ಸುಜ್ಞಾನದ ಬೆಳಕು ನೀಡುವ ಶಿವರಾತ್ರಿ

ಸುಜ್ಞಾನದ ಬೆಳಕು ನೀಡುವ ಶಿವರಾತ್ರಿ

ಶಿವರಾತ್ರಿ ಎಂದರೆ ಬರೀ ರಾತ್ರಿ ಅಲ್ಲ. ಅಜ್ಞಾನ ಎಂಬ ಕತ್ತಲನ್ನು ದೂರಮಾಡಿ ಸುಜ್ಞಾನ ಎಂಬ ಬೆಳಕನ್ನು ನೀಡುವ ರಾತ್ರಿ ಅದು. ವಿನಮ್ರ ಭಕ್ತಿಗೆ ಪ್ರಸನ್ನನಾಗುವ ಶಿವ ಭಕ್ತರಲ್ಲಿ ಜ್ಞಾನದ ದೀಪವನ್ನು ಬೆಳಗುತ್ತಾನೆ ಎಂಬುದು ಭಕ್ತರ ನಂಬಿಕೆ.

ಮೂರ್ತಿಗಳಲ್ಲಿ ಒಬ್ಬನಾಗಿರುವ ಶಿವನನ್ನು ಆರಾಧಿಸುವ ವಿಶೇಷ ದಿನವೇ ‘ಮಹಾಶಿವರಾತ್ರಿ’. ಭಾರತೀಯರು ಅದರಲ್ಲೂ ಹಿಂದೂಗಳು ಆಚರಿಸುವ ಹಬ್ಬಗಳಲ್ಲಿ ಇದಕ್ಕೆ ವಿಶೇಷ ಸ್ಥಾನ.

ಪ್ರತಿ ಸಂವತ್ಸರದ ಶಿಶಿರ ಋತುವಿನ ಮಾಘ ಮಾಸ ಕೃಷ್ಣಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ವರ್ಷದ ಪ್ರತಿ ತಿಂಗಳಲ್ಲೂ ಬರುವ ಕೃಷ್ಣಪಕ್ಷದ ಚತುರ್ದಶಿಯನ್ನು ‘ಶಿವರಾತ್ರಿ’ ಎಂದು ಕರೆಯಲಾಗುತ್ತದೆಯಾದರೂ, ಮಾಘ–ಫಾಲ್ಗುಣ ಮಾಸಗಳ ನಡುವೆ ಬರುವ ಕೃಷ್ಣ ಚತುರ್ದಶಿ ದಿನವೇ ‘ಮಹಾಶಿವರಾತ್ರಿ’

ಶಿವನು ಶೈವರ ಪ್ರಧಾನ ದೇವತೆಯಾಗಿದ್ದರೂ, ವೈಷ್ಣವ ಪಂಥದವರೂ ಸೇರಿ ಇತರ ದೇವತೆಗಳ ಉಪಾಸಕರೂ ಶಿವರಾತ್ರಿಯಂದು ಶಿವನನ್ನು ಪೂಜಿಸುವುದು ಈ ಹಬ್ಬದ ವೈಶಿಷ್ಟ್ಯ.

ಶಾಸ್ತ್ರದ ಒಂದು ಶ್ಲೋಕ ಹೀಗೆ ಹೇಳುತ್ತದೆ…

ಶೈವೋ ವಾ ವೈಷ್ಣವೋ ವಾsಪಿ
ಯೋ ವಾಸ್ಯಾದನ್ಯಪೂಜಕಃ|

ಸರ್ವಂ ಪೂಜಾಫಲಂ ಹನ್ತಿ ಶಿವರಾತ್ರಿಬಹಿರ್ಮುಖಃ|

‘ಶೈವನಾಗಲಿ ವೈಷ್ಣವನಾಗಲಿ, ಇತರ ಯಾವುದೇ ದೇವತೆಯ ಉಪಾಸಕನಾಗಲಿ ಶಿವರಾತ್ರಿಯ ವಿಷಯದಲ್ಲಿ ಬಹಿರ್ಮುಖನಾಗಿದ್ದರೆ ಆತನ ಎಲ್ಲ ಪೂಜಾಫಲವೂ ನಾಶವಾಗುತ್ತದೆ’ ಎಂಬುದು ಈ ಶ್ಲೋಕದ ಸಾರ.

ಸಾಮಾನ್ಯವಾಗಿ ದೇವತೆಗಳ ಪೂಜೆಗೆ ರಾತ್ರಿ ಪ್ರಶಸ್ತವಾದ ಸಮಯವಲ್ಲ. ಆದರೆ, ಶಿವರಾತ್ರಿಯ ಸಂದರ್ಭದಲ್ಲಿ ಶಿವನ ಕೃಪೆಗೆ ಪಾತ್ರರಾಗಬೇಕಾದರೆ ರಾತ್ರಿಯೇ ಪೂಜೆ ಮಾಡಬೇಕು. ಅಂದಿನ ಇಡೀ ರಾತ್ರಿ ರುದ್ರನ ಪೂಜೆಗೆ ಶುಭ ಕಾಲ. ಭಕ್ತರ ಪಾಲಿಗೆ ಅದು ಮಂಗಳಕರರಾತ್ರಿ.

‘ಮಹಾಶಿವರಾತ್ರಿಯಂದು ಭೂಮಿಯಲ್ಲಿ ಸಂಚರಿಸುತ್ತಾ ಎಲ್ಲ ಸ್ಥಾವರ ಮತ್ತು ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತೇನೆ. ಜನರು ಮಾಡಿದ ಪಾಪಗಳನ್ನು ಪರಿಹರಿಸಿ ಅನುಗ್ರಹ ನೀಡುತ್ತೇನೆ’ ಎಂದು ಸ್ವತಃ ಶಿವನೇ ಹೇಳಿದ್ದಾನೆ ಎಂಬ ಉಲ್ಲೇಖ ಶಾಸ್ತ್ರದಲ್ಲಿ ಇದೆ.

ಅಂದು ರಾತ್ರಿ ಶಿವನೂ ಆತನ ಶಕ್ತಿ ಪರಿವಾರಗಳು ಮತ್ತು ಭೂತಗಣಗಳು ಸಂಚಾರ ಮಾಡುವುದರಿಂದ ಅವರ ಪೂಜೆ–ಪುನಸ್ಕಾರಕ್ಕೆ ಯೋಗ್ಯವಾದ ಸಮಯ ಎಂದು ಸ್ಕಂದ ಪುರಾಣ ಹೇಳುತ್ತದೆ. ಮಹಾಶಿವರಾತ್ರಿಯ ದಿನದಂದು ಉಪವಾಸ ಮಾಡಿ, ರಾತ್ರಿ ಇಡೀ ಜಾಗರಣೆ ಮಾಡಿ ಶಂಕರನನ್ನು ಪೂಜಿಸಿದರೆ, ಅವನು ಭಕ್ತರ ಸಕಲ ಪಾಪಗಳನ್ನೂ ಪರಿಹರಿಸಿ ಅವರಿಗೆ ಸನ್ಮಂಗಲ ಉಂಟು ಮಾಡಿ ಮೋಕ್ಷ ಕರುಣಿಸುತ್ತಾನೆ ಎಂದು ಹೇಳುತ್ತದೆ ಗರುಡ ಪುರಾಣ.

ಇದೇ ನಂಬುಗೆಯಲ್ಲಿ, ಶಿವರಾತ್ರಿಯ ದಿನ ಸೂರ್ಯೋದಯದಿಂದ ಮರುದಿನದ ಸೂರ್ಯೋದಯದವರೆಗೆ ಉಪವಾಸವಿದ್ದು, ರಾತ್ರಿ ಜಾಗರಣೆ ಮಾಡಿ ಕೈಲಾಸ ಪತಿಯಾದ ಶಿವನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ ಪಾವನಗೊಳ್ಳುತ್ತದೆ ಭಕ್ತ ಗಣ.

ಮುಗ್ಧ ಭಕ್ತಿಗೆ ಒಲಿಯುವ ಶಿವ

ಆಡಂಬರಗಳಿಂದ ಮುಕ್ತನಾಗಿರುವ ಶಿವ ನಿಷ್ಕಲ್ಮಶ, ಪ್ರಾಮಾಣಿಕ ಭಕ್ತಿಗೆ ಒಲಿಯುತ್ತಾನೆ ಎಂಬುದು ಭಕ್ತರ ನಂಬಿಕೆ. ಶಿವ ಪುರಾಣದಲ್ಲಿ ಬರುವ ಬೇಡನೊಬ್ಬನ ಕಥೆ ಪ್ರಸಿದ್ಧವಾಗಿದೆ.

ಗುರುದ್ರುಹ ಎಂಬ ಬೇಡನೊಬ್ಬ ಶಿವರಾತ್ರಿಯ ದಿನ ಬೇಟೆ ದೊರೆಯದೆ ಇಡೀ ದಿನ ಉಪವಾಸ ಇರುತ್ತಾನೆ. ಅಂದು ರಾತ್ರಿ ಬೇಟೆಗಾಗಿ ಕಾಯುತ್ತಾ ಮರವೇರಿ ಕುಳಿತುಕೊಳ್ಳುತ್ತಾನೆ. ಅದು ಬಿಲ್ವಪತ್ರೆಯ ಮರವಾಗಿರುತ್ತೆ. ಅವನ ಬಳಿಯಲ್ಲಿದ್ದ ಸೋರೆಕಾಯಿ ಬುರುಡೆಯಲ್ಲಿ ನೀರೂ ಇರುತ್ತದೆ. ಆ ಸ್ಥಳಕ್ಕೆ ಬಂದ ಹೆಣ್ಣು ಜಿಂಕೆಯೊಂದರ ಮೇಲೆ ಬಾಣ ಪ್ರಯೋಗಿಸುವ ಸಂದರ್ಭದಲ್ಲಿ ಮರದ ಎಲೆ ಮತ್ತು ಸೋರೆಬುರುಡೆಯಲ್ಲಿದ್ದ ನೀರು ಕೆಳಗೆ ಚೆಲ್ಲುತ್ತದೆ. ಕೆಳಗಡೆ ಶಿವಲಿಂಗ ಇರುತ್ತದೆ. ಬಿಲ್ವಪತ್ರೆ ಮತ್ತು ನೀರು ಅದರ ಮೇಲೆ ಬಿದ್ದಿರುತ್ತದೆ.

ಬೇಡನಿಗೆ ಅರಿವಿಲ್ಲದೇ ಶಿವರಾತ್ರಿಯ ಮೊದಲ ಪೂಜೆ ಶಿವನಿಗೆ ಸಂದಾಯವಾಗುತ್ತದೆ. ಆ ಕ್ಷಣವೇ ಅವನ ಪಾಪ ಪರಿಹಾರವಾಗುತ್ತದೆ. ಅವನಿಗೆ ಜಿಂಕೆಯ ಮೇಲೆ ಕರುಣೆ ಉಂಟಾಗುತ್ತದೆ. ಅವನ ಎಲ್ಲ ಪಾಪಗಳು ಪರಿಹಾರವಾಗಿ ಜ್ಞಾನೋದಯ ಆಗುತ್ತದೆ. ಮಹಾದೇವನು ಅವನ ಮುಂದೆ ಪ್ರತ್ಯಕ್ಷ ಆಗಿ ಅವನಿಗೆ ಗುಹನೆಂದು ನಾಮಕರಣ ಮಾಡಿ, ಶ್ರೀಮನ್ನಾರಾಯಣನು ರಾಮಾವತಾರದಲ್ಲಿ ಅರಣ್ಯಕ್ಕೆ ಬಂದಾಗ ಆತನ ಸೇವೆ ಮಾಡಿ ಮುಕ್ತಿ ಹೊಂದುವಂತೆ ಅನುಗ್ರಹಿಸುತ್ತಾನೆ.

ಗರುಡ ಪುರಾಣ, ಅಗ್ನಿ ಪುರಾಣ ಮತ್ತು ಸ್ಕಂದ ಪುರಾಣಗಳಲ್ಲೂ ಬೇಡನ ಕಥೆಗಳಿದ್ದು, ಕೊಂಚ ಭಿನ್ನವಾಗಿವೆ.

ಆಚರಣೆ ಹೇಗೆ?
ಮಹಾಶಿವರಾತ್ರಿ ದಿನ ಭಕ್ತರು ಶುಚಿರ್ಭೂತರಾಗಿ ಉಪವಾಸದಿಂದಿದ್ದು (ಅಲ್ಪಾಹಾರ ಸೇವನೆ) ಶಿವಧ್ಯಾನದಲ್ಲಿ ಮಾಡಬೇಕು. ಶಿವದೇವಾಲಯಗಳಿಗೆ ಭೇಟಿ ನೀಡುವ, ನದಿಗಳಲ್ಲಿ ಸ್ನಾನ ಮಾಡು ಸಂಪ್ರದಾಯವೂ ಇದೆ.

ಅಭಿಷೇಕ ಪ್ರಿಯನಿಗೆ ವಿವಿಧ ರೀತಿಯ ಅಭಿಷೇಕಗಳು ನಡೆಯುತ್ತವೆ. ವೇದಸೂಕ್ತಗಳನ್ನು ಪಠಿಸಲಾಗುತ್ತದೆ. ರುದ್ರ, ಚಮಕ ಪಠಣದೊಂದಿಗೆ ಯಾಮ ಪೂಜೆ ಶಿವರಾತ್ರಿಯ ವಿಶೇಷ. ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವಪತ್ರೆ, ಪದ್ಮಪುಷ್ಪ, ತುಂಬೆ ಹೂ, ತುಳಸಿ, ಕೆಂಪುದಾಸವಾಳಗಳಿಂದ ಅರ್ಚನೆಯೂ ನಡೆಯುತ್ತದೆ.

ರಾತ್ರಿ ಜಾಗರಣೆಯ ಸಂದರ್ಭದಲ್ಲೂ ಶಿವ ಧ್ಯಾನ ಮುಂದುವರಿಯುತ್ತದೆ. ‌ಶಿವ ಪೂಜೆ, ಶಿವಮಹಿಮೆ ಕಥೆಗಳ ಶ್ರವಣ, ಸಂಗೀತ, ಕೀರ್ತನೆಗಳನ್ನು ಹಾಡುವುದರ ಮೂಲಕ ಭಕ್ತರು ಧನ್ಯರಾಗುತ್ತಾರೆ.

ಪರ್ವಕಾಲದ ಹಬ್ಬ
ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುವ ವೇಳೆ ಶಿವರಾತ್ರಿ ಹಬ್ಬ ಬರುತ್ತದೆ. ಶಿವರಾತ್ರಿಯಂದು ಚಳಿ ಉತ್ತುಂಗದಲ್ಲಿರುತ್ತದೆ. ಈ ವ್ಯತ್ಯಯದಿಂದ ನಮ್ಮಲ್ಲಿ ಉಸಿರಾಟದ ತೊಂದರೆ, ನೆಗಡಿ, ಕೆಮ್ಮು, ಶೀತ ಕಂಡುಬರುತ್ತವೆ. ಈ ಸಂದರ್ಭದಲ್ಲಿ ಮಾಡುವ ಉಪವಾಸ ನಮ್ಮ ದೇಹವನ್ನು ಸಮತೋಲಿತಗೊಳಿಸುತ್ತದೆ. ಜಾಗರಣೆ ದೇಹದ ಉಷ್ಣವನ್ನು ಹೆಚ್ಚಿಸುತ್ತದೆ. ಶಿವಲಿಂಗಕ್ಕೆ ಅರ್ಪಿಸುವ ಬಿಲ್ವ ಪತ್ರೆ ಹೊರಸೂಸುವ ಆಮ್ಲಜನಕ ಉಸಿರಾಟದ ತೊಂದರೆ ನಿವಾರಿಸುತ್ತದೆ. ಲಿಂಗಾಷ್ಟಕ–ಓಂಕಾರ ಪಠಣ, ಸಹಸ್ರ ನಾಮಾರ್ಚನೆ, ರುದ್ರ ನಮಕ–ಚಮಕಗಳ ಉಚ್ಚಾರ ಹಾಗೂ ಶಿವ ಸ್ತುತಿಯಿಂದ ಇಡೀ ಶ್ವಾಸಕಾಂಗ ವ್ಯೂಹಕ್ಕೆ ವ್ಯಾಯಾಮ ದೊರೆತು ಉಸಿರಾಟ ಕ್ರಿಯೆ ಸುಲಭಗೊಳ್ಳುತ್ತದೆ. ಗುರುತ್ವ ಶಕ್ತಿ ಇರುವ ವಿಶಿಷ್ಟ ಶಿಲೆಯಿಂದ ತಯಾರಿಸಿದ ಶಿವಲಿಂಗದ ಮೇಲೆ ಅಭಿಷೇಕದ ರೂಪದಲ್ಲಿ ಹಾಲು, ಮೊಸರು, ತುಪ್ಪ, ಶ್ರೀಗಂಧ, ಜೇನುತುಪ್ಪ, ನೀರು ಸುರಿಯುವುದರಿಂದ ಶಕ್ತಿ ತರಂಗಗಳು ಹೊರಹೊಮ್ಮುತ್ತವೆ. ಈ ಶಕ್ತಿ ತರಂಗಗಳಿಂದ ದೇಹಕ್ಕೆ ನವೋಲ್ಲಾಸ ಲಭಿಸುತ್ತದೆ.

Courtesy : Prajavani.net

http://www.prajavani.net/news/article/2018/02/13/553681.html

Leave a Reply