ಮಕ್ಕಳ ಶಿಕ್ಷಣ ಶುಲ್ಕ ಕಟ್ಟುವ ಶಿಕ್ಷಕ ರಿಯಾಜ್‌ ಪುಲ್ಲಿ

ಪ್ರತಿಯೊಂದು ಮಗುವು ಶಿಕ್ಷಣ ಪಡೆಯಬೇಕು. ಶಿಕ್ಷಣ ಪಡೆಯುವ ಹಕ್ಕು ಮಕ್ಕಳಿಗಿದೆ. ಆದರೆ ಆರ್ಥಿಕ ಪರಿಸ್ಥಿತಿಯಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡುವುದೇ ಶಿಕ್ಷಕರ ಕರ್ತವ್ಯವಾಗಿರಬೇಕು. ಹಾಗಾಗಿ ಪ್ರತಿವರ್ಷ ಕಡುಬಡವರ ಮಕ್ಕಳ ಶಾಲಾ ಮತ್ತು ಕಾಲೇಜು ಫೀಸು ತುಂಬುವ ಮೂಲಕ ಅವರ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ ನೇಕಾರನಗರದ ಪ್ರೌಢಶಾಲೆಯ ಮಕ್ಕಳ ಅಚ್ಚುಮೆಚ್ಚಿನ ಹಿಂದಿ ಶಿಕ್ಷಕ ರಿಯಾಜ್‌ ಅಹ್ಮದ್‌ ಪುಲ್ಲಿ. 21 ವರ್ಷದಿಂದ ಹಿಂದಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಲಕ್ಷ್ಮೇಶ್ವರದವರು. ಆದರೆ ಈಗ 16 ವರ್ಷದಿಂದ ಹುಬ್ಬಳ್ಳಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1998ರಲ್ಲಿ ಕುಂದಗೋಳದ ಹಿರೇನರ್ತಿ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದ ಇವರು 2005ರಿಂದ ನೇಕಾರನಗರದ ಪ್ರೌಢಶಾಲೆಯಲ್ಲಿ ಕರ್ತವ್ಯದಲ್ಲಿದ್ದಾರೆ. ಶಾಲಾ ಮಕ್ಕಳಿಗೂ ಇವರನ್ನು ಕಂಡರೆ ಭಯವಿಲ್ಲ ಬದಲಾಗಿ ಪ್ರೀತಿ, ಗೌರವವಿದೆ. ಇದುವರೆಗೂ ಸಾವಿರಾರು ಮಕ್ಕಳಿಗೆ ಇವರು ಧನಸಹಾಯ ಮಾಡಿದ್ದಾರೆ. ಜೊತೆಗೆ ಶಿಕ್ಷಣಕ್ಕೆ ಪೂರಕವಾದ ಪುಸ್ತಕಗಳನ್ನು ಕೊಡಿಸಿದ್ದಾರೆ. ತೆರೆಮರೆಯಲ್ಲಿ ಸಹಾಯ ಮಾಡುವ ಮನೋಭಾವ ಉಳ್ಳ ಇವರ ಬಗ್ಗೆ ತಿಳಿದುಕೊಂಡವರು ತಮ್ಮ ಮಕ್ಕಳಿಗೆ ಶಿಕ್ಷಣದಲ್ಲಿ ಸಮಸ್ಯೆ ಉಂಟಾದಾಗ ಇವರ ಹತ್ತಿರ ಬಂದಿರುವ ಸಾಕಷ್ಟು ಉದಾಹರಣೆಗಳು ಇವೆ. ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಇವರು ತಮಗೆ ಪರಿಚಯವಿರುವ ಶಿಕ್ಷಣ ಸಂಸ್ಥೆಗಳಲ್ಲಿ ಬಡವಿದ್ಯಾರ್ಥಿಗಳಿಗೆ ಶುಲ್ಕ ಕಡಿಮೆ ಮಾಡುವಂತೆ ತಿಳಿಸುತ್ತಾರೆ ಅಥವಾ ಇವರೇ ಅವರ ಶುಲ್ಕವನ್ನು ಭರಿಸುತ್ತಾರೆ. ಶಿಕ್ಷಣಕ್ಕೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಕ್ಕಳಿಗೆ ಮತ್ತು ಪಾಲಕರಿಗೆ ತಿಳಿಸುತ್ತಾರೆ. ಉತ್ತಮ ಶಿಕ್ಷಣ ಪಡೆದು ತಮ್ಮ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಲಿ ಎಂದು ಆಶಿಸುವ ಇವರು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ತೀರ್ಮಾನ ಕೂಡ ಮಾಡಿದ್ದಾರೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವುದು ನನ್ನ ಉದ್ದೇಶ. ಹಾಗಾಗಿ ಕಡುಬಡವರ ಮಕ್ಕಳಿಗೆ ಕೈಲಾದ ಸಹಾಯ ಮಾಡುತ್ತೇನೆ. ಇದರಲ್ಲಿಯೇ ನನಗೆ ಹೆಚ್ಚಿನ ಖುಷಿಯಿದೆ’ ಎನ್ನುತ್ತಾರೆ ಶಿಕ್ಷಕ ಪುಲ್ಲಿಯವರು. ಇವರು ನಮ್ಮ ಶಾಲೆಯ ಆಧಾರಕಂಬವಿದ್ದಂತೆ. ಮಕ್ಕಳಿಗೂ ಇವರನ್ನು ಕಂಡರೆ ಹೆಚ್ಚು ಪ್ರೀತಿ. ಪ್ರತಿ ವರ್ಷ ಕನಿಷ್ಠ 20–30 ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಇವರೇ ಕಟ್ಟುತ್ತಾರೆ’ ಎಂದು ಪುಲ್ಲಿ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನು ಹೇಳಿದವರು ಶಾಲೆಯ ಮುಖ್ಯ ಶಿಕ್ಷಕ ಶಿವಪ್ಪ ವಿಭೂತಿ.

courtsey:prajavani.net

https://www.prajavani.net/artculture/article-features/teachers-666307.html

Leave a Reply