“ಹುಲಿಯ ಬೆನ್ನೇರಿದ ಅರಸನ ಉನ್ನತಿ–ಅವನತಿಯ ಕಥೆ”,

ದೊಡ್ಡ ವೀರರಾಜೇಂದ್ರ ಲೇ: ಪ್ರಭಾಕರ ಶಿಶಿಲ ಪು: 228; ಬೆ: ರೂ. 170 ಪ್ರ: ವಸಂತ ಪ್ರಕಾಶನ, ನಂ. 360, 10ನೇ ‘ಬಿ’ ಮುಖ್ಯರಸ್ತೆ, ಜಯನಗರ, ಬೆಂಗಳೂರು–11 ಪ್ರಭಾಕರ ಶಿಶಿಲರ ‘ದೊಡ್ಡ ವೀರರಾಜೇಂದ್ರ’ ಕಾದಂಬರಿ, 1781ರಿಂದ 1809ರವರೆಗೆ ಕೊಡಗನ್ನು ಆಳಿದ ದೊಡ್ಡ ವೀರರಾಜೇಂದ್ರ ಎನ್ನುವ ರಾಜನ ಜೀವನ–ಸಾಧನೆಯ ಕಥೆ. ಪುಟ್ಟ ನಾಡು ಕೊಡಗನ್ನು ಶೌರ್ಯ ಹಾಗೂ ಸ್ವಾಭಿಮಾನದ ಬಂಧಗಳಲ್ಲಿ ಅಖಂಡವಾಗಿರಿಸಿದ ಸಾಧನೆ ಹಾಗೂ ದಕ್ಷಿಣ ಕನ್ನಡದವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ ಕೀರ್ತಿ ದೊಡ್ಡ ವೀರರಾಜೇಂದ್ರನದು. ಐತಿಹಾಸಿಕ ಕಾದಂಬರಿಗಳಲ್ಲಿ ಸಾಮಾನ್ಯ ಎನ್ನುವಂತಾಗಿರುವ ರಾಜನ ಧೀರೋದಾತ್ತ ಗುಣಗಳ ವಿಜೃಂಭಣೆಯಲ್ಲಿ ಆತನ ಮನುಷ್ಯಸಹಜ ಸ್ವಭಾವ ಹಿನ್ನೆಲೆಗೆ ಸರಿದುಬಿಡುತ್ತದೆ. ಆದರೆ, ಪ್ರಭಾಕರ ಶಿಶಿಲರ ಕಾದಂಬರಿಯ ನಾಯಕ ರಾಗದ್ವೇಷಗಳನ್ನು ಒಳಗೊಂಡ ಮನುಷ್ಯನಾಗಿ ಚಿತ್ರಿತನಾಗಿರುವುದು ವಿಶೇಷ. ದೊಡ್ಡ ವೀರರಾಜೇಂದ್ರನ ಮಹತ್ವಾಕಾಂಕ್ಷೆ, ಸ್ವಾಭಿಮಾನ, ಪ್ರಜಾವಾತ್ಸಲ್ಯ, ಶೌರ್ಯಗಳ ಜೊತೆಗೆ ಕ್ರೌರ್ಯವನ್ನೂ ಪಾಪಭೀತಿಯನ್ನೂ ಕಾದಂಬರಿಕಾರರು ಚಿತ್ರಿಸಿದ್ದಾರೆ. ಹೀಗೆ ಚಿತ್ರಿಸುವಾಗ ಯಾವುದನ್ನೂ ಅತಿರೇಕಕ್ಕೊಯ್ಯದ ಶೈಲಿ ಹಾಗೂ ಯಾರ ಪಕ್ಷವನ್ನೂ ವಹಿಸದೆ ಕೇವಲ ಕಥೆಯನ್ನಷ್ಟೇ ನಿರೂಪಿಸಬೇಕು ಎನ್ನುವ ಲೇಖಕರ ಸಂಯಮ ರಂಜನೆಯಾಚೆಗಿನ ಅರ್ಥಪೂರ್ಣತೆಯನ್ನು ಕಾದಂಬರಿಗೆ ದೊರಕಿಸಿಕೊಟ್ಟಿದೆ. ಕೊಡಗು ಇತಿಹಾಸಕ್ಕೆ ಸಂಬಂಧಿಸಿದಂತೆ ಇದು ಪ್ರಭಾಕರ ಶಿಶಿಲರ ಎರಡನೇ ಕಾದಂಬರಿ. ಈ ಮೊದಲು ‘ನದಿ ಎರಡರ ನಡುವೆ’ ಕಾದಂಬರಿಯಲ್ಲಿ, ಕೊಡಗನ್ನು ಆಳಿದ ಆಲೇರಿ ರಾಜವಂಶಸ್ಥರ ಇತಿಹಾಸವನ್ನು ಅವರು ಚಿತ್ರಿಸಿದ್ದರು. ಆ ಕಥನದ ಗಮನಾರ್ಹ ಪಾತ್ರಗಳಲ್ಲೊಂದಾಗಿದ್ದ ದೊಡ್ಡ ವೀರರಾಜೇಂದ್ರನ ಪಾತ್ರವನ್ನು ಪ್ರಸ್ತುತ ಕೃತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಚಿತ್ರಿಸಿದ್ದಾರೆ. ದೊಡ್ಡ ವೀರರಾಜನೇಂದ್ರ ಅರಸನದು ಸಂಘರ್ಷದ ಬದುಕು. ಆತನ ತಂದೆ ಲಿಂಗರಾಜೇಂದ್ರ ಪದಭ್ರಷ್ಟನಾಗಿ ಅಲೆಯುತ್ತ, ಹೈದರಾಲಿಯ ಸಹಾಯದಿಂದ ಕೊಡಗಿನ ಅರಸನಾಗುತ್ತಾನೆ. ಲಿಂಗರಾಜೇಂದ್ರನ ಸಾವಿನ ನಂತರ ಸುಬ್ಬಪ್ಪಯ್ಯ ಎನ್ನುವ ಅಮಲದಾರ ಹೈದರಾಲಿಯ ಮನಸ್ಸು ಕೆಡಿಸುತ್ತಾನೆ. ಅದರ ಪರಿಣಾಮವಾಗಿ ಲಿಂಗರಾಜೇಂದ್ರನ ರಾಣಿ ಹಾಗೂ ಮಕ್ಕಳು ಕೊಡಗಿನಿಂದ ಸ್ಥಾನಭ್ರಷ್ಟರಾಗಿ ಪಿರಿಯಾಪಟ್ಟಣದಲ್ಲಿ ಬಂದಿಗಳ ರೀತಿ ಬದುಕಬೇಕಾಗುತ್ತದೆ. ಅಲ್ಲಿಯೇ ಅವರ ವಿದ್ಯಭ್ಯಾಸ ನಡೆಯುತ್ತದೆ. ಲಿಂಗರಾಜೇಂದ್ರನ ಹಿರಿಯಮಗ ದೊಡ್ಡ ವೀರರಾಜೇಂದ್ರ ಮಹತ್ವಾಕಾಂಕ್ಷಿ. ಅಪ್ಪನ ಅರಸುತನವನ್ನು ದಕ್ಕಿಸಿಕೊಳ್ಳಲು ಆತ ನಡೆಸುವ ಸಾಲು ಸಾಲು ಪ್ರಯತ್ನಗಳ ಕಥನವೇ ಈ ಕಾದಂಬರಿ. ಹೈದರಾಲಿ ಜಾಗದಲ್ಲಿ ಟಿಪ್ಪು ಬರುತ್ತಾನೆ. ಆದರೆ, ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಟಿಪ್ಪು ಕೂಡ ವೀರರಾಜೇಂದ್ರನಿಗೆ ಕೊಡಗು ಪಟ್ಟ ಬಿಟ್ಟುಕೊಡಲು ಮುಂದಾಗುವುದಿಲ್ಲ. ಇಂಗ್ಲಿಷರ ಸಹಾಯವನ್ನು ಪಡೆಯುವ ಮೂಲಕ ದೊಡ್ಡ ವೀರರಾಜೇಂದ್ರ ಕೊಡಗಿನ ರಾಜನಾಗುತ್ತಾನೆ. ಕೊಡಗಿನಿಂದ ಆಚೆಗೂ ಆತನ ದೃಷ್ಟಿ ಹರಿಯುತ್ತದೆ. ಕೊಡವರ ಸ್ವಾಭಿಮಾನದ ಸಂಕೇತವಾಗಿ ಆತ ರೂಪುಗೊಳ್ಳುತ್ತಾನೆ. ಆದರೆ, ಸಂಘರ್ಷದ ಹಾದಿಯಲ್ಲಿ ಪಡೆದ ಗದ್ದುಗೆ ದೊಡ್ಡ ವೀರರಾಜೇಂದ್ರನಿಗೆ ನೆಮ್ಮದಿಯನ್ನೇನೂ ತರುವುದಿಲ್ಲ. ಕೊಡಗಿನ ಮೂಲಕ ಹಾದುಹೋಗಲು ಬ್ರಿಟಿಷರಿಗೆ ಸಹಾಯ ಮಾಡುವ ಮೂಲಕ ಟಿಪ್ಪುವಿನ ಪತನಕ್ಕೆ ವೀರರಾಜೇಂದ್ರ ಕಾರಣನಾಗುತ್ತಾನೆ. ಶ್ರೀರಂಗಪಟ್ಟಣದ ಪತನಕ್ಕೆ ಪರೋಕ್ಷವಾಗಿ ಕಾರಣವಾದುದು ಆತನ ಪಾಪಪ್ರಜ್ಞೆಗೆ ಕಾರಣವಾಗುತ್ತದೆ. ಬ್ರಿಟಿಷರೊಂದಿಗೆ ಸ್ನೇಹ ಮಾಡಿದರೂ ಆ ಸಖ್ಯದ ಪೊಳ್ಳುತನ ಆತನನ್ನು ಇನ್ನಷ್ಟು ಹಣ್ಣಾಗಿಸುತ್ತದೆ. ಜೀವನದ ಉನ್ನತಿಯ ಮಗ್ಗುಲಲ್ಲೇ ಪತನವೂ ಇರುವುದನ್ನು ಕಾದಂಬರಿ ತುಂಬಾ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಶತ್ರುರಾಜರ ಹೆಂಡಿರು ಮಕ್ಕಳನ್ನು ಕಾರಣವಿಲ್ಲದೆ ಕೊಲ್ಲಿಸಿದ ಕಾರಣಕ್ಕಾಗಿ ಲಿಂಗರಾಜೇಂದ್ರ ಎದುರಿಸಿದ ಮಾನಸಿಕ ಕ್ಷೋಭೆಯ ಇನ್ನೊಂದು ರೂಪವಾಗಿ, ತನ್ನ ತಮ್ಮನನ್ನು ಕೊಲ್ಲಿಸಿದ ಪಾಪಪ್ರಜ್ಞೆ ದೊಡ್ಡ ವೀರರಾಜೇಂದ್ರನನ್ನು ಕಾಡುತ್ತದೆ. ‘ಹುಚ್ಚು ಹಿಡಿದ ರಾಜ ಹುಚ್ಚು ನಾಯಿಗಿಂತ ಅಪಾಯಕಾರಿ’ ಎನ್ನುವ ಪಾತ್ರವೊಂದರ ಮಾತನ್ನು ಕಾದಂಬರಿಯಲ್ಲಿನ ಒಟ್ಟಾರೆ ಕಥನಕ್ಕೂ ಅನ್ವಯಿಸಬಹುದು. ಇಲ್ಲಿ ಮನಸ್ಸಿನ ಹುಚ್ಚಿಗಿಂತಲೂ ಅಧಿಕಾರದ ಹುಚ್ಚೇ ಎದ್ದುಕಾಣಿಸುತ್ತದೆ. ಅಧಿಕಾರದ ಹುಚ್ಚಿನಿಂದಾಗಿ ಹರಿಯುವ ರಕ್ತದ ಹೊಳೆಯಲ್ಲಿ ಸಂಬಂಧಗಳೂ ತೇಲಿಹೋಗುವುದನ್ನು ಗಮನಿಸಬೇಕು. ಶವಗಳ ಮೇಲೆ ಗೆಲುವಿನ ಅಹಮ್ಮಿನಲ್ಲಿ ನಿಂತ ಸಾಮ್ರಾಟ, ಪ್ರೇತಗಳ ಪಿಸುಮಾತುಗಳನ್ನೂ ಆಲಿಸದಿರಲು ಸಾಧ್ಯವಿಲ್ಲ ಎನ್ನುವ ಸತ್ಯದ ನಿದರ್ಶನಗಳಂತೆ ಲಿಂಗರಾಜೇಂದ್ರ–ದೊಡ್ಡ ವೀರರಾಜೇಂದ್ರ ಪಾತ್ರಗಳು ಕಾಣಿಸುತ್ತವೆ. ಕಾದಂಬರಿಯ ಬಹುಮುಖ್ಯ ಯಶಸ್ಸಿರುವುದು ಕೆಡುಕಿನ ಕಾರಣಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿರುವುದರಲ್ಲಿ. ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ಧಾರ್ಮಿಕತೆಯ ಪರ–ವಿರೋಧ ಚರ್ಚೆಗಳು ನಡೆಯುತ್ತಿರುವ ವರ್ತಮಾನದ ಸಂದರ್ಭದಲ್ಲಿ ‘ದೊಡ್ಡ ವೀರರಾಜೇಂದ್ರ’ ಕಾದಂಬರಿ ಕಟ್ಟಿಕೊಡುವ ಹೈದರಾಲಿ–ಟಿಪ್ಪು ಸುಲ್ತಾನರ ಪಾತ್ರಗಳನ್ನು ಗಮನಿಸಬೇಕು. ಈ ಕಾದಂಬರಿಯಲ್ಲಿ ಕೂಡ ತಂದೆಮಕ್ಕಳು ಹಿಂದೂಗಳನ್ನು ಕೆಲವೊಮ್ಮೆ ಮತಾಂತರಿಸುತ್ತಾರೆ. ಆದರೆ, ಈ ಮತಾಂತರ ರಾಜಕಾರಣದ ಭಾಗವಾಗಿ ಮೂಡಿಬಂದಿದೆಯೇ ಹೊರತು ಧರ್ಮದ್ವೇಷದ ರೂಪವಾಗಿಯಲ್ಲ. ವೀರರಾಜೇಂದ್ರನ ಸೋದರಿಯರನ್ನು ಟಿಪ್ಪು ತನ್ನ ಜನಾನಕ್ಕೆ ಸೇರಿಸಿಕೊಂಡರೂ ಅವರ ಶಿವಾಚಾರಕ್ಕೆ ಅಡಚಣೆ ಮಾಡುವುದಿಲ್ಲ. ಪರಧರ್ಮದವರನ್ನು ಟಿಪ್ಪು–ಹೈದರಾಲಿ ಉದಾತ್ತವಾಗಿ ನಡೆಸಿಕೊಳ್ಳುವ ಸಂಗತಿಗಳೂ ಕಾದಂಬರಿಯಲ್ಲಿವೆ. ಟಿಪ್ಪುವಿಗಿಂತಲೂ ಸುಬ್ಬಪ್ಪಯ್ಯ ಹಾಗೂ ನಾಗಪ್ಪಯ್ಯರ ಕುತಂತ್ರ–ಕ್ರೌರ್ಯಗಳೇ ಕೊಡಗು ನೆಲದಲ್ಲಿನ ಅರಾಜಕತೆಗೆ ಹಾಗೂ ಕೊಡವರ ಸಂಕಷ್ಟ ಪರಂಪರೆಗೆ ಪ್ರಮುಖ ಕಾರಣವಾಗುವುದನ್ನು ಕಾದಂಬರಿ ಸೂಚ್ಯವಾಗಿ ಚಿತ್ರಿಸಿದೆ. ವೀರರಾಜೇಂದ್ರ ಬ್ರಿಟಿಷರಿಗೆ ಸಹಕರಿಸಿದರೂ, ಟಿಪ್ಪುವಿನ ಅಂತ್ಯ ಆತನಿಗೆ ದುಃಖವನ್ನುಂಟುಮಾಡುತ್ತದೆ. ಆ ವಿಷಾದ ಕಾದಂಬರಿಯನ್ನು ಓದುವ ಓದುಗರದೂ ಆಗುತ್ತದೆ. ಸ್ವಾಭಿಮಾನ, ಜೀವನಪ್ರೇಮದ ಉದಾಹರಣೆಗಳಾಗಿ ಕಾದಂಬರಿಯಲ್ಲಿ ಅನೇಕ ಪಾತ್ರಗಳು ಮೂಡಿಬಂದಿವೆ. ಹಿರಿಯರ ಭೂಮಿಯನ್ನು ಉಳಿಸಿಕೊಳ್ಳಲು ಹೆಣಗಾಡಿ ಪ್ರಭುತ್ವದ ಕತ್ತಿಗೆ ಬಲಿಯಾಗುವ ಪುಲಿಯಂಡ ಕುಟುಂಬದ ಕಾರಿಚ್ಚನ ದಾರುಣ ಕಥೆ, ವೀರರಾಜೇಂದ್ರ ಅರಸನ ಮನಸ್ಸನ್ನು ತಹಬಂದಿಗೆ ತರಲು ಏನೆಲ್ಲ ಪ್ರಯತ್ನಪಡುವ ಇಂಗ್ಲಿಷ್‌ ವೈದ್ಯ ಇಂಗಲ್‌ ಡ್ಯೂನ ವೃತ್ತಿನಿಷ್ಠೆ ಮತ್ತು ಜೀವನಪ್ರೇಮ, ಅರಸನ ಪಾಲಿಗೆ ತಂಗಾಳಿಯಂತೆ ಪರಿಣಮಿಸಿ ‘ರಾಜೇಂದ್ರನಾಮೆ’ ಬರೆಯಲು ಪ್ರೇರಣೆಯಾಗುವ ರಾಣಿ ಮಹದೇವಮ್ಮಾಜಿ, ಅಪ್ಪಾಜಿರಾಜ–ನೀಲಾಂಬಿಕೆಯರ ದುರಂತ, ಕಣ್ಣಾನೂರಿನ ರಾಣಿ ಬಲಿಯಾಬಾನುವಿನ ಕೆಚ್ಚು – ಈ ಪ್ರಸಂಗಗಳು ಕಿರುತೊರೆಗಳ ರೂಪದಲ್ಲಿ ಕಾದಂಬರಿಯನ್ನು ಪೊರೆದಿವೆ. ಪ್ರಭಾಕರ ಶಿಶಿಲರು ಇತಿಹಾಸವನ್ನು ಕಥೆಯಾಗಿ ನಿರೂಪಿಸುವಾಗ ಆರಿಸಿಕೊಂಡಿರುವ ಮಾರ್ಗ ಕುತೂಹಲಕರವಾಗಿದೆ. ಇತಿಹಾಸದ ವೈಭವೀಕರಣಕ್ಕೆ ಹೋಗದೆ, ಮನುಷ್ಯ ವರ್ತನೆಗಳಿಗೆ ಕಾರಣಗಳನ್ನು ಹುಡುಕುವ ಪ್ರಯತ್ನ ಅವರದು. ಇತಿಹಾಸದ ಬಗ್ಗೆ ಅನಗತ್ಯವಾದ ಮಮಕಾರವಾಗಲೀ ವಿಷಾದವಾಗಲೀ ಸಲ್ಲದು ಎನ್ನುವ ಈ ಕಾಲಕ್ಕೆ ಅಗತ್ಯವಾದ ವಿವೇಕದ ಅಭಿವ್ಯಕ್ತಿಯಂತೆಯೂ ಶಿಶಿಲರ ಕಾದಂಬರಿ ಮುಖ್ಯವೆನ್ನಿಸುತ್ತದೆ.

“author”: “ರಘುನಾಥ ಚ.ಹ.”,

courtsey:prajavani.net

https://www.prajavani.net/artculture/book-review/book-review-656943.html

Leave a Reply