ಒಂದು ಹೆಜ್ಜೆ

‘ಸರಿಯಾಗಿ ಕೇಳಿಸ್ಕೊಳಿ, ನಿಮ್ಮ ಜಾತಿ ಗೊತ್ತಾದ್ರೆ ಸ್ಟೂಡೆಂಟ್ಸ್ ನಿಮ್ಮ ಊಟವನ್ನ ಮೂಸಿ ಸಹ ನೋಡಲ್ಲ’ ಅಂದುಬಿಟ್ಟರು. ನನಗೆ ಆಘಾತವಾಯಿತು. ಆ ಮಾತುಗಳನ್ನು ಸಹಿಸಲಾಗಲಿಲ್ಲ. ಒಳಗೆಲ್ಲ ವಿದ್ಯುತ್ ಸಂಚಾರ ವಾದಂತಾಯಿತು.. ಕೇವಲ ಮೂರು ತಿಂಗಳಲ್ಲಿ ಏನೆಲ್ಲಾ ಆಗಿ ಹೋಯಿತು. ಮೊದಲ ದಿನವೇ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಬನ್ನಿ’ ಎಂಬ ಫಲಕ ನೋಡಿ ಧಿಗಿಲುಗೊಂಡಿದ್ದೆ. ಆ ಭಯವೇ ನಿಜವಾಗುವಂತಿದೆಯಲ್ಲಾ? ಕಷ್ಟಪಟ್ಟು ಓದಿ ಪಡೆದ ಕೆಲಸ. ಅವ್ವ ಕೂಲಿ ನಾಲಿ ಮಾಡಿ ಕರುಣಿಸಿದ ಕೆಲಸ. ನನ್ನ ಇಡೀ ಖಾಂದಾನಿನಲ್ಲಿಯೇ ಮೊದಲ ಸರ್ಕಾರಿ ಕೆಲಸ. ಬಿಟ್ಟುಬಿಡುವುದ? ಅಯ್ಯಪ್ಪ! ಅದಾಗದ ಮಾತು. ಹಾಗಂತ ಸ್ವಾಭಿಮಾನ ಬಿಟ್ಟು ಬದುಕುವುದ? ಸತ್ತರೂ ಸರಿ ಅದನ್ನ ಬಿಟ್ಟು ಬದುಕಲ್ಲ. ಮತ್ತೆ ಇನ್ನೇನು ಮಾಡೋದು? ಇದು ಇಲ್ಲಿಗೆ ನಿಲ್ಲುವ ವಿಷಯವಂತೂ ಅಲ್ಲ. ಹಾಗಂತ ಅದರಲ್ಲಿ ನನ್ನ ತಪ್ಪೇನು ಇಲ್ಲ. ಹೀಗೆ ನನ್ನೊಳಗೆ ನಾನೇ ಮುಳುಗಿರುವಾಗ ‘ಮಿಸ್ಟರ್ ಉಮಾಶಂಕರ್ ಏನಿಷ್ಟೊಂದು ಡಿಸ್ಟರ್ಬ್ ಆಗಿದ್ದೀರಲ್ಲ?’ ಪರಿಚಿತ ದನಿ ನನ್ನ ಭಾವಲಹರಿಗೆ ಅಲ್ಪವಿರಾಮ ಹಾಕಿತು. ‘ಏನಿಲ್ಲ ಬನ್ನಿ ಈಶ್ವರ್ ಸರ್’ ಎಂದು ನಾನು ಕುಳಿತಿದ್ದ ಅರಳಿಮರದ ಕೆಳಗಿನ ಕಲ್ಲು ಬೆಂಚಿನಲ್ಲಿ ಅವರಿಗೂ ಜಾಗ ಮಾಡಿಕೊಟ್ಟೆ. ಅವರು ದೀರ್ಘವಾಗಿ ಉಸಿರು ಬಿಡುತ್ತಾ ಸ್ವಲ್ಪ ಹೊತ್ತು ಮೌನವಾದರು. ಅವರೇ ಮೌನ ಮುರಿದು ‘ಇದೆಲ್ಲ ಯಾಕೆ ಉಮಾಶಂಕರ್. ಒಂದು ಕ್ಷಮೆ ಕೇಳಿ ಅಂತ್ಯ ಹಾಡಿಬಿಡಿ’ ಎಂದರು. ಮತ್ತೆ ಮುಳುಗಿದೆ. ನಾನೇಕೆ ಕ್ಷಮೆ ಕೇಳಬೇಕು? ಅಂತಾದ್ದೇನು ಮಾಡಿದೆ? ಕನಿಷ್ಠಪಕ್ಷ ಪಶ್ಚಾತ್ತಾಪವೂ ಇಲ್ಲದೆ ಬದುಕುತ್ತಿರೋರಿಗೆ ಪ್ರಶ್ನೆಯನ್ನೂ ಮಾಡಬಾರದೆ? ‘ಮಿಸ್ಟರ್ ಉಮಾಶಂಕರ್’ ಎಚ್ಚೆತ್ತೆ. ‘ನೋಡಿ ನೀವೆಷ್ಟು ನೆಮ್ಮದಿ ಕಳೆದುಕೊಂಡಿದ್ದೀರಿ. ನನ್ನ ಮಾತುಗಳೇ ನಿಮಗೆ ಕೇಳುತ್ತಿಲ್ಲ. ಒಂದು ಕ್ಷಮೆ ಅಷ್ಟೆ. ಯಾರಪ್ಪನ ಮನೆ ಗಂಟೂ ಹೋಗಲ್ಲ’ ಅಂದರು ಈಶ್ವರ್. ನಾನು ‘ಅವರಪ್ಪನ ಮನೇದೂ ಹೋಗಲ್ವಲ್ಲಾ?’ ತುಸು ಕಠಿಣವಾಗಿಯೇ ಹೇಳಿಬಿಟ್ಟೆ. ಈಶ್ವರ್ ಸ್ವಲ್ಪವೂ ವಿಚಲಿತರಾಗಲಿಲ್ಲ ‘ನಿಮ್ಮ ವಯಸ್ಸು ಈ ಮಾತು ಹೇಳಿಸುತ್ತಿದೆ. ಇನ್ನು ಬಾಳಿ ಬದುಕಬೇಕಾದವರು. ಎಲ್ಲರ ವಿಶ್ವಾಸವನ್ನೂ ಪಡಕೊಂಡು ಹೋಗಬೇಕು ಉಮಾಶಂಕರ್’ ಅಂದರು. ಮತ್ತೆ ಭಾವಲಹರಿಯ ರೆಕ್ಕೆ ಬಿಚ್ಚಿದವು. ಯಾವಾಗಲೂ ನಾವೇ ವಿಶ್ವಾಸ ಗಳಿಸಬೇಕು. ನಾವೇ ತಲೆಬಾಗಬೇಕು. ನಾವೇ ಕ್ಷಮೆ ಕೇಳಬೇಕು ‘ಯೋಚನೆ ಮಾಡು ಉಮಾಶಂಕರ್’ ಈಶ್ವರ್ ತೆರಳಿದರು. ಆದರೆ ನನ್ನೊಳಗಿನ ಪ್ರಶ್ನೆಗಳು ತೆರಳಲೇ ಇಲ್ಲ. ಮೇಲೆದ್ದವನೇ ನಡೆದುಕೊಂಡೇ ಮನೆ ಕಡೆ ಹೊರಟೆ. ಕಾಲುಗಳು ತಮ್ಮ ಪಾಡಿಗೆ ದಾರಿ ಹಿಡಿದಿದ್ದವು. ಮೂರು ತಿಂಗಳ ಹಾದಿ ಸುಪರಿಚಿತವಾಗಿತ್ತು. ಆ ದಾರಿಯುದ್ದಕ್ಕೂ ಸಾಲುಗಟ್ಟಿದ್ದ ರಸ್ತೆ ಬದಿಯ ವ್ಯಾಪಾರಿಗಳು ಇಂದೇಕೋ ನನ್ನನ್ನೇ ನೋಡುತ್ತಿದ್ದಾರೆ ಎನಿಸುತ್ತಿತ್ತು. ಒಬ್ಬೊಬ್ಬನೇ ಮಾತನಾಡಿಕೊಳ್ಳುತ್ತಾ ಹೇಗೋ ಮನೆಯ ಹತ್ತಿರ ಬರುತ್ತಿದ್ದಂತೆ ದೂರದಿಂದ ಅದ್ಯಾರೋ ನನ್ನ ಬಾಡಿಗೆ ಮನೆಯ ಮುಂದೆ ಕುಳಿತಿರುವುದು ಕಂಡಿತು. ಸಣಕಲು ದೇಹ. ಬಾಗಿಲಿಗೆ ಒರಗಿ ಕಾಲು ಮಡಚಿ ಕೈಗಳೆರಡರಿಂದ ಕಾಲುಗಳನ್ನು ಒಂದು ಸುತ್ತು ಸುತ್ತಿ ಹಿಡಿದು ಕುಳಿತಿರುವ ಭಂಗಿ. ಚಿರಪರಿಚಿತ ಭಂಗಿ. ಅರೆ! ಇದು ಅವ್ವಾ. ಸರಸರನೆ ಹೆಜ್ಜೆ ಹಾಕಿದೆ. ದೂರದಿಂದಲೇ ಅವ್ವಾ ತನ್ನ ಕೆಂಪು ಹಲ್ಲುಗಳನ್ನು ಬಿಟ್ಟು ಸ್ವಾಗತಿಸಿದಳು. ನನ್ನೆದೆಗೂಡಿನೊಳಗೆ ತಣ್ಣನೆಯ ನೀರು ಹರಿದಂತಾಗಿ ಓಡಿ ಹೋಗಿ ಅವ್ವನನ್ನೊಮ್ಮೆ ತಬ್ಬಿಕೊಂಡೆ. ನನ್ನ ಬಿಗಿ ಅಪ್ಪುಗೆಯನ್ನು ಗುರುತಿಸಿದವಳಂತೆ ‘ಯಾಕ್ಲ ಮೊಗ’ ಅಂದು ಮುತ್ತು ಕೊಟ್ಟಳು. ನಾನು ‘ಇದ್ಯಾಕಿಂಗೆ ಒಬ್ಬಳೇ ಹೊಂಟು ಬಂದೆ? ಯಾರ್ನಾರ ಜೊತೆಲಿ ಕರ್ಕಂಬರದಲ್ವ? ಒಂದು ಮಾತೂ ಹೇಳದಂಗೆ ಬಂದಿದ್ದೀಯಲ್ಲ’ ಅಂದು ಅವಳ ಚೀಲ ಹಿಡಿದು ಬೀಗ ತೆಗೆದು ಒಳ ಹೋಗುತ್ತಲೇ ‘ನಿನ್ನ ನೋಡ್ಬೇಕನಿಸ್ತು ಓಡ್ಬಂದೆ ಕನಾ’ ಅಂದಳು. ನನ್ನ ನೋವು ಅದಾಗಲೇ ಇವಳಿಗೆ ತಟ್ಟಿಬಿಟ್ಟಿತೆ? ಎಂದೆನಿಸಿ ಕಣ್ಣಲ್ಲಿ ನೀರು ತುಂಬಿಕೊಂಡವು. ಅವ್ವ ಮುತ್ತಿಟ್ಟ ಕೆನ್ನೆ ಇನ್ನೂ ತೇವವಾಗಿದ್ದರಿಂದಲೋ ಏನೋ ಅವು ಜಾರಲೇ ಇಲ್ಲ. ನೆಲದ ಮೇಲೆ ಚಾಪೆ ಹಾಸಿ ಕುಳ್ಳಿರಿಸಿದೆ. ಅವ್ವ ಒಂದು ನಿಮಿಷವೂ ದಣಿವಾರಿಸದೆ ಅಡುಗೆ ಮನೆಯೊಳಗೆ ತೆರಳಿ ತಂಗಳ ಮಿಕ್ಕಿದ್ದ ಪಾತ್ರೆಗಳನ್ನು ಕಂಡವಳೇ ಗೊಣಗುತ್ತಾ ತೊಳೆಯಲು ಅಣಿಯಾದಳು. ನಾನು ಬಟ್ಟೆ ಬದಲಾಯಿಸಿ, ಪೊರಕೆ ತೆಗೆದುಕೊಂಡು ಕಸ ಗುಡಿಸಿ ಹೊರಹಾಕುವಷ್ಟರಲ್ಲಿ ಅವ್ವನೂ ಕೆಲಸ ಮುಗಿಸಿ ನೆಲದ ಮೇಲೆ ಗೋಡೆಗೆ ಬೆನ್ನು ಮಾಡಿ ಕುಳಿತು ಸೆರಗಿನಿಂದ ಕೈ ನೀರೊರೆಸಿಕೊಂಡಳು. ಎರಡು ನಿಮಿಷ ಕುಂತಳೇನೋ ಅಷ್ಟೆ. ಮತ್ತೆ ರಾತ್ರಿ ಅಡುಗೆಗೆ ಊರಿಂದ ತಂದಿದ್ದ ದಂಟಿನ ಸೊಪ್ಪು ಬಿಡಿಸುತ್ತಾ ಕುಂತಳು. ನಾನೂ ಕೈ ಜೋಡಿಸಿದೆ. ಬೆಂಗಳೂರಿನಲ್ಲಿ ಕಾಲೇಜು ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿ ಮೂರು ತಿಂಗಳೂ ಆಗಿಲ್ಲ. ಅವ್ವನಿಗಾಗಿಯೇ ಒಂದು ಮನೆ ಬಾಡಿಗೆಗೆ ಮಾಡಿದ್ದೆ. ಆದರೆ ಅವಳು ನನ್ನೊಂದಿಗೆ ಬರಲು ಸುತಾರಾಂ ಒಪ್ಪಲೇ ಇಲ್ಲ. ನನ್ನೊಳಗಿನ ವಿದ್ಯೆಗಳೆಲ್ಲವನ್ನೂ ಖರ್ಚು ಮಾಡಿದ್ದೆ. ಆದರೂ ಅವ್ವನದ್ದು ಒಂದೇ ಹಠ ‘ಮಾರಮ್ಮನಾಣೆ ಬರಕ್ಕಿಲ್ಲ’. ಬೇಡಿಕೊಂಡಿದ್ದಕ್ಕೆ ‘ನೀನಾದ್ರೂ ಬುದ್ಧಿವಂತ ಎಲ್ಲೋದ್ರು ಬಾಳಿ ಬದುಕ್ತಿ. ನಿಮ್ಮಜ್ಜನ ಕಾಲ್ದಿಂದ ಕಾಪಾಡ್ಕಬಂದಿರೋ ಆ ಅಂಗೈಯಗಲ ಮನೆಲಿ ದೀಪ ಹಚ್ಚೋರ‍್ಯಾರೆಳು’ ಅಂದು ನನ್ನ ಬಾಯಿ ಮುಚ್ಚಿಸಿದ್ದಳು. ಕಳೆದ ವಾರವಷ್ಟೆ ಫೋನ್ ಮಾಡಿ ನಮ್ಮೂರಿನ ಶಾಲೆಯಲ್ಲಿ ಬಿಸಿಯೂಟದ ಹೆಲ್ಪರ್ ಕೆಲಸ ಸಿಕ್ಕಿರುವುದಾಗಿ ಹೇಳಿದ್ದಳು. ಆಗ ಕ್ಷಣ ಮೌನವಾಗಿಬಿಟ್ಟಿದ್ದೆ. ನನ್ನ ಮೌನಕ್ಕೆ ಅರ್ಥ ಅರಿತವಳಂತೆ ‘ಪಕ್ಕದಲ್ಲೇ ಶಾಲೆ. ಮನೆಲಿ ಸುಮ್ಕೆ ಕುಂತ್ಕಳೋ ಬದ್ಲು ಹೋಗಿ ಬತ್ತಿನಿ’ ಅಂದಿದ್ದಳು. ನಾನು ‘ನಿನ್ನಿಷ್ಟ ಕಣವ್ವ’ ಎಂದಷ್ಟೆ ಹೇಳಿದ್ದೆ. ‘ಅದ್ಯಾಕೆ ಸಪ್ಗಿದ್ದಿ’ ಅವ್ವಾ ಸೊಪ್ಪು ಬಿಡಿಸಿ ಮೇಲೇಳುತ್ತಾ ಅಂದ ಮಾತು ಕೇಳಿ ‘ನೀನ್ಯಾಕೆ ಶಾಲೆ ಕೆಲಸ ಬುಟ್ಟು ಬಂದಿದ್ದಿ? ಒಂದ್ವಾರುಕ್ಕೆ ರಜಾ ಕೊಟ್ಬುಟ್ರಾ?’ ಎಂದು ಪ್ರಶ್ನಿಸಿದೆ. ಅದಕ್ಕೆ ‘ಮೇಷ್ಟ್ರು ಬಾಳ ಒಳ್ಳೆಯವ್ರು ಮೊಗ. ಸರ್ಕಾರಿ ಶಾಲೇಲಿ ಮಕ್ಳು ಸುದ ಬರದು ಅಷ್ಟಕ್ಕಷ್ಟೆಯಾ. ಎಲ್ಲಾರ್ಗು ಕಾರ್ಮೆಂಟ್ ಗಾಳಿ ಹಿಡ್ಕಂಡದೆ. ಮಗನ್ನ ನೋಡಿ ಎಲ್ಡು ತಿಂಗ್ಳಾತು ಅಂದದ್ಕೆ ಪಾಪ ಓಗ್ಬಾ ಅಂದ್ರು. ಬಾಳ ಒಳ್ಳೆ ಮನ್ಸ ಕಣಪ್ಪ’ ಎಂದು ಅಡುಗೆ ಮನೆ ಸೇರಿಕೊಂಡಳು. ಗ್ಯಾಸ್ ಸ್ಟೌವ್ ಹಚ್ಚಿಟ್ಟು ನಾನೂ ಅಲ್ಲೇ ಕುಳಿತೆ. ಊರ ಸುದ್ದಿಗೆ ಕಿವಿ ನೆಟ್ಟಗಾಗಿ ಸಮಯ ಕಳೆದಿದ್ದೇ ತಿಳಿಯಲಿಲ್ಲ. ಅಡುಗೆಯಾಗಿ, ಊಟವಾಗಿ, ಅವ್ವನೊಂದಿಗೆ ಪಾತ್ರೆ ತೊಳೆದು, ತಡ ರಾತ್ರಿಯವರೆಗೂ ಮಾತಾಡುತ್ತಾ ಮಲಗಿದ್ದೇ ತಿಳಿಯಲಿಲ್ಲ. ಅವ್ವನ ಮಾತೇ ಲಾಲಿ ಹಾಡಲ್ಲವೆ? ಬೆಳಿಗ್ಗೆ ಅವ್ವ ಮನೆ ಮುಂದೆ ನೀರು ಹಾಕಿ ಮಾಡುತ್ತಿದ್ದ ಕಸಪೊರಕೆಯ ಸದ್ದು ನನ್ನನ್ನು ಎಚ್ಚರಿಸಿತು. ಕಾಲೇಜು ನೆನೆದ ತಕ್ಷಣ ಮತ್ತದೇ ಯಮಯಾತನೆ ನನ್ನೆದೆ ಹೊಕ್ಕಿ ಪ್ರಾಣ ಹಿಂಡುತ್ತಿತ್ತು. ಅವ್ವ ಅದಾಗಲೇ ಬಿಂದಿಗೆಗೆ ಕಾಯಿಲ್ ಹಾಕಿ ನೀರು ಬಿಸಿಗಿಟ್ಟಿದ್ದಳು. ಮನಸ್ಸಿಲ್ಲದಿದ್ದರೂ ರೆಡಿಯಾಗಿ ಊಟ ಮಾಡಿ ಅವ್ವ ಕಟ್ಟಿದ್ದ ಬುತ್ತಿಯನ್ನು ಬ್ಯಾಗಿನೊಳಗೆ ಹಾಕಿಕೊಂಡು ಹೊರಟೆ. ಹೋಗುವ ಮುನ್ನ ಅವ್ವನಿಗಾಗಿ ಎರಡು ಹೊಂಗೆ ಗಿಡವನ್ನು ತಂದುಕೊಟ್ಟಿದ್ದೆ. ಎಲ್ಲಾದರೂ ಜಾಗ ನೋಡಿ ನೆಡುತ್ತೇನೆ ಎಂದು ರಾತ್ರಿ ಒಂದೇ ಸಮನೆ ನೆನಪಿಸಿದ್ದಳು. ನಾನು ಕಾಲೇಜಿನಿಂದ ಬರುವವರೆಗೆ ಒಂಟಿಯಾಗಿ ಯಾರ ಪರಿಚಯವೂ ಇಲ್ಲದೆ ಅದು ಹೇಗೆ ಕಾಲ ಕಳೆಯುತ್ತಾಳೋ ಎಂದು ಯೋಚಿಸುತ್ತಲೇ ಮನೆಯಿಂದ ತೆರಳಿದ್ದೆ. ಮನೆ ಹೊಸ್ತಿಲು ದಾಟಿದ್ದೇ ತಡ ಕಾಲೇಜಿನ ರಗಳೆ ನೆನಪಾಗಿ ನನ್ನೊಳಗಿನ ನಾನು ಮಾತಿಗಿಳಿದು ವಟಗುಟ್ಟುತ್ತಲೇ ಕಾಲೇಜಿನ ಮುಂದೆ ಬಂದಿದ್ದೆ. ಅದೇ ಫಲಕ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಬನ್ನಿ’ ಒಳ ಹೋದೆ. ಎಲ್ಲವೂ ವಿಚಿತ್ರವೆನಿಸುತ್ತಿತ್ತು. ಕಾಲೇಜು ಸೇರಿ ಮೂರು ತಿಂಗಳಾಗಿಲ್ಲ ಅದಾಗಲೇ ನನ್ನ ಮೇಲೊಂದು ಆರೋಪ. ಅದರ ತೀರ್ಮಾನಕ್ಕಾಗಿ ಇಂದು ಸಭೆ. ಆ ಸಭೆಯಲ್ಲಿ ಕ್ಷಮೆ ಕೇಳಲು ಒತ್ತಾಯ. ಮನಸ್ಸು ಗಟ್ಟಿಯಾಗಿತ್ತು. ಅವ್ವನನ್ನು ನೋಡಿಯೋ ಏನೋ ಭಂಡ ಧೈರ್ಯವೊಂದು ಮನೆ ಮಾಡಿಕೊಂಡಿತ್ತು. ಏನೊಂದೂ ಆಗದವನಂತೆ ಸ್ಟಾಫ್ ರೂಮ್ ಪ್ರವೇಶಿಸಿದೆ. ಬೇಕೆಂದೇ ಕುಳಿತಿದ್ದ ಈಶ್ವರ್ ಸರ್‌ಗೆ ಲವಲವಿಕೆಯಿಂದ ‘ಗುಡ್ ಮಾರ್ನಿಂಗ್ ಸಾರ್. ಟಿಫನ್ ಆಯ್ತಾ’ ಎಂದೆ. ಇಡೀ ಸಿಬ್ಬಂದಿ ವರ್ಗವೇ ನನ್ನತ್ತ ತಿರುಗಿತು. ಎಲ್ಲರಿಗೂ ಕೈ ಬೀಸಿ ಹಾಯ್ ಎಂದೆ. ಹತ್ತಿರ ಬಂದ ಈಶ್ವರ್ ಸರ್ ‘ಏನು? ಕ್ಷಮೆ ಕೇಳೋದು ಖಾತ್ರಿ ಅಂದಂಗಾಯ್ತು’ ಪಿಸುಗುಟ್ಟಿದರು. ನಾನು ‘ಕ್ಷಮೇನ ಯಾವ ಕ್ಷಮೆ ಸಾರ್’ ಜೋರಾಗಿ ಹೇಳಿದೆ. ಅವರು ‘ಶ್’ ಎಂದು ಹಣೆ ಬಡಿದುಕೊಂಡರು. ನಾನು ಕಣ್ಣೊಡೆದು ಚೇರಿನ ಮೇಲೆ ದಿನಪತ್ರಿಕೆ ಓದುತ್ತಾ ಕುಳಿತೆ. ಆಗಿದ್ದಿಷ್ಟು; ನಾನು ಕೆಲಸಕ್ಕೆ ಸೇರಿದ ನಂತರ ಒಂದು ತಿಂಗಳು ಮೆಸ್ಸು, ಹೋಟೆಲ್ಲು ಅಲ್ಲಿ ಇಲ್ಲಿ ತಿಂದು ಹೊಟ್ಟೆ ಕೆಟ್ಟು ಹೋಗಿ ಗ್ಯಾಸ್ಟ್ರಿಕ್ ಸಮಸ್ಯೆ ಕಾಡಿತ್ತು. ಅವ್ವ ಒಂದು ವಾರ ಬಂದು ಒಂದು ಹದಕ್ಕೆ ನನ್ನ ರೆಡಿ ಮಾಡಿ ಮನೆಯಲ್ಲಿಯೇ ಅಡುಗೆ ಮಾಡಿಕೊಂಡು ತಿನ್ನಬೇಕು ಎಂದು ಆಜ್ಞಾಪಿಸಿ ಹೋಗಿದ್ದಳು. ಗ್ಯಾಸ್ಟ್ರಿಕ್ಕಿನ ಎದೆ ನೋವು ಸಹ ನನ್ನನ್ನು ಮನೆಯ ಊಟಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಬೆಳಿಗ್ಗೆ ಅನ್ನ ಮತ್ತು ಸಾರು ತಿಂದು, ಅದನ್ನೇ ಮಧ್ಯಾಹ್ನಕ್ಕೂ ಬುತ್ತಿ ಕಟ್ಟಿಕೊಂಡು ಹೋಗುವ ಪರಿಪಾಠ ಆರಂಭವಾಯಿತು. ಆಗಾಗ ಈಶ್ವರ್ ಸರ್ ಸಹ ನನಗಾಗಿ ಊಟ ತರುತ್ತಿದ್ದರು. ಹೀಗಾಗಿ ಮಧ್ಯಾಹ್ನದ ವೇಳೆ ಕ್ಯಾಂಟೀನಿಗೆ ಹೋಗುತ್ತಿದ್ದವನು ಸ್ಟಾಫ್ ರೂಮಿನಲ್ಲಿಯೇ ಊಟಕ್ಕೆ ಕೂರುತ್ತಿದ್ದೆ. ಎಲ್ಲರೂ ಹಂಚಿ ತಿನ್ನಲು ಇದೇನು ಶಾಲಾ ದಿನವಲ್ಲ ಎಂಬುದು ತಿಳಿದಿತ್ತು. ಆದರೂ ಕೆಲವೇ ದಿನಗಳಲ್ಲಿ ಈಶ್ವರ್‌ ಸರ್ ನನ್ನೊಂದಿಗೆ ಹಂಚಿ ತಿನ್ನಲು ಆರಂಭಿಸಿದ್ದರು. ಮಿಕ್ಕವರು ಅಲ್ಲಲ್ಲಿಯೇ ಕುಳಿತು ಹರಟುತ್ತಾ ತಿನ್ನುತ್ತಿದ್ದರು. ಹೀಗಿರಲು ಒಂದು ದಿನ ಇದ್ದಕ್ಕಿದ್ದಂತೆ ಸ್ಟಾಫ್ ರೂಮಿನಲ್ಲಿಟ್ಟಿದ್ದ ನನ್ನ ಬುತ್ತಿ ಖಾಲಿಯಾಗಿತ್ತು. ಮೇಲ್ನೋಟಕ್ಕೆ ಇದು ಕಾಲೇಜು ವಿದ್ಯಾರ್ಥಿಗಳ ಕೆಲಸವೆಂದೇ ತಿಳಿಯಿತಾದರೂ ಮೊದಲ ದಿನ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಎರಡನೇ ದಿನವೂ ಇದು ಮುಂದುವರೆದಾಗ ಎಲ್ಲರೂ ನನಗೆ ಬುದ್ಧಿವಾದ ಹೇಳಿದ್ದರು. ನನ್ನದೊಬ್ಬನದೇ ಅವರ ಗುರಿಯಾಗಿರುವುದರಿಂದ ನಾನಿತ್ತ ಸಲಿಗೆಯೇ ಇದಕ್ಕೆ ಕಾರಣ, ಇದರಿಂದ ಮಿಕ್ಕ ಪ್ರಾಧ್ಯಾಪಕರ ಮೇಲೂ ಅಸಡ್ಡೆ ಬೆಳೆದು ವಿದ್ಯಾರ್ಥಿಗಳು ಹದ್ದು ಮೀರುತ್ತಾರೆ ಎಂದು ಎಚ್ಚರಿಸಿದರು. ನನಗೆ ಇದೆಲ್ಲ ಅಂತಹ ದೊಡ್ಡ ವಿಚಾರವೆನಿಸಲಿಲ್ಲ. ಎಲ್ಲಾ ತರಗತಿಗೂ ಹೋಗಿ ‘ತಿನ್ರೋ ಆದ್ರೆ ನಂಗೂ ಸ್ವಲ್ಪ ಉಳಿಸ್ರೋ’ ಎಂದಿದ್ದೆ. ವಿಚಿತ್ರವೆಂದರೆ ಮುಂದಿನ ದಿನ ನನ್ನದೂ ಸೇರಿದಂತೆ ಎಲ್ಲಾ ಪ್ರಾಧ್ಯಾಪಕರ ಬುತ್ತಿಯೂ ಖಾಲಿಯಾಗಿತ್ತು. ಈಗ ಎಲ್ಲರೂ ನನ್ನ ಮೇಲೆ ಗೂಬೆ ಕೂರಿಸಲು ಆರಂಭಿಸಿದರು. ಅದರಲ್ಲಿ ಪೂರ್ಣಿಮಾ ಮೇಡಂ ಅಂತೂ ಕೆಂಡಾಮಂಡಲವಾಗಿದ್ದರು. ‘ನನ್ನ ಕರಿಯರ್ ಅಲ್ಲಿ ಇಂತಹ ಅವಮಾನ ಹಿಂದೆಂದೂ ಆಗಿರಲಿಲ್ಲ. ನಾನ್ಯಾರು ಗೊತ್ತೇನ್ರಿ?’ ಎಂದೆಲ್ಲಾ ಮಾತನಾಡಿಬಿಟ್ಟಿದ್ದರು. ಅಂದು ನಾನು ತುಟಕ್ ಪಿಟಕ್ ಎನ್ನದೆ ಸುಮ್ಮನೇ ಕುಳಿತುಬಿಟ್ಟೆ. ಎಲ್ಲಾ ಪ್ರಾಧ್ಯಾಪಕರೂ ಬುತ್ತಿಯನ್ನು ತಮ್ಮ ತಮ್ಮ ಟೇಬಲ್ಲಿನಲ್ಲಿಯೇ ಇಟ್ಟುಕೊಂಡು ಬೀಗ ಜಡಿದುಕೊಂಡುಬಿಟ್ಟರು. ಆದರೆ ನಾನು ಎಂದಿನಂತೆ ಕಿಟಕಿಯ ಪಕ್ಕವೇ ಇಟ್ಟೆ. ಮಾರನೇ ದಿನ ‘ಹಾಕೋ ಹಾಗಿದ್ರೆ ನನ್ನ ಬುತ್ತಿಗೆ ಮಾತ್ರ ಕನ್ನಾ ಹಾಕ್ರೋ’ ಎಂದು ವಿದ್ಯಾರ್ಥಿಗಳ ಮೇಲೆ ರೇಗಿದ್ದೆ. ಅಂದು ಮಧ್ಯಾಹ್ನ ಊಟದ ಸಮಯದಲ್ಲಿ ಕುತೂಹಲದಿಂದಲೇ ನನ್ನ ಬುತ್ತಿಯನ್ನು ಹಿಡಿದು ಅಲ್ಲಾಡಿಸಿದೆ. ಎಲ್ಲರೂ ನನ್ನ ಬುತ್ತಿಯತ್ತಲೇ ಕಣ್ಣಿಟ್ಟಿದ್ದರು. ಮುಚ್ಚಳ ತೆರೆದು ನೋಡಿದೆ. ಆಶ್ಚರ್ಯ! ಚಿಕನ್ ಲೆಗ್ ಪೀಸುಗಳು ತುಂಬಿದ್ದವು. ನನ್ನ ಮುಖ ಅರಳಿತು. ‘ಈಶ್ವರ್ ಸಾರ್’ ಎಂದು ರಾಗ ಎಳೆದು ಚಿಕನ್ ಲೆಗ್ ಪೀಸ್ ತೋರಿಸಿದೆ. ಅವರೆಲ್ಲರ ಮುಖ ಬಾಡಿತು. ಅಲ್ಲೇನಾಯಿತು ಎಂದು ಯೋಚಿಸುತ್ತಿರುವಾಗಲೇ ‘ವಾಟ್ ಇಸ್ ದಿಸ್ ನಾನ್ಸೆನ್ಸ್’ ಎಂದು ಹೆಣ್ಣಿನ ಜೋರು ದನಿ ಕೇಳಿಬಂತು. ನಾನು ಅತ್ತಿತ್ತ ನೋಡುತ್ತಿರುವಾಗ ಮೂಲೆಯಲ್ಲಿ ಕೆಂಗಣ್ಣು ಬಿಟ್ಟು ನಿಂತಿದ್ದ ಪೂರ್ಣಿಮಾ ಮೇಡಂ ‘ನಿಮಗೇ ಹೇಳ್ತಿರೋದು ಮಿಸ್ಟರ್ ಉಮಾಶಂಕರ್. ಏನಿದೆಲ್ಲ?’ ಎಂದರು. ನನಗೊಂದೂ ಅರ್ಥವಾಗಲಿಲ್ಲ. ಅಲ್ಲಿ ನೆರೆದಿದ್ದ ಉಪನ್ಯಾಸಕರೆಲ್ಲರೂ ನಾನೇನೋ ಅಪರಾಧ ಮಾಡಿದವನಂತೆ ನನ್ನನ್ನೇ ನೋಡುತ್ತಿದ್ದರು. ನಾನು ಆಶ್ಚರ್ಯದಿಂದ ‘ವಾಟ್ ಹ್ಯಾಪೆನ್ಡ್ ಮೇಡಂ?’ ಎಂದೆ. ಅದಕ್ಕೆ ಪೂರ್ಣಿಮಾರವರು ‘ಇದನ್ನೆಲ್ಲ ನಿಮ್ಮನೆಲಿ ಇಟ್ಕೊಳಿ. ಕಾಲೇಜು ದೇವಸ್ಥಾನ ಇದ್ದಂಗೆ ಕಣ್ರಿ. ಇಲ್ಲಿ ನಾನ್‍ವೆಜ್ ತರೋ ಹಾಗಿಲ್ಲ, ತಿನ್ನೋ ಹಾಗಿಲ್ಲ ಎಂಬ ಕಾಮನ್ ಸೆನ್ಸ್ ಬೇಡ್ವೆನ್ರಿ?’ ಅಂದರು. ಇಡೀ ಸ್ಟಾಫ್ ರೂಮ್ ಮೌನವಾಗಿದ್ದರಿಂದ ಅವರ ಮಾತುಗಳು ಕಿವಿ ತಮಟೆಯನ್ನು ತೂರಿ ಎದೆಗೆ ನಾಟುವಂತಿದ್ದವು. ನಾನು ಸುಮ್ಮನಾಗಲಿಲ್ಲ ‘ಹಲೋ ಮೇಡಂ, ಕಾಲೇಜು ದೇವಸ್ಥಾನ ಅಂತ ನೀವಂದುಕೊಂಡ್ರೆ ಖಂಡಿತಾ ಖುಷಿನೆ. ನಾನೂ ಸಹ ಇದನ್ನ ಮಾರಮ್ಮಂದೋ, ಹುಲಿಗೆಮ್ಮಂದೋ ದೇವಸ್ಥಾನ ಅಂತಾನೆ ನಾನ್ ವೆಜ್ ತಿಂತಿರೋದು’ ಎಂದು ಗಟ್ಟಿಯಾಗಿ ಹೇಳಿದೆ. ಪೂರ್ಣಿಮಾರವರ ಕೋಪ ನೆತ್ತಿಗೇರಿದಂತಾಯಿತೇನೋ ‘ರೀ ಮಿಸ್ಟರ್ ಡೆಮಾಕ್ರಸಿಲಿ ಎಲ್ಲರ ಅಭಿಪ್ರಾಯಕ್ಕೂ ಬೆಲೆ ಕೊಡಬೇಕು. ಕೇವಲ ನಿಮ್ಮ ಹಾಗೇನೇ ಬದುಕಬೇಕು ಅಂತ ಬಯಸೋದಲ್ಲ. ಯು ಹ್ಯಾವ್ ಟು ಸ್ಯಾಕ್ರಿಫೈಸ್ ಸಮ್ ಥಿಂಗ್ ಫಾರ್ ಡೆಮಾಕ್ರಸಿ’ ಅಂದರು. ನಾನು ‘ಯೆಸ್ ಮೇಡಂ. ಯು ಹ್ಯಾವ್ ಯುವರ್ ಚಾಯ್ಸ್ ಅಂಡ್ ಐ ಹ್ಯಾವ್ ಮೈನ್. ನಾನು ನಿಮಗೆ ಲೆಗ್ ಪೀಸ್ ತಿನ್ನಲೇಬೇಕು ಅಂತ ಹಿಂಸೆ ಮಾಡೋದು ಅನ್‍ಡೆಮಾಕ್ರಟಿಕ್. ಆದರೆ ನನಗಿಷ್ಟ ಬಂದದ್ದನ್ನ ನಾನು ತಿಂದು ನಿಮಗಿಷ್ಟ ಬಂದದ್ದನ್ನ ನೀವು ತಿನ್ನೋ ವ್ಯವಸ್ಥೆನ ನಿರ್ಮಾಣ ಮಾಡೋದು ಡೆಮಾಕ್ರಟಿಕ್. ನಾನು ವಿಷ ತಿನ್ನೋವಾಗ ಮಾತ್ರ ನೀವು ನನ್ನನ್ನ ಅಪೋಸ್ ಮಾಡ್ಬೇಕು ಮೇಡಂ. ಅದೇ ಫ್ರೆಟರ್ನಿಟಿ, ಭ್ರಾತೃತ್ವ’ ಎಂದು ನನ್ನ ಚೇರಿನ ಮೇಲೆ ಕುಳಿತುಕೊಂಡೆ. ಪೂರ್ಣಿಮಾರವರಿಗೆ ಸಮಾಧಾನವಾಗಲಿಲ್ಲ ಎನಿಸುತ್ತೆ ‘ನೀವೇನೆ ಹೇಳಿ ನೀವು ಕಾಲೇಜಿನೊಳಗೆ ಮಾಂಸಾಹಾರ ತಂದಿದ್ದು ತಪ್ಪು. ಯು ಹ್ಯಾವ್ ಟು ಸೇ ಸಾರಿ ಫಾರ್ ದಟ್. ಅದರ್ ವೈಸ್ ಐ ವಿಲ್ ಕಂಪ್ಲೇಂಟ್ ಟು ದಿ ಪ್ರಿನ್ಸಿಪಾಲ್’ ಅಂದರು. ಪೂರ್ಣಿಮಾರವರು ನನ್ನ ಮೇಲೆ ಹಕ್ಕು ಚಲಾಯಿಸುತ್ತಿದ್ದರು. ಪ್ರಾಚೀನ ಹಕ್ಕು. ನಾನು ‘ನೋಡಿ ಮಿಸೆಸ್ ಪೂರ್ಣಿಮಾ’ ಎನ್ನುತ್ತಿದ್ದಂತೆ ಅವರು ಏರುದನಿಯಲ್ಲಿ ಕಿರುಚುತ್ತಾ ‘ಕಾಲ್ ಮಿ ಮಿಸೆಸ್ ಕಶ್ಯಪ್’ ಎಂದರು. ನಾನು ‘ಅಟೆಂಡೆನ್ಸ್‌ನಲ್ಲಿ ನಿಮ್ಮ ಹೆಸರು ಪೂರ್ಣಿಮಾ ಅಂತಲೇ ಇದೆ ಮೇಡಂ’ ಅಂದೆ. ಅವರು ‘ಅದೇ ಅಟೆಂಡೆನ್ಸಿನಲ್ಲಿಯೇ ನಿಮ್ಮ ಅಪಾಯಿಂಟ್ ಎಸ್ಸಿ ಕೆಟಗರಿಯಿಂದಾಗಿದೆ ಅಂತಿದೆ’ ಎಂದುಬಿಟ್ಟರು. ನಾನು ‘ಅದಕ್ಕೇ ಲೆಗ್ ಪೀಸ್ ತಿಂತಿರೋದು’ ಎಂದೆ. ಅವರು ‘ವಾಟ್ ಡು ಯೂ ಮೀನ್’ ಅಂದರು. ನಾನು ‘ಐ ಮೀನ್ ಎಗ್ಸಾಕ್ಟ್‌ಲಿ ವಾಟ್ ಯೂ ಹರ್ಡ್’ ಅಂದೆ. ಎಲ್ಲರೂ ಸುಮ್ಮನೆ ನಮ್ಮ ಮಾತು ಕೇಳಿಸಿಕೊಳ್ಳುತ್ತಲೇ ಇದ್ದರು. ಒಬ್ಬರೂ ಸಮಾಧಾನ ಮಾಡಲು ಬರಲಿಲ್ಲವಲ್ಲ ಎಂದುಕೊಳ್ಳುತ್ತಿರುವಾಗ, ಈಶ್ವರ್ ಸರ್ ನನ್ನ ಬಳಿ ಬಂದು ‘ಉಮಾಶಂಕರ್’ ಎನ್ನುತ್ತಿರುವಾಗಲೇ ಪೂರ್ಣಿಮಾ ನನ್ನತ್ತ ಬೆರಳು ಮಾಡುತ್ತಾ ‘ಸರಿಯಾಗಿ ಕೇಳಿಸ್ಕೊಳಿ, ನಿಮ್ಮ ಜಾತಿ ಗೊತ್ತಾದ್ರೆ ಸ್ಟೂಡೆಂಟ್ಸ್ ನಿಮ್ಮ ಊಟವನ್ನ ಮೂಸಿ ಸಹ ನೋಡಲ್ಲ’ ಅಂದುಬಿಟ್ಟರು. ನನಗೆ ಆಘಾತವಾಯಿತು. ಆ ಮಾತುಗಳನ್ನು ಸಹಿಸಲಾಗಲಿಲ್ಲ. ಒಳಗೆಲ್ಲ ವಿದ್ಯುತ್ ಸಂಚಾರವಾದಂತಾಗಿ ‘ನಿಮ್ಮಂಥ ಜಾತಿವಾದಿಗಳಿಂದಾನೆ ನಮ್ಮ ದೇಶ ಇನ್ನೂ ಉದ್ಧಾರ ಆಗದೇ ಇರೋದು’ ಅಂದುಬಿಟ್ಟೆ. ಪೂರ್ಣಿಮಾರವರ ಮುಖ ಚಿಕ್ಕದಾಗಿ ಹೋಯಿತು. ಕಣ್ಣೀರಾಕುತ್ತಾ ಹೊರ ನಡೆದು ಬಿಟ್ಟರು. ಅವರ ಹಿಂದೆಯೇ ನಮ್ಮ ಪ್ರಾಧ್ಯಾಪಕರ ತಂಡವೂ ಹೊರಟಿತು. ಸ್ವಲ್ಪ ಹೊತ್ತಿನಲ್ಲಿಯೇ ಈಶ್ವರ್ ಸರ್ ಬಂದು ‘ಮೇಡಂ ಪ್ರಿನ್ಸಿಪಾಲ್ ಚೇಂಬರಿಗೆ ಹೋದ್ರು ಉಮಾಶಂಕರ್’ ಅಂದರು. ಅಷ್ಟರಲ್ಲಿ ನನ್ನ ಬುತ್ತಿಯೊಳಗಿನ ಚಿಕನ್ ಖಾಲಿಯಾಗಿತ್ತು. ನಾನು ಅದಕ್ಕೆ ಕಿವಿಗೊಡಲಿಲ್ಲ. ಎದ್ದು ತರಗತಿ ಕಡೆ ಹೊರಟೆ. ಸಂಜೆಯಷ್ಟೊತ್ತಿಗೆ ಪ್ರಿನ್ಸಿಪಾಲರಿಂದ ಬುಲಾವ್ ಬಂತು. ನಾಳೆ ಸಭೆ ಮಾಡೋಣ. ನೀವಿಬ್ಬರೂ ಬಂದು ಅದೇನು ಹೇಳಿ ಅಂದರು. ನಾನು ‘ಆಯ್ತು’ ಎಂದು ತಲೆಯಲ್ಲಾಡಿಸಿ ಬಂದು ಅರಳೀಮರದ ಕೆಳಗೆ ಕುಳಿತುಬಿಟ್ಟಿದ್ದೆ. ಇಂದು ಎಲ್ಲಾ ಪ್ರಾಧ್ಯಾಪಕರು, ಕಾಲೇಜು ಸಿಬ್ಬಂದಿ ಬಾಯಲ್ಲಿ ನನ್ನದೇ ಹೆಸರು ತುಂಬಿ ತುಳುಕಾಡುತ್ತಿತ್ತು. ಮಾತನಾಡಿಸುವವರು ‘ಏನೋ ಮೀಟಿಂಗಂತೆ’ ಎನ್ನುತ್ತಿದ್ದರು. ನಾನವರಿಗೆ ಏನನ್ನೂ ತಿಳಿಸದೆ ‘ಮಾಮೂಲಿ ಬಿಡಿ’ ಎಂದು ದಿನಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದೆ. ಒಂದೊಂದು ಅಕ್ಷರವೂ ನನ್ನನ್ನೇ ಅಣಕಿಸುತ್ತಾ ನಗುತ್ತಿರುವಂತೆನಿಸಿ ಪಕ್ಕದಲ್ಲಿಯೇ ಮಡಿಚಿಟ್ಟೆ. ಸ್ವಲ್ಪ ಸಮಯದಲ್ಲಿಯೇ ಈಶ್ವರ್ ಸರ್ ಬಂದು ‘ಬೀಸೋ ದೊಣ್ಣೆ ತಪ್ಪಿದ್ರೆ ನೂರು ವರ್ಷ ಆಯಸ್ಸಂತೆ. ಇವತ್ತು ಪ್ರಿನ್ಸಿಪಾಲ್ ರಜಾ. ಮೀಟಿಂಗ್ ನಾಳೆಯಂತೆ. ಇವತ್ತಾದ್ರು ಮನಸ್ಸು ಮಾಡಿ ಆಯಮ್ಮಂಗೆ ಸ್ಸಾರಿ ಹೇಳ್ಬಿಡಿ ಉಮಾಶಂಕರ್’ ಅಂದರು. ನಾನು ‘ನೀವೆ ಹೇಳಿ ಸಾರ್ ನಾನ್ಯಾಕೆ ಸ್ಸಾರಿ ಕೇಳಬೇಕು ಅಂತ’ ಅಂದೆ. ಅವರಿಗೂ ಬೇಸರವಾಗಿ ‘ಹೇಳಬೇಕಾದ್ದು ಹೇಳಿದ್ದೀನಿ ಮುಂದಿನದು ನಿಮಗೆ ಬಿಟ್ಟಿದ್ದು’ ಎಂದು ಪಕ್ಕದಲ್ಲಿಯೇ ಕುಳಿತುಕೊಂಡರು. ಆ ದಿನ ನಾನೆಷ್ಟೆ ಪ್ರಯತ್ನಿಸಿದರೂ ಲವಲವಿಕೆಯಿಂದ ಇರಲಾಗಲಿಲ್ಲ. ಪಾಠವೂ ಸರಿಯಾಗಿ ಆಗಲಿಲ್ಲ ಒಳಗೇನೋ ಅಸಮಾಧಾನ. ನನ್ನ ಮೇಲೋ ಈ ವ್ಯವಸ್ಥೆ ಮೇಲೋ ಒಂದೂ ತಿಳಿಯದೆ ನನ್ನನ್ನೇ ನಾನು ಸಂತೈಸಿಕೊಳ್ಳುತ್ತಿದ್ದೆ. ಹೀಗೆ ತೊಳಲಾಟದಲ್ಲಿಯೇ ಪಾಠ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ವಿದ್ಯಾರ್ಥಿಗಳನ್ನುದ್ದೇಶಿಸಿ ‘ಏ ನೋಡ್ರೋ. ನೀವ್ಯಾರು ನನ್ನ ಊಟ ಮಾಡ್ತಿದಿರೋ ಖಂಡಿತಾ ನನಗೆ ಗೊತ್ತಿಲ್ಲ. ಅದರಿಂದ ನನಗೆ ಯಾವ ಸಮಸ್ಯೆನೂ ಇಲ್ಲ. ಆದರೆ ನಾನೀಗ ಹೇಳೋದನ್ನ ಸರಿಯಾಗಿ ಕೇಳಿಸಿಕೊಳ್ಳಿ’ ತುಸು ಕ್ಷಣ ಮಾತು ನಿಲ್ಲಿಸಿದೆ. ತರಗತಿ ನಿಶ್ಯಬ್ಧವಾಗಿತ್ತು. ‘ನಾನೊಬ್ಬ ದಲಿತ..’ ಮುಂದೆ ಏನೂ ಮಾತನಾಡಲಾಗಲಿಲ್ಲ. ಗಂಟಲು ಕಟ್ಟಿದಂತಾಯ್ತು. ‘ದಟ್ಸ್ ಇಟ್’ ಎಂದು ತರಗತಿ ಕೋಣೆಯಿಂದ ಹೊರಬಂದೆ. ಸಂಜೆ ಮತ್ತೆ ಮನೆ ಕಡೆಗೆ ಕಾಲ್ನಡಿಗೆಯಲ್ಲಿಯೇ ನಡೆಯಬೇಕೆಂದೆನಿಸಿತು. ನಡೆಯುತ್ತಾ ಹೋದೆ. ಅದೇ ದಾರಿ. ಅದೇ ಆಲೋಚನೆ. ಇದ್ದಕ್ಕಿದ್ದಂತೆ ಬಾಲ್ಯದ ಘಟನೆಯೊಂದು ನೆನಪಾಯಿತು. ಈ ಘಟನೆ ನಡೆದಾಗ ನಾನು ಏಳನೇ ತರಗತಿ ಓದುತ್ತಿದ್ದೆ. ಓದು ಬರಹದಲ್ಲಿ ಬುದ್ಧಿವಂತನಾಗಿದ್ದೆ. ತರಗತಿಗೆ ನಾನೇ ಸೆಕೆಂಡ್. ಮೊದಲನೆಯವನು ದೇವರಾಜ. ಅವನ ತಂದೆಯ ಜಮೀನಿನಲ್ಲಿಯೇ ನನ್ನವ್ವ ದಿನಗೂಲಿಗೆ ಆಗಾಗ ಹೋಗುತ್ತಿದ್ದಳು. ಅದೆಷ್ಟೋ ಬಾರಿ ನನ್ನವ್ವ ತಂದುಕೊಟ್ಟ ಅಂಗಿ ಚಡ್ಡಿಯನ್ನು ಕಂಡು ದೇವರಾಜ ‘ಅರೇ ಇದು ನನ್ನ ಬಟ್ಟೆ ಕಣೋ’ ಎಂದಾಗಲೆಲ್ಲ ಮನಸ್ಸಿಗೆ ಕಸಿವಿಸಿಯಾಗುತ್ತಿತ್ತು. ಚಿಕ್ಕವನಿದ್ದಾಗ ದೀಪಾವಳಿಯಲ್ಲಿ ದೇವರಾಜ ಬೆಂಕಿ ಹಚ್ಚಿ ಟುಸ್ಸೆಂದ ಪಟಾಕಿಗಳಿಂದಲೇ ಹಬ್ಬವನ್ನಾಚರಿಸುತ್ತಿದ್ದ ನನಗೆ ಬರುಬರುತ್ತಾ ಅದು ಬೇಡವೆನಿಸುತ್ತಿತ್ತು. ಪ್ರತೀ ಹಬ್ಬದ ಸಂಜೆ ದೇವರಾಜನ ಮನೆಯ ಹಿತ್ತಲಿಗೆ ಅವ್ವನ ಸಂಗಡ ಹೋಗಿ ಚಕ್ಲಿ, ವಡೆ, ಪಾಯಸ, ಒಂದಿಷ್ಟು ಅನ್ನವನ್ನು ಇಕ್ಕಿಸಿಕೊಂಡು ಬರುತ್ತಲೇ ದಾರಿಯುದ್ದಕ್ಕೂ ತಿಂಡಿಯನ್ನು ಮೆಲುಕು ಹಾಕುತ್ತಾ ಬರುತ್ತಿದ್ದವನಿಗೆ ಅದೇಕೋ ಅಸಹ್ಯವೆನಿಸಲು ಆರಂಭವಾಗಿತ್ತು. ಅವ್ವನ ಮೇಲೆ ಪದೇ ಪದೇ ಕೋಪಗೊಂಡು ‘ನನಗೆ ಅವ್ರ ಎಂಜಲು ಬ್ಯಾಡ ಬೇಕಾರೆ ಗಂಜಿ ಹಾಕು’ ಅಂದಿದ್ದೆ. ನನ್ನೊಳಗೊಬ್ಬ ವಿಚಿತ್ರ ಮನುಷ್ಯ ಜೀವ ತಾಳುತ್ತಿದ್ದನ್ನು ಗ್ರಹಿಸಿದ ಅವ್ವ ‘ನಿಂಗೇ ಬ್ಯಾಡವಾದ್ದು ನಂಗ್ಯಾಕೆ ಮೊಗ’ ಎಂದಿದ್ದಳು. ಹಿಂದೆ ಅನಿವಾರ್ಯವೆಂದುಕೊಂಡದ್ದು ಇಂದು ಬೇಡವೆನಿಸುತ್ತಿತ್ತು. ನನ್ನಿಂದಾಗದು ಎಂದುಕೊಂಡದ್ದರೆಡೆಗೆ ಹೆಜ್ಜೆ ಹಾಕಬೇಕೆನಿಸುತ್ತಿತ್ತು. ಇಂತಹ ಸಂಕ್ರಮಣ ಸಮಯ ದಲ್ಲಿದ್ದಾಗ ಏಳನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಮೊದಲನೆಯವನಾದೆ. ದೇವರಾಜನಿಗಿಂತ ನಾಲ್ಕು ಅಂಕ ಹೆಚ್ಚು ಪಡೆದು ಹಿಗ್ಗಿದೆ. ಆ ಸಂತೋಷವನ್ನು ವಿವರಿಸಲು ಪದಗಳೇ ಇಲ್ಲ. ಈ ಸಮಯದಲ್ಲಿ ಏಳನೇ ತರಗತಿಗೆ ಮೊದಲು ಬಂದ ಕಾರಣ ವೇದಿಕೆಯ ಕಾರ್ಯಕ್ರಮದಲ್ಲಿ ದೇವರಾಜನ ಅಪ್ಪನಿಂದಲೇ ಬಹುಮಾನ ಪಡೆಯುವಂತಾಯಿತು. ಆ ಹೊತ್ತು ಆ ದೊಡ್ಡ ಮನುಷ್ಯ ನನಗೆ ಬಹುಮಾನ ನೀಡುತ್ತಾ ‘ನನ್ಮನೆ ತಂಗ್ಳ ತಿಂಕಂಡು ನನ್ನ ಮಗನ್ನೇ ಹಿಂದಾಕ್ಬುಟ್ಟೇನ್ಲಾ ಬಡ್ಡೆತ್ತದೆ’ ಅಂದಿದ್ದ. ಆ ಮಾತುಗಳು ಇಂದಿಗೂ ಹಿಂಬಾಲಿಸುತ್ತಿವೆ. ಅವ್ವ ಬಾಗಿಲಲ್ಲೇ ಕುಳಿತು ನನಗಾಗಿ ಕಾಯುತ್ತಿದ್ದಳು. ಅವಳನ್ನು ನೋಡಿ ಮತ್ತೆ ಎದೆಯೊಳಗೆ ಹಕ್ಕಿ ಹಾರಾಡಿದವು. ಬ್ಯಾಗನ್ನು ಒಳಗಿಟ್ಟು ಬಂದು ಅವ್ವನ ಪಕ್ಕದಲ್ಲಿಯೇ ಕುಳಿತುಕೊಂಡೆ ‘ಇದ್ಯಾಕ್ಮೊಗ ಸಪ್ಗಿದ್ದಿ?’ ಅಂದು ತಲೆ ಸವರಿದಳು. ಈ ಅವಕಾಶಕ್ಕಾಗಿಯೇ ಕಾದು ಕುಳಿತಿದ್ದ ನನ್ನೊಳಗಿನ ದುಃಖ ಬೇಲಿ ಮುರಿದು ಹೊರ ಧುಮುಕಿತು. ಅವ್ವನ ಮಡಿಲಲ್ಲಿ ಮಲಗಿ ಎಲ್ಲವನ್ನೂ ಒದರಿಬಿಟ್ಟೆ. ಅವ್ವ ನಡುವೆ ಬಾಯಿ ಹಾಕದೆ ತಲೆ ಸವರುತ್ತಲೇ ಹೂಂಗುಡುತ್ತಿದ್ದಳು. ಇದ್ದಕ್ಕಿದ್ದಂತೆ ನನ್ನ ಕೆನ್ನೆಯ ಮೇಲೆ ಹನಿಯೊಂದು ಬೀಳುತ್ತಿದ್ದಂತೆ ಅವಕ್ಕಾಗಿ ಮೇಲೆದ್ದು ಅವ್ವನನ್ನು ನೋಡಿದೆ. ಅವಳ ಕಣ್ಣಾಲಿಗಳು ಕರಗಿ ನೀರಾಗಿದ್ದವು. ನನಗೂ ಜೋರಾಗಿ ಅಳಬೇಕೆಂದೆನಿಸಿತು. ಸಮಾಧಾನ ಮಾಡಿಕೊಂಡೆ. ಅವ್ವನ ಕಣ್ಣೊರೆಸುತ್ತಾ ‘ಇಷ್ಟಕ್ಕೆಲ್ಲ ಯಾಕಳ್ತಿಯವ್ವ? ನಿನ್ನ ಕಷ್ಟದ ಮುಂದೆ ಇದೆಂತಾದ್ದೇಳು’ ಎಂದೆ. ಅವ್ವ ಮೌನ ಮುರಿದು ‘ನಾನು ದಿಢೀರ್‌ನೆ ಇಲ್ಲಿಗ್ಯಾಕೆ ಬಂದೆ ಗೊತ್ತಾ ಮೊಗ?’ ನಾನೇನೂ ಮಾತನಾಡಲಿಲ್ಲ. ಅವ್ವನನ್ನೇ ನೋಡುತ್ತಾ ಕುಂತೆ. ‘ನನ್ನನ್ನ ಶಾಲೆ ಅಡುಗೆ ಕೆಲ್ಸಕ್ಕೆ ಸೇರಿಸ್ಕಂಡಿದ್ದಕ್ಕೆ ಮ್ಯಾಗಳಕೇರಿ ಜನ ಅವ್ರ ಮಕ್ಕಳ ಟೀಸಿ ಕೇಳಕ್ಕೆ ಬಂದಿದ್ರಂತೆ. ಅದ್ಕೆ ಮೇಷ್ಟ್ರು ಪಾಪ ನನ್ನ ಕರ್ದು ಹಿಂಗಿಂಗಾತು ಅಂತೇಳಿ ಕೆಲ್ಸದಿಂದ ತಗುದ್ರು. ಊರಲ್ಲಿರಕ್ಕಾಗದೆ ಒಂದೆರಡು ದಿನ ನಿನ್ನ ಮುಖ ನೋಡ್ಕಂಡು ಇರನಾಂತ ಓಡ್ಬಂದೆ’ ಎಂದವಳೇ ಸೆರಗಲ್ಲಿ ಕಣ್ಣೀರು ಒರೆಸಿಕೊಂಡು ಅಡುಗೆ ಕೋಣೆಗೆ ಹೊರಟಳು. ಅವ್ವನ ಹಿಂದೆಯೇ ನಾನೂ ಹೊರಟೆ. ‘ಅದ್ಕೆ ನಾನು ಕೆಲಸಕ್ಕೋಗಬ್ಯಾಡ ಅಂದಿದ್ದು’ ಸಿಟ್ಟು ಮಾಡಿಕೊಂಡೆ. ಅವ್ವ ಮೊಗದಲ್ಲಿ ನಗು ತಂದುಕೊಂಡು ‘ಆಗಾಗ ನಾವುನೂ ಒಂದೆಜ್ಜೆ ಮುಂದಿಡಬೇಕು ಮೊಗ’ ಅಂದಳು. ನನಗೇನು ಅರ್ಥವಾಗಲಿಲ್ಲ. ‘ನನ್ನ ಕತೆ ಬುಡು. ನಿಂದೇಳು. ಈಗೇನು ನಾಳೆ ಕ್ಷಮೆ ಕೇಳ್ತಿಯೇನು?’ ಎಂದಳು. ಏನು ತೋಚದವನಂತೆ ಕುಳಿತುಬಿಟ್ಟೆ. ಅವ್ವ ಮಾತು ಮುಂದುವರೆಸಿದಳು ‘ಈಗ ನಮ್ಕೇರಿನೇ ತಗಾ. ಸಾಕಿದ ಕೋಳಿ ಸಂಜೀಕೆ ಕಾಣ್ಲಿಲ್ಲ ಅಂದ್ರೆ ಏನ್ಮಾಡ್ತರೆ? ಅಕ್ಕಪಕ್ಕದೋರ್ಗೆ ಶಾಪ ಹಾಕ್ತಾರೆ. ಹಂಗೆ ಶಾಪ ಹಾಕದು ಕೋಳಿ ಮ್ಯಾಲಿನ ಪ್ರೀತಿಯಿಂದಲ್ಲ ಮೊಗ. ಅವರೆದೆಲಿ ಮನುಸರ ಬಗ್ಗೆ ಬೆಳೆಸ್ಕಂಡಿರೋ ದ್ವೇಷದಿಂದ. ಕೋಳಿ ಮ್ಯಾಲಿನ ಪ್ರೀತಿಗೂ ತಿನ್ನೋ ಅನ್ನಕ್ಕೂ ಸಂಬಂಧ್ವೆ ಇಲ್ಲ ಕಣಪ್ಪ’ ಅವ್ವ ಮೊದಲ ಬಾರಿ ವಿಚಿತ್ರವಾಗಿ ಮಾತಾಡುತ್ತಿದ್ದಳು. ನಾನು ಅವಳನ್ನೇ ನೋಡುತ್ತಾ ಕೇಳಿಸಿಕೊಳ್ಳುತ್ತಿದ್ದೆ. ‘ದ್ಯಾವ್ರಿಗೆ ಬುಟ್ಟ ಬ್ಯಾಟೆನ ಏನ್ಮಾಡ್ತಿವಿ? ಕುಯ್ಕಂಡು ತಿಂತೀವಿ. ಇದೇ ಸತ್ಯ. ಇನ್ನೆಲ್ಲ ಸುಳ್ಳು’ ಅವ್ವ ತರಕಾರಿ ಹಿಡಿದು ಹಜಾರಕ್ಕೆ ನಡೆದಳು. ಹಿಂಬಾಲಿಸಿದೆ. ‘ಈ ಕಾಲವೇ ಹಿಂಗೆ ಮೊಗ. ಈ ಟಿ.ವಿಲಿ ಅಡಟೇಜ್ ಬತ್ತವೆ ನೋಡು. ಕಪ್ಗಿರೋರ್ಗೆ ಒಂದು ಕ್ರೀಮು. ಬೆಳ್ಗಿರೋರ್ಗೆ ಒಂದು ಕ್ರೀಮು. ಎಣ್ಣೆ ಮುಖದೋರ್ಗೆ ಒಂದು ಸೋಪು. ಅಲ್ದೋರ್ಗೆ ಇನ್ನೊಂದು ಸೋಪು. ಹಿಂಗಿರೋ ಮನೇಲಿ ಇಷ್ಟವಿದ್ದ ಆಹಾರ ತಿನ್ನಬೇಕಾರೆ ಮಾತ್ರ ಭೇದ. ನೀನು ಅದ ತಿನ್ಬ್ಯಾಡ ಇದ ತಿನ್ಬ್ಯಾಡಂತ’ ಅವ್ವ ನಕ್ಕಳು. ನನಗೂ ನಗು ಬಂತು. ‘ಮನುಸ ಮನುಸರ ನಡ್ವೆ ತಂದಿಡಕ್ಕೆ ಇನ್ನೊಬ್ಬ ಮನುಸ ಸಿಗ್ದೆ ಇದ್ದಾಗ ದ್ಯಾವ್ರು, ದಿಂಡ್ರು, ಕೋಳಿ, ದನ ತಂದುಬುಡ್ತವೆ ಈ ದರಿದ್ರದವು’ ಅವ್ವನ ನಗು ಮಾಯವಾಯಿತು. ಮುಂದೆ ಏನೂ ಮಾತಾಡದೇ ಅಡುಗೆ ಮಾಡಲು ಅಣಿಯಾದಳು. ಆ ದಿನ ಸಮಯ ಹೋಗಿದ್ದೇ ತಿಳಿಯಲಿಲ್ಲ. ಬೆಳಿಗ್ಗೆ ಮತ್ತದೇ ‘ಕ್ಷಮೆ’ ಎಂಬ ಪದ ನನ್ನನ್ನು ಹಿಂಡುತ್ತಿತ್ತು. ಕಾಲೇಜಿಗೆ ತೆರಳುವ ಸಮಯಕ್ಕೆ ಅವ್ವಾ ಎರಡು ಬುತ್ತಿ ಕಟ್ಟಿದ್ದಳು. ‘ಎರಡ್ಯಾಕವ್ವಾ’ ಪ್ರಶ್ನಿಸಿದೆ. ಅವ್ವಾ ‘ಒಂದು ನಿಂಗೆ ಇನ್ನೊಂದು ಪೂರ್ಣಿಮಾ ಮೇಡಂಗೆ. ಹೋಳಿಗೆ ಮಾಡಿವ್ನಿ. ಅವ್ವಾ ಮಾಡಿದ್ದು ಅಂತ ಹೇಳ್ಬುಟ್ಟು ಕೊಡು’ ಅಂದು ಒಂಥರಾ ನೋಡಿದಳು. ನನಗೊಂದೂ ಅರ್ಥವಾಗಲಿಲ್ಲ. ಬೇಸರದಿಂದ ‘ಇದೆಲ್ಲ ಯಾಕವ್ವಾ?’ ಎಂದೆ. ಅದಕ್ಕವ್ವಾ ‘ನಾವು ಒಂದೆಜ್ಜೆ ಮುಂದುಕ್ಕಿಟ್ಟು ನೋಡನ ಅಲ್ವಾ’ ಎಂದಳು. ನಾನು ಅದರ ಬಗ್ಗೆ ಹೆಚ್ಚು ಮಾತಾಡಲಿಲ್ಲ. ಮನೆಯಿಂದ ಹೊರಗೆ ಬಂದೆ. ಅವ್ವಾ ‘ಏನ್ಮಾಡನ ಅನ್ಕಂಡಿದ್ದಿ’ ಎಂದು ಪ್ರಶ್ನಿಸಿದಳು. ‘ಕ್ಷಮೆ ಕೇಳನ ಅನ್ಕಂಡಿದ್ದೀನಿ’ ಎಂದೆ. ಸ್ವಲ್ಪ ಹೊತ್ತು ಮೌನವಾಗಿದ್ದ ಅವ್ವ ನಂತರ ‘ಬ್ಯಾಡ. ಕ್ಷಮೆ ಕೇಳ್ಬ್ಯಾಡ. ಅವ್ರೊಂದೆಜ್ಜೆ ಮುಂದುಕ್ಕೆ ಬರ್ಲಿ ಅಲ್ವಾ’ ಅಂದಳು. ನನಗೇನೋ ಬಲ ಬಂದಂತಾಯಿತು. ಖುಷಿಯಿಂದ ‘ಆಯ್ತು ಕಣವ್ವಾ’ ಎಂದು ಮನೆಯ ಹೊರಗೆ ಬಂದವನೇ ಅವ್ವನನ್ನುದ್ದೇಶಿಸಿ ‘ನೀನೇನ್ಮಾಡನ ಅನ್ಕಂಡಿದ್ದಿಯವ್ವ’ ಅಂದೆ. ಅವ್ವಾ ‘ಮೂರೆಜ್ಜೆ ಮುಂದಿಡಕ್ಕೆ ಒಂದೆಜ್ಜೆ ಹಿಂದುಕ್ಕೆ ಬಂದಿವ್ನಿ’ ಅಂದಳು. ಇಂದು ಸಹ ಕಾಲೇಜು ನನ್ನನ್ನೇ ಕೇಂದ್ರವಾಗಿಟ್ಟುಕೊಂಡಿತ್ತು. ಸಹಜವಾಗಿಯೇ ಸ್ಟಾಫ್ ರೂಮು ಹೊಕ್ಕಿದೆ. ಎಲ್ಲರ ಕಣ್ಣುಗಳೂ ನನ್ನನ್ನೇ ನೋಡುತ್ತಿದ್ದವು. ಅದೇ ಮೂಲೆಯಲ್ಲಿ ಪೂರ್ಣಿಮಾ ಮೇಡಂ ಕುಳಿತಿದ್ದರು. ನಾನು ನನ್ನ ಬುತ್ತಿಯನ್ನು ಕಿಟಕಿಯ ಬಳಿ ಇಟ್ಟು, ಪೂರ್ಣಿಮಾರವರ ಬುತ್ತಿಯನ್ನು ಬ್ಯಾಗಿನಲ್ಲಿಯೇ ಇಟ್ಟುಕೊಂಡೆ. ಅಷ್ಟರಲ್ಲಿ ನನ್ನ ಬಳಿ ಬಂದ ಈಶ್ವರ್ ಸರ್ ‘ಕ್ಷಮೆ ಕೇಳ್ಬೇಡಿ ಉಮಾಶಂಕರ್’ ಎಂದಷ್ಟೇ ಹೇಳಿ ಹೊರಟು ಹೋದರು. ಈ ಅನಿರೀಕ್ಷಿತ ಬೆಂಬಲವನ್ನು ನಿರೀಕ್ಷಿಸಿರಲಿಲ್ಲ. ಸಂಜೆ ನಾಲ್ಕು ಗಂಟೆಗೆ ಸಭೆ ಎಂಬ ಮೆಮೋ ಬಂದಿತು. ನಾನು ಎಲ್ಲದಕ್ಕೂ ತಯಾರಾಗಿಯೇ ಬಂದಿದ್ದೆ. ಅವ್ವ ನನ್ನೊಳಗೆ ಗೂಡು ಕಟ್ಟಿ ಕಳಿಸಿದ್ದಳು. ಅಂದು ಮಧ್ಯಾಹ್ನದವರೆಗೆ ಏನೊಂದೂ ಆಗದವನಂತೆ ಲವಲವಿಕೆಯಿಂದ ಪಾಠ ಮಾಡಿದೆ. ವಿದ್ಯಾರ್ಥಿಗಳ ಮುಖದಲ್ಲಿ ಒಂದು ಗೆರೆಯೂ ಬದಲಾಗದ್ದನ್ನು ಗಮನಿಸಿದ ನನಗೆ ಸಮಾಧಾನವಾದಂತಾಯಿತು. ಮಧ್ಯಾಹ್ನ ಊಟದ ಸಮಯಕ್ಕೆ ಹತ್ತು ನಿಮಿಷ ಮುಂಚೆಯೇ ಸ್ಟಾಫ್ ರೂಮ್ ಸೇರಿದ್ದೆ. ಸ್ವಲ್ಪ ತಡವಾಗಿ ಪೂರ್ಣಿಮಾ ಮೇಡಂ ಬಂದರು. ಎಲ್ಲರೂ ಊಟ ಮಾಡಲು ಆರಂಭಿಸುತ್ತಿದ್ದಾಗ ನಾನು ಪೂರ್ಣಿಮಾ ಮೇಡಂ ಬಳಿ ಹೋಗಿ ‘ನಿಮಗಾಗಿ ನಮ್ಮವ್ವಾ ಮಾಡಿ ಕಳಿಸಿರುವ ಹೋಳಿಗೆ’ ಎಂದು ಹೇಳಿ ಬುತ್ತಿಯನ್ನು ಅವರ ಮುಂದೆ ಮೇಜಿನ ಮೇಲಿಟ್ಟೆ. ಎಲ್ಲರೂ ನನ್ನನ್ನೇ ನೋಡುತ್ತಿದ್ದರು. ಕಿಟಿಕಿಯ ಬಳಿ ಬಂದೆ. ನನ್ನ ಬುತ್ತಿಯನ್ನೊಮ್ಮೆ ನೋಡಿದೆ. ಅದನ್ನು ಮುಟ್ಟಲೂ ಭಯವಾಗುತ್ತಿತ್ತು. ಕೈಗೆತ್ತಿಕೊಂಡೆ ಭಾರವಾಗಿತ್ತು. ನಿಧಾನಕ್ಕೆ ಮುಚ್ಚಳ ತೆರೆಯಲು ಮುಂದಾದೆ ಕೈಗಳು ನಡುಗುತ್ತಿದ್ದವು. ಕಾಲುಗಳೂ ನಡುಗುತ್ತಿದ್ದವು. ಎದೆ ಬಡಿತ ಹೆಚ್ಚಾಗುತ್ತಿತ್ತು.

courtsey:prajavani.net

https://www.prajavani.net/artculture/short-story/ondu-hejje-686241.html

Leave a Reply