ಎಲ್ಲರ ದೇವರು – ಗಣಪತಿಯ ಕಲ್ಪನೆಯಲ್ಲಿವೆ ಹಲವು ಸ್ವಾರಸ್ಯ

ಗಣಪತಿಯ ಕಲ್ಪನೆ ತುಂಬ ಪ್ರಾಚೀನವಾದುದು; ವಿದ್ವಾಂಸರು ವೇದಗಳಲ್ಲಿಯೇ ಗುರುತಿಸಿದ್ದಾರೆ. ನಮ್ಮ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಅಡ್ಡಿ–ಆತಂಕಗಳು ಎದುರಾಗುತ್ತಲೇ ಇರುತ್ತವೆ. ಈ ತೊಂದರೆಗಳನ್ನು ನಿವಾರಿಬಲ್ಲ ದೇವರಗಿ ತೋರಿಕೊಂಡವನೇ ಗಣಪತಿ. ಅವನಿಗೆ ಹಲವು ಹೆಸರುಗಳು: ಗಣೇಶ, ಸುಮುಖ, ವಿನಾಯಕ, ವಿಘ್ನನಾಯಕ, ಗೌರೀಪುತ್ರ, ಗಜಾನನ, ಲಂಬೋದರ, ಏಕದಂತ, ಶಿವಸುತ, ಪಾರ್ವತೀತನಯ, ಮೂಷಿಕವಾಹನ, ವಿಘ್ನರಾಜ – ಹೀಗೆ ನೂರಾರು ಹೆಸರುಗಳು. ಗಣಪತಿಯ ಕಲ್ಪನೆಯಲ್ಲಿ ಹಲವು ಸ್ವಾರಸ್ಯಗಳೂ ಧ್ವನಿಗಳೂ ಸೇರಿಕೊಂಡಿವೆ. ಪಾರ್ವತಿಯ ಮೈಮೇಲಿನ ಲೇಪನದಿಂದ ಜನಿಸಿದವನು ಅವನು. ಹೀಗಾಗಿ ಅವನು ಕಾಮಾತೀತತತ್ತ್ವವನ್ನು ಸಂಕೇತಿಸುತ್ತಾನೆ. ಅವನು ವಿದ್ಯೆಗೆ ಅಧಿಪತಿ; ಬ್ರಹ್ಮಚಾರಿಯೂ ಹೌದು. ವಿದ್ಯೆಗೂ ಬ್ರಹ್ಮಚರ್ಯಕ್ಕೂ ಇರುವ ನಂಟನ್ನು ಅವನಲ್ಲಿ ನೋಡಬಹುದು. ಅವನು ಬ್ರಹ್ಮಚಾರಿಯಾದರೂ ಸಿದ್ಧಿ–ಬುದ್ಧಿ ಎಂಬ ಪತ್ನಿಯರಿಬ್ಬರು ಅವನಿಗೆ ಇದ್ದಾರೆ ಎಂದೂ ಕಾಣಿಸಲಾಗಿದೆ. ನಮ್ಮ ಎಲ್ಲ ಸಿದ್ಧಿಗೂ ಬುದ್ಧಿಗೂ ಅವನೇ ಯಜಮಾನ ಎಂಬುದು ಇದರ ತಾತ್ಪರ್ಯ. ಅವನದ್ದು ಆನೆಯ ಮುಖ; ಇದು ಓಂಕಾರವನ್ನು ಸೂಚಿಸುತ್ತದೆ; ಅವನು ಪ್ರಣವಸ್ವರೂಪಿ. ಅವನ ಕಿವಿಗಳು ವಿಶಾಲವಾಗಿದೆ; ವಿದ್ಯೆಯ ಸಿದ್ಧಿಗೆ ಕೇಳ್ಮೆ ತುಂಬ ಮುಖ್ಯ ಎನ್ನುವುದನ್ನು ಇದು ಸೂಚಿಸುತ್ತದೆ. ಅವನ ದೊಡ್ಡದಾದ ಹೊಟ್ಟೆಯು ಇಡೀ ಬ್ರಹ್ಮಾಂಡವನ್ನೇ ಸಂಕೇತಿಸುತ್ತದೆ.ಹೆತ್ತವರನ್ನೇ ಅವನು ಜಗತ್ತಾಗಿ ಸ್ವೀಕರಿಸಿದವನು. ಹೀಗಾಗಿ ಅವನು ಆದರ್ಶಪುತ್ರ. ತಾಯಿಯ ಜೊತೆಯಲ್ಲಿಯೇ ಅವನು ಭೂಲೋಕಕ್ಕೆ ಬರುತ್ತಾನೆ. ಅಪಹಾಸ್ಯವನ್ನು ದಂಡಿಸಿ, ಚಂದ್ರನಿಗೆ ಶಾಪವನ್ನು ಕೊಟ್ಟನಷ್ಟೆ. ಆದರೆ ಅವನು ಹಾಸ್ಯಪ್ರಿಯ; ಒಳ್ಳೆಯ ಹಾಸ್ಯ ಅವನಿಗೆ ಇಷ್ಟವೇ. ಅವನು ಹಾಸ್ಯಾಧಿಪತಿಯೇ ಹೌದು. ಅವನು ಹೊಟ್ಟೆಗೆ ಸುತ್ತಿಕೊಂಡಿರುವ ಹಾವು ಯೋಗಕ್ಕೆ ಸಂಕೇತ; ಕುಂಡಲಿನೀಶಕ್ತಿಗೆ ಸಂಕೇತ. ಅವನ ವಾಹನ ಇಲಿ. ಅವನ ಪರ್ವತದಂಥ ಶರೀರವನ್ನು ಸಣ್ಣ ಇಲಿ ಹೊರುತ್ತಿದೆ; ಇದೊಂದು ಸೋಜಿಗ; ಮಾತ್ರವಲ್ಲ, ಸಣ್ಣ ಜೀವಿಗೆ ಗಣ್ಯಸ್ಥಾನವನ್ನು ನೀಡಿದವನು ಅವನು ಸಾಮರಸ್ಯಕ್ಕೂ ಸಂಕೇತವಾಗಿದ್ದಾನೆ. ಅವನನ್ನು ನಾವು ಪೂಜಿಸುವುದು ಅವನ ಮೂರ್ತಿಯನ್ನು ಮಣ್ಣಿನಿಂದ ತಯಾರಿಸಿ, ಅಲ್ಲವೆ? ಅಂದರೆ ಅವನು ಪ್ರಕೃತಿಯಲ್ಲಿಯೇ ಇರುವವನು. ಕೊನೆಗೆ ಪ್ರಕೃತಿಗೇ ಸೇರುವವನು. ಅವನಿಗೆ ಹೂವಿಗಿಂತಲೂ ಇಷ್ಟವಾದುದು ಎಲೆಗಳು – ಎಂದರೆ ಪತ್ರಪೂಜೆ; ಅದಕ್ಕಿಂತಲೂ ಪ್ರಿಯವಾದುದು ಹುಲ್ಲಿನ ಪೂಜೆ; ಅದೇ ಗರಿಕೆಯ ಪೂಜೆ – ದೂರ್ವಾಪೂಜೆ. ಸೃಷ್ಟಿಯ ಯಾವ ವಸ್ತುವೂ ಕೂಡ ಯಾವುದೋ ಒಂದು ಕೋನದಿಂದ ಗಣಪತಿಯಂತೆಯೇ ಕಾಣುತ್ತದೆ. ಇದು ಅವನ ನಿರಾಕಾರತತ್ತ್ವಕ್ಕೂ ಸರ್ವಾಕಾರತತ್ತ್ವಕ್ಕೂ ಸಂಕೇತ. ಅವನು ಕಲಾಪ್ರಿಯ; ನಾಟ್ಯವೂ ಅವನಿಗೆ ಇಷ್ಟ; ಸಂಗೀತವೂ ಇಷ್ಟ. ಎಲ್ಲ ಜಾತಿ ಮತ ಪ್ರಾಂತಗಳ ಬೇಧವಿಲ್ಲದೆ ಎಲ್ಲರಿಂದಲೂ ಪೂಜೆಯನ್ನು ಸ್ವೀಕರಿಸುವ ದೇವತೆ ಅವನು; ಭಾರತ ಮಾತ್ರವಲ್ಲದೆ ಹಲವು ಬೇರೆ ಬೇರೆ ದೇಶಗಳಲ್ಲೂ ಗಣಪತಿಯ ಆರಾಧನೆಯನ್ನು ನೋಡಬಹುದು. ಎಲ್ಲ ಪೂಜೆಗಳಿಗೂ ಮೊದಲ ಅವನ ಪೂಜೆ ನಡೆಯಬೇಕು – ಎಂಬ ಪರಂಪರೆಯ ನಿಲುವು ಇಂಥ ಸರ್ವಮಾನ್ಯ ದೇವತೆಗೆ ಸಂದಿರುವುದು ಉಚಿತವಾಗಿಯೇ ಇದೆ. ಒಟ್ಟಿನಲ್ಲಿ ಗಣಪತಿಯ ಒಂದೊಂದು ವಿವರವೂ ಒಂದೊಂದು ಮಹಾತತ್ತ್ವವನ್ನೇ ಪ್ರತಿನಿಧಿಸುತ್ತದೆ.

“author”: “ಛಾಯಾಪತಿ”,

courtsey:prajavani,net

https://www.prajavani.net/artculture/article-features/ganesh-chaturthi-2019-661829.html

Leave a Reply