ಜ್ಞಾನೇಶ್ವರಿ: ಕಾವ್ಯವೂ ಶಾಸ್ತ್ರವೂ

ಜ್ಞಾನೇಶ್ವರೀ. ಇದು ಭಾರತೀಯ ಸಂಸ್ಕೃತಿಯಲ್ಲಿ ತುಂಬ ವಿಶಿಷ್ಟವಾದ ಕೃತಿ. ಇದು ಭಗವದ್ಗೀತೆಯ ಮರಾಠಿ ಅನುವಾದ ಎನಿಸಿಕೊಂಡರೂ, ಸ್ವತಂತ್ರಗ್ರಂಥದಂತೆ ಶಕ್ತವಾಗಿಯೂ ಸುಂದರವಾಗಿಯೂ ಇದೆ. ರಂ.ಶಾ ಲೋಕಾಪುರ ಅವರು ಜ್ಞಾನೇಶ್ವರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಗೆ ಕೀರ್ತಿನಾಥ ಕುರ್ತಕೋಟಿ ಅವರು ವಿಸ್ತಾರವಾದ ಪೀಠಿಕೆಯನ್ನು ಬರೆದಿದ್ದಾರೆ. ಅಲ್ಲಿಯ ಕೆಲವೊಂದು ಸಾಲುಗಳನ್ನು ಇಲ್ಲಿ ಮೆಲುಕು ಹಾಕಬಹುದು: ‘ಭಗವದ್ಗೀತೆಯ ಮೇಲೆ ಬರೆದ ಭಾಷ್ಯಗಳಿಗೆ ಲೆಕ್ಕವಿಲ್ಲ; ರಸಶಾಸ್ತ್ರ ಪ್ರವೀಣನಾಗಿದ್ದ ಅಭಿನವಗುಪ್ತನೂ ಭಗವದ್ಗೀತೆಯ ಮೇಲೆ ಭಾಷ್ಯ ಬರೆದಿದ್ದಾನೆ. ಆದರೆ ಅಭಿನವಗುಪ್ತನಿಗೆ ಅದು ವೇದಾಂತದ ಗ್ರಂಥವೇ ಹೊರತು ಕಾವ್ಯವಲ್ಲ. ಭಗವದ್ಗೀತೆಯಲ್ಲಿ ವೇದಾಂತದ ತತ್ವಗಳು ಮತ್ತು ಸಮಸ್ಯೆಗಳು ತುಂಬಿಕೊಂಡಿರುವುದು ಸುಳ್ಳಲ್ಲ. ಭಗವದ್ಗೀತೆಯ ಮೂಲಭಾಷೆ ಅರ್ಜುನ ಒಂದು ಕಡೆಗೆ ಹೇಳಿರುವಂತೆ ‘ವ್ಯಾಮಿಶ್ರ’ವಾದದ್ದಿರಬೇಕು, ಸಂದಿಗ್ಧವಾಗಿರಬೇಕು. ಆದರೆ ಮೋಜಿನ ಮಾತೆಂದರೆ, ವ್ಯಾಮಿಶ್ರತೆ ಅಥವಾ ಸಂದಿಗ್ಧತೆಗಳು ಕಾವ್ಯಭಾಷೆಯ ಲಕ್ಷಣಗಳೇ ಹೊರತು ವೇದಾಂತಭಾಷೆಯ ಲಕ್ಷಣಗಳಲ್ಲ… ಭಗವದ್ಗೀತೆಯದು ಮೂಲದಲ್ಲಿ ಕಾವ್ಯವಾಣಿ ಎನ್ನುವದು ಈಗ ಮರೆವಿಗೆ ಬಿದ್ದಂತಾಗಿದೆ. ಅದನ್ನು ಮತ್ತೆ ನೆನಪಿಗೆ ತಂದುಕೊಳ್ಳಬೇಕಿದೆ. ‘… ಜ್ಞಾನೇಶ್ವರನ ಗೀತೆಯ ಅನುವಾದ ಬಹಳ ಮಹತ್ವದ್ದಾಗಿದೆ. ಜ್ಞಾನೇಶ್ವರ ಹಾಗೆ ನೋಡಿದರೆ ಮರಾಠಿಯ ಪ್ರಥಮ ಕವಿಗಳಲ್ಲಿ ತ್ಯಂತ ಶ್ರೇಷ್ಠನಾದವನು. ಅವನು ಬರೆದ ಮೂರು ಕೃತಿಗಳಲ್ಲಿ ‘ಭಾವಾರ್ಥದೀಪಿಕೆ’ ಎಂಬ ಹೆಸರನ್ನುಳ್ಳ ಗೀತೆಯ ಅನುವಾದವೇ ಮಹತ್ವದ್ದು. ಅಲ್ಲದೆ ದೀರ್ಘವಾದ ಕಾವ್ಯ. ಮರಾಠಿಯಲ್ಲಿ ಸಂತಕಾವ್ಯ ಪ್ರಾರಂಭ ಅವನಿಂದಲೇ ಆಗುತ್ತದೆ. ‘ಜ್ಞಾನೇಶ್ವರ ಹದಿಮೂರನೆಯ ಶತಮಾನದಲ್ಲಿದವನು. ದೇವಗಿರಿಯ ಯಾದವ ವಂಶದವರು ರಾಜ್ಯವಾಳುತ್ತಿದ್ದ ಕಾಲವದು. ಅವನು ಹುಟ್ಟಿದ್ದು 1275ರಲ್ಲಿ; ಸಮಾಧಿಯಾದದ್ದು 1296ರಲ್ಲಿ. ಅವನ ಅಣ್ಣ ನಿವೃತ್ತಿನಾಥನ ಜೊತೆಗೆ ಉಳಿದ ತಮ್ಮಂದಿರು ಹಾಗೂ ಒಬ್ಬ ತಂಗಿ ಆಳಂದಿಯಲ್ಲಿ ಜೀವಂತಸಮಾಧಿಯನ್ನು ಹೊಂದಿದರು. ಜ್ಞಾನೇಶ್ವರನ ಪೂರ್ವಜರೆಲ್ಲ ಧಾರ್ಮಿಕ ಮನೋವೃತ್ತಿಯವರೇ. ‘ಜ್ಞಾನೇಶ್ವರನ ಅನುವಾದವನ್ನು ಎರಡು ದೃಷ್ಟಿಗಳಿಂದ ನೋಡಬಹುದಾಗಿದೆ. ಭಾಷ್ಯಗಳು ಕಾವ್ಯವನ್ನು ತತ್ವಚಿಂತೆನೆಯಲ್ಲಿ ಅನುವಾದ ಮಾಡಿದವು. ಜ್ಞಾನೇಶ್ವರನು ಅದನ್ನು ಕಾವ್ಯದಲ್ಲಿಯೇ ಅನುವಾದ ಮಾಡಿದ. ಆದರೆ ಕಾವ್ಯದ ಗಾತ್ರವನ್ನು ಹಿಗ್ಗಿಸಿದ, ಗುರುತು ಸಿಗಲಾರದ ರೀತಿಯಲ್ಲಿ ಹಿಗ್ಗಿಸಿದ, ಏಳುನೂರು ಶ್ಲೋಕಗಳ ಗೀತೆ ಮರಾಠಿಯಲ್ಲಿ ಒಂಬತ್ತು ಸಾವಿರ ಓವಿಗಳಷ್ಟು ವಿಸ್ತಾರವನ್ನು ಪಡೆಯಿತು. ಗೀತೆಯ ಒಂದು ಪದ್ಯದ ಅನುವಾದ ಕನಿಷ್ಠವೆಂದರೆ ನಾಲ್ಕು ಓವಿಗಳಲ್ಲಿ ಆಗಿದೆ. ಈ ಸಂಖ್ಯೆ ಗರಿಷ್ಠವೆಂದರೆ ಮುನ್ನೂರು ಓವಿಗಳಷ್ಟಾದರೂ ಆಗಬಹುದು. ಇದಲ್ಲದೆ ಈ ಅನುವಾದಕ್ಕೆ ಮುನ್ನುಡಿಯಾಗಿ, ಕೊನೆಯಲ್ಲಿ ಮಂಗಲಶ್ಲೋಕಗಳಾಗಿ ಬಂದು ಗೀತೆಯನ್ನು ಮತ್ತೊಮ್ಮೆ ಒಂದು ಸ್ವತಂತ್ರ ಗ್ರಂಥವನ್ನಾಗಿಸಿವೆ.’(ಆಧಾರ: ಕೀರ್ತಿನಾಥ ಕುರ್ತಕೋಟಿ ಅವರ ‘ಅಧ್ಯಯನ ಮತ್ತು ಪಾರಾಯಣ’)

courtsey:prajavani.net

https://www.prajavani.net/artculture/article-features/jhnaneshwari-is-a-poem-684351.html

Leave a Reply