ಧರ್ಮಸಂಕಟವನು ಎದುರಿಸಿದವನ ಕಥೆ

2018 ರ ಅಕ್ಟೋಬರ್ ತಿಂಗಳಲ್ಲಿ ನಡೆದ ನೀನಾಸಮ್ ಸಂಸ್ಕೃತಿ ಶಿಬಿರದಲ್ಲಿ ‘ಗಾಂಧಿ ವಿದ್ವಾಂಸ’ ತ್ರಿದೀಪ್ ಸುಹೃದ್ ಅವರ ಮಾತುಗಳನ್ನು ಕೇಳಿದಾಗ ಮತ್ತು ಮಹಾತ್ಮರ ಕುರಿತು ಅವರು ಮಾಡಿದ ಬೌದ್ಧಿಕ ಕೆಲಸಗಳ ಬಗ್ಗೆ ತಿಳಿದುಕೊಂಡಾಗ ಕನ್ನಡದಲ್ಲೂ ಒಬ್ಬ ತ್ರಿದೀಪ್ ಸುಹೃದ್ ಕಾಣಿಸಿಕೊಳ್ಳಬಾರದೆ ಎಂದನ್ನಿಸಿತ್ತು. ಅಂದಿನ ನನ್ನ ಸಂಚಾರೀ ಭಾವಕ್ಕೆ ಈಗ ನಾನೇ ಕೌತುಕ ಪಡುವಂತೆ, ಸಾಹಿತ್ಯ ವಿಮರ್ಶಕರು ಮತ್ತು ರಾಜಕೀಯ ಚಿಂತಕರೂ ಆಗಿರುವ ಡಿ.ಎಸ್. ನಾಗಭೂಷಣ್‍ ಅವರು ಮಹಾತ್ಮ ಗಾಂಧೀಜಿಯವರ ಸಮಗ್ರ ಬದುಕನ್ನು ಪುನರ್‌ ನಿರೂಪಿಸಿ 700 ಪುಟಗಳ ಗಾಂಧಿ ಕಥನ ಎಂಬ ಉದ್ಗ್ರಂಥವನ್ನು ರಚಿಸಿದ್ದಾರೆ. ಕರ್ನಾಟಕದ ಸಂದರ್ಭದಲ್ಲಿ ಗಾಂಧಿಯವರನ್ನು ಅತ್ತ ಭಜನೆಯ ರೂಪದಲ್ಲೂ ಅಲ್ಲದೆ, ಇತ್ತ ನಿಂದನೆಯ ರೂಪದಲ್ಲೂ ಒಲ್ಲದೆ, ಚಿಂತನೆಯ ರೂಪದಲ್ಲಿ ಹೇಳಿದರೆ ಅದಕ್ಕೆ ಮನಗೊಡುವ ಅನೇಕ ಯುವಕ-ಯುವತಿಯರು ಇದ್ದಾರೆ. ಅಂಥವರ ಓದಿಗಾಗಿಯೇ ಡಿಎಸ್‍ಎನ್ ಈ ಕೃತಿಯನ್ನು ಕಟ್ಟಿದ್ದಾರೆ. ಆದರೆ ಕನ್ನಡದ ಜಗತ್ತಿಗೆ, ಡಿಎಸ್‍ಎನ್ ಎಂತಹ ಸಮಯದಲ್ಲಿ ಗಾಂಧಿಯವರನ್ನು ನೆನಪಿಸುತ್ತಿದ್ದಾರೆ? ಈಗ ದೇಶೀಯ ಮತ್ತು ಜಾಗತಿಕ ಮಟ್ಟದಲ್ಲಿ ಗಾಂಧಿಯವರ 150ನೆಯ ಜನ್ಮದಿನವನ್ನು ಆಚರಿಸುತ್ತಿರುವ ಸಮಯ. ಹಾಗೆಯೇ ಇದು, ಉತ್ತರ ಪ್ರದೇಶದಲ್ಲಿ ಕಾವಿ ಧರಿಸಿದ ಮಹಿಳೆಯೊಬ್ಬರು ಗಾಂಧಿ ಬೊಂಬೆಯೊಂದಕ್ಕೆ ಗುಂಡಿಕ್ಕಿ; ಆ ಬೊಂಬೆಯಿಂದ ರಕ್ತವೂ ಒಸರುವಂತೆ ದೃಶ್ಯ ಸಂಯೋಜಿಸಿ ಗಹಗಹಿಸಿ ನಕ್ಕ ಸಮಯವೂ ಹೌದು. ಜೊತೆಗೆ ಇದು, ತನ್ನ ಭಕ್ತರಿಂದ ‘ಸಾಧ್ವಿ’ ಎಂದು ಕರೆಯಿಸಿಕೊಳ್ಳುವ ಇನ್ನೊಬ್ಬಳು ಹೆಣ್ಣುಮಗಳು ಲೋಕಸಭೆಗೆ ಸ್ಪರ್ಧಿಸುತ್ತಿರುವಾಗಲೇ ‘ಗಾಂಧಿಯನ್ನು ಕೊಂದ ಗೋಡ್ಸೆಯದ್ದು ದೇಶಭಕ್ತಿಯ ಕೆಲಸ’ ಎಂದು ಸಾರ್ವಜನಿಕವಾಗಿ ಘೋಷಿಸಿಕೊಂಡ ಸಮಯ. ಅಷ್ಟೇ ಅಲ್ಲ, ಆ ಮಾತುಗಳನ್ನಾಡಿದ ಆಕೆಯನ್ನು ಜನರು ಭಾರೀ ಬಹುಮತದಿಂದ ಸಂಸತ್‍ಗೆ ಆರಿಸಿದ ಸಮಯವೂ (ಇವರಿಬ್ಬರೂ ಕಾವಿ ಧರಿಸಿದ ಮಹಿಳೆಯರು ಎನ್ನುವುದೂ ಇಲ್ಲಿ ಮುಖ್ಯ) ಹೌದು.ಇವೆಲ್ಲವುಗಳ ಜೊತೆಗೆ ಯಾವ ದೇಶ ವಿಭಜನೆಯ ಕಾರಣಕ್ಕಾಗಿ ಗಾಂಧಿಯವರನ್ನು ಪದೇಪದೇ ಅನವಶ್ಯವಾಗಿ ದೂಷಿಸಲಾಗುತ್ತಿದೆಯೋ ಆ ಎರಡೂ ದೇಶಗಳು ಸಮರಮೋಹಿಗಳಾಗಿ ನಿಂತಿರುವ ಸಮಯವಿದು. ಇವೆಲ್ಲವುಗಳ ತುರೀಯಾವಸ್ಥೆಯಲ್ಲಿ ಗಾಂಧಿ ತಿಳಿ ಹೇಳಿದ ಮಾತುಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವ ನಾವು, ಅದರ ಪರಿಣಾಮವೆಂಬಂತೆ ನಾವೇ ಆಹ್ವಾನಿಸಿರುವ ನಿಸರ್ಗ ಪ್ರಕೋಪಗಳೂ ಸಂಭವಿಸಿರುವ ಸಮಯವಿದು. ಹಾಗಾಗಿ ಎಲ್ಲ ಅರ್ಥಗಳಲ್ಲೂ ಗಾಂಧಿಯನ್ನು ಕೇವಲ ಸಂಕೇತವಾಗಿಸಿದ ಈ ಕಾಲ, ಯಾವೆಲ್ಲ ಕಾರಣಗಳಿಗಾಗಿ ನಾವು ಒಂದು ಕಾಲವನ್ನು ಪ್ರಕ್ಷುಬ್ಧವೆಂದು ಕರೆಯಬಹುದೋ ಅದಕ್ಕೆ ಸಂಪೂರ್ಣ ಅರ್ಹತೆಯನ್ನು ಗಳಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಡಿಎಸ್‍ಎನ್, ಗಾಂಧಿಯನ್ನು ಕನ್ನಡದಲ್ಲಿ ಕಟ್ಟಿರುವುದು ಬಹಳ ಮಹತ್ತ್ವದ ವಿದ್ಯಮಾನವಾಗಿದೆ. ಗಾಂಧಿಯ ಕಾಲದ ರಾಜಕೀಯ- ಸಾಮಾಜಿಕ- ಸಾಂಸ್ಕೃತಿಕ ಮತ್ತು ಬೌದ್ಧಿಕ ವಾತಾವರಣವೊಂದನ್ನು ತನ್ನ ಭಾವಕೋಶದಲ್ಲಿ ಮರುಸೃಜಿಸದಿದ್ದರೆ ಯಾವ ಲೇಖಕನಿಗೂ ಇಂತಹ ಕೃತಿಯನ್ನು ರಚಿಸಲು ಸಾಧ್ಯವಿಲ್ಲ. ಡಿಎಸ್‍ಎನ್ ತಮ್ಮ ಅಪಾರವಾದ ಓದಿನಿಂದ ಇಂತಹ ಸನ್ನಿವೇಶವೊಂದನ್ನು ತಮ್ಮೊಳಗೆ ಪುನರ್‌ ಸೃಷ್ಟಿಸಿಯೇ ಗಾಂಧಿ ಕಥನಕ್ಕೆ ತೊಡಗಿದಂತಿದೆ ಎನ್ನುವುದಕ್ಕೆ ಅವರು ಕೃತಿಯ ಕೊನೆಗೆ ಕೊಟ್ಟ ಪರಾಮರ್ಶನ ಗ್ರಂಥಗಳ ಪಟ್ಟಿಯೇ ಸಾಕ್ಷಿ. 24 ಶೀರ್ಷಿಕೆಗಳಲ್ಲಿರುವ 38 ಪುಸ್ತಕಗಳನ್ನು ಓದಿ 93 ಅಧ್ಯಾಯಗಳಾಗಿ ಈ ಪುಸ್ತಕವನ್ನು ಡಿಎಸ್‍ಎನ್ ಹೆಣೆದಿದ್ದಾರೆ. ಹಾಗಾಗಿ ಇದು ಬೃಹತ್‌ ಕೃತಿಯೂ ಹೌದು, ಮಹತ್ಕೃತಿಯೂ ಹೌದು. ಗಾಂಧಿ ಕಥನವನ್ನು ಮೂರು ಹೆಜ್ಜೆಗಳಲ್ಲಿ ಮೂಡಿಸಿರುವ ಡಿಎಸ್‍ಎನ್, ಗಾಂಧಿಯವರನ್ನು ‘ವಾಮನ ಆಕೃತಿ ತ್ರಿವಿಕ್ರಮ ಮಹತಿ’ ಎಂದೇ ಪರಿಭಾವಿಸಿದ್ದಾರೆ. ಆದರೆ ಈ ‘ಹೆಜ್ಜೆ’ಗಳು ಯಾರನ್ನೂ ತುಳಿಯುವ ಹೆಜ್ಜೆಗಳಾಗದೆ, ತುಳಿಯುವವರ ಭೃಗುಪಾದವನ್ನು ತನ್ನ ಎದೆಯೊಳಗೆ ಧರಿಸುವಂತಹ ಕಾರುಣ್ಯ ಮೂರ್ತಿಯದಾಗಿವೆ. ಹಾಗೆಯೇ ಈ ‘ಮೂರು’ ಅನ್ನುವ ಸಂಖ್ಯಾವಾಚಕ ಗಾಂಧಿ ಯಾವತ್ತೂ ತಮ್ಮ ಪ್ರಯಾಣಕ್ಕೆ ಆಯ್ಕೆ ಮಾಡಿಕೊಳ್ಳುವ ಮೂರನೇ ದರ್ಜೆಯ ರೈಲು ಬೋಗಿಯನ್ನು, ನಾವಿಂದು ಅಷ್ಟಾಗಿ ಗುರುತಿಸದ ಮೂರನೆಯ ಜಗತ್ತನ್ನು, ಮತ್ತು ಈ ದೇಶದ ಹಮ್ಮು-ಬಿಮ್ಮುಗಳ ಜನ ‘ಗಾಂಧೀಕ್ಲಾಸು’ ಎಂದು ಉಡಾಫೆಯಿಂದ ಕರೆದ ಜನಸಾಮಾನ್ಯರನ್ನೂ ಉದ್ದೇಶಿಸಿದಂತಿದೆ. ಡಿಎಸ್‍ಎನ್ ಸ್ವಭಾವತಃ ಭಾವುಕರು. ಆದರೆ ಅವರು ಗಾಂಧಿಯ ಆಲೋಚನೆಗಳನ್ನು, ಮಾತುಗಳನ್ನು ಮತ್ತು ಕ್ರಿಯಾಚರಣೆಗಳನ್ನು ಕುರಿತು ಯಾವ ಪ್ರಮಾಣದ ಧ್ಯಾನಸ್ಥ ಸ್ಥಿತಿಯಲ್ಲಿ ಬರೆದಿದ್ದಾರೆ ಎಂದರೆ ಇಡಿಯ ಕೃತಿಯಲ್ಲಿ ನಿರುಮ್ಮಳವಾದ ನಿರೂಪಣೆಯೇ ಸ್ಥಾಯೀಭಾವದಲ್ಲಿದೆ. ಹೊರಗಿನ ಕರ್ಕಶಕ್ಕೆ ಈ ತಣ್ಣಗಿನ ನಿರೂಪಣೆ ಒಂದು ದಿವ್ಯೌಷಧಿಯಂತೆಯೂ ಇದೆ. ಗಾಂಧಿ ಕಥನವನ್ನು ಓದಿ ಮುಗಿಸಿದಾಗ ನನ್ನನ್ನು ಆವರಿಸಿದ್ದು ದಿಗ್ಭ್ರಮೆಯೊಂದೇ.ಗಾಂಧಿ ಎಂಬ ಈ ಮುದುಕನ ಶರೀರದಲ್ಲಿ ಅದೆಷ್ಟೊಂದು ಗೆರೆಗಳು. ಜಗತ್ತಿನ ಮೂಲ-ಮೂಲೆಗಳಿಂದ ಹೊರಟು ಬಂದಿರುವ ಗೆರೆಗಳು. ಆ ಕಾಲದ ಧೀಮಂತ ಚಿಂತಕರನ್ನು ಓದಿದಾಗ ಗಾಂಧಿಯ ಹಣೆಯ ಮೇಲೆ ಮೂಡಿದ ಆಲೋಚನೆಯ ಗೆರೆಗಳು, ಸ್ವತಃ ಜನಾಂಗೀಯ ಅಸ್ಪೃಶ್ಯತೆಗೆ ತುತ್ತಾದಾಗ ಮೂಡಿದ ಅವಮಾನದ ಗೆರೆಗಳು, ನಂಬಿದವರಿಂದಲೇ ಆದ ದೈಹಿಕ ಹಲ್ಲೆಗಳ ಗೆರೆಗಳು, ಹಲ್ಲೆ ಮಾಡಿದವರೇ ಪಶ್ಚಾತ್ತಾಪಪಟ್ಟು ಅಂಗರಕ್ಷಕರಾದಾಗ ಮೂಡಿದ ಅಚ್ಚರಿಯ ಗೆರೆಗಳು, ಸ್ವಂತ ಸಂಸಾರದ ಸಿಹಿ-ಕಹಿಯ ಗೆರೆಗಳು, ದೇಹ ಧರ್ಮದ ಕಾಮನೆಯ ಗೆರೆಗಳು, ಜೈಲುವಾಸದಲ್ಲಿ ತಾನು ಹೊಲಿದ ಚಪ್ಪಲಿಗಳನ್ನು ರಾಜಕೀಯ ಎದುರಾಳಿಗೆ ನೀಡಿದಾಗ ಮೂಡಿದ ಸಂತೃಪ್ತಿಯ ಗೆರೆಗಳು. ಓಹ್..! ಸಾವಿರಾರು ಅಸ್ತವ್ಯಸ್ತ ಗೆರೆಗಳು ಕೂಡಿಕಟ್ಟಿದ ಗಾಂಧಿಚಿತ್ರದ ರೂಪುರೇಖೆಯನ್ನು ಡಿಎಸ್‍ಎನ್ ಇಲ್ಲಿ ಅಖಂಡವಾಗಿ ಹಿಡಿದಿದ್ದಾರೆ. ಗಾಂಧಿ ಕಥನದಲ್ಲಿ ಬಂದು- ಹೋಗುವ ವ್ಯಕ್ತಿಗಳನ್ನು ಗಮನಿಸಿದರೆ ನಮ್ಮ ಪರಂಪರೆಯ ಯಾವ ರಾಮಾಯಣ, ಮಹಾಭಾರತ ಕಾವ್ಯಗಳ ಕಥಾನಾಯಕರೂ ಇಷ್ಟೊಂದು ಜನರನ್ನು ಭೇಟಿಯಾಗಿದ್ದಿಲ್ಲ. ನಮ್ಮ ಚರಿತ್ರೆಯಲ್ಲಿ ಸ್ಥಾಯಿಯಾಗಿರುವ ಯಾವ ಬುದ್ಧ-ಕ್ರಿಸ್ತನೂ ಈ ಪ್ರಮಾಣದ ಜನಸಂಪರ್ಕ ಇರಿಸಿಕೊಂಡಿದ್ದಿಲ್ಲ. ಗಾಂಧಿಯನ್ನು ಭೇಟಿಯಾದವರ, ದಿಟ್ಟಿಸಿ ನೋಡಿದವರ, ಮಾತುಕತೆಗೆ ಎಳೆದವರ, ಪತ್ರ ವ್ಯವಹಾರ ನಡೆಸಿದವರ, ನಿರ್ಲಕ್ಷ್ಯಿಸಿದವರ, ಹಲ್ಲೆ ಮಾಡಿದವರ, ವಿರೋಧಿಸಿದವರ, ಆರಾಧಿಸಿದವರ, ಹೊರಗೆ ಪ್ರೀತಿಸಿ ಒಳಗೆ ಸಂಚು ಹೂಡಿದವರ ಒಟ್ಟಿನಲ್ಲಿ ಅನೇಕಾನೇಕ ಭಾವ-ವಿಭಾವಗಳೊಂದಿಗೆ ಗಾಂಧಿ ಒಡನಾಟ ಮಾಡಿದವರೆಲ್ಲರ ಚಿತ್ರವನ್ನು ಡಿಎಸ್‍ಎನ್ ಇಲ್ಲಿ ನಿರ್ಮಮಕಾರದಿಂದ ಬಿಡಿಸಿದ್ದಾರೆ. ಗಾಂಧಿ ಕಥನದಲ್ಲಿ ಒಡಮೂಡುವ ಗಾಂಧಿಯ ಚಿತ್ರ, ಇತಿಹಾಸದ ಹಂಗು ಹರಿದು ಹೊರಟ ಅವಧೂತನೊಬ್ಬನ ಚಿತ್ರ. ನಾವು ಇದುವರೆಗೆ ಚರಿತ್ರೆಯ ಗತಿತಾರ್ಕಿಕತೆಯನ್ನು ಅನಿವಾರ್ಯ ವಿಧಿ ಎಂದು ಒಪ್ಪಿಕೊಂಡವರು. ಸಾಮಾಜಿಕ ವಾಸ್ತವದ ಸಮ್ಮುಖದಲ್ಲಿ ಪರಸ್ಪರ ಸೆಣಸಾಟಗಳಿಂದ ರೂಪುಗೊಳ್ಳುವ ವಿಚಾರಶೀಲತೆಯಿಂದ ಜನರು ತಮ್ಮ ಅರಿವನ್ನು ಪಡೆಯುತ್ತಾರೆ ಎಂಬ ಮಾತೂ ಮನುಷ್ಯರು ಚರಿತ್ರೆಯ ವಿಧಿಲಿಖಿತವನ್ನು ಮೀರಲಾರರು ಎಂಬುದನ್ನೇ ಹೇಳುವುದಲ್ಲವೇ.? ಮನುಷ್ಯ, ಚರಿತ್ರೆಯ ಪಟ್ಟುಗಳಿಂದ ಪೆಟ್ಟು ತಿಂದು ಹದಗೊಳ್ಳುತ್ತ ಹೋಗುವವನೇ ಹೊರತು; ಅವನ ಕೆಲವು ಹೊಡೆತಗಳಿಂದ ಸ್ವತಃ ಚರಿತ್ರೆಯೂ ದಿಙ್ಮೂಡಗೊಳ್ಳಬಲ್ಲುದು ಎಂಬುದನ್ನು ನಾವು ಯಾರಾದರೂ ಯೋಚಿಸಿದ್ದೇವೇಯೇ.? ದಿನನಿತ್ಯದ ದಂದುಗದಲ್ಲಿ ಸವಕಲಾಗಿರುವ ಪ್ರಶ್ನೆಗಳನ್ನೇ ತಿರುವು-ಮುರುವಾಗಿಸಿ ಕೇಳಿದರೆ ಹೊಸಮನುಷ್ಯನೂ, ಹೊಸಕಾಣ್ಕೆಯೂ ಕಾಣಿಸಿಕೊಳ್ಳಬಹುದು ಎಂಬುದಕ್ಕೆ ಚರಿತ್ರೆಯುದ್ದಕ್ಕೂ ಸಿಗುವ ಅನೇಕ ನಿದರ್ಶನಗಳಲ್ಲಿ ಮಹಾತ್ಮ ಗಾಂಧಿ ವಿಶಿಷ್ಟರು. ನಮ್ಮ ಮಹಾಭಾರತದಲ್ಲೂ ಹಾಗೊಬ್ಬನಿದ್ದ. ಅವನು ಯುಧಿಷ್ಠಿರ. ಆತನನ್ನು ಧರ್ಮರಾಜ ಎಂದು ಕರೆಯುವುದೇ ಹೆಚ್ಚು ಸೂಕ್ತ ಧರ್ಮಸಂಕಟ ಎಂಬ ಪದ ಮತ್ತು ಪದಾರ್ಥದ ದೇಹಧಾರಿ ಅವನು. ಧರ್ಮರಾಜ ಗೀತೆಯನ್ನು ಕೇಳಲಿಲ್ಲ. ಆದರೆ ಅವನು ಗೀತಾಚಾರ್ಯನಿಗಿಂತಲೂ ಎತ್ತರದಲ್ಲಿ ಬದುಕಿದ. ಅರ್ಜುನ, ಕೃಷ್ಣನಿಂದಲೇ ಗೀತೆಯನ್ನು ಕೇಳಿದ. ಅಂದರೆ ಚರಿತ್ರೆಯ ಕೂಗಿಗೆ ಕಿವಿಗೊಟ್ಟ. ನಾರಾಯಣನ ಸಖ್ಯವಿದ್ದೂ ಆತನಿಗೆ ಚರಿತ್ರೆಯನ್ನು ಮೀರಿ ಬೆಳೆಯಲಾಗಲಿಲ್ಲ. ಚರಿತ್ರೆಯನ್ನು ತನ್ನ ನೈತಿಕ ಪಟ್ಟುಗಳಿಂದ ಮಣಿಸಿ, ಚರಿತ್ರೆಗೆ ಮನುಷ್ಯ ಚೈತನ್ಯದ ಘಾತವನ್ನಿತ್ತು, ಚರಿತ್ರೆಯ ಗುಲಾಮನಾಗದೆ ನಿಜಕ್ಕೂ ರಾಜನಾದವನೆಂದರೆ ಧರ್ಮರಾಜನೊಬ್ಬನೇ. ಮಹಾಪ್ರತಿಭಾನ್ವಿತ ಕವಿ ಕಟ್ಟಿದ ಅಂತಹ ಧರ್ಮರಾಜನ ಚಿತ್ರವೂ ಗಾಂಧಿಯ ಮುಂದೆ ಕಿಂಚಿದೂನವಾಗಿಯೇ ಕಾಣುತ್ತದೆ. ಯಾಕೆಂದರೆ ಗಾಂಧಿ ರಾಜ್ಯಾಧಿಕಾರವನ್ನೂ ಪಕ್ಕಕ್ಕೆ ಸರಿಸಿ, ತನ್ನದೇ ಶಿಷ್ಯರ ಆಳ್ವಿಕೆಯ ಮುಂದೆ ದೀನ-ದುರ್ಬಲರಿಗಾಗಿ ಉಪವಾಸ ಕುಳಿತ ಪರಿವ್ರಾಜಕ. ಧರ್ಮರಾಜನೆಂದರೆ ಯಾರು ಎಂಬುದು ಪ್ರಶ್ನೆ ಅಲ್ಲ, ರಾಜಧರ್ಮವೆಂದರೆ ಏನು ಎಂಬುದು ಸರಿಯಾದ ಪ್ರಶ್ನೆ ಎಂದು ಆ ಪಾಠವನ್ನು ಬೀದಿಯಲ್ಲಿ ಕುಳಿತು ಮಾಡಿದಾತ ಈತ. ಗಾಂಧಿ ಕಥನದ ಮೂರನೆಯ ಹೆಜ್ಜೆಯಲ್ಲಿ ಡಿಎಸ್‍ಎನ್ ಈ ಚಿತ್ರಣವನ್ನು ಕಟ್ಟುವಾಗ ಮಹಾಕಾವ್ಯದ ಉತ್ತುಂಗಾವಸ್ಥೆಯನ್ನು ನಿರೂಪಿಸುವ ಮಹಾಕವಿಯಂತೆ ಬರೆಯುತ್ತಾರೆ. ಇದು ಚರಿತ್ರೆ ಮುಕ್ತಗೊಳ್ಳುವ ಕಾಲ. ಚರಿತ್ರೆ ಮುಕ್ತ ಸ್ಥಿತಿ ಮತ್ತು ಮಾನುಷ ಚೈತನ್ಯದ ಬಗ್ಗೆ ಗಾಂಧಿ ಕಥನದಲ್ಲಿ ಡಿಎಸ್‍ಎನ್ ಮುಖ್ಯವಾದ ಜಿಜ್ಞಾಸೆಯೊಂದನ್ನು ಮಾಡುತ್ತಾರೆ. ಕೃತಿಯಲ್ಲೆಲ್ಲೂ ಅದು ಪ್ರಧಾನವಾಗಿ ಗೋಚರಿಸುವುದಿಲ್ಲ. ಆದರೆ ನಿರೂಪಣೆಯ ಆಳದಲ್ಲಿ ಪ್ರವಹಿಸುತ್ತದೆ. ಆ ಸೂಚನೆಯನ್ನು ಅವರೇ ತಮ್ಮ ‘ಲೇಖಕನ ಮಾತು’ಗಳಲ್ಲಿ ಹೇಳುತ್ತಾರೆ. ‘ಆಧುನಿಕ ರಾಜಕೀಯ ಚಿಂತಕರೆಲ್ಲರೂ ಚರಿತ್ರೆಯ ದಾಸಾನುದಾಸರಾಗಿ ಮನುಷ್ಯ ಓರ್ವ ವ್ಯಕ್ತಿಯಾಗಿ ಅವನು ಹೊಂದಿರುವ ಅಸ್ತಿತ್ವದ ಚರಿತ್ರೇತರ ಆಯಾಮದ ಬಗ್ಗೆ ಯೋಚಿಸಿದಂತೆಯೇ ಇಲ್ಲ.’ ಎಂದು ಬರೆಯುತ್ತ ಮನುಷ್ಯ ತನಗೇ ವಿಶಿಷ್ಟವಾಗಿರುವ ತನ್ನ ಸ್ವಾಯತ್ತತೆಯ ಪರಿಧಿಯಿಂದ ಆಚೆಗೆ ಚಲಿಸಿದಂತೆಲ್ಲ ಹಿಂಸಾತ್ಮಕನಾಗುತ್ತಾನೆ ಎಂಬ ಗಾಂಧಿಯವರ ಕಾಣ್ಕೆಯನ್ನು ಡಿಎಸ್‍ಎನ್ ಸರಿಯಾಗಿ ಗ್ರಹಿಸಿದ್ದಾರೆ. ಮನುಷ್ಯ ಹಿಂಸೆಯತ್ತ ತುಡಿಯುವುದೇ ಚರಿತ್ರೆಯ ಆದಿಬಿಂದು ಅಲ್ಲವೇ? ಚರಿತ್ರೆಯ ಕುರಿತು ಆಧುನಿಕ ಕಾಲದಲ್ಲಿ ಮುಖ್ಯವಾದ ತತ್ತ್ವಜ್ಞಾನೀಯ ಚಿಂತನೆಯನ್ನು ನಡೆಸಿದವನು ಕಾರ್ಲ್ ಮಾರ್ಕ್ಸ್. ಆತನ ಪ್ರಕಾರ ಮಾನವ ಸಮಾಜ ಕಟ್ಟಕಡೆಗೆ ಸಂಘರ್ಷಗಳನ್ನು ದಾಟಿ ಚರಿತ್ರಾತೀತವಾದ ಸಂಪೂರ್ಣ ಸ್ವಾತಂತ್ರ್ಯದ ಸ್ಥಿತಿಯನ್ನು ತಲುಪುತ್ತದೆ. ಪ್ರತಿಯೊಬ್ಬನೂ ತನಗೆಷ್ಟು ಸಾಧ್ಯವೋ ಅಷ್ಟನ್ನು ದುಡಿಯುವ, ತನಗೆಷ್ಟು ಬೇಕೋ ಅಷ್ಟನ್ನು ಮಾತ್ರ ಪಡೆಯುವ, ಸಂಘರ್ಷಮುಕ್ತಗೊಂಡ, ಚರಿತ್ರೆ ಅಂತ್ಯಗೊಳ್ಳುವ ಪರಿಪೂರ್ಣ ಸ್ಥಿತಿ ಇದು. ಈ ಇತಿಹಾಸಮುಕ್ತ ಸ್ಥಿತಿಯನ್ನು ತಲುಪುವುದಕ್ಕೆ ಮಾರ್ಕ್ಸ್ ಹೇಳುವುದು ಕ್ರಾಂತಿಯ ದಾರಿಯನ್ನು. ಗಾಂಧಿ ಹೇಳುವುದು ಸ್ವ-ರಾಜ್‍ನ ದಾರಿಯನ್ನು. ಕ್ರಾಂತಿ; ಜನಸಮುದಾಯಗಳು ಒಟ್ಟು ಸೇರಿ ಮಾಡಬೇಕಾಗಿರುವ ಆಂದೋಲನ. ಬಹಿರಂಗದ ಕ್ರಿಯಾಚರಣೆಗಳಿಗೆ ಇಲ್ಲಿ ಅವಕಾಶ ಹೆಚ್ಚು. ಗಾಂಧಿಯವರ ಸ್ವ-ರಾಜ್ ಮನುಷ್ಯನ ಆತ್ಮಶೋಧದೊಂದಿಗೆ ನಡೆಯುವ ಪ್ರಕ್ರಿಯೆ. ಇಲ್ಲಿ ನಡೆಯುವುದು ಅಂತರಂಗದ ತುಯ್ದಾಟಗಳು. ಧರ್ಮಸಂಕಟವಿಲ್ಲದೆ ಸ್ವ-ರಾಜ್ ಇಲ್ಲ ಇದು ಗಾಂಧಿಯ ಚಿಂತನೆ. ಡಿಎಸ್‍ಎನ್ ಈ ಚಿಂತನೆಯನ್ನು ಸೂಕ್ಷ್ಮವಾಗಿ ನಿರ್ವಹಿಸುತ್ತ ಗಾಂಧಿ ಕಥನವನ್ನು ತತ್ತ್ವಪದವೊಂದರ ಗದ್ಯರೂಪವಾಗಿಸಿದ್ದಾರೆ. ಬಿಳಿಯರ ಮುಂದೆ ಕರಿಯನಾಗಿ, ಸವರ್ಣೀಯರ ಮುಂದೆ ದಲಿತನಾಗಿ, ಗಂಡುಗಳ ಮುಂದೆ ಹೆಣ್ಣಾಗಿ, ಬಹುಸಂಖ್ಯಾತರ ಮುಂದೆ ಅಲ್ಪಸಂಖ್ಯಾತನಾಗಿ, ಸಂಯಮವಾದಿಗಳ ಮುಂದೆ ಸತ್ಯಾಗ್ರಹಿಯಾಗಿ, ಕ್ರಾಂತಿಕಾರಿಗಳ ಮುಂದೆ ಅಹಿಂಸಾವಾದಿಯಾಗಿ, ಸಮಾಜವಾದಿಗಳ ಮುಂದೆ ನೀವು ಕಲಿತ ಸಮಾಜವಾದಿಗಳೆಂದೂ, ತಾನೇ ನಿಜವಾದ ಸಮಾಜವಾದಿಯೆಂದೂ ಘೋಷಿಸಿಕೊಳ್ಳುವ ಗಾಂಧಿಯನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಯನ್ನು ಗಾಂಧಿ ಕಥನ ತನ್ನ ಸಮೃದ್ಧತೆಯಲ್ಲಿ ವಿವರಿಸುವಂತಿದೆ.

author- ನಿತ್ಯಾನಂದ ಬಿ. ಶೆಟ್ಟಿ

courtsey:prajavani.net

https://www.prajavani.net/artculture/book-review/dharma-sankatavannu-668125.html

Leave a Reply