ಜಗನ್ನಾಥದಾಸರು

ದಾಸಸಾಹಿತ್ಯದಲ್ಲಿ ಅತ್ಯಂತ ಪ್ರಸಿದ್ಧರಾಗಿದ್ದವರಲ್ಲಿ ಜಗನ್ನಾಥದಾಸರೇ ಕಡೆಯವರು. ಅಂತೆಯೇ ಇವರು ದಾಸಕೂಟಕ್ಕೆ ಶಿಖರಪ್ರಾಯವಾಗಿರುವರೆಂಬುದರಲ್ಲಿ ಸಂದೇಹವಿಲ್ಲ. ಇವರಲ್ಲಿ ವ್ಯಾಸ–ದಾಸಸಾಹಿತ್ಯಗಳೆರಡೂ ಸಮಾವೇಶಗೊಂಡಿದ್ದವು. ದಾಸಸಾಹಿತ್ಯದಲ್ಲಿ ಇವರೊಬ್ಬ ಟಿಪ್ಪಣಾಚಾರ್ಯರಿದ್ದಂತೆ. ಇವರ ಕಾಲ ಕ್ರಿಸ್ತಶಕ 1727–1809ರ ವರೆಗೆ. ಇವರ ತಂದೆಗಳಾದ ನರಸಿಂಹಾಚಾರ್ಯರು ಪಂಗನಾಮದ ತಿಮ್ಮಣ್ಣನವರಿಂದ ‘ನರಸಿಂಹವಿಠಲ’ನೆಂಬ ಅಂಕಿತ ಪಡೆದು ಹರಿದಾಸರಾಗಿದ್ದರು. ಶ್ರೀನಿವಾಸಾಚಾರ್ಯರೆಂದು ಜಗನ್ನಾಥದಾಸರ ಹೆಸರು. ಇವರು ವರದೇಂದ್ರಸ್ವಾಮಿಗಳಲ್ಲಿ ಸಂಸ್ಕೃತ ವಿದ್ಯಾಭ್ಯಾಸಮಾಡಿ, ನಾಲ್ಕು ಶಾಸ್ತ್ರಗಳಲ್ಲೂ ಪಾಂಡಿತ್ಯವನ್ನು ಸಂಪಾದಿಸಿದರು. ಜಗನ್ನಾಥದಾಸರು ಅನೇಕ ಪದ, ಪದ್ಯ, ಸುಳಾದಿಗಳನ್ನು ರಚಿಸಿದ್ದಾರೆ. ಅವು ಅತ್ಯಂತ ಪ್ರೌಢವೂ ಸಂಸ್ಕೃತಜಟಿಲವೂ ಆಗಿವೆ. ಇವೆಲ್ಲಕ್ಕಿಂತ ಇವರಿಂದ ರಚಿತವಾದ ‘ಹರಿಕಥಾಮೃತಸಾರ’ದಿಂದ ಇವರ ಹೆಸರು ಅತ್ಯಂತ ಪ್ರಸಿದ್ಧವಾಯಿತು. ಉಪನಿಷತ್ತುಗಳು. ಪುರಾಣಗಳು, ಪಾಂಚರಾತ್ರಾಗಮ, ಪ್ರಕಾಶಸಂಹಿತೆಯೇ ಮೊದಲಾದ ಅನೇಕ ಗ್ರಂಥಗಳ ಸಾರವೆಲ್ಲ ಇದರಲ್ಲಿ ಸಂಗ್ರಹಿತವಾಗಿರುವವುವು. ಇದರಲ್ಲಿ ಮಧ್ವಮತದ ಅತ್ಯಂತ ಕ್ಲಿಷ್ಟ ಪ್ರಮೇಯಗಳು ವಿಸ್ತಾರವಾಗಿ ರಚಿತವಾಗಿವೆ. ಹರಿಕಥಾಮೃತಸಾರವಲ್ಲದೆ ಇವರು 600 ನುಡಿಗಳ ‘ತತ್ತ್ವಸುವಾಲಿ’ ಎಂಬ ಪ್ರಬಂಧವನ್ನೂ ರಚಿಸಿರುವರು. ಪಂಢರಪುರದಲ್ಲಿ ವಿಠಲನ ಅನುಗ್ರಹಕ್ಕೆ ಇವರು ಪಾತ್ರರಾದುದರಿಂದ ಇವರಿಗೆ ‘ರಂಗನೊಲಿದದಾಸ’ರೆಂದು ಹೆಸರಾಯಿತು. (ಮಾಹಿತಿ ಕೃಪೆ: ಎಸ್‌. ಕೆ. ವೇದವ್ಯಾಸಾಚಾರ್ಯ ಅವರ ‘ಕರ್ನಾಟಕದ ಹರಿದಾಸರು’)

courtsey:prajavani.net

https://www.prajavani.net/artculture/article-features/jagannatha-dasaru-693748.html

Leave a Reply