ಪ್ರತಿ ಸಾರಿ ಪ್ರೀತಿಯಲ್ಲಿ ಬಿದ್ದಾಗ ಹಿಂದೆಂದಿಗಿಂತಲೂ ಆಳವಾಗಿಯೇ ಬಿದ್ದಿರುತ್ತೇನೆ!

ಪ್ರೀತಿಸಿದವಳು ದೂರಾಗಿ ಎಷ್ಟೋ ವರ್ಷಗಳ ಬಳಿಕ ದಿಢೀರನ ಕಣ್ಣೆದುರಿಗೆ ಬಂದರೆ ಪ್ರೇಮಿಯೊಬ್ಬನಿಗೆ ಏನಾಗಬಹುದು? ಅವಳಲ್ಲಿ, ಅವನಲ್ಲಿ ಒಂದು ಕ್ಷಣ ಏನೆಲ್ಲಾ ನೆನಪಾಗಬಹುದು? ಅವಳು ಅವನನ್ನು, ಅವನು ಅವಳನ್ನು ಕೇಳುವ ಪ್ರಶ್ನೆಗಳು ಎಂಥವು? ಭಾವನೆಗಳ ತೊಳಲಾಟಗಳೇನು… ಇವೆಲ್ಲದ್ದಕ್ಕೂ ಲೇಖಕರು ಈ ಬರಹ ಮೂಲಕ ಉತ್ತರ ನೀಡಿದ್ದಾರೆ. ನೆನಪಿರಲಿ ಇದು ನೈಜ ಘಟನೆ! ನ್ಯಾಷನಲ್ ಕಾಲೇಜು ಮೆಟ್ರೋ ಸ್ಟೇಷನ್ ಹತ್ತಿರ ಮೊನ್ನೆ ಮುಂಜಾನೆ ಆಕಸ್ಮಿಕವಾಗಿ ಅವಳು ಸಿಕ್ಕಳು. ಸುಮಾರು ಎಂಟು ವರ್ಷಗಳಾದ ಮೇಲೆ. ಅವಳು ನಾ ಮೊದಲು ಪ್ರೀತಿಸಿದ ಹುಡುಗಿ. ಐದು ವರ್ಷದ ಮಗು ಇದೆಯಂತೆ ಅವಳಿಗೆ. ಸ್ವಲ್ಪ ದಪ್ಪವಾಗಿದ್ದಾಳೆ ನನ್ನಂತೆ. ಅವಳ ಮಾತಿನ ದಾಟಿಯಲ್ಲೇನು ಬದಲಾವಣೆಯಾಗಿಲ್ಲ. ಅಚಾನಕ್ಕಾಗಿ ಸಿಕ್ಕ ಹುಡುಗಿಗೆ ಏನು ಹೇಳಬೇಕು, ಏನು ಕೇಳಬೇಕೆಂದು ಗೊತ್ತಾಗಲಿಲ್ಲ. ಅವಳು ನನ್ನ ಕೈ‌ಸವರುತ್ತ‌ ಕೇಳಿದಳು… ನೀನು ಇದೇ ಏರಿಯಾದಲ್ಲಿ ಇರೋದಾ? ಮೊದ್ಲು ನಿನ್ನ ಫೋನ್ ನಂಬರ್ ಕೊಡು. ಸಂಜೆ ಸಿಗೋಣ. ತುಂಬಾ ಮಾತನಾಡುವುದಿದೆ,\” ಎಂದಳು. ನಾನು ಆಯ್ತು ಅಂತ ಫೋನ್ ನಂಬರ್ ಕೊಟ್ಟೆ. ಅವಳು ಹಿಂರಿರುಗಿ ನಡೆದು ಹೋದದ್ದನ್ನು ಗಮನಿಸುತ್ತಲೇ ಇದ್ದೆ. ಎಷ್ಟು ದಟ್ಟ ಪ್ರೇಮವದು. ಅವಳಿಗೆ ನಾ ನೀಡಿದ್ದು. ಅವಳಿಂದ ನಾ ಪಡೆದದ್ದು. ಈಗ ನೋಡಿದರೆ ಅವಳು ನನ್ನ ನೆನಪಿಗೇ ಬರದಷ್ಟು ದೂರ ನಡೆದು ಬಿಟ್ಟಿದ್ದೇನೆ. ಈಗೀಗ ಅವಳಿಗೂ ನನ್ನ ನೆನಪು ಬರದೇ ಇರಬಹುದು. ಗಾಢ ಪ್ರೇಮದ ಗಡಿಯಾಚೆ ಅವಳಿಗೆ ಚಂದದೊಂದು ಬದುಕು‌ ದಕ್ಕಿರಬಹುದು. ಅದೆಲ್ಲ ಇರಲಿ, ಸಂಜೆ ಅವಳಿಗೆ ಸಿಗುವುದೇ, ಬೇಡವೇ ಎಂದು ಆಲೋಚಿಸಿದೆ. ಎಂಟು ವರ್ಷಗಳ ಹಿಂದೆ ಅವಳದೊಂದು ಫೋನ್ ಕರೆಗೆ, ಅವಳದೊಂದು ಮಾತಿಗೆ, ಅವಳದೊಂದು ಸ್ಪರ್ಶಕ್ಕೆ ದಿನಗಂಟಲೇ ಕಾದವನು‌ ನಾನೇನಾ ಅನ್ನಿಸಿತು. ಏನೇ ಆಗಲಿ… ಅವಳನ್ನು ಭೇಟಿಯಾಗುವುದು ಒಳಿತೆನ್ನಿಸಿತು. ಸಂಜೆ ಆರು ಗಂಟೆ ಸುಮಾರಿಗೆ ಭೇಟಿಯಾದವು. ನೆನಪಿದೆಯಾ, ಆವಾಗ ನೀ ಹೇಳುತ್ತಿದ್ದೆ. I love you till the end of my life… ಅಂತ. ಈಗ ನಿನ್ನನ್ನು ನೋಡಿದರೆ ನೀನು ಅವನೇನಾ ಎನ್ನುವ ಸಂಶಯ ಮೂಡುತ್ತದೆ. ಬೆಳಿಗ್ಗೆ ಮೆಟ್ರೋ ಸ್ಟೇಷನ್ ಹತ್ರ ನೀ ಸಿಕ್ಕಾಗ ನನಗೆ ಆಶ್ಚರ್ಯವಾಯಿತು. ತುಂಬಾ ಖುಷಿಯೂ ಆಯಿತು. ಆದ್ರೆ, ನಿನ್ನ ಮುಖದಲ್ಲಿ ಅದಾವ ಎಮೋಶನ್ಸು ಕಾಣ್ಲಿಲ್ಲ. ಈ ತರಹದ ಮನಸ್ಥಿತಿ planned ಆಗಿದ್ದಾ? ಅಥವಾ, unplanned ಆಗಿದ್ದಾ? ನನ್ನ ಮೇಲೆ ಈಗ ಪ್ರೀತಿ ಇಲ್ವಾ? ಅದೇನಾಯಿತು… ಬದುಕಿನ ಕೊನೆಯತನಕ ನಿನ್ನನ್ನ ಲವ್ ಮಾಡ್ತಿನಿ ಅಂದದ್ದು?\” ಪ್ರಶ್ನಿಸಿದಳು. ನಾನು ಅವಳ ಕಣ್ಣುಗಳನ್ನೇ ಗಮನಿಸುತ್ತಿದ್ದೆ. ವಿಚಿತ್ರವೆಂದರೆ, ಅವಳು ಕೇಳುವ ಪ್ರಶ್ನೆಗಳಲ್ಲಿ ಎಷ್ಟ ಗಾತ್ರದ ಗಾಂಭೀರ್ಯವಿದೆ. ಅವುಗಳಲ್ಲಿ ಎಷ್ಟು ಪ್ರಾಮಾಣಿಕತೆ ಇದೆ. ಹಾರಿಕೆಯ ಉತ್ತರದಂತೆ ಹಾರಿಕೆ ಪ್ರಶ್ನೆಯನ್ನೂ ಅವಳು ಕೇಳುತ್ತಿದ್ದಾಳಾ ಎಂದು ನಾನು ಗಮನಿಸುತ್ತಿದ್ದೆ. ಆಗ ನಾ ಹೇಳಿದೆ, ಈಗ ನಿನ್ನ ನೆನಪೇ ಇಲ್ಲ ನೋಡು. ಬದುಕಿನ ಕೊನೆಯವರೆಗೂ ನಿನ್ನನ್ನೇ ಪ್ರೀತಿಸ್ತೆನೆ ಅಂದಿದ್ದೆ. ಅವತ್ತಿನ ಮಟ್ಟಿಗೆ ಅದು‌ ನಿಜ. ನನ್ನಲ್ಲಾಗ ಅಪ್ರಬುದ್ಧತೆ ಇತ್ತು. ಅವಸರವಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಅತಿರೇಕವಿತ್ತು. ಇಪ್ಪತ್ತರ ಆಸುಪಾಸಿನ ಎಲ್ಲ ಹುಡುಗ-ಹುಡುಗಿಯರಿಗೂ ಅದು ಇರುತ್ತೆ. ಒಬ್ಬಳನ್ನೇ ಪ್ರೀತಿಸುವುದು ನನ್ನಿಂದಾಗಲಿಲ್ಲ. ಅದು ಯಾರಿಂದಲೂ ಆಗುವುದಿಲ್ಲ. ಇವತ್ತಿನ ಮಟ್ಟಿಗೆ ಇದು ನಿಜ,ಎಂದು ನಸುನಕ್ಕೆ. ನನ್ನ ನಂತರ ನಿನ್ನ ಬದುಕಿಲ್ಲಿ ಎಷ್ಟು ಹುಡುಗಿಯರು ಬಂದು ಹೋದರು? ಕೇಳಿದಳು. ಮೂರು ಜನ ಎಂದೆ. ಅವರೆಲ್ಲರೊಂದಿಗೂ ನನ್ನ ಹಾಗೆ deep love ಇತ್ತಾ? ಮತ್ತೆ ಪ್ರಶ್ನಿಸಿದಳು. Yes, every time I fall in love, I fall deeper than before. ಹುಂ, ಪ್ರತಿ ಸಾರಿಯೂ ಪ್ರೇಮದಲ್ಲಿ ಬೀಳುವಾಗ, ನಾನು ಹಿಂದೆಂದಿಗಿಂತಲೂ ಆಳವಾಗಿಯೇ ಬಿದ್ದಿರುತ್ತೇನೆ, ಎಂದು ನಿರ್ಲಿಪ್ತ ಭಾವದಿಂದಲೇ ಹೇಳಿದೆ. ಅವಳ ಮಾತು ಪ್ರಜ್ಞಾಪೂರ್ವಕವಾಗಿಯೇ ಬೇರೆ ವಿಷಯದ ಕಡೆಗೆ ಜಾರಿತ್ತು.

author- ರವೀಂದ್ರ ಗಂಗಲ್‌

courtsey:prajavani.net

https://www.prajavani.net/youth/yes-every-time-i-fall-love-i-671718.html

Leave a Reply