Your Cart

Need help? Call +91 9535015489

📖 Print books shipping available only in India. ✈ Flat rate shipping

ಪ್ರವಾಹ ಸೃಷ್ಟಿಸಿದ ಬಿಂಬಗಳು

ಗಾಳಿಯ ರಭಸಕ್ಕೆ ಹೊಯ್ದಾಡುತ್ತಿದ್ದ ದೀಪದ ಬತ್ತಿಯ ಸೊಡರಿಗೆ ಅಂಗೈನಲ್ಲಿ ರಕ್ಷಣೆ ಕೊಡುತ್ತಲೇ ಆಗಷ್ಟೇ ಹೆಕ್ಕಿ ತಂದಿದ್ದ ಸಗಣಿಯನ್ನು ಕಲಸಿ ನೆಲ ಸಾರಿಸುತ್ತಿದ್ದಳು ವರ್ಷಾ ಕಂಬಾರ. ಹುನಗುಂದ ತಾಲ್ಲೂಕು ಕಟಗೂರಿನ ವರ್ಷಾ, ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದಾಳೆ. ಅವ್ವ ನೀಲಮ್ಮನಿಗೆ ಕಳೆದೊಂದು ವಾರದಿಂದ ತೀವ್ರ ಜ್ವರ. ಎದ್ದು ಓಡಾಡಲು ಆಗಲ್ಲ. ಮೊದಲೇ ಕಾಯಿಲೆಪೀಡಿತ ಅಪ್ಪ ಪಾಂಡಪ್ಪನನ್ನು ಇತ್ತೀಚೆಗೆ ಊರನ್ನು ಕಾಡಿದ ಕೃಷ್ಣಾ ನದಿ ಪ್ರವಾಹದ ಸಂಕಷ್ಟ ಮಾನಸಿಕವಾಗಿ ಕುಗ್ಗಿಸಿದೆ. ಅವರು ಹಾಸಿಗೆ ಹಿಡಿದಿದ್ದಾರೆ. ಕೂಲಿಗೆ ಹೋಗುವ ಅವ್ವನೇ ಕುಟುಂಬಕ್ಕೆ ದಿಕ್ಕು. ಅಪ್ಪ–ಅವ್ವನ ದೇಖರೇಕಿ, ಮನೆಯ ಕೆಲಸಗಳು ತನ್ನ ಪಾಲಾಗಿರುವ ಕಾರಣ ವರ್ಷಾ ಕಳೆದೊಂದು ವಾರದಿಂದ ಶಾಲೆಗೂ ಹೋಗಿಲ್ಲ. ಬಾಗಲಕೋಟ ಜಿಲ್ಲೆಯ ಮುಧೋಳ ತಾಲ್ಲೂಕಿನ ಒಂಟಗೊಡಿ ಗ್ರಾಮದಲ್ಲಿ ನೆರೆಯಿಂದಾಗಿ ಹಾಳಾಗಿರುವ ಮನೆಯಲ್ಲಿನ ವಸ್ತುಗಳು. ಪ್ರವಾಹದಿಂದ ಪಾಂಡಪ್ಪನ ಮನೆ ಮುಂಭಾಗ ಕುಸಿದಿತ್ತು. ಹೀಗಾಗಿ ನಾಲ್ಕು ತಿಂಗಳು ಅವರ ಕುಟುಂಬ ಗ್ರಾಮದ ಬಸ್‌ಶೆಲ್ಟರ್‌ನಲ್ಲಿ ವಾಸವಿತ್ತು. ಮಾಧ್ಯಮಗಳ ವರದಿ ಗಮನಿಸಿ ಅಧಿಕಾರಿಗಳು ಬಂದು ಬಸ್‌ಸ್ಟ್ಯಾಂಡ್‌ನ ನೆಲೆ ಕೀಳಿಸಿ ಹೋಗಿದ್ದಾರೆ. ಆದರೆ ಬೇರೆಡೆ ಪುನರ್ವಸತಿ ಕಲ್ಪಿಸಿಲ್ಲ! ಪಾಂಡಪ್ಪ ಕುಟುಂಬವು ಬಿದ್ದ ಮನೆಯನ್ನು ಸರ್ಕಾರ ಕೊಟ್ಟ ₹ 10 ಸಾವಿರ ಬಳಸಿಯೇ ತಾತ್ಕಾಲಿಕವಾಗಿ ವಾಸಯೋಗ್ಯ ಮಾಡಿಕೊಂಡಿದೆ. ಮುಂದಿನ ಮಳೆಗಾಲದ ದುಃಸ್ವಪ್ನ ಮನೆಮಂದಿಯನ್ನು ಅನಿಶ್ಚಿತತೆಯಲ್ಲಿ ದಿನ ದೂಡುವಂತೆ ಮಾಡಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಪಶ್ಚಾಪುರ ಪಂಚಾಯಿತಿಯಲ್ಲಿ ಮಳೆಗೆ ಕುಸಿದಿರುವ ಮನೆ. ಬಸ್‌ ಶೆಲ್ಟರ್‌ನಲ್ಲಿ ವಾಸವಿದ್ದಾಗ ಪ್ಲಾಸ್ಟಿಕ್ ಚೀಲ ಅಡ್ಡ ಕಟ್ಟಿಕೊಂಡು ಗಾಳಿ– ಮಳೆಯಿಂದ ರಕ್ಷಣೆ ಪಡೆದಿದ್ದರು. ರಸ್ತೆ ಪಕ್ಕದಲ್ಲಿ ಕಲ್ಲು ಇಟ್ಟು ಒಲೆ ಹೊತ್ತಿಸಿ ಅಡುಗೆ ಮಾಡಿಕೊಂಡು ಉಂಡದ್ದು, ಕತ್ತಲಾದ ಮೇಲೆ ಅವ್ವನ ರಕ್ಷಣೆಯಲ್ಲಿ ನಿಂತು ರಸ್ತೆಯಲ್ಲಿಯೇ ಸ್ನಾನ ಮಾಡಿದ, ಬಹಿರ್ದೆಸೆಗೆ ಹೋದ ಕ್ಷಣಗಳ ನೆನಪಿಸಿಕೊಂಡರೆ ವರ್ಷಾ ಈಗಲೂ ಬೆಚ್ಚುತ್ತಾಳೆ. ಪ್ರವಾಹ ತಂದಿಟ್ಟ ಈ ಹೊಯ್ದಾಟದಲ್ಲಿ ಆಕೆಯ ಬಾಲ್ಯ ಕರಗುತ್ತಿದೆ. ಮನೆಯ ಹೊಣೆಗಾರಿಕೆಯೂ ಆಕೆಯ ಮೇಲೆ ಬಿದ್ದಿದೆ. ಒಂಟಗೋಡಿ ಗ್ರಾಮದಲ್ಲಿ ಮಳೆಯಿಂದಾಗಿ ಹಾಳಾಗಿರುವ ಮಕ್ಕಳ ಪುಸ್ತಕಗಳು ಮುಧೋಳ ತಾಲ್ಲೂಕಿನ ಚಿಕ್ಕೂರು ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿತ್ತು. ದಲಿತರು ಸೇರಿದಂತೆ ಗ್ರಾಮದ 20ಕ್ಕೂ ಹೆಚ್ಚು ಕುಟುಂಬಗಳು ಅಲ್ಲಿಂದ ಮೂರು ಕಿ.ಮೀ. ದೂರದಲ್ಲಿ ನಿರ್ಮಾಣ ಹಂತದ ಶಾಲಾ ಕಟ್ಟಡದಲ್ಲಿ ನಾಲ್ಕು ತಿಂಗಳು ಆಶ್ರಯ ಪಡೆದಿದ್ದವು. ಈ ಅವಧಿಯಲ್ಲಿ ಮಕ್ಕಳು ಶಾಲೆಯತ್ತ ಸುಳಿಯಲೇ ಇಲ್ಲ. ಬಾದಾಮಿ ತಾಲ್ಲೂಕಿನ ಮುಮ್ಮರಡ್ಡಿಕೊಪ್ಪ, ಬೀರನೂರಿನಲ್ಲೂ ಇದೇ ಪರಿಸ್ಥಿತಿ ಇದ್ದು, ಪ್ರವಾಹದ ನಂತರ ಶಾಲೆಯಲ್ಲಿ ಮಕ್ಕಳ ಹಾಜರಾತಿ ಅರ್ಧದಷ್ಟು ಕುಸಿದಿದೆ. ಜಿಲ್ಲೆಯಲ್ಲಿ ಮಹಾಪೂರ ಬಂದು ಹೋಗಿ ಆರು ತಿಂಗಳು ಕಳೆದರೂ ಆದು ಸೃಷ್ಟಿಸಿ ಹೋದ ಬಿಂಬಗಳು ಇನ್ನೂ ಕಾಡುತ್ತಿವೆ. ಮಲಪ್ರಭಾ, ಘಟಪ್ರಭಾ, ಕೃಷ್ಣೆಯ ತಟದ ಹಳ್ಳಿಗಳಲ್ಲಿ ಅಡ್ಡಾಡಿದರೆ ವರ್ಷಾಳಂತೆ ಅಕಾಲದಲ್ಲಿ ಬದುಕಿನ ನೊಗ ಹೆಗಲಿಗೇರಿಸಿಕೊಂಡ ನೂರಾರು ಮಕ್ಕಳು ಕಾಣಸಿಗುತ್ತಾರೆ. ಮಣ್ಣಿನದ್ದೋ, ಮಾಳಿಗೆಯದ್ದೋ ಬೆಚ್ಚಗಿನ ಮನೆಗಳಲ್ಲಿ ವಾಸವಿದ್ದವರು, ಈಗ ಚಳಿಗೆ ಮರಟುವ, ಬಿಸಿಲಿಗೆ ಕಾದ ಹೆಂಚಿನಂತಾಗುವ ತಗಡಿನ ಶೆಡ್‌ಗಳಲ್ಲಿ ದಿನದೂಡುತ್ತಿದ್ದಾರೆ. ಶಾಲಾ ಕಟ್ಟಡವೂ ತಗಡಿನ ಹೊದಿಕೆಯಾಗಿ ಬದಲಾಗಿ ಮಕ್ಕಳಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೂ ದಾರಿಯಾಗಿದೆ.

author- ವೆಂಕಟೇಶ್ ಜಿ.ಎಚ್

https://www.prajavani.net/artculture/article-features/photo-feature-from-flood-hit-area-705563.html

courtsey:prajavani.net

Leave a Reply