ನಿಜವಾದ ದಾನ

ರಂತಿದೇವ ಹುಟ್ಟಿನಿಂದ ಸಿರಿವಂತ; ಆದರೆ ದಾನ ಮಾಡಿ ಮಾಡಿ ಬಡವನಾದ. ಅವನಿಂದ ಸಹಾಯ ಪಡೆದವರೆಲ್ಲೂ ಶ್ರೀಮಂತರಾದರು; ಆದರೆ ಬೆಟ್ಟದಷ್ಟಿದ್ದ ಅವನ ಸಂಪತ್ತು ಕರಗಿಹೋಯಿತು. ಹೀಗಿದ್ದರೂ ಅವನು ಎದೆಗುಂದಲಿಲ್ಲ; ಇದ್ದುದ್ದರಲ್ಲಿಯೇ ಸಂತೋಷದಿಂದ ಇದ್ದ. ಅವನ ಹೆಂಡತಿ–ಮಕ್ಕಳು ಅವನಿಗೆ ಸರಿಹೊಂದುವಂತರೇ ಆಗಿದ್ದರು; ಅದೊಂದು ಪುಣ್ಯವೆನ್ನಿ! ಅವನ ಬಡತನದ ತೀವ್ರತೆ ದಿನದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ಒಮ್ಮೆ ಸತತವಾಗಿ ನಲವತ್ತೆಂಟು ದಿನಗಳು ಅವನಿಗೂ ಅವನ ಮಡದಿ–ಮಕ್ಕಳಿಗೂ ಕುಡಿಯಲು ನೀರು ಕೂಡ ಸಿಗಲಿಲ್ಲ. ಅದೃಷ್ಟ! ನಲವತ್ತೊಂಬತ್ತನೆಯ ದಿನ ಅವನಿಗೆ ಸ್ವಲ್ಪ ತುಪ್ಪ, ಪಾಯಸ, ಗೋದಿಯ ಅನ್ನ, ನೀರು ಸಿಕ್ಕಿದವು. ಮಡದಿ–ಮಕ್ಕಳೊಡನೆ ಊಟಕ್ಕೆ ಕುಳಿತ. ಇನ್ನೇನು, ಅನ್ನದ ತುತ್ತನ್ನು ಬಾಯಿಗಿಡಬೇಕು, ಅಷ್ಟರಲ್ಲಿ ಬ್ರಾಹ್ಮಣನೊಬ್ಬ ಮನೆಗೆ ಬಂದ. ಅತಿಥಿಯನ್ನು ಸತ್ಕರಿಸಿ, ಅವನಿಗೆ ಅನ್ನ–ಪಾಯಸಗಳನ್ನು ನೀಡಿ, ತೃಪ್ತಿಪಡಿಸಿದ. ಉಳಿದುದನ್ನು ತಿನ್ನಲು ರಂತಿದೇವನ ಸಂಸಾರ ಕುಳಿತಿತು. ಅಷ್ಟರಲ್ಲಿ ‘ಅಮ್ಮ, ಭಿಕ್ಷೆ’ ಎಂಬ ಕೂಗು ಹೊರಗಿನಿಂದ ಕೇಳಿಸಿತು. ಕುಟುಂಬಕ್ಕೆಂದು ಉಳಿಸಿಕೊಂಡಿದ್ದ ಆಹಾರದಲ್ಲಿ ಅರ್ಧದಷ್ಟನ್ನು ಅವನಿಗೆ ನೀಡಿದ. ಉಳಿದುದನ್ನು ತಿನ್ನಬೇಕೆನ್ನುವಷ್ಟರಲ್ಲಿ, ಮತ್ತೆ ದನಿಯೊಂದ ಮೊರೆಯಿಕ್ಕಿತು: ‘ನಾನೂ ನನ್ನ ನಾಲ್ಕು ನಾಯಿಗಳು ಹಸಿವೆಯಿಂದ ಸಂಕಟಪಡುತ್ತಿದ್ದೇವೆ. ನಮಗೆ ಆಹಾರ ನೀಡಿ ಪುಣ್ಯಕಟ್ಟಿಕೊಳ್ಳಿ’ ಎಂದು ಆ ವ್ಯಕ್ತಿ ಅಂಗಲಾಚಿದ. ಅವನಿಗೂ ನಾಯಿಗೂ ಉಳಿದ ಅಷ್ಟೂ ಅನ್ನವನ್ನು ನೀಡಿದ ರಂತಿದೇವ. ಈಗ ಅವನಲ್ಲಿ ನೀರು ಮಾತ್ರವೇ ಉಳಿಯಿತು. ಅದನ್ನು ಕುಡಿಯೋಣ ಎನ್ನುತ್ತಿದ್ದಂತೆ, ‘ಅಯ್ಯೋ! ಬಾಯಾರಿಕೆಯಿಂದ ನನ್ನ ಪ್ರಾಣವೇ ಹೋಗುತ್ತಿದೆ; ದಯವಿಟ್ಟು ನೀರನ್ನು ಕೋಡಿ’ ಎಂಬ ಆರ್ತನಾದ ಕೇಳಿಸಿತು. ರಂತಿದೇವ ನೀರನ್ನು ಅವನಿಗೆ ಕೊಷ್ಟು. ಕೈಮುಗಿದು ನಿಂತ. ಆಶ್ಚರ್ಯ, ಆ ದಾರಿಹೋಕ ನೀರನ್ನು ಕುಡಿಯುತ್ತಿದ್ದಂತೆ ಮಾಯವಾದ; ಅವನಲ್ಲಿ ಜಾಗದಲ್ಲಿ ಸಾಕ್ಷಾತ್‌ ಬ್ರಹ್ಮನೇ ನಿಂತಿದ್ದ. ಮೊದಲು ಅನ್ನವನ್ನು ಬಯಸಿ ಬಂದಿದ್ದವರು ಇಂದ್ರ ಮತ್ತು ಅಗ್ನಿ. ನಾಯಿಗಳೊಂದಿಗೆ ಬಂದವನು ದತ್ತಾತ್ರೇಯ. ಇದು ಭಾಗವತದಲ್ಲಿ ಬರುವ ಕಥೆ. ಈ ಕಥೆಯ ಸಂದೇಶವಾದರೂ ಏನು? ರಂತಿದೇವನ ವ್ಯಕ್ತಿತ್ವದಲ್ಲಿ ವಿಶಿಷ್ಟ ಗುಣವೊಂದಿದೆ. ಆರ್ತರಿಗೆ ದಾನ ಮಾಡುವುದು ಅವನ ಜನ್ಮಗುಣ. ಅವನು ಕೇವಲ ಶ್ರೀಮಂತನಾಗಿದ್ದಾಗ ಮಾತ್ರವೇ ದಾನ ಮಾಡಲಿಲ್ಲ; ಬಡವನಾದಾಗಲೂ ಅವನ ದಾನಶೀಲತೆ ಕಡಿಮೆ ಆಗಲಿಲ್ಲ. ಅವನಲ್ಲಿ ಸಂಪತ್ತು ಇರಲಿಲ್ಲ; ಆದರೆ ಅವನಲ್ಲಿ ಏನಿದ್ದಿತೋ, ಅದನ್ನು ಅವನು ಪ್ರಾಮಣಿಕವಾಗಿ, ಸಂತೋಷವಾಗಿ ಬೇರೊಬ್ಬರಿಗೆ ದಾನಮಾಡಿದ. ಇದು ನಿಜವಾದ ದಾನಬುದ್ಧಿ. ಇಂಥ ಪ್ರಾಂಜಲವಾದ ವ್ಯಕ್ತಿಗಳು ಲೌಕಿಕವಾಗಿ ಕಷ್ಟಗಳನ್ನು ಎದುರಿಸಬಹುದು; ಆದರೆ ಅವರಿಗೆ ಅಲೌಕಿಕವಾದ ಆನಂದ ಖಂಡಿತ ಒದಗುತ್ತದೆ – ಎಂಬ ಸಂದೇಶವನ್ನು ಮೇಲಣ ಕಥೆಯಲ್ಲಿ ಕಾಣಬಹುದು.

author- ಛಾಯಾಪತಿ

courtsey:prajavani.net

https://www.prajavani.net/artculture/short-story/a-true-charity-700436.html

Leave a Reply