ಸಾವಿರ ಕೃತಿಗಳ ಸರದಾರ”

ಕನಸುಗಾರರು ಕ್ರಿಯಾಶೀಲರಲ್ಲ ಎನ್ನುವ ಭಾವನೆ ಇದೆ. ಆದರೆ, ಟಿ.ಎಸ್. ಛಾಯಾಪತಿ ಕನಸುಗಾರರೂ ಹೌದು, ಕ್ರಿಯಾಶೀಲರೂ ಹೌದು. ತಾವು ಕಂಡ ಘನವಾದ ಕನಸುಗಳಿಗೆ ಅವರು ಕನ್ನಡ ಸಾಹಿತ್ಯ ಪ್ರಕಾಶನದ ಮೂಲಕ ಘನತರ ಅಸ್ಥಿಭಾರ ಹಾಕಿದ್ದಾರೆ. ಅವರ ಕನಸು ನನಸಾಗಿರುವುದನ್ನು ತಳುಕಿನ ವೆಂಕಣ್ಣಯ್ಯ ಸ್ಮಾರಕ ಪ್ರಕಾಶನದ ಮೂಲಕ ಕಾಣಬಹುದು. ಕವಿ, ಪ್ರಕಾಶಕ, ಸಮಾಜ ಸೇವಕನಾದವನು ವ್ಯಾವಹಾರಿಕ ಜೀವನದಲ್ಲಿ ಗೆಲ್ಲುವುದಿಲ್ಲವೆಂಬ ಮಾತಿದೆ. ಆದರೆ, ವ್ಯಾವಹಾರಿಕ ಜೀವನದಲ್ಲಿಯೂ ಛಾಯಾಪತಿ ಗೆದ್ದಿದ್ದಾರೆ.ಒಳ್ಳೆಯದನ್ನು ಮಾಡುವ, ಬೇರೆಯವರಿಂದ ಒಳ್ಳೆಯದನ್ನು ಮಾಡಿಸುವ ಗುಣ ಛಾಯಾಪತಿಯವರಿಗೆ ಹೆತ್ತವರಿಂದಲೇ ಬಳುವಳಿಯಾಗಿ ಬಂದಿದೆ. ಇವರ ತಂದೆ ಪ್ರೊ.ತ.ಸು. ಶಾಮರಾಯರು ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾಗಿದ್ದರು. ಅವರ ಸಾಹಿತ್ಯಿಕ ಗರಡಿಯಲ್ಲಿ ಪಳಗಿದವರು ಇವರು ಎಂ.ಕಾಂ. ಪದವೀಧರ. ಪುಸ್ತಕೋದ್ಯಮವನ್ನು ವೃತ್ತಿಯಾಗಿ ಸ್ವೀಕರಿಸಿ, ಪ್ರವೃತ್ತಿಯಾಗಿ ಸಾಹಿತ್ಯ ಕೃಷಿ ಮಾಡಿದವರು.ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ಚೆನ್ನವೀರ ಕಣವಿ, ಹಾ.ಮಾ. ನಾಯಕ್, ದೇಜಗೌ, ನಿಸಾರ್ ಅಹಮದ್, ಮತ್ತೂರು ಕೃಷ್ಣಮೂರ್ತಿ ಹಾಗೂ ಜನಪ್ರಿಯ ಸಾಹಿತಿ, ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಸಮಗ್ರ ನಾಟಕಗಳ ಸಂಕಲನ ‘ಸಮಸ್ತ ನಾಟಕ’ ಮತ್ತು ಅವರ ಸಮಗ್ರ ಮಕ್ಕಳ ಸಾಹಿತ್ಯ‌ ಕೃತಿ ಪ್ರಕಟಿಸಿದ್ದಾರೆ.ಇದಕ್ಕೆ 2016ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಜೊತೆಗೆ ಪ್ರೊ.ಕೆ.ಎಸ್. ನಿಸಾರ್ ಅಹಮದ್‍ ಅವರ ‘ಸೀಮಾತೀತನ ಸಿರಿವಂತ ಸುಗ್ಗಿ’ ಆಯ್ದ ಕವಿತೆಗಳನ್ನು ಪ್ರಕಟಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಮಾಲೆಯ ಹಲವಾರು ಪುಸ್ತಕಗಳು ನೂರಾರು ಪುನರ್ ಮುದ್ರಣ ಕಂಡಿವೆ.ಈಗಾಗಲೇ ಛಾಯಾಪತಿಯವರು ಸಾವಿರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ತಂದೆಯಂತೆ ಇವರು ಕೂಡ ಸಾಹಿತ್ಯ ಕೃಷಿಯಲ್ಲಿ ತೊಡಗಿ, ‘ಗಾಂಧೀಜಿಯ ಕನಸು ನಜೀರರಿಂದ ನನಸು’, ‘ಅಣ್ಣನ ಸ್ಮರಣೆ’, ‘ಆಡಳಿತ ಭಾಷೆ ಕನ್ನಡ’, ‘ಗುರುಶ್ರೇಷ್ಠ’, ‘ವರದಕ್ಷಿಣೆ – ಸಾಮಾಜಿಕ ಪಿಡುಗು’ ಮುಂತಾದ ಹತ್ತು ಹಲವು ಕೃತಿ ರಚಿಸಿದ್ದಾರೆ. 1968ರಲ್ಲಿ ತಮ್ಮ ತಂದೆ ಸಂಸ್ಥಾಪಿಸಿದ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಪ್ರಕಾಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 1999ರಲ್ಲಿ ರಾಜ್ಯ ಸರ್ಕಾರ ‘ಅತ್ಯುತ್ತಮ ಪ್ರಕಾಶಕ’ ಎಂಬ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.ಛಾಯಾಪತಿಯವರು ಜನಿಸಿದ್ದು 1944ರ ಮೇ 10ರಂದು. ತಂದೆ ತ.ಸು.ಶಾಮರಾಯರು. ತಾಯಿ ಸುಬ್ಬಲಕ್ಷ್ಮಿ, ದೊಡ್ಡಪ್ಪನ ಮಗತ.ರಾ.ಸು. ಅವರು.ಅವರ ಸಾಹಿತ್ಯ ಸಾಧನೆಗೆ ಜಿಲ್ಲಾ ಪ್ರತಿಭಾನ್ವಿತ, ಸಾಹಿತ್ಯ ಸೇವಾಧುರೀಣ, ಕನ್ನಡ ಪ್ರಕಾಶನ ರತ್ನ, ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗಳ ಜೊತೆಗೆ, 2016ರಂದು ವಿ.ಸೀ. ಸಂಪದ ಪ್ರಶಸ್ತಿ, 2018ರಲ್ಲಿ ಸ್ಟಾರ್ ಆಫ್ ಮೈಸೂರು-40ನೇ ವರ್ಷದ ಸಂದರ್ಭದಲ್ಲಿ ಕೇಂದ್ರ ಸಚಿವರಾಗಿದ್ದ ಅನಂತ್‍ಕುಮಾರ್ ಅವರಿಂದ ಗೌರವ ಸನ್ಮಾನ, 2017ರಲ್ಲಿ ಮೈಸೂರಿನ ಭಾರತೀ ವಿದ್ಯಾಭವನದಿಂದ ‘ಶ್ರೇಷ್ಠ ಕನ್ನಡ ಪ್ರಕಾಶಕ’ ಪ್ರಶಸ್ತಿ, 2015ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಸಂದರ್ಭದಲ್ಲಿ ಜೀವಮಾನ ಅನುಪಮ ಸೇವೆಗೆ ‘ಪೌರ ಸಾಹಿತ್ಯ ಸನ್ಮಾನ’ ಸಂದಿವೆ.ಅಷ್ಟೇ ಅಲ್ಲದೆ, 2014ರಲ್ಲಿ ಅವರ ಸ್ನೇಹಿತರು, ಅಭಿಮಾನಿಗಳು, ಹಿತೈಷಿಗಳು, ಬಂಧು ಬಳಗದವರು ಒಟ್ಟಾಗಿ ಸೇರಿ ವಿಶ್ರಾಂತ ಕುಲಪತಿಗಳಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರ ಸಂಪಾದಕತ್ವದಲ್ಲಿ ‘ಛಾಯಾಭಿನಂದನ’ ಅಭಿನಂದನಾ ಗ್ರಂಥ ಪ್ರಕಟಿಸಿದ್ದಾರೆ.ಅಭಿನಂದನೆಯ ಪ್ರಶಂಸೆ‘ಸಾವಿರದ ಸರದಾರ’ ಪುಸ್ತಕ ಪ್ರಕಾಶನದ ರೂವಾರಿಗಳಾದ ಟಿ.ಎಸ್. ಛಾಯಾಪತಿಯವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಮೇ 10ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಲಕ್ಷ್ಮೀಪುರಂ ಹೊಯ್ಸಳ ಕರ್ನಾಟಕ ಸಂಘದಲ್ಲಿ ಇವರಿಗೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದನಾ ಸಮಾರಂಭ ಹಮ್ಮಿಕೊಂಡಿದೆ.ಕವಿ ಕೆ.ಎಸ್.ನಿಸಾರ್ ಅಹಮದ್ ಸಮಾರಂಭ ಉದ್ಘಾಟಿಸಲಿದ್ದಾರೆ. ನೂರಾರು ಸಭಿಕರ ಸಮಕ್ಷಮದಲ್ಲಿ ‘ಸಾವಿರ ಕೃತಿಗಳ ಸರದಾರ’ ಎಂಬ ಪ್ರಶಂಸೆಯ ಮೂಲಕ ಅಭಿನಂದನೆ ಸಲ್ಲಲಿದೆ.

courtesy:prajavani.net

https://www.prajavani.net/artculture/book-review/savira-kruthigala-saradar-633656.html

 

Leave a Reply