ಹೇಳುವ ಧೈರ್ಯ ತೋರುವ ಬದಲಿಗೆ ಈಗಾಗಲೇ ತನ್ನ ಧರ್ಮದಲ್ಲಿ ಇರುವ  ಅಸುರಕ್ಷತೆಯ ಭಾವನೆಯನ್ನು ನೀರೆರೆದು ಪೋಷಿಸುವ ಕೆಲಸವನ್ನು ಮಾಡಿದ ವ್ಯಕ್ತಿ ತಾನೇ ಸೃಷ್ಟಿಸಿದ ಧರ್ಮಕಾರಣದ ಉರುಳಲ್ಲಿ ಶಾಶ್ವತ ಬಂದಿಯಾಗಿಬಿಡುತ್ತಾನೆ. ಏನೋ ಒಂದು ಸದುದ್ದೇಶದ ಕಾರ್ಯ ಮಾಡಿ  ಆ ಉರುಳಿನಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲ. ಅದು ಬಲುದೊಡ್ಡ ಪಾಶ.

‘ಸ್ಫೂರ್ತಿ ಗೌರಿಶಂಕರ, ಕಾಲ ಯಮನು ಕಿಂಕರ’. ಈ ಪಾಶದಲ್ಲಿ ಸಿಕ್ಕ ವ್ಯಕ್ತಿಯ ಶಕ್ತಿ ಎಷ್ಟು ಕ್ಷೀಣಿಸಿಬಿಡುತ್ತದೆ ಅಂದರೆ ಆತನಿಗೆ ತನ್ನ ಅನುಯಾಯಿಗಳಿಗೆ, ತನ್ನ ಪಂಥದವರಿಗೆ, ತನ್ನ ಸಮ-ಸಪ್ತಕರಿಗೆ ಧರ್ಮದ ಕೆಲ ಸರಳ ಸತ್ಯಗಳನ್ನು ಮನವರಿಕೆ ಮಾಡಿಕೊಡಲೂ ಸಾಧ್ಯವಾಗುವುದಿಲ್ಲ. ಎಲ್ಲಾ ದಿವ್ಯಾತ್ಮನಿಗೂ ಒಂದು ಚರಿತ್ರೆ ಇದೆ, ಎಲ್ಲಾ ಪಾಪಾತ್ಮನಿಗೂ ಒಂದು ಭವಿಷ್ಯವಿದೆ ಎನ್ನುವ ಇಂಗ್ಲಿಷ್ ಗಾದೆ ಭಾರತದ ರಾಜಕಾರಣಕ್ಕೆ ಒಂದೊಮ್ಮೆ ಅನ್ವಯಿಸುತ್ತದೆಯೋ ಏನೋ. ಆದರೆ ಭಾರತದ ಧರ್ಮಕಾರಣ ಅಷ್ಟು ಮಾತ್ರ ವಿವೇಚನೆಗೂ ಅವಕಾಶ ನೀಡುವುದಿಲ್ಲ.

ಭಾರತ ಒಂದು ವಿಲಕ್ಷಣ ಸನ್ನಿವೇಶದಲ್ಲಿದೆ.  ವಿವೇಕ, ವಿವೇಚನೆ ಮತ್ತು ಸಮತೋಲನದ ಮಧ್ಯ ಮಾರ್ಗ ಈಗ  ಧರ್ಮಾಂಧತೆಯ,  ಪ್ರಗತಿಪರಾಂಧತೆಯ,  ದೇಶಪ್ರೇಮಾಂಧತೆಯ, ವಿಚಾರವಾದಾಂಧತೆಯ ಕಗ್ಗತ್ತಲಲ್ಲಿ ಕಳೆದುಹೋಗಿದೆ. ಒಂದು ಸಮಾಜಕ್ಕೆ ಸಂತ ಪರಂಪರೆಯ ನೆರವು ಮತ್ತು ಅಧ್ಯಾತ್ಮದ ಸಿಂಚನ ಬೇಕಿರುವುದು ಸಮತೋಲನ ಕಳೆದುಕೊಂಡ ಇಂತಹ ಸ್ಥಿತಿಯಲ್ಲಿ. ಕೆಲವು ಒಳ್ಳೆಯ ಕೆಲಸಗಳನ್ನು ಎಲ್ಲರೂ ಮಾಡಬಹುದು. ಇನ್ನು ಕೆಲವು ಒಳ್ಳೆಯ ಕೆಲಸಗಳನ್ನು ಸಂತರು ಮಾತ್ರವೇ ಮಾಡಲು ಸಾಧ್ಯ. ಕಹಿಯಾದ ಸತ್ಯಗಳನ್ನು ನೇರವಾಗಿ ಹೇಳುವ ಮೂಲಕ ಕಳೆದು ಹೋದ ಸಮತೋಲನವನ್ನು ತಹಬಂದಿಗೆ ತರುವ ಕೆಲಸವನ್ನು ಮಾಡುವುದಕ್ಕೆ ನಮಗೆ ಸಂತರ ನೆರವು ಬೇಕಿರುವುದು.

ಶಾಲೆ ನಡೆಸಲು, ಆಸ್ಪತ್ರೆ ಕಟ್ಟಲು, ಎಂಜಿನಿಯರಿಂಗ್- ಮೆಡಿಕಲ್ ಕಾಲೇಜು ತೆರೆಯಲು ಸಂತರ ಅಗತ್ಯವಿಲ್ಲ. ಅದನ್ನು ಸರ್ಕಾರ ಮಾಡುತ್ತದೆ. ‘ಸಾರ್ವಜನಿಕ ಸ್ಥಳ’ಗಳಲ್ಲಿ ಮತಸೌಹಾರ್ದ ಕೂಟ ಏರ್ಪಡಿಸಲು ಸಂತರು ಬೇಕಿಲ್ಲ, ಅದನ್ನು ರಾಜಕೀಯ ಪಕ್ಷಗಳು ಮಾಡುತ್ತವೆ. ‘ಹೌದು, ಬೇಲಿಗಳನ್ನು ಮುರಿದಿದ್ದೇವೆ, ಒಳಗೆ ಬಿಟ್ಟಿದ್ದೇವೆ, ಪಾವಿತ್ರ್ಯಕ್ಕೆ ಹೊಸ ಭಾಷ್ಯ  ಬರೆದಿದ್ದೇವೆ, ಮಾನವರ ಮಧ್ಯೆ ಅನ್ಯರು ಎನ್ನುವ ಪರಿಕಲ್ಪನೆಗೆ ಅವಕಾಶವಿಲ್ಲ’  ಎಂದು ಹೇಳುವ ಧೈರ್ಯ ತೋರಿಸಲು ಸಂತರು ಬೇಕಾಗಿದ್ದಾರೆ.

ಎಲ್ಲರೂ ಮಾಡಬಹುದಾದ  ಕೆಲಸಗಳನ್ನು ಸಂತರು ಎಂದು ಕರೆಸಿಕೊಳ್ಳುವವರೂ ಮಾಡಲು ಮುಂದಾದಾಗ ಎಲ್ಲರೂ ನಿಂತು ಚಪ್ಪಾಳೆ ತಟ್ಟುತ್ತಿದ್ದಾರೆ. ಇವುಗಳನ್ನೆಲ್ಲಾ ನೋಡುತ್ತಿದ್ದರೆ ಸಂತರಿಂದ ಏನನ್ನು ಅಪೇಕ್ಷಿಸಬೇಕು ಎನ್ನುವುದೇ ಗೊಂದಲದ ವಿಷಯವಾದಂತಿದೆ. ಸಮಾಜವನ್ನು ಸಂತರು ದಾರಿ ತಪ್ಪಿಸುತ್ತಿದ್ದಾರೋ ಅಥವಾ ಸಂತರನ್ನು ಸಮಾಜ ದಾರಿ ತಪ್ಪಿಸುತ್ತಿದೆಯೋ ಅರ್ಥವಾಗುತ್ತಿಲ್ಲ. ಬಹುಶಃ  ಇವೆರಡೂ ಏಕಕಾಲದಲ್ಲಿ ಒಂದಕ್ಕೊಂದು ಪೂರಕವಾಗಿ ನಡೆಯುತ್ತಿರುವಂತಿದೆ.

Courtesy: Prajavani.net

http://www.prajavani.net/news/article/2017/07/03/503251.html

Leave a Reply