ಆಗ ನಾಟಕದವರು ಅಂದುಕೊಂಡಿದ್ದೆ

ನಾನು ಹುಟ್ಟಿ ಬೆಳೆದಿದ್ದೆಲ್ಲಾ ಮೈಸೂರು (ಹುಟ್ಟಿದ ಒಂದು ತಿಂಗಳು ಮಾತ್ರ ಬೆಂಗಳೂರು). ನನ್ನ ಬಾಲ್ಯ ಕಳೆದದ್ದು ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿದ್ದ ವೀವರ್ಸ್‌ ಲೇನ್‌ ಬೀದಿಯಲ್ಲಿ. ಅದನ್ನ ರಾಮಯ್ಯರ್‌ ಸ್ಟ್ರೀಟ್‌ ಅಂತಲೂ ಕರೀತಿದ್ದರು. ಆ ರಸ್ತೆಯಲ್ಲೇ ನಮ್ಮ ತಾತನ ಮನೆ. ನಮ್ಮ ಮನೆಯ ದೊಡ್ಡ ಕಾಂಪೌಂಡಿನಲ್ಲಿ ತಾತ ಕಟ್ಟಿಸಿದ ಇನ್ನೊಂದು ದೊಡ್ಡ ಮನೆಯನ್ನು ಬಾಡಿಗೆಗೆ ಕೊಟ್ಟರು. ಆ ಮನೆಗೆ ಬಾಡಿಗೆಗೆ ಬಂದವರು ಹಿರಿಯ ಸಾಹಿತಿ ವಿ.ಸೀತಾರಾಮಯ್ಯನವರು. ನನಗೆ ನೆನಪಿರುವ ಹಾಗೆ ಪ್ರಾಯಶ: ಅದು 1942ನೇ ಇಸವಿಯ ಒಂದು ದಿನ ವಿ.ಸೀಯವರ ಮನೆಗೊಬ್ಬ ಅತಿಥಿ ಬಂದರು. ಬಿಳಿ ಕಚ್ಚೆಪಂಚೆ, ಬಿಳಿ ಅಂಗಿ, ತೀಕ್ಷ್ಣ ಕಣ್ಣುಗಳು. ಎಂಟು ವರ್ಷದ ನನಗೆ ಸೆಳೆದದ್ದು ಅವರ ಕೂದಲು. ಕುತ್ತಿಗೆವರೆಗೂ ಇಳಿಬಿಟ್ಟ ಕೂದಲು. ಅಂದವಾಗಿ ಮೇಲಕ್ಕೆ ಬಾಚಿದ್ದರು. ಓ ಇವರ ಮನೆಗೆ ಯಾರೋ ನಾಟಕದವರು ಬಂದಿದ್ದಾರೆ ಅಂದುಕೊಂಡೆ. ವಿ.ಸೀಯವರ ಪತ್ನಿ (ಅವರ ಹೆಸರು ಸರಸ್ವತಿ ಇರಬೇಕು. ನೆನಪಾಗುತ್ತಿಲ್ಲ) ಬಳಿ ‘ಅವರ‍್ಯಾರು ಬಂದಿರೋದು’ ಅಂತ ಕೇಳೇಬಿಟ್ಟೆ. ‘ಅವರು ಶಿವರಾಮ ಕಾರಂತರು. ದೊಡ್ಡ ಕಾದಂಬರಿಕಾರರು. ಅವರ ನಾಟಕ ‘ಕಿಸಾಗೋತಮಿ’ ಟೌನ್‌ ಹಾಲಿನಲ್ಲಿ ಆಡಿಸ್ತಾರಂತೆ. ಅದಕ್ಕೇ ಬಂದಿದ್ದಾರೆ. ಇವರಿಗೆ (ಅಂದರೆ ವಿ.ಸೀಯವರಿಗೆ) ತುಂಬಾ ಸ್ನೇಹಿತರು’ ಅಂದರು. ನನ್ನ ಭಾವ ಬೆಸುಗೆಯಲ್ಲಿ ಗಾಢ ಪ್ರಭಾವವನ್ನು ಬೀರಿದ, ನನ್ನ ನೋವು, ದುಃಖ ಸಂಕಷ್ಟಗಳ ದಿನಗಳಲ್ಲಿ ಸಂತೈಸಿ, ಧೈರ್ಯ ತುಂಬಿದ, ಕಾರಂತರೆಂಬ ವಿರಾಟ್‌ ವ್ಯಕ್ತಿತ್ವವನ್ನು ಗೌರವಪೂರ್ವಕವಾಗಿ ನನ್ನದೆಯ ಗುಡಿಯಲ್ಲಿ ಸಂಸ್ಥಾಪಿಸಿಕೊಂಡು ತಲೆ ಬಾಗಿದ ಆ ಜೀವವನ್ನು ನಾನು ಮೊಟ್ಟ ಮೊದಲು ಕಂಡದ್ದು ಹೀಗೆ ನನ್ನ ಎಂಟನೇ ವಯಸ್ಸಿನಲ್ಲಿ. ಕಾರಂತರನ್ನು ಬಾಲ್ಯದಲ್ಲಿ ಕಂಡ ನೆನಪು ಹೀಗೆ ವರ್ಷ ಕಳೆದಂತೆ ಮಸುಕಾಗುತ್ತಾ ಹೋಯ್ತು. ಆದರೆ, ನನ್ನ ಹೈಸ್ಕೂಲು, ಕಾಲೇಜು ದಿನಗಳಲ್ಲಿ ಅವರ ಸಾಕಷ್ಟು ಕಾದಂಬರಿಗಳನ್ನು ಓದಿ ಮುಗಿಸಿದ್ದೆ. ಅವರು ಸೃಷ್ಟಿಸಿದ ಪಾತ್ರಗಳು (ಅವರು ಕಂಡ ವ್ಯಕ್ತಿಗಳದ್ದೇ ಹಾಗಾಗಿ ನಿಜ ಜೀವನದ ವ್ಯಕ್ತಿಗಳೇ ಎಂದು ಅವರೇ ಹೇಳಿದ್ದರು) ಆಡುವ ಮಾತುಗಳು ಮನ ಮುಟ್ಟುವಂತಿರುತ್ತಿತ್ತು. ವರ್ಣನೆಗಳು ಕೂಡ ಅವರು ಕಂಡ ಜಾಗಗಳದ್ದೆ ಕರಾರುವಾಕ್ಕಾಗಿರುತ್ತಿತ್ತು. ನನಗೆ ಇನ್ನೂ ಮನದ ಮೂಲೆಯಲ್ಲಿ ಅಚ್ಚಳಿಯದೆ ನಿಂತ ಒಂದು ಪಾತ್ರವೆಂದರೆ ಅವರ ‘ಅಳಿದ ಮೇಲೆ’ ಕಾದಂಬರಿಯ ಯಶವಂತನ ಪಾತ್ರ. ಯಶವಂತ ನನ್ನ ಮನದ ಮೂಲೆಯಲ್ಲೆಲ್ಲೋ ಜೀವಿಸುತ್ತಿದ್ದಾನೆ. ಪುಟ್ಟ ಹುಡುಗಿಯಾಗಿ 1942ರಲ್ಲಿ ಕಾರಂತರನ್ನು ನಮ್ಮ ಮನೆಯ ಕಾಂಪೌಂಡಿನಲ್ಲೇ ಕಂಡ ನಾನು ಮತ್ತೆ ಭೇಟಿಯಾದದ್ದು 1962ರಲ್ಲಿ ಇಪ್ಪತ್ತು ವರ್ಷಗಳ ಬಳಿಕ. ಎಂಟರ ಪೋರಿಗೆ ಅರ್ಥವಾಗದ ಕಾರಂತರ ಭಾವ, ವ್ಯಕ್ತಿತ್ವ ಇಪ್ಪತ್ತೆಂಟರ ತರುಣಿಗೆ ದಿನಗಳೆದಂತೆ ಗಾಢ ಪ್ರಭಾವ ಬೀರತೊಡಗಿತು. ಮೈಸೂರಿಗೆ ಕಾರಂತರು ಬಂದಾಗಲೆಲ್ಲಾ ಅದು ನನ್ನ ಕೈಂಕರ್ಯವೆಂಬಂತೆ ತಪ್ಪದೆ ಅವರನ್ನು ಭೆಟ್ಟಿಯಾಗಲು ಹೋಗುತ್ತಿದ್ದೆ. ಅವರನ್ನು ಪ್ರತಿಸಾರಿ ಕಂಡು ಮಾತನಾಡಿದಾಗಲೆಲ್ಲ ನನ್ನ ಬೆಳವಣಿಗೆಗೆ ಹೊಸ ನಾಂದಿಗೀತೆಯನ್ನು ಹಾಡುತ್ತಿದ್ದಾರೆ ಎಂಬ ಭಾವನೆಯಂತೂ ನನಗೆ ಬರುತ್ತಿತ್ತು. ಅವರು ನಿಜಕ್ಕೂ ಒಂದು ಓಡಾಡುವ ಜ್ಞಾನದ ಗಣಿ. ಸಹೃದಯತೆ, ಮಾನವೀಯತೆ ಉಳ್ಳ ಚೆಂದದ ಜೀವ. ಅನ್ಯಾಯವನ್ನು ಪ್ರತಿಭಟಿಸುವ ನಿಷ್ಠುರವಾದಿ. ನನಗೆ ಅವರೆಂದರೆ ಪೂಜ್ಯಭಾವ. ಕಾರಂತರು ಬಂದಾಗಲೆಲ್ಲ ಮೈಸೂರಿನ ಮಾಡರ್ನ್‌ ಹಿಂದೂ ಹೋಟೆಲ್‌ನಲ್ಲಿ ಇಳಿದುಕೊಳ್ಳುತ್ತಿದ್ದರು. ರೂಂ ನಂಬರ್‌ ಎಂಟು ಅವರಿಗಾಗಿಯೇ ಮೀಸಲಾಗಿರುತ್ತಿತ್ತು. ಅವರು ಮೈಸೂರು ಯೂನಿವರ್ಸಿಟಿ ಡಿಕ್ಷನರಿ ಕಮಿಟಿ ಮೀಟಿಂಗಿಗೆ ತಪ್ಪದೇ ಬರುತ್ತಿದ್ದರು. ಅವರು ಬರುವ ಮುನ್ನ ನನಗೆ ಪತ್ರ ಹಾಕುತ್ತಿದ್ದರು ಅಥವಾ ಬಲ್ಲವರೊಡನೆ ಹೇಳಿ ಕಳುಹಿಸುತ್ತಿದ್ದರು. ಅದಕ್ಕಾಗೇ ಕಾದವಳಂತೆ ಅವರನ್ನು ಭೆಟ್ಟಿಯಾಗಲು ಹೋಗುತ್ತಿದ್ದೆ. ‘ಅದೇನು ಕಾರಂತರು ಬಂದರು ಅಂದರೆ ಹಾಗೆ ಓಡಿ ಹೋಗ್ತೀಯಾ ಅವರನ್ನು ನೋಡೋಕೆ’ ಅಂತ ಅನ್ನುತ್ತಿದ್ದವರೂ ಇದ್ದರು. ಅವರೇನು ಬಲ್ಲರು ಒಂದು ಅಮೂಲ್ಯ ರತ್ನದ ಬೆಲೆಯನ್ನು. ಕಾರಂತರನ್ನು ನೋಡಲು ಕೆಲವು ಸಲ ಒಬ್ಬಳೇ ಹೋಗುತ್ತಿದ್ದೆ. ಕೆಲವು ಸಲ ಮಕ್ಕಳ ಗುಂಪನ್ನೂ ಕಟ್ಟಿಕೊಂಡು ಹೋಗುತ್ತಿದ್ದೆ. ನಾನೊಬ್ಬಳೇ ಹೋದಾಗ ಅವರ ಸಾಹಿತ್ಯದ ಬಗ್ಗೆ, ಕಾದಂಬರಿಯ ಪಾತ್ರಗಳ ಬಗ್ಗೆ ಪ್ರಶ್ನೆಗಳನ್ನ ಕೇಳುತ್ತಿದ್ದೆ. ಅದಕ್ಕೆ ಅವರ ಉತ್ತರ ಪಡೆಯುತ್ತಿದ್ದೆ. ಮಕ್ಕಳ ಜೊತೆ ಹೋದಾಗ ಕಾರಂತರು ನನ್ನ ಇರವನ್ನು ಮರೆತು ಮಕ್ಕಳೊಂದಿಗೆ ಮಕ್ಕಳಾಗುತ್ತಿದ್ದರು. ಒಮ್ಮೆ ಹೀಗಾಯ್ತು, ಕಾರಂತರನ್ನು ನೋಡಲು ಮಕ್ಕಳ ದಂಡನ್ನೇ ಕರೆದುಕೊಂಡು ಹೋಗಿದ್ದೆ. ನನ್ನ ಉದ್ದೇಶ ಮಕ್ಕಳಿಗೂ ಆ ಹಿರಿಯ ಚೇತನದ ಹರಕೆ ದೊರೆಯಲೆಂದು. ಕಾರಂತರು ಸಿಗರೇಟ್‌ ಸೇದುತ್ತಿದ್ದರು. ನನ್ನ ಚಿಕ್ಕಪ್ಪನ ಮಗಳು ಆರು ವರ್ಷದ ಪೋರಿ ಇದ್ದಕ್ಕಿದ್ದಂತೆ ‘ಥೂ ಸಿಗರೇಟ್‌ ಗಬ್ಬು ವಾಸನೆ’ ಅಂದುಬಿಟ್ಟಳು. ಆದರೆ, ಕಾರಂತರು ‘ಹಾಗಾದ್ರೆ ಸಿಗರೇಟ್‌ ಸೇದೋದು ಬೇಡ್ವೋ’ ಅಂದರು. ಅವಳು ಮತ್ತೆ ‘ಊಹುಂ ಬೇಡ’ ಅಂದಳು. ಕಾರಂತರು ‘ಆಯ್ತು ನೋಡು ಸಿಗರೇಟ್‌ ಸೇದೋದು ಬಿಟ್ಟೆ’ ಅಂತ ಹೇಳಿ ಸಿಗರೇಟ್‌ ಆರಿಸಿ ಆ್ಯಶ್‌ಸ್ಟ್ರೇನಲ್ಲಿ ಹಾಕಿಬಿಟ್ಟರು. ನಂತರ ಪ್ರಾಯಶಃ ಅಂದು ಮಗುವಿನ ಮಾತಿಗೆ ಸಿಗರೇಟ್‌ ಬಿಟ್ಟವರು ನಾಲ್ಕು ವರ್ಷ ಸಿಗರೇಟ್‌ ಸೇದಲೇ ಇಲ್ಲ. ಇನ್ನೊಮ್ಮೆ ಆ ಹಿರಿಯ ಜೀವವನ್ನು ಪುತ್ತೂರಿನ ಬಾಲಭವನದ ಅವರ ಮನೆಯಲ್ಲೇ ಅವರನ್ನು ಕಾಣುವ ಆಸೆಯಿಂದ ಅವರ ಮನೆಗೆ ಹೋಗಿದ್ದೆ. ಎರಡು ದಿನಗಳು ಅವರು ಹಾಗೂ ಅವರ ಪತ್ನಿ ಲೀಲಾ ಕಾರಂತರೊಂದಿಗೆ ಕಳೆದ ಕ್ಷಣಗಳು ಮರೆಯಲಾಗದ ಅಮೃತಗಳಿಗೆಗಳು. ಪ್ರಶಾಂತ ವಾತಾವರಣ. ಆ ಕಾಲದ ಹಳೆಯ ಚಂದದ ಮನೆ. ಬೆಳಿಗ್ಗೆ ಎಂಟಕ್ಕೆಲ್ಲಾ ತಿಂಡಿ. ಒಂದು ಅಥವಾ ಒಂದೂವರೆ ಇಡ್ಲಿ. ಒಂದು ದೋಸೆ ಹೀಗೆ ಅವರ ತಿಂಡಿ ತೀರಾ ಸ್ವಲ್ಪ. ಹನ್ನೊಂದು ಗಂಟೆಗೆಲ್ಲಾ ಊಟ. ಕಾರಂತರು ಊಟಕ್ಕೆ ಕೂರುತ್ತಿದ್ದುದೇ ತಡ, ಎಲ್ಲಿರುತ್ತಿತ್ತೋ ಏನೋ ಒಂದು ಕಾಗೆ ಊಟದ ಕೋಣೆಗೆ ಕಾಣಿಸುವಂತೆ ಹೊರಗಡೆ ಇದ್ದ ಮರದ ಮೇಲೆ ಬಂದು ಕೂರುತ್ತಿತ್ತು. ಕಾರಂತರು ಒಂದು ಹಿಡಿ ಅನ್ನವನ್ನು ಆ ಕಾಕರಾಜನಿಗೆ ಕೊಟ್ಟು ಬಂದು, ನಂತರ ಊಟ ಮಾಡುತ್ತಿದ್ದರು. ಎರಡೂ ದಿನ ನಾನು ಆ ಸೋಜಿಗ ಕಂಡೆ. ಕಾರಂತರ ಪ್ರಾಣಿ, ಪಕ್ಷಿಗಳ ಪ್ರೇಮ ಅಗಾಧ. ನನಗಾಗ ಅವರು ಬರಿಯ ಕಾದಂಬರಿಕಾರರಾಗಿ ಕಾಣಲಿಲ್ಲ. ಒಬ್ಬ ದಿವ್ಯ ಮಾನವ ಜೀವಿಯಾಗಿ ಕಂಡರು. 1972ರಲ್ಲಿ ನಾನು ದೆಹಲಿಗೆ ಹೋಗಿದ್ದಾಗ ಕಾರಂತರ ಲವಲವಿಕೆಯ ಯಕ್ಷಗಾನದ ಕುಣಿತದ ವೈಖರಿ ಕಂಡೆ. ಕಾಲಿಗೆ ಗೆಜ್ಜೆ ಕಟ್ಟಿ ವೇದಿಕೆಯಲ್ಲಿ ಕುಣಿಯುತ್ತಿದ್ದರೆ, ಯುವ ಕಲಾವಿದರು ನಾಚಬೇಕು ಹಾಗಿತ್ತು ಆ ಕುಣಿತ ಭಣಿತದ ವೈಖರಿ. 1995ರಲ್ಲಿ ಕಾರಂತರು ನಮ್ಮ ಸುಗಮ ಸಂಗೀತ ಅಕಾಡೆಮಿಯ ದಶಮಾನೋತ್ಸವದಲ್ಲಿ ಭಾಗಿಯಾಗಿ ನಮ್ಮ ಗೌರವ ಸ್ವೀಕರಿಸಿದ್ದು ನಮ್ಮ ಮತ್ತು ಅಕಾಡೆಮಿಯ ಸೌಭಾಗ್ಯ. ಕಲಾವಿದರನ್ನು ಬೀಳ್ಕೊಡುವ ಆತುರದಲ್ಲಿ ಕಾರಂತರಿಗೆ ಪ್ರಯಾಣ ವೆಚ್ಚವನ್ನು ಕೊಡಲೂ ನಾವು ಮರೆತೆವು. ಅವರು ಕೇಳಲೂ ಇಲ್ಲ. ಬೆಳಗಾಗೆದ್ದು ನಾವು ದಂಪತಿ ಉಲ್ಲಾಸ್‌ ಕಾರಂತರ ಮನೆಗೆ ಹೋಗಿ ಕೊಟ್ಟುಬಂದೆವು. ಕಾರಂತರು ಒಮ್ಮೆ ಲೀಲಾ ಅವರೊಂದಿಗೆ ನಮ್ಮ ಮನೆಗೊಮ್ಮೆ ಬಂದು ನಾಲ್ಕು ಗಂಟೆ ನಮ್ಮೊಂದಿಗೆ ಕಳೆದರು ಎನ್ನುವುದು ನನ್ನ ಬಾಳಿನಲ್ಲಿ ಮರೆಯಲಾಗದ ಘಟನೆ. ಅವರೊಂದಿಗೆ ಲೋಕಾಭಿರಾಮದ ಮಾತುಗಳು. ಅಂದು ಅವರ ಮನಸ್ಸು ತುಂಬಾ ಉಲ್ಲಾಸವಾಗಿತ್ತೆಂದು ಕಾಣುತ್ತೆ. ಗಂಟೆಗಟ್ಟಲೆ ಮಾತಾಡಿದರು. ಕೊನೆಗೆ ‘ನೀರು ಬೇಕು’ ಅಂದರು. ನಾನು ಒಳಗಿನಿಂದ ನೀರು ತಂದು ಅವರ ಕೈಗೆ ಕೊಡುತ್ತ ‘ಇದು ಬೋರ್‌ವೆಲ್‌ ನೀರು’ ಅಂದೆ. ‘ಹೂಂ ಹೂಂ I have bored you well’ ಅಂತ ಅಲ್ಲೊಂದು ಹಾಸ್ಯ ಚಟಾಕಿ ಹಾರಿಸಿದ್ದನ್ನ ಹೇಗೆ ಮರೆಯಲಿ ನಾನು? ಇಷ್ಟೆಲ್ಲ ಇದ್ದೂ ಅವರೊಂದಿಗೆ ಒಂದು ಫೋಟೊ ತೆಗೆಸಿಕೊಳ್ಳಿಲ್ಲವಲ್ಲ ಅಂತ ಈಗ ಒದ್ದಾಡುತ್ತೇನೆ. ಕಾರಂತರ ಬಗ್ಗೆ ಹೇಳಲೇಬೇಕಾದ ಒಂದು ಆಪ್ತ ಸಂಗತಿ ಇದೆ. ಕಾರಂತರಿಗೆ ಸಾಕಷ್ಟು ಪತ್ರಗಳನ್ನು ಬರೆದಿದ್ದೇನೆ. ಅಷ್ಟೂ ಪತ್ರಗಳಿಗೂ ಪತ್ರ ತಲುಪಿದ ಎರಡೇ ದಿನಗಳಲ್ಲಿ ಉತ್ತರ ಬರುತ್ತಿತ್ತು ನನಗೆ. ಅವರ ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ತಪ್ಪದೆ ಉತ್ತರಿಸುವ ರೀತಿಯನ್ನು ಕಂಡಾಗ ಹೇಗೆ ವ್ಯಕ್ತಿತ್ವಗಳನ್ನ ಅವರು ಗೌರವಿಸುತ್ತಾರೆ ಎಂಬ ಅರಿವಾಗುತ್ತಿತ್ತು. 1970ರ ದಶಕದಲ್ಲಿ ನಾನು ವೈಯಕ್ತಿಕವಾಗಿ ನೋವು, ಸಂಕಟಗಳಲ್ಲಿ ಸಿಲುಕಿ ದುಃಖಿಸುತ್ತಾ ನನ್ನ ದುಃಖವನ್ನು ಸಮಸ್ಯೆಗಳನ್ನು ಕಾರಂತರಲ್ಲಿ ಪತ್ರ ಮುಖೇನ ತೋಡಿಕೊಂಡವಳು ನಾನು. ಅವರೆಂದರೆ ಅಷ್ಟು ಸಲಿಗೆ. ಆಪ್ತತೆ ನನಗೆ, ನನಗೆ ಧೈರ್ಯ ನೀಡುತ್ತ, ಸಲಹೆಗಳನ್ನು ಕೊಟ್ಟು ಆ ಗಳಿಗೆಗಳಲ್ಲಿ ಅಣ್ಣನಂತೆ ಬೆನ್ನಿಗಿದ್ದವರು ಅವರು. ಸಮಸ್ಯೆಗೆ ಪರಿಹಾರ ಸೂಚಿಸಿ ಪತ್ರ ಬರೆಯುತ್ತಿದ್ದ ಅವರ ಪತ್ರಗಳು ನನ್ನ ನೋವಿನ ಗಳಿಗೆಗಳಲ್ಲಿ ಸಾಂತ್ವನ ನೀಡುತ್ತಿತ್ತು. ನಾನ್ಯಾರು ಅವರಿಗೆ? ಆದರೆ ಒಂದು ನೊಂದ ಜೀವಕ್ಕೆ ಸಾಂತ್ವನ ನೀಡಿ ಸಂತೈಸಬೇಕೆಂಬ ಅವರ ಮಾನವೀಯ ಕಳಕಳಿಗೆ ಯಾವ ಬೆಲೆ ಕಟ್ಟಲಿ? ಇದು ಆ ದಿವ್ಯಚೇತನ ಮಿಡಿಯುವ ಪರಿ.

author- ಎಚ್‌.ಆರ್‌.ಲೀಲಾವತಿ

courtsey:prajavani.net

https://www.prajavani.net/artculture/article-features/aga-natakadavru-andukondidde-671787.html

Leave a Reply