ಹೂವು ತಂದವನಿಗೆ ವಯಸ್ಸಾಗಿತ್ತು, ಕಾಯುತ್ತಾ ಕೂತವಳು ಮುದುಕಿಯಾಗಿದ್ದಳು

ಹೂವು ತಂದವನಿಗೆ ವಯಸ್ಸಾಗಿತ್ತು, ಕಾಯುತ್ತಾ ಕೂತವಳು ಮುದುಕಿಯಾಗಿದ್ದಳು

ಮುಸ್ಸಂಜೆಗಳು ಅಪಾಯಕಾರಿ. ಹಗಲೂ ಅಲ್ಲದ ರಾತ್ರಿಯೂ ಅಲ್ಲ ಮುಸ್ಸಂಜೆಗಳಲ್ಲಿ ಮನಸ್ಸು ಇದ್ದಕ್ಕಿದ್ದಂತೆ ಮುದುಡಿಬಿಡುತ್ತದೆ. ಆಫೀಸು ಬಿಟ್ಟು ಮನೆಗೆ ಹೊರಟಾಗ, ಮನೆಯಲ್ಲೇ ಸುಮ್ಮನೆ ಕೂತಾಗ ಇದ್ದಕ್ಕಿದ್ದಂತೆ ಅದೆಂಥದ್ದೋ ಖಿನ್ನತೆ. ಇಳಿಸಂಜೆಯ ಮೌನದೊಳಗೊಂದು ಸ್ಫೋಟಿಸದ ಆರ್ತನಾದ.
ಲೈಫ್ ಈಸ್ ಎಲ್ಸ್ವೇರ್.
ನನ್ನ ಬದುಕು ಇನ್ನೆಲ್ಲೋ ಇದೆ. ಬೇರೇನನ್ನೋ ನಾನು ಮಾಡಬೇಕಾಗಿತ್ತು. ಅನಿವಾರ್ಯವಾಗಿ ಈ ಕೆಲಸ ಮಾಡುತ್ತಿದ್ದೇನೆ. ಇದೂ ಒಂದು ಬದುಕಾ? ಮನಸ್ಸೆಂಬ ಸಮುದ್ರ ಬೇಡದ ಯೋಚನೆಗಳನ್ನು ಬುದ್ಧಿತೀರಕ್ಕೆ ತಂದು ಎಸೆಯುತ್ತದೆ. ಹಿಂತಿರುಗಿ ನೋಡಿದರೆ ರಸಹೀನ ಕಬ್ಬಿನಜಲ್ಲೆಯಂತೆ ನಿನ್ನೆಗಳ ರಾಶಿ. ಮುಂದಕ್ಕೆ ನೋಡಿದರೆ ಚಾಚಿಕೊಂಡ ಮೂರುದಾರಿಗಳು.ಸಂದಿಗ್ಧದ ಮೂರುಸಂಜೆ!
ಸಾಧನೆಗಳೇ ಬದುಕು ಅನ್ನುವುದನ್ನು ಬಾಲ್ಯದಿಂದಲೇ ನಮ್ಮ ತಲೆಗೆ ತುಂಬುತ್ತಲೇ ಬಂದಿದ್ದಾರೆ. ಏನಾದರೂ ಮಾಡು ಅನ್ನುವುದಕ್ಕಿಲ್ಲಿ ಅರ್ಥವಿಲ್ಲ. ಇಂಥದ್ದು ಮಾಡಿದರೆ, ಇಂಥದ್ದು ಸಿಗುತ್ತದೆ ಎನ್ನುವುದು ಖಚಿತವಾಗಬೇಕು. ಪಂಪನನ್ನೋದಿದರೆ ಕನ್ನಡ ಎಂಎ. ಷೇಕ್ಸ್ಪಿಯರ್ ಕಲಿತರೆ ಇಂಗ್ಲಿಷ್ ಎಂಎ. ಎಂಬಿಬಿಎಸ್ ಓದಿದರೆ ಕತ್ತಿಗೆ ಸ್ಟೆತಾಸ್ಕೋಪು. ಅಲ್ಲಿಗೆ ಓದುವ ಖುಷಿಯನ್ನು ಗುರಿಯ ಚಿಂತೆ ಕಸಿದುಕೊಂಡು ಬಿಡುತ್ತದೆ. ಪ್ರೀತಿಸುವುದು ಯಾಕೆ ಎಂದರೆ ಮದುವೆ ಆಗುವುದಕ್ಕೆ ಎಂದಂತೆ.
ಪಯಣದ ಸುಖವನ್ನು ಅನುಭವಿಸು ಅಂತ ನಮಗೆ ಹೇಳುತ್ತಲೇ ಬಂದಿದ್ದಾರೆ. ಗುರಿ ಮುಖ್ಯವಲ್ಲ, ದಾರಿ ಅನ್ನುವುದನ್ನು ಕೂಡ. ಹಾಗೆ ಹೇಳುವುದು ಸುಲಭ. ದಾರಿ ಸವೆಸದವರೂ ಆ ಮಾತು ಹೇಳಬಹುದು.ಅವನು ಮತ್ತು ಅವಳು ಎಲ್ಲೋ ಸಂಧಿಸಿದರು. ಒಬ್ಬರನ್ನೊಬ್ಬರು ಮೆಚ್ಚಿಕೊಂಡರು. ಅವನಲ್ಲಿ ಅವಳೇನು ಕಂಡಳೋ ಅವಳಿಗಷ್ಟೇ ಗೊತ್ತು, ಅವಳಲ್ಲಿ ಅವನಿಗೇನು ಕಾಣಿಸಿತೋ ಅವನೊಬ್ಬನೇ ಬಲ್ಲ. ಕಾಲದ ಅಪೂರ್ವ ನಟನೆಯಲ್ಲಿ ಅವರಿಬ್ಬರೂ ಕಾಲಾತೀತ ಆನಂದದಲ್ಲಿ ತೇಲಾಡಿದರು. ಕಾಡುಮೇಡು ಸುತ್ತಾಡಿದರು. ಪ್ರೇಮ ದಾಹವನ್ನು ಇಂಗಿಸಿತ್ತು.ಪ್ರೀತಿ ಆಯಾಸವನ್ನು ನೀಗಿಸಿತ್ತು. ಹಾಗೆ ನಡೆಯುತ್ತಾ ಬಂದರೆ ಎದುರಿಗೊಂದು ದೊಡ್ಡ ಕೊಳ.ಆ ಕೊಳದ ನಡುವಲ್ಲೊಂದು ಪುಟ್ಟ ದ್ವೀಪ. ಆ ದ್ವೀಪದ ನಡುವೆ ಒಂದು ಗಿಡ. ಅದರಲ್ಲಿ ಅರಳಿದ ಬಂಗಾರಬಣ್ಣದ ಹೂವು. ಆ ಹೂವಿನ ಪರಿಮಳ ಮೈಲುಗಟ್ಟಲೆ ಹಾದು ಅವಳನ್ನು ಪುಲಕಗೊಳಿಸಿತು.
ನಂಗೆ ಆ ಹೂವು ಬೇಕು ಅಂದಳು. ಇದೋ ತಂದುಕೊಟ್ಟೆ, ಇಲ್ಲೇ ಕಾಯುತ್ತಿರು ಎಂದು ಅವನು ಕೊಳಕ್ಕೆ ಜಿಗಿದ. ಕೈ ಬೀಸುತ್ತಾ ಬೀಸುತ್ತಾ ಈಜಿದ. ಈಜುತ್ತಲೇ ಹೋದ. ಅವಳು ದಡದಲ್ಲಿ ಅವನ ಪ್ರೀತಿಯ ಆಳಕ್ಕೆ, ತೀವ್ರತೆಗೆ ಬೆರಗಾಗಿ ಕಾಯುತ್ತ ಕೂತಳು.ಅವನು ಈಜುತ್ತಿದ್ದ. ದ್ವೀಪ ದೂರದಲ್ಲಿ ಕಾಣಿಸುತ್ತಿತ್ತು. ಕಾಯುತ್ತಿದ್ದ ಅವಳು ನೆನಪಾಗುತ್ತಿದ್ದಳು. ಕೈ ಸೋಲುತ್ತಿತ್ತು. ಹಾಗೆ ಅದೆಷ್ಟು ಕಾಲ ಈಜಿದನೋ ಅವನಿಗೂ ಗೊತ್ತಿರಲಿಲ್ಲ. ಅವಳೆಷ್ಟು ಕಾಲ ಕಾದಿದ್ದಳೋ ಅವಳಿಗೂ ನೆನಪಿರಲಿಲ್ಲ. ಕಾಯುವುದು ಬೇಜಾರು ಅಂತ ಅವಳಿಗೂ ಅನ್ನಿಸಲಿಲ್ಲ. ಈಜುವುದು ಸುಸ್ತು ಅಂತ ಅವನೂ ಭಾವಿಸಲಿಲ್ಲ. ಕೊನೆಗೂ ದ್ವೀಪ ಸಮೀಪಿಸಿತು. ದೂರದಿಂದ ಕಂಡ ಹೂವು ಈಗ ಕೈಯಳತೆಯಲ್ಲಿ. ಅವನು ಲಗುಬಗೆಯಿಂದ ಹೋಗಿ ಆ ಘಮಘಮಿಸುವ ಹೂವನ್ನು ಸಮೀಪಿಸಿದ. ಒಂದಿಷ್ಟೂ ನಲುಗದಂತೆ ಅದನ್ನು ಕೊಯ್ದ. ಮತ್ತೆ ಕೊಳಕ್ಕೆ ಜಿಗಿದು ಈಜತೊಡಗಿದ. ಹೋದ ದಾರಿಯೇ ಮರಳಿ ಬರುವುದಕ್ಕೆ. ಹೋದಷ್ಟೇ ದೂರ ವಾಪಸ್ಸಾಗುವುದಕ್ಕೆ. ಮತ್ತೆ ಕಾಲಾತೀತನಾಗಿ ಈಜಿದ. ಅವಳ ಹಂಬಲವನ್ನು ಈಡೇರಿಸಿದ ತೃಪ್ತಿ ಅವನ ತೋಳುಗಳಿಗೆ ಬಲಕೊಟ್ಟಂತಿತ್ತು. ಕೊನೆಗೂ ಅವನು ಮರಳಿ ದಡ ಸೇರಿದಾಗ ಋತುಗಳು ಅರಳಿ, ಮರಳಿ, ಹೊರಳಿದ್ದವು. ಅವಳು ಕಲ್ಲಿನ ಮೇಲೆ ಕುಳಿತೇ ಇದ್ದಳು,ಕಾಯುತ್ತಾ. ಅವನಿಗಾಗಿ ಕಾಯುತ್ತಿದ್ದೇನೆ ಎನ್ನುವುದನ್ನೂ ಅವಳು ಮರೆತಂತಿತ್ತು. ಗೆದ್ದ ಹುಮ್ಮಸ್ಸಿನಲ್ಲಿ ಅವನು ಅವಳನ್ನು ಸಮೀಪಿಸಿದರೆ ಅವಳಲ್ಲ. ಅಲ್ಲಿ ಕೂತಿದ್ದವಳು ಮುಪ್ಪಡರಿದ ಹೆಂಗಸು. ಅವಳ ದೃಷ್ಟಿಯೂ ಮಸುಕಾಗಿತ್ತು. ಅವನು ಬಂದಿದ್ದೂ ಅವಳಿಗೆ ಕಾಣಿಸಿರಲಿಲ್ಲ.ಅವನು ದಿಗ್ಭ್ರಮೆಗೊಂಡು ತನ್ನನ್ನು ನೋಡಿಕೊಂಡ. ತೋಳುಗಳು ನಿರಿಗೆಗಟ್ಟಿದ್ದವು. ತಲೆ ಬೋಳಾಗಿತ್ತು. ಕೊಳದ ತಡಿಗೆ ಹೋಗಿ ನೀರಲ್ಲಿ ತನ್ನ ಪ್ರತಿಬಿಂಬ ನೋಡಿಕೊಂಡರೆ ಇಳಿಸಂಜೆಯಲ್ಲಿದ್ದ ಮುದುಕ, ಪ್ರತಿಫಲಿಸಿದ.
ತಾರುಣ್ಯ ಕಳಕೊಂಡ ಅವಳಿಗೆ ಅವನು ಆ ಹೂವು ಕೊಟ್ಟ. ಹೂ ತರಲು ಹೋದವನು ಅವನಲ್ಲ ಎಂದು ಅವಳು ಅಂದುಕೊಂಡಳು. ಹೂವು ಕೇಳಿದವಳು ಇವಳಲ್ಲ ಅನ್ನೋದು ಅವನಿಗೂ ಅನ್ನಿಸಿತು. ತಾನು ಕಾಯುತ್ತಲೇ ಇರಬೇಕಾಗಿತ್ತು ಎಂದು ಅವಳು, ನಾನು ಈಜುತ್ತಲೇ ಇರಬೇಕಾಗಿತ್ತು ಎಂದು ಅವನು ಅಂದುಕೊಂಡು ನಿಟ್ಟುಸಿರಿಟ್ಟರು. ಅವಳು ಕೈಯೆತ್ತಿ ದೂರದ ದ್ವೀಪ ತೋರಿಸುತ್ತ, ನಂಗೆ ಆ ಹೂವು ಬೇಕು ಅಂದಳು. ಅಲ್ಲಿ ಮತ್ತೊಂದು ಹೂವು ಆಗಷ್ಟೇ ಮೊಗ್ಗೆಯರಳಿಸುತ್ತಿತ್ತು. ಇದೋ ತಂದೆ, ಇಲ್ಲೇ ಕಾಯುತ್ತಿರು ಎಂದು ಹೇಳಿ ಅವನು ನೀರಿಗೆ ಜಿಗಿದ.
ಹೊಸ ಯೌವನದಲ್ಲಿ ಈಜುತ್ತಾ ಹೋದ. ಅವಳು ಹೊಸ ಕಾತರದಲ್ಲಿ ಲಂಗ ನಿರಿಗೆ ಸರಿಪಡಿಸಿಕೊಂಡು ಕಾಯುತ್ತಾ ಕೂತಳು.
-2-
ಬದುಕು ಒಡಂಬಡಿಕೆಯಲ್ಲಿ ಇದೆಯೋ, ಈಡೇರಿಕೆಯಲ್ಲೋ ಅನ್ನುವ ದ್ವಂದ್ವ ನಮ್ಮದು. ಅವನು ಈಜುತ್ತಿದ್ದಷ್ಟು ಹೊತ್ತೂ ಕಾಲ ಸ್ತಬ್ಧ. ಕಾಯುತ್ತಿದ್ದಷ್ಟು ಕಾಲವೂ ಅವಳ ಕೆನ್ನೆ ನುಣುಪು ಕಳಕೊಳ್ಳುವುದಿಲ್ಲ. ಅವಳ ಕಾಯುವಿಕೆ, ಅವನ ಕಾಯಕ- ಎರಡೂ ಮುಗಿದ ತಕ್ಷಣ ಅವತಾರ ಸಮಾಪ್ತಿಯಾಗುತ್ತದೆ. ಆ ಬದುಕಿಗೆ ಉದ್ದೇಶಗಳೇ ಇಲ್ಲ. ಜೀವಮಾನಪೂರ್ತಿ ಈ ಕ್ಷಣಕ್ಕೋಸ್ಕರ ಕಾಯುತ್ತಿದ್ದೆ ಅನ್ನಿಸುವಂಥ ಕ್ಷಣವೊಂದು ಥಟ್ಟನೆ ಹಾಜರಾಗಿಬಿಟ್ಟರೆ ಅಲ್ಲಿಗೆ ಮುಕ್ತಿ. ಜ್ಞಾನೋದಯ ಆಗುವ ತನಕ ಮಾತ್ರ ಹುಡುಕಾಟ. ಒಮ್ಮೆ ಅರಿವು ಬೆಳಕಾದರೆ,ಆಮೇಲೆ ಅರಿವೇ ಇರುವುದಿಲ್ಲ. ಇಡಿಯಾಗಿ ದಕ್ಕಿದ್ದು ಯಾವುದೂ ನಮ್ಮದಲ್ಲ. ದಕ್ಕುವ ತನಕದ ಹೋರಾಟವೇ ಬದುಕು. ಜೀವಿಸಿದರೆ ಮಾತ್ರವೇ ಜೀವನ. ಜೀವಿಸುವುದು ಅಂದರೆ ಏನು? ಕ್ಷಣಾರ್ಧದಲ್ಲಿ ಎಲ್ಲವೂ ನಡೆದುಹೋಗುತ್ತದೆ. ಪುಟ್ಟಹುಡುಗನಿಗೆ ಕಾರು ಓಡಿಸುವ ಕನಸು.ದೊಡ್ಡವನಾಗುತ್ತಾ ಆಗುತ್ತಾ ಅದೊಂದು ಸಹಜ ಆಶೆ. ಕೊನೆಗೊಂದು ದಿನ ಕಾರು ಕೈಗೆ ಬರುತ್ತದೆ. ಒಂದಷ್ಟು ದಿನ ಕಾರಿನ ಧ್ಯಾನ. ಆಮೇಲೆ ಎರಡೋ ಮೂರೋ ಕಾರು ಕೊಳ್ಳುವಷ್ಟು ಶ್ರೀಮಂತನಾಗುತ್ತಾನೆ. ಮನೆಯಂಗಳದಲ್ಲಿ ಕಾರುಗಳು ನಿಂತಿರುತ್ತವೆ. ಡ್ರೈವರ್ ಕಾರು ಓಡಿಸುತ್ತಾನೆ. ಅವನು ಗಂಭೀರವಾಗಿ ಹಿಂದಿನ ಸೀಟಲ್ಲಿ ಕೂತಿರುತ್ತಾನೆ. ಒಂದು ಕಾಲದ ಕಾರು ಓಡಿಸುವ ಆಸೆಯನ್ನು ನುಂಗಿಹಾಕಿದ್ದು ಯಾವುದು? ಕಾರು ಕೇವಲ ಇಲ್ಲಿಂದ ಅಲ್ಲಿಗೆ ಆರಾಮಾಗಿ ತಲುಪಿಸುವ ವಾಹಕ ಮಾತ್ರ ಎಂದು ಅರಿವಾದ ಕ್ಷಣ ಅದರ ಮಾಂತ್ರಿಕತೆ ಮಾಯ.ವಿಮಾನವನ್ನು ನೆಲದಲ್ಲಿ ನಿಂತು ನೋಡಿದರಷ್ಟೇ ಅಚ್ಚರಿ. ಒಳಗೆ ಕುಳಿತವರಿಗೆ ಅದು ಕೇವಲ ವಾಹನ!
ಒಂದು ವಿಚಿತ್ರ ಕತೆಯನ್ನು ಇತ್ತೀಚಿಗೆ ಗೆಳೆಯನೊಬ್ಬ ಹೇಳಿದ. ಮಲೆಯಾಳಂ ಲೇಖಕರೊಬ್ಬರು ಬರೆದ ಕತೆಯದು. ಒಂದೂರಲ್ಲಿ ಒಂದು ಬಡಕುಟುಂಬ. ಸೋರುವ ಮನೆ. ಹೆಂಡತಿ ಸೋರುವ ಜಾಗಕ್ಕೆ ಬಿಂದಿಗೆಯಿಟ್ಟು ಮನೆಯೊಳಗೆ ನೀರು ತುಂಬದಂತೆ ಕಾಳಜಿ ಮಾಡುತ್ತಾ, ಮಾಡಿಗೆ ಹೊಸ ಹುಲ್ಲು ಹೊದಿಸುವಂತೆ ಗಂಡನಿಗೆ ಹೇಳುತ್ತಿರುತ್ತಾಳೆ. ಅವನಿಗೋ ಸೋಮಾರಿತನ.ಅವಳ ಬೈಗಳು, ಅವನ ಸೋಮಾರಿತನದಲ್ಲಿ ಸಂಸಾರ ಸಾಗುತ್ತಿರುತ್ತದೆ. ಒಂದು ದಿನ ಗಂಡ ಕಾಡಿಗೆ ಹೋಗುತ್ತಾನೆ. ನದಿಯೊಂದು ಅಡ್ಡವಾಗುತ್ತೆ. ಅದನ್ನು ದಾಟಿಕೊಂಡು ಆಚೆಗೆ ಹೋದರೆ ಅಲ್ಲೊಂದು ಮನೆ. ತನ್ನ ಮನೆಯಂಥದ್ದೇ ಮನೆ. ಅಲ್ಲಿ ತನ್ನ ಹೆಂಡತಿಯಂತೆಯೇ ಕಾಣುವ ಒಬ್ಬಳು. ಆ ಮನೆಯೂ ಸೋರುತ್ತಿರುತ್ತೆ. ಅವಳ ಕಷ್ಟ ನೋಡಲಾರದೆ ಅವನು ಸೂರು ಏರುತ್ತಾನೆ. ಮಾಡಿಗೆ ಹೊಸ ಹುಲ್ಲು ಹೊದೆಸುತ್ತಾನೆ. ಅವಳಿಗೆ ಸಂತೋಷವಾಗುತ್ತದೆ. ಅವನ ಮೇಲೆ ಪ್ರೀತಿ ಉಕ್ಕುತ್ತದೆ. ಅವನು ಅವಳ ಮನೆ ಸರಿಹೋದ ಸಂತೋಷದಲ್ಲಿ ವಾಪಸ್ಸು ಹೊರಡುತ್ತೇನೆ ಅನ್ನುತ್ತಾನೆ. ಅವಳು ಸಣ್ಣ ದನಿಯಲ್ಲಿ ಕೇಳುತ್ತಾಳೆ. ನಿನಗೆ ನನ್ನ ಮೇಲೆ ಪ್ರೀತಿ ಮೂಡಿಯೇ ಇಲ್ಲವಾ? ಅವನೆನ್ನುತ್ತಾನೆ: ಇಲ್ಲವೆಂದರೆ ನನ್ನ ಪ್ರೀತಿಗೆ ವಂಚನೆ ಮಾಡಿದ ಹಾಗೆ.ಹೌದು ಎಂದರೆ ನನ್ನ ಹೆಂಡತಿಗೆ ದ್ರೋಹ ಬಗೆದ ಹಾಗೆ.ಅವನು ಮತ್ತದೇ ನದಿ ದಾಟಿ ಮರಳಿ ಬಂದು ನೋಡಿದರೆ ಅವನ ಮನೆಯ ಮಾಡಿಗೆ ಹೊಸ ಹುಲ್ಲು. ಬೆರಗಾಗಿ ಕೇಳಿದರೆ ಹೆಂಡತಿ ವಿವರಿಸುತ್ತಾಳೆ: ನೀವು ಕಾಡಿಗೆ ಹೋಗಿದ್ದಾಗ ನಿಮ್ಮ ಥರಾ ಇರೋನೊಬ್ಬ ಬಂದಿದ್ದ. ಇದನ್ನೆಲ್ಲ ಸರಿಮಾಡಿದ. ಹೊರಡೋವಾಗ ನನ್ನ ಮೇಲೆ ಪ್ರೀತಿ ಮೂಡಿಲ್ವಾ ಅಂತ ಕೇಳಿದ. ಮೂಡಿಲ್ಲ ಅಂದರೆ ನನ್ನ ಪ್ರೀತಿಗೆ ವಂಚಿಸಿದ ಹಾಗೆ. ಮೂಡಿದೆ ಅಂದರೆ ನನ್ನ ಗಂಡನಿಗೆ ದ್ರೋಹ ಬಗೆದ ಹಾಗೆ ಅಂದೆ. ಸುಮ್ಮನೆ ಹೊರಟು ಹೋದ.ಅವನು ಮನೆಗೆ ಹುಲ್ಲು ಹೊದೆಸಿದವನು ಅವನೇನಾ?ನದಿಯಾಚೆ ಪ್ರತಿಬಿಂಬಿಸಿದ್ದು ಅವನದೇ ಮನೇನಾ? ಅವಳೂ ಇವಳೇನಾ? ಇವನೂ ಅವನೇನಾ? ಇದ್ದಕ್ಕಿದ್ದ ಹಾಗೆ ವಿಸ್ಮಯವೊಂದು ಹೊಕ್ಕು, ಅವರಿಬ್ಬರೂ ಹೊಸಬರಾಗಿಬಿಟ್ಟರಾ? ಗೊತ್ತಿಲ್ಲ, ಮನೆ ಸೋರುವುದು ನಿಂತಿದೆ.

Leave a Reply