ಸದಾ ಕಾಡಿದ ಸರಸೋತಮ್ಮ, ಪಾರೋತಮ್ಮ

ನನಗಾಗ ಸುಮಾರು ಹನ್ನೆರಡು ವರ್ಷ. ಓದುವ ವಿಪರೀತ ಹಂಬಲದವಳು. ಸಣ್ಣ ತುಂಡುಪೇಪರಿನಲ್ಲಿ ನಾಲ್ಕಕ್ಷರ ಇದ್ದರೂ ಅದನ್ನು ಗಬಕ್ಕನೆ ಓದಿ ಮುಗಿಸುವ ಸ್ವಭಾವ. ಅದನ್ನು ಹರಿಯದೆ ಜೋಪಾನವಾಗಿ ಇರಿಸುತ್ತಿದ್ದವಳು. ನನ್ನ ಚಿಕ್ಕಪ್ಪ ಒಬ್ಬರು, ಸುಬ್ರಹ್ಮಣ್ಯಂ ಅಂತ, ಬೆಂಗಳೂರಿನ ಕಾಲೇಜಿನಲ್ಲಿ ಓದುತಿದ್ದರು. ಊರಿಗೆ ಬರುವಾಗಲೆಲ್ಲ ಕೆಲವು ಕಥೆ ಪುಸ್ತಕ ಕಾದಂಬರಿಗಳನ್ನು ತರುತಿದ್ದರು. ಹಾಗೆ ಒಮ್ಮೆ ಒಂದು ದೊಡ್ಡ ಕಾದಂಬರಿಯನ್ನು ತಂದರು. ನಾನು ಓಡಿ ಬಂದು ಆತುರದಿಂದ ತೆರೆದು ನೋಡಿದೆ. ನೋಡಿದರೆ ಹೆಸರು ‘ಮರಳಿ ಮಣ್ಣಿಗೆ’ ಅಂತ ಇತ್ತು. ಮಣ್ಣು ನನಗೆ ಪ್ರಿಯವಾದದ್ದು. ನಾನು ಜಮೀನ್ದಾರರ ಮಗಳು. ನಿತ್ಯವೂ ತೋಟ ಗದ್ದೆಗಳಿಗೆ ಹೋಗುವುದು ನನಗೆ ಪ್ರಿಯವಾದದ್ದು. ‘ಹುಟ್ಟಿದ್ಮೇಲೆ ಎಲ್ಲಾರೂ ಒಂದಿನ ಮತ್ತೆ ಮಣ್ಣಿಗೇ ಓಗೋದು’ –ಎಂದು ನಮ್ಮೂರಿನ ರೈತರು ಆಗಾಗ ಹೇಳುತಿದ್ದರು. ಯಾರಾದರೂ ತೀರಿಕೊಂಡಾಗ ‘ಮಣ್ಣು ಕೊಡಾಕೆ ಹೋಗಿದ್ದೊ’ ಎನ್ನುತಿದ್ದರು. ಪರಸ್ಪರ ಜಗಳವಾದಾಗ ‘ನಿನ್ನ್ ಬಾಯಿಗ್ ಮಣ್ಣ್ ಹಾಕ’ ಎಂದು ಹೆಂಗಸರು ಬೈಯುತಿದ್ದರು. ಹೊಲ ಉತ್ತು ಬಿತ್ತುವಾಗ ನಮ್ಮ ಮನೆಯಲ್ಲಿ ಭೂಮಿಪೂಜೆ ಮಾಡುತ್ತಿದ್ದರು. ಹೀಗಾಗಿ ‘ಮರಳಿ ಮಣ್ಣಿಗೆ’ ಎಂಬ ಹೆಸರಿನಲ್ಲಿರುವ ಮಣ್ಣು ಎನ್ನುವ ಪದವೇ ನನ್ನನ್ನು ಪ್ರಥಮತಃ ಆಕರ್ಷಿಸಿತು. ದೊಡ್ಡ ಕಾದಂಬರಿಯಾದರೇನು? ನಾನು ಓದಲೇಬೇಕೆಂದುಕೊಂಡೆ.ಆಗಿನ ಕಾಲದಲ್ಲಿ ವಿದ್ಯುತ್ ದೀಪವಿರಲಿಲ್ಲ. ರಾತ್ರಿ ಲಾಟೀನು ಬೆಳಕಿನಲ್ಲಿ ಬಹಳ ಹೊತ್ತು ಓದಿದರೆ ಹಿರಿಯರು ಗದರಿಸುತಿದ್ದರು. ಹೀಗಾಗಿ ಎಲ್ಲರೂ ಮಲಗಿದ ನಂತರ ಮೆಲ್ಲಗೆ ಶಬ್ದವಿಲ್ಲದೆ ಲಾಟೀನು ಬೆಳಗಿಸಿ ರಾಗಿ ಭತ್ತದ ಮೂಟೆಗಳ ನಡುವೆ ಕುಳಿತು ಓದತೊಡಗಿದೆ. ಓದುತ್ತ ಓದುತ್ತ ಮರಳಿ ಮಣ್ಣಿಗೆಯ ಮಳೆಗಾಲದ ವರ್ಣನೆ, ಮುಂಗಾರಿನ ಆರ್ಭಟ, ಮುಂತಾದವುಗಳಲ್ಲಿ ಕಳೆದುಹೋದೆ. ಸರಸೋತಿ ಪಾರೋತಿಯರು ನನ್ನ ಸುತ್ತ ಓಡಾಡತೊಡಗಿದರು. ಐತಾಳರ ಮಾತುಗಳು ನನಗೆ ಕೇಳತೊಡಗಿದವು.ನಾನು ಕಾರಂತರನ್ನು ಕಾಣಬೇಕು. ಮಾತನಾಡಬೇಕು. ಹೇಗೆ ಸಾಧ್ಯ? ಆಗ ಪುಟ್ಟ ಹುಡುಗಿಯಾಗಿದ್ದ ನಾನು ಇಂತಹದೊಂದು ಬೃಹತ್ ಕಾದಂಬರಿ ಬರೆದ ಕಾರಂತರು ಇರುವುದು ದೊಡ್ಡ ಅರಮನೆಯಂಥ ಮನೆಯಲ್ಲಿ ಎಂದು ಕಲ್ಪಿಸಿದೆ. ಮೈಸೂರಿನಲ್ಲಿ ನಮ್ಮ ಸೋದರತ್ತೆ ಸುಬ್ಬಮ್ಮನವರ ಮನೆ ಅರಮನೆಗೆ ಹತ್ತಿರದಲ್ಲಿತ್ತು. ಅಲ್ಲಿಂದ ಅರಮನೆಯ ಚಿನ್ನದ ಕಲಶ ಗೋಪುರಗಳು ಕಾಣುತಿದ್ದವು. ಶಿವರಾಮ ಕಾರಂತರ ಮನೆಯೂ ಹಾಗೆಯೇ ಇರಬಹುದು ಎಂದು ಅಂದಾಜು ಮಾಡಿದೆ. ಬಾಲಕಲ್ಪನೆಯದು. ಹೇಳಲುಂಟೆ? ಕಾರಂತರು ನನಗೆ ಮುಗಿಲೆತ್ತರದಲ್ಲಿ ಕಂಡರು. ನನ್ನ ತಲೆಯಲ್ಲಿ ಮರಳಿ ಮಣ್ಣಿಗೆಯ ಕಥೆಯೇ ಚಕ್ರದಂತೆ ಸುತ್ತುತಿತ್ತು. ಸರಿಯಾಗಿ ಅವತ್ತು ನಮ್ಮ ಮೇಷ್ಟ್ರು ಸುಬ್ಬರಾಯಪ್ಪ ಪಾಠ ಮಾಡುತ್ತ ತಂದೆಯ ಹಣ ಹಾಳುಮಾಡಿದ ಮಗನೊಬ್ಬನ ಕಥೆ ಹೇಳಿದರು. ಲಚ್ಚನ ನಡತೆಯಿಂದಾಗಿ ರಾಮ ಐತಾಳರ ಮನಸ್ಸು ಎಷ್ಟು ನೊಂದಿರಬೇಕು!- ನನ್ನ ಚಿಂತನೆ ಅಲ್ಲಿಗೆ ಓಡಿತು. ಮೇಷ್ಟ್ರು ಪ್ರಶ್ನೆ ಕೇಳಿದರು. ನಾನು ಎಚ್ಚೆತ್ತಾಗ ‘ಏನಮ್ಮ ಲಲಿತಮ್ಮ, ನನ್ನ ಪ್ರಶ್ನೆಯ ಕಡೆಗೆ ನಿನ್ನ ಗಮನವಿಲ್ಲ. ಏನು ಯೋಚಿಸುತ್ತಿರುವೆ?’ ಎಂದು ಕೇಳಿದರು. ಗಡಬಡಿಸಿ ನಾನು ಎದ್ದು ನಿಂತೆ. ನನ್ನ ತೊಡೆಯ ಮೇಲಿದ್ದ ಮರಳಿ ಮಣ್ಣಿಗೆ ಪುಸ್ತಕ ಧೊಪ್ಪನೆ ಕೆಳಗೆ ಬಿತ್ತು. ನಾನೂ ಇದನ್ನು ಓದುತ್ತೇನೆಂದ ಮೇಷ್ಟ್ರು ಅದನ್ನು ತೆಗೆದಿಟ್ಟುಕೊಂಡರು. ಆ ಪುಸ್ತಕ ಇವತ್ತಿಗೂ ನನಗೆ ವಾಪಸ್‌ ಬರಲಿಲ್ಲ. ಆ ಚಿಕ್ಕ ವಯಸ್ಸಿನಲ್ಲಿ ಮತ್ತೆ ಮತ್ತೆ ಓದಿದ ‘ಮರಳಿ ಮಣ್ಣಿಗೆ’ ಕೃತಿ ಈ ಎಂಭತ್ತಾರನೆಯ ವಯಸ್ಸಿನಲ್ಲಿಯೂ ನನ್ನ ಸ್ಮೃತಿಯಲ್ಲಿ ಹಸಿರಾಗಿದೆ. ಕಾರಂತರನ್ನು ಕಣ್ಣಾರೆ ಕಾಣಬೇಕು ಎಂದು ನಾನು ಭಾರೀ ಆಸೆ ಪಡುತಿದ್ದೆ. ನಾನು ಹದಿಮೂರನೇ ವಯಸ್ಸಿಗೆ ಡಾ. ಚಂದ್ರಶೇಖರ್ ಅವರನ್ನು ಮದುವೆಯಾಗಿ ಹರಿಹರಕ್ಕೆ ಬಂದೆ. ಮುಂದೆ ಒಂದು ಸಂದರ್ಭದಲ್ಲಿ ಕಾರಂತರು ನಮ್ಮ ಹರಿಹರಕ್ಕೆ ಬಂದರು. ಅದಾಗಲೇ ಅವರು ನನ್ನ ಪತಿಯೊಡನೆ ಒಳ್ಳೆಯ ಸ್ನೇಹ ಹೊಂದಿದ್ದರು. ಅವರು ಬರುತ್ತಾರೆಂದು ಕೇಳಿ ನನ್ನ ಸಂಭ್ರಮ ಹೇಗಿತ್ತು ಎನ್ನಲಿ! ಮನೆಬಾಗಿಲಿಗೆ ತೋರಣ ಕಟ್ಟಿ, ರಂಗೋಲಿ ಹಾಕಿ, ಮಣೆ ಇಟ್ಟು , ಹಿತ್ತಾಳೆ ತಂಬಿಗೆಯನ್ನು ಥಳಥಳಿಸುವಂತೆ ತೊಳೆದು ನೀರುತುಂಬಿಸಿ ಇಟ್ಟಿದ್ದೆ. ನಮ್ಮಲ್ಲೇ ಅವರು ಉಳಿದುಕೊಂಡರು. ಹಿಂದಿನ ದಿನವೇ ಅವರಿಗಾಗಿ ಕಾಯಿ ಒಬ್ಬಟ್ಟು ಮಾಡಿದ್ದೆ. ಬೆಳಿಗ್ಗೆ ಕಾಫಿ, ಇಡ್ಲಿ, ಚಟ್ನಿ ಎಲ್ಲ ಮಾಡಿ ಬಡಿಸಿದ್ದಷ್ಟೇ ಅಲ್ಲ, ಅವರನ್ನು ಕಾಣಲು ಬಂದ ಮಂದಿಗೆಲ್ಲಾ ಒಬ್ಬಟ್ಟಿನ ಊಟ ತಿಂಡಿ ಉಪಚಾರ ಮಾಡಿದ ಅಮೂಲ್ಯ ಸಂತಸ ನನ್ನಲ್ಲಿ ಇಷ್ಟು ಕಾಲವಾದರೂ ಮಸುಕಾಗಿಯೇ ಇಲ್ಲ. ಅವತ್ತಿನ ಸಂಜೆಯ ಸಭೆಯಲ್ಲಿ ಅವರ ಬಗ್ಗೆ ನಾನು ಬರೆದ ಪುಟ್ಟ ಪುಸ್ತಕ ಅವರ ಹಸ್ತದಿಂದಲೇ ಬಿಡುಗಡೆಯಾಗುವ ಭಾಗ್ಯ ನನ್ನದಾಯಿತು. ಹರಿಹರಕ್ಕೆ ಬಂದ ಸಂದರ್ಭದಲ್ಲಿ ‘ಹರಿಹರೇಶ್ವರ ದೇವಸ್ಥಾನಕ್ಕೆ ಹೋಗಿಬರುವ ಪ್ರಸ್ತಾಪ ಮಾಡಿದಾಗ ಅವರು ಕೇಳಿದ ಪ್ರಶ್ನೆ ನನಗಂತೂ ವಿಪರೀತ ಅಚ್ಚರಿಯುಂಟು ಮಾಡಿತ್ತು. ‘ಇಷ್ಟೊತ್ತಿನೊಳಗೆ ದೇವರಿಗೆ ಅಲಂಕಾರ ಮಾಡಿರುತ್ತಾರಾ?’ –ಕೇಳಿದರು ಕಾರಂತರು. ‘ಹೌದು, ದೇವರಿಗೆ ಅಭಿಷೇಕ ಮಾಡಿ ಪಂಚೆ ಉಡಿಸಿ ಬೆಳ್ಳಿಯ ಕಿರೀಟ, ಹಸ್ತಗಳನ್ನೆಲ್ಲ ಇಟ್ಟು ಹೂವೇರಿಸಿರುತ್ತಾರೆ’ ಎಂದು ಸಹಜವಾಗಿ ನುಡಿದೆ. ‘ನಾನು ಶಿಲ್ಪವನ್ನು ಇದ್ದಹಾಗೆಯೇ ನೋಡಲು ಇಷ್ಟಪಡುತ್ತೇನೆ. ಅಲಂಕಾರ ಆಗಿದ್ದರೆ ಬೇಡ’ ಎಂದು ಬಿಟ್ಟರು! ತಮ್ಮ ಈ ಧೋರಣೆಯನ್ನು ಅವರು ಕೊನೆಯವರೆಗೂ ಕಾದುಕೊಂಡರಲ್ಲ! ಆದರೆ ಪತ್ನಿ ಲೀಲಮ್ಮನವರ ನಂಬಿಕೆಗಳಿಗೆ ಅವರು ಎಂದೂ ಅಡ್ಡಿಪಡಿಸಲಿಲ್ಲ. ಅದನ್ನು ಲೀಲಮ್ಮನವರೇ ನನ್ನ ಬಳಿ ಹೇಳಿದ್ದರು. ಕಾರಂತರ ಮನೆಗೊಮ್ಮೆ ಹೋಗಬೇಕು ಎಂದು ಬಹಳ ಹಂಬಲದಲ್ಲಿದ್ದೆ ನಾನು. ಅದು ಕೈಗೂಡಿರಲಿಲ್ಲ. ಮಂಗಳೂರಿನಲ್ಲಿ ಒಂದು ಕಾರ್ಯಕ್ರಮ ನಿಮಿತ್ತ ನಾನು ಬರಬೇಕಿತ್ತು. ಬಂದವಳು ನಾನು, ಕಾರ್ಯಕ್ರಮ ಮುಗಿದದ್ದೇ ಇನ್ನು ತಡಮಾಡುವ ಹಾಗಿಲ್ಲ ಅಂತ ಬಸ್ಸು ಹಿಡಿದು ಸಾಲಿಗ್ರಾಮಕ್ಕೆ ಹೋಗಿಯೇ ಬಿಟ್ಟೆ. ನಾನು ಹೋದ ಹೊತ್ತಿಗೆ ಕಾರಂತರು ಮನೆಯಲ್ಲಿಯೇ ಇದ್ದರು. ಮಹಡಿಯ ಮೇಲೆ ಏನೋ ಹೇಳಿ ಬರೆಸುತ್ತ ಇದ್ದರು. ಅವರನ್ನು ಮಾತಾಡಿಸಲು ಹೋಗಿ ಭಂಗ ತರಬಾರದು ಎಂದು ನಾನು ಸೀದಾ ಲೀಲಮ್ಮನವರ ಕೋಣೆಗೆ ಹೋದೆ. ಒಂದು ಗಂಟೆಯ ಕಾಲ ಅವರೊಡನೆ ಮಾತಾಡುತ್ತ ಕುಳಿತೆ. ಕಾರಂತರು ತಮ್ಮ ಕೆಲಸ ಮುಗಿಸಿ ಮಹಡಿಯಿಂದ ಇಳಿದು ಬಂದರು. ತುಸು ಹೊತ್ತು ನಾವು ಮಾತಾಡಿದೆವು. ಲೀಲಮ್ಮನೂ ಕಾರಂತರೂ ನಾನೂ ಒಟ್ಟಿಗೇ ಊಟ ಮಾಡಿದೆವು. ಊಟವಾಗಿ ಸ್ವಲ್ಪ ಹೊತ್ತಿಗೆ ನಾನು ಸಂಪ್ರದಾಯದಂತೆ ಇಬ್ಬರಿಗೂ ಹತ್ತಿಬಟ್ಟೆಯ ಉಡುಗೊರೆ, ಲೀಲಮ್ಮನವರಿಗೆ ಅರಸಿನ ಕುಂಕುಮ ನೀಡಿ, ಮರಳಿ ಹೊರಟೆ. ಆಗ ಕಾರಂತರು ನನ್ನ ಕೈಚೀಲವನ್ನು ‘ಇಲ್ಲಿ ಕೊಡಿ’ ಎಂದರು! ನನಗೋ ಒಮ್ಮೆ ಗಾಬರಿ! ಮತ್ತೆ ‘ಕೊಡಿ ಇಲ್ಲಿ!’ ಎಂದರು. ‘ಅಯ್ಯೊ ನನ್ನ ಚೀಲವನ್ನು ನಿಮ್ಮ ಕೈಯಲ್ಲಿ ಹಿಡಿಸಲಾರೆ! ಅದು ತಪ್ಪು’ ಎಂದೆ. ಅದಕ್ಕೆ ಅವರು ‘ತಂದೆಯನ್ನು ನೋಡಲು ಮಗಳು ಬಂದಾಗ ಮಗಳ ಚೀಲವನ್ನು ತಂದೆ ಕೈಯಲ್ಲಿ ಹಿಡಿಯುವುದು ತಪ್ಪೇ? ಕೊಡಿ ಇಲ್ಲಿ!’ ಎಂದರು. ಬಸ್ಸು ನಿಲ್ದಾಣದವರೆಗೂ ನನ್ನ ಚೀಲ ಹಿಡಿದುಕೊಂಡು ಜೊತೆಗೇ ಬಂದು, ನನ್ನನ್ನು ಬಸ್ಸು ಹತ್ತಿಸಿ ಚೀಲ ಬಸ್ಸಿನಲ್ಲಿಟ್ಟುಸದಾ ಕಾಡಿದ ಸರಸೋತಮ್ಮ, ಪಾರೋತಮ್ಮ ಇಳಿದರು. ಕಾರಂತರು ರಸ್ತೆ ಬದಿ ನಿಂತು ಕೈ ಬೀಸಿ ಬೀಳ್ಕೊಟ್ಟರು. ಈಗಲೂ ನೆನೆದಂತೆ ಕಣ್ಣು ಹನಿಗೂಡುತ್ತಿದೆ.

author- ಲಲಿತಮ್ಮ ಚಂದ್ರಶೇಖರ್

courtsey:prajavani.net

https://www.prajavani.net/artculture/article-features/sada-kadida-sarsothamma-671792.html

Leave a Reply