‘ಹಾಸ್ಯಪ್ರಜ್ಞೆ ಸದಾ ಜೊತೆಗಿರಲಿ…’

‘ಹಾಸ್ಯಪ್ರಜ್ಞೆ ಸದಾ ಜೊತೆಗಿರಲಿ…’

ಮನುಷ್ಯ ಸಮಾಜಮುಖಿಯಾದಷ್ಟು ಬದುಕಿನ ಬೇರೆ ಬೇರೆ ಮಜಲುಗಳನ್ನು ಅರಿಯುತ್ತಾ ಹೋಗುತ್ತಾನೆ. ಜನರೊಂದಿಗೆ ಬೆರೆತಾಗ ಮನಸ್ಸು ನಿರಾಳವಾಗುತ್ತದೆ. ಜೊತೆಗೊಂದಿಷ್ಟು ಹಾಸ್ಯಪ್ರಜ್ಞೆಯೂ ಇದ್ದರೆ ಅದು ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಎನ್ನುವುದು ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಅವರ ನಿಲುವು…

ಮನಸ್ಸು ಒತ್ತಡದಲ್ಲಿದ್ದಾಗ ಎಲ್ಲ ಕ್ರಿಯೆಯೂ ನಿಂತ ಹಾಗೆ ಅನ್ನಿಸಿ, ಒಂದು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡ ಅನುಭವವಾಗುತ್ತದೆ. ಆಗ ನಾವು ಯಾವ ಕೆಲಸದ ಮೇಲೂ ಗಮನವನ್ನು ಕೇಂದ್ರಿಕರಿಸಲಾಗದ ಸ್ಥಿತಿ ಉಂಟಾಗುತ್ತದೆ. ಯಾವುದೇ ಕೆಲಸವನ್ನು ಸಂಪೂರ್ಣವಾಗಿ ಮಾಡಲಾಗದ ಸನ್ನಿವೇಶವನ್ನೇ ಒತ್ತಡ ಎನ್ನಬಹುದು.

ನಾನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ನನಗಿರುವ ಒತ್ತಡ ಎಂದರೆ ಸ್ಪರ್ಧೆಗಳು. ನಮ್ಮ ಆಯ್ಕೆಯ ಕ್ಷೇತ್ರದಲ್ಲಿ ನಾವು ಇರಿಸಿಕೊಂಡ ಗುರಿಯನ್ನು ಎಷ್ಟರ ಮಟ್ಟಿಗೆ ತಲುಪಲು ಸಾಧ್ಯವಾಗಿದೆ ಎಂಬ ಅಂಶ ‌ಮುಖ್ಯವಾಗುತ್ತದೆ. ಇದು ವೃತ್ತಿಯ ಒತ್ತಡವಾದರೆ, ಇನ್ನೊಂದು ವ್ಯಾವಹಾರಿಕ ಒತ್ತಡ. ಇದು ನಮ್ಮ ದಿನನಿತ್ಯದ ಚಟುವಟಿಕೆಯ‌ಲ್ಲಿರುತ್ತದೆ. ಅದು ಅಲ್ಲಲ್ಲಿಗೆ ಮುಗಿಯುತ್ತಾ ಹೋಗುತ್ತದೆ. ಆದರೆ ವೃತ್ತಿಯಲ್ಲಿನ ಒತ್ತಡಗಳು ನಿರಂತರವಾಗಿರುತ್ತವೆ. ಯಾವುದೇ ವೃತ್ತಿಯಲ್ಲಿಯೂ ಸಾಧನೆಗೆ ಒಂದು ಮಿತಿ ಎನ್ನುವುದು ಇರುವುದಿಲ್ಲ. ಪ್ರತಿನಿತ್ಯ ಹೊಸ ಸವಾಲುಗಳು ಎದುರಾಗುತ್ತವೆ. ಇದನ್ನು ತುಡಿತ ಎಂದೂ ಕರೆಯಬಹುದು. ಈ ತುಡಿತದೊಂದಿಗೆ ನಾವು ಕೂಡ ಸಾಗುತ್ತಿರುತ್ತೇವೆ.

ಇನ್ನು ಯಾವುದೇ ಕಲಾಪ್ರಕಾರವೇ ಆಗಲಿ ಅದನ್ನು ಪ್ರದರ್ಶಿಸುವವರೆಗೂ ಕಲಾವಿದರನ್ನು ಒತ್ತಡ ಕಾಡುತ್ತಿರುತ್ತದೆ. ಯಕ್ಷಗಾನದಲ್ಲೂ ಹಾಗೆ. ಯಕ್ಷಗಾನದ ಪ್ರದರ್ಶನ ಮುಗಿದ ಮೇಲೆ ಮನಸ್ಸು ನಿರಾಳವಾಗುತ್ತದೆ. ಅಂದರೆ ನಾವು ನೀಡಿದ ಪ್ರದರ್ಶನದ ಆತ್ಮಸಂತೃಪ್ತಿ ಹಾಗೂ ಜನರ ಪ್ರತಿಕ್ರಿಯೆ – ಎರಡೂ ನಮಗೆ ಸಂತೋಷವನ್ನು ನೀಡುತ್ತವೆ. ಇದರ ನಡುವೆ ಒಂದೊಮ್ಮೆ ಬೇರೆ ಬೇರೆ ಕಾರಣಗಳಿಂದ ಪ್ರದರ್ಶನ ಯಶಸ್ವಿಯಾಗದೇ ಇದ್ದರೆ ಆಗಲೂ ಒತ್ತಡ ಶುರುವಾಗುತ್ತದೆ. ಮತ್ತೊಂದು ಕಾರ್ಯಕ್ರಮ ಯಶಸ್ವಿಯಾಗುವವರೆಗೂ ಆ ಒತ್ತಡ ನಮ್ಮೊಂದಿಗೇ ಇರುತ್ತದೆ.

ಸಮಸ್ಯೆ ಹುಟ್ಟಿದ ಜಾಗದಲ್ಲಿಯೇ ಪರಿಹಾರವೂ ಇರುತ್ತದೆ. ಅದನ್ನು ಕಂಡುಕೊಳ್ಳುವ ದಾರಿ ನಮಗೆ ತಿಳಿದಿರಬೇಕು. ಸಮಸ್ಯೆಯನ್ನು ವಿಶ್ಲೇಷಣೆ ಮಾಡುವುದರಿಂದ ಅರ್ಧ ಒತ್ತಡ ಕಡಿಮೆಯಾಗುತ್ತದೆ. ಜೀವನದ ಬಗ್ಗೆ ಆಶಾವಾದ ಇರಿಸಿಕೊಳ್ಳುವುದು ಒತ್ತಡ ನಿವಾರಣೆಗಿರುವ ಒಂದು ದಾರಿ. ನಮಗೆ ಎದುರಾದ ಸಮಸ್ಯೆಯನ್ನು ಆಳವಾಗಿ ಅವಲೋಕಿಸಿ, ಅದರಾಳದೊಳಗೆ ಇಳಿದು, ಒತ್ತಡದ ಮೂಲವನ್ನು ಗ್ರಹಿಸಬೇಕು. ಆಗ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಅದಕ್ಕೆ ಆಧ್ಯಾತ್ಮವೂ ಸ್ವಲ್ಪ ಮಟ್ಟಿಗೆ ಸಹಾಯ ಮಾಡುತ್ತದೆ.

ನಾನು ಒತ್ತಡ ನಿರ್ವಹಣೆಗೆ ಕೆಲವೊಂದು ಮಾರ್ಗಗಳನ್ನು ಕಂಡುಕೊಂಡಿದ್ದೇನೆ. ಅವು ನನಗೆ ಅನೇಕ ಬಾರಿ ಸಹಾಯ ಮಾಡಿವೆ. ಅದರಲ್ಲಿ ಮೊದಲನೆಯದ್ದು ಆಂತರಿಕ ಸಂಭಾಷಣೆ. ಎರಡನೆಯದ್ದು ಸ್ನೇಹಿತರ ಒಡನಾಟ. ನನಗೆ ತೀರಾ ಒತ್ತಡ ಎನ್ನಿಸಿದಾಗ ಪುಸ್ತಕಗಳನ್ನು ಓದುತ್ತೇನೆ. ಎಂತಹ ಒತ್ತಡ ಕಾಡಿದಾಗಲೂ ಒಂದು ಗಂಟೆ ಓದುವುದರಿಂದ ಒತ್ತಡ ಕಡಿಮೆಯಾಗಿ, ಹೊಸತೊಂದು ಸಂತೋಷ ಲಭಿಸುತ್ತದೆ. ನಾನು ಓದಿನಲ್ಲೂ ವೈವಿಧ್ಯವನ್ನು ಅಪೇಕ್ಷಿಸುತ್ತೇನೆ. ಆಧುನಿಕ ಬರಹಗಾರರಿಂದ ಮೊದಲುಗೊಂಡು ಪುರಾಣದವರೆಗೂ ಎಲ್ಲ ರೀತಿಯ ಪುಸಕ್ತಗಳನ್ನೂ ಓದುತ್ತೇನೆ. ಯಾವ ಪುಸ್ತಕವೂ ಸಹ್ಯವಲ್ಲ ಎಂದು ನನಗೆ ಅನ್ನಿಸುವುದಿಲ್ಲ.

ಇನ್ನು ಅನೇಕ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಮನೆಯ ಹಿರಿಕರನ್ನು ನೆನಪಿಸಿಕೊಳ್ಳುತ್ತೇನೆ. ಅವರ ಮಾತುಗಳು ಮಾರ್ಗದರ್ಶನವನ್ನು ನೀಡಿ ನನ್ನನ್ನು ಎಷ್ಟೋ ಬಾರಿ ಒತ್ತಡದಿಂದ ಹೊರಬರುವಂತೆ ಮಾಡಿವೆ. ಹಾಸ್ಯಪ್ರಜ್ಞೆ ನಮ್ಮಲ್ಲಿ ಯಾವಾಗಲೂ ಜಾಗೃತವಾಗಿರಬೇಕು. ನಮ್ಮನ್ನು ನಾವು ಟೀಕೆ ಮಾಡಿಕೊಳ್ಳುವುದು, ವಿರ್ಮಶಿಸಿಕೊಳ್ಳುವುದು ಒತ್ತಡದ ನಿವಾರಣೆಗೆ ದಾರಿ.

ನಾವು ಸಮಾಜಮುಖಿಯಾದಷ್ಟೂ ನಮ್ಮ ಮನಸ್ಸು ನಿರಾಳವಾಗುತ್ತದೆ. ಜನರ ಜೊತೆ ಬೆರೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಸಾವಿರಾರು ಜನರ ಜೊತೆ ಬೆರೆಯುವುದರಿಂದ ಮನಸ್ಸಿಗೆ ಒಂದು ಹಿಡಿತ ಸಿಗುತ್ತದೆ. ಸಮಾಜದಲ್ಲಿರುವ ಪ್ರತಿ ವ್ಯಕ್ತಿಯಲ್ಲೂ ನಾವು ಊಹಿಸದ ಯಾವುದೋ ಒಂದು ವಿಶೇಷ ಗುಣವಿರುತ್ತದೆ. ಅದನ್ನು ಗುರುತಿಸುವ ಮನೋಭಾವ ನಮ್ಮದಾಗಬೇಕು. ಸಮಾಜವನ್ನು ಸಂಪೂರ್ಣ ದೂರ ಮಾಡಿಕೊಂಡು ಪುಸ್ತಕ, ಚಿಂತನೆ ಎಂದುಕೊಂಡು ಒತ್ತಡವಿಲ್ಲದೆ ಬದುಕುತ್ತೇನೆ ಎಂದುಕೊಂಡರೆ ಅದು ಸಾಧ್ಯವಾಗುವುದಿಲ್ಲ.

ನಾನು ನನ್ನ ಜೀವನದಲ್ಲಿ ಅನೇಕ ಸಂದರ್ಭಗಳಲ್ಲಿ ತುಂಬ ಒತ್ತಡದ ಸನ್ನಿವೇಶಗಳನ್ನು ಎದುರಿಸಿದ್ದೆ. ಪ್ರಸಿದ್ಧ ಯಕ್ಷಕಲಾವಿದರ ಕುಟುಂಬದಲ್ಲಿ ಹುಟ್ಟಿದ ನಾನು ಯಕ್ಷಗಾನ ಕ್ಷೇತ್ರಕ್ಕೆ ಬರಬೇಕೋ, ಬೇಡವೋ ಎಂಬ ಸಂದರ್ಭದಲ್ಲಿ, ಹಿರಿಯರು ನಡೆಸಿಕೊಂಡು ಬಂದ ಕಲಾಪ್ರಕಾರವನ್ನು ಹೇಗೆ ಮುಂದುವರೆಸಿಕೊಂಡು ಹೋಗಬೇಕು ಎಂಬ ಒತ್ತಡದ ಸನ್ನಿವೇಶ ನನಗೆ ಕಾಡಿತ್ತು. ನಮ್ಮ ತಂದೆಯವರು ತೀರಿಕೊಂಡಾಗ, ಯಕ್ಷಗಾನ ಮೇಳ ಆರ್ಥಿಕವಾಗಿ ಸಂಕಷ್ಟಕ್ಕೆ ತುತ್ತಾದಾಗಲೂ ನಾನು ಒತ್ತಡವನ್ನು ಅನುಭವಿಸಿದ್ದೆ.

ಯಕ್ಷಗಾನ ಎನ್ನುವಂತಹದ್ದು ಭಿನ್ನ ಕಲೆ. ಇಲ್ಲಿ ಹಾಸ್ಯ, ಗಂಭೀರ, ಸ್ತ್ರೀಪಾತ್ರ – ಹೀಗೆ ಅನೇಕ ವೇಷಗಳಿರುತ್ತವೆ. ಅಂತೆಯೇ ಕಲಾವಿದರ ಸ್ವಭಾವವೂ ಭಿನ್ನವಾಗಿರುತ್ತದೆ. ಹೀಗೆ ಭಿನ್ನ ಪಾತ್ರ ಹಾಗೂ ಸ್ವಭಾವದ ಕಲಾವಿದರನ್ನು ಒಟ್ಟುಗೂಡಿಸಿ, ಅವರಿಗೆ ಸಮಾನ ಗೌರವವನ್ನು ನೀಡಿ ನಮಗೆ ಬೇಕಾದಂತೆ ಅವರಿಂದ ಕೆಲಸವನ್ನು ತೆಗೆಸಿ, ಒಟ್ಟಾರೆಯಾಗಿ ಒಂದು ಸಂಸ್ಥೆಯನ್ನು ನಡೆಸಿಕೊಂಡು ಹೋಗುವುದು ಒತ್ತಡವೇ.

ಯಕ್ಷಗಾನವನ್ನು ಉಳಿಸಿಕೊಳ್ಳಬೇಕೆಂಬ ಒತ್ತಡವೂ ಇದೆ. ಯಕ್ಷಗಾನ ಇಂದು ಮುಖ್ಯಭೂಮಿಕೆಯಲ್ಲಿದೆ ಎನ್ನುವ ಭಾವ ಜನರಲ್ಲಿ ಇದೆ. ಆದರೆ ಅದರ ಒಳಹೊಕ್ಕು ನೋಡಿದರೆ ವಾಸ್ತವ ಹಾಗಿಲ್ಲ; ಅದರ ಸತ್ವವನ್ನು ಉಳಿಸಿಕೊಳ್ಳುವ ವಿಷಯದಲ್ಲಿ ಬೇರೆ ಎಲ್ಲಾ ಕಲಾಪ್ರಕಾರ ಗಳಂತೆ ಇದು ಕೂಡ ಭಿನ್ನ ದಾರಿಯಲ್ಲಿ ಸಾಗುತ್ತಿದೆ. ಇಡೀ ಕರ್ನಾಟಕವನ್ನು ತಲುಪುವ ಗುರಿಯನ್ನು ಯಕ್ಷಗಾನ ಹಾಕಿಕೊಂಡಿಲ್ಲ. ಉತ್ತರ ಕರ್ನಾಟಕದ ಜನರಿಗೆ ಯಕ್ಷಗಾನ ಅರ್ಥವೇ ಆಗುವುದಿಲ್ಲ. ಬೆಂಗಳೂರಿನಲ್ಲಿ ಯಕ್ಷಗಾನ ನೋಡುವವರೆಲ್ಲಾ ಕರಾವಳಿ ಭಾಗದವರೇ. ಹೊಸ ಹೊಸ ಜನರನ್ನು ತಲುಪುವ ಪ್ರಯತ್ನಗಳು ಇಲ್ಲಿ ಬಹಳ ಕಡಿಮೆ ಇದೆ. ಆದ್ದರಿಂದ ಯಕ್ಷಗಾನ ಎಲ್ಲಿ ಒಂಟಿಯಾಗಿ ಬಿಡುತ್ತದೋ ಎಂಬ ಭಾವ ಕಾಡುತ್ತದೆ. ಇದೊಂದು ಅದ್ಭುತ ಕಲೆ; ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿದ ಕಲೆಯೂ ಹೌದು. ಈ ಹಿನ್ನೆಲೆಯಲ್ಲಿಯೂ ಅದಕ್ಕಿರುವ ಮೆರುಗು ವ್ಯಾಪಕವಾಗಿಲ್ಲ ಎಂಬ ಕೊರಗು ನನ್ನಲ್ಲಿ ಒತ್ತಡವನ್ನು ಸೃಷ್ಟಿಸುತ್ತದೆ.

ಕೆಲವೊಮ್ಮೆ ಅತಿಯಾದ ಪ್ರೋತ್ಸಾಹವೂ ಕಲೆಯನ್ನು ಸಾಯಿಸುತ್ತದೆ. ಕಲೆ ಎನ್ನುವುದು ಗಿಡದ ಹಾಗೆ. ಅತಿಯಾಗಿ ನೀರು ಹಾಕಿದರೆ ಗಿಡ ಕೊಳೆಯುತ್ತದೆ; ನೀರನ್ನೇ ಹಾಕದಿದ್ದರೆ ಗಿಡ ಸಾಯುತ್ತದೆ.

ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗಿನವರಲ್ಲಿ ಸಮಯ ಪರಿಪಾಲನೆಯ ಕೊರತೆ ಕಾಣುತ್ತಿದೆ. ಧಾವಂತದ ಬದುಕನ್ನು ನಾವು ಅಪ್ಪಿಕೊಂಡಿದ್ದೇವೆ. ಯಾವುದರಲ್ಲೂ ಸಮಾಧಾನ ಎನ್ನುವುದೇ ಇಲ್ಲ. ಒಮ್ಮೆಗೇ ಎತ್ತರದ ಸ್ಥಾನಕ್ಕೆ ಹೋಗಬೇಕು, ಶ್ರೀಮಂತರಾಗಬೇಕು ಎನ್ನುವ ಮನಃಸ್ಥಿತಿ ಹಾಗೂ ಮನ್ನಣೆಯ ದಾಹ ನಮ್ಮನ್ನು ಈ ಸ್ಥಿತಿಗೆ ತಲುಪಿಸಿದೆ. ವೇಗ ಅಗತ್ಯ. ಆದರೆ ಅದನ್ನೇ ಬದುಕು ಎಂದುಕೊಳ್ಳಬಾರದು. ಇಂಥ ಅರಿವಿನಿಂದ ಒತ್ತಡದ ಮಟ್ಟವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

Courtesy : Prajavani.net

http://www.prajavani.net/news/article/2018/02/28/556597.html

Leave a Reply