ಬಹುತ್ವದ ನೆಲೆಗಳ ಮಹಾಯಾತ್ರಿಕ

ಕಳೆದ ಶತಮಾನದ ಮೂರನೆಯ ದಶಕ –ಕರ್ನಾಟಕ, ಕರ್ನಾಟಕತ್ವ, ಇವುಗಳ ಬಗೆಗೂ ಕರ್ನಾಟಕ ಏಕೀಕರಣದ ಬಗೆಗೂ ಚಿಂತಿಸುತ್ತ, ನಾಡಿನಲ್ಲಿ ಎಚ್ಚರ ಹುಟ್ಟಿಸುತ್ತಿದ್ದ ಕಾಲ. ದ.ರಾ.ಬೇಂದ್ರೆ, ಶಂಬಾ ಜೋಶಿ, ಬೆಟಗೇರಿ ಕೃಷ್ಣಶರ್ಮಾ ಮುಂತಾದ ಗೆಳೆಯರ ಬಳಗದ ಧಾರವಾಡದ ಸಾಹಿತಿಗಳೂ, ಸಂಶೋಧಕರೂ ಒಂದಾಗಿ ಕನ್ನಡವನ್ನು ಧ್ಯಾನಿಸುತ್ತಿದ್ದರು. ಇವರೆಲ್ಲರಿಗೂ ಹಿರಿಯರಾಗಿದ್ದ ಆಲೂರು ವೆಂಕಟರಾಯರು, ಮುದವೀಡು ಕೃಷ್ಣರಾಯರು, ದೇಶಪಾಂಡೆ ಗಂಗಾಧರರಾಯರು ಕನ್ನಡವನ್ನು ಬಳಸಿಕೊಳ್ಳುವಲ್ಲಿ ಬೆಳೆಸುವಲ್ಲಿ ನಡೆಸುತ್ತಿದ್ದ ಹೋರಾಟ ಅನನ್ಯವಾಗಿತ್ತು. ಇಂಥ ಸಂದರ್ಭದಲ್ಲೇ ಶಂ.ಬಾ.ಜೋಶಿ ಅವರ ‘ಕಣ್ಮರೆಯಾದ ಕನ್ನಡ’ 1933ರಲ್ಲಿ ಪ್ರಕಟವಾಯಿತು. ದ.ರಾ.ಬೇಂದ್ರೆ ಅವರ ಮೊದಲ ಕವನ ಸಂಕಲನ ‘ನಾದಲೀಲೆ’ ಪ್ರಕಟಗೊಂಡದ್ದು ಈ ಸರಿಸುಮಾರಿನಲ್ಲೇ. ಉತ್ತರ ಕರ್ನಾಟಕದ ವಿದ್ವಾಂಸರು ತ್ರಿಭಾಷಾ ಪರಿವಾರದಲ್ಲಿದ್ದವರೇ. ಕನ್ನಡ-ಸಂಸ್ಕೃತ-ಮರಾಠಿ-ಇವರೆಲ್ಲರ ತಿಳಿವಳಿಕೆಯಲ್ಲಿದ್ದರೂ ಕನ್ನಡವು ಇವರೆಲ್ಲರ ಹೃದಯ ಕೇಂದ್ರವಾಗಿತ್ತು. ಆಗ್ಗೆ ಧಾರವಾಡ-ಬೆಳಗಾವಿ ಮರಾಠಿಮಯವಾಗಿದ್ದವು. ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯಾದ ಮೇಲೆ ಕನ್ನಡದ ಹಿರಿಮೆಗೆ ಗರಿ ಮೂಡಿತು. ಅಲ್ಲಿ ಇತಿಹಾಸ ಸಂಶೋಧನ ಮಂಡಳ ಅಸ್ತಿತ್ವಕ್ಕೆ ಬಂದು ಕನ್ನಡದ ಜಾಗೃತಿಗೆ ಕೋಡುಮೂಡಿತು. ಇವೆಲ್ಲ ಕೇವಲ ಒಂದೆರಡು ವರ್ಷಗಳಲ್ಲಿ ನಡೆದ ಸಂಗತಿಗಳಲ್ಲ. ‘ಕನ್ನಡವು ಕನ್ನಡವ ಕನ್ನಡಿಸುತಿರಬೇಕು’ ಎಂಬ ಬೇಂದ್ರೆಯವರ ಕವಿವಾಣಿ ಕ್ರಮಕ್ರಮವಾಗಿ ಅಸ್ತಿತ್ವಕ್ಕೆ ಬರಬೇಕಾದರೆ ಹಲವು ದಶಕಗಳೇ ಬೇಕಾದುವು. ಇದು ಕನ್ನಡವನ್ನು ಉತ್ತರಕರ್ನಾಟಕದ ಕನ್ನಡಧೀರರು ರಕ್ಷಿಸಿ ಕಟ್ಟಿದ ಪರಿ. ಇಂಥ ಪಾವನಪಂಕ್ತಿಯಲ್ಲಿ ಶಂ.ಬಾ. ಜೋಶಿ ಅಗ್ರಮಾನ್ಯ ಎನಿಸಿಕೊಂಡರು. ಬಾಲ್ಯದ ದಿನಗಳಲ್ಲಿ… ಶಂಬಾ ಅವರು ಬೆಳಗಾವಿ ಜಿಲ್ಲಾ ಸವದತ್ತಿ ತಾಲ್ಲೂಕಿನ ಗುರ್ಲಹೊಸೂರಿಗೆ ಸೇರಿದವರು (ಈ ಊರು ಮಲಪ್ರಭಾ ಪ್ರವಾಹದಿಂದ ಮುಳುಗಿಹೋಯಿತು). ಇವರ ಮನೆತನ ವೈದಿಕ ವಿದ್ಯೆಗೆ ಹೆಸರಾಗಿತ್ತು. ಮನೆಯಲ್ಲಿ ಗಾರ್ಹಪತ್ಯಾಗ್ನಿ ಸದಾ ಉಜ್ವಲಿಸುತ್ತಿತ್ತು. ಇವರ ಜನ್ಮನಾಮ ಶಂಕರ. ತಂದೆಯ ಹೆಸರು ಬಾಳದೀಕ್ಷಿತ. ಮನೆತನದ ಹೆಸರು ಜೋಶಿ. ಇವರು ಹುಟ್ಟಿದ್ದು 1896 ಜನವರಿ 4ರಂದು. ಇವರು ಚಿತ್ಪಾವನ ವಂಶಕ್ಕೆ ಸೇರಿದ ಬ್ರಾಹ್ಮಣರು. ಶಂಬಾ ಅವರ ತಂದೆ ‘ಪವಮಾನಸೂಕ್ತ’ವನ್ನು ಪ್ರತಿನಿತ್ಯ ಹೇಳುತ್ತಿದ್ದರಂತೆ. ತಾಯಿ ಉಮಾಬಾಯಿ ಕಿರ್ಲೋಸ್ಕರ ನಾಟಕ ಕಂಪನಿಯ ನಾಟಕಗಳಲ್ಲಿ ಬರುವ ಹಾಡು -ಸಂಭಾಷಣೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದರಂತೆ. ಹೀಗೆ ಒಂದು ಕಡೆ ತಂದೆಯಿಂದ ವೇದಜ್ಞಾನ; ಮತ್ತೊಂದು ಕಡೆ ತಾಯಿಯಿಂದ ಸಾಹಿತ್ಯ ಜ್ಞಾನ ಇದಕ್ಕೆಲ್ಲ ನೀರೆರೆಯುವಂತೆ ಗುರ್ಲಹೊಸೂರಿನ ಪ್ರಶಾಂತ ವಾತಾವರಣ. ಗುರ್ಲಹೊಸೂರು ಮುಳುಗಡೆಯಾದ ಮೇಲೆ ಧಾರವಾಡಕ್ಕೆ ಬಂದು ಶಂಬಾ ನೆಲೆಸಿದರು. ಇವರ ಅಣ್ಣ ಪುಣೆಯಲ್ಲಿ ವೈದಿಕವೃತ್ತಿಗೆ ನೆಲೆನಿಂತುಕೊಂಡರು. ಲೋಕಮಾನ್ಯ ತಿಲಕರು ಅಣ್ಣನ ಹಿರಿಯ ಸ್ನೇಹಿತರು. ಹೀಗೆ, ಸ್ವಾತಂತ್ರ್ಯಹೋರಾಟ-ವೈದಿಕವಿದ್ಯೆ-ಸಮಾಜಸೇವೆ ಇವೆಲ್ಲವನ್ನೂ ಒಡಗೂಡಿಕೊಂಡಿದ್ದ ವಿಶಿಷ್ಟ ಮನೆತನ ಇವರದಾಗಿತ್ತು. ಶಂಬಾ ಅವರು ಧಾರವಾಡ ಸರ್ಕಾರಿ ಟ್ರೈನಿಂಗ್ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ. ಕಾವ್ಯ, ವ್ಯಾಕರಣ, ಚರಿತ್ರೆ, ಭಾಷಾಶಾಸ್ತ್ರಗಳಲ್ಲಿ ಮೂಲಗಾಮಿ ದೃಷ್ಟಿಕೋನವನ್ನು ಅಲ್ಲಿ ಬೆಳೆಸಿಕೊಂಡರು. ಸಂಸ್ಕೃತ, ಮರಾಠಿ ಭಾಷೆಯ ತಿಳಿವಳಿಕೆ ಕನ್ನಡದೊಡನೆ ಸೇರಿಕೊಂಡಿತು. ಆಲೂರು ವೆಂಕಟರಾಯರ ಬಳಗಕ್ಕೆ ಸೇರಿದ ಶಂಬಾ ಜಯಕರ್ನಾಟಕದ ಸಾರಥ್ಯವನ್ನು ಕೆಲಕಾಲ ವಹಿಸಿಕೊಂಡಿದ್ದುಂಟು. ಇವರ ಜತೆ ಬೇಂದ್ರೆ ಮತ್ತು ಬೆಟಗೇರಿ ಕೃಷ್ಣಶರ್ಮಾ ಸೇರಿ ಧಾರವಾಡದ ‘ಗೆಳೆಯರ ಗುಂಪು’ ಬೆಳೆಯಿತು. ಆನಂತರ ಹತ್ತಾರು ಕನ್ನಡ ಲೇಖಕರು ಬಂದು ಆ ಗುಂಪಿಗೆ ಸೇರಿಕೊಂಡರು. ಬೆಳಗಾವಿಯಲ್ಲಿ 1924ರಲ್ಲಿ ನಡೆದ ಮೊದಲನೆಯ ಕರ್ನಾಟಕ ಏಕೀಕರಣ ಸಮ್ಮೇಳನದ ಕಾರ್ಯದರ್ಶಿಯ ಹೊಣೆಯನ್ನು ಹೊತ್ತವರು ಶಂಬಾ. ಆನಂತರ ಶಂಬಾ ಅವರ ಮೊದಲ ಸಂಶೋಧನಾ ಕೃತಿ ‘ಕಣ್ಮರೆಯಾದ ಕನ್ನಡ’ (1933) ಪ್ರಕಟವಾಯಿತು. ಅವರು ಈ ಕೃತಿಯನ್ನು ಬರೆಯುವ ಪೂರ್ವದಲ್ಲಿ ಶಾಸನ, ಕಾವ್ಯ, ಚರಿತ್ರೆ, ಸ್ಥಳನಾಮ, ಜಾನಪದ, ಒಗಟು ಮುಂತಾದ ‘ಜ್ಞಾನಶಾಖೆ’ಗಳ ಅಧ್ಯಯನ ನಡೆಸಿದ್ದರು\ಆಕಾಲಕ್ಕೆ ಪ್ರಕಟವಾಗಿದ್ದ ಗೆಜೆಟಿಯರ್‌ಗಳಲ್ಲಿ ಕನ್ನಡದ ಕುರುಹುಗಳನ್ನು ಪತ್ತೆ ಹಚ್ಚುವ ಕೆಲಸವನ್ನು ಅವರು ಮಾಡಿದ್ದರು. ಗಡಿಪ್ರದೇಶಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ಅವರು ಅನ್ವೇಷಿಸಿದ್ದರು. ‘ಕಣ್ಮರೆಯಾದ ಕನ್ನಡ’ ಕೃತಿಯಲ್ಲಿ ‘ಕಾವೇರಿಯಿಂದ ಆ ಗೋದಾವರಿ’ವರೆಗೂ ಇದ್ದ ವಿಶಾಲ ಕನ್ನಡನಾಡು ‘ಕುಗ್ಗಲು’ ಕಾರಣವಾದ ‘ಕಾರಣ ಮೀಮಾಂಸೆ’ಯನ್ನು ಶಂಬಾ ಮೊತ್ತಮೊದಲ ಬಾರಿಗೆ ಪರಿಶೋಧಿಸಿದರು. ನೃಪತುಂಗ ಚಕ್ರವರ್ತಿ ಆಳ್ವಿಕೆ ಮಾಡುತ್ತಿದ್ದ 9ನೆಯ ಶತಮಾನದ ನಂತರ ಕನ್ನಡಪ್ರದೇಶಗಳು ಕ್ರಮಕ್ರಮವಾಗಿ ವಿಶಾಲಕರ್ನಾಟಕದಿಂದ ಕೈಬಿಟ್ಟು ಹೋದುದರ ಹಿಂದಿನ ಕನ್ನಡಜನದ ಮನಃಸ್ಥಿತಿಯನ್ನು ಶಂಬಾ ಅನ್ವೇಷಿಸಿದರು. ಅವರ ಈ ಬಗೆಯ ಸಾಂಸ್ಕೃತಿಕ ಅಧ್ಯಯನ ಆ ಕಾಲಕ್ಕೆ ವಿಶಿಷ್ಟವಾಗಿತ್ತು. ಅವರ ಪರಿಶೋಧನೆಯ ಹಿಂದೆ ವರ್ತಮಾನದ ಕನ್ನಡವಿಷಮ ಪರಿಸ್ಥಿತಿಯೂ ಕೆಲಸ ಮಾಡಿತ್ತು. ಆ ವೇಳೆಗಾಗಲೇ ಆಲೂರರ `ಕರ್ನಾಟಕ ಗತವೈಭವ’ ಪ್ರಕಟವಾಗಿತ್ತು. ಅದು ಕನ್ನಡಿಗರ ಹಿರಿಮೆ-ಗರಿಮೆಯನ್ನು ಸಾರುತ್ತಿತ್ತು. ಆದರೆ, ಶಂಬಾ ಇಷ್ಟಕ್ಕೆ ತೃಪ್ತಿಪಡಲಿಲ್ಲ. ಅವರು ‘ನಾಲ್ಪೇಸುಖಮಸ್ತಿ ಭೂಮೈವ ಸುಖಂ’ ಎಂಬ ಜಾತಿಗೆ ಸೇರಿದವರು! ಆ ಕಾಲಕ್ಕೆ ‘ಸ್ಥಳನಾಮ’ಗಳ ಅಧ್ಯಯನ ಏನೇನೂ ಆಗಿರಲಿಲ್ಲ. ಕನ್ನಡ, ಕಂನಾಡು, ಕರ್ಣಾಟ, ಕರ್ನಾಟಕ ಈ ಹೆಸರುಗಳ ಹಿಂದಿರುವ ಚಾರಿತ್ರಿಕ ಸತ್ಯದ ಹುಡುಕಾಟಕ್ಕೆ ಶಂಬಾ ತೊಡಗಿದರು. ಈ ಹುಡುಕಾಟದ ಫಲವಾಗಿ ‘ಕನ್ನಡದ ನೆಲೆ’ (1939), ‘ಎಡೆಗಳು ಹೇಳುವ ಕಂನಾಡ ಕತೆ’ (1947) ಹುಟ್ಟಿಕೊಂಡವು. ಇವುಗಳಲ್ಲಿ `ಎಡೆಗಳು ಹೇಳುವ ಕಂನಾಡ ಕತೆ’ ಕನ್ನಡ ಜ್ಞಾನಕ್ಷೇತ್ರಕ್ಕೂ ಸ್ಥಳನಾಮವಿಜ್ಞಾನಕ್ಕೂ ಆಚಾರ್ಯಕೃತಿಯಾಗಿ ಪರಿಣಮಿಸಿತು. ಮಂಜೇಶ್ವರದ ಗೋವಿಂದ ಪೈ ಮತ್ತು ಮಹಾವಿದ್ವಾಂಸರಾದ ಡಾ.ಅಂಬಳೆ ವೆಂಕಟಸುಬ್ಬಯ್ಯ ಈ ಇಬ್ಬರೂ ಶಂಬಾ ನಡೆಸಿದ `ಕಂನಾಡು’ ಕುರಿತಾದ ಮೂಲಗಾಮಿ ಸಂಶೋಧನೆಯ ವೈಧಾನಿಕತೆಯನ್ನು ಮೆಚ್ಚುಗೊಂಡವರಲ್ಲಿ ಪ್ರಮುಖರು. ಶಂಬಾ ಒಬ್ಬ ಮೂಲಗಾಮಿ ಅನ್ವೇಷಕ. ಅವರ ಅನ್ವೇಷಣವಿಧಾನ ಅಕಾಡೆಮಿ ವಲಯದಿಂದ ಆಚೆಗೆ ಇರುತ್ತಿತ್ತು. ಒಂದು ಸಂಗತಿಯನ್ನು ಪಟ್ಟಾಗಿ ಹಿಡಿದರೆ ಮತ್ತೊಂದರ ಜತೆ ಸಕೀಲಸಂಬಂಧವನ್ನು ಅದು ಹೊಂದಿರುತ್ತಿತ್ತು. ಕನ್ನಡಿಗರು ಎಲ್ಲಿದ್ದರು? ಅವರಿದ್ದ ಕಂನಾಡ ನೆಲೆ ಯಾವುದೆಂಬುದಕ್ಕೆ ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಶಾಸನ, ಚರಿತ್ರಗಳ ಮಾಹಿತಿಗಳನ್ನು ಮಾತ್ರ ಶಂಬಾ ಲೆಕ್ಕಕ್ಕೆ ಹಿಡಿಯಲಿಲ್ಲ. ಇವುಗಳ ಜತೆಗೆ ಸ್ಥಳನಾಮಗಳು, ಗಡಿರೇಖೆಗಳ ವಿವರಗಳು, ಸಂಸ್ಕೃತ-ಮರಾಠಿಗಳಲ್ಲಿ ದೊರಕುವ ಅನ್ಯಾನ್ಯ ಸಂಗತಿಗಳು, ಕಾವ್ಯ-ಪುರಾಣಗಳಲ್ಲಿ ಉಲ್ಲೇಖಗೊಂಡಿರುವ ಮಾಹಿತಿಗಳನ್ನು ತಮ್ಮ ಸಂಶೋಧನೆಗೆ ವಿಪುಲವಾಗಿ ಬಳಸಿಕೊಂಡರು. ವರ್ತಮಾನದ ಸಂಗತಿಗಳ ಮೂಲಕ ಭವಿಷ್ಯತ್ತಿನ ಬೆಳಕನ್ನು ಕಾಣಬೇಕಿದೆ ಎಂಬ ದೃಢವಾದ ನಿಲುವನ್ನು ಅವರು ಹೊಂದಿದ್ದರು. ಇದು ಅವರ ಸಂಶೋಧನೆಯ ಹಿಂದಿನ ತಾತ್ತ್ವಿಕ ಮೀಮಾಂಸೆಯೂ ಆಗಿತ್ತು. ಶಂಬಾ ಕಂನಾಡ ನೆಲೆಯಿಂದ ಭಾರತೀಯ ಸಂಸ್ಕೃತಿಯ ನೆಲೆಗೆ ಜಿಗಿದರಷ್ಟೆ. ಅದು ಒಂದರೊಡನೊಂದಗಿನ ಸಂಬಂಧವನ್ನು ಸೂಚಿಸುತ್ತದೆ. ಅವರು ಬರೆದ ‘ಹಾಲುಮತದರ್ಶನ’ (1960) ಶೈವ-ವೈಷ್ಣವ ಸಂಪ್ರದಾಯಗಳ ತಲಸ್ಪರ್ಶಿ ಅಧ್ಯಯನಕ್ಕೆ ಕಾರಣವಾಯಿತು. ಕನ್ನಡಿಗರು ಆರಾಧಿಸುತ್ತಿದ್ದ ‘ದೈವ’ಗಳ ನೆಲೆಯನ್ನು ಪತ್ತೆಹಚ್ಚುವ ಕಾರ್ಯಕ್ಕೆ ಶಂಬಾ ಕೈಹಾಕಿದರು. ಜಾನಪದ ದೈವ, ಶಿಷ್ಟದೈವ, ವೈದಿಕದೈವಗಳ ಲೋಕವನ್ನು ಅವರು ಪ್ರವೇಶಿಸಿದರು. ಇದು ಮತಧರ್ಮ ವಿಚಾರಕ್ಕೆ ಪರೋಕ್ಷವಾಗಿ ಇಂಬು ನೀಡಿತು. ಪ್ರತಿಯೊಂದು ಸಮುದಾಯಗಳ ಆರಾಧನ ಕ್ರಮ, ಅದರ ಹಿಂದಿರುವ ಸಾಂಸ್ಕೃತಿಕ ಸಂಗತಿ-ವಿಸಂಗತಿಗಳ ಕಡೆ ಅವರು ಗಮನವಿಟ್ಟು ಶೋಧಿಸಿದರು. ಇದು ಕನ್ನಡ ಜಗತ್ತಿನಲ್ಲಿ ನಡೆದ ಅಪೂರ್ವ ಸಂಶೋಧನಕ್ರಮ. ಆ ಕಾಲಕ್ಕೆ `ಪುರಾಣವಿಜ್ಞಾನ’ ಇನ್ನೂ ಶೈಶವಾವಸ್ಥೆಯಲ್ಲಿತ್ತು. ಆದರೆ, ಶಂಬಾ ಆಚಾರಗಳಿಗೂ ವಿಚಾರಗಳಿಗೂ ಒಂದಕ್ಕೊಂದು ಸಂಬಂಧ ಉಂಟೆಂದು ಪ್ರತ್ಯಕ್ಷ-ಪ್ರಮಾಣ ಮಾಡಿ ತೋರಿಸತೊಡಗಿದರು. ಶಂಬಾ ಅವರ ಸಂಶೋಧನ ದಿಕ್ಕನ್ನು ಬದಲಿಸಿದ್ದು ‘ಋಗ್ವೇದ ಸಾರ: ನಾಗಪ್ರತಿಮಾ ವಿಚಾರ’. (1970) ಇದೊಂದು ಬೃಹತ್ ಗ್ರಂಥ. ಈ ಗ್ರಂಥವು ಅವರ ಎರಡು ದಶಕಗಳ ತೌಲನಿಕ ಅಧ್ಯಯನದ ಫಲವೆಂದರೆ ತಪ್ಪಾಗಲಾರದು. ಅನಂತರ ಶಂಬಾ ಅವರು, ‘ಪ್ರವಾಹಪತಿತರ ಕರ್ಮ ಹಿಂದೂ ಎಂಬ ಧರ್ಮ’ (1976) ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಕಟವಾಯಿತು. ಅನಂತರ ‘ಬುಧನ ಜಾತಕ’ (1980) ಮತ್ತು ‘ಬಿತ್ತಿದ್ದನ್ನು ಬೆಳಕೊ’ (1984) ಪ್ರಕಟಗೊಂಡವು. ಶಂಬಾ ಅವರು ‘ಮಾನವಜೀವನ’ದ ಅಸ್ತಿತ್ವ ಮತ್ತು ವಿಸ್ತರಣೆಯನ್ನು ಮಾನವನ ಬದುಕಿನಲ್ಲಿಯೇ ಅನ್ವೇಷಿಸಿದರು. ಮಾನವನು ಸಮಷ್ಟಿ ಬದುಕಿಗೆ ತಲೆಬಾಗದೆ, ವ್ಯಷ್ಟಿ ಬದುಕಿನ ಕಡೆಗೆ ಸಾಗಿದ ಕ್ರಮವು ಈ ಮೂರುಕೃತಿಗಳಲ್ಲಿ ಪ್ರತಿಮಿತವಾಗಿವೆ. ಅವರು 1970ರಿಂದ ಆರಂಭಿಸಿದ ವೈವಸ್ವತ ಮನು ಮಾನವಧರ್ಮದ ಆರಾಧನೆ ಕೊನೆಯವರೆಗೂ ಉಳಿದಿತ್ತು. ಅವರು ‘ಎರಡಿಲ್ಲದ ಬಾಳುವೆಯೇ ಪೂರ್ಣಕೃತಿ’ ಎಂಬ ತತ್ತ್ವವನ್ನು ಆದರ್ಶವಾಗಿ ಹಿಡಿದು ನಿಂತರು. ಇದು ಅವರ ಜೀವನವನ್ನು ಮತ್ತು ಸಂಶೋಧನ ಕ್ರಮವನ್ನು ಒಮ್ಮುಖವಾಗಿ ಸೂಚಿಸುತ್ತದೆ. ಶಂಬಾ ಅವರು ಕೊನೆಕೊನೆಗೆ ವೈವಸ್ವತಮನು ಮಾನವಧರ್ಮದ ಆರಾಧಕರಾದರು. ನಾವು ಬೆಳಕಿನ ಉಪಾಸಕರಾಗಬೇಕಿತ್ತು; ಆದರೆ, ಕತ್ತಲಿನ ಉಪಾಸಕರಾಗಿದ್ದೇವೆ. ನಮ್ಮ ಜೀವನಧರ್ಮ ಸಮಷ್ಟಿ ಆಶಯಗಳನ್ನು ಒಳಗೊಂಡಿರಬೇಕಿತ್ತು; ಆದರೆ, ನಾವು ವ್ಯಷ್ಟಿಧರ್ಮದ ಆರಾಧಕರಾಗಿದ್ದೇವೆ. ಇಂಥ ಆಶಯಗಳನ್ನು ಹೊಂದಿದ್ದ ಅವರು ಸಂಕೇತಶಾಸ್ತ್ರ, ಸಂಜ್ಞಾಶಾಸ್ತ್ರ ಹಾಗೂ ಪುರಾಣಶಾಸ್ತ್ರಗಳ ಹಿನ್ನೆಲೆಯಲ್ಲಿ ಪ್ರಾಚೀನ ಗ್ರಂಥಗಳನ್ನು ಪರಿಶೋಧಿಸಿದರು. ಗ್ರೀಕ್, ಈಜಿಪ್ತ್‌, ಸುಮೇರಿಯನ್ ಮತ್ತು ಪರ್ಷಿಯನ್ ಧಾರ್ಮಿಕ ಗ್ರಂಥಗಳ ಅಧ್ಯಯನ ಪ್ರಪಂಚವನ್ನು ಹೊಕ್ಕಿ ಬಂದರು. ಶಂಬಾ ಕೆಲಕಾಲ ಕರ್ನಾಟಕ ಹೈಸ್ಕೂಲಿನ ಶಿಕ್ಷಕರಾಗಿದ್ದರು. ಅನಂತರ 1928ರಿಂದ ವಿಕ್ಟೋರಿಯಾ ಹೈಸ್ಕೂಲಿನ (ಈಗಿನ ವಿದ್ಯಾರಣ್ಯ ಪ್ರೌಢಶಾಲೆ) ಶಿಕ್ಷಕರಾಗಿ 1946ರ ವರೆಗೂ ಇದ್ದರು. ‘ಕಣ್ಮರೆಯಾದ ಕನ್ನಡ’-‘ಮಹಾರಾಷ್ಟ್ರದ ಮೂಲ’ ಇವೆರಡು ಗ್ರಂಥಗಳು ಪ್ರಕಟವಾದ ಮೇಲೆ, ಮಂಜೇಶ್ವರದ ಗೋವಿಂದ ಪೈ ಅವರಲ್ಲಿಗೆ ಒಮ್ಮೆ ಶಂಬಾ ಹೋಗಿದ್ದರಂತೆ. ಆಗ ಪೈಗಳು ಶಂಬಾ ಅವರನ್ನು ಮರದ ತೊಗಟೆಯ ನಾರಿನಿಂದ ಮಾಡಿದ ಭೈರಾಸದ ಮೇಲೆ ಕುಳ್ಳಿರಿಸಿ ಸತ್ಕಾರ ಮಾಡಿದ್ದನ್ನು ಅವರು ಆಗಾಗ್ಗೆ ನೆನಪಿಸಿಕೊಳ್ಳುತ್ತಿದ್ದರು. ‘ಋಗ್ವೇದಸಾರ: ನಾಗಪ್ರತಿಮಾ ವಿಚಾರ’ ಕೃತಿರಚನೆ ಮಾಡಿದ್ದರಷ್ಟೆ. ಅದು ಸಾವಿರಪುಟಗಳಿಗೂ ಮೀರಿದ ಗ್ರಂಥಸ್ವರೂಪವನ್ನು ಪಡೆದಿತ್ತು. ಪ್ರಕಾಶಕರು ಸಿಗದೆ ತೊಳಲುತ್ತಿರುವ ಸಂದರ್ಭದಲ್ಲಿ ಈ ವಿಷಯ ಪ್ರಸಾರಾಂಗದ ಪ್ರಧಾನ ಸಂಪಾದಕರಾಗಿದ್ದ ಕುವೆಂಪು ಅವರಿಗೆ ತಿಳಿಯಿತು. ಅವರು ದೇಜಗೌ ಮೂಲಕ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಿಂದ ಆ ಗ್ರಂಥವನ್ನು ಪ್ರಕಟಿಸಲು ನೆರವಾದರು. ಶಿವರಾಮ ಕಾರಂತರು ಶಂಬಾ ಅವರ ಪುಸ್ತಕಗಳ ಪ್ರಕಟನೆಯಲ್ಲಿ ನೆರವಿಗೆ ನಿಲ್ಲುತ್ತಿದ್ದದ್ದುಂಟು. ಅವರಿಬ್ಬರ ನಡುವೆ ಗೌರವಪೂರ್ಣ ಸ್ನೇಹ-ಸಂಬಂಧಗಳು ಕೊನೆಯವರೆಗೂ ಇದ್ದುವು. ಶಂಬಾ ಅವರು 28 ಸೆಪ್ಟಂಬರ್ 1991ರ ಸಾಯಂಕಾಲ 6.30ರ ಸುಮಾರಿಗೆ ಧಾರವಾಡದ ತಮ್ಮ ಮನೆಯಲ್ಲಿ ಕೊನೆಯುಸಿರನ್ನೆಳೆದು ವೈವಸ್ವತಮನುವಿನಲ್ಲಿ ಲೀನವಾದಾಗ ಹೊರಗೆಲ್ಲ ಬೆಳಕು-ಕತ್ತಲಿನ ಆಟ ನಡೆದಿತ್ತು. ಆಗ ಅವರ ಶ್ರೀಮತಿ ಪಾರ್ವತಿಬಾಯಿ ಆಸ್ಪತ್ರೆಯಲ್ಲಿದ್ದರು. ಸೂರ್ಯೋಪಾಸಕರಾದ ಶಂಬಾ ಅವರನ್ನು ಮರುದಿನ ಬೆಳಿಗ್ಗೆ ಅಗ್ನಿಗೆ ಅರ್ಪಿಸಲು ನಿರ್ಧರಿಸಲಾಯಿತು. ಆದರೆ, ಬೆಳಿಗ್ಗೆ ಪಾರ್ವತಿಬಾಯಿಯವರು ತೀರಿಕೊಂಡಿದ್ದರು. ಜೀವನದುದ್ದಕ್ಕೂ ಸುಖ-ದುಃಖಗಳಲ್ಲಿ ಒಂದಾಗಿದ್ದ ಶಂಕರ-ಪಾರ್ವತಿ ಇಬ್ಬರೂ ಸಾವಿನಲ್ಲೂ ಒಂದಾಗಿ ಚಿತೆಯಲ್ಲಿ ಮಲಗಿದ್ದರು. ಇವರಿಬ್ಬರ ದಾಂಪತ್ಯ ಅವಿಗಲಿತ ಸಂಬಂಧದಂತೆ ಇತ್ತು.

courtsey:prajavani.net

https://www.prajavani.net/artculture/art/shamba-joshi-693527.html

Leave a Reply