ಪ್ರಯೋಗಶೀಲ ಪತ್ರಕರ್ತನ ಪಕ್ಷಿನೋಟ

ಲಖನೌ ಹುಡುಗ ಲೇ: ವಿನೋದ್‌ ಮೆಹ್ತಾ; ಕನ್ನಡಕ್ಕೆ: ಸತೀಶ್‌ ಜಿ.ಟಿ., ಶಶಿ ಸಂಪಳ್ಳಿ ಪ್ರ: ಅಹರ್ನಿಶಿ ಪ್ರಕಾಶನ, ಜ್ಞಾನವಿಹಾರ ಬಡಾವಣೆ, ಕಂಟ್ರಿಕ್ಲಬ್ ಎದುರು, ವಿದ್ಯಾನಗರ, ಶಿವಮೊಗ್ಗ–577203. ಮೊ: 94491 74662 ಭಾರತದ ಪ್ರಸಿದ್ಧ ಪತ್ರಕರ್ತರಲ್ಲಿ ಒಬ್ಬರಾದ ವಿನೋದ್‌ ಮೆಹ್ತಾ ಅವರ ಕೆಲವು ನೆನಪುಗಳ ಸಂಕಲನ ‘ಲಖನೌ ಹುಡುಗ’. ಶೀರ್ಷಿಕೆಯಿಂದಲೇ ಆಸಕ್ತಿ ಹುಟ್ಟಿಸುವ ಈ ಕೃತಿ, ಲಖನೌ ಬೀದಿಗಳಲ್ಲಿ ಎಲ್ಲರೊಳಗೊಂದಾಗಿ ಓಡಾಡಿಕೊಂಡಿದ್ದ ಹುಡುಗನೊಬ್ಬ ದೇಶದ ಅಗ್ರಪಂಕ್ತಿಯ ಪತ್ರಕರ್ತರಲ್ಲೊಬ್ಬರಾಗಿ ಬೆಳೆದ ಕುತೂಹಲಕರ ಕಥನ. ಪತ್ರಕರ್ತರ ಆತ್ಮಕಥನಗಳು ಕನ್ನಡದಲ್ಲಿ ಇಲ್ಲವೆನ್ನುವಷ್ಟು ಕಡಿಮೆಯಿರುವಾಗ, ಇರುವ ಒಂದೆರಡು ಕಥನಗಳೂ ಪತ್ರಿಕೋದ್ಯಮದಾಚೆಗಿನ ಸಂಗತಿಗಳನ್ನೇ ಹೆಚ್ಚು ಪ್ರಸ್ತಾಪಿಸುವುದರಿಂದ, ಪತ್ರಕರ್ತ–ಪತ್ರಿಕೋದ್ಯಮದ ಬಗ್ಗೆ ಆಸಕ್ತಿಯುಳ್ಳವರಿಗೆ ವಿನೋದ್‌ ಜೀವನಕಥನ ರಸಗವಳದಂತಿದೆ. ಕೃತಿಯಲ್ಲಿನ ಆರು ಅಧ್ಯಾಯಗಳಲ್ಲಿ ಮೊದಲೆರಡು ಭಾಗಗಳಾದ ‘ಊರುಮನೆ’ ಹಾಗೂ ‘ಇಂಗ್ಲೆಂಡ್‌ ಯಾನ’ ಲೇಖಕರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತವೆ. ಮೆಹ್ತಾ ಕುಟುಂಬಕ್ಕೆ ಸೇರಿದ ಬಾಲಕನೊಬ್ಬ, ಭಾರತದ ಬಹುತ್ವದ ಪ್ರಯೋಗಶಾಲೆಯಂತಿರುವ ಲಖನೌ ನಗರದಲ್ಲಿ ಕಳೆಯುವ ಬಾಲ್ಯ–ಕೌಮಾರ್ಯದ ದಿನಗಳ ಸೊಗಸಾದ ಚಿತ್ರಣ ‘ಊರು–ಮನೆ’ ಅಧ್ಯಾಯದಲ್ಲಿದೆ. ಇಲ್ಲಿನ ಲಖನೌ ದೇಶದ ವಿಭಜನೆಯ ಗಾಢ ಚಹರೆಗಳನ್ನು ಮೈತಳೆದ ನಗರ. ಅಂತರಂಗದಲ್ಲಿ ಅಪ್ಪಟ ದೇಸಿತನವನ್ನು ತುಂಬಿಕೊಂಡ ಊರು, ವಾಣಿಜ್ಯೀಕರಣಕ್ಕೆ ತನ್ನನ್ನು ತೆರೆದುಕೊಳ್ಳುವ ಸ್ಥಿತ್ಯಂತರವನ್ನು ವಿನೋದ್‌ ಸೂಕ್ಷ್ಮ ವಿವರಗಳೊಂದಿಗೆ ದಾಖಲಿಸಿದ್ದಾರೆ. ಶಾಲೆ–ಕಾಲೇಜು ದಿನಗಳಲ್ಲಿ ಅಷ್ಟೇನೂ ಮಹತ್ವಾಕಾಂಕ್ಷಿಯಲ್ಲದ ಹುಡುಗ, ಗೆಳೆಯನ ಕರೆಯ ಮೇರೆಗೆ ಇಂಗ್ಲೆಂಡ್‌ಗೆ ಹೋದಾಗಲೂ ತನ್ನ ಸಾಹಸಗಳನ್ನು ಮುಂದುವರೆಸುತ್ತಾನೆ. ಲಖನೌ–ಇಂಗ್ಲೆಂಡ್‌ ಎರಡೂ ಕಡೆ ಬದುಕಿನ ಸೌಂದರ್ಯದ ಬಗ್ಗೆ ಅಪಾರ ಮೋಹವುಳ್ಳ ತರುಣನೊಬ್ಬ ನಮಗೆ ಕಾಣಿಸುತ್ತಾನಾದರೂ, ಆ ಅನುದ್ದೇಶಿತ ದಿನಗಳ ಬದುಕೇ ವಿನೋದ್‌ ಅವರೊಳಗಿನ ಹುಟ್ಟಾ ಪತ್ರಕರ್ತನ ಸಂವೇದನಾಶೀಲತೆಯ ಜೀವದ್ರವವಾಗಿದೆ. ವೃತ್ತಿಪರ ಪತ್ರಿಕೋದ್ಯಮದಲ್ಲಿ ಮೊದಲ ಮೆಟ್ಟಿಲು ಆರಂಭವಾಗುವುದು ಉಪ ಸಂಪಾದಕ ಇಲ್ಲವೇ ವರದಿಗಾರ ವೃತ್ತಿಯೊಂದಿಗೆ. ಆದರೆ, ವಿನೋದ್‌ ಅವರ ವೃತ್ತಿಜೀವನ ಆರಂಭವಾಗುವುದೇ ಸಂಪಾದಕನಾಗಿ. ಅದು ಅವರಾಗಿಯೇ ಸೃಷ್ಟಿಸಿಕೊಂಡ ಅವಕಾಶ. ಇತಿಹಾಸದ ‍ಪುಟ ಸೇರಲು ತವಕಿಸುತ್ತಿದ್ದ ‘ಡೆಬೊನೇರ್‌’ ಪತ್ರಿಕೆಯ ಮಾಲೀಕರ ಮನವೊಲಿಸಿ, ಆ ಪತ್ರಿಕೆಗೆ ಸಂಪಾದಕರಾದಾಗ ವಿನೋದ್‌ ಅವರಿನ್ನೂ ಮೂವತ್ತೆರಡರ ತರುಣ. ಅರೆನಗ್ನ ತರುಣಿಯರ ಬ್ಲೋಅಪ್‌ಗಳ ಮೂಲಕ ಪೋಲಿ ಪತ್ರಿಕೆಯೆಂದು ಗುರ್ತಿಸಿಕೊಂಡಿದ್ದ ‘ಡೆಬೊನೇರ್‌’ನ ಕುಖ್ಯಾತಿಯನ್ನು ಉಳಿಸಿಕೊಂಡೂ, ಆ ನಿಯತಕಾಲಿಕೆಗೆ ಬೌದ್ಧಿಕ ಆಯಾಮ ನೀಡಿದ್ದು ವಿನೋದ್‌ ಮೆಹ್ತಾ ಅವರ ಸಾಧನೆ. ಪೋಲಿ ಪತ್ರಿಕೆಯ ಸಂಪಾದಕನೆನ್ನುವ ಹಣೆಪಟ್ಟಿ ಕಳಚಿಕೊಳ್ಳುವ ಉದ್ದೇಶದಿಂದ ಮೆಹ್ತಾ ಅವರು ಕೈಗೊಂಡ ಹೊಸ ಸಾಹಸ ‘ಸಂಡೆ ಅಬ್ಸರ್ವರ್‌’. ಭಾನುವಾರದ ಪತ್ರಿಕೆಯನ್ನು ರೂಪಿಸುವುದು ವ್ಯಾವಹಾರಿಕ ಜಾಣ್ಮೆಯಲ್ಲ ಎಂದು ಪತ್ರಿಕೋದ್ಯಮದ ದಿಗ್ಗಜರು ನಂಬಿಕೊಂಡಿದ್ದ ದಿನಗಳಲ್ಲಿ, ಸುದ್ದಿಪತ್ರಿಕೆ ಹಾಗೂ ನಿಯತಕಾಲಿಕೆಗಳ ಸಮೀಕರಣದ ‘ಸಂಡೆ ಅಬ್ಸರ್ವರ್‌’ ಪತ್ರಿಕೆಯನ್ನು ರೂಪಿಸಿ ಮಹ್ತಾ ಯಶಸ್ಸು ಗಳಿಸಿದರು. ಈ ಕಟ್ಟುವ ಕೆಲಸ ‘ಇಂಡಿಪೆಂಡೆಂಟ್‌’, ‘ಇಂಡಿಯನ್‌ ಪೋಸ್ಟ್‌’ ಪತ್ರಿಕೆಗಳಲ್ಲೂ ಮುಂದುವರೆಯಿತು. ‘ಪಯೋನೀರ್‌’ ಸಂಪಾದಕರಾಗಿ, ಅದಕ್ಕೆ ಹೊಸರೂಪ ನೀಡಿದ ಅವರು ತಮ್ಮ ಅಲೆದಾಟ ಕೊನೆಗೊಳಿಸಿದ್ದು ‘ಔಟ್‌ಲುಕ್‌’ ಪತ್ರಿಕೆಯಲ್ಲಿ. ‘ಔಟ್‌ಲುಕ್‌’ ಮೂಲಕ ವಾರಪತ್ರಿಕೆಗಳ ಇತಿಹಾಸದಲ್ಲಿ ಮೆಹ್ತಾ ಹೊಸ ಶಕೆಯೊಂದನ್ನು ಆರಂಭಿಸಿದ್ದು ಈಗ ಇತಿಹಾಸ. ವಿನೋದ್‌ ಅವರ ಪತ್ರಿಕೋದ್ಯಮ ಯಾನದಲ್ಲಿ, ಅವರು ಪತ್ರಿಕೆಗಳನ್ನು ಬದಲಿಸುತ್ತಾ ಹೋದರೇ ಹೊರತು ಪತ್ರಿಕೋದ್ಯಮದ ಕುರಿತ ಬದ್ಧತೆಯನ್ನಲ್ಲ ಎನ್ನುವ ಸಂಗತಿಯನ್ನು ಗಮನಿಸಬೇಕು. ಎಲ್ಲ ಪತ್ರಿಕೆಗಳಲ್ಲೂ ಅವರು ನೆಚ್ಚಿಕೊಂಡಿದ್ದು ಎರಡು ಸಂಗತಿಗಳನ್ನು: ಒಂದು, ವ್ಯವಸ್ಥೆಯ ಹುಳುಕುಗಳನ್ನು ಬಯಲುಮಾಡುವ ಸಾಹಸ; ಇನ್ನೊಂದು, ಬೌದ್ಧಿಕ ಸಂಗತಿಗಳಿಗೆ ಪತ್ರಿಕೆಯ ಪುಟಗಳಲ್ಲಿ ಅವಕಾಶ ನೀಡಿದ್ದು. ಜನರು ಬಯಸುವುದನ್ನು ನೀಡಬೇಕು ಎನ್ನುವ ಜನಪ್ರಿಯ ಸೂತ್ರಕ್ಕೆ ಹೊರತಾಗಿದ್ದ ಅವರು, ಜನರಿಗೆ ಏನನ್ನು ನೀಡಬೇಕು ಎನ್ನುವುದನ್ನು ಸಂಪಾದಕ ತೀರ್ಮಾನಿಸಬೇಕು ಎನ್ನುವ (ಓದುಗರ ಅಭಿರುಚಿ ರೂಪಿಸುವ) ಮನೋಧರ್ಮ ಹೊಂದಿದ್ದರು. ಆಧುನಿಕ ಭಾರತದ ರಾಜಕೀಯ ಚರಿತ್ರೆಯ ಪಕ್ಷಿನೋಟದಂತೆಯೂ ಓದಬಹುದಾದ ‘ಲಖನೌ ಹುಡುಗ’ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ದೇಶದ ಆಗುಹೋಗುಗಳ ಬಗ್ಗೆ ಕುತೂಹಲವುಳ್ಳ ಎಲ್ಲರೂ ಗಮನಿಸಬೇಕಾದ ಕೃತಿ. ಇಂಗ್ಲಿಷ್‌ನಲ್ಲಿನ ಈ ವಿಶಿಷ್ಟ ಕಥನವನ್ನು ಅದರ ಆತ್ಮಕ್ಕೆ ಮುಕ್ಕಾಗದ ರೀತಿಯಲ್ಲಿ ಜಿ.ಟಿ. ಸತೀಶ್‌ ಹಾಗೂ ಶಶಿ ಸಂಪಳ್ಳಿ ಕನ್ನಡಕ್ಕೆ ತಂದಿದ್ದಾರೆ. ಈ ಮೆಚ್ಚುಗೆಯೊಂದಿಗೆ, ಪುಸ್ತಕದ ಕನ್ನಡ ಅವತರಣಿಕೆಯ ಸಂದರ್ಭದಲ್ಲಿ ‘ಅರ್ಪಣೆ’ ಬದಲಾಗಿರುವುದನ್ನೂ ಹೇಳಬೇಕು. ವಿನೋದ್‌ ತಮ್ಮ ‘ಲಖನೌ ಬಾಯ್‌’ ಕೃತಿಯನ್ನು ‘ಔಟ್‌ಲುಕ್‌’ಗೆ ಬಂಡವಾಳ ಹೂಡಿದ ರಾಜನ್‌ ರಹೇಜಾ ಅವರಿಗೆ ಅರ್ಪಿಸಿದ್ದರೆ, ಕನ್ನಡ ಅವತರಣಿಕೆ ಲಂಕೇಶ್‌ ಅವರಿಗೆ ಅರ್ಪಣೆಗೊಂಡಿದೆ. ‘ಅರ್ಪಣೆ’ ಎನ್ನುವುದು ಲೇಖಕನ ಭಾವಲೋಕಕ್ಕೆ ಸಂಬಂಧಿಸಿದ, ಪ್ರೀತಿ–ಗೌರವ–ಕೃತಜ್ಞತೆಯ ದ್ಯೋತಕ. ಆ ಅಭಿವ್ಯಕ್ತಿ ಅನುವಾದದ ಅವತರಣಿಕೆಯಲ್ಲೂ ಉಳಿಯಬೇಕು; ಬದಲಾದರೆ ಅದು ಹಸ್ತಕ್ಷೇಪ.

author- ರಘುನಾಥ ಚ.ಹ.

courtsey:prajavani.net

https://www.prajavani.net/artculture/book-review/lucknow-boy-by-vinod-mehta-book-review-695076.html

,

Leave a Reply