“ಕಪಾಟು: ಪುಸ್ತಕ ಪರಿಚಯ”,

ಪುಸ್ತಕ: ಅನಂತಮೂರ್ತಿ– ಭೈರಪ್ಪ ಕಥನ ಮತ್ತು ತಾತ್ವಿಕತೆ ಲೇಖಕರು: ಡಾ.ಸಿ.ಎನ್.ರಾಮಚಂದ್ರನ್ ಪ್ರಕಾಶನ: ವಸಂತ ಪ್ರಕಾಶನ ಬೆಂಗಳೂರು ದೂರವಾಣಿ: 080 22443996 ಪುಟಗಳು: 128 ಬೆಲೆ: ₹ 90 ಕನ್ನಡದ ಇಬ್ಬರು ಪ್ರಮುಖ ಲೇಖಕರ ಬರಹ ಹಾಗೂ ವೈಚಾರಿಕ ಚಿಂತನೆಯನ್ನು ಒರೆಗೆ ಹಚ್ಚಿದ್ದಾರೆ ಹಿರಿಯ ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್. ಅನಂತಮೂರ್ತಿ ಹಾಗೂ ಭೈರಪ್ಪ ಅವರ ಕೃತಿಗಳಲ್ಲಿನ ಸೂಕ್ಷ್ಮ ವಿಶ್ಲೇಷಣೆಯನ್ನು ಧ್ವನಿಸುತ್ತದೆ ಈ ಕೃತಿ. ಇಲ್ಲಿನ ಲೇಖನಗಳಲ್ಲಿ ಅನಂತಮೂರ್ತಿಯವರ ಕಥೆಗಳ ಚರ್ಚೆ, ಅವಸ್ಥೆ, ಭವ, ದಿವ್ಯ, ವಾಲ್ಮೀಕಿಯ ನೆವದಲ್ಲಿ ಮತ್ತು ನವ್ಯಲೋಕ ಈ ಐದು ಕೃತಿಗಳ ತಾತ್ವಿಕ ಸಮೀಕ್ಷೆ ಇದೆ. ಹಾಗೆಯೇ, ಭೈರಪ್ಪನವರ ಅಂಚು, ತಂತು, ಮಂದ್ರ, ಅವರಣ ಮತ್ತು ಯಾನ ಕೃತಿಗಳ ವಿಶ್ಲೇಷಣೆ ಮೊದಲ ಭಾಗದಲ್ಲೂ, ಅವರ ಪ್ರಮುಖ ಕಾದಂಬರಿಗಳ ತಾತ್ವಿಕ ನೆಲೆಗಟ್ಟನ್ನು ಗುರುತಿಸುವ ಕಾರ್ಯ ದ್ವಿತೀಯಾರ್ಧದಲ್ಲೂ ಚಿತ್ರಿತವಾಗಿದೆ. ಹೊಸ ತಲೆಮಾರಿನ ಓದುಗರಿಗೆ ಈ ಲೇಖಕರಿಬ್ಬರನ್ನು ಅರಿಯಲು ನೆರವಾಗುತ್ತದೆ ಈ ಪುಸ್ತಕ. ಪುಸ್ತಕ: ರಸಯಾನ, ಕಿರುಕಥೆಗಳು ಲೇಖಕರು: ಎಂ.ಎಸ್.ರಜನಿಕಾಂತ್ ಪ್ರಕಾಶನ: ಐಬಿಎಚ್ ಪ್ರಕಾಶನ ಬೆಂಗಳೂರು ದೂ: 080 26676003 ಬೆಲೆ: ₹ 140 ಪುಟಗಳು: 162 ಲೇಖಕರ ಬದುಕಿನ 50 ವರ್ಷಗಳ ಅನುಭವದ ಸಾರ–ಸಂಗ್ರಹ ರೂಪವೇ ‘ರಸಯಾನ’. ಓದಿದಂತೆ ನಮ್ಮದೂ ಎನಿಸಬಹುದು. ಇಲ್ಲಿ 48 ಕಿರುಕಥೆಗಳು ಹಾಗೂ ಎರಡು ಕವನಗಳಿವೆ. ಇಲ್ಲಿನ ಬಹುಪಾಲು ಕತೆಗಳು ಬಾಲ್ಯ ನೆನಪಿಸುತ್ತವೆ. ಹಾಸ್ಯ, ವ್ಯಂಗ್ಯ, ವಿಡಂಬನೆಗಳು ಢಾಳಾಗಿರುವಂತೆ ಕಂಡರೂ ಪುಸ್ತಕ ಇನ್ನೇನನ್ನೋ ಧ್ವನಿಸುತ್ತಿದೆ ಎಂಬುದು ನಿಚ್ಚಳವಾಗಿ ಕಾಣುತ್ತದೆ. ಮೇಲ್ನೋಟಕ್ಕೆ ಮಕ್ಕಳ ಕಿರುಗಥೆಗಳಂತೆ ಭಾಸವಾದರೂ ಒಳಾರ್ಥ ಸಾರುವ ಸಂದೇಶ ದೊಡ್ಡದು. ಮಲೆನಾಡಿನ ಗ್ರಾಮ್ಯ ಭಾಷೆಯ ಸೊಗಡು ಬರಹದ ಅಂದ ಹೆಚ್ಚಿಸಿದೆ. ವಿಷಯ–ವಸ್ತುಗಳೂ ಓದಿನ ಆಪ್ತತೆ ಹೆಚ್ಚಿಸುತ್ತವೆ. ಪುಸ್ತಕ: ಸ್ಯಾತಂತ್ರ್ಯದ ಕಹಳೆ ಲೇಖಕರು: ಮುಮ್ತಾಜ್ ಬೇಗಮ್ ಪ್ರಕಾಶನ: ತಝಸ ಪಬ್ಲಿಷರ್ಸ್, ಬೆಳಪು ಗ್ರಾಮ, ಉಡುಪಿ ಜಿಲ್ಲೆ ದೂ: 94814 45189 ಬೆಲೆ: ₹ 110 ಪುಟಗಳು: 89 ಪೋರ್ಚುಗೀಸರ ವಿರುದ್ಧ ಹೋರಾಡಿದ ಏಕೈಕ ಮಹಿಳೆ ಉಳ್ಳಾಲದ ರಾಣಿ ಅಬ್ಬಕ್ಕ. ಅಬ್ಬಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ಈ ಐತಿಹಾಸಿಕ ಕಾದಂಬರಿ ರಚಿಸಲಾಗಿದೆ. ಕರಾವಳಿಯ ಸಂಪತ್ತನ್ನು, ಸೂರೆಗೈಯ್ಯಲು ಬಂದವರಿಗೆ, ಪ್ರತಿಯಾಗಿ ಮೊಳಗಿದ್ದೇ ‘ಸ್ವಾತಂತ್ರ್ಯದ ಕಹಳೆ’. ಮಾತ್ರವಲ್ಲ ಸಾಹಸಿ ಅಬ್ಬಕ್ಕಳ ಸಾಹಸ ವಿದೇಶಗಳಲ್ಲೂ ಹಬ್ಬಿ, ಇಟಲಿ ಪ್ರವಾಸಿ ಪಿಯೊತ್ರೋ ಡೆಲ್ಲಾವೆಲ್ಲಿ ಆಕೆಯನ್ನು ಕಾಣಲೆಂದೇ ಭಾರತಕ್ಕೆ ಬಂದಿದ್ದ. ನಟ್ಟ ನೀರಿನ ನಡುವೆ, ಗಂಡುಡುಗೆ ತೊಟ್ಟು, ಅತ್ಯಾಧುನಿಕ ಶಸ್ತ್ರಸಜ್ಜಿತ ಪೋರ್ಚುಗೀಸರನ್ನು ಕತ್ತಿ, ಗುರಾಣಿ, ಬಾಣಗಳಿಂದಲೇ ನಾಮಾವಶೇಷಗೈದ ರಾಣಿ, ತನ್ನೂರಿನ ಮಹಿಳೆಯರನ್ನು ಯುದ್ಧಕ್ಕೆ ಅಣಿಗೊಳಿಸುವ ಪರಿಯನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ಲೇಖಕಿ. ಪು: ಎಸ್‌.ಕೆ. ಕರೀಂಖಾನ್‌ ಜೀವನ ಚರಿತ್ರೆ ಲೇ: ಪ್ರೊ.ಡಿ.ಲಿಂಗಯ್ಯ ಪ್ರ: ಗೋಧೂಳಿ ಪ್ರಕಾಶನ, ಬೆಂಗಳೂರು ಮೊ: 94484 73811 ಪು: 488 ಬೆ: 300 ಸ್ವಾತಂತ್ರ್ಯ ಹೋರಾಟಗಾರ, ಗಾಂಧಿ ಅನುಯಾಯಿ, ಜಾನಪದ ಜಂಗಮ, ಸರಸ್ವತಿ ಸುಪುತ್ರ ಎಂದು ಕರೆಸಿಕೊಂಡವರು ಸಕಲೇಶಪುರದ ಎಸ್‌.ಕೆ. ಕರೀಂಖಾನ್‌. ಅವರನ್ನು ಕನ್ನಡ ಸಂತನೆಂದೇ ಗುರುತಿಸಲಾಗುತ್ತದೆ. ವಿಶ್ವಮಾನವತೆ ಮೈಗೂಡಿಸಿಕೊಂಡಿದ್ದ ಕರೀಂಖಾನರ ವ್ಯಕ್ತಿತ್ವ, ಬದುಕು ಹಾಗೂ ಸಾಧನೆಯ ಸಮಗ್ರ ನೋಟವನ್ನು ಕಟ್ಟಿಕೊಡುವ ಜೀವನ ಚರಿತ್ರೆಯನ್ನು ಪ್ರೊ.ಡಿ.ಲಿಂಗಯ್ಯ ರಚಿಸಿದ್ದಾರೆ. ಈ ಕೃತಿ 2013ರಲ್ಲಿ ಪ್ರಥಮ ಮುದ್ರಣವಾಗಿದ್ದು, ಈಗ ಮರುಮುದ್ರಣಗೊಂಡಿದೆ. 31 ಅಧ್ಯಾಯಗಳಿರುವ ಈ ಕೃತಿ ಅವರ ಬದುಕಿನ ಯಶೋಗಾಥೆಯ ದರ್ಶನ ಮಾಡಿಸುತ್ತದೆ. ಅವರ ಸಾಧನೆಯನ್ನು ಸಾಕ್ಷೀಕರಿಸುವ ಮತ್ತು ಅವರ ಬದುಕಿನ ಚಿತ್ರಣ ನೀಡುವ ಅಪರೂಪದ ಛಾಯಾಚಿತ್ರಗಳನ್ನು 144 ಪುಟಗಳು ಆವರಿಸಿಕೊಂಡಿವೆ. ಪು: ಜ್ಯೋತಿರಾಯುರ್ವೇದ ಲೇ: ಕೆ.ಎಸ್‌.ನಿತ್ಯಾನಂದ ಪ್ರ: ಡಾ.ಬಿ.ವಿ.ಕುಮಾರಸ್ವಾಮಿ, ಅನನ್ಯ, ಮೈಸೂರು ಮೊ: 99804 72614 ವೇದಗಳ ಮೂಲ ಹಾಗೂ ರಹಸ್ಯಾರ್ಥಗಳಿಂದ ಬಂದಿರುವ ಅತ್ಯಂತ ಮಹತ್ವದ ಸಂಗತಿಗಳನ್ನು ಲೇಖಕರೂ ಆದ ಸ್ವಾಮೀಜಿ ಕೆ.ಎಸ್‌.ನಿತ್ಯಾನಂದರು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಇದರಲ್ಲಿ 27 ಅಧ್ಯಾಯಗಳಿವೆ. ಮನುಷ್ಯನನ್ನು ಪಾರಮಾರ್ಥದ ಕಡೆಗೆ ಕೊಂಡೊಯ್ಯುವ ಕೈದೀವಿಗೆಯಂತಿದೆ ಈ ಕೃತಿ. ಕಾಲ ಗರ್ಭದಲ್ಲಿ ಮರೆಯಾದ ಸಿದ್ಧಪುರುಷ ಶಾರ್ಙ್ಘ್ಯಧರ ಪ್ರಣೀತರ ಅಪ್ರಕಟಿತ ‘ಮಾನವ ಧರ್ಮ ದೀಪಿಕಾ’, ‘ಶಾರ್ಙ್ಘ್ಯಧರ ಸಂಹಿತಾ’, ನಾಡೀ ಶೋಧನಾ ವಿಧಿ ಸಂಸ್ಕೃತ ಗ್ರಂಥಗಳ ಸಾರವೇ ಜ್ಯೋತಿರಾಯುರ್ವೇದ ಕೃತಿ. ಆ ಮೂರು ಕೃತಿಗಳು ನನಗೆ ರಾಜಸ್ಥಾನದ ಜೋಧ್‌ಪುರ ಸಮೀಪದ ಒಂದು ಹಳ್ಳಿಯಲ್ಲಿ ಆಕಸ್ಮಿಕ ಉತ್ಖನನದ ವೇಳೆ ಲಭಿಸಿದಂತವು ಎಂದು ಸ್ವಾಮೀಜಿ ಹೇಳಿಕೊಂಡಿದ್ದಾರೆ.

courtsey:prajavani.net

https://www.prajavani.net/artculture/book-review/book-655598.html

Leave a Reply