ಎದೆಯ ಸಂವಿಧಾನ

ನೆಲದ ಕೇಡೆಲ್ಲ ಲಾವಾ ಆಗಿ ಹೊರಚಿಮ್ಮಿದಾಗ ಸಬರಮತಿ ಬೆಂಕಿ ನದಿಯಾದದ್ದಿದೆ; ಗೋಧರೆಯ ನೆಲ ಹೊತ್ತುರಿದು ಗುಲಬರ್ಗ್ ಕರಕಲಾದದ್ದೂ ಇದೆ. ವರ್ಷ ಪೂರ್ಣವಾಗಲು ಎಲ್ಲ ಋತುಗಳನ್ನೂ ಅನುಭವಿಸಬೇಕಷ್ಟೇ. ಆದರೆ, ತನ್ನ ವಿರುದ್ಧ ನಡೆದ ದಾಳಿಯನ್ನು, ದೈಹಿಕ, ಮಾನಸಿಕ ಆಘಾತದ ಗಾಯಗಳನ್ನು ಯಾವುದೇ ವ್ಯಕ್ತಿ, ಕುಟುಂಬ, ಷಹರ, ಸಮುದಾಯ, ದೇಶವು ಮಾಯಿಸಿಕೊಳ್ಳುವುದು, ಅದರಿಂದ ಚೇತರಿಸಿಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಈ ಹಿನ್ನೆಲೆಯಲ್ಲಿ ಚಾರಿತ್ರಿಕ ಗಾಯಗಳನ್ನು ಅನುಭವಿಸಿದ ಗುಜರಾತಿಗರ ಮಾಯುವಿಕೆ ಹೇಗಿರಬಹುದೋ ಎಂಬ ಕಾಳಜಿಯ ಮುಳ್ಳು ಎದೆಯಲ್ಲಿ ಸದಾ ಟಿಕ್‍ಗುಡುತ್ತಿತ್ತು. ಹಾಗಾಗಿ, ಹೆಸರು ಬದಲಿಸಿಕೊಳ್ಳುವ ಯಾದಿಯಲ್ಲಿ ಸೇರಿರುವ ಸಬರಮತಿ ದಂಡೆಯ ಅಹಮದಾಬಾದ್ ಎಂಬ ಷಹರಕ್ಕೆ ಎರಡು ಬಾರಿ ಹೋಗಿಬಂದೆ. ಗಾಯಗೊಂಡವರು, ಗಾಯಗೊಳಿಸಿದವರೆಂಬ ಎರಡು ದಂಡೆಗಳ ನಡುವೆ ಪ್ರೇಮ ಸಬರಮತಿ ಹರಿಯುತ್ತಿದ್ದಳು. ಕಣ್ಣೀರು ಬರಿಸಿದವರು, ಕಣ್ಣೀರು ಹರಿಸಿದವರು ಅಲ್ಲಲ್ಲಿ ಜೊತೆಜೊತೆಗೆ ನಡೆಯತೊಡಗಿದ್ದರು. ಕಾಲವೆಂಬ ಮಾಯಕವು ಗಾಯ ಮಾಯಿಸಲು ಮುಲಾಮು ಹಚ್ಚಿದ ಕುರುಹುಗಳಿದ್ದವು.ಅಹಮದಾಬಾದಿನಲ್ಲಿ ಸಿಕ್ಕಿದ ಅನಿಲ ಭಾಯಿ, ರಹಮತ್‍ ಭಾಯಿಯಂತಹವರು ತಮ್ಮ ಕಪಟವಿರದ ಮಾತುಗಳಿಂದ ಎದೆಯ ಸಂವಿಧಾನವನ್ನು ತೆರೆದು ತೋರಿಸಿದರು. ಇದು ಕಾಲಕ್ರಾಂತಿಯೇ ಸರಿ. ಆದರೆ, ಇಂಥ ಸೂಕ್ಷ್ಮ ಕಂಪನಗಳು ವೇಗದ ಚಲನೆಗೆ ದಕ್ಕಲಾರದು. ಹುಳುವಾಗಿ ಹರಿದರಷ್ಟೇ ಕಾಣಬಹುದು. ಸಣಕಲು ಸಾರಥಿಯ ಜೊತೆಗೆ  ಸಬರಮತಿ ನದಿ, ನದಿದಂಡೆಯ ಆಶ್ರಮ ಹೊಕ್ಕು ಬಂದಿದ್ದೆ. ಹಳೆಯ ಅಹಮದಾಬಾದನ್ನು ಸುತ್ತಬೇಕಿತ್ತು. ಪ್ರಣಾಮಿ ದೇವಾಲಯ, ಜೂಲ್ತಾ ಮಿನಾರು, ಶೀಡಿಸೈದಿ ಜಾಲಿಗಳನ್ನು ನೋಡಬೇಕಿತ್ತು. ಕೈಯಡ್ಡಹಾಕಿ ನಿಲ್ಲಿಸಿದ ಆಟೊದವರು ಎಲ್ಲಿಗೆಂದು ಕೇಳಿದ ಮೇಲೆ ಹೋಗಿಬಿಟ್ಟಿದ್ದರು. ನಿಧಾನ ಒಂದು ಆಟೊ ಬಂತು. ಸಣಕಲು ಸಾರಥಿ ಕೂತಿರುವನೋ ಮಲಗಿರುವನೋ ತಿಳಿಯದಂಥ ಭಂಗಿಯಲ್ಲಿದ್ದರು. ಒಂದು ಕಾಲು ಮಡಚಿ ಸೀಟಿನ ಮೇಲಿಟ್ಟು, ಇನ್ನೊಂದೇ ಕಾಲಲ್ಲಿ ಆಟೊ ಓಡಿಸುತ್ತಿದ್ದರು. ಹುಬ್ಬು ಹಾರಿಸಿ ಕಣ್ಣಲ್ಲೇ ಎಲ್ಲಿಗೆ ಎಂದರು. ಪ್ರಣಾಮಿ ಮಂದಿರ ಎಂದೆ. ಹಲವರಿಗೆ ಪ್ರಣಾಮಿ ಎಂಬ ಹೆಸರೇ ಗೊತ್ತಿರಲಿಲ್ಲ. ಆದರೆ ಇವರು ಕಣ್ಮುಚ್ಚಿ ಗೂಗಲಿಸಿ ‘ಸಾರಂಗಪುರ ದರವಾಜಾ, ದೌಲತ್ ಖಾನಾದ ಬಳಿ’ ಎನ್ನುತ್ತ ‘ಹತ್ತಿ ಹತ್ತಿ’ ಎಂದು ಕಣ್ಣಲ್ಲೇ ಸೂಚಿಸಿದರು.ಅವರು ಅನಿಲ ಭಾಯಿ. ಗೈಡ್ ಆಗಿ, ಗುರುವಾಗಿ ಒದಗಿದ ಐವತ್ತರ ಆಸುಪಾಸಿನ ಕೃಶ ಶರೀರಿ. ಅವರನ್ನು ಮಾತಿಗೆಳೆಯಲು ಪ್ರಶ್ನೆಗಳ ಚಾದರ ಹಾಸತೊಡಗಿದೆ. ಒಂದಾದ ಮೇಲೊಂದು ದರವಾಜಾಗಳ ದಾಟುತ್ತ ಹೋದಂತೆ ಅಹ್ಮದ್ ಶಾಹನೆಂಬ ಅರಸು, ಅವ ಕಟ್ಟಿದ ಹದಿನಾಲ್ಕು ಬಾಗಿಲುಗಳು (ದರವಾಜಾ), ಅದರೊಳಗಿನ ನಗರದ ಕುರಿತು ಮಾತು ಅರಳತೊಡಗಿತು. ‘ಇದು ಅಮ್ದಾವಾದು. ಅಮ್ಮದ್ ಷಾ ಕಟ್ಟಿಸಿದ ಊರು. ಈ ದರವಾಜಾಗಳಿದಾವಲ್ಲ, ಇದರ ಒಳಗೆ ಅಮ್ದಾವಾದಿನ ಆತ್ಮ ಇದೆ. ಹೊರಗಡೆ ಬೆಳೀತಾ ಬೆಳೀತಾ ಎರಡು ದರವಾಜಾ ಹೋಯಿತು. ಸಬರಮತಿ ನದಿ ಇತ್ತಲ್ಲ, ಅದೂ ಮೊದಲು ಊರನಡುವೆ ಹರಿತಿದ್ದಿದ್ದು ನಗರ ಕಟ್ಟುವಾಗ ಹೊರಗೆ ಹೋಯಿತು. ಅಷ್ಟೇ ಅಲ್ಲ, ಗೋಮತಿ ಅಂತ್ಲೂ ಒಂದು ನದಿ ಹರಿತಿತ್ತಂತೆ. ಈಗ ಮತಿನೂ ಇಲ್ಲ, ಗೋಮತಿನೂ ಇಲ್ಲದಂತಾಯಿತು’ ಎನ್ನುತ್ತ ಹೊಸ ಷಹರದ ಇತಿಹಾಸ ಹೇಳತೊಡಗಿದರು. ಪಾಂಚ್ ಕುಂವಾ ದರವಾಜಾ, ಪ್ಯಾರ್ ಕಾ ದರವಾಜಾ, ರಾಯಪುರ ದರವಾಜಾ, ಅಸ್ಟೋಡಿಯಾ ದರವಾಜಾ, ಲಾಲ್ ದರವಾಜಾಗಳ ದಾಟಿದೆವು. ದಿಲ್ಲಿ ದರವಾಜಾ ಬಂದಾಗ ಈಗ ಹದಿನೆಂಟು ವರ್ಷ ಕೆಳಗೆ ಸಂಭವಿಸಿದ ಭೀಕರ ಹಿಂಸಾಚಾರದ ವೇಳೆ ಎಲ್ಲೆಡೆ ಪ್ರಕಟಗೊಂಡ ಜೋಡಿಚಿತ್ರಗಳನ್ನು ನೆನಪಿಸಿದರು. ಒಂದೆಡೆ ಭಯ, ಅಸಹಾಯಕತೆಯಿಂದ ಕೈ ಮುಗಿದು ಗಲಭೆಕೋರರನ್ನು ಕೇಳಿಕೊಳ್ಳುತ್ತಿರುವ ದರ್ಜಿ ಕುತ್ಬುದ್ದೀನ್ ಅನ್ಸಾರಿಯವರ ಚಿತ್ರ; ಇನ್ನೊಂದೆಡೆ ತಲೆಗೆ ಕೇಸರಿ ಪಟ್ಟಿ ಬಿಗಿದು ರಾಡು ಝಳಪಿಸುವ ಕ್ರುದ್ಧ ತರುಣ ಅಶೋಕ ಪಾರಮಾರ ಮೋಚಿ ಇದ್ದ ಚಿತ್ರ ಅದು. ಇಡಿಯ ಸನ್ನಿವೇಶವನ್ನು ಅಭಿವ್ಯಕ್ತಿಸುವಂತಿದ್ದ ಅವರಿಬ್ಬರ ಮುಖಭಾವಗಳು ಎಲ್ಲಾ ಮಾಧ್ಯಮಗಳಲ್ಲೂ ರಾರಾಜಿಸಿದ್ದವು. ಕೆಲವು ವರ್ಷಗಳ ಕೆಳಗೆ ಮನಃಪರಿವರ್ತನೆಯಾದ ಅಶೋಕ ಪಾರಮಾರರು ದಿಲ್ಲಿ ದರವಾಜಾ ಬಳಿ ‘ಏಕತಾ ಚಪ್ಪಲಿ ಅಂಗಡಿ’ ತೆರೆದು, ಅದರ ಉದ್ಘಾಟನೆಗೆ ಕುತ್ಬುದ್ದೀನ್ ಅನ್ಸಾರಿಯವರನ್ನೇ ಕರೆದಿದ್ದ ಸಂಗತಿಯನ್ನು ವಿವರಿಸಿದರು.ಸಾರಂಗಪುರ ದರವಾಜಾ ಬಂತು. ಸಣ್ಣಪುಟ್ಟ ಗಲ್ಲಿಗಳಂತಹ ಬೀದಿಗಳಲ್ಲಿ ಎಲ್ಲೆಲ್ಲೂ ಪವಡಿಸಿದ ದನಗಳನ್ನು ದಾಟುತ್ತಾ ಪ್ರಣಾಮಿ ಮಂದಿರ ತಲುಪಿದೆವು. ‘ಒಳಗೆ ಬರ್ತೀರಾ?’ ಎಂದೆ. ‘ನಾನು ನಾಸ್ತಿಕ. ನನ್ನ ರಿಕ್ಷಾನೇ ನನಗೆ ಮಂದಿರ’ ಎಂದರು. ಮಂದಿರದಲ್ಲಿ ಮೈಸೂರು ಪಾಕದಂತಹ ಬಲು ರುಚಿಯಾದ ಪ್ರಸಾದ ಕೊಟ್ಟರು. ಅನಿಲಭಾಯಿಗೂ ಒಂದು ತುಂಡು ಕೊಡಹೋದರೆ, ‘ಬೇಡ, ನಾನು ತುಪ್ಪ ಬಿಟ್ಟಿದ್ದೇನೆ’ ಎಂದರು! ಊಟದ ಸಮಯವಾಗಿತ್ತು. ಮುಖ್ಯ ರೈಲ್ವೆ ಸ್ಟೇಷನ್‌ನ ಎದುರು ಗುಜರಾತಿ ಹೋಟೆಲಿಗೆ ಕರೆದೊಯ್ದರು. ‘ನೀವೂ ಬನ್ನಿ’ ಎಂದು ಕರೆದರೆ, ‘ನಾನು 11ಕ್ಕೆ ಊಟಮಾಡಿ ಹೊರಟರೆ ರಾತ್ರಿ ಎಂಟಕ್ಕೆ ಮನೆ ಮುಟ್ಟಿದ ಮೇಲೇ ಉಣ್ಣುವುದು. ಸಂಜೆ ಐದು ಗಂಟೆಗೆ ಒಂದು ಚಾ ಮಾತ್ರ’ ಎಂದರು!ಎಷ್ಟು ಖಚಿತವಾಗಿದಾರಲ್ಲ ಘನವ್ರತಿ ಎಂದು ಅಚ್ಚರಿಪಡುತ್ತಾ ಗುಜರಾತಿ ಊಟ ಒಳಗಿಳಿಸಿದೆ. ದಾಲ್ ಪಾಯಸದಂತಿತ್ತು. ಎಲ್ಲಕ್ಕೂ ಸಕ್ಕರೆ ಹಾಕಿದ್ದರು. ಇಲ್ಲ, ಇಷ್ಟು ಸಿಹಿ ನಾಲಗೆಯ ಜನ ಕಲ್ಲೆದೆಯವರಾಗಲು ಸಾಧ್ಯವಿಲ್ಲವೆನಿಸಿತು. ಜನರು ಮಿನಾರುಗಳ ತರಹ..  ರು. ಅನಿಲಭಾಯಿ ಅವರನ್ನು ಕೂಗಿ ಕರೆದು, ತೋರಿಸಲು ಹೇಳಿದರು. ಪಕ್ಕಪಕ್ಕ ನಿಂತಿರುವ, ಕಂಪಿಸುವ ಜೋಡಿ ಮಿನಾರುಗಳ ಆವರಣದಲ್ಲಿ ಜನರೇ ಇರಲಿಲ್ಲ. ಒಂದನ್ನು ಅಲುಗಿಸಂದುಗೊಂದು ಸುತ್ತಿ ಜೂಲ್ತಾ ಮಿನಾರ್‌ಗೆ ಹೋದೆವು. ತಲೆತಲಾಂತರಗಳಿಂದ ಮಿನಾರು ನೋಡಿಕೊಳ್ಳುತ್ತಿರುವ ರಹಮತ್ ಭಾಯಿ ಒಳಗಿದ್ದಸಿದರೆ ಇನ್ನೊಂದು ಅಲುಗುತ್ತದೆ. ನೋಡಲು ಬಂದವರು ನೋಡಿ, ದೂಡಿ, ಸ್ವಲ್ಪ ಹಾಳಾಗಿ ಈಗ ಅಲುಗಿಸುವುದು ನಿಷಿದ್ಧ. ಇದನ್ನು ಹೇಗೆ ಕಟ್ಟಿರಬಹುದು ಅಂತ ರಹಮತ್ ಭಾಯಿಯವರನ್ನು ಕೇಳಿದೆ. ‘ಒಂದು ಕಣ್ಣಿನಾಗೆ ಕಸ ಬಿದ್ರೆ ಇನ್ನೊಂದು ಕಣ್ಣಿನಾಗೂ ನೀರು ಬರ್ತದಲ್ವಾ ಮೇಡಂ, ಹಾಂಗೆನೇ ಇದೂ’ ಎಂದರು. ‘ನಿಮ್ಮಂಥಾದ್ದೇ ಪ್ರಶ್ನೆ ಎಲ್ರಿಗೂ ಬಂತು. ಇದು ಕಂಪಿಸಿದ್ರೆ ಅದೂ ಹ್ಯಾಂಗೆ ಕಂಪಿಸ್ತದೆ ಅಂತ. ಇಲ್ಲೇ ಇನ್ನೊಂದು ಜೂಲ್ತಾ ಮಿನಾರಿತ್ತು. ನೋಡುವ ಅಂದ್ಕಂಡಿ ಬ್ರಿಟಿಷ್ರು ಅದ್ನ ಸಾವಕಾಶ ಬಿಚ್ಚಿದ್ರಂತೆ. ಏನು ಕಾಣ್ತು? ಎಂಥಾದ್ದೂ ಇಲ್ಲ, ಮಣ್ಣು. ಕಾಣೋದಾದ್ರೂ ಹ್ಯಾಂಗೆ? ಜೋಡಣೇಲೇ ಇರ್ತದೆ ಜಾದೂ. ಮತ್ತೆ ಮೊದ್ಲಿನ ಹಾಂಗೇ ಜೋಡಿಸಿಟ್ರಂತೆ. ಆದ್ರೆ ಹ್ಯಾಂಗಿಟ್ರೂ ಮೊದಲಿನಂಗೆ ಆಗ್ಲಿಲ್ಲ. ಮೊದಲಿನಂಗೆ ಕಂಪನಾನೂ ಹುಟ್ಲೇ ಇಲ್ಲ. ಕೊನೆಗೆ ಬೀಳಿಸಿಬಿಟ್ರಂತೆ. ಜನರೂ ಹೀಂಗೇ, ಈ ಮಿನಾರುಗಳ ತರಾನೇ. ಅದು ಹ್ಯಾಂಗೆ ಒಬ್ರಿಗೊಬ್ರು ಹೊಂದ್ಕೊಂಡಿದಾರಲ್ಲ ಅಂತ ಅವ್ರನ್ನ ಬಿಡಿಸಿಬಿಡಿಸಿ ಇಟ್ರೆ ಕೊನೆಗೆ ಸರ್ವನಾಶಾನೇ. ಆದ್ರೆ ಏನ್ಮಾಡೋದು ಮೇಡಂ? ಈಗ ಅದೇ ನಡೀತಿದೆ. ನಿಮ್ಮಂಥೋರು ಎಲ್ಲೆಲ್ಲಿಂದ್ಲೋ ಬಂದು ನೋಡಿ ಹೋಗ್ತಿರಿ, ಆದ್ರೆ ಇಲ್ಲಿಯೋರು ತಮ್ಮೋರದ್ದೇ ಗೋರಿ, ಅರಮನೆ ಒಂದನ್ನೂ ಸರಿ ಇಟ್ಕಳಲ್ಲ. ಮೋರಾ ಮೋರಾ ಮಹಾಭಾರತ್, ತೇರಾ ತೇರಾ ರಾಮಾಯಣ್ ಅಂತಾರೆ ಈಕಡೆ. ಅಂದ್ರೆ ನಂದು ನಂದು ಅನ್ನೋದು ಮಹಾಭಾರತ, ನಿಂದು ನಿಂದು ಅನ್ನೋದು ರಾಮಾಯಣಾಂತ. ಇವತ್ತು ಎಲ್ಲಾ ನಿಮ್ದು ಅಂದ ರಾಮನ ಹೆಸರಿನಾಗೆ ಎಲ್ಲಾನೂ ನಂದೇ ಅನ್ನೋ ಮಾಭಾರತ ನಡೀತಾ ಇದೆ. ಅದ್ಕೇ ಗಾಂಧಿಬಾಪು ಹೇಳಿದ್ದು ಇಲ್ಲಿನೋರಿಗೆ ಅರ್ಥವೇ ಆಗ್ತಿಲ್ಲ’ ಎಂದು ದೊಡ್ಡ ಉಸಿರೆಳೆದುಕೊಂಡರು. ಎಂಥ ಮಾರ್ಮಿಕವಾದ ಮಾತು! ಸೂಕ್ಷ್ಮ ಕುಸುರಿಯಲ್ಲಿ ಕೆತ್ತಲ್ಪಟ್ಟ ತರುಲತೆ, ಪಕ್ಷಿಪ್ರಾಣಿ ಪ್ರಪಂಚ ನೋಡಿಬಂದು ಅಚ್ಚರಿಗೊಂಡು ರಿಕ್ಷಾ ಹತ್ತಿದೆ. ನನ್ನ ತಾರೀಫು ಕೇಳಿದ ಅನಿಲಭಾಯಿ ತಣ್ಣಗೆ, ‘ಈ ರಾಜರದು ಇದೊಂದು ಸರಿಯಲ್ಲ. ಕಟ್ಟಿದೋರಿಗೆ ಕೈತುಂಬ ದಾನದತ್ತಿ, ಭೂಮಿ, ಹಣ ಎಲ್ಲ ಕೊಡೋದು. ಕೊನೆಗೆ ತಮ್ಮದಕ್ಕಿಂತ ಚೆನ್ನಾಗಿ ಬೇರೆ ಯಾರಿಗೂ ಕಟ್ಟಿಕೊಡಬಾರದೂಂತ ಅವರ ಎರಡೂ ಕೈ ಕಡಿಯೋದು. ಈ ಮಿನಾರು ಕಟ್ಟಿದೋನು, ಎಲ್ಲಾ ಮುಗ್ದು ಇನ್ನೇನು ರಾಜ ಇನಾಮು ಕೊಡಬೇಕಂತ ಬರುವಾಗ, ತಡೀರಿ, ಒಂದ್ ಕಲ್ಲು ಕೂಡಿಸಲಿಕ್ಕೆ ಮರೆತೆ ಅಂತ ಮೇಲೆ ಹತ್ತಿ ಹೋದನಂತೆ. ಯಾರಿಗೂ ಕಾಣದಂಗೆ ಸರಿ ಇದ್ದಿದ್ದ ಕಲ್ಲನ್ನ ಎಳೆದು ಬಂದನಂತೆ. ಅದಕ್ಕೇ ಈಗದು ಒಂದು ಕಡೆ ವಾಲ್ತಾ ಇದೆ’ ಎಂದರು! ಊರು ಸುತ್ತಾಡಿ, ವಿದಾಯದ ಕಾಲ ಬಂತು. ಎಷ್ಟಾಯಿತೆಂದು ಕೇಳಿದರೆ ಹೇಳುತ್ತಲೇ ಇಲ್ಲ. ಕೊನೆಗೊಂದು ನೋಟು ಎಳೆದು ಕೊಟ್ಟರೆ, ‘ಬೇಡ, ಬೇಡ, ಅಷ್ಟೆಲ್ಲ ಆಗೋದಿಲ್ಲ’ ಎಂದು ಹಾಳೆ ಮೇಲೆ ಗುಣಿಸಿ, ಕೂಡಿಸಿ ನಾಲ್ಕುನೂರಾ ಐವತ್ತು ತೆಗೆದುಕೊಂಡರು. ಅದರಲ್ಲಿ ಚಹದ ದುಡ್ಡು ಹತ್ತು ರೂಪಾಯಿ ಕಳೆದಿದ್ದರು. ‘ನಾಳೆ ಏರ್‌ಪೋರ್ಟಿಗೆ ನೀವೇ ಬಿಡಿ. ಬೆಳಿಗ್ಗೆ ಹನ್ನೊಂದರ ವಿಮಾನ’ ಅಂದೆ. ‘ಆಗೋದಿಲ್ಲ. ನಾನು ಊಟ ಮಾಡಿ ಮನೆ ಬಿಡೋದು ಸರೀ ಹನ್ನೊಂದಕ್ಕೆ. ಬೇಕಾದಷ್ಟು ಆಟೊ, ಟ್ಯಾಕ್ಸಿ ಸಿಗ್ತಾವೆ. ಇಲ್ಲಿ ಯಾರೂ ಮೋಸ ಮಾಡಲ್ಲ. ಹೆಣ್ಣುಮಕ್ಕಳಿಗಂತೂ ಏನೂ ತೊಂದ್ರೆ ಇಲ್ಲ. ಹೋಗ್ಬನ್ನಿ’ ಎಂದರು. ನನಗಿಷ್ಟೇ ಸಾಕು ಎನ್ನುವ ನಿರ್ಲಿಪ್ತತೆ. ಪದುಮ ಪತ್ರದ ಮೇಲಿನ ಜಲಬಿಂದುವಿನಂತಹ ಅನಿಲ ಗುಣ! ಅವರನ್ನು ಫೋಟೊ ಆಗಿ ಬಂದಿಸಿಡುವ ಮನಸ್ಸಾಗಲಿಲ್ಲ. ವಿದಾಯ ಹೇಳಿ ಬೀಳ್ಕೊಂಡಾಗ ಛಕ್ಕನೆ ಹೊಳೆಯಿತು: ಗಾಯಗಳ ಮಾಯಿಸುವ ವಿವೇಕವೆಂಬ ಮುಲಾಮು ನೆಲದ ಗುಣದಲ್ಲೇ ಹಾಸುಹೊಕ್ಕಾಗಿದೆ! ಇರುವೆ ಕಾಲಿನ ಗೆಜ್ಜೆ ಸದ್ದು ಕೇಳುವ ಸೂಕ್ಷ್ಮ ದೇವರುಗಳು ಮಣ್ಣ ಕಣಕಣದಲ್ಲೂ ಇದ್ದಾರೆ.

autho – ಡಾ. ಎಚ್. ಎಸ್. ಅನುಪಮಾ

courtsey:prajavani.net

https://www.prajavani.net/artculture/article-features/h-s-anupama-article-the-constitution-of-the-heart-703866.html

Leave a Reply