ಭಲಾರೆ ಟೋಗೊ!

ರಿಲೇ ಓಟದ ಮಾದರಿಯಲ್ಲಿ ಈ ನಾಯಿಗಳ ಹಲವು ತಂಡಗಳು ಔಷಧಿಯಿದ್ದ ಬುಟ್ಟಿಯನ್ನು 700 ಮೈಲುಗಳಷ್ಟು ದೂರದಿಂದ ಎಳೆದು ತಂದು, ಮಕ್ಕಳ ಜೀವ ಉಳಿಸಿದ್ದು ಮಾನವ ಚರಿತ್ರೆಯಲ್ಲಿ ತುಂಬಾ ವಿಶಿಷ್ಟ ಅಧ್ಯಾಯ.ಹೇಳಿ–ಕೇಳಿ ಅವುಗಳು 1925ರ ಚಳಿಗಾಲದ ದಿನಗಳು. ಅಮೆರಿಕದ ಹಿಮಚ್ಛಾದಿತ ಅಲಸ್ಕಾದ ನೋಮ್‌ ಪಟ್ಟಣದಲ್ಲಿ ‘ಡಿಪ್ತೀರಿಯಾ’ ಕಾಯಿಲೆಯ ಅಟ್ಟಹಾಸ. ಗಂಟಲಲ್ಲಿ ಊತ ಕಾಣಿಸಿಕೊಳ್ಳುವಂತೆ ಮಾಡಿ, ಉಸಿರಾಡುವುದೇ ಅಸಾಧ್ಯ ಎನಿಸುವಂತಹ ವಾತಾವರಣ ಸೃಷ್ಟಿಸುತ್ತಿದ್ದ ಈ ಕಾಯಿಲೆ, ಹೆಚ್ಚಾಗಿ ಕಂದಮ್ಮಗಳನ್ನೇ ಕಾಡುತ್ತಿದ್ದರಿಂದ ‘ಮಕ್ಕಳ ಕತ್ತು ಹಿಸುಕುವ ದೇವತೆ’ ಎಂದೇ ಅದನ್ನು ಕರೆಯಲಾಗುತ್ತಿತ್ತು.ಒಂದಾದ ಮೇಲೆ ಒಂದರಂತೆ ಬಂದು ಅಪ್ಪಳಿಸುತ್ತಿದ್ದ ಮಕ್ಕಳ ಸಾವಿನ ವಾರ್ತೆಗಳು ಆ ಊರಿನ ಜನರನ್ನು ಹಿಂಡಿ ಹಿಪ್ಪೆ ಮಾಡಿಬಿಟ್ಟಿದ್ದವು. ಪಟ್ಟಣದ ಏಕೈಕ ವೈದ್ಯ ಮತ್ತು ನಾಲ್ವರು ನರ್ಸ್‌ಗಳು ಚಿಕಿತ್ಸೆಗೆ ಬೇಕಾದ ವ್ಯಾಕ್ಸಿನ್‌ ಇಲ್ಲದೆ ಅಸಹಾಯಕರಾಗಿ ಕೈಚೆಲ್ಲಿದ್ದರು. ಮನೆಯ ಮುಂದೆ ಆಟವಾಡುತ್ತಾ ಕಾಲ ಕಳೆಯಬೇಕಾದ ಮಕ್ಕಳೆಲ್ಲ ಆಸ್ಪತ್ರೆಯ ಹಾಸಿಗೆಗಳ ಮೇಲೆ ಮಲಗಿದ್ದರು. ಅವರನ್ನು ಗುಣಪಡಿಸಲು ಅಗತ್ಯವಾದ ವ್ಯಾಕ್ಸಿನ್‌ನ ದಾಸ್ತಾನು ಮಾತ್ರ ನೂರಾರು ಮೈಲುಗಳಷ್ಟು ದೂರದಲ್ಲಿತ್ತು.ಬೆನ್ನುಮೂಳೆಯಲ್ಲೂ ನಡುಕ ಹುಟ್ಟಿಸುತ್ತಿದ್ದ ನಿರಂತರ ಹಿಮಪಾತ, ಮೈನಸ್‌ 50 ಡಿಗ್ರಿಗೆ ಜಾರಿದ್ದ ತಾಪಮಾನ, ಹಿಮಬಂಡೆಗಳ ಜಾರುವ ಹಾದಿ, ಕಾಲಿಟ್ಟರೆ ಫಟ್‌ ಅಂತ ಒಡೆಯುತ್ತಾ ಸಾಗರದ ಒಡಲಿನ ದರ್ಶನ ಮಾಡಿಸುತ್ತಿದ್ದ ನೀರ್ಗಲ್ಲುಗಳ ಹಾಸು –ಇಂತಹ ಪ್ರತಿಕೂಲ ವಾತಾವರಣದಲ್ಲಿ ಅಷ್ಟೊಂದು ದೂರ ಓಡಿ ಜೀವರಕ್ಷಕ ಔಷಧಿಯನ್ನು ತರುವವರು ಯಾರು ಎಂದು ನೋಮ್‌ ಪಟ್ಟಣದ ಜನ ಒದ್ದಾಡುತ್ತಿದ್ದರು. ಆಗ ಅವರ ನೆರವಿಗೆ ಆಪದ್ಬಾಂಧವರಾಗಿ ಒದಗಿಬಂದಿದ್ದು ಸುಮಾರು ನೂರು ನಾಯಿಗಳು. ರಿಲೇ ಓಟದ ಮಾದರಿಯಲ್ಲಿ ಈ ನಾಯಿಗಳ ಹಲವು ತಂಡಗಳು ಔಷಧಿಯಿದ್ದ ಬುಟ್ಟಿಯನ್ನು 700 ಮೈಲುಗಳಷ್ಟು ದೂರದಿಂದ ಎಳೆದು ತಂದು, ಮಕ್ಕಳ ಜೀವ ಉಳಿಸಿದ್ದು ಮಾನವ ಚರಿತ್ರೆಯಲ್ಲಿ ತುಂಬಾ ವಿಶಿಷ್ಟ ಅಧ್ಯಾಯ. ರಿಲೇಯ ಅಂತಿಮ ತಂಡವನ್ನು ಮುನ್ನಡೆಸಿ ಔಷಧಿಯನ್ನು ಆಸ್ಪತ್ರೆಗೆ ತಲುಪಿಸಿದ ‘ಬಾಲ್ಟೊ’ ಎಂಬ ನಾಯಿ ಆಗ ಅಕ್ಷರಶಃ ಹೀರೊ ಆಗಿ ಮೆರೆಯಿತು. ಮುಂದೆ ನ್ಯೂಯಾರ್ಕ್‌ ನಗರದ ಸೆಂಟ್ರಲ್‌ ಪಾರ್ಕ್‌ನಲ್ಲಿ ಅದರ ಕಂಚಿನ ಸ್ಮಾರಕವನ್ನೂ ನಿರ್ಮಿಸಲಾಯಿತು. ಈ ಸಾಹಸದ ಕುರಿತು ಬಂದ (1995) ‘ಬಾಲ್ಟೊ’ ಹೆಸರಿನ ಸಿನಿಮಾ ಜಗತ್ತಿನ ಸಿನಿಪ್ರಿಯರ ಹೃನ್ಮನವನ್ನು ಸೆಳೆಯಿತು. ಆದರೆ, ಇಲ್ಲಿ ನಮ್ಮ ಕಥಾನಾಯಕ ‘ಟೋಗೊ’. ಇದು ಸಹ ಔಷಧಿಯನ್ನು ತರುವ ರಿಲೇಯಲ್ಲಿ ಪಾಲ್ಗೊಂಡ ನಾಯಿ. ‘ಬಾಲ್ಟೊ’ ಅಂತಿಮ ಹಂತದ 30 ಮೈಲು ದೂರದಿಂದ ಔಷಧಿಯನ್ನು ತಂದ ತಂಡವನ್ನು ಮುನ್ನಡೆಸಿದರೆ, ‘ಟೋಗೊ’ ತುಂಬಾ ಪ್ರತಿಕೂಲ ವಾತಾವರಣದಿಂದ ಕೂಡಿದ್ದ 250 ಮೈಲು ಉದ್ದದ ನಡುವಿನ ಮಾರ್ಗದಲ್ಲಿ ಆ ಹೊಣೆಯನ್ನು ನಿಭಾಯಿಸಿ, ನಿಜವಾದ ಜೀವರಕ್ಷಕ ಎನಿಸಿತು. ಆ ನಾಯಿಯ ಸಾಹಸದ ಕಥೆಯನ್ನು ಹೇಳುವ ‘ಟೋಗೊ’ ಸಿನಿಮಾವನ್ನು ಈಗ ವಾಲ್ಟ್‌ ಡಿಸ್ನಿ ಪಿಕ್ಚರ್ಸ್‌ ಕಂಪನಿ ನಿರ್ಮಿಸಿದೆ. ಔಷಧಿಯನ್ನು ತರಲು ನಾಯಿಗಳ ರಿಲೇ ನಡೆಸುವುದು ಅಷ್ಟೊಂದು ಅನಿವಾರ್ಯವಾಗಿತ್ತೇ ಎಂಬ ಪ್ರಶ್ನೆ ಮೂಡಬಹುದು. ನೋಮ್‌ ಪಟ್ಟಣದ ಮಕ್ಕಳನ್ನು ಉಳಿಸಲು ದೂರದ ನಗರದಿಂದ ವ್ಯಾಕ್ಸಿನ್‌ನನ್ನು ರೈಲಿನಲ್ಲಿ ಅಲಸ್ಕಾದ ಕಡೆಗೆ ತರಲಾಗಿತ್ತು. ಆದರೆ, ಊರು ಇನ್ನೂ 700 ಮೈಲುಗಳಷ್ಟು ದೂರದಲ್ಲಿ ಇರುವಾಗಲೇ ಹಿಮಪಾತದಿಂದ ಮುಂದಿನ ಮಾರ್ಗಗಳೆಲ್ಲ ಬಂದ್‌ ಆಗಿದ್ದವು. ಪುಟ್ಟ ವಿಮಾನದ (bush plane) ಮೂಲಕ ವ್ಯಾಕ್ಸಿನ್‌ ಅನ್ನು ನೋಮ್‌ನಲ್ಲಿ ಏರ್‌ಡ್ರಾಪ್‌ ಮಾಡುವ ಪ್ರಯತ್ನಗಳು ಸಹ ಕೈಗೂಡಲಿಲ್ಲ. ಆಗ ಎಲ್ಲರ ಚಿತ್ತ ಹೊರಳಿದ್ದು ಈ ನಾಯಿಗಳತ್ತ. ಚಂಡಮಾರುತಗಳ ಅಬ್ಬರದ ಆ ಸನ್ನಿವೇಶದಲ್ಲಿ 20 ಪೌಂಡ್‌ ತೂಕದ ಔಷಧಿಯನ್ನು ನಾಯಿಗಳು ಎಳೆದು ತರುವ ಸಾಹಸ ಮೈನವಿರೇಳಿಸುವಷ್ಟು ರೋಮಾಂಚನಕಾರಿ. ‘ಟೋಗೊ’ ಸೈಬೇರಿಯನ್‌ ತಳಿಯ ನಾಯಿ. ಅದು ಜನಿಸಿದ್ದು 1913ರಲ್ಲಿ. ಜನಿಸಿದಾಗ ಇತರ ನಾಯಿಮರಿಗಳಿಗಿಂತ ಕುಳ್ಳಗಾಗಿದ್ದ ಮತ್ತು ಕೃಶವಾಗಿದ್ದ ಈ ನಾಯಿಯನ್ನು ಅದರ ಮಾಲೀಕ ಲಿಯೊನಾರ್ಡ್‌ ಸೆಪಲಾ, ಮನೆಯಿಂದ ಸಾಗಹಾಕಲು ಯತ್ನಿಸಿದ್ದ. ಪ್ರತಿಬಾರಿ ಅದನ್ನು ಬೇರೆಯವರಿಗೆ ಕೊಟ್ಟು ಬಂದಾಗಲೂ ತಪ್ಪಿಸಿಕೊಂಡು ಸೆಪಲಾ ಅವರ ಮನೆಗೆ ಬರುತ್ತಿದ್ದ ‘ಟೋಗೊ’ ರೇಸ್‌ನಲ್ಲಿ ತೋರಿದ ಕೌಶಲಕ್ಕಾಗಿ ಮಾಲೀಕನ ಅತ್ಯಂತ ನೆಚ್ಚಿನ ನಾಯಿ ಎನಿಸಿತು. 1925ರ ಜನವರಿಯಲ್ಲಿ ಔಷಧಿಯನ್ನು ತರುವ ಈ ರಿಲೇ ನಡೆದಾಗ ‘ಟೋಗೊ’ಗೆ ಆಗಲೇ ಹನ್ನೆರಡರ ಹರೆಯ. ವಯಸ್ಸಾಗಿದ್ದರೂ ಚುರುಕು ಹಾಗೂ ಬಲಶಾಲಿಯಾಗಿದ್ದ ಈ ನಾಯಿ, ಅತ್ಯಂತ ದುರ್ಗಮ ಮಾರ್ಗದಲ್ಲಿ ತಂಡವನ್ನು ಮುನ್ನಡೆಸಿತ್ತು. ಎರಡು ಭೂಭಾಗಗಳ ಮಧ್ಯೆ ನೀರ್ಗಲ್ಲಿನ ಸ್ವರೂಪ ತಾಳಿನಿಂತಿದ್ದ ಸಾಗರವನ್ನು –ಅದೂ ನೀರ್ಗಲ್ಲುಗಳು ಒಡೆದು ನೀರು ಚಿಮ್ಮುವ ಸಂದರ್ಭದಲ್ಲೇ –ಈ ನಾಯಿ ತನ್ನ ತಂಡದೊಂದಿಗೆ ದಾಟುವ (ಈ ಮಾರ್ಗವೇ 40 ಮೈಲುಗಳಷ್ಟು ದೂರ) ಪರಿಯಂತೂ ಬೆಚ್ಚಿಬೀಳಿಸುವಂಥದ್ದು. ‘ಟೋಗೊ’ ಸಿನಿಮಾದಲ್ಲಿ ಒಂದು ಸಾಹಸದ ಸನ್ನಿವೇಶ ಹೀಗಿದೆ. ತೇಲುವ ನೀರ್ಗಲ್ಲಿನ ಮೇಲಿನಿಂದ ನಾಯಿಗಳು ಭೂಭಾಗಕ್ಕೆ ಜಿಗಿಯುವಾಗ ಔಷಧಿಯ ಬುಟ್ಟಿ ನೀರ್ಗಲ್ಲುಗಳ ಮಧ್ಯೆ ಸಿಕ್ಕಿ ಬೀಳುತ್ತದೆ. ಆದರೆ, ‘ಟೋಗೊ’ ಹಗ್ಗ ಹಿಡಿದು ಎಳೆಯುವ ಮೂಲಕ ಬುಟ್ಟಿಯನ್ನು ದಂಡೆಗೆ ತರುತ್ತದೆ. ಇದು ಯಥಾಪ್ರಕಾರ ಹಾಲಿವುಡ್‌ನ ಸಿನಿಮೀಯ ಸಾಹಸದ ಮ್ಯಾಜಿಕ್‌ ಎಂದು ಪ್ರೇಕ್ಷಕರು ಭಾವಿಸಿದರೆ ಅದು ನಾಯಿಯ ಪರಿಶ್ರಮಕ್ಕೆ ಬಗೆದ ಅನ್ಯಾಯ. ಏಕೆಂದರೆ, ‘ಟೋಗೊ’ ಅಕ್ಷರಶಃ ಹೀಗೆಯೇ ಬುಟ್ಟಿಯನ್ನು ಎಳೆದಿತ್ತಂತೆ. ‘ಟೋಗೊ’ ಆಗಿ ಡೀಸೆಲ್‌ ಹೆಸರಿನ ನಾಯಿ, ಅದರ ಮಾಲೀಕನಾಗಿ ವಿಲಿಯಮ್‌ ಜೇಮ್ಸ್‌ ಅವರ ನಟನೆ ಅದ್ಭುತ. ನಿರ್ದೇಶಕ ಎರಿಕ್ಸನ್‌ ಕೋರ್‌ ಹೆಚ್ಚು–ಕಡಿಮೆ ಶತಮಾನದ ಹಿಂದಿನ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ಮರುಸೃಷ್ಟಿಸಿದ್ದಾರೆ. ಅಂದಹಾಗೆ, ಈ ಸಿನಿಮಾ ನಿರ್ಮಾಣಕ್ಕೆ ನಾಲ್ಕು ಕೋಟಿ ಡಾಲರ್‌ (₹ 287 ಕೋಟಿ) ವ್ಯಯಿಸಲಾಗಿದೆ.

author- ಪಿನಾಕ

courtsey:prajavani.net

https://www.prajavani.net/artculture/article-features/how-the-stars-of-togo-feel-about-balto-usurping-the-legacy-of-the-true-hero-dog-697238.html

Leave a Reply