ಕೇಳಿ ಪಡೆಯುವ ಗೌರವಕ್ಕೆ ಬೆಲೆಯಿಲ್ಲ

ಅಮೆರಿಕನ್ನರಿಗೆ ತಮ್ಮ ದೇಶ ಕುರಿತು ಅಪಾರ ಜಂಬವಿದೆ. ಕೆಲವು ವಿಚಾರಗಳಲ್ಲಿ ಒಣ ಜಂಬವೂ ಇದೆ. ಅನೇಕ ದಶಕಗಳ ಹಿಂದೆ ಓದಿದ ಒಂದು ಪ್ರಸಂಗವನ್ನು ಉಲ್ಲೇಖಿಸುವೆ. ಸ್ವೀಡನ್ನಿನ ಬಸ್ ಒಂದರಲ್ಲಿ ಒಬ್ಬ ಅಮೆರಿಕನ್ ಪ್ರವಾಸಿಗ ಹೊಗುತ್ತಿದ್ದ. ಪಕ್ಕದಲ್ಲಿ ಕುಳಿತವನಿಗೆ, ‘ನಿಮಗೆ ಗೊತ್ತಾ? ನನ್ನ ದೇಶದಲ್ಲಿ ನಾನು ಕೋರಿಕೊಂಡರೆ, ನನ್ನ ಜನ್ಮದಿನದಂದು ಅಮೆರಿನ್ ಅಧ್ಯಕ್ಷರೊಂದಿಗೆ ಊಟ ಮಾಡಬಹುದು?’ ಎಂದು ಹೇಳುವನು. ಅವನ ಪಕ್ಕದಲ್ಲಿ ಕುಳಿತಿದ್ದವನು, ‘ನಿನಗೆ ಗೊತ್ತಾ? ನಮ್ಮ ದೇಶದಲ್ಲಿ ನೀನು ರಾಜನ ಪಕ್ಕ ಕುಳಿತು ಬಸ್‍ನಲ್ಲಿ ಪ್ರಯಾಣಿಸಬಹುದು?’ ಎಂದು ಹೇಳಿ ನಗುವನು! ಆ ಪ್ರಯಾಣಿಕ ರಾಜ 16ನೆಯ ಗುಸ್ತಾವ್! ಎಲ್ಲ ಅಮೆರಿಕನ್ನರೂ ಹಾಗೆ ಎಂದು ಹೇಳಲಾಗದು. ಖ್ಯಾತ ನಟ ಗ್ರಿಗೊರಿ ಪೆಕ್ ಒಂದು ಸಲ ಗೆಳೆಯನೊಂದಿಗೆ ಊಟಕ್ಕೆ ಹೋಗುವನು. ಪರಿಚಾರಕರು ‘ಮೇಜು ಖಾಲಿ ಇಲ್ಲ, ಕಾಯಬೇಕಾಗುವುದು’ ಎಂದು ತಿಳಿಸುವರು. ಆಗ ಅವನ ಸ್ನೇಹಿತ, ‘ನೀನು ಯಾರು ಎಂದು ಅವನಿಗೆ ಹೇಳು, ಕೂಡಲೇ ಜಾಗ ಮಾಡಿಕೊಡುವನು’ ಎಂದು ಸಲಹೆ ಕೊಡುತ್ತಾನೆ. ನಾನು ಯಾರು ಎಂದು ಹೇಳಿಕೊಳ್ಳಬೇಕಾಗಿರುವುದಾದರೆ ಅದನ್ನು ಹೇಳದಿರುವುದೇ ಉತ್ತಮ ಎಂದು ಉತ್ತರಿಸುತ್ತಾನೆ ಗ್ರಿಗೊರಿ ಪೆಕ್! ನಾವು ಯಾರು ಎಂದು ಗುರುತಿಸಿ ಗೌರವವನ್ನು ಕೊಡುವುದಾದರೆ ಅದು ನಿಜವಾದ ಗೌರವ. ನಾನು ಯಾರು ಗೊತ್ತಾ ಎಂದು ಕೇಳಿದರೆ ಅದು ತನ್ನ ಸ್ಥಾನಮಾನದ ಪ್ರಭಾವ ಬೀರಿ ಗೌರವವನ್ನು ಗಿಟ್ಟಿಸಿಕೊಳ್ಳುವ ಒತ್ತಾಯದ ಪ್ರಯತ್ನ. ಅದು ನಿಜವಾದ ಗೌರವವಲ್ಲ. ಖ್ಯಾತನಾಮರಿಗಿಂತ ಅವರ ಬಂಧುಗಳು, ಹತ್ತಿರದವರು ಇಂತಹ ಒತ್ತಾಯದ ಗೌರವಕ್ಕೆ ಹಾತೊರೆಯುವುದು ಹೆಚ್ಚು. ಪ್ರಖ್ಯಾತ ಕ್ರಿಕೆಟಿಗರೊಬ್ಬರು ಇಂತಹ ನಡವಳಿಕೆ ತೋರಿಸಿದ್ದು ಎಲ್ಲಿಯೂ ಕೇಳಿಬಂದಿಲ್ಲ. ಆದರೆ ಅವರ ಪತ್ನಿ ಮಾತ್ರ ಹಲವೆಡೆ ಹೀಗೆ ಜಗಳವಾಡಿದ ಪ್ರಸಂಗಗಳು ವರದಿಯಾಗಿವೆ. ರಾಜ್ಯಪಾಲರ ಕಾರು ಹೋಗುವ ಸಮಯದಲ್ಲಿ ತಮ್ಮ ಕಾರನ್ನು ನಿಲ್ಲಿಸಿದರು ಎಂಬ ಕಾರಣಕ್ಕೆ ಮರಿ ಪುಡಾರಿಯೊಬ್ಬರು ಪೋಲೀಸರ ಮೇಲೆ ಕ್ರಮ ಕೈಗೊಳ್ಳುವಂತೆ ಮಂತ್ರಿಯ ಮೇಲೆ ಒತ್ತಡ ತಂದಿದ್ದೂ ಇದೆ. ಆದರೆ ಬೇರೆ ದೇಶಗಳಲ್ಲಿ ರಾಜಮನೆತನದ ಮಕ್ಕಳು ಇತರ ಸಾಮಾನ್ಯ ಮಕ್ಕಳ ಶಾಲೆ/ಕಾಲೇಜುಗಳಲ್ಲಿ ಓದುವುದನ್ನೂ ಗಮನಿಸಿದ್ದೇನೆ. ಸ್ಕಾಂಡಿನೇವಿಯ ಸಮೂಹದ ರಾಷ್ಟ್ರಗಳಲ್ಲಿ ಮೇಲೆ ಹೇಳಿದಂತೆ ಬಸ್‍ನಲ್ಲಿ ನಿಮ್ಮ ಸಹಪ್ರಯಾಣಿಕರೂ ಆಗಿರಬಹುದು. ನಡವಳಿಕೆ, ಸಾಧನೆಗಳಿಂದ ನಿಮಗೆ ಸಿಗುವ ಗೌರವ ತುಂಬಾ ಬೆಲೆ ಬಾಳುವುದು. ನಿಮ್ಮ ಕೌಟುಂಬಿಕ ಹಿನ್ನೆಲೆ ಅಥವಾ ಸ್ಥಾನಮಾನ ಬಳಸಿಕೊಂಡು ನಾನು ಯಾರು ಗೊತ್ತಾ ಎಂದು ಕೇಳಿ ಪಡೆಯುವ ಗೌರವಕ್ಕೆ ಬೆಲೆಯಿಲ್ಲ.

courtsey:prajavani.net

https://www.prajavani.net/artculture/article-features/philosophy-665921.html

Leave a Reply