‘ದ.ರಾ.ಬೇಂದ್ರೆ: ಆಧುನಿಕ ಭಾರತೀಯ ಕಾವ್ಯ ಪರಂಪರೆ’-ರಾಷ್ಟ್ರೀಯ ವಿಚಾರ ಸಂಕಿರಣ

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಧಾರವಾಡ, ಇಂದಿರಾಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯ ಮಧ್ಯಪ್ರದೇಶ ಮತ್ತು ದೆಹಲಿ ಕರ್ನಾಟಕ ಸಂಘ ನವದೆಹಲಿ ಇವುಗಳ ಸಂಯುಕ್ತಾಶ್ರಯದಲ್ಲಿ ದೆಹಲಿಯ ಕರ್ನಾಟಕ ಸಂಘದಲ್ಲಿ ‘ದ.ರಾ.ಬೇಂದ್ರೆ: ಆಧುನಿಕ ಭಾರತೀಯ ಕಾವ್ಯ ಪರಂಪರೆ’ ಎಂಬ ವಿಷಯದ ಮೇಲೆ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದ ವರದಿ.

ಬಂಡಾಯೋತ್ತರ ಸಂದರ್ಭದಲ್ಲಿ ಬೇಂದ್ರೆ ಕಾವ್ಯದ ಕುರಿತು ಹೆಚ್ಚಿನ ಅಧ್ಯಯನಗಳು ನಡೆಯಲಿಲ್ಲ. ಈ ಕಾಲಘಟ್ಟದಲ್ಲಿ ಬೇಂದ್ರೆ ಕಾವ್ಯ ಏಕೆ ಹಿನ್ನೆಲೆಗೆ ಸರಿಯಿತು ಎಂದು ತಿಳಿದುಕೊಳ್ಳಬೇಕಿದೆ. ಮಾರ್ಗಭಾಷಾಶೈಲಿ ತೊರೆದು ದೇಶಿ ಭಾಷಾಶೈಲಿಯನ್ನು ಅಳವಡಿಸಿಕೊಂಡಿದ್ದರಿಂದ ಬೇಂದ್ರೆಕಾವ್ಯಕ್ಕೆ ಗಂಭೀರತ್ವ ದಕ್ಕಿತು ಎಂದು ಕವಿ ಎಚ್.ಎಸ್.ಶಿವಪ್ರಕಾಶ ಹೇಳಿದರು. ಅವರು ವಿಚಾರ ಸಂಕಿರಣದಲ್ಲಿ ಆಶಯ ನುಡಿಗಳಾನ್ನಾಡಿದರು.

ಬೇಂದ್ರೆಯವರ ಜನಪದಿಯ ಅಂಶಗಳ ಮೇಲೆ ಹೆಚ್ಚಿನ ಒತ್ತು ನೀಡಿ ಅವರ ಕಾವ್ಯದ ಬೇರೆ ಮಹತ್ವದ ಆಯಾಮಗಳನ್ನು ನಿರ್ಲಕ್ಷ ಮಾಡಲಾಯಿತು. ಬೇಂದ್ರೆಯವರ ಕಾವ್ಯದ ಮೇಲೆ ಭಾರತೀಯ ಪರಂಪರೆಗಳು ಗಾಢವಾದ ಪ್ರಭಾವ ಬೀರಿವೆ. ಕನ್ನಡ ಮತ್ತು ಮರಾಠಿ ಭಕ್ತಿ ಪರಂಪರೆಗಳು ಬೇಂದ್ರೆಕಾವ್ಯಕ್ಕೆ ಭವ್ಯತೆ ತಂದುಕೊಟ್ಟಿವೆ, ಸಂಸ್ಕೃತ ಸಾಹಿತ್ಯದ ತೀವ್ರ ಪ್ರಭಾವಕ್ಕೂ ಅವರು ಒಳಗಾಗಿದ್ದರು. ಬೇಂದ್ರೆಯವರು ಭಾಷೆಯ ಸೂಕ್ಷ್ಮತೆಯನ್ನು ತಿಳಿದುಕೊಂಡಿದ್ದರು, ಭಾಷೆಯ ಸಾಧ್ಯತೆಗಳನ್ನು ಸಾದ್ಯಂತಿಕವಾಗಿ ತಮ್ಮ ಕಾವ್ಯದಲ್ಲಿ ಬಳಸಿಕೊಂಡರು. ಯೂರೋಪಿನ ಸಾಹಿತ್ಯದಲ್ಲಿ ಕಾಣಿಸಿಕೊಳ್ಳುವ ಮುಂಚೆಯೇ ಅತಿ ವಾಸ್ತವತೆ ಬೇಂದ್ರೆಯವರ ಕಾವ್ಯದಲ್ಲಿ ಕಂಡದ್ದು ವಿಸ್ಮಯಕಾರಿ,ಆದರೆ ಬೇಂದ್ರೆಕಾವ್ಯಅರವಿಂದರ ಪ್ರಭಾವಕ್ಕೆ ಒಳಗಾದ ಮೇಲೆ ತನ್ನ ಮೊನಚು ಕಳೆದುಕೊಂದಿತು ಎಂದು ಶಿವಪ್ರಕಾಶ ಹೇಳಿದರು.

ಇಂದಿರಾಗಾಂಧಿ ಆದಿವಾಸಿ ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ಕಟ್ಟೀಮನಿ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಬೇಂದ್ರೆಕಾವ್ಯ ಆಧುನಿಕ ಭಾರತೀಯ ಕಾವ್ಯಪರಂಪರೆಯಲ್ಲಿಯೇ ಉತ್ಕೃಷ್ಠವಾದ ಕಾವ್ಯವಾಗಿದೆ, ಅವರ ಕಾವ್ಯದ ಆಳ-ವಿಸ್ತಾರ ವಿಮರ್ಶಕರಿಗೆ ಎಲ್ಲ ಕಾಲಕ್ಕೂ ಸವಾಲು ಒಡ್ಡುತ್ತದೆ, ಅವರು ಕನ್ನಡದ ಪ್ರತಿಭಾವಂತ ಅನುವಾದಕಾರಾಗಿದ್ದು ಅವರ ಮೇಘದೂತ ಅನುವಾದ ಕೃತಿ ಎಲ್ಲ ಅನುವಾದಕರಿಗೆ ಒಂದು ಬಹುದೊಡ್ಡ ಮಾದರಿಯಾಗಿದೆ ಎಂದು ಹೇಳಿದರು. ವೆಂಕಟಾಚಲ ಹೆಗಡೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಡಿ.ಎಮ್.ಹಿರೇಮಠ, ಬಸವರಾಜ ಡೋಣೂರ, ಮಂಜುಳಾ ಯಲಿಗಾರ ಮತ್ತು ಸಿ.ಎಮ್.ನಾಗರಾಜ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

* * *

ಬೇಂದ್ರೆ ಕಾವ್ಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಮೊದಲ ಗೋಷ್ಠಿಯಲ್ಲಿ ‘ಭಾರತೀಯ ದರ್ಶನಗಳು ಮತ್ತು ದ.ರಾ.ಬೇಂದ್ರೆ’ ಎಂಬ ವಿಷಯದ ಕುರಿತು ಗುರುಪಾದ ಮರಿಗುದ್ದಿಯವರು ಮಾತನಾಡಿದರು. ಬೇಂದ್ರೆಯವರನ್ನು ಶಬ್ದಬ್ರಹ್ಮ ಎಂದು ಕರೆಯಲಾಗುತ್ತಿತ್ತು, ಅವರು ಬ್ರಹ್ಮನನ್ನು ಶಬ್ದಗಳಲ್ಲಿ ತೋರಿಸಿದರು, ತಮ್ಮಕಾವ್ಯದಲ್ಲಿ ಬ್ರಹ್ಮವನ್ನು ಕಟ್ಟಿಕೊಟ್ಟರು, ಈ ಕೆಲಸವನ್ನು ಬೇಂದ್ರೆ ಗ್ರಾಮೀಣ ಭಾಷೆಯಲ್ಲಿ ಮಾಡಿದರು, ಉಪನಿಷತ್ತುಗಳ ದರ್ಶನವನ್ನು ರೂಪಕದ ಭಾಷೆಯಲ್ಲಿ ಬಹಳ ಸಮರ್ಥಕವಾಗಿ ಅಭಿವ್ಯಕ್ತಪಡಿಸಿದರು ಎಂದು ಹೇಳಿದರು. ‘ಅರವಿಂದರ ತತ್ವಶಾಸ್ತ್ರ ಚಿಂತನೆ ಮತ್ತು ಬೇಂದ್ರೆ’ ಎಂಬ ವಿಷಯದ ಮೇಲೆ ಮಾತನಾಡಿದ ಆನಂದ ಝುಂಜರವಾಡ ಬೇಂದ್ರೆಕಾವ್ಯದ ಮೇಲೆ ಪ್ರಭಾವ ಬೀರಿದ ಭಾರತೀಯ ತತ್ವಶಾಸ್ತ್ರದ ಕುರಿತು ವಿವರಿಸುತ್ತ ಅರವಿಂದರ ತತ್ವಶಾಸ್ತ್ರ ಬೇಂದ್ರೆಯವರ ಕಾವ್ಯದ ಆಶಯ, ಶಿಲ್ಪ ಮತ್ತು ಭಾಷೆಯ ಮೇಲೆ ಪ್ರಭಾವ ಬೀರಿತು ಎಂದರು. ಈ ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಬಸವರಾಜ ಕಲ್ಗುಡಿ ‘ಭಾರತೀಯ ಭಕ್ತಿಕಾವ್ಯ ಪರಂಪರೆ ಮತ್ತು ಬೇಂದ್ರೆ’ ಎಂಬ ವಿಷಯದ ಮೇಲೆ ಮಾತನಾಡುತ್ತ ಬೇಂದ್ರೆಯವರ ಕಾವ್ಯದ ಬೇರುಗಳನ್ನು ಭಾರತೀಯ ಭಕ್ತಿಕಾವ್ಯ ಪರಂಪರೆಯಲ್ಲಿ ಗುರುತಿಸಿದರು. ಬೇಂದ್ರೆಯವರಿಗೆ ಕಾವ್ಯರಚನೆ ಮುಖ್ಯವಾಗಿತ್ತು, ಆಧ್ಯಾತ್ಮ ಅವರ ಅಂತಿಮ ಗುರಿಯಾಗಿರಲಿಲ್ಲ ಎಂದರು.

ಎರಡನೆಯ ಗೋಷ್ಠಿಯಲ್ಲಿ ‘ಬೇಂದ್ರೆ ಕಾವ್ಯದಲ್ಲಿ ಪರಿಸರ ಪ್ರಜ್ಞೆ’ ಎಂಬ ವಿಷಯದ ಮೇಲೆ ಮಾತನಾಡುತ್ತ ಪ್ರಕೃತಿ, ಪರಿಸರ ಬೇಂದ್ರೆ ಕಾವ್ಯದಲ್ಲಿ ಜೀವಗಂಗೆಯಾಗಿ ಹರಿಯುತ್ತದೆ, ಪ್ರಕೃತಿಯ ಭಾಗವಾಗಿದ್ದುಕೊಂಡೇ ಬೇಂದ್ರೆ ತಮ್ಮ ಕಾವ್ಯ ರಚಿಸಿದ್ದಾರೆ, ಪ್ರಕೃತಿಗೆ ನಾಲ್ಕು ಮುಖಗಳಿವೆಯೆಂದು ಹೇಳಲಾಗುತ್ತಿದ್ದರೂ ಅವರ ಕಾವ್ಯಕ್ಕೆ ಐದು ಮುಖಗಳಿವೆ,ದುರಂತವೇ ಅವರ ಕಾವ್ಯದ ಪಂಚಮುಖವಾಗಿದೆ ಎಂದು ಎಂ.ಎಸ್.ಆಶಾದೇವಿ ಹೇಳಿದರು. Imaginative Beauty, Sensuous Beauty, Intellectual Beauty ಮತ್ತು Ideal Beauty ಗಳಲ್ಲಿ ಅಭಿವ್ಯಕ್ತಿಸಲಾಗದ ದುರಂತವನ್ನು ಅವರು ತಮ್ಮ ಕಾವ್ಯದ ಐದನೆಯ ಮುಖ Tragic Beautyಯಲ್ಲಿ ಅಭಿವ್ಯಕ್ತಪಡಿಸಿದರು ಎಂದು ಹೇಳಿದರು.

‘ಬೇಂದ್ರೆ ಕಾವ್ಯದ ಸ್ತ್ರೀವಾದಿ ಓದು’ ಎಂಬ ವಿಷಯದ ಮೇಲೆ ಮತಾನಾಡುತ್ತ ತಾರಿಣಿ ಶುಭದಾಯಿನಿ ಬೇಂದ್ರೆ ಕಾವ್ಯವನ್ನು ಪ್ರವೇಶಿಸುವ ಹೊಸ ಸಾಧ್ಯತೆಗಳ ಕುರಿತು ಚರ್ಚಿಸಿದರು. ಬೇಂದ್ರೆಯವರ ಮೇಲೆ ತಮ್ಮ ತಾಯಿಯ ಪ್ರಭಾವವಿತ್ತು. ಅವರ ಕಾವ್ಯದಲ್ಲಿ ಮಾತೃತ್ವದ ಬಗ್ಗೆ ಪ್ರಸ್ತಾಪಿಸಿದರು, ಬೇಂದ್ರೆ ತಮ್ಮ ಕಾವ್ಯದಲ್ಲಿ ಮಾತೃತ್ವಕ್ಕೆ ಒಪ್ಪಿಸಿಕೊಂಡಿದ್ದರು ಎಂದು ಹೇಳಿದರು.

ಈ ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಬಾಳಾಸಾಹೇಬ ಲೋಕಾಪುರರು ‘ಬೇಂದ್ರೆ ಕಾವ್ಯದಲ್ಲಿ ತಾಯಿ’ ಎಂಬ ವಿಷಯದ ಮೇಲೆ ಮಾತನಾಡುತ್ತ ಬೇಂದ್ರೆ ತಮ್ಮತಾಯಿಯೊಂದಿಗೆ ಹೊಂದಿದ್ದ ಮಧುರ ಬಾಂಧವ್ಯದ ಕುರಿತು ಆಪ್ತವಾಗಿ ಹೇಳಿದರು. ಬೇಂದ್ರೆಯವರಲ್ಲಿ ತಾಯ್ತನ ಇದ್ದುದರಿಂದಲೇ ಅವರಿಗೆ ಹೆಣ್ಣು ಮತ್ತು ಪ್ರಕೃತಿಯನ್ನು ಅತ್ಯಂತ ಸೂಕ್ಷ್ಮವಾಗಿಗ್ರಹಿಸಲು ಸಾಧ್ಯವಾಯಿತು ಎಂದರು.

ಜಿ.ಕೃಷ್ಣಪ್ಪ ‘ಬೇಂದ್ರೆ ಕಾವ್ಯದಲ್ಲಿ ನಿಸರ್ಗ ಮತ್ತು ಸ್ತ್ರೀ’ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು. ಬೇಂದ್ರೆಯವರ ಲೋಕಪ್ರಿಯ ಕಾವ್ಯವನ್ನು ವಿಶಿಷ್ಟವಾದ ರೀತಿಯಲ್ಲಿ ಪ್ರಸ್ತುತಪಡಿಸಿದರು. ಬೇಂದ್ರೆ ಕಾವ್ಯದಲ್ಲಿನ ಸಾರ್ವಕಾಲಿಕ ಮೌಲ್ಯಗಳ ಕುರಿತು ಹೇಳಿದರು. ಬೇಂದ್ರೆ ಕಾವ್ಯದ ಅನನ್ಯತೆಗಿರುವ ಕಾರಣಗಳನ್ನು ಬಹಳ ವಿಸ್ತೃತವಾಗಿ ಅವರು ವಿಶ್ಲೇಷಿಸಿದರು.

ಸಂಜೆ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಧಾರವಾಡದ ಅಭಿಜಾತ ಕಲಾವಿದ ಕುಮಾರ ಮರಡೂರ ಬೇಂದ್ರೆಯವರ ಪ್ರಸಿದ್ಧ ಕವನಗಳ್ನು ತಮ್ಮ ಶ್ರೀಮಂತ ಕಂಠದಲ್ಲಿ ಅದ್ಭುತವಾಗಿ ಹಾಡಿ ಪ್ರೇಕ್ಷಕರ ಮನ ಕುಣಿದು ಕುಪ್ಪಳಿಸುವಂತೆ ಮಾಡಿದರು. ಎರಡು ದಿನ ವಿದ್ವಾಂಸರ ಜೊತೆ ಓಡಾಡಿಕೊಂಡಿದ್ದ ಕುಮಾರ ಸಣ್ಣ ಹುಡುಗನಂತೆ ಕಂಡರು. ಅವರ ಹಾಡುಗಳನ್ನು ಕೇಳಿದ ಮೇಲೆ ಅವರು ಎಂಥ ಅದ್ಭುತ ಕಲಾವಿದ ಎನಿಸಿತು! ಅನಂತ ದೇಶಪಾಂಡೆ ಬೇಂದ್ರೆದರ್ಶನವನ್ನು ಮಾಡಿಕೊಟ್ಟರು. ಬೇಂದ್ರೆಯವರ ಪರಕಾಯ ಪ್ರವೇಶ ಮಾಡಿದಂತೆ ಅವರ ಜೀವನದ ಮಹತ್ವದ ಘಟನೆಗಳನ್ನು ದೇಶಪಾಂಡೆ ಮನಮುಟ್ಟುವಂತೆ ಪ್ರಸ್ತುತಪಡಿಸಿದರು.

* * *

ವಿಚಾರ ಸಂಕಿರಣದ ಎರಡನೆಯ ದಿನದ ಮೊದಲನೆಯ ಗೋಷ್ಠಿಯಲ್ಲಿ ‘ಬೇಂದ್ರೆ ವಿಚಾರ ಸಾಹಿತ್ಯ’ ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿದ ಸೋಮಶೇಖರ ಅಪ್ಪಗೆರೆ ಬೇಂದ್ರೆ ಕಾವ್ಯದಂತೆ ಅವರ ಗದ್ಯದ ಕುರಿತು ಗಾಢವಾದ ಚರ್ಚೆ ಏಕೆ ಆಗಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಯತ್ನಿಸಿದರು. ಬೇಂದ್ರೆ ತಮ್ಮ ಗದ್ಯದಲ್ಲಿ ಸಾಮಾಜಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಿಂತನೆ ನಡೆಸಿದ್ದಾರೆಂದು ಹೇಳಿದರು.

‘ಭಾರತೀಯ ಜಾನಪದ ಸಾಹಿತ್ಯ ಮತ್ತು ಬೇಂದ್ರೆ’ ಎಂಬ ವಿಷಯದ ಮೇಲೆ ಮಾತನಾಡಿದ ವೆಂಕಟಗಿರಿ ದಳವಾಯಿ ವ್ಯಕ್ತಿಯ ಅಹಂಕಾರಕ್ಕೆ ಅನೇಕ ಕಾರಣಗಳಿರುತ್ತವೆ, ವೈದಿಕ ತಿಳುವಳಿಕೆ, ಕಾವ್ಯಪ್ರತಿಭೆ ಮತ್ತು ಶಿಷ್ಟಮಾರ್ಗ ಅಹಂಕಾರಕ್ಕಿರುವ ಕಾರಣಗಳು ಎಂದರು.ಬೇಂದ್ರೆ ಈ ರೀತಿಯ ಅಹಂಕಾರವನ್ನು ಮೀರಿದ್ದರು, ಅಹಂಕಾರವನ್ನು ಅಧಃಪತನವೆಂದು ಪರಿಭಾವಿಸಿದ್ದರು, ಶ್ರೇಷ್ಠತೆಯ ವ್ಯಸನದಿಂದ ಬಿಡಿಸಿಕೊಂಡು ತಮಗೆ ಸಹಜವಾಗಿ ಒದಗಿಬಂದ ವೈದಿಕ, ಶಿಷ್ಟ ಪರಂಪರೆಯನ್ನು ಬದಿಗಿಟ್ಟು ಜಾನಪದಕ್ಕೆಒಲಿದಿದ್ದರು ಎಂದು ಹೇಳಿದರು.

ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಟಿ.ಎಂ.ಭಾಸ್ಕರ್ ‘ಭಾರತೀಯ ರಸ ಮೀಮಾಂಸೆ ಮತ್ತು ಬೇಂದ್ರೆ’ ಎಂಬ ವಿಷಯದ ಕುರಿತು ಮಾತನಾಡಿದರು.

ಐದನೆಯ ಗೋಷ್ಠಿಯಲ್ಲಿ ‘ಬೇಂದ್ರೆಕಾವ್ಯ ಮೀಮಾಂಸೆ’ ಎಂಬ ವಿಷಯದ ಕುರಿತು ಮಾತನಾಡುತ್ತ ವಿಕ್ರಮ ವಿಸಾಜಿ ಬೇಂದ್ರೆ ತಮ್ಮದೇ ಆದ ಕಾವ್ಯಪರಂಪರೆಯನ್ನು ರೂಪಿಸಿಕೊಂಡಿದ್ದರು ಮತ್ತು ತಮ್ಮಕಾವ್ಯದಲ್ಲಿ ದೊಡ್ಡ ಮಟ್ಟದ ಪ್ರಯೋಗಗಳನ್ನು ಮಾಡಿದರು ಎಂದು ಹೇಳಿದರು. ಬೇಂದ್ರೆಯವರನ್ನು ಕವಿಮಹಾರಾಜ ಎಂದು ಎಂ.ಎಂ.ಕಲಬುರ್ಗಿಯವರು ಹೇಳುತ್ತಿದ್ದರು ಎಂಬ ಸಂಗತಿಯನ್ನು ತಿಳಿಸಿ ಯಾವ ಅರ್ಥದಲ್ಲಿ ಬೇಂದ್ರೆ ಕವಿಮಹಾರಾಜರಾಗಿದ್ದರು ಎಂಬುದನ್ನು ಅತ್ಯಂತ ಸೋಪಜ್ಞತೆಯಿಂದ ವಿಸಾಜಿ ವಿವರಿಸಿದರು.

‘ಬೇಂದ್ರೆ ನಾಟಕಗಳ ವಸ್ತು ಮತ್ತು ಸ್ವರೂಪ’ ಎಂಬ ವಿಷಯದ ಕುರಿತು ಮಾತನಾಡುತ್ತ ಶಿವಾನಂದ ಕೆಳಗಿನಮನಿ ಬೇಂದ್ರೆ ನಾಟಕಗಳ ವಸ್ತುಗಳು ಸಾರ್ವತ್ರಿಕವಾಗಿವೆ ಎಂದು ಅಭಿಪ್ರಾಯಪಟ್ಟರು. ಕಾವ್ಯದಲ್ಲಿ ಬೇಂದ್ರೆ ಸಾಧಿಸಿದ ಸಿದ್ಧಿಯನ್ನು ನಾಟಕದಲ್ಲಿ ಸಾಧಿಸಲು ಅವರಿಗೆ ಸಾಧ್ಯವಾಗಲಿಲ್ಲ ಎಂದರು.

ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ ಶಾಂತಾ ಇಮ್ರಾಪೂರ ‘ಬೇಂದ್ರೆ ಕಾವ್ಯದ ವೈಚಾರಿಕ ನೆಲೆಗಳು’ ಎಂಬ ವಿಷಯದ ಕುರಿತು ಮಾತನಾಡಿದರು.

‘ದ.ರಾ.ಬೇಂದ್ರೆ ಕಾವ್ಯ: ಭೂತ, ವರ್ತಮಾನ ಮತ್ತು ಭವಿಷ್ಯ’ ಎಂಬ ವಿಷಯದ ಮೇಲೆ ನಡೆದ ಸಂವಾದಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ ಬಸವರಾಜ ಡೋಣೂರ ಬೇಂದ್ರೆ ಕಾವ್ಯದ ಸೂಕ್ಷ್ಮ ಭಾಷಿಕ ನೆಲೆಗಳ ಕುರಿತು ಚರ್ಚಿಸಿದರು. ಶ್ರೇಷ್ಠ ಕವಿಯಾದವನು ತನ್ನ ಕಾವ್ಯದಲ್ಲಿ ಕೇವಲ ಅರ್ಥಗಳನ್ನು ಸೃಷ್ಟಿಸುವುದಿಲ್ಲ, ಅವನು ಹೊಸ ಹೊಸ ಭಾಷೆಗಳನ್ನು ಸೃಷ್ಟಿಸುತ್ತಾನೆ. ಅವನ ಒಂದೊಂದು ಕಾವ್ಯವೂ ಒಂದೊಂದು ಭಾಷೆಯೇ ಆಗಿರುತ್ತದೆ. ಶೇಕ್ಸಪಿಯರ್ ಮತ್ತು ಬೇಂದ್ರೆ ಭಾಷೆಗಳನ್ನು ಸೃಷ್ಟಿಸಬಲ್ಲ ಪ್ರತಿಭಾವಂತ ಕವಿಗಳಾಗಿದ್ದರು ಎಂದು ಅಭಿಪ್ರಾಯಪಟ್ಟರು. ಸೃತಿಶಕ್ತಿ ಕಾವ್ಯದ ಶ್ರೇಷ್ಠತೆಗೆ ಸಹಾಯ ಮಾಡಬಲ್ಲದು, ನೆನಪು ಮನಸಿನ ಕಣ್ಣಿನಂತೆ ಕೆಲಸ ಮಾಡಬಲ್ಲದು ಎಂಬ ಕೀರ್ತಿನಾಥ ಕುರ್ತಕೋಟಿಯವರ ಮಾತುಗಳನ್ನು ಬೇಂದ್ರೆಯವರ ಕಾವ್ಯದ ಅಂತಃಶಕ್ತಿ ಗುರುತಿಸಲು ಬಳಸಿಕೊಂಡರು. ಕಾವ್ಯ ತತ್ಕಾಲಕ್ಕೆ ಹುಟ್ಟಿಕೊಳ್ಳುವುದಿಲ್ಲ, ಅನುಭವ ಮನಸಿನಲ್ಲಿ ಹರಳುಗಟ್ಟದ ಹೊರತುಕಾವ್ಯ ನಿರ್ಮಾಣ ಸಾಧ್ಯವಿಲ್ಲ ಎಂದ ಡೋಣೂರರು ಬೇಂದ್ರೆಕಾವ್ಯದಲ್ಲಿ ನೆನಪು ಯಾವರೀತಿಯಲ್ಲಿ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಿದರು. ‘ಸಖೀಗೀತ’ದಂಥ ಕಾವ್ಯ ಬಿಟ್ಟರೆ ಬೇಂದ್ರೆಯವರ ಬಹುತೇಕ ಕಾವ್ಯ ಸೃತಿಕಾವ್ಯವೇ ಆಗಿದೆ, ನೆನಪು ಎನ್ನುವುದು ಭೂತಕಾಲ ಸೂಚಿಸುತ್ತದೆ, ಈ ಕಾಲಬಿಂದುವಿನಲ್ಲಿ ವರ್ತಮಾನವೂ ಇದೆ ಭವಿಷ್ಯವೂ ಇದೆ,ಈ ಅರ್ಥದಲ್ಲಿ ಅವರ ಸ್ಮೃತಿಗೆ ಭೂತ, ವರ್ತಮಾನ ಹಾಗೂ ಭವಿಷ್ಯದ ಮೂರು ಆಯಾಮಗಳಿವೆ ಎಂದರು. ಅರವಿಂದ ಕುಲಕರ್ಣಿ. ರಾಜಣ್ಣ ತಗ್ಗಿ, ರಮೇಶ ಅರೋಲಿ, ಸಂಗಮನಾಥ ಲೋಕಾಪುರ, ಬಸು ಬೇವಿನಗಿಡದ ಮತ್ತು ಶಂಕರ ಹಲಗತ್ತಿ ಸಂವಾದದಲ್ಲಿ ಭಾಗವಹಿಸಿ ಬೇಂದ್ರೆಯವರ ಕಾವ್ಯದ ಪ್ರಮುಖ ಆಯಾಮಗಳ ಕುರಿತು ದೀರ್ಘ ಸಮಾಲೋಚನೆ ನಡೆಸಿದರು. ನಂತರದಲ್ಲಿ ನಡೆದ ಸಂವಾದದಲ್ಲಿ ಪ್ರೇಕ್ಷಕರು ಮತ್ತು ದೆಹಲಿ ಕನ್ನಡಿಗರು ಅತ್ಯಂತ ಉತ್ಸಾಹದಿಂದ ವಿದ್ವಾಂಸರಿಗೆ ಪ್ರಶ್ನೆಗಳನ್ನು ಕೇಳಿ ಬೇಂದ್ರೆ ಕಾವ್ಯದ ಸೂಕ್ಷ್ಮ ನೆಲೆಗಳ ಬಗೆಗೆ ವ್ಯಾಪಕ ಚರ್ಚೆ ನಡೆಸಿದರು.

* * *

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಬಿ.ಎಲ್.ಸಂತೋಷ ಸಮಾರೋಪ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದರು. ಬೇಂದ್ರೆಕಾವ್ಯದ ಶ್ರವಣಗುಣ ಮತ್ತು ಗೇಯತೆ ಪ್ರತಿಯೊಬ್ಬ ಕನ್ನಡಿಗನ ಮೇಲೆ ಪ್ರಭಾವ ಬೀರಿದೆ, ಮನುಷ್ಯನ ಬುದ್ಧಿ-ಭಾವರೂಪಿಸುವಲ್ಲಿ ಬೇಂದ್ರೆಕಾವ್ಯ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದರು.

ಸಮಾರೋಪ ನುಡಿಗಳನ್ನು ಆಡಿದ ಮನು ಬಳಿಗಾರ ಬೇಂದ್ರೆ ಕಾವ್ಯದ ಕುರಿತು ಎರಡು ದಿನಗಳ ಕಾಲ ನಡೆದ ಚರ್ಚೆಯ ಹಿನ್ನೆಲೆಯಲ್ಲಿ ಬೇಂದ್ರೆ ಕಾವ್ಯದ ಅನನ್ಯತೆ ಮತ್ತು ಸಾರ್ವಕಾಲಿಕತೆಯನ್ನು ಗುರುತಿಸಿದರು. ಬೇಂದ್ರೆ ಜನಮಾನಸದ ಕವಿಯಾಗಿದ್ದರು, ಕನ್ನಡಿಗರ ನಾಡಿಮಿಡಿತ ಅವರಕಾವ್ಯ ಸೆರೆಹಿಡಿದಿದೆ ಎಂದರು. ಅತಿಥಿಯಾಗಿ ಭಾಗವಹಿಸಿದ ತೇಜಸ್ವಿ ಕಟ್ಟೀಮನಿ ಬೇಂದ್ರೆ ಕಾವ್ಯವನ್ನುರಾಷ್ಟ್ರಮಟ್ಟದಲ್ಲಿ ಚರ್ಚಿಸುವ ಅಗತ್ಯವಿದೆ ಎಂದರು. ಬೇಂದ್ರೆಯವರ ಕಾವ್ಯದ ಕುರಿತು ಪುಸ್ತಿಕೆಗಳನ್ನು ರಚಿಸಿ ಅವುಗಳನ್ನು ಭಾರತೀಯ ಬೇರೆ ಬೇರೆ ಭಾಷೆಗಳಿಗೆ ಅನುವಾದಿಸಬೇಕೆಂದರು.

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವೆಂಕಟಾಚಲ ಹೆಗಡೆ, ಕಾರ್ಯದರ್ಶಿ ಸಿ.ಎಮ್.ನಾಗರಾಜ, ವಿಚಾರ ಸಂಕಿರಣದ ಸಂಚಾಲಕ ಬಸವರಾಜ ಡೋಣೂರ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಬೇಂದ್ರೆ ಟ್ರಸ್ಟಿನ ಅಧ್ಯಕ್ಷ ಡಿ.ಎಮ್.ಹಿರೇಮಠ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ದೆಹಲಿಯಲ್ಲಿ ನಡೆದ ಬೇಂದ್ರೆ ಕಾವ್ಯದ ಕುರಿತಾದ ವಿಚಾರ ಸಂಕಿರಣದ ಬಗ್ಗೆ, ಇಲ್ಲಿ ನಡೆದ ಚರ್ಚೆ, ಸಂವಾದದ ಬಗ್ಗೆ ದೇಶದುದ್ದಕ್ಕೂ ಇರುವ ಕನ್ನಡಿಗರು ಚರ್ಚೆ, ಸಂವಾದ ಮಾಡಿದರು. ಶೇಕ್ಸ್‍ಪಿಯರನ ಬಗ್ಗೆ ರಾಷ್ಟ್ರಮಟ್ಟದ ಚರ್ಚೆ ನಡೆದರೆ ಇಂಗ್ಲೆಂಡಿನ ಜನರು ಈ ರೀತಿಯ ಚರ್ಚೆ ನಡೆಸುತ್ತಾರಂತೆ.

ಕನ್ನಡ ಸಾಹಿತ್ಯದ ಬಗ್ಗೆ ಹೊರರಾಜ್ಯಗಳ ಲೇಖಕರಲ್ಲಿ ಪ್ರೀತಿ, ಅಭಿಮಾನವಿದೆ. ಕನ್ನಡ ಸಾಹಿತ್ಯದ ಬಗ್ಗೆ ಮತ್ತು ಕನ್ನಡ ಸಾಹಿತಿಗಳು ನಡೆಸುವ ಭಾಷಾಪ್ರಯೋಗ, ವಸ್ತು ಮತ್ತು ತಂತ್ರಗಳಲ್ಲಿ ಮಾಡುವ ದಿಟ್ಟ ಪ್ರಯೋಗಗಳ ಬಗ್ಗೆ ಬೇರೆ ಭಾಷೆಗಳ ಲೇಖಕರಲ್ಲಿ ಭಯ, ಕೌತುಕ ಮತ್ತು ಅಭಿಮಾನವಿದೆ.

ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಒಟ್ಟು 30 ಜನ ವಿದ್ವಾಂಸರು ಮಾತನಾಡಿದರು. 18 ಗಂಟೆಗಳ ಕಾಲ ಗಂಭೀರವಾದ ಚರ್ಚೆ ನಡೆಯಿತು. ಬೇಂದ್ರೆಕಾವ್ಯ, ನಾಟಕ, ಅನುವಾದ, ಹಾಗೂ ಗದ್ಯದ ಕುರಿತು ಚರ್ಚಿಸಲಾಯಿತು. ಬೇಂದ್ರೆಯವರ ಜೊತೆಗೆ ಕನ್ನಡ, ಸಂಸ್ಕೃತ, ಮರಾಠಿ, ಹಿಂದಿ ಮತ್ತು ಇಂಗ್ಲಿಷ್ ಕಾವ್ಯಗಳ ಚಿಂತನ-ಮಂಥನವೂ ನಡೆಯಿತು. ಶುದ್ಧ ಸಾಹಿತ್ಯ, ಶುದ್ಧ ಕಾವ್ಯದ ಚರ್ಚೆ ನಡೆದದ್ದು ಬಹಳ ವಿಶೇಷವಾಗಿತ್ತು. ಬೇಂದ್ರೆ ಕಾವ್ಯದ ಜೊತೆಗೆ ಕುವೆಂಪು ಕಾವ್ಯದ ಚರ್ಚೆಯೂ ನಡೆಯಿತು. ಇಬ್ಬರ ನಡುವಿನ ಹೋಲಿಕೆಯಿಂದ ಯಾರ ಕಾವ್ಯಕ್ಕೆ ಹೆಚ್ಚು ಅನುಕೂಲವಾಯಿತು ಎಂದು ಕಾಲವೇ ನಿರ್ಧರಿಸಬೇಕಿದೆ. ಆದರೆ ಈ ಹೋಲಿಕೆಯಿಂದಾಗಿ ಕುವೆಂಪು ಕಾವ್ಯಕ್ಕೆ ಸಣ್ಣಮಟ್ಟದ ಅನ್ಯಾಯ, ಅಪಚಾರವಾಯಿತು ಎಂದು ಕೆಲವರು ಅಭಿಪ್ರಾಯಪಟ್ಟರು. ಇದು ವಾಸ್ತವ ಕೂಡ. ಬೇಂದ್ರೆ ಕಾವ್ಯದ ಜೊತೆ ಕುವೆಂಪು ಕಾವ್ಯವನ್ನಷ್ಟೇ ಹೋಲಿಸಿ ಅವರ ಸಾಹಿತ್ಯದ ಮೌಲ್ಯಮಾಪನ ಮಾಡುವುದು ಸರಿಯಾದ ಕ್ರಮವಲ್ಲ. ಕುವೆಂಪುರವರ ನಾಟಕ, ಕಾದಂಬರಿ ಮತ್ತು ವೈಚಾರಿಕ ಬರಹವನ್ನು ಗಣನೆಗೆ ತೆಗೆದುಕೊಂಡಾಗ ಮಾತ್ರ ಈ ರೀತಿಯ ಹೋಲಿಕೆ ಸರಿಯಾದ ಮೌಲ್ಯಮಾಪನಕ್ಕೆದಾರಿ ಮಾಡಿಕೊಡುತ್ತದೆ.

ಬೇಂದೆ ಕಾವ್ಯದ ವೈವಿಧ್ಯತೆಯ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಆಗಬೇಕಾಗಿದೆ. ಬೇಂದ್ರೆ ಕಾವ್ಯದ ಭಾಷೆಯ ವೈಶಿಷ್ಟ್ಯದ ಬಗ್ಗೆ ಹೆಚ್ಚು ಸಂವೇದನಾಶೀಲವಾದ ಅಧ್ಯಯನ ನಡೆಯಬೇಕಿದೆ.

ಸಂಯೋಜಕರು

ರಾಷ್ಟ್ರೀಯ ವಿಚಾರ ಸಂಕಿರಣ

 

ವಿಚಾರ ಸಂಕಿರಣದ ಬಗೆಗೆ ಬಂದ ಅಭಿಪ್ರಾಯಗಳು

ತುಂಬ ಚನ್ನಾಗಿ ಯೋಚಿಸಿ ಯೋಜಿಸಿದ ಕಾರ್ಯಕ್ರಮ ಇದಾಗಿತ್ತು. ಸಾಕಷ್ಟು ಯಶಸ್ಸನ್ನೂ ಕಂಡಿತು. ನಮಗೆ ಮನೆಗೆ ಬಂದ ಅತಿಥಿಗಳಿಗೆಷ್ಟೇ ಭರ್ಜರಿ ಮೆಜವಾಣಿ ಬಡಿಸಬೇಕೆಂದರೂ ನಮ್ಮ ವೈಚಾರಿಕ ಹಾಗೂ ವಾಜ್ ಸಂತೆಯಲ್ಲಿ ಲಭ್ಯವಿದ್ದ ಗುಣಮಟ್ಟದ ಸರಕನ್ನೆ ನಾವು ತಂದು ಪಾಕಗೊಳಿಸಿ ಬಡಿಸಬೇಕಾಗುತ್ತದೆ. ಇಂಥ ಸಂಕಿರ್ಣಗಳಲ್ಲೂ ನಮಗೆ ಲಭ್ಯವಿರುವ ಸಂಪನ್ಮೂಲವನ್ನೇ ನಾವು ಅವಲಂಬಿಸಬೇಕಾಗುತ್ತದೆ. ಆದರೂ ಕನ್ನಡದ ಚೌಬಜಾರನ್ನೆಲ್ಲ ಸುತ್ತಿ ಅತ್ಯುತ್ತಮವಾದ ಬೇಂದ್ರೆ ಹಬ್ಬದ ಸಂತೆ ಮಾಡಿ, ಉಣಬಡಿಸಿದ್ದಿರಿ. ಇದು ನಿಮ್ಮ ಗಂಭೀರವಾದ ಲಕ್ಷ್ಯ ಹಾಗೂ ಧ್ಯಾನವೇ ಆಗಿತ್ತು ಎನಿಸಿತು.

-ಆನಂದಝಂಜರವಾಡ

 

ಪ್ರೊ.ಎಸ್.ಎಸ್.ಶಿವಪ್ರಕಾಶ, ಡಾ.ಬಸವರಾಜ ಕಲ್ಗುಡಿ, ಶ್ರೀ ಝಂಜರವಾಡ, ವಿಕ್ರಮ ವಿಸಾಜಿ, ಶಿವಾನಂದ ಕೆಳಗಿನಮನಿ, ತಾರಿಣಿ ಶುಭದಾಯಿನಿ, ಆಶಾದೇವಿ ಮೇಡಮ್, ಶಾಂತಾ ಇಮ್ರಾಪೂರ …ಇಷ್ಟೊಂದು ವಿದ್ಯಾಂಸರ ಮಾತಗುಳನ್ನು ಕೇಳೋದೆ ನಮ್ ವಾರಾಂತ್ಯದ ಕನ್ನಡದ ಹಬ್ಬ. ಬೇಂದ್ರೆ ಅಜ್ಜನ ನೆನಪಿನಂಗಳದಲ್ಲಿ ಏಕತಾನತೆಯ ಬದುಕು ಬೇಗುದಿಯನಿಷ್ಟು ಮರೆಯಲು ಸಾಕಲ್ಲ.

ತುಂಬಾ ಒಳ್ಳೆಯ ಕಾರ್ಯಕ್ರಮ ಮಂಡಿಸಲಾದ ಎಲ್ಲಾ ಗೋಷ್ಠಿಗಳನ್ನು ಆದಷ್ಟು ಬೇಗ ಪುಸ್ತಕ ರೂಪದಲ್ಲಿ ತನ್ನಿ ನಿಮ್ಮೊಂದಿಗೆ ಕಳೆದ ಎರಡು ದಿನಗಳು ಬಹುಕಾಲ ನೆನಪಿನಲ್ಲಿರುತ್ತವೆ.

-ರೇಣುಕಾ ನಿಡಗುಂದಿ

ಕನ್ನಡೇತರರನ್ನು ತಟ್ಟಲು ಇದೊಂದು ವಿನೂತನ ಕ್ರಮ.

-ಚನ್ನಪ್ಪಕಟ್ಟಿ

On the whole it was a very fruitful conference. Despite your busy schedule you continuously updated us on the sessions and gave us inputs on the talks and discussions.

-Aspari C.P.

Leave a Reply