“ಹಾಡು ಹಕ್ಕಿಗೆ ಬಂತುಬಿರುದು, ಸನ್ಮಾನ!”

ಇಪ್ಪತ್ಮೂರು ವರ್ಷಗಳ ಹಿಂದಿನ ಘಟನೆ ಇದು. ಡಾ.ಚಂದ್ರಶೇಖರ ಕಂಬಾರ ಅವರು ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಕಾಲ. ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕನಾಗಿದ್ದ ನಾನು, ‘ಮೌಖಿಕ ಮಹಾಕಾವ್ಯ’ಗಳನ್ನು ಸಂಗ್ರಹಿಸಿ ಪ್ರಕಟಿಸುವ ಯೋಜನೆಯೊಂದನ್ನು ಅವರ ಮುಂದಿರಿಸಿದ್ದೆ. ಸ್ವತಃ ಜಾನಪದ ಮನಸ್ಸಿನ ಕಂಬಾರರು ತಕ್ಷಣವೇ ಒಪ್ಪಿ ಮುಂದಡಿ ಇಡಲು ಆದೇಶಿಸಿದ್ದರು. 1974ರಷ್ಟು ಹಿಂದೆಯೇ ಮೈಸೂರಿನ ಡಾ.ಪಿ.ಕೆ. ರಾಜಶೇಖರ ಅವರು ಮಲೆಮಾದೇಶ್ವರ ಮಹಾಕಾವ್ಯವನ್ನು ವಿವಿಧ ಗಾಯಕರಿಂದ ಸಂಗ್ರಹಿಸಿ, ಸಂಪಾದನೆ ಮಾಡಿ ಪ್ರಕಟಿಸಿದ್ದರು. ಆನಂತರದಲ್ಲಿ ಬೃಹತ್ ಕಾವ್ಯ ಸಂಗ್ರಹ ಕೆಲಸ ಬಹುತೇಕ ನಿಂತು ಹೋಗಿತ್ತು. ಹಲವು ಗಾಯಕರಿಂದ ಸಂಗ್ರಹಿಸಿ ಒಂದು ಮಹಾಕಾವ್ಯವನ್ನು ಸಂಪಾದಿಸುವ ಬದಲು ಒಬ್ಬನೇ ಗಾಯಕನಿಂದ ಒಂದು ಇಡೀ ಮಹಾಕಾವ್ಯವನ್ನು ಹಾಡಿಸಿದರೆ ಹೇಗೆ ಎಂಬ ಆಲೋಚನೆ ನನ್ನದಾಗಿತ್ತು. ಮಲೆಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ ಮುಂತಾದ ಕನ್ನಡದ ಜನಪದ ಮಹಾಕಾವ್ಯಗಳು ಪ್ರಾಚೀನದಿಂದಲೂ ನಮ್ಮಲ್ಲಿ ಅಸ್ತಿತ್ವದಲ್ಲಿವೆ. ಆದರೆ, ಆಯಾ ಸಂಪ್ರದಾಯದ ಗಾಯಕರು ತಮಗೆ ಇಷ್ಟವಾದ ಕೆಲವು ಭಾಗಗಳನ್ನು ಆಯ್ಕೆ ಮಾಡಿಕೊಂಡು ಅದನ್ನಷ್ಟೇ ಹಾಡುವ ಪರಿಪಾಠ ಹೆಚ್ಚು. ಇಡೀ ಮಹಾಕಾವ್ಯವನ್ನು ಒಬ್ಬನೇ ಗಾಯಕ ಹಾಡುವುದು ಸುಲಭದ ಮಾತಂತೂ ಆಗಿರಲಿಲ್ಲ. ಮಲೆಮಾದೇಶ್ವರ ಕಾವ್ಯ ಈಗಾಗಲೇ ಹೇಗಿದ್ದರೂ ಸಂಗ್ರಹವಾಗಿದೆ. ಮಂಟೇಸ್ವಾಮಿ ಮಹಾಕಾವ್ಯವನ್ನು ಸಮಗ್ರವಾಗಿ ಒಬ್ಬರಿಂದಲೇ ಹಾಡಿಸಿ ಸಂಗ್ರಹಿಸಬೇಕೆಂಬುದು ನನ್ನ ಗುರಿಯಾಗಿತ್ತು. ಅಂಥ ಮಹಾ ಗಾಯಕನ ತಪಾಸಣೆಯಲ್ಲಿ ತೊಡಗಿದ್ದಾಗ ನಮ್ಮ ತ್ರಾಸದಾಯಕ ಅನ್ವೇಷಣೆಯಲ್ಲಿ ಗೋಚರವಾದವರು ಮೈಸೂರು ನಗರಕ್ಕೆ ಸಮೀಪದ ಇನಕಲ್‌ನ ಮಹಾದೇವಯ್ಯ. ಅವರ ಹಾಡಿನ ಭಂಡಾರವನ್ನು ಹಲವರಿಂದ ದೃಢಪಡಿಸಿಕೊಂಡ ನಾನು ಅವರನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಆಹ್ವಾನಿಸಿದೆ. ನನ್ನ ಸಹೋದ್ಯೋಗಿ ಚಲುವರಾಜು ಸ್ವತಃ ಮೈಸೂರಿಗೆ ಹೋಗಿ ಮಹಾದೇವಯ್ಯ ಅವರ ನೀಲಗಾರ ತಂಡವನ್ನು ಹಂಪಿಗೆ ಕರೆತಂದರು.ಮಹಾದೇವಯ್ಯ ಮಲೆಮಾದೇಶ್ವರನ ಭಕ್ತರಾದರೂ ನೀಲಗಾರ ಸಂಪ್ರದಾಯದ ಮಂಟೇಸ್ವಾಮಿ ಕಾವ್ಯ ಹಾಡುವುದರಲ್ಲಿ ಅವರಿಗೆ ಹೆಚ್ಚಿನ ಆಸಕ್ತಿ. ನೀಲಗಾರ ಸಂಪ್ರದಾಯದ ಕಲಾವಿದರಿಗೆ ವಿಶಿಷ್ಟವೆನಿಸಿದ ಹಾವಿನ ಹೆಡೆಯಾಕಾರದ ತಂಬೂರಿಯನ್ನು ನಿಯತವಾಗಿ ಮೀಟುತ್ತಾ ‘ಸಿದ್ದಯ್ಯ ಸ್ವಾಮಿ ಬನ್ನಿ, ಮಂಟೇದ ಲಿಂಗಯ್ಯ ನೀವೇ ಬನ್ನಿ, ಗುರುವೆ ಸಿದ್ದು ಸಿದ್ದರಿಗೆಲ್ಲ ನೀವು ಅತಿ ಮುದ್ದು ಘನನೀಲಿ, ಸಿದ್ದಯ್ಯ ಸ್ವಾಮಿ ಬನ್ನಿ ಮಂಟೇದಾ ಲಿಂಗಯ್ಯಾ ನೀವೇ ಬನ್ನಿ…’ ಎಂಬ ಅರ್ಥಪೂರ್ಣ ಪ್ರಾರ್ಥನೆಯ ರೂಪದಲ್ಲಿ ಆರಂಭವಾದ ಮಂಟೇಸ್ವಾಮಿ ಕಾವ್ಯ, ಹದಿನೆಂಟು ದಿನಗಳ ಕಾಲ ಮುಂದುವರೆದು ‘ಮಂಗಳ ಮಂಗಳ ಮಂಗಳಾರತಿ ಮಂಟೇಸ್ವಾಮಿಗೆ, ನಾವೆತ್ತುವೆವು ಧೂಪದಾರುತಿ ಸಿದ್ಧಪ್ಪಾಜಿಗೆ’ ಎಂಬ ಮಂಗಳದೊಂದಿಗೆ ಮುಕ್ತಾಯವಾಯಿತು. ಮಹಾದೇವಯ್ಯ ಅವರ ಸುಶ್ರಾವ್ಯ ಕಂಠದಿಂದ ಕೋಮಲ ಸ್ವರದಲ್ಲಿ ಹೊಮ್ಮುತ್ತಿದ್ದ ಕಥನಕ್ಕೆ ತಂಬೂರಿ, ತಾಳ, ಗಗ್ಗರ, ದಮ್ಮಡಿಯ ಹಿಮ್ಮೇಳವೂ ಇತ್ತು. ಸಹ ಗಾಯಕರಾದ ಶಿವಣ್ಣ ಮತ್ತು ನಂಜಯ್ಯನವರು ಮಹಾದೇವಯ್ಯಗೆ ದನಿಗೂಡಿಸುತ್ತಿದ್ದರು. ನಡುನಡುವೆ ಕಾವ್ಯಾತ್ಮಕ ಗದ್ಯದ ಮೂಲಕ ಆ ಮೂವರ ನಡುವೆ ಕಥನ ನಿರೂಪಣೆಯೂ ನಡೆಯುತ್ತಿತ್ತು. ‘ಜಗತ್ತು ಸೃಷ್ಟಿಯ ಸಾಲು’ ಎಂಬ ಪ್ರಥಮ ಆಶ್ವಾಸದಿಂದ ಆರಂಭವಾಗಿ ‘ಸಿದ್ಧಪ್ಪಾಜಿ ಸಾಲು’ ಎಂಬ ಕೊನೆಯ ಆಶ್ವಾಸದವರೆಗೆ ಸುಮಾರು 8 ಭಾಗಗಳಲ್ಲಿ ‘ಮಂಟೇಸ್ವಾಮಿ’ ಎಂಬ ಮಾಯಕಾರ ಸಂತನ ಪಯಣದ ಜೊತೆಗಿನ ರೋಚಕ ಕಥೆ ನಿರೂಪಿಸಲ್ಪಟ್ಟಿತ್ತು. ಒಂದೊಂದು ಸನ್ನಿವೇಶಕ್ಕೂ ಹೊಸ ಬಗೆಯ ಧಾಟಿ, ದನಿಗಳ ಸಮ್ಮಿಲನ. ಹದಿನೆಂಟು ದಿನಗಳ ದೇಸಿ ಪಾರಾಯಣದೋಪಾದಿಯ ಆ ಸುಮಧುರ ಘಟನೆ ಇಂದಿಗೂ ನನ್ನ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿದೆ. ಅಂದು ನನ್ನ ಕಿವಿಯಾಲೆಗೆ ತುಂಬಿದ ಆ ತಂಬೂರಿ ಜೊತೆಗಿನ ಸ್ವರ ಇಂದಿಗೂ ನಿನಾದಿಸುತ್ತಲೇ ಇದೆ ಆನಂತರದಲ್ಲಿ ಕಾವ್ಯವನ್ನು ಮತ್ತೆ ಮತ್ತೆ ಕೇಳಿಸಿಕೊಳ್ಳುತ್ತಾ ಅಕ್ಷರರೂಪಕ್ಕೆ ತಂದೆ. ಪುನರಾವರ್ತನೆಯನ್ನು ಸಂಕ್ಷಿಪ್ತಗೊಳಿಸಿ ಅಥವಾ ಕೈಬಿಟ್ಟು ಪಠ್ಯವನ್ನು ಸಂಪಾದಿಸಿದೆ. ಸುಮಾರು 850 ಪುಟಗಳ ಬೃಹತ್ ಮಹಾಕಾವ್ಯ ಸಿದ್ಧಗೊಂಡು ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟಿಸಲ್ಪಟ್ಟಿತು. ಆನಂತರದಲ್ಲಿ ವಿದ್ವಾಂಸರು ಮತ್ತು ಸಂಸ್ಕೃತಿ ಚಿಂತಕರಲ್ಲಿ ಅದು ಪಡೆದ ಜನಪ್ರಿಯತೆ ಅಪಾರ. ಇಂಥ ಒಂದು ಅಪರೂಪದ ಮಹಾಕಾವ್ಯವನ್ನು ಯಾವುದೇ ಆಯಾಸವಿಲ್ಲದೆ, ಮರೆವಿಲ್ಲದೆ ನಿರಂತರವಾಗಿ ಹಾಡಿದ ಮಹಾಗಾಯಕ ಇನಕಲ್ ಮಹಾದೇವಯ್ಯ ಅವರನ್ನು ಗುರುತಿಸಿ ರಾಜ್ಯ ಸರ್ಕಾರ ಅವರಿಗೆ ‘ಜಾನಪದಶ್ರೀ’ ಪ್ರಶಸ್ತಿಯನ್ನು ಪ್ರಕಟಿಸಿದೆ. ದೇಸಿ ಸಂಸ್ಕೃತಿಯ ವಕ್ತಾರರಂತಿರುವ ಕಥೆಗಾರ ಕರೀಗೌಡ ಬೀಚನಹಳ್ಳಿ ಅವರ ಅಧ್ಯಕ್ಷತೆಯ ಸಮಿತಿಗೆ ಮಹಾದೇವಯ್ಯನವರಂಥ ಹಿರಿಯ ಪ್ರತಿಭಾವಂತ, ಸಮರ್ಥ ಕಲಾವಿದರನ್ನು ಆಯ್ಕೆ ಮಾಡಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸಲೇಬೇಕು. ಮಹಾದೇವಯ್ಯನವರ ಎದೆಯಲ್ಲಿ ಹಲವು ಕಥನಗಳಿವೆ. ಮಂಟೇಸ್ವಾಮಿ ಮತ್ತು ಮಲೆಮಾದೇಶ್ವರ ಅವರು ಹಾಡುವ ಮಹಾಕಾವ್ಯಗಳಾದರೆ, ನಂಜುಂಡೇಶ್ವರನ ಕಥೆ, ಬಾಲನಾಗಮ್ಮನ ಕಥೆ, ಚನ್ನಿಗರಾಯನ ಕಥೆ, ಸಾರಂಗಧರನ ಕಥೆ, ಬಸವಣ್ಣ ದೇವರ ಕಥೆ, ಶಿವರಾಯನ ಕಥೆ ಮುಂತಾಗಿ ಅವರು ಹಾಡುವ ಖಂಡ ಕಾವ್ಯಗಳು ಅನೇಕ. ಇವರಿಗೆ ಆರು ಜನ ಹೆಣ್ಣುಮಕ್ಕಳು, ಒಬ್ಬ ಮಗ. ಅಲ್ಪಸ್ವಲ್ಪ ಬರುತ್ತಿದ್ದ ಹಾಡಿನ ದಕ್ಷಿಣೆ ಮತ್ತು ಭಿಕ್ಷಾಟನೆಯ ಸಂಪಾದನೆಯಿಂದಲೇ ಅವರೆಲ್ಲರ ಮದುವೆ ಮಾಡಿ ದಣಿದ ಜೀವ ಇದು. ಮಹಾಕಾವ್ಯ ಗಾಯನಕ್ಕೆ ಪ್ರೇರಣೆ ಏನು ಎಂದು ಕೇಳಿದರೆ ತಕ್ಷಣ ನೆನಪಾಗುವುದು ಅವರ ತಂದೆ ಕುಂಟುಮಾದಯ್ಯ. ತಂದೆಯ ಜೊತೆ ಹೆಜ್ಜೆ ಹಾಕುತ್ತಾ ಭಿಕ್ಷಾಟನೆಗೆ ಹೋಗುತ್ತಿದ್ದ ಹುಡುಗ ನೀಲಗಾರ ಧಾಟಿಯ ಲಯಗಳನ್ನು ಕಲಿತ. ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಾಗ ಆಸರೆಗೆ ಬಂದಿದ್ದು ಚಿಕ್ಕಪ್ಪ ಮಾದಯ್ಯ. ಅವರನ್ನೇ ಗುರುವೆಂದು ನಂಬಿದ ಮಹಾದೇವಯ್ಯ ಶ್ರದ್ಧೆಯಿಂದ ಕಾವ್ಯ ಗಾಯನಕ್ಕೆ ತೊಡಗಿದರು. ತಾಯಿ ಸಣ್ಣ ಮಾದಮ್ಮನ ಪ್ರೋತ್ಸಾಹವೂ ದೊರೆಯಿತು. ಅಧಿಕೃತವಾಗಿ ನೀಲಗಾರ ದೀಕ್ಷೆ ಪಡೆದ ಮಹಾದೇವಯ್ಯ ತನ್ನ ಇಡೀ ಬದುಕನ್ನು ಪಯಣಕ್ಕೆ ಅರ್ಪಿಸಿಕೊಂಡು ದಾರಿಯುದ್ದಕ್ಕೂ ಕಥನದ ಬೆಳೆಯನ್ನು ಬಿತ್ತಿದರು. ಸಂಭಾವನೆಗಾಗಿ ಎಂದೂ ಪರಿತಪಿಸಲಿಲ್ಲ. ಅಗ್ಗದ ಜನಪ್ರಿಯತೆಗಾಗಿ ಹಾತೊರೆಯಲಿಲ್ಲ. ಮಲೆಮಾದೇಶ್ವರ ಮತ್ತು ಮಂಟೇಸ್ವಾಮಿ ಎಂಬ ಇತಿಹಾಸದ ಯತಿಗಳನ್ನು ಆರಾಧ್ಯ ದೈವಗಳನ್ನಾಗಿ ಪಡೆದ ಮಹಾದೇವಯ್ಯ ತಮ್ಮ ಸರ್ವಸ್ವವನ್ನು ದೈವಕಥನಕ್ಕಾಗಿ ಮೀಸಲಿಟ್ಟರು. ಕರೆದವರ ಮನೆಗೆ ತೆರಳಿ ಇಂದಿಗೂ ಕಥೆ ಮಾಡುವ ಕಾಯಕದ ಮಹಾದೇವಯ್ಯ ಅವರಿಗೆ ಮತ್ಯಾವ ಆರ್ಥಿಕ ಆಸರೆಯೂ ಇಲ್ಲ. ಇತ್ತೀಚಿಗಿನ ದಿನಗಳಲ್ಲಿ ಕರೆದು ಕಥೆ ಮಾಡಿಸುವವರೂ ಕಡಿಮೆ. ಅಂಥ ಸಂದರ್ಭಗಳಲ್ಲಿ ಭಿಕ್ಷಾಟನೆಯೇ ಅವರಿಗೆ ಆಸರೆ. ತನ್ನ ರಾಗ ಧಾಟಿಗಳನ್ನು ಬದಲಿಸಿ, ಕಥೆಗೆ ಹೊಸ ಹೊಸ ಘಟನೆಗಳನ್ನು, ತಮಾಷೆಗಳನ್ನು ಸೇರಿಸಿಕೊಂಡು ಜನರನ್ನು ಸೆಳೆಯುವ ಚಮತ್ಕಾರಿಕ ಪ್ರಯತ್ನಕ್ಕೆ ಅವರು ಮೊದಲಿನಿಂದಲೂ ವಿರೋಧಿ. ಅವರದೇನಿದ್ದರೂ ಶುದ್ಧ ಸಂಪ್ರದಾಯ. ಮಲೆಮಾದೇಶ್ವರ, ಮಂಟೇಸ್ವಾಮಿ ಕತೆಗಳು ಮನರಂಜನೆಗಾಗಿ ಅಲ್ಲ, ಬದುಕಿನಲ್ಲಿ ಪಾಠ ಕಲಿಯುವುದಕ್ಕಾಗಿ ಎಂಬುದು ಅವರ ನಂಬಿಕೆ. ಹಾಗಾಗಿಯೇ ಸಿನಿಮಾ ಗೀತೆಗಳ ಸ್ವರವನ್ನಾಗಲೀ, ಜನಪ್ರಿಯ ಜನಪದ ಗೀತೆಗಳ ಧಾಟಿಯನ್ನಾಗಲೀ ಅವರು ಎಂದೂ ಬೆನ್ನುಹತ್ತಲಿಲ್ಲ. ನೀಲಗಾರ ಪರಂಪರೆಯ ಭಾವಪೂರ್ಣ ಗಾಯನಕ್ಕೆ ಮಾತ್ರ ಅವರ ನಿಷ್ಠೆ. ಈ ದೃಷ್ಟಿಯಿಂದ ಅವರೊಬ್ಬ ಕಲುಷಿತಗೊಳ್ಳದ ಅಪ್ಪಟ ಹಾಡುಗಾರ. ಸುಮಾರು ಎಪ್ಪತ್ತೈದು ವಸಂತಗಳನ್ನು ದಾಟಿರುವ ಅವರು ಅನಾರೋಗ್ಯದಿಂದ ಕೃಶವಾಗಿದ್ದಾರೆ. ಆದರೂ, ಕಥೆ ಮಾಡುವ ಕಾಯಕದಿಂದ ದೂರ ಉಳಿದಿಲ್ಲ. ಇನಕಲ್ ಮಹದೇವಯ್ಯ ಅವರು ಮೈಸೂರು ಸುತ್ತಿನಲ್ಲಿ ಉಳಿದಿರುವ ಸಮಗ್ರ ಗಾಯನದ ಕೊನೆಯ ಕೊಂಡಿ.

courtsey:prajavani.net

https://www.prajavani.net/artculture/article-features/birudu-sanmana-654076.html

Leave a Reply