ಸಾಹಿತ್ಯ ಸಂಗಾತಿತನದ ‘ಅಪ್ರಮೇಯ’ ಬರಹಗಳು

ಸಾಹಿತ್ಯ ಸಂಗಾತಿತನದ ‘ಅಪ್ರಮೇಯ’ ಬರಹಗಳು

– ರಂಗನಾಥ ಕಂಟನಕುಂಟೆ

ಅಪ್ರಮೇಯ (ವಿಮರ್ಶಾ ಲೇಖನಗಳ ಸಂಗ್ರಹ)
ಲೇ: 
ಎಸ್‌.ಆರ್‌. ವಿಜಯಶಂಕರ

ಪ್ರ: ಸಪ್ನ ಬುಕ್ ಹೌಸ್, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು– 560009

ಕನ್ನಡ ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ಎಸ್.ಆರ್. ವಿಜಯಶಂಕರ ಅವರು – ‘ಮನೋಗತ’, ‘ಒಳದನಿ’, ‘ಒಡನಾಟ’, ‘ನಿಜಗುಣ’, ‘ನಿಧಾನಶ್ರುತಿ ಮತ್ತು ಇತರ ಲೇಖನಗಳು’, ‘ನುಡಿಸಸಿ’ ಮತ್ತು ಪ್ರಸ್ತುತ ಕೃತಿ ‘ಅಪ್ರಮೇಯ’ವೆಂಬ ವಿಮರ್ಶಾ ಕೃತಿಗಳಿಂದ ಪರಿಚಿತರು.  ಕನ್ನಡ ವಿಮರ್ಶೆಯ ಕ್ಷೇತ್ರವನ್ನು ಗಮನಿಸಿದರೆ ಬಹುತೇಕ ವಿಮರ್ಶಕರು ಅಧ್ಯಾಪನದಲ್ಲಿ ತೊಡಗಿರುವವರು. ವಿಜಯಶಂಕರ್ ಇಂಗ್ಲಿಷ್ ಎಂ.ಎ. ಪದವಿ ಪಡೆದಿದ್ದರೂ ಅಧ್ಯಾಪನ ವೃತ್ತಿಯಲ್ಲಿ ತೊಡಗದೆ, ಸಾಫ್ಟ್‌ವೇರ್ ಕ್ಷೇತ್ರದಲ್ಲಿ ವೃತ್ತಿಬದುಕನ್ನು ನಡೆಸುತ್ತಿದ್ದಾರೆ. ಬರಹದ ಆಸಕ್ತಿ ಇದ್ದಾಗಲೂ ಮೊದಲ ಕೃತಿ (1985) ಪ್ರಕಟವಾದ ನಂತರ ಇಪ್ಪತ್ತು ವರ್ಷ ಮತ್ತೊಂದು ಕೃತಿಯನ್ನು ಹೊರತಂದಿರಲಿಲ್ಲ. ಆ ನಂತರ ಬರಹದ ಅಜ್ಞಾತವಾಸದಿಂದ ಬಿಡುಗಡೆ ಪಡೆದವರಂತೆ 2004ರಿಂದ ನಿರಂತರವಾಗಿ ಬರೆಯುತ್ತಿದ್ದಾರೆ. ಅದರ ಫಲವೆಂಬಂತೆ ‘ಅಪ್ರಮೇಯ’ವೆಂಬ ಈ ಕೃತಿ ನಮ್ಮೆದುರಿಗಿದೆ. ಮೂರೂವರೆ ದಶಕಗಳ ಸಾಹಿತ್ಯ ಸಂಗಾತಿತನದಿಂದ ವಿಮರ್ಶಾ ವಲಯದಲ್ಲಿ ಅವರು ತಮ್ಮತನವನ್ನು ಕಂಡುಕೊಳ್ಳುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಅವರ ವಿಮರ್ಶೆಯ ಸ್ವರೂಪವನ್ನು ತಿಳಿಯಲು ಪ್ರಯತ್ನಿಸಲಾಗುವುದು.

ಈ ಕೃತಿಯಲ್ಲಿ ಮೂರು ಭಾಗಗಳಿವೆ. ಕಾವ್ಯ, ಕೃತಿ ಮತ್ತು ವಿಮರ್ಶೆ ಎಂಬ ಭಾಗಗಳಲ್ಲಿ ಕೃತಿ ವಿಂಗಡನೆಯಾಗಿದ್ದು ಒಟ್ಟು 37 ಲೇಖನಗಳಿವೆ. ‘ಕಾವ್ಯ’ ಭಾಗದಲ್ಲಿ ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಕೆ.ಎಸ್. ನರಸಿಂಹಸ್ವಾಮಿ, ವೀ.ಸಿ., ಕುವೆಂಪು ಮುಂತಾದವರ ಕವಿತೆಗಳ ವಿವರಣಾತ್ಮಕ ಲೇಖನಗಳಿವೆ. ‘ಕೃತಿ’ ವಿಭಾಗದಲ್ಲಿ ಕುವೆಂಪು ಕಾದಂಬರಿಗಳು, ಮಾಸ್ತಿಯವರ ಕತೆಗಳು, ಶಿವರಾಮ ಕಾರಂತ, ಶಂಬಾ ಜೋಶಿ, ಅನಂತಮೂರ್ತಿ, ತೇಜಸ್ವಿ, ಕೃಷ್ಣಮೂರ್ತಿ ಹನೂರು ಅವರ ಕಥೆ–ಕಥನಗಳ ವಿವರಣೆಯಿದೆ. ‘ವಿಮರ್ಶೆ’ ವಿಭಾಗದಲ್ಲಿ ಬೇಂದ್ರೆ, ಕೀರ್ತಿನಾಥ ಕುರ್ತಕೋಟಿ, ಅನಂತಮೂರ್ತಿ, ಜಿ.ಎಚ್. ನಾಯಕ, ಸಿ.ಎನ್. ರಾಮಚಂದ್ರನ್, ಎಚ್.ಎಸ್. ರಾಘವೇಂದ್ರರಾವ್ ಅವರ ವಿಮರ್ಶಾ ಕೃತಿಗಳ ವಿವರಣೆಯಿದೆ. ಕೆಲವು ಪರಿಕಲ್ಪನಾತ್ಮಕ ಲೇಖನಗಳನ್ನು ಹೊರತುಪಡಿಸಿದರೆ ಉಳಿದೆಲ್ಲವು ವಿವಿಧ ಕೃತಿಗಳನ್ನು ಪರಿಚಯಿಸುತ್ತವೆ.

ಈ ಕೃತಿಯಲ್ಲಿ ಹರಡಿಕೊಂಡಿರುವ ಪಠ್ಯಗಳ ಹರಹನ್ನು ಗಮನಿಸಿದರೆ ಲೇಖಕರ ಓದಿನ ಆಸಕ್ತಿ ಸ್ಷಷ್ಟಗೊಳ್ಳುತ್ತದೆ. ಈ ಓದಿನ ಹರಹು ಲೇಖಕರಿಗೆ ಅಪಾರ ವ್ಯುತ್ಪತ್ತಿಯ ಸಾಮರ್ಥ್ಯವನ್ನು ಒದಗಿಸಿಕೊಟ್ಟಿದೆ. ತಮ್ಮ ನಿರಂತರ ಓದಿನಿಂದ ಸಾಹಿತ್ಯದ ಪಠ್ಯಗಳನ್ನು, ಲೇಖಕರನ್ನು ತಮ್ಮ ಅರಿವಿನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಓದು–ವ್ಯುತ್ಪತ್ತಿ ಪಾಂಡಿತ್ಯ ಪ್ರದರ್ಶನವಾಗದೆ ಸಹಜ ಕುತೂಹಲ, ಆಸಕ್ತಿ–ಶ್ರದ್ಧೆಗಳಿಂದ ಕೂಡಿದ ಪ್ರಾಮಾಣಿಕವಾಗಿ ಸಾಹಿತ್ಯದ ಜೊತೆಗಿನ ಸಂಗಾತಿತನದ ಸಾಮರ್ಥ್ಯವಾಗಿ ರೂಪುಗೊಂಡಿದೆ. ಮುಖ್ಯವಾಗಿ ಅವರ ವಿಮರ್ಶೆ ನವ್ಯದಿಂದ ಸಾಂಸ್ಕೃತಿಕ ವಿಮರ್ಶೆಯ ಕಡೆಗಿನ ಪಯಣದಂತಿದೆ. ಅವರು ನವ್ಯಸಾಹಿತಿಗಳ, ವಿಮರ್ಶಕರ ಗರಡಿಯಲ್ಲಿ ಪಳಗಿದವರು. ಆ ಪ್ರಭಾವವನ್ನು ಇಲ್ಲಿನ ಬರಹಗಳಲ್ಲಿ ಕಾಣಬಹುದು. ಆದರೆ, ನವ್ಯದ ವಿಮರ್ಶೆಯ ಪರಿಕರಗಳಿಂದ ಬಿಡುಗಡೆ ಪಡೆಯಲು ವಿಜಯಶಂಕರ್ ಅವರ ಬರಹಗಳಿಗೆ ಇಂದಿಗೂ ಸಾಧ್ಯವಾಗಿಲ್ಲ. ನವ್ಯದ ಕೃತಿನಿಷ್ಠ ಹಾಗೂ ಪ್ರಾಯೋಗಿಕ ವಿಮರ್ಶೆಯ ವಿಧಾನಗಳೇ ಹೆಚ್ಚು ಬಳಕೆಯಾಗಿವೆ. ಅಲ್ಲಲ್ಲಿ ಸಾಂಸ್ಕೃತಿಕ ವಿಮರ್ಶೆಯ ವಿಧಾನದ ಅನುಸರಣೆ ಮತ್ತು ಪ್ರಸ್ತಾಪವಿದೆ. ನವ್ಯದ ವಿಮರ್ಶೆಯ ವಿಧಾನವನ್ನು ಉಳಿಸಿಕೊಂಡೇ ಇಂದಿನ ಸಾಂಸ್ಕೃತಿಕ ವಿಮರ್ಶೆಯ ಕೆಲವು ವಿಧಾನಗಳನ್ನು ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಹಾಗಾಗಿ ಅವರನ್ನು ಪೂರ್ಣ ನವ್ಯವಿಮರ್ಶಕರೆಂದೋ ಇಲ್ಲವೇ ಸಾಂಸ್ಕೃತಿಕ ವಿಮರ್ಶಕರೆಂದೋ ಕರೆಯಲಾಗುವುದಿಲ್ಲ. ಅವರ ಈ ಬಗೆಯ ಓದು, ವಿಮರ್ಶೆಯ ಬರೆಹಗಳಲ್ಲಿ ವಿಶೇಷತೆ ಇರುವುದು ಸಾಹಿತ್ಯದ ಅಂತರ್‌ಪಠ್ಯೀಯ ಓದು ಮತ್ತು ಪಾಂಡಿತ್ಯಗಳಲ್ಲಿ. ಈ ವಿಧಾನದ ಓದಿನಲ್ಲಿ ಅವರದು ಗುಣಗ್ರಾಹಿ ಓದು; ಸಾಹಿತ್ಯದ ನಿಜಗುಣದ ಆಯ್ಕೆ ಮತ್ತು ಓದನ್ನು ಮನೋಗತಗೊಳಿಸಿಕೊಳ್ಳಬೇಕೆಂಬ ಇಂಗಿತವಿದೆ.

ಅವರ ಪ್ರಸಕ್ತ ಕೃತಿಯನ್ನು ಓದಿದ ನಂತರ ಕೆಲವು ಪ್ರಶ್ನೆಗಳು ಕಾಡಿದವು. ಸಾಹಿತ್ಯ ವಿಮರ್ಶಕರಿಗೆ ಏನನ್ನು ಓದಬೇಕು? ಹೇಗೆ ಓದಬೇಕು? ಏಕೆ ಓದಬೇಕು? ಎಂಬ ಪ್ರಶ್ನೆಗಳು ಮರುಕಳಿಸಿದವು. ಕೃತಿಯನ್ನು ಓದಿದಾಗ ಲೇಖಕರಿಗೆ ಏನನ್ನು ಓದಬೇಕೆಂಬ ಬಗೆಗೆ ಖಚಿತ ಆಯ್ಕೆಗಳಿವೆ ಎಂಬುದು ಗೋಚರಿಸುತ್ತದೆ. ಆದರೆ ಹೇಗೆ? ಏಕೆ? ಎಂಬ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳು ಹಾಗೆಯೇ ಉಳಿಯುತ್ತವೆ. ಯಾಕೆಂದರೆ ಈ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಅವರಿಗೆ ಸ್ಪಷ್ಟವಾದ ಅರಿವು ಇರಬಹುದು. ಆದರೆ ಅವರ ಈ ವಿಮರ್ಶೆಯ ವಿಧಾನದಿಂದ ಸಾಹಿತ್ಯವನ್ನು ಅರಿಯುವ ಹೊಸ ಒಳನೋಟಗಳು ಹುಟ್ಟುತ್ತಿಲ್ಲ ಎಂಬ ಕಾರಣಕ್ಕಾಗಿ ಈ ಪ್ರಶ್ನೆಗಳು ಇಲ್ಲಿ ಮಹತ್ವ ಪಡೆಯುತ್ತವೆ. 

ಈ ಕೃತಿಯ ಲೇಖನಗಳಲ್ಲಿ ಓದಿದ ಕೃತಿಯೊಂದನ್ನು ಸಂಕ್ಷಿಪ್ತವಾಗಿ ವಿವರಿಸಿ, ಪರಿಚಯ ಮಾಡಿಕೊಡಲಾಗುತ್ತದೆ. ಈ ಬಗೆಯನ್ನು ಅನುಸರಿಸಿ ತಮ್ಮ ಸಿದ್ಧಾಂತವನ್ನು ಮಂಡಿಸಿದ್ದರೆ, ಅಂತಹುದಕ್ಕೆ ಪೂರಕವಾಗಿ ಪಠ್ಯಗಳನ್ನು ಬಳಸಿಕೊಂಡಿದ್ದರೆ ಸಮಸ್ಯೆಯಿಲ್ಲ. ಇಲ್ಲವೇ ಪಠ್ಯಗಳೇ ಮಂಡಿಸುತ್ತಿರುವ ಹೊಸ ದರ್ಶನವನ್ನು ಸಿದ್ಧಾಂತೀಕರಿಸಿ ಹೇಳಿದ್ದರೂ ಸಮಸ್ಯೆಯಿಲ್ಲ. ಆದರೆ ಹಾಗೆ ಮಾಡದೆ ಕೇವಲ ಪಠ್ಯಗಳನ್ನು ಸಂಕ್ಷಿಪ್ತವಾಗಿಸಿ ವಿವರಿಸುವುದು ನಿರಾಸೆ ಮೂಡಿಸುತ್ತದೆ. ಅಲ್ಲದೆ ಅವರು ಪರಿಚಯಿಸಿರುವ ಕೃತಿಗಳು – ಇವು ನಮಗೆಷ್ಟು ಪ್ರಸ್ತುತ? ಅವುಗಳ ಸಮಸ್ಯೆಗಳೇನು? ಎಂಬ ಪ್ರಶ್ನೆಗಳನ್ನೆತ್ತುವುದಿಲ್ಲ. ಪಠ್ಯಗಳ ಜೊತೆಗೆ ಗುದ್ದಾಟವನ್ನೇ ಮಾಡುವುದಿಲ್ಲ. ವಿಮರ್ಶೆಯಲ್ಲಿ ಪ್ರಶ್ನೆಯನ್ನೇ ಎತ್ತದಿದ್ದರೆ ಯಾವುದೇ ವಿಚಾರಧಾರೆಯನ್ನು ಮುಂದಕ್ಕೆ ಕೊಂಡೊಯ್ಯುವುದು ಹೇಗೆ? ಚರ್ಚೆ, ವಾಗ್ವಾದಗಳ ಮೂಲಕ ಹೊಸವಿಚಾರಗಳನ್ನು, ಸಾಹಿತ್ಯದ ಒಳನೋಟಗಳನ್ನು ಹುಟ್ಟಿಸುವುದು ಹೇಗೆ? 

ವಿಮರ್ಶೆಯಲ್ಲಿ ವಾಗ್ವಾದವನ್ನೇ ನಡೆಸದ ಕಾರಣ ಲೇಖಕರ ನಿಜವಾದ ತಾತ್ವಿಕತೆ ಯಾವುದು? ಅದರ ಸ್ವರೂಪಗಳೇನು? ಎಂಬುದೇ ಖಚಿತವಾಗುವುದಿಲ್ಲ. ವಿಮರ್ಶೆಗೆ ಒಂದು ಖಚಿತ ತಾತ್ವಿಕತೆ ಇರಬೇಕು. ಅದು ಸರಿಯೋ ತಪ್ಪೋ ಅದು ಬೇರೆಯ ವಿಚಾರ. ಆದರೆ ಆ ಬಗೆಯ ಖಚಿತ ಚಿಂತನೆ ಇವರ ವಿಮರ್ಶೆಯಲ್ಲಿ ಕಾಣಿಸುವುದಿಲ್ಲ. ಕೃತಿಯನ್ನು ಓದಿದರೆ ಕೆಲವು ವಿಚಾರಗಳನ್ನು ಊಹಿಸಿಕೊಳ್ಳಬಹುದಷ್ಟೆ. ಮೊದಲೇ ಹೇಳಿದಂತೆ ನವ್ಯರ ಕೃತಿನಿಷ್ಠ ಮತ್ತು ಪ್ರಾಯೋಗಿಕ ವಿಧಾನಗಳನ್ನು ಬಳಸಿಕೊಂಡು ತಮಗಿಷ್ಟವಾದ ಕೃತಿಯನ್ನು ಓದುವುದು. ಅಂತಹ ಓದಿನಿಂದ ಸಾಹಿತ್ಯಾನುಭವ ಲೋಕಾನುಭವ ಪಡೆಯವುದು; ಫ್ಯಾಸಿಸ್ಟ್ ಅಲ್ಲದ ಹಿಂದೂ ಧರ್ಮ ಮತ್ತು ಸರ್ವಾಧಿಕಾರತ್ವವಿಲ್ಲದ ಪ್ರಜಾಪ್ರಭುತ್ವದ ಲಿಬರಲ್ ಚಿಂತನೆಗಳಲ್ಲಿ ಸಾಹಿತ್ಯವನ್ನು, ಸಮಾಜವನ್ನು ಗ್ರಹಿಸಿಕೊಳ್ಳುವ ಪ್ರಯತ್ನ ಸ್ಥೂಲವಾಗಿ ಕಾಣಿಸುತ್ತದೆ. ಅನೇಕ ಸಭೆಗಳ ಚರ್ಚೆಗಳಲ್ಲಿ ವಿಜಯಶಂಕರ್ ಕೆಲವು ಖಡಕ್ ಆದ ವಿಚಾರಗಳನ್ನು ಮಂಡಿಸಿದ್ದಾರೆ. ಆದರೆ ಅಂತಹ ಅಂಶಗಳು ಇಲ್ಲಿನ ಬರಹಗಳಲ್ಲಿ ಪ್ರತಿಫಲಿಸದೇ ಇರುವುದು ಮೂಡಿಸುತ್ತದೆ.

ಅವರೇ ವಿಮರ್ಶಕ ಟಿ.ಪಿ. ಅಶೋಕರ ಬಗೆಗೆ ಹೇಳುತ್ತ, ‘ನವ್ಯದ ಈ ವಿಮರ್ಶಾ ವಿಧಾನಕ್ಕಿಂತ ತುಸು ಮುಂದೆ ಹೋಗಿ ಅಶೋಕ ತಮ್ಮ ಕೃತಿಯಲ್ಲಿ ಅಂತರ್‌ಪಠ್ಯೀಯತೆ ಹಾಗೂ ಸಮಸ್ಯಾತ್ಮಕತೆ ಎಂಬ ಎರಡು ಪರಿಕಲ್ಪನೆಗಳನ್ನು ತಮ್ಮ ವಿಮರ್ಶೆಯ ಉದ್ದಕ್ಕೂ ಬಳಸುತ್ತಾರೆ’ ಎಂದಿದ್ದಾರೆ. ಮೇಲೆ ಹೇಳಿದಂತೆ ವಿಜಯಶಂಕರ ಅವರು ಕೂಡ ಅಂತರ್‌ಪಠ್ಯೀಯತೆಯ ವಿಧಾನವನ್ನು ಬಳಸಿಕೊಂಡಿದ್ದಾರೆ; ಆದರೆ ವಿಮರ್ಶೆಯಲ್ಲಿ ಸಮಸ್ಯೀಕರಿಸುವ ವಿಧಾನವನ್ನು ಕೈಬಿಟ್ಟಿದ್ದಾರೆ. ಹಾಗಾಗಿ ಅವರ ವಿಮರ್ಶೆಯಲ್ಲಿ ಪ್ರಶ್ನೆಗಳು ಕಡಿಮೆ.

ಬಲಪಂಥೀಯರ ಕೋದಂಡರಾಮನಿಗಿಂತ ಭಿನ್ನವಾಗಿರುವ ಸಾಂಸಾರಿಕ ರಾಮನ ಚಿತ್ರವನ್ನು ಕುರಿತು ಎಚ್.ಎಸ್. ವೆಂಕಟೇಶಮೂರ್ತಿಯವರ ‘ಶ್ರೀಸಂಸಾರಿ’ ಕವಿತೆಯನ್ನು ಕುರಿತು ನಡೆಸುವ ಚರ್ಚೆಯೇ ಬಹಳ ದೊಡ್ಡದು. ಸೈದ್ಧಾಂತಿಕ ಸಂಘರ್ಷ ನಡೆಸದ ಕಾರಣಕ್ಕಾಗಿಯೋ ಏನೋ ಅವರ ವಿಮರ್ಶೆಯ ಭಾಷೆ ಹರಳುಗಟ್ಟುವುದಿಲ್ಲ ಮತ್ತು ಹರಿತವೂ ಆಗುವುದಿಲ್ಲ. ಅವರೇ ಮುಂದುವರೆದು, ಇಂದಿನ ವಿಚಾರಗಳನ್ನು ಪ್ರತಿಪಾದಿಸಲು ಅವರು ಸಮಕಾಲೀನ ಕಾವ್ಯಸಂದರ್ಭವನ್ನು ಬಳಸಿಕೊಳ್ಳುತ್ತಾರೆ. ‘ಈ ತಾತ್ವಿಕತೆ ಇನ್ನೂ ಸಂಪೂರ್ಣವಾಗಿ ನವೀನ ವಿಮರ್ಶಾ ಪರಿಕಲ್ಪನೆಯೊಂದರ ರೂಪದಲ್ಲಿ ಅಶೋಕರ ಬರಹಗಳಲ್ಲಿ ಪ್ರತಿಷ್ಠಾಪಿತವಾಗಿಲ್ಲ ಎಂಬುದು ನಿಜ. ಆದರೆ ಅಶೋಕರ ಚಿಂತನೆ ಅಂತಹ ಪರಿಕಲ್ಪನೆಯನ್ನು ಪೋಷಿಸ��ತ್ತಿದೆ ಎಂಬುದು ಅವರ ಕಾವ್ಯ ಅಧ್ಯಯನದಿಂದ ಸ್ಪಷ್ಟವಾಗುತ್ತದೆ’ (ಪು. 359) ಎನ್ನುತ್ತಾರೆ. ಈ ಮಾತು ವಿಜಯಶಂಕರರ ಬರಹಗಳಿಗೂ ಅನ್ವಯಿಸುತ್ತದೆ. ಅವರಲ್ಲಿ ಖಚಿತ ತಾತ್ವಿಕತೆಯಿಲ್ಲದೆ ಇದ್ದು, ಲಿಬರಲ್ ಆದ ಸ್ಥೂಲವಾದ ಪ್ರಜಾಪ್ರಭುತ್ವದ ಮತ್ತು ಸಾಂಸ್ಕೃತಿಕ ಚಿಂತನೆಗಳನ್ನು ಪೋಷಿಸುತ್ತದೆ. ಇಂದಿನ ಸಾಂಸ್ಕೃತಿಕ ವಿಮರ್ಶೆಯಲ್ಲಿ ಎತ್ತುವ ಜಾತಿ ನೆಲೆಯ, ಲಿಂಗತ್ವದ, ತಳಸಮುದಾಯಗಳ ಇಲ್ಲವೇ ಸಬಾಲ್ಟ್ರನ್ ನೆಲೆಯ ಪ್ರಶ್ನೆಗಳು ಇಲ್ಲವೇ ಇಲ್ಲ. ‘ಕುವೆಂಪು ಕಾದಂಬರಿಗಳಲ್ಲಿ ಪೂರ್ಣದೃಷ್ಟಿ’ ಎಂಬ ಲೇಖನ ಮಾತ್ರ ಕೊಂಚ ಅಪವಾದವಾಗಿ ನಿಲ್ಲುತ್ತದೆ. ಸಾಂಸ್ಕೃತಿಕ ವಿಮರ್ಶೆಯ ಬಗೆಗೆ ಅಲ್ಲಲ್ಲಿ ಪ್ರಸ್ತಾಪಿಸುವ ಲೇಖಕರು ಯಾವ ಬಗೆಯ ಸಂಸ್ಕೃತಿ ಚಿಂತನೆ ಮಾತನಾಡುತ್ತಿದ್ದಾರೆ ಎಂಬುದು ಖಚಿತವಾಗುವುದಿಲ್ಲ. ಸಮಾಜ ಯಾವ ನೆಲೆಯಲ್ಲಿ ನಿಂತು ಅದನ್ನು ಮಂಡಿಸುತ್ತಿದ್ದಾರೆ ಎಂಬುದು ಖಚಿತವಿಲ್ಲ. ಇದು ಖಚಿತವಾಗದಿದ್ದರೆ ನಮ್ಮ ದೇಶದಲ್ಲಿ ಸಂಸ್ಕೃತಿ ಚಿಂತನೆಗಳನ್ನು ಸ್ಪಷ್ಟತೆಯನ್ನು ಪಡೆದುಕೊಳ್ಳುವುದಿಲ್ಲ.

ಬೇಂದ್ರೆಯವರ ವಿಮರ್ಶೆಯ ಬಗೆಗೆ ಹೇಳುವ ಮಾತನ್ನಿಲ್ಲಿ ಗಮನಿಸಬೇಕು. ‘ವಿಮರ್ಶೆ ಎಂಬುದು ಕೇವಲ ಒಬ್ಬ ಕವಿಯ ಅಥವಾ ಕೃತಿಗಳ ವ್ಯಾಖ್ಯಾನಗಳಲ್ಲ. ಅದು ಜನರ ವಿಚಾರಕ್ರಮವನ್ನು ನೋಡುವ ರೀತಿಯನ್ನು ಬದಲಿಸುವ ಕ್ರಮ – ಎಂಬ ತಾತ್ವಿಕ ಸ್ಪಷ್ಟತೆಯಿಂದಲೇ ಬೇಂದ್ರೆಯವರು ವಿಮರ್ಶೆಯನ್ನು ಪ್ರತಿಪಾದಿಸಿದರು. ಆದರೂ ಅವರ ಎಲ್ಲ ವಿಮರ್ಶೆ ಚಿಂತನೆಗಳು ಒಟ್ಟಾಗಿ ಒಂದು ಶಾಸ್ತ್ರೀಯ ಸ್ವರೂಪವನ್ನು ನಿರ್ಮಿಸಿಕೊಡಲಿಲ್ಲ’ (ಪು. 286) ಎನ್ನುತ್ತಾರೆ. ಇಂತಹ ಮಾತುಗಳನ್ನು ಗಮನಿಸಿರುವ ಲೇಖಕರು ತಮ್ಮ ವಿಮರ್ಶೆಯ ಬರಹಗಳಲ್ಲಿ ಅದನ್ನು ಯಾಕೆ ಅನುಸರಿಸಿಲ್ಲ? ಎಂಬುದೇ ಇಲ್ಲಿನ ಪ್ರಶ್ನೆ. ಇಂತಹ ಪ್ರಶ್ನೆಗಳನ್ನು ಎದುರುಗೊಳ್ಳದೇ ಹೋಗಿರುವ ಅವರ ಬರಹಗಳು ಓದುಗರಲ್ಲಿ ಮತ್ತಷ್ಟು ಪ್ರಶ್ನೆಗಳನ್ನೇ ಉಳಿಸಿಬಿಡುತ್ತವೆ.

ಒಟ್ಟಿನಲ್ಲಿ ಅವರ ಸಾಹಿತ್ಯ ಸಂಗಾತಿತನದ, ಒಡನಾಟದ ವಿಮರ್ಶೆಯ ಬರೆಹಗಳು ಸಾಹಿತ್ಯವನ್ನು ಹೊಸದಾಗಿ ಪ್ರವೇಶಿಸುವವರಿಗೆ ನೆರವಾಗುತ್ತವೆ. ಸಾಹಿತ್ಯದ ಓದುಗರಲ್ಲಿ ಮಾನವೀಯತೆಯ ಸಾಹಿತ್ಯಾನುಭವ ಮತ್ತು ಬಹುತ್ವದ ಲೋಕಾನುಭವಗಳನ್ನು, ಆರೋಗ್ಯಕರ ಚಿಂತನೆಗಳನ್ನು ಬೆಳೆಸುವ ಮಟ್ಟಿಗೆ ಈ ಕೃತಿಯ ಉದ್ದೇಶ ಯಶಸ್ವಿಯಾಗಿದೆ ಎಂದೇ ಭಾವಿಸಬೇಕು. ಅಂತಹ ಚಿಂತನೆಗಳನ್ನು ಬೆಳೆಸುವ ಆಶಯ ಅವರ ವ್ಯಕ್ತಿತ್ವದಲ್ಲಿದೆ ಎಂಬುದೇ ಅವರನ್ನು ಮುಖ್ಯವಾದ ವಿಮರ್ಶಕರಾಗಿ ಗುರುತಿಸುವಂತೆ ಮಾಡಿದೆ.

Courtesy : Prajavani.net

http://www.prajavani.net/news/article/2017/03/19/478629.html

Leave a Reply