ಪಟ.. ಪಟ.. ಹಾರೋ ಗಾಳಿಪಟ

ಮಾಗಿಯ ಕಾಲಕ್ಕೂ ಮತ್ತು ಗಾಳಿಪಟಕ್ಕೂ ಬಿಡಿಸಲಾಗದ ನಂಟು. ಗಾಳಿಪಟ ಉತ್ಸವಗಳು ನಡೆಯುವುದು ಈ ಕಾಲದಲ್ಲಿಯೇ. ಈ ಅವಧಿಯಲ್ಲಿ ಬೀಸುವ ಗಾಳಿಗೆ ಬಾನಿಗೇರುವ ಗಾಳಿಪಟಗಳು ಚಿಣ್ಣರಿಂದ ಹಿಡಿದು ದೊಡ್ಡವರಲ್ಲೂ ಬಣ್ಣದ ಕನಸು ಅರಳಿಸುತ್ತವೆ. ಸೂತ್ರ ಕಟ್ಟಿ ಆಗಸಕ್ಕೆ ಗಾಳಿಪಟ ಹಾರಿಸುವುದನ್ನು ನೋಡುವುದೇ ಕಣ್ಣಿಗೆ ಆನಂದ. ಕ್ರಿಸ್ತಪೂರ್ವದಲ್ಲಿಯೇ ಗಾಳಿಪಟ ಬಳಕೆ ಬಗ್ಗೆ ದಾಖಲೆಗಳಿವೆ. ಚೀನಾ, ಜಪಾನ್‌ನಲ್ಲಿ ಸೈನಿಕ ಕಾರ್ಯಾಚರಣೆಗೆ ಗಾಳಿಪಟ ಬಳಸಲಾಗುತ್ತಿತ್ತಂತೆ. ಪ್ರಸ್ತುತ ಗಾಳಿಪಟ ಉತ್ಸವ ಅಂತರರಾಷ್ಟ್ರೀಯಮಟ್ಟದ ಕ್ರೀಡೆಯಾಗಿದೆ. ವನ್ಯಜೀವಿಗಳು ಗಾಳಿಪಟದ ರೂಪದಲ್ಲಿ ಬಾನಲ್ಲಿ ತೇಲುತ್ತಿವೆ. ಯಕ್ಷಗಾನ, ಕಥಕ್ಕಳಿ, ಭರತನಾಟ್ಯ, ಆನೆ, ದುರ್ಗೆ, ಮಹಾರಾಜ, ಗರುಡದಂಥ ಭಾರತೀಯ ಸಂಸ್ಕೃತಿ ಬಿಂಬಿಸುವ ಗಾಳಿಪಟಗಳು ‍ಪ್ರಸಿದ್ಧಿ ಪಡೆದಿವೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ತುಳುನಾಡಿನ ನೆಲ-ಜಲ-ಸಂಸ್ಕೃತಿಯನ್ನು ಬಿಂಬಿಸಿತು. ಆರನೇ ಬಾರಿಗೆ ನಡೆದ ಈ ಉತ್ಸವವನ್ನು ಮೊದಲ ಬಾರಿಗೆ ಜಿಲ್ಲಾಡಳಿತ ಪ್ರಾಯೋಜಿಸಿದ್ದು ವಿಶೇಷ. ಮೂರು ದಿ‌ನಗಳ ಕಾಲ ವಿವಿಧ ಬಗೆಯ ಬಣ್ಣ ಮತ್ತು ವಿನ್ಯಾಸದೊಂದಿಗೆ ಸಂಜೆ ಬಾನಿನಲ್ಲಿ ಕಂಗೊಳಿಸಿದ ಗಾಳಿಪಟಗಳಲ್ಲಿ ಥಾಯ್ಲೆಂಡ್‌, ನೆದರ್ಲೆಂಡ್‌, ಸ್ವೀಡನ್, ಇಂಡೋನೇಷ್ಯಾ, ಅಮೆರಿಕ, ಮಲೇಷಿಯಾ ಹಾಗೂ ಚೀನಾದ ತಂಡಗಳೂ ಭಾಗವಹಿಸಿದ್ದವು. ಕರಾವಳಿ ನೆಲದ ತಂಡವಾದ ‘ಟೀಂ ಮಂಗಳೂರು’ ತನ್ನ ಚಿತ್ತಾಕರ್ಷಕ ಗಾಳಿಪಟಗಳನ್ನು ಆಕಾಶದೆಡೆಗೆ ಚಿಮ್ಮಿಸಿ ನೋಡುಗರ ಮನ ಸೆಳೆಯಿತು. ಈ ತಂಡ ವಿಶೇಷ ಮುತುವರ್ಜಿವಹಿಸಿ ವಿದೇಶಿಯರ ಆತಿಥ್ಯವನ್ನೂ ನೋಡಿಕೊಳ್ಳುತ್ತದೆ. ಈ ಬಾರಿಯ ಉತ್ಸವದಲ್ಲಿ ಪ್ರಾಣಿ, ಪಕ್ಷಿ, ಸರೀಸೃಪಗಳು, ಜಾನಪದ ಕಲಾಕೃತಿಗಳ ಗಾಳಿಪಟಗಳು ಆಕಾಶದಲ್ಲಿ ಚಿತ್ತಾರ ಬಿಡಿಸಿದವು. ಇಂಡೋನೇಷ್ಯಾದ ಹನುಮಂತ, ಗುಜರಾತ್‌ನ ಮೊಸಳೆ, ಚೀನಾದ ಕುದುರೆ ವಿಶೇಷ ಆಕರ್ಷಣೆಯಾಗಿತ್ತು. ದೂರದ ಊರಿನಿಂದ ಬಂದಿದ್ದ ಸಹಸ್ರಾರು ಜನರು ಇದನ್ನು ಕಣ್ತುಂಬಿಕೊಂಡರು. ಸಣ್ಣ ಗಾಳಿಪಟಗಳನ್ನೂ ಹಾರಿಸಿ ಸಂಭ್ರಮಪಟ್ಟರು. ಎಚ್ಚರಿಕೆ ಅಗತ್ಯ ಒಂದು ಅಡಿಯ ಎರಡು ಕಡ್ಡಿಗಳು, ಒಂದಡಿಯ ಕಾಗದ ಮತ್ತು ದಾರದ ಉಂಡೆ ಇದ್ದರೆ ಗಾಳಿಪಟ ತಯಾರಿಸುವುದು ಸುಲಭ. ಆದರೆ, ಮಾಂಜ(ಗಾಜಿನ ಪುಡಿ ಸವರಿದ ದಾರ)ದ ಬಗ್ಗೆ ಎಚ್ಚರಿಕೆ ಅಗತ್ಯ. ಈ ದಾರ ಎಲ್ಲೆಂದರಲ್ಲಿ ಬಿದ್ದರೆ ಜನರ ಜೀವಕ್ಕೆ ಕಂಟಕ ತರಲಿದೆ. ಈ ದಾರವು ಪಕ್ಷಿಗಳ ಗೋಣನ್ನೂ ಮುರಿಯುತ್ತಿದೆ.

courtsey:prajavani.net

prajavani.net/artculture/article-features/international-kite-fest-in-mangalore-702231.html

Leave a Reply