ಗಲ್ಲಿ ಸ್ವಾಮಿಗಳ ಪ್ರಶಸ್ತಿ ಪ್ರಸಂಗವೂ………

ಗಲ್ಲಿ ಸ್ವಾಮಿಗಳ ಪ್ರಶಸ್ತಿ ಪ್ರಸಂಗವೂ………

ಕರುನಾಡು ಎಂಬ ದೇಶದೊಳು ಇಂಜಿನೀಯರಿಂಗ್ ಕಾಲೇಜುಗಳಿಗೂ ಮಠಗಳಿಗೂ ಭಯಂಕರ ‘ಕಾಂಪಿಟೇಶನ್’ ಏರ್ಪಟ್ಟು ಕೊನೆಗೂ ಮಠಗಳೇ ಮೇಲುಗೈ ಸಾಧಿಸಿದವು. ನಾ ಹೆಚ್ಚೂ, ನೀ ಹೆಚ್ಚೊ, ಎಂದು ಒಂದೆಡೆ ಇಂಜಿನೀಯರಿಂಗ್ ಮೆಡಿಕಲ್ ಕಾಲೇಜುಗಳು ತಲೆಯೆತ್ತುತ್ತಿದ್ದರೆ, ಊರಿಗೊಂದು, ಜಾತಿಗೊಂದು ಮಠ, ಮಠಕ್ಕೊಬ್ಬ ಸ್ವಾಮಿಗಳು ಹುಟ್ಟಿ ನಮ್ಮ ಮಠಕ್ಕೂ ಒಂದು ಮೆಡಿಕಲ್, ಇಂಜಿನೀಯರಿಂಗ್ ಕಾಲೇಜು ಕೊಡಿ ಎಂದು ಸ್ವತಂತ್ರ ದೇಶದ ಪ್ರಭುಗಳೆಂಬುವ ಮಂತ್ರಿಗಳಿಗೆ ರಾಜರ್ಷಿಗಳೆಂಬೋ ಮಠಾಧೀಶರು ಅಪ್ಪಣೆ ಕೊಡಸತೊಡಗಿದರು. ಇಂತಿಪ್ಪ ನಾಡೊಳು ದಿಲ್ಲಿ ಸ್ವಾಮೀಜಿ ಮತ್ತು ಗಲ್ಲಿ ಸ್ವಾಮೀಜಿ ಎಂಬ ಇಬ್ಬರು ಮಠಾಧೀಶರು ಇದ್ದಕ್ಕಿದ್ದಂತೆ ಟಿ.ವಿ. ಪತ್ರಿಕೆಗಳಲ್ಲಿ ಮಿಂಚತೊಡಗಿದರು. ಕಾರಣವಿಷ್ಟೆ……
ದಿಲ್ಲಿ ಸ್ವಾಮೀಜಿ ಕೆಲಸ ಏನಪ್ಪಾಂದರೆ ವಿದೇಶಿಯರು ನಮ್ಮ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ. (ಅವರಿಗೇನು ಹಕ್ಕಿದೆ? ನಮ್ಮ ಸಂಸ್ಕೃತಿ ಹಾಳು ಮಾಡಲು? ನಾವಿಲ್ಲವೇ?) ನಮ್ಮ ಮೇಲೆ ಪರಾಕ್ರಮಣ ಆಗಲಿದೆ. ನಮ್ಮನ್ನಾಳಲು ಪರಕೀಯರು ಮತ್ತೆ ಬರುತ್ತಿದ್ದಾರೆ. (ಈಗ ನಮ್ಮವರೇ ನಮ್ಮನ್ನಾಳುವ ಹಾಳು ಕೆಲಸ ಮಾಡುತ್ತಿರುವಾಗ ಅವರೇಕೆ ಬೇಕು?) ಎಂದೆಲ್ಲ ಅಬ್ಬರಿಸಿ ಜನರೊಳು ದಿಗಿಲು ಹುಟ್ಟಿಸುವದು. ಇನ್ನೂ ಗಲ್ಲಿ ಸ್ವಾಮೀಜಿ ಕೆಲಸ ಏನೆಂದರೆ, ಈ ಭೂಮಿ ನಮ್ಮ ಶರಣರ ಸೃಷ್ಠಿ. ಅವರು ಹುಟ್ಟಿ ಹದಿನಾರು ಕೋಟಿ ವರ್ಷದ ಮೇಲೆ ಬ್ರಹ್ಮ, ವಿಷ್ಣು, ಶಿವ ಹುಟ್ಟಿದರು ಎಂದು ಈ ದೃಶ್ಯವನ್ನು ತಾವು ಕಣ್ಣಾರೆ ಕಂಡವರಂತೆ ಹೇಳುವದು. ಜನರಿಗೆ ಚಿತ್ರ ವಿಚಿತ್ರ ಪ್ರಶ್ನೆ ಕೇಳಿ ತಾವೇ ಉತ್ತರ ಕೊಟ್ಟು ಏನೇನೋ ಬುರುಡೆ ಬಿಟ್ಟು ಬುಡುಬುಡುಕೆ ಬಾರಿಸಿ ಜನರೊಳು ಬುಗಿಲು ಹುಟ್ಟಿಸುವದು. ಹೀಗಿರುತ್ತಿರಲಾಗಿ, ಗಲ್ಲಿಸ್ವಾಮಿಗೆ ತಾನು ಅಂತಾರಾಷ್ಟ್ರೀಯ ‘ಫೀಗರ್’ ಆಗಬೇಕೆಂಬೋ ಆಸೆ ಹುಟ್ಟಿತು. ಮಠಾಧೀಶರಿಗೆ ಆಸೆ ಇರಬಾರದು, ರಾಜಕಾರಣಿಗೆ ಅಹಂ ಇರಬಾರದು ಎಂಬುದೆಲ್ಲ ಹಳೇ ಗಾದೆಗಳು. ಇಂತಿರಲು . . . . .
‘ಲೇ ಶಿಷ್ಯಾ, ಆ ದಿಲ್ಲಿ ಸ್ವಾಮಿನ್ನ ನೋಡು! ದಿನಾ ಟಿವಿನ್ಯಾಗ ಪೇಪರನ್ಯಾಗ ಹೆಂಗ ಫೋಸು ಕೊಟ್ಟು ಮಾತಡ್ತಾನು ನಮಗೂ ಟಿವಿಯವರನ್ನ ಪೇಪರನವರನ್ನ ಕರೆಸಿ ಪ್ರಚಾರ ಕೊಡಿಸು’ ಎಂದು ಮುಂದುವರೆದು ‘ಶಿಷ್ಯಾ, ಏನಾರ ಮಾಡಿ ಒಂದು ಇಂಟರ್ ನ್ಯಾಷನಲ್ ಅವಾರ್ಡ ತಗಬೇಕಲೇ, ನಮ್ಮ ಮಠ, ಈ ಊರು, ಇಂಟರ್ ನ್ಯಾಷನಲ್  ಮ್ಯಾಪಿನ್ಯಾಗ ಗುರ್ತ ಆಗಬೇಕು ಹಂಗ ಏನಾರ ಮಾಡಲೇ‘ ಎಂದು ಅವಲತ್ತುಕೊಂಡರು.
‘ಅಯ್ಯಾ ಅವಾರ್ಡ ಗಿವಾರ್ಡ ಎಲ್ಲಾ ನಿಮಗ್ಯಾಕ, ಸುಮ್ಕ ಮಠ ನೋಡಿಕೊಂಡ ಇರ್ರಿ‘ ಅವೆಲ್ಲ ಬಗಲ ಚೀಲಾ ಹಾಕ್ಕೊಂದು ಭಿಕ್ಷೆಗೆಂತ ಅಲ್ಲದಿದ್ದರೂ ಭಾಷಣಕ್ಕಂತ ಹೊಂಟ ಅಧುನಿಕ ಋಷಿ ಮುನಿಗಳಾದ ಬುದ್ಧಿಜೀವಿಗಳಿಗೆ‘ ಎಂದ ಬೆರಕಿ ಶಿಷ್ಯ.
‘ಅವೆಲ್ಲಾ ಮಾತಾಡಬೇಡ, ನಮಗ ಅವಾರ್ಡ ಕೊಡಿಸು ಇಲ್ಲಾಂದ್ರ ನಾ ಮಠ ಬಿಟ್ಟು ಹೊಕ್ಕನಿ‘ ಎಂದರು ಮಠಾಧೀಶರು.
‘ಬುದ್ದಿ‘ ಆ ಮಾತ ಅನಬ್ಯಾಡ್ರಿ, ಇಟೀಟ ಗಡ್ಡಾ ಬಿಟ್ಟು ಜನರಿಗೆ ಮಂಕಬೂದಿ ಎರಚೋ ಆ ಬುದ್ದಿಜೀವಿನ್ನ ಕರಸಾಣ ಎಂದು ಸಮಾಧಾನಿಸಿದ ಬುದ್ಧಿ ಜೀವಿಗಳಿಗೆ ಕರೆ ಹೋಯಿತು.
‘ನಾವೇನ ಅವನ ಆಳ ಅಂತ ತಿಳದಾನೇನು ಆ ಸ್ವಾಮಿ ಬರಾಕಿಲ್ಲ ಅಂತೇಳು, ಬೇಕಿದ್ದರ ಅವನಿಗೆ ಭೆಟ್ಟಿಗೆ ಬಾ ಅನ್ನು‘ ಎಂದು ಬುದ್ಧಿಯವರ ಶಿಷ್ಯನನ್ನು ಗದರಿಸಿ ಕಳಿಸಿಬಿಟ್ಟರು. ಅಂತಾರಾಷ್ಟ್ರೀಯ ಖ್ಯಾತಿ ಪಡಿಬೇಕೆಂಬೋ ಆಸೇಲಿದ್ದ ಮಠಾಧೀಶರು ಸ್ವತಃ ತಾವೇ ಕಾಫಿ ಕಟ್ಟೆಗೆ ದಯಮಾಡಿಸಿದರು. ಮಠಾಧೀಶರು ಬಂದರು ಅಂತ ಬುದ್ಧಿ ಜೀವಿಗಳು ದಂಡಪ್ರಣಾಮ ಸಲ್ಲಿಸಲಿಲ್ಲ. ಅವರನ್ನು ಕ್ಯಾರೇ ಅನ್ನದೇ ತಮ್ಮ ವಾಗ್ವಿವಿಲಾಸವನ್ನು ಮುಂದುವರೆಸಿದರು. ವರ್ಗರಹಿತ, ಧರ್ಮರಹಿತ, ಜಾತಿರಹಿತ ಸಮಾಜ ಕಟ್ಟುವದು ಹೇಗೆ? ಈಗಿರುವ ಸಮಾಜವನ್ನು ಒಡೆಯುವದು ಹೇಗೆ? ಎಂದೆಲ್ಲ ಚರ್ಚೆಯಾಗಿ ಕಾಫಿ ಕುಡಿದು ಹೊರಟರು. ಹಲವರು ಮುಂದಿನ ಪಾನಿಯ ಸಮಾರಾಧನೆಗೂ ಕೆಲವರು ತಮ್ಮ ಮನೆಗೂ ಕೆಲವರು ತಮ್ಮದಲ್ಲದ ಮುಂದಿನ ಮನೆಗೂ ಹೊರಟರು. ಸ್ವಾಮೀಜಿಗೆ ತನ್ನ ಜೀವನ ಇಂದು ಸಾರ್ಥಕವಾಯಿತು ಎನ್ನಿಸಿತು. ಅವರ ಸ್ವತಂತ್ರ ಮಾತಿನ ಶೈಲಿ ಸ್ವೇಚ್ಛಾಚಾರದ ಜೀವನ ಪದ್ಧತಿ ನೋಡಿ, ಸ್ವಾಮೀಜಿಗೆ ತಾನು ಯಾಕಾದರೂ ಮಠಾ ಸೇರಿದೆ ಎನ್ನಿಸಿತು. ಏನು ನಮ್ಮ ಜನ ಬರ್ತಾವೆ ಪಾದ ಮುಟ್ಟಿ ನಮಸ್ಕಾರ ಮಾಡ್ತಾವೆ, ಸ್ವಲ್ಪ ಹೊತ್ತು ಕುಂತು ‘ಅಪ್ಪರೆ ಹೊಕ್ಕನಿ‘ ‘ಬುದ್ಧಿ ಬರ್ತಿನಿ‘ ಎಂದು ಹೊರಡುತವೆ. ನಾನೂ ‘ಶಿವಾ ಒಳ್ಳೇದು ಮಾಡಲಿ‘ ಎನ್ನುತ್ತೇನೆ. ಛೀ, ಎಂದು ಹಳಹಳಿಸಿದರು. ನಾವು ಇಂಥಾದೊಂದು ಬುದ್ಧಿಜೀವಿ ಟೋಳಿ ಕಟ್ಟಬೇಕು ಎಂದುಕೊಂಡರು.
ಹೀಗಿರುವಾಗ ಗಲ್ಲಿ ಸ್ವಾಮಿಗಳ ಒಬ್ಬ ಶಿಷ್ಯ ಒಂದು ಕಾಲೇಜ ಪ್ರಿನ್ಸಿಪಾಲರಾಗಿದ್ದರು. ಆಗ ಸ್ವಾಮಿಗಳನ್ನು ಒಂದು ಸಮಾರಂಭಕ್ಕೆ ಕರೆದರು. ದೊಡ್ಡ ಸಮಾರಂಭ, ಸ್ವಾಮಿಗಳು ಕಣ್ಣಾಡಿಸಿ ನೋಡಿದರು ಸಭೆಯನ್ನು. ಸಭೆ ತುಂಬ ದೊಡ್ಡ ದೊಡ್ಡ  ಪ್ರೊಪೆಸರ್ ಗಳು , ಸಾಕಷ್ಟು ಸಂಖ್ಯೆ ಗಡ್ಡಧಾರಿ ಬುದ್ಧಿಜೀವಿಗಳು ಇದ್ದರು. ಭಾಷಣ ಆರಂಭಿಸಿದರು.
‘ನಮ್ಮ ಮಠ ಉತ್ತರದಲ್ಲಿತ್ತು. ಈಗ ಚೀನಾ ದೇಶವಿದೆಯಲ್ಲ ಅಲ್ಲಿ ! ಸಭಿಕರಿಗೆ ಗಾಬರಿ – ನಮ್ಮ ಮಠಾಧೀಶರು ಕೆಂಪಂಗಿ ತೊಡುತ್ತಿದ್ದರು. ನೀವೆಲ್ಲ ಕೇಳಬಹುದು. ಹಾಗಿದ್ದರೆ ನೀವೇಕೆ ದಕ್ಷಿಣಕ್ಕೆ ಬಂದಿರಿ? ನಿಮ್ಮ ಬಟ್ಟೆ ಏಕೆ ಕಾವಿ? ಎಂದು. ಶಾಂತರಾಗಿ ಕೇಳಿ, ತಾಯಿ ಗಂಗವ್ವ ನಮ್ಮನ್ನ ಜನರ ಪಾಪ ತೊಳೆಯಲು ದಕ್ಷಿಣಕ್ಕೆ ಹೋಗಿ ಎಂದು ಅಪ್ಪಣೆ ಮಾಡಿದಳು. ಅದಕ್ಕೆ ನಾವು ದಕ್ಷಿಣಕ್ಕೆ ಬಂದೆವು. ಬರುವಾಗ ಬಿಸಿಲು ಮಳೆ ಗಾಳಿಗೆ ನಮ್ಮ ಕೆಂಪಂಗಿ ಕಾವಿ ಬಣ್ಣಕ್ಕೆ ಬಂತು. ಅಣ್ಣ ಬಸವಣ್ಣ ಏನಾಗಿದ್ದರು? ಮಂತ್ರಿ ಆಗಿದ್ದರು. ಅವರು ಸಣ್ಣವರಿದ್ದಾಗ ಅವರನ್ನು ಅವರ ತಾಯಿ ಏನೆಂದು ಕರೆಯುತ್ತಿದ್ದಳು? ಬಸು ಬಸು ಅಂತ ಕರಿತಿದ್ದಳು. ಪಶ್ಚಿಮ ಬಂಗಾಲ ದೇಶದಾಗ ಒಬ್ಬ ಪ್ರಧಾನಿ (ಮುಖ್ಯ ಮಂತ್ರಿ) ಇದ್ದರು. ಅವರನ್ನು ನೀವೆಲ್ಲ ಏನೆಂತ ಕರಿತೀರಿ? ಬಸು ಬಸು ಅಂತ. ಹೀಗೆ ಚಿತ್ರ ವಿಚಿತ್ರ ಪ್ರಶ್ನೆಗಳನ್ನು ಕಲ್ಪನಾತೀತವಾದ ಕತೆಗಳನ್ನು ಕಟ್ಟಿ ತಾವೇ ಪ್ರಶ್ನೆ ಕೇಳಿ ತಾವೇ ಉತ್ತರ ಕೊಟ್ಟು ಭಾಷಣ ಮುಗಿಸಿದರು. ಕುಳಿತ ಜನರಿಗೆ ತಿಳಿಲಿಲ್ಲ. ಗಡ್ಡದ ಅಣ್ಣಂದಿರಿಗೆಲ್ಲ ದಿಗಿಲಾಯಿತು. ಈ ಸ್ವಾಮಿ ಕಾವಿ ಅಂಗಿಯ ಕಾಮ್ರೆಡ್ ಎಂದು ಬಿರುದು ಕೊಟ್ಟರು. ಸ್ವಾಮಿಗಳನ್ನು ಅಪ್ಪಿಕೊಂಡು ಒಪ್ಪಿಕೊಂಡರು. ಟೋಳಿ ಸಿದ್ಧವಾಯಿತು. ಸ್ವಾಮಿಗಳು ಖುಶ್.ಯಾರೋ ಕಿಲಾಡಿ ಒಬ್ಬ ಸ್ವಾಮಿಗಳ ಅವಾರ್ಡ ಆಸೆ ನೋಡಿ
‘ಸ್ವಾಮಿಗಳೇ ಅವರಿವರ ಅವಾರ್ಡಿಗೆ ನೀವೇಕೆ ಆಸೆ ಪಡ್ತೀರಿ? ನೀವೇ ಒಂದು ಇಂಟರ್ ನ್ಯಾಷನಲ್  ಅವಾರ್ಡ ಶುರು ಮಾಡ್ರಿ ಎಂದು ಬಿಟ್ಟ, ಸ್ವಾಮೀಜಿಗೆ ಈ ಐಡಿಯಾ ಒಳ್ಳೆಯದ್ದೇನಿಸಿ ಸಮಿತಿ ರಚಿಸಿದರು.ಒಂದು ಅಂತಾರಾಷ್ಟ್ರೀಯ ಅವಾರ್ಡ, ಹತ್ತು ಲಕ್ಷದ ಹಮ್ಮಣಿ, ಶಾಲೂ, ಹಾರ. ಅರ್ಹತೆ ಸಮಾಜ ಸೇವೆ, ಎಂದು ಘೋಷಿಸಿದರು. ಸಮಿತಿಯವರೆಲ್ಲ ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದರು. ಮೊದಲ ಅವಾರ್ಡ, ಮುಂಜಾನೆ ಪ್ರೆಸ್ಸಿನವರ ಮುಂದೆ ತನ್ನ ನಾಲ್ಕನೇ ಹೆಂಡತಿಗೆ ಕಿಸ್ ಕೊಟ್ಟು ಸಂಜೆ ವೇಳೆಗೆ ಡೈವೋರ್ಸ ಕೊಟ್ಟ ಆ ಮುದುಕನೇ ಬೆಸ್ಟು ಎಂದರು. ಅದಕ್ಕೆ ತಕ್ಕಂತೆ ಶಬ್ದ ಜಾಲ ಹೆಣೆದರು. ತನ್ನ ಜನರನ್ನು ಬಂಧ ಮುಕ್ತ ಮಾಡಿದ, ದೇಶಕ್ಕಾಗಿ ಹೋರಾಡಿದ, ಸರ್ವಸ್ವ ತ್ಯಾಗ ಮಾಡಿದ ಮಹನೀಯ ಅಂತಾರಾಷ್ಟ್ರೀಯ ವ್ಯಕ್ತಿ ಎಂದು ಹೊಗಳಿ ಸುತ್ತ ನಾಕು ಜನ ನಿಂತು, ಮ್ಯಾಲಿಂದ ಹೂಚೆಲ್ಲಿ, ಕೊಳ್ಳಾಗ ಒಂದು ಹಾರ ಹಾಕಿ ಹತ್ತು ಲಕ್ಷ ಹಮ್ಮಣಿ ಕೊಟ್ಟು ಕಳಿಸಿದರು.
ಎರಡನೇ ವರ್ಷ ಬಂದಿತು. ಈ ವರ್ಷ ಸ್ಲಂ ಪರ ಹೋರಾಡಿದ ಮಹಿಳೆಗೆ ಅವಾರ್ಡ ಎಂದು ನಿರ್ಧರಿಸಿತು ಸಮಿತಿ. ಆಯಮ್ಮ ಹಿಂದೆ ಸೆಕ್ಸ್ ಪಿಕ್ಚರನಲ್ಲಿ ನಟಿಸಿದ್ದಳು. ಅದರಿಂದ ಜನರಲ್ಲಿ ಸೆಕ್ಸ ಜಾಗೃತಿ ಮಾಡಿದ್ದಾಳೆ, ಆಯಮ್ಮನ ಕಾಟ ತಡೀದೇ ಅವಳ ಮೂವರು ಗಂಡಂದಿರು ದೇಶಾಂತರ ಹೋಗಿದ್ದಾರೆ. ಹೀಗಾಗಿ ಇವರು ಅಂತಾರಾಷ್ಟ್ರೀಯ ಮಹಿಳೆ ಎಂದೆಲ್ಲ ಸ್ವಾಮಿಗಳಿಗೆ ಒಪ್ಪಿಸಿದರು. ಸ್ವಾಮಿಗಳು ತಮ್ಮ ಪೂರ್ವಾಶ್ರಮದಲ್ಲಿ ಅವಳ ಒಂದು ಪಿಕ್ಚರ್ ನೋಡಿದ್ದರು. ಅದರಲ್ಲಿ ಈಯಮ್ಮ ಬೆನ್ನುಪೂರ್ತಿ ಖಾಲಿ ಬಿಟ್ಟುಕೊಂಡು ಸ್ನಾನ ಮಾಡಿದ್ದಳು. ಈ ದೃಶ್ಯ ಸ್ವಾಮಿಗಳ ಚಿತ್ತದಲ್ಲಿ ಅಳಿಯದೇ ಉಳಿದಿತ್ತು. ಸ್ವಾಮಿಗಳು ಅವಾರ್ಡ ಕಮೀಟಿಗೆ ಅಸ್ತು ಎಂದರು. ಮನದಲ್ಲಿ ಅವಳಿಗೆ ಅವಾರ್ಡ ಕೊಟ್ಟು ಬೆನ್ನು ಸವರಬಹುದಲ್ಲಾ ಎಂಬ ಇಚ್ಛೆ ಅವರಿಗಾಯಿತು. ಅವಾರ್ಡ ದಿನವೂ ಬಂದಿತು. ಸ್ಲಂ ಪರ ಹೊರಾಡಿದ ಆ ಅಂತರಾಷ್ಟ್ರೀಯ ಮಹಿಳೆ ಬಂದಳು. ತಾವು ನೋಡಿದ್ದ ಆ ಹಿರೋಯಿನ್ ಎಲ್ಲಿ? ಸೀರಿ ಉಟ್ಟು ದೊಡ್ಡ ಕುಂಕುಮ ಇಟ್ಟ ಈ ಮಹಿಳೆ ಎಲ್ಲಿ? ಸ್ವಾಮಿಗಳಿಗೆ ನಿರಾಶೆಯಾಯಿತು. ಆವಾರ್ಡ ಕೊಟ್ಟು ಅರ್ಧ ನಿರಾಶೆಯಿಂದಲೂ ಅರ್ಧ ಹಳೇ ನೆನಪಿನಿಂದಲೂ ಅತೀ ಸಹಜ ಎನ್ನುವಂತೆ ಅವಳ ಬೆನ್ನು ಸವರಿದರು. ಆ ಗೌರಮ್ಮನಿಗೆ ಏನೇನು ನೆನಪಾದವೋ? ಸಹಸ್ರಾರು ಸಂಖ್ಯೆಯಲ್ಲಿ ನೆರೆದ ಜನರ ಮುಂದೆ ಸ್ವಾಮಿಗಳ ಗಲ್ಲಕ್ಕೆ ಮುತ್ತು ಕೊಟ್ಟೇ ಬಿಟ್ಟಳು. ಸ್ವಾಮಿಗಳ ಮುಖ ಕೆಂಪಾಯಿತು. ಜನರ ಮುಖ ಕಪ್ಪಿಟ್ಟಿತು. ಬುದ್ಧಿಜೀವಿಗಳು ಚಪ್ಪಾಳೆ ತಟ್ಟಿದರು. ಸಭೆ ಮುಕ್ತಾಯವಾಯಿತು.
ಮರುದಿನ ಭಕ್ತ ಮಂಡಳಿ ಸೇರಿತು. ಸ್ವಾಮಿಗಳಿಗೆ ವಾರ್ನಿಂಗ್ ಕೊಟ್ಟಿತು.
‘ನಿಮ್ಮ ಟೋಳಿನ ಮಠದಿಂದ ಹೊರಗೆ ಕಳಿಸಿ’ ‘ಪೀಠ ಬಿಟ್ಟು ಕೆಳಗೆ ಇಳಿರಿ’ ಎಂದೆಲ್ಲ ಮಾತು ಬಂತು. ಸ್ವಾಮಿಗಳ ಕಾಲು ಕೆಸರಲ್ಲಿ ಇಳಿದಿದ್ದವು. ಇಷ್ಟೆಲ್ಲ ಆದರೂ ಅವರು ಇಂಟರ್ನ���ಯಾಶನಲ್ ಫೀಗರ್ ಆಗಲೇ ಇಲ್ಲ. ‘ನೊಣ ತಿಂದು ಜಾತಿ ಕೆಡಿಸಿಕೊಂಡಾಗಿತ್ತು’ ಇತ್ತ ದಿಲ್ಲಿ ಸ್ವಾಮಿ ದಿನಾಲು ಟಿ.ವಿ. ಪತ್ರಿಕೆಯಲ್ಲಿ ಕಾಣಿಸಿಕೊಂಡಾಗೆಲ್ಲ ಗಲ್ಲಿ ಸ್ವಾಮಿಗಳ ಹೊಟ್ಟೆ ತೊಳೆಸಿದಂತಾಗುತ್ತಿತು.
ಇಂತಿರಲು ಓದುಗರೇ ಮುಂದಿನ ಮಜಾ ಕೇಳಿರಿ. ಒಂದು ದಿನ ದಿಲ್ಲಿಸ್ವಾಮಿಗಳ ಮಠದ ಮ್ಯಾನೇಜರ ಗಲ್ಲಿಸ್ವಾಮಿಗಳಿಗೆ ಒಂದು ಕವರ ತಂದು ಮುಟ್ಟಿಸಿದ. ನಂತರ ಗಲ್ಲಿಸ್ವಾಮಿ ಓದಿ ತಾವೂ ಒಂದು ಕವರ ಕೊಟ್ಟು ತಮ್ಮ ಮ್ಯಾನೇಜರನನ್ನು ದಿಲ್ಲಿಸ್ವಾಮಿಗಳ ಸನ್ನಿಧಾನಕ್ಕೆ ಕಳಿಸಿದರು. ಹೀಗೆ ಹತ್ತೆಂಟು ಕವರಗಳ ಓಡಾಟವಾಯಿತು. ಪರಸ್ಪರ ಬೈದಾಡಿಕೊಂಡರು. ಓದುಗರೇ ಮುಂದಿನದು ಇತಿಹಾಸದ ಸೃಷ್ಠಿ. ದಿಲ್ಲಿ ಸ್ವಾಮಿಗಳ ಶಿಷ್ಯ ಒಬ್ಬ ಒಂದು ಅಂತರಾಷ್ಟ್ರೀಯ ಅವಾರ್ಡ ನೀಡುವ ಸಂಸ್ಥೆ ಅಧ್ಯಕ್ಷನಾಗಿದ್ದ. ಆ ವರ್ಷದ ಅವಾರ್ಡ ಲಿಸ್ಟಿನಲ್ಲಿ ಗಲ್ಲಿ ಸ್ವಾಮಿಗಳ ಹೆಸರು ಕಾಣಿಸಿಕೊಂಡಿತು. ಮರುವರ್ಷ ಗಲ್ಲಿ ಸ್ವಾಮಿಗಳು ಕೊಡ ಮಾಡುವ ಅಂತರಾಷ್ಟ್ರೀಯ ಅವಾರ್ಡ ದಿಲ್ಲಿ ಸ್ವಾಮಿಗಳ ಮಡಿಲಲ್ಲಿ ಬಿದ್ದಿತ್ತು. ಗಲ್ಲಿ ಸ್ವಾಮಿ ಆತ್ಮ ತೃಪ್ತಿ ಕಂಡಿತು. ಎರಡೂ ಮಠದ ಭಕ್ತರು ಖುಷ್. ಪಾಪ ಬುದ್ಧಿಜೀವಿಗಳು ಮಾತ್ರ ಗಡ್ಡ ಕೆರೆದುಕೊಳ್ಳಹತ್ತಿದ್ದರು.

 ಲೇಖಕರು  :   ಶ್ರೀನಿವಾಸ ಹುದ್ದಾರ .

Leave a Reply