Need help? Call +91 9535015489

📖 Print books shipping available only in India. ✈ Flat rate shipping

ಮಾಲ್ಗುಡಿಯಿಂದ ಸ್ವಾಮಿ ಬಂದ!

ಮೊನ್ನೆ ಶಾಲೆಯ ಮೈದಾನದಲ್ಲಿ ನಿಂತಿದ್ದೆ. ಶಾಲೆಯತ್ತಲೇ ಪುಟ್ಟ ಆಕೃತಿಯೊಂದು ನಡೆದು ಬರುತ್ತಿರುವುದು ಕಣ್ಣಿಗೆ ಬಿತ್ತು. ಆ ಆಕೃತಿ ಹತ್ತಿರವಾಗುತ್ತಿದ್ದಂತೆ ಧೋತಿ, ಕೋಟು ಧರಿಸಿದ್ದ ಹಾಗೂ ತಲೆ ಮೇಲೊಂದು ಟೋಪಿ ತೊಟ್ಟಿದ್ದ ಬಾಲಕನೊಬ್ಬ ಗೋಚರಿಸಿದ. ‘ಅರೆರೆ, ಸ್ವಾಮಿ’ ನನಗೆ ಅರಿವಿಲ್ಲದಂತೆಯೇ ಉದ್ಗಾರ ಹೊರಟಿತು. ಅಷ್ಟರಲ್ಲಿ ಆ ಹುಡುಗ ಮುಖಾಮುಖಿಯಾದ. ತಡಮಾಡದೆ ಕೇಳಿಯೇಬಿಟ್ಟೆ. ‘ನೀನು ಮಾಲ್ಗುಡಿಯ ಸ್ವಾಮಿ ಅಲ್ವಾ?’ ‘ಹೌದು, ನಾನು ಮಾಲ್ಗುಡಿಯ ಅಲ್ಬರ್ಟ್‌ ಮಿಷನ್‌ ಶಾಲೆಯ ವಿದ್ಯಾರ್ಥಿಯಾಗಿದ್ದ ಅದೇ ಸ್ವಾಮಿನಾಥನ್‌ ಶ್ರೀನಿವಾಸನ್‌. ಎಲ್ಲರಿಂದಲೂ ಸ್ವಾಮಿ ಎಂದು ಕರೆಸಿಕೊಳ್ಳುವ ಆ ಹುಡುಗ ನಾನೇ ಮಾರಾಯ’ ‘ಮತ್ತೆ ನಿನ್ನ ಗೆಳೆಯರಾದ ರಾಜಮ್‌, ಮಣಿ, ಸೋಮು, ಶಂಕರ್‌, ಸ್ಯಾಮುವೆಲ್‌ ಎಲ್ಲರೂ ಎಲ್ಲಿ?’ ‘ಎಲ್ಲರೂ ಮಾಲ್ಗುಡಿಯಲ್ಲೇ ಇದ್ದಾರೆ. ಒಮ್ಮೆ ಹೊರಗಿನ ಲೋಕವನ್ನು ನೋಡಿಕೊಂಡು ಬಂದರಾಯಿತು ಎಂದು ನಾನು ರೈಲೇರಿ ಬಂದೆ’ ‘ತಪ್ಪು ತಿಳಿಯಬೇಡ ಸ್ವಾಮಿ, ನಿನಗೆ ‘ರಾಜಮ್‌ನ ಬಾಲ’ ಅಂತ ಯಾಕೆ ಕರೆಯುತ್ತಿದ್ದರು? ಮತ್ತೆ ಈಗ ಆ ‘ದೇಹ’ವನ್ನು (ರಾಜಮ್‌) ಬಿಟ್ಟು ಈ ‘ಬಾಲ’ ಮಾತ್ರ ಏಕೆ ಬಂತು?’ (ಹುಬ್ಬು ಗಂಟಿಕ್ಕುತ್ತಾ) ‘ಆತ ಜಾಣ ವಿದ್ಯಾರ್ಥಿ. ಡಿಎಸ್‌ಪಿಯವರ ಮಗ. ಒಳ್ಳೆಯ ಹುಡುಗ. ಆತನ ಜತೆ ಓಡಾಡಿದರೆ ಏನು ತಪ್ಪು? ನನ್ನ ಫ್ರೆಂಡ್ಸ್‌ ಹಿಂದೆ ನನಗೆ ಹಾಗೆ ಕರೆಯುತ್ತಿದ್ದರು ನಿಜ. ಆ ವಿವಾದವನ್ನು ನಾವೆಲ್ಲ ಈಗಾಗಲೇ ಬಗೆಹರಿಸಿಕೊಂಡಿದ್ದೇವೆ. ನೀನ್ಯಾಕೆ ಅದನ್ನು ಮತ್ತೆ ಕೆದಕುತ್ತಿರುವೆ?’ ‘ಅಯ್ಯೋ, ಹಾಗೇನಿಲ್ಲಪ್ಪ. ಸುಮ್ನೆ ಕೇಳ್ದೆ ಅಷ್ಟೆ. ಇರ‍್ಲಿಬಿಡು. ನಾವೂ ದೋಣಿಗಳನ್ನು ಮಾಡಿ ನೀರಲ್ಲಿ ಬಿಡ್ತೀವಿ. ಆದ್ರೆ, ಕಾಗದದ ದೋಣಿಯಲ್ಲಿ ಫಸ್ಟ್‌ ಟೈಮ್‌ ಪ್ರಯಾಣಿಕನನ್ನು ಕಳಿಸಿದ್ದು ನೀನೇ ನೋಡು ಸ್ವಾಮಿ’ ‘ಅಂದ್ರೆ… ನೀನು ಹೇಳಿದ್ದು ನನಗೆ ಅರ್ಥ ಆಗಲಿಲ್ಲ’ ‘ಹಿಂದೆ ಕಾಗದದ ದೋಣಿಯಲ್ಲಿ ಇರುವೆಯನ್ನು ಕೂರಿಸಿ ನೀರಿನಲ್ಲಿ ಬಿಟ್ಟಿದ್ದಿಯಲ್ಲವೇ ನೀನು?’ ‘ಓಹೋ, ಅದಾ? ನನ್ ಪಾದಗಳ ಬಳಿಯಲ್ಲೇ ಇರುವೆಗಳು ಹರಿದು ಹೋಗುತ್ತಿದ್ದವು. ತಕ್ಷಣ ಏನೋ ಹೊಳೆದು, ದೋಣಿಯಲ್ಲಿ ಇರುವೆಯನ್ನು ಕೂರಿಸಿಬಿಟ್ಟೆ, ಅಷ್ಟೆ. ಹೋಗಲಿ, ನಿನ್ನ ಕೈಯಲ್ಲಿ ಅದೇನೋ ಇದೆಯಲ್ಲ?’ ‘ಇದಾ? ಸ್ವಾಮಿ, ಇದಕ್ಕೆ ಮೊಬೈಲ್‌ ಅಂತಾರೆ. ಇದರಿಂದ ದೂರದಲ್ಲಿ ಇರುವವರ ಜತೆ ಮಾತನಾಡಬಹುದು; ಥೇಟ್‌ ಟೆಲಿಫೋನ್‌ನಲ್ಲಿ ಮಾತನಾಡಿದಂತೆಯೇ, ಗೊತ್ತಾ?’ ‘ನಿಜವಾಗ್ಲೂ? ಕೊಡು ಇಲ್ಲಿ, ನೋಡೋಣ. ಮಾಲ್ಗುಡಿಯ ಪೋಸ್ಟ್‌ ಆಫೀಸ್‌ಗೆ ಕರೆ ಮಾಡ್ತೀನಿ’ (ಸ್ವಾಮಿ, ನನ್ನ ಮೊಬೈಲ್‌ ಪಡೆದುಕೊಂಡು ಪೋಸ್ಟ್‌ ಆಫೀಸ್‌ ಕಾಕಾನೊಂದಿಗೆ ಮಾತನಾಡಿದ. ಅತ್ತಲಿನಿಂದ ಕಾಕಾನ ಧ್ವನಿ ಕೇಳಿ ಹಿರಿಹಿರಿ ಹಿಗ್ಗಿದ. ವೈರ್‌ ಇಲ್ಲದೆ ಧ್ವನಿ ಹೆಂಗೆ ಹೋಗುತ್ತೆ ಅಂತ ಕಣ್‌ ಕಣ್‌ ಬಿಟ್ಟ. ಬಳಿಕ ಈ ಮೊಬೈಲ್‌ ಇನ್ನೇನು ಮಾಡುತ್ತದೆ ಎಂದು ಕುತೂಹಲದಿಂದ ಕೇಳಿದ. ‘ಇದು ಏನು ಮಾಡಲ್ಲ ಹೇಳು? ಒಂಥರ ಮಾಯಾದಂಡ ಇದ್ಹಂಗೆ. ಆಟ ಆಡೋಕೆ ಬರುತ್ತೆ, ಸಿನಿಮಾ ನೋಡೋಕೆ ಬರುತ್ತೆ, ಫೋಟೊ ಹೊಡೆಯೋಕೆ ಬರುತ್ತೆ, ಪತ್ರಗಳನ್ನು ಬರೆದು ಥಟ್‌ ಅಂತ ಕಳಿಸಲೂ ಬರುತ್ತೆ’ ಎಂದೆ. ಅವನೊಂದಿಗೆ ಒಂದು ಸೆಲ್ಫಿ ತೆಗೆದುಕೊಂಡು, ಚಿತ್ರ ತೋರಿಸಿದೆ. ಆಟ ಆಡೋದನ್ನು ಹೇಳಿಕೊಟ್ಟೆ. ಸ್ವಲ್ಪ ಹೊತ್ತಿನಲ್ಲೇ ಮೊಬೈಲ್‌ಅನ್ನು ಸ್ವಾಮಿ ನನಗೆ ವಾಪಸ್‌ ಕೊಟ್ಟ). ‘ಯಾಕೆ ಸ್ವಾಮಿ, ಮೊಬೈಲ್‌ ವಾಪಸ್‌ ಕೊಟ್ಟೆ?’ ನಾನು ಕೇಳಿದೆ. ‘ಮೊಬೈಲ್‌ನಲ್ಲಿ ಹೀಗೆ ಆಟ ಆಡ್ತಾ ಕುಳಿತರೆ, ಗ್ರೌಂಡ್‌ನಲ್ಲಿ ನಾವು ಕ್ರಿಕೆಟ್‌ ಆಡೋದು ಯಾವಾಗ? ತೋಟದಲ್ಲಿ ಸುತ್ತಾಡಿ ಚಿಟ್ಟೆ ಹಿಡಿಯುವುದು ಹೇಗೆ? ಹೋಂವರ್ಕ್‌ ಕಂಪ್ಲೀಟ್‌ ಮಾಡೋಕೆ ಟೈಮ್‌ ಎಲ್ಲಿ ಸಿಗೋದು? ನದಿ ಕಡೆಗೆ ಹೋಗಿ ಈಜು ಹೊಡೆಯೋದು, ನದಿ ದಂಡೆಯ ಮರಗಳಿಂದ ಹಣ್ಣುಗಳನ್ನು ಕಿತ್ತು ತಿನ್ನೋದು –ಇದನ್ನೆಲ್ಲ ಯಾವಾಗ ಮಾಡೋದು? ನನಗೆ ಈ ಮೊಬೈಲ್‌ ಬೇಡಪ್ಪಾ’ ಎಂದ ಸ್ವಾಮಿ, ಅದನ್ನು ನನ್ನ ಕೈಗಿತ್ತು, ತಲೆಯ ಮೇಲಿನ ಟೋಪಿ ಸರಿಪಡಿಸಿಕೊಂಡು ಹೊರಟೇಬಿಟ್ಟ. ಇಂಗ್ಲಿಷ್‌ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಭಾರತೀಯರ ಪೈಕಿ ಮುಂಚೂಣಿಯಲ್ಲಿ ನಿಲ್ಲುವಂತಹ ಹೆಸರು ಕನ್ನಡದ ಆರ್‌.ಕೆ. ನಾರಾಯಣ್‌ ಅವರದು. ಮೈಸೂರಿನ ಮಹಾರಾಜ ಹೈಸ್ಕೂಲ್‌ನಲ್ಲಿ ಓದಿದ ಅವರು, ಆಗಲೇ ಅಲ್ಲಿನ ಲೈಬ್ರರಿಯಲ್ಲಿದ್ದ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡರು. ಸಾಹಿತ್ಯದಲ್ಲಿ ಆ ಎತ್ತರಕ್ಕೆ ಬೆಳೆಯಲು ಆ ಓದೇ ಅವರ ನೆರವಿಗೆ ಬಂತು. ‘ಸ್ವಾಮಿ ಆ್ಯಂಡ್‌ ಫ್ರೆಂಡ್ಸ್‌’ ಸೇರಿದಂತೆ ಹಲವು ಕೃತಿಗಳನ್ನು ಅವರು ರಚಿಸಿದರು. ಅವರ ಕೃತಿಗಳನ್ನು ಆಧರಿಸಿ ‘ಮಾಲ್ಗುಡಿ ಡೇಸ್‌’ ಟಿವಿ ಧಾರಾವಾಹಿ ಬಂತು. ಯೂ ಟ್ಯೂಬ್‌ನಲ್ಲಿ ಅದರ ಕಂತುಗಳು ಲಭ್ಯ.

courtsey:prajavani.net

https://www.prajavani.net/artculture/short-story/childrens-day-childrens-stories-680459.html

Leave a Reply

This site uses Akismet to reduce spam. Learn how your comment data is processed.