Your Cart

Need help? Call +91 9535015489

📖 Print books shipping available only in India. ✈ Flat rate shipping

ಮದ

ಈಶ್ವರಿ ಒಬ್ಬ ಶ್ರೀಮಂತ ಜಮೀನ್ದಾರನ ಮಗನಾಗಿದ್ದ. ನಾನು ಒಬ್ಬ ಬಡ ಕಾರಕೂನ ಕುಟುಂಬದವನು. ದಿನಗೂಲಿ ಮಾಡಿ ದುಡಿದರೆ ಮಾತ್ರ ಉಪಜೀವನ…! ಯಾವುದೇ ಆಸ್ತಿ ಪಾಸ್ತಿ ಇರಲಿಲ್ಲ. ಶ್ರೀಮಂತರ ಶೋಷಣೆ ಬಗ್ಗೆ ನಮ್ಮಿಬ್ಬರಲ್ಲಿ ವಾದ ವಿವಾದ ನಡೆಯುತ್ತಿತ್ತು. ಅವನು ಜಮೀನ್ದಾರರ ಪರವಹಿಸುತ್ತಿದ್ದ. ಈ ವಾದ ವಿವಾದಲ್ಲಿ ನಾನು ಹೆಚ್ಚು ಉತ್ತೇಜಿತನಾಗಿ ಒಮ್ಮೊಮ್ಮೆ ಕೆಟ್ಟದಾಗಿಯೂ ಮಾತನಾಡಿ ಅವಮಾನಿಸುತ್ತಿದ್ದೆ. ಅವನಿಗೆ ನೋವುಂಟು ಮಾಡುತ್ತಿದ್ದೆ. ಆದರೆ, ಈಶ್ವರಿ ಗಂಭೀರವಾಗಿ ಪರಿಗಣಿಸದೆ ಮುಗುಳ್ನಗುತ್ತಿದ್ದ. ಯಾವತ್ತೂ ಅವನು ಸಿಟ್ಟು ಮಾಡಿಕೊಂಡಿರುವುದನ್ನು ನಾನು ನೋಡಿಯೇ ಇರಲಿಲ್ಲ.ಬಹುಶಃ ದೀನ ದಲಿತರ ಕಷ್ಟವನ್ನು, ಶೋಷಣೆಯನ್ನು ಬಲ್ಲವನಾಗಿದ್ದ. ಆಳುಗಳೊಂದಿಗೆ ಉಗ್ರವಾಗಿ ನಡೆದು ಕೊಳ್ಳುತ್ತಿರಲಿಲ್ಲ. ನಯವಾಗಿಯೇ ವರ್ತಿಸುತ್ತಿದ್ದ.ಆದರೆ ಜಮೀನ್ದಾರರ ಗತ್ತು ಮಾತ್ರ ಬಿಡುತ್ತಿರಲಿಲ್ಲ. ಸ್ನೇಹಿತರ ಜೊತೆ ಅದರಲ್ಲೂ ವಿಶೇಷವಾಗಿ ನನ್ನ ಜೊತೆ ಸೌಹಾರ್ದಯುತವಾಗಿ, ನಮ್ರವಾಗಿ ವ್ಯವಹರಿಸುತ್ತಿದ್ದ. ಈ ಸಲದ ದಸರಾ ರಜೆಯಲ್ಲಿ ನಾನು ಮನೆಗೆ ಹೋಗಬಾರದೆಂದು ನಿಶ್ಚಯಿಸಿದೆ. ನನ್ನ ಹತ್ತಿರ ಹಣವಿರಲಿಲ್ಲ. ಮನೆಯವರಿಗೂ ತೊಂದರೆ ಕೊಡಲು ಬಯಸುತ್ತಿರಲಿಲ್ಲ. ಅವರು ನನಗೆ ಕೊಡುತ್ತಿರುವುದೇ ಅವರ ಸಾಮರ್ಥ್ಯಕ್ಕೆ ಮೀರಿದ್ದು ಎಂದು ನನಗೆ ಗೊತ್ತಿತ್ತು. ಪರೀಕ್ಷೆಯು ಹತ್ತಿರದಲ್ಲಿತ್ತು. ಓದೋದು ಇನ್ನೂ ಸಾಕಷ್ಟು ಬಾಕಿ ಇತ್ತು. ಬೋರ್ಡಿಂಗ್ ಗೃಹದಲ್ಲಿ ಒಬ್ಬನೇ ಭೂತದಂತೆ ಬಿದ್ದುಕೊಳ್ಳಲು ಇಷ್ಟವಾಗುತ್ತಿರಲಿಲ್ಲ. ಆದರೆ ಈಶ್ವರಿ ನನಗೆ ತನ್ನ ಮನೆಗೆ ಆಹ್ವಾನಿಸಿದಾಗ ಅವನೊಂದಿಗೆ ಪರೀಕ್ಷೆಯ ಓದಿನ ತಯಾರಿ ಚೆನ್ನಾಗಿಯೇ ಮಾಡಬಹುದೆಂದು ಒಪ್ಪಿಕೊಂಡೆ. ಅವನು ಶ್ರೀಮಂತನಾಗಿದ್ದರೂ ಪರಿಶ್ರಮ ಪಡುವ ಶ್ರದ್ಧೆಯುಳ್ಳವನಾಗಿದ್ದ. ಆಹ್ವಾನದೊಂದಿಗೆ ಅವನು ಒಂದು ಎಚ್ಚರಿಕೆಯ ಮಾತು ಹೇಳಿದ, ‘ನೋಡು, ನೀನು ಅಲ್ಲಿ ಬಂದು ಜಮೀನುದಾರರ ನಿಂದೆ ಮಾಡಬಾರದು. ಕೆಟ್ಟದಾಗಿ ಮಾತನ್ನಾಡಬಾರದು. ನಮ್ಮ ಮನೆಯವರಿಗೆ ಕೆಟ್ಟದೆನಿಸುತ್ತದೆ. ಇಡೀ ವಾತಾವರಣ ಕೆಟ್ಟು ಹೋಗುತ್ತದೆ. ಅವರು ಕೂಲಿ ಕೆಲಸ ಮಾಡುವುದಕ್ಕೆ ಮಾತ್ರ ಹುಟ್ಟಿದವರು ಎಂಬ ಭಾವನೆಯಲ್ಲಿ, ಅದೇ ಧೋರಣೆಯಲ್ಲಿ ವಿಧೇಯರಾಗಿ ನಡೆದುಕೊಳ್ಳುತ್ತಾರೆ. ಜಮೀನ್ದಾರರು ಮತ್ತು ಅಸ್ಸಾಮಿಗಳಲ್ಲಿ ಯಾವುದೇ ಅಂತಸ್ತಿನ ಭೇದವಿಲ್ಲ ಎನ್ನುವುದು ಅವರಿಗೆ ಮನದಟ್ಟಾಗಿದ್ದರೆ ಆಗ ಜಮೀನ್ದಾರರ ದಬ್ಬಾಳಿಕೆಯೇ ಇರುತ್ತಿರಲಿಲ್ಲ’.‘ಅಂದರೆ ನಾನು ಅಲ್ಲಿ ಬಂದು ಉದ್ಧಟತನ ತೋರಿಸಿ, ಬೇರೆ ವ್ಯಕ್ತಿಯಾಗಿಯೇ ಬಿಡುತ್ತೇನೆ ಎಂದುಕೊಂಡೆಯಾ…? ’ ಎಂದೆ ನಾನು.‘ಹೌದು, ನಾನು ಹಾಗೆಯೇ ಅಂದುಕೊಂಡಿದ್ದೇನೆ…’‘ತಪ್ಪು, ಹಾಗೆ ಅಂದುಕೊಳ್ಳಬೇಡ..’ಈಶ್ವರಿ ಮರು ಮಾತನಾಡಲಿಲ್ಲ. ಪರಿಸ್ಥಿತಿ ನಿರ್ವಹಿಸಲು ನನ್ನ ವಿವೇಕ ಸಂವೇದನೆಗೆ ಬಿಟ್ಟು ಒಳ್ಳೆಯದೇ ಮಾಡಿದ. ಅವನು ತನ್ನದೇ ದೃಷ್ಟಿಯಲ್ಲಿ ವಾದಕ್ಕೆ ಅಂಟಿಕೊಂಡಿದ್ದರೆ ನಾನು ಕೂಡಾ ಹಠ ಸಾಧಿಸಿಯೇ ಬಿಡುತ್ತಿದ್ದೆ. ರಾತ್ರಿ ಒಂಬತ್ತು ಗಂಟೆಗೆ ರೈಲು ಬರುವುದಿತ್ತು. ಸಾಯಂಕಾಲವೇ ನಾವು ಪಯಣದ ಖುಷಿಯಲ್ಲಿ ಹರ್ಷಚಿತ್ತರಾಗಿ ನಿಲ್ದಾಣಕ್ಕೆ ಬಂದು ಬಿಟ್ಟೆವು. ಸ್ವಲ್ಪ ಹೊತ್ತು ಆ ಕಡೆ ಈ ಕಡೆ ತಿರುಗಾಡಿ ರಿಫ್ರೆಶ್‌ಮೆಂಟ್ ಕೋಣೆಗೆ ಹೋಗಿ ಇಬ್ಬರೂ ಊಟ ಮಾಡಿದೆವು. ನನ್ನ ವೇಷಭೂಷಣ ಸ್ವಲ್ಪ ಪಾರ್ಸಿಯಂತಿದ್ದು, ಯಜಮಾನ ಯಾರು, ಹಿಂಬಾಲಕ ಯಾರು ಎಂದು ಸ್ಪಷ್ಟವಾಗಿ ಗುರುತಿಸಲು ಗೊಂದಲವಾಗುತ್ತಿತ್ತು. ನಮ್ಮಪ್ಪನ ವೇತನದಷ್ಟು ಈಶ್ವರಿಗೆ ಬರುವ ಬಹುಮಾನ, ಕಾಣಿಕೆ ಹಣವಾಗಿರುತ್ತಿತ್ತು. ನನಗೆ ಅವಕಾಶ ಕೊಡದೆ, ತಾನೇ ಮುಂದಾಗಿ ಜೇಬಿನಿಂದ ಹಣ ಖರ್ಚು ಮಾಡಿ ಮುನಿಸು ತೋರಿಸುವುದು ನನಗೆ ಹಿಡಿಸುತ್ತಿರಲಿಲ್ಲ. ನಾನಂತೂ ಹಣ ಕೊಡದೆ ನೌಕರರಿಂದ ಗೌರವಾದರ ನಿರೀಕ್ಷಿಸುತ್ತಿದ್ದೆ. ಆದರೆ ಅವರು ನನ್ನಲ್ಲಿ ಆಸಕ್ತಿ ತೋರುತ್ತಿರಲಿಲ್ಲ. ಆಗ ನನ್ನ ಮನಸ್ಸು ಮುದುಡಿ ಹೋಗುತ್ತಿತ್ತು. ಗಾಡಿ ಬಂತು. ನಾವು ಹತ್ತಿ ಕುಳಿತೆವು. ಅಲ್ಲಿಯ ನೌಕರನೊಬ್ಬ ಈಶ್ವರಿಗೆ ವಂದನೆ ಸಲ್ಲಿಸಿದ. ಅವನು ನನ್ನೆಡೆಗೆ ನೋಡಲೇ ಇಲ್ಲ. ಗಾಡಿ ಚಲಿಸಿತು. ಪ್ರಯಾಗದಿಂದ ಹೊರಟ ಗಾಡಿ ಪ್ರತಾಪಗಡಕ್ಕೆ ಬಂದು ನಿಂತಿತು. ಬೇಸರ ಸಂಕೋಚ ಪಡುತ್ತಲೇ ನಾವು ಮೊರಾದಾಬಾದ್ ತಲುಪಿದೆವು. ನಿಲ್ದಾಣದಲ್ಲಿ ಕೆಲ ವ್ಯಕ್ತಿಗಳು ನಮ್ಮ ಸ್ವಾಗತಕ್ಕಾಗಿ ನಿಂತಿದ್ದರು. ಇಬ್ಬರು ಗಟ್ಟಿ ಪುರುಷರಿದ್ದರು. ಐದು ಜನ ಕೂಲಿಯಾಳುಗಳು. ನಮ್ಮ ಸರಂಜಾಮು ಎತ್ತಿಕೊಂಡರು. ಇಬ್ಬರು ಗಟ್ಟಿ ಆಳುಗಳು ನಮ್ಮ ಹಿಂದೆ ಬರತೊಡಗಿದರು. ಒಬ್ಬ ಮುಸಲ್ಮಾನ ರಿಯಾಸತ್ ಅಲಿ, ಇನ್ನೊಬ್ಬ ಬ್ರಾಹ್ಮಣ ರಾಮಹರಖ. ‘ಹಂಸದೊಡನೆ ಇದಾವ ಕಾಗೆ ಬಂದಿದೆ…?’ ಎನ್ನುವಂತೆ ಅವರಿಬ್ಬರು ನನ್ನೆಡೆಗೆ ಅಪರಿಚಿತ ದೃಷ್ಟಿಯಲ್ಲಿ ನೋಡಿದರು. ‘ಇವರು ನಿಮ್ಮ ಜೊತೆಯಲ್ಲಿಯೇ ಓದುತ್ತಾರಾ…?’ ಎಂದು ರಿಯಾಸತ್ ಅಲಿ ಈಶ್ವರಿಗೆ ಪ್ರಶ್ನಿಸಿದ. ‘ಹೌದು, ಜೊತೆಯಲ್ಲಿಯೇ ಓದುತ್ತೀವಿ, ಜೊತೆಯಲ್ಲಿಯೇ ಇರುತ್ತೀವಿ. ಈ ಸಲ ಇವರನ್ನು ಎಳೆದು ಕರೆತರಬೇಕಾಯಿತು. ಇವರ ಮನೆಯಿಂದ ಎಷ್ಟೋ ತಂತಿ ಸಂದೇಶ ಬಂದಿದ್ದವು. ನಾನೇ ಬೇಡ ಎಂದು ಉತ್ತರ ಕೊಡಿಸಿದ್ದೆ. ಕೊನೆಗೆ ಬಂದ ತಂತಿ ಸಂದೇಶ ತುಂಬಾ ಅರ್ಜೆಂಟ್ ಎಂದಿತ್ತು. ಅದಕ್ಕೂ ಬರಲಿಕ್ಕಾಗಲ್ಲ ಎಂದೇ ಉತ್ತರಿಸಲು ಹೇಳಿದೆ.’ ಎಂದು ಈಶ್ವರಿ ವಿವರಿಸಿದ. ಇಬ್ಬರೂ ನನ್ನೆಡೆಗೆ ಅಚ್ಚರಿಯಾಗಿ ನೋಡಿ, ಗೌರವ ನೀಡಬೇಕಾದ ಆತಂಕಕ್ಕೆ ಒಳಪಟ್ಟಂತೆ ಕಂಡಿತು. ರಿಯಾಸತ್ ಅಲಿ ಅನುಮಾನದ ಸ್ವರದಲ್ಲಿ, ‘ನೀವು ತುಂಬಾ ಸರಳ ಉಡುಪಿನಲ್ಲಿರುತ್ತೀರಲ್ಲಾ…?’ ಎಂದ ಈಶ್ವರಿ ಅವನ ಅನುಮಾನ ಬಗೆಹರಿಸಿದ. ‘ಮಹಾತ್ಮ ಗಾಂಧಿಯವರ ಭಕ್ತರು ಕಣಪ್ಪಾ ಯಜಮಾನರು. ಸರಳ ಉಡುಪಿಲ್ಲದೆ ಏನನ್ನೂ ಧರಿಸುವುದಿಲ್ಲ. ಹಳೆಯ ಎಲ್ಲಾ ಬಟ್ಟೆಗಳನ್ನು ಸುಟ್ಟು ಹಾಕಿದ್ದಾರೆ.ಮಹಾರಾಜರು ಅನ್ನು… ವರ್ಷಕ್ಕೆ ಎರಡೂವರೆ ಲಕ್ಷದ ವ್ಯವಹಾರವಿದೆ. ಮುಖ ನೋಡಿದರೆ ಯಾರಿಗಾದರೂ ಅನಿಸುತ್ತಾ…? ಅನಾಥಾಲಯದಿಂದ ಹಿಡಿದು ಕರೆ ತಂದಿರಬೇಕು ಅಂತನಿಸಲ್ವಾ….!?’‘ಶ್ರೀಮಂತರಲ್ಲಿ ಇಂಥ ನಡವಳಿಕೆ ಬಹಳ ಅಪರೂಪ ದೊರೆ… ಹೀಗೆ ಯಾರಪ್ಪನಿಂದಲೂ ಇರಲು ಸಾಧ್ಯವಾಗದು.’ ಎಂದ ರಾಮಹರಖ.‘ಚಾಂಗ್ ಲಿ ಮಹಾರಾಜರನ್ನು ನೋಡಿದರೆ ನೀವು ನಾಲಿಗೆ ಕಚ್ಚಿ ಕೊಳ್ಳುತ್ತಿದ್ದೀರಿ. ಅವರೂ ಬರೀ ಒಂದು ಅಂಗಿ ಜೊತೆ ಚಪ್ಪಲಿಯಲ್ಲಿ ಇಡೀ ಮಂಡಿ ತುಂಬಾ ತಿರುಗಾಡುತ್ತಿದ್ದರು. ಅವರನ್ನು ಒಮ್ಮೆ ಬೇಗಾರಿನಲ್ಲಿ ಸೆರೆಯಾದರೆಂದು ಕೇಳಿ ಪಟ್ಟೆವು…’ ಎಂದು ರಿಯಾಸತ್ ಅಲಿ ಸಮರ್ಥಿಸಿದ. ನಾನು ಮನದಲ್ಲಿಯೇ ಮಂಡಿಗೆ ತಿನ್ನುತ್ತಿದ್ದೆ.ಅದು ಹಾಸ್ಯಾಸ್ಪದ ಮಾತೆನ್ನುವುದು ಆ ವೇಳೆಯಲ್ಲಿ ನನಗೆ ಅರ್ಥವಾಗಲೇ ಇಲ್ಲ. ಅವರ ನುಡಿಗನುಸಾರವಾಗಿಯೇ ನಾನು ನನ್ನ ಕಲ್ಪನಾಲೋಕದಲ್ಲಿ ವಿಜೃಂಭಿಸುತ್ತಿದ್ದೆ. ಈಶ್ವರಿ ಮನೆ ಅಂದರೆ ಎಂಥದ್ದು…? ಅಬ್ಬಾ ಕೋಟೆಯಂಥದ್ದು…! ಮುಖ್ಯ ದ್ವಾರದಲ್ಲಿ ರಕ್ಷಣಾ ಸಿಬ್ಬಂದಿ, ಕಾವಲುಗಾರರು… ಕೂಲಿಯಾಳುಗಳಿಗೆ ಲೆಕ್ಕವೇ ಇರಲಿಲ್ಲ. ಈಶ್ವರಿ ತನ್ನ ತಂದೆ ಚಿಕ್ಕಪ್ಪ ತಾತ ಮುಂತಾದವರಿಗೆ ನನ್ನ ಪರಿಚಯವನ್ನು ಅತಿಯಾಗಿ ರಂಜಿಸಿ ಮಾಡಿಕೊಟ್ಟ. ನೌಕರರು ಅಲ್ಲದೇ ಮನೆ ಮಂದಿಯಲ್ಲಾ ನನ್ನನ್ನು ವಿಶೇಷ ಗೌರವಾದರ ಸಮ್ಮಾನದಿಂದಲೇ ನಡೆದುಕೊಳ್ಳುವ ವಾತಾವರಣ ನಿರ್ಮಾಣಗೊಂಡಿತು. ಅಲ್ಲಿಯ ಬಹಳಷ್ಟು ಮಹಾಶಯರು ನನಗೆ ‘ಬುದ್ದಿ, ಸ್ವಾಮಿ, ದೊರೆ’ ಎಂದೆಲ್ಲಾ ಸಂಬೋಧಿಸತೊಡಗಿದರು. ‘ಅಪ್ಪಣೆ… ಅಪ್ಪಣೆ’ ಎಂದು ಶಿರಸಾವಹಿಸುತ್ತಿದ್ದರು.ಒಮ್ಮೆ ಬಿಡುವು ಸಿಕ್ಕಾಗ ಏಕಾಂತದಲ್ಲಿ ನಾನು ಈಶ್ವರಿಗೆ, ‘ನೀನು ತುಂಬಾ ಚತುರ ಕಣೋ. ನನ್ನ ಮೂಲವನ್ನೇ ಅಡಗಿಸಿ ಬಿಟ್ಟೆಯಲ್ಲಾ…!’ ಎಂದೆ. ಈಶ್ವರಿ ಮಂದಹಾಸ ಬೀರಿ ನಕ್ಕ. ‘ಈ ಹೊಲಸು ದಡ್ಡ ನನ್ಮಕ್ಕಳ ಮುಂದೆ ಈ ನಾಟಕ ಆಡಲೇ ಬೇಕು.ಇಲ್ಲದಿದ್ದರೆ ನಿನಗೆ ಬೆಲೆ ಕೊಡುತ್ತಿದ್ದರಾ…? ಒಂದು ಮಾತು ಕೂಡಾ ಆಡಿಸುತ್ತಿರಲಿಲ್ಲ.’ಸ್ವಲ್ಪ ಹೊತ್ತಿನ ನಂತರ ನಮ್ಮ ಕಾಲು ಒತ್ತಲು ಹಡಪದ ಒಳಗೆ ಬಂದ. ‘ನಿಲ್ದಾಣದಿಂದ ದಣಿದು ಆಯಾಸಗೊಂಡು ಬಂದಿರುತ್ತೀರಿ…’ ಎಂದ. ‘ಮೊದಲು ಆ ಕುಮಾರರ ಕಾಲು ಒತ್ತು.’ ಎಂದು ಈಶ್ವರಿ ನನ್ನೆಡೆಗೆ ಸನ್ನೆ ಮಾಡಿ ಆಜ್ಞಾಪಿಸಿದ. ನಾನು ಮಂಚದ ಮೇಲೆ ಮಲಗಿದ್ದೆ. ನನ್ನ ಜೀವಮಾನದಲ್ಲಿ ಹೀಗೆ ಯಾವತ್ತೂ ಕಾಲು ಒತ್ತಿಸಿಕೊಳ್ಳುವ ಭಾಗ್ಯ ಬಂದಿರಲಿಲ್ಲ. ಇದಕ್ಕೆಲ್ಲ ನಾನು ಶ್ರೀಮಂತರ ದಬ್ಬಾಳಿಕೆ, ಕತ್ತೆ ಚಾಕರಿ, ದೊಡ್ಡವರ ಅಟ್ಟಹಾಸ ಎಂದು ಏನೇನೋ ಹೇಳಿ ಈಶ್ವರಿಗೆ ಅಪಹಾಸ್ಯ ಮಾಡುತ್ತಿದ್ದೆ. ಆದರೆ ಈಗ ನಾನೇ ಈ ಶ್ರೀಮಂತಿಕೆಯ ವೈಭೋಗ ಸುಖ ಅನುಭವಿಸಲು ಕಾತರನಾಗಿದ್ದೆ. ಅಷ್ಟರಲ್ಲಿ ಹತ್ತು ಗಂಟೆ ಭಾರಿಸಿತು. ಒಳಗಿನಿಂದ ಊಟಕ್ಕೆ ಕರೆ ಬಂತು. ನಾವು ಸ್ನಾನ ಮಾಡಲು ಹೊರಟೆವು. ಯಾವಾಗಲೂ ನನ್ನ ಪಂಚೆ ನಾನೇ ತೊಳೆಯುತ್ತಿದ್ದೆ. ಆದರೆ ಇಲ್ಲಿ ಕೈಯಾರೆ ತೊಳೆಯಲು ಸಂಕೋಚ, ನಾಚಿಕೆ ಅಡ್ಡ ಬಂತು.ಈಶ್ವರಿಯಂತೆ ನಾನೂ ಅದನ್ನು ಸ್ನಾನಗೃಹದಲ್ಲಿಯೇ ಬಿಟ್ಟೆ. ಊಟಕ್ಕೆ ಒಳ ಪ್ರವೇಶ ಮಾಡಿದೆವು. ವಸತಿಗೃಹದಲ್ಲಿ ಚಪ್ಪಲಿ ಮೆಟ್ಟಿಕೊಂಡೇ ಊಟ ಮಾಡುತ್ತಿದ್ದೆವು. ಇಲ್ಲಿ ಕಾಲು ತೊಳೆದುಕೊಳ್ಳುವ ಅಗತ್ಯವಿತ್ತು. ನೀರು ಹಿಡಿದುಕೊಂಡು ಸೇವಕ ಬಾಗಿಲು ಮುಂದೆ ನಿಂತಿದ್ದ. ಈಶ್ವರಿ ಕಾಲು ಮುಂದೆ ಮಾಡಿದ. ಅವನು ಕಾಲು ತೊಳೆದ. ನಾನೂ ಕಾಲು ಮುಂದೆ ಮಾಡಿದೆ. ನನ್ನ ಕಾಲನ್ನೂ ತೊಳೆದ. ನನ್ನ ಶೋಷಣೆಯ ವಿದ್ರೋಹದ ವಿಚಾರಗಳು ಎಲ್ಲಿ ಮಾಯವಾಗಿದ್ದವೋ…! ಇಲ್ಲಿ ಊರಿನಲ್ಲಿ ಏಕಾಗ್ರಚಿತ್ತದಲ್ಲಿ ಓದಬಹುದೆಂದು ಯೋಚಿಸಿದ್ದೆ. ಆದರೆ ಬರೀ ಸ್ಥಳ ವೀಕ್ಷಣೆ, ತಿರುಗಾಟದಲ್ಲಿಯೇ ದಿನಗಳು ಕಳೆದು ಹೋದವು. ಮಹಾತ್ಮ ಗಾಂಧಿಯ ಶಿಷ್ಯ ಕುಮಾರಸ್ವಾಮಿಗಳು ಎಂದು ನಾನು ಪ್ರಸಿದ್ಧಿಯಾಗಿದ್ದೆ. ನನ್ನ ಒಳ ಹೊರ ನಡತೆ ವರ್ತನೆ ಎಲ್ಲವೂ ಶ್ರೀಮಂತರಂತೆ ಪ್ರತಿಫಲನಗೊಳ್ಳುತ್ತಿತ್ತು. ಬೆಳಗಿನ ಉಪಹಾರವೂ ತಡವಾಗುವಂತಿಲ್ಲ, ಎಲ್ಲಿ ಕುಮಾರಸ್ವಾಮಿಗಳು, ಬುದ್ಧಿಗಳು ಬೇಸರಪಟ್ಟು ಕೊಳ್ಳಬಹುದೇನೋ ಎಂಬ ವಿಶೇಷ ಕಾಳಜಿ ಅವರದು…! ಮಲಗಲು ನಿಗದಿಯಾದ ಸಮಯದಲ್ಲಿ ಹಾಸಿಗೆಯೂ ಸಿದ್ಧಗೊಳ್ಳುತ್ತಿತ್ತು. ನಾನು ಈಶ್ವರಿಗಿಂತಲೂ ಯೋಚಿಸುವುದರಲ್ಲಿ ತುಂಬಾ ಸಂವೇದನಶೀಲನಾಗಿ ಬಿಟ್ಟೆ, ಅಥವಾ ಪರಿಸ್ಥಿತಿ ಹಾಗೆ ನಿರ್ಮಿಸಿ ಬಿಟ್ಟಿತ್ತೇನೋ…!? ಈಶ್ವರಿ ತಾನೇ ಹಾಸಿಗೆ ಬಿಚ್ಚಿ ಹಾಕಿಕೊಳ್ಳುತ್ತಿದ್ದ. ಆದರೆ ನನ್ನ ಸೇವೆಯೇ ಅಧಿಕವಾದಾಗ ಅವನ ಮಹಾನತೆಯೂ ಮೂಲೆ ಹಿಡಿಯುವಂತಾಯಿತು. ಒಂದು ದಿನ ಇದೇ ಪ್ರಸಂಗ ಎದುರಾಯಿತು. ಈಶ್ವರಿ ಒಳಕೋಣೆಯಲ್ಲಿ ತನ್ನ ತಾಯಿಯೊಂದಿಗೆ ಮಾತನ್ನಾಡಿ ಬರುವಷ್ಟರಲ್ಲಿ ತಡವಾಯಿತು. ಆಗಲೇ ಹತ್ತು ಗಂಟೆಯಾಗಿತ್ತು. ನನಗೆ ನಿದ್ರೆ ಆವರಿಸುತ್ತಿತ್ತು. ಕಣ್ಣುಗಳು ಭಾರವಾಗಿದ್ದವು. ಆದರೆ ಹಾಸಿಗೆ ಇನ್ನೂ ಹಾಸಿರಲಿಲ್ಲ. ನಾನು ಬಿಚ್ಚಿ ಹಾಸುವುದು ಹೇಗೆ…? ಕುಮಾರಸ್ವಾಮಿ ಅಲ್ಲವೇ…? ಹನ್ನೊಂದೂವರೆ ಗಂಟೆಗೆ ಸೇವಕ ಬಂದ. ವಾಚಾಳಿಯಾಗಿದ್ದ. ಮನೆ ಕೆಲಸದ ಒತ್ತಡದಲ್ಲಿ ಅವನಿಗೆ ಹಾಸಿಗೆ ಹಾಸುವ ಪ್ರಜ್ಞೆ ಹಾರಿ ಹೋಗಿತ್ತು. ನೆನಪಾದಂತೆ ಓಡಿ ಬಂದಿದ್ದ. ಅವನಿಗೆ ಚೆನ್ನಾಗಿ ಬೈದುಬಿಟ್ಟೆ. ಅದನ್ನು ಅವನು ಎಂದಿಗೂ ಮರೆತಿರಲಾರ. ಈಶ್ವರಿ ನನ್ನ ಜೋರು ದನಿ ಕೇಳಿ ಹೊರಗೆ ಬಂದು ನೋಡಿದ ‘ಒಳ್ಳೆಯ ಕೆಲಸ ಮಾಡಿದೆ. ಸೋಮಾರಿ ದಂಡಪಿಂಡ ನನ್ಮಕ್ಕಳು… ಬೈಸಿಕೊಳ್ಳಲಿಕ್ಕೆ ಲಾಯಕ್ಕು…’ ಎಂದ. ಇದೇ ರೀತಿ ಈಶ್ವರಿ ಆ ದಿನ ಯಾರದೋ ಮನೆಯ ಆಮಂತ್ರಣಕ್ಕೆ ಹೋಗಿದ್ದ. ಸಾಯಂಕಾಲವಾಗಿತ್ತು. ಮೇಜಿನ ಮೇಲೆ ಬತ್ತಿಯ ದೀಪವಿತ್ತು. ಅದನ್ನು ಬೆಳಗಿಸಿರಲಿಲ್ಲ. ಅಷ್ಟರಲ್ಲಿ ರಿಯಾಸತ್ ಅಲಿ ಅಲ್ಲಿಗೆ ಬಂದ. ನನಗೆ ವಿಪರೀತ ಕೋಪ ಬಂತು. ‘ನಿಮಗೆ ಸಾಯಂಕಾಲವಾದಂತೆ ಒಂದು ದೀಪ ಬೆಳಗಿಸುವ ಜ್ಞಾನವೂ ಇರಬೇಡವೇ…? ಎಂಥ ಬೇಜವಾಬ್ದಾರಿ ನಿಮ್ಮದು. ಸೋಮಾರಿತನದಿಂದ ಅದು ಹೇಗೆ ನೀವು ಇಲ್ಲಿ ಬದುಕುತ್ತೀರೋ…? ಒಂದು ಗಂಟೆಯೂ ನನ್ನನ್ನು ಸರಿಯಾಗಿ ನೋಡಿಕೊಳ್ಳದ ನೀವು ಅದೆಂಥ ಸೇವಕರು…?’ ಎಂದು ದಬಾಯಿಸಿದೆ. ರಿಯಾಸತ್ ಅಲಿ ನಡುಗಿದ. ಕಂಪಿಸುವ ಕೈಗಳಿಂದಲೇ ದೀಪ ಬೆಳಗಿಸಿದ. ಒಂದು ದಿನ ನಾನು ಒಬ್ಬನೇ ಇದ್ದಾಗ ಠಾಕೂರನೊಬ್ಬ ಬಂದು ಕೈ ಹಿಡಿದು, ‘ಸಾಹೇಬ್ರೆ, ತಾವು ಗಾಂಧಿ ಬಾಬಾ ಅವರ ಶಿಷ್ಯರಲ್ಲವೇ…! ಸ್ವರಾಜ್ಯ ಬಂದರೆ ಜಮೀನುದಾರರು ಇರಲಾರರು ಎಂದು ಜನ ಮಾತನಾಡಿ ಕೊಳ್ತಾರಲ್ಲಾ…?’ ಎಂದ. ನಾನು ದೊಡ್ಡಸ್ತಿಕೆಯಲ್ಲಿ, ‘ಹೌದು ಜಮೀನ್ದಾರರ ಅಗತ್ಯವಾದರೂ ಏನಿದೆ…? ಬಡವರ ರಕ್ತ ಹೀರುವುದನ್ನು ಬಿಟ್ಟರೆ ಅವರೇನು ಮಾಡುತ್ತಾರೆ…?’ ಎಂದೆ. ಪುನಃ ಠಾಕೂರ್, ‘ಮತ್ತಿನ್ನೇನು ಸಾಹೇಬ್ರೆ.., ಎಲ್ಲ ಜಮೀನುದಾರರ ಜಮೀನು ಕಸಿದುಕೊಂಡರೆ…!? ಇತ್ತೀಚೆಗೆ ಜಮೀನುದಾರರು ತುಂಬಾ ಅನ್ಯಾಯ ಮಾಡುತ್ತಿದ್ದಾರೆ ಸಾಹೇಬ್ರೆ… ನಮ್ಮ ಪ್ರದೇಶದಲ್ಲಿ ನನಗೂ ಒಂದಿಷ್ಟು ಭೂಮಿ ಕೊಟ್ಟರೆ ಅಲ್ಲಿಯೇ ನಿಮ್ಮ ಹೆಸರಿನಲ್ಲಿ ಸೇವೆಯಲ್ಲಿದ್ದು ಬಿಡುತ್ತೀನಿ…’ ಎಂದು ಕುರ್ಚಿಯಲ್ಲಿ ಇಳಿಬಿಟ್ಟ ನನ್ನ ಕಾಲುಗಳನ್ನು ಒತ್ತ ತೊಡಗಿದ.‘ಅದರ ಬಗ್ಗೆ ಇನ್ನೂ ಜಾಹೀರಾತು ಹೊರಡಿಸಿಲ್ಲವಲ್ಲಪ್ಪಾ… ಜಾಹೀರಾತು ಬರಲಿ, ಎಲ್ಲಕ್ಕಿಂತ ಮೊದಲು ನಿನ್ನನ್ನೇ ಕರೆಸುತ್ತೇನೆ. ನಿನಗೆ ವಾಹನ ನಡೆಸಲು ಕಲಿಸಿ, ನಿನ್ನನ್ನೇ ನನ್ನ ಚಾಲಕನನ್ನಾಗಿ ಇರಿಸಿಕೊಳ್ಳುತ್ತೇನೆ.’ ಎಂದೆ. ಠಾಕೂರ್ ಖುಷಿಯಲ್ಲಿ ಆ ದಿನ ಜಾಸ್ತಿ ಭಂಗ್ ಕುಡಿದು ಹೆಂಡತಿಗೆ ಮನಸಾರೆ ಹೊಡೆದು ಹಳ್ಳಿಯ ಮಹಾಜನನೊಂದಿಗೆ ಜಗಳಕ್ಕೆ ಹೋಗಿದ್ದನೆಂದು ಕೇಳಿದೆ.ಹೀಗೆಯೇ ರಜೆಗಳು ಮುಗಿದುಹೋದವು. ನಾವು ಮತ್ತೆ ಪ್ರಯಾಗಕ್ಕೆ ಹೊರಟೆವು. ಬಹಳಷ್ಟು ಜನ ನಮ್ಮನ್ನು ಕಳುಹಿಸಲು ಬಂದರು. ಠಾಕೂರ್ ಅಂತು ನಿಲ್ದಾಣದವರೆಗೂ ಬಂದ. ನಾನಂತೂ ನನ್ನ ಪಾತ್ರವನ್ನು ತುಂಬಾ ಸಹಜವಾಗಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದೆ. ಶ್ರೀಮಂತಿಕೆಯ ವಿನಯ ಮತ್ತು ದೈವತ್ವದ ಛಾಯಾ ಭಾವ ಅವರ ಹೃದಯಗಳಲ್ಲಿ ಛಾಪು ಮೂಡಿಸಿದ್ದೆ. ಅವರಿಗೆ ಕಾಣಿಕೆಯಾಗಿ ಒಳ್ಳೆಯ ಬಹುಮಾನಗಳನ್ನು ನೀಡಲು ಮನಸ್ಸು ಬಯಸುತ್ತಿತ್ತು. ಆದರೆ ನನ್ನಲ್ಲಿ ಆ ಸಾಮರ್ಥ್ಯವೇ ಇದ್ದಿರಲಿಲ್ಲವಲ್ಲಾ…! ಗಾಡಿಯಲ್ಲಿ ಕುಳಿತುಕೊಳ್ಳಲು ಹಿಂತಿರುಗುವ ಟಿಕೆಟ್ ಬಿಟ್ಟರೆ ಇನ್ನೇನಿರಲಿಲ್ಲ.ಗಾಡಿ ಬಂತು. ಆದರೆ ತುಂಬಾ ಜನದಟ್ಟಣೆ…! ದುರ್ಗಾ ಪೂಜೆ ಮುಗಿಸಿಕೊಂಡು ವಾಪಸ್ಸಾಗುತ್ತಿರುವ ಜನಸ್ತೋಮ. ಎರಡನೇ ದರ್ಜೆ ಬೋಗಿಯಲ್ಲಿ ಎಳ್ಳಷ್ಟು ಜಾಗವಿರಲಿಲ್ಲ. ಇಂಟರ್ ಕ್ಲಾಸ್ ದರ್ಜೆ ಬೋಗಿಗಳು ಇದಕ್ಕಿಂತಲೂ ಕಡೆಯಾಗಿದ್ದವು.ಇದು ಕೊನೆಯ ಗಾಡಿಯಾಗಿತ್ತು. ಯಾವ ಕಾರಣಕ್ಕೂ ತಪ್ಪಿಸಿಕೊಳ್ಳುವಂತಿರಲಿಲ್ಲ. ಹೀಗಾಗಿ ಹೇಗೋ ಕಷ್ಟಪಟ್ಟು ಮೂರನೇ ದರ್ಜೆ ಬೋಗಿಯಲ್ಲಿ ಹತ್ತಿಕೊಂಡು ಜಾಗ ಮಾಡಿಕೊಂಡೆವು. ಆದರೆ ನನಗೆ ಅವರ ಮಧ್ಯೆ ಕುಳಿತುಕೊಳ್ಳಲು ಕೆಟ್ಟದೆನಿಸಿತು.ಸುಖವಾಗಿ ಮಲಗಿಕೊಂಡು ಪ್ರಯಾಣಿಸಲೆಂದುಕೊಂಡು ಬಂದವರಿಗೆ ಮುದುರಿಕೊಂಡು ಹೋಗುವಂತಾಯಿತಲ್ಲಾ. ಟಿಕೆಟ್ ಕೆಲಸಕ್ಕೆ ಬಾರದಾಯಿತು. ಇಲ್ಲಿ ಭುಜ ಅಲ್ಲಾಡಿಸಲು ಸ್ಥಳಾವಕಾಶವಿಲ್ಲದಂತಾಯಿತು. ಕೆಲವರು ಓದು ಬರಹ ಬಲ್ಲವರಾಗಿದ್ದರು. ತಮ್ಮಲ್ಲಿಯೇ ಬ್ರಿಟಿಷ್ ಸರ್ಕಾರವನ್ನು ಹೊಗಳಿ ಮಾತನಾಡಿಕೊಳ್ಳುತ್ತಿದ್ದರು. ಕೋಲ್ಕತ್ತಾಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಸ್ಥಳವೇ ಸಿಗದೆ, ಬೆನ್ನಿಗೆ ಕಟ್ಟಿಕೊಂಡ ಮೂಟೆಯೊಂದಿಗೆ ಓಡಾಡುತ್ತಾ ಪದೆ ಪದೇ ಬಾಗಿಲು ಹತ್ತಿರ ಬಂದು ನಿಂತುಕೊಳ್ಳುತ್ತಿದ್ದ. ಅವನು ಆಗಾಗ ಬಂದಾಗ ನನ್ನ ಮುಖಕ್ಕೆ ಅವನ ಬೆನ್ನಿನ ಮೂಟೆ ತಿವಿಯುತ್ತಿತ್ತು. ಬಹಳ ಕೆಟ್ಟದೆನಿಸುತ್ತಿತ್ತು. ಮೊದಲೇ ಜನದಟ್ಟಣೆ…! ಗಾಳಿ ಸಂಚಾರವಿರಲಿಲ್ಲ. ಅದರಲ್ಲೂ ಈ ಹಳ್ಳಿ ಹೈದ ಆಗಾಗ ಬಂದು ನನ್ನ ಮುಖದ ಮುಂದೆ ನಿಂತುಕೊಳ್ಳುವುದು ನನಗೆ ಕತ್ತು ಹಿಸುಕಿದಂತಾಗುತ್ತಿತ್ತು. ಎಷ್ಟು ಸಹಿಸಿಕೊಳ್ಳುವುದು…? ಸ್ವಲ್ಪ ಹೊತ್ತು ಸುಮ್ಮನಿದ್ದೆ. ಇದ್ದಕ್ಕಿದ್ದಂತೆ ನನಗೆ ಸಿಟ್ಟು ಬಂದು ಬಿಟ್ಟಿತು. ಅವನನ್ನು ತಳ್ಳಿ ಮುಖ ತಿರುಗಿಸಿ ಕಪಾಳಿಗೆ ಎರಡು ಬಾರಿಸಿಯೇ ಬಿಟ್ಟೆ. ಅವನು ಕಣ್ಣು ಕಿಸಿದು, ‘ಯಾಕೆ ಹೊಡೆಯುತ್ತೀರಿ ಬಾಬೂಜಿ, ನಾನೂ ಹಣ ಕೊಟ್ಟಿದ್ದೀನಿ’ ಎಂದ. ನಾನು ಮತ್ತೆ ಎದ್ದು ನಿಂತು ಎರಡು, ಮೂರು ಬಿಟ್ಟೆ. ಗಾಡಿಯಲ್ಲಿ ಬಿರುಗಾಳಿಯೇ ಎದ್ದು ಬಿಟ್ಟಿತು. ಎಲ್ಲಾ ಕಡೆಯಿಂದ ಎಲ್ಲರೂ ನನಗೆ ಆರೋಪಿಸತೊಡಗಿದರು. ‘ಅಷ್ಟೊಂದು ಸೂಕ್ಷ್ಮವಾಗಿದ್ದರೆ ಮೇಲ್ದರ್ಜೆ ಬೋಗಿಯಲ್ಲಿ ಯಾಕೆ ಪ್ರಯಾಣಿಸಬಾರದಿತ್ತು…?’‘ಶ್ರೀಮಂತರಾಗಿದ್ದರೆ ಅವರ ಮನೆಯಲ್ಲಿ ಇಟ್ಟುಕೊಳ್ಳಲಿ. ನನಗೆ ಈ ರೀತಿ ಹೊಡೆದಿದ್ದರೆ ಅದರ ಕಥೆಯೇ ಬೇರೆ ಇತ್ತು…’‘ಪಾಪ, ಆಯಪ್ಪನದೇನು ತಪ್ಪಿದೆ…? ಉಸಿರಾಡಕ್ಕೂ ಆಗದಷ್ಟು ಗಾಡಿಯಲ್ಲಿ ಜಾಗವಿಲ್ಲ. ಏನೋ ಸ್ವಲ್ಪ ಗಾಳಿ ಸಲುವಾಗಿ ಕಿಟಕಿ ಹತ್ತಿರ ಹೋಗಿದ್ದಾನೆ ಅಷ್ಟೆ. ಅದಕ್ಕೆ ಸಿಟ್ಟು ಮಾಡಿಕೊಳ್ಳುವುದೇ…? ಶ್ರೀಮಂತರಾದರೆ ಮಾನವೀಯತೆ ಇರಬೇಡವೇ…? ’‘ಇಲ್ಲಿ ಬ್ರಿಟಿಷ್ ಆಡಳಿತವಿದೆ. ನೀವು ಇಷ್ಟೊತ್ತು ಹೊಗಳುತ್ತಿದ್ದಿರಲ್ಲಾ…!’ ಅಲ್ಲಿ ಇದ್ದ ಒಬ್ಬ ಗ್ರಾಮೀಣ ವ್ಯಕ್ತಿ, ‘ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಎಂದಂತಾಯಿತು. ಎಂಥ ದಬ್ಬಾಳಿಕೆ ಇದು…!?’ ಎಂದ. ಈ ಘಟನೆಯನ್ನು ಸಾಕ್ಷೀಕರಿಸಿದ ಈಶ್ವರಿ ನನಗೆ ಖಾರವಾಗಿಯೇ ‘what an idiot you are Bir’ ( ನೀನೆಂಥ ಮೂರ್ಖ ಬೀರ್ ) ಎಂದ. ನನಗೆ ನನ್ನ ‘ಮದ’ ನಿಧಾನಕ್ಕೆ ಇಳಿಯುತ್ತಿರುವಂತೆ ಭಾಸವಾಗತೊಡಗಿತು.

courtsey:prajavani.net

https://www.prajavani.net/artculture/short-story/story-661752.html

Leave a Reply