ಸಂಚಲನ ಸೃಷ್ಟಿಸಿರುವ ಲಿಯೋ ಟಾಲ್‌ಸ್ಟಾಯ್‌ನ ಪುಸ್ತಕ ಯುದ್ಧ ಮತ್ತು ಶಾಂತಿ

ಪ್ರಪಂಚದ ಮಹಾನ್‌ ಬರಹಗಾರರಲ್ಲಿ ಒಬ್ಬನಾದ ಲಿಯೋ ಟಾಲ್‍ಸ್ಟಾಯ್ ಬರೆದ ‘War and Peace’ (ಯುದ್ಧ ಮತ್ತು ಶಾಂತಿ) ಕಾದಂಬರಿಯು ಇತ್ತೀಚೆಗೆ ಭಾರತದಲ್ಲಿ – ಅದೂ ಸಾಮಾಜಿಕ ತಾಣಗಳಲ್ಲಿ ಬಹಳ ಚರ್ಚೆಗೆ ಒಳಗಾಗಿದೆ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ರಾಜದ್ರೋಹ ಇತ್ಯಾದಿ ಗಂಭೀರ ಆಪಾದನೆಗೆ ಒಳಗಾಗಿರುವ ವ್ಯಕ್ತಿಯೊಬ್ಬರ ವಿಚಾರಣೆ ಕಾಲಕ್ಕೆ ನಡೆದ ಬೆಳವಣಿಗೆಗಳು ಈ ಚರ್ಚೆಗೆ ಕಾರಣವಾಗಿವೆ. ಬಂಧಿತ ವ್ಯಕ್ತಿ ಅಪರಾಧಿಯೆನ್ನುವ ಸಾಕ್ಷ್ಯವಾಗಿ ಅವರ ಮನೆಯಲ್ಲಿ ಮಹಜರ್‌ ಆದ ಪುಸ್ತಕಗಳ ಪಟ್ಟಿಯ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಅವರ ಮನೆಯಲ್ಲಿ ಸಿಕ್ಕ ಟಾಲ್‍ಸ್ಟಾಯ್‍ನ ಈ ಕಾದಂಬರಿಯ ಪ್ರಸ್ತಾಪ ಬಂತು. ಆಗ ನ್ಯಾಯಾಧೀಶರು ‘ಇನ್ನಾವುದೋ ದೇಶದಲ್ಲಿ ನಡೆದ ಯುದ್ಧದ ಬಗೆಗಿನ ಪುಸ್ತಕವನ್ನು ನೀವು ಯಾಕೆ ಇಟ್ಟುಕೊಂಡಿದ್ದೀರಿ’ ಎಂದು ಕೇಳಿದರೆಂದು ವರದಿಯಾಗಿದೆ. ಆನಂತರ ಆ ನ್ಯಾಯಾಧೀಶರು ಪ್ರಶ್ನೆ ಕೇಳಿದ್ದು ‘War and Peace in Junglemahal’ ಕೃತಿಯ ಬಗ್ಗೆ ಎಂದು ಸ್ಪಷ್ಟೀಕರಣ ನೀಡಿರುವುದೂ ವರದಿಯಾಗಿದೆ. ಆದರೆ, ‘ಜಂಗಲ್ ಮಹಲ್’ ಎನ್ನುವ ಅಪ್ಪಟ ಭಾರತೀಯ ಪದವಿರುವಾಗ ‘ಇನ್ನಾವುದೋ ದೇಶದಲ್ಲಿ’ ಎಂದು ನ್ಯಾಯಾಧೀಶರು ಏಕೆ ಕೇಳಿದರು? ಟಾಲ್‍ಸ್ಟಾಯ್‍ನ ಕಾದಂಬರಿಯಲ್ಲಿ ರಷ್ಯಾದಲ್ಲಿ ನೆಪೋಲಿಯನ್‍ನ ಸೈನ್ಯದ ಜೊತೆಗೆ ನಡೆದ ಯುದ್ಧದ ವರ್ಣನೆ ಇದೆ. ಹಾಗೂ ರಷ್ಯಾದ ಚರಿತ್ರೆಯ ಈ ವಿದ್ಯಮಾನವು ಕಾದಂಬರಿಯ ಕೇಂದ್ರವೂ ಆಗಿದೆ. ಹೀಗಾಗಿ ಕೋರ್ಟಿನಲ್ಲಿ ಮೊದಲು ಪ್ರಸ್ತಾಪವಾದ ಕೃತಿ ಟಾಲ್‍ಸ್ಟಾಯ್‍ನ ‘War and Peace’ ಆಗಿತ್ತು ಎಂದು ಕೆಲವರು ವಾದಿಸುತ್ತಿದ್ದಾರೆ. ಇದು ಮುಖ್ಯ ವಿಷಯವಲ್ಲ. ಇಪ್ಪತ್ತೊಂದನೆಯ ಶತಮಾನದ ‘ವಿಶ್ವಗುರು’ವೆಂದು ಕೆಲವರು ಭಾವಿಸುವ ಭಾರತದಲ್ಲಿ ಬುದ್ಧಿಜೀವಿಗಳನ್ನು, ಚಳವಳಿಗಾರರನ್ನು ಹಾಗೂ ಕ್ರಿಯಾಶೀಲರನ್ನು ಬಂಧಿಸುವಾಗ ಅವರ ಮನೆಗಳಲ್ಲಿದ್ದ ಪುಸ್ತಕಗಳ ಪ್ರಸ್ತಾಪವು ಯಾವಾಗಲೂ ಬರುತ್ತದೆ. ಕಾರ್ಲ್‌ಮಾರ್ಕ್ಸ್‌, ಲೆನಿನ್ ಹಾಗೂ ಮಾವೋ ಅವರ ಕೃತಿಗಳು ಸಿಕ್ಕರಂತೂ ಪೊಲೀಸರು ತಾವು ಸೆರೆ ಹಿಡಿಯಲು ಬಂದವರಿಗೆ ಖಂಡಿತ ಗಲ್ಲಿನ ಶಿಕ್ಷೆಯಾಗಲು ಬೇಕಾದ ಸಾಕ್ಷ್ಯವು ಸಿಕ್ಕಿತು ಎನ್ನುವಂತೆ ಬೀಗುತ್ತಿರುವ ಫೋಟೊಗಳು ಪ್ರಕಟವಾಗುತ್ತಲೇ ಇರುತ್ತವೆ.ಮೇಲೆ ಪ್ರಸ್ತಾಪಿಸಲಾದ ಪುಸ್ತಕಗಳನ್ನು ನಿಷೇಧಿಸಲಾಗಿದೆಯೇ ಎಂದರೆ ‘ಇಲ್ಲ’ ಎಂಬ ಉತ್ತರ ಬರುತ್ತದೆ. ನಮ್ಮ ರಾಜಕೀಯ ನಾಯಕರು ಹಾಗೂ ಪೊಲೀಸರು ಗಟ್ಟಿಯಾಗಿ ನಂಬಿರುವುದೆಂದರೆ ಎಲ್ಲಾ ಬಗೆಯ ರಾಜದ್ರೋಹಗಳಿಗೂ ಪುಸ್ತಕಗಳೇ ಕಾರಣವೆಂದು. ಸಮಕಾಲೀನ ಜಗತ್ತಿನಲ್ಲಿ ಪುಸ್ತಕಗಳನ್ನು ಇಷ್ಟು ಗಂಭೀರವಾಗಿ ಪರಿಗಣಿಸುವವರು ಇವರು ಮಾತ್ರ ಎಂದು ಕಾಣುತ್ತದೆ.ಅಹಿಂಸೆ ಪ್ರತಿಪಾದನೆಗಾಗಿ ಮತ್ತು ಯುದ್ಧ ವಿರೋಧಕ್ಕಾಗಿ ತನ್ನ ಜೀವನದ ಅಮೂಲ್ಯ ವರ್ಷಗಳನ್ನೇ ಮುಡಿಪಾಗಿಟ್ಟ ಟಾಲ್‍ಸ್ಟಾಯ್‍ನ ಮಹಾ ಕಾದಂಬರಿಯು ರಾಜಕೀಯ ನಾಯಕರು ಹಾಗೂ ಪೊಲೀಸರ ಈ ‘ಅಗಾಧವಾದ ಪುಸ್ತಕ ಪ್ರೇಮ’ದಿಂದಾಗಿ ಸಾಮಾಜಿಕ ಕಾರ್ಯಕರ್ತರನ್ನು ಉಗ್ರರು ಎಂದು ಸಾಬೀತುಮಾಡಲು ಸಾಕ್ಷ್ಯವಾಗಿ ಕಂಡಿದೆ. ಭಾರತದ ಇಂದಿನ ಸ್ಥಿತಿಯಲ್ಲಿ ಟಾಲ್‍ಸ್ಟಾಯ್‍ ಗಾಂಧೀಜಿಯ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿರುವ ವ್ಯಕ್ತಿಯೆನ್ನುವುದೂ ಅವನು ಒಬ್ಬ ರಾಜಕೀಯ ಖಳನೇ ಆಗಿರಬೇಕೆಂದು ನಮ್ಮ ಪೊಲೀಸರು ಗುಮಾನಿ ಪಡಲು ಸಮರ್ಥನೆಯಾಗಬಹುದು. ಅಲ್ಲದೆ, ಅಯ್ಯೋ ದೇವರೆ! ಜವಾಹರಲಾಲ್ ನೆಹರು ‘ಟಾಲ್‍ಸ್ಟಾಯ್‍ನ ಮಹಾನತೆಯ ಒಂದು ಕಿಂಚಿತ್‍ ಅಂಶದ ಪ್ರಭಾವವು ನಮ್ಮ ಮೇಲಾದರೂ ಸಾಕು, ನಾವೂ ಒಂದಿಷ್ಟು ಎತ್ತರವನ್ನು ತಲುಪುತ್ತೇವೆ’ ಎಂದುಬಿಟ್ಟಿದ್ದಾರೆ! ಹೀಗಾಗಿ ಸದ್ಯದ ‘ರಾಜಕೀಯ ಚಿಂತನೆ’ಯ ಪ್ರಕಾರ ಗಾಂಧಿ ಮತ್ತು ವಿಶೇಷವಾಗಿ ನೆಹರು ಅವರನ್ನು ಪ್ರಭಾವಿಸಿದ ವ್ಯಕ್ತಿ ಮಹಾಕೇಡಿಯೇ ಆಗಿರಬೇಕು ಮತ್ತು ಅವನು ಬರೆದ ಪುಸ್ತಕವನ್ನು ಇಟ್ಟುಕೊಂಡಿರುವವನು ಅಪರಾಧಿಯೇ ಆಗಿರಬೇಕು. ಕೆಲವು ಮಾಧ್ಯಮಗಳು ಹೇಳುವಂತೆ ನ್ಯಾಯಾಧೀಶರು (ಮತ್ತು ಪೊಲೀಸರು) ಪ್ರಸ್ತಾಪ ಮಾಡಿದ್ದು ಬಿಸ್ವಾಸ್‍ ರಾಯ್ ಬರೆದ War and Peace in Junglemahal ಕೃತಿ ಆಗಿದ್ದರೆ ಆರೋಪಿ ಬಚಾವಾಗುವ ಒಂದು ಚಾನ್ಸ್‍ ಇದೆ. ಅದು ಟಾಲ್‍ಸ್ಟಾಯ್‍ನ ಕೃತಿ ಆಗಿದ್ದರೆ ಬೇಲ್ ಸಿಕ್ಕುವುದಿಲ್ಲ! ವಿಚಿತ್ರವೇನೆಂದರೆ ರಷ್ಯಾದ ಸರಕಾರವು ಕೂಡ ಟಾಲ್‍ಸ್ಟಾಯ್‍ನ ಜೀವನದ ಕೊನೆಯ ದಿನಗಳಲ್ಲಿ ಅವನನ್ನು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೇಡಿಗನೆಂದೇ ನೋಡಿತು. ರಷ್ಯಾದ ಶ್ರೀಮಂತ ಮನೆತನವೊಂದರಲ್ಲಿ ಹುಟ್ಟಿ, ತನ್ನ ಯೌವನವನ್ನು ದುಂದುಗಾರಿಕೆ ವ್ಯಸನಗಳಲ್ಲಿ ಕಳೆದು, ಯುದ್ಧದಲ್ಲಿ ಭಾಗವಹಿಸಿ, ತದನಂತರ ಶ್ರೇಷ್ಠ ಬರಹಗಾರನೆಂದು ಮನ್ನಣೆ ಪಡೆದು War and Peace ಮತ್ತು ಅನಾ ಕೇರನೀನಾ ಕಾದಂಬರಿಗಳನ್ನು ಬರೆದು ಅಪಾರ ಖ್ಯಾತಿಯನ್ನು ಪಡೆದಿದ್ದ ಲಿಯೋ ಟಾಲ್‍ಸ್ಟಾಯ್‍, ಐವತ್ತೊಂದನೆಯ ವರ್ಷದಲ್ಲಿ, ತನ್ನ ಬಾಳಿಗೆ, ಬರಹಕ್ಕೆ ಅರ್ಥವೇ ಇಲ್ಲವೆನ್ನುವ ಅತ್ಯಂತ ಉದ್ವೇಗ ಹಾಗೂ ತಲ್ಲಣದ ಸ್ಥಿತಿಗೆ ತಲುಪಿದ್ದ. ಆ ಸಂದರ್ಭದಲ್ಲಿ ಅವನು ಬರೆದ ‘ನಿವೇದನೆ’ (A Confession) ಜಗತ್ತೇ ಕಂಡರಿಯದ ಸೂಕ್ಷ್ಮ ಪ್ರಜ್ಞೆಯ ಮನುಷ್ಯನ ಬಾಳ್ವೆಯೇ ಅಸಂಗತ, ಅರ್ಥಹೀನವೆಂದು ತೊಳಲುವ, ಇಂದಿಗೂ ಬೆಚ್ಚಿಬೀಳಿಸುವ ಕೃತಿಯಾಗಿದೆ. ವಿಜ್ಞಾನ, ತತ್ವಶಾಸ್ತ್ರಗಳಲ್ಲದೆ ಅಜ್ಞಾನ, ಪಲಾಯನವಾದ ಯಾವುದರಲ್ಲೂ ಪರಿಹಾರವಿಲ್ಲವೆಂದು ಕಂಡುಕೊಂಡ ಟಾಲ್‍ಸ್ಟಾಯ್‍ ತಾನು ನೆಚ್ಚಿಕೊಂಡ ತರ್ಕ, rationality ಇವುಗಳ ಲವಲೇಶವೂ ಇಲ್ಲದ ಅನಕ್ಷರಸ್ಥ ಸಾಮಾನ್ಯರು (ಮುಖ್ಯವಾಗಿ ಅವನು ಬಲ್ಲ ರೈತರು) ನಂಬಿ ಬದುಕುವ ರೀತಿಯಲ್ಲಿಯೇ ಪರಿಹಾರವನ್ನು ಕಾಣುತ್ತಾನೆ. ಇದರ ಜೊತೆಗೇ ತನ್ನ ಶ್ರೀಮಂತಿಕೆ, ಅಧಿಕಾರ, ಜ್ಞಾನದ ಅಹಂಕಾರ ಎಲ್ಲವನ್ನೂ ತೊರೆದು, ಐಷಾರಾಮಿ ಶ್ರೀಮಂತ ವರ್ಗದ ಕೃತಿೃಮತೆಯನ್ನು ತ್ಯಜಿಸಿ ಹೊಸದೊಂದು ಹುಡುಕಾಟದಲ್ಲಿ ತೊಡಗುತ್ತಾನೆ. ಬದುಕಿನ ಹಾಗೂ ತನ್ನ ವ್ಯಕ್ತಿತ್ವದ ವಿರೋಧಾಭಾಸಗಳನ್ನು ಮೀರುವುದು ಟಾಲ್‍ಸ್ಟಾಯ್‍ಗೆ ಸಾಧ್ಯವಾಗಲಿಲ್ಲ. ತನ್ನ 82ರ ವಯಸ್ಸಿನಲ್ಲಿ ಮನೆಯನ್ನು ತ್ಯಜಿಸಿ ಒಂದು ಸಣ್ಣ ರೇಲ್ವೆ ಸ್ಟೇಶನ್‍ನಲ್ಲಿ ಮರಣ ಹೊಂದಿದ. ಆದರೆ ಅಷ್ಟರೊಳಗೆ ಧರ್ಮ, ಪ್ರಭುತ್ವ ಹಾಗೂ ರಾಜಕೀಯದ ಬಗ್ಗೆ, ಕಲೆಯ ಬಗ್ಗೆ ಅತ್ಯಂತ ತೀವ್ರಗಾಮಿ ವಿಚಾರಗಳನ್ನು ಪ್ರಬಂಧಗಳಲ್ಲಿ, ಕತೆಗಳಲ್ಲಿ ಬರೆದ. ಅವನಿಗೆ ರಷ್ಯಾದ ಸಾಂಪ್ರದಾಯಿಕ ಚರ್ಚ್‌ ಕೂಡ ಅಧಿಕಾರ ಕೇಂದ್ರವಾಗಿ, ಪ್ರಭುತ್ವದ ಆಳಾಗಿ ಕಂಡು ಅದನ್ನು ಉಗ್ರವಾಗಿ ಟೀಕಿಸಿದ. ಹೀಗಾಗಿ ಅವನನ್ನು ರಷ್ಯಾದ ಚರ್ಚ್‌ ಧರ್ಮಬಾಹಿರನೆಂದು ಘೋಷಿಸಿತು. ಅವನು ತಾನೇ ಈ ಧರ್ಮಸಂಸ್ಥೆಯನ್ನು ಬಹಿಷ್ಕರಿಸಿದ್ದೇನೆ ಎಂದು ಘೋಷಿಸಿದ! ಅವನು ತೀರಿಹೋದಾಗ ಧಾರ್ಮಿಕ ಸಂಸ್ಕಾರಗಳನ್ನು ಮಾಡಬಾರದೆಂದು ಚರ್ಚ್‌ ನಿರ್ದೇಶಿಸಿತು. ವಿಚಿತ್ರವೆಂದರೆ ಟಾಲ್‍ಸ್ಟಾಯ್‍ನ ವೈಯಕ್ತಿಕ ಧರ್ಮ ಹಾಗೂ ಅವನ ನಂಬಿಕೆಗಳಾದ ‘bread labour’ ‘faith’ ಇವುಗಳನ್ನು ಅವನು ಕ್ರೈಸ್ತನಿಂದ ಪಡೆದುಕೊಂಡಿದ್ದ; ಬೈಬಲ್ಲಿನಿಂದ ಕಲಿತಿದ್ದ. ಬಂಡವಾಳಶಾಹಿಯು ಮನುಷ್ಯನ ಶತ್ರುವೆಂದು ಅದನ್ನು ಬೆಂಬಲಿಸುವ ಪ್ರಭುತ್ವಗಳು ಅನೈತಿಕವೆಂದು ಟೀಕಿಸಿದ. ಹೀಗಾಗಿ ಆ ಕಾಲದ ಸಂಘರ್ಷಗಳು ಹಾಗೂ ಕ್ರಾಂತಿಕಾರಿಗಳಿಂದ ಅಭದ್ರ ಮನಸ್ಥಿತಿಯಲ್ಲಿದ್ದ ರಷ್ಯಾದ ಪ್ರಭುತ್ವವು ಟಾಲ್‍ಸ್ಟಾಯ್‍ನನ್ನು ದೇಶದ್ರೋಹಿಯಾಗಿ ಕಂಡಿತು. ಮರಣದ ನಂತರ ಅವನ ಶವಸಂಸ್ಕಾರಕ್ಕೆ ಜನರು ಹೋಗದಂತೆ ತಡೆಯಿತು. ಆತನ ಕೊನೆಯ ದಿನಗಳಲ್ಲಿ ಮತ್ತು ಶವ ಸಂಸ್ಕಾರಕ್ಕೆ ಬಂದವರು ಬಹುಪಾಲು ವಿದ್ಯಾರ್ಥಿಗಳು ಹಾಗೂ ರೈತರು. ಅಂತೂ ಜಗತ್ತಿನ ಅತ್ಯಂತ ಪ್ರತಿಭಾವಂತ ಬರಹಗಾರನನ್ನು ಪ್ರಭುತ್ವ ಹಾಗೂ ಧಾರ್ಮಿಕ ಸಂಸ್ಥೆಗಳು ನಾಗರಿಕ ಜಗತ್ತಿಗೆ ಒಂದು ಅಪಾಯವೆನ್ನುವ ಹಾಗೆ ಕಂಡವು ಮತ್ತು ಅಮಾನವೀಯವಾಗಿ ಅವನ ಶವ ಸಂಸ್ಕಾರಕ್ಕೆ ಅಡ್ಡಿಯಾದವು. ಟಾಲ್‍ಸ್ಟಾಯ್‍ನ ಬಹುಮುಖ್ಯ ಕಲ್ಪನೆಯೆಂದರೆ ಶ್ರಮದ ಕುರಿತು. ಯಾರು ಶ್ರಮಪಡುವುದಿಲ್ಲವೋ ಅವರಿಗೆ ಆಹಾರವಿರಕೂಡದು ಎಂದು ಹೇಳಿದ ಟಾಲ್‍ಸ್ಟಾಯ್‍ನ ಪ್ರಭಾವದಿಂದಾಗಿ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ತಾವು ಸ್ಥಾಪಿಸಿದ ಎರಡನೆಯ ಆಶ್ರಮಕ್ಕೆ ಟಾಲ್‍ಸ್ಟಾಯ್ ಫಾರ್ಮ್‌ ಎಂದು ಹೆಸರಿಟ್ಟರು. ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಟಾಲ್‍ಸ್ಟಾಯ್‍ ಮನಃಪರಿವರ್ತನೆಯಾದ ದಿನದಿಂದ ಕೊನೆವರೆಗೂ ರೈತರ ಉಡುಪನ್ನೇ ಧರಿಸಿದ. ತನ್ನ ಚಪ್ಪಲಿಗಳನ್ನು ತಾನೇ ಹೊಲಿದುಕೊಂಡ. ಅವನ ಭೂಮಿಯನ್ನು ನೋಡಿಕೊಳ್ಳುತ್ತಿದ್ದ ಸರ್ಫ್‌ಗಳಿಗೆ (serfs) (ಜೀತದಾಳಿಗಿಂತ ಸ್ವಲ್ಪ ಭಿನ್ನರಾದ ರೈತರು) ತನ್ನ ಭೂಮಿಯನ್ನು ಹಂಚಲು ಪ್ರಯತ್ನಿಸಿದ. ತಾನು ಬೆಳೆದ ರಷ್ಯಾದ ಶ್ರೀಮಂತ ವರ್ಗವನ್ನು ಅತ್ಯಂತ ವಸ್ತುನಿಷ್ಠವಾಗಿ ವಿಮರ್ಶಿಸಿದ. ತಾತ್ವಿಕವಾಗಿ ಟಾಲ್‍ಸ್ಟಾಯ್‍ ಯಾವುದೇ ಅಧಿಕಾರ ಕೇಂದ್ರವನ್ನು, ಪ್ರಭುತ್ವವನ್ನು ಒಪ್ಪುತ್ತಿರಲಿಲ್ಲ. ಇದೆಲ್ಲದರಲ್ಲಿ ಅವನ ಚಿಂತನೆಯ ನೆಲೆಯು ತೀವ್ರವಾದ ನೈತಿಕ ವಾದವಾಗಿತ್ತು. ರಾಜಕೀಯ ಸಿದ್ಧಾಂತಗಳಿಗಿಂತ ಮನುಷ್ಯರ ಮನಸ್ಸುಗಳ ಪರಿವರ್ತನೆಯು ಮುಖ್ಯವೆಂದು ನಂಬಿದ ಟಾಲ್‍ಸ್ಟಾಯ್ ‘ಎಲ್ಲರೂ ಮನುಜ ಕುಲವನ್ನೇ ತಿದ್ದಲು ಹೊರಡುತ್ತಾರೆ; ಆದರೆ ತಮ್ಮನ್ನು ತಿದ್ದಿಕೊಳ್ಳುವುದಿಲ್ಲ’ವೆಂದು ಬರೆದ. War and Peace ಮಹಾಕಾದಂಬರಿ ‘ಇತಿಹಾಸವು ದೊರೆಗಳಿಂದ, ನಾಯಕರಿಂದ ಬದಲಾಗುವುದಿಲ್ಲ, ಯುದ್ಧಗಳನ್ನು ಸೇನಾನಿಗಳಿಂದ ಗೆಲ್ಲಲಾಗುವುದಿಲ್ಲ’ವೆನ್ನುವ ಟಾಲ್‌ಸ್ಟಾಯ್‌ ನಂಬಿಕೆಯನ್ನು ವಿಶಾಲವಾದ ಭಿತ್ತಿಯಲ್ಲಿ ಸಾವಿರ ಪುಟಗಳಲ್ಲಿ, ನೂರಾರು ಪಾತ್ರಗಳ ಮೂಲಕ ಪ್ರತಿಪಾದಿಸುತ್ತದೆ. ತನ್ನ ವೈಚಾರಿಕ ಬರಹಗಳಲ್ಲಿ ಮಹಾ ಅಸಹನೆಯ ಪಾದ್ರಿಯ ಹಾಗೆ, ಹಟಮಾರಿ ಸಿದ್ಧಾಂತಿಯ ಹಾಗೆ ಬರೆಯುವ ಆತ, ತನ್ನ ಕಾದಂಬರಿಗಳ ಕಥನಗಳಲ್ಲಿ ಇವನ್ನೆಲ್ಲಾ ಮೀರಿದ ಅಪ್ರತಿಮ ಕಲೆಗಾರ. ಇದು ಬರಹವೇ ಅಲ್ಲ, ಇದು ವಾಸ್ತವವೇ ಎಂದು ವಿಮರ್ಶಕರು ಕೈಚೆಲ್ಲುವಂತೆ ಮಾಡುವ ಮಾಂತ್ರಿಕ ಶಕ್ತಿ ಅವನ ಬರಹಕ್ಕಿದೆ. ಅವನ ವಿಚಾರಗಳು ನಂಬಿಕೆಗಳು ಸಶರೀರವಾಗಿ ಅವತರಿಸುವ ಅನುಭವಗಳ ಮೂಲಕ ಒಂದುಕಾಣ್ಕೆಯ ಭಾಗವಾಗಿಬಿಡುತ್ತವೆ. ಅವನು ಸೃಷ್ಟಿಸಿದ ಪಾತ್ರಗಳು ಹಲವು ಜನ್ಮಗಳಿಂದ ನಮ್ಮ ಆತ್ಮೀಯರ ಹಾಗೆ ನಮ್ಮ ಎಚ್ಚರದ ಭಾಗಗಳಾಗಿ ಬಿಡುತ್ತವೆ.ಯುವಕನಾಗಿದ್ದಾಗ ಯುದ್ಧದಲ್ಲಿ ಭಾಗವಹಿಸಿದ ಟಾಲ್‍ಸ್ಟಾಯ್‍ಗೆ ಯುದ್ಧವು ಅಸಂಗತ ಹಿಂಸೆಯಾಗಿ ಕಂಡಿತ್ತು. ಕುರಿಗಳನ್ನು ಕಸಾಯಿಖಾನೆಯಲ್ಲಿ ಕೊಂದಂತೆ ಯುವಕರನ್ನು ಯುದ್ಧದಲ್ಲಿ ಕೊಲ್ಲಲಾಗುತ್ತದೆ ಎಂದು ಬರೆದಿದ್ದ. ಜಗತ್ತಿನ ಯುದ್ಧ ವಿರೋಧಿ ಚಿಂತಕರಲ್ಲಿ ಪ್ರಮುಖನಾದ ಅವನ ಈ ಮಾತುಗಳು ಪೌರುಷದ ಕುರುಡು ಉನ್ಮಾದದಲ್ಲಿ ಯುದ್ಧವನ್ನು ಆಹ್ವಾನಿಸುವವರು ಮನನ ಮಾಡಬೇಕಿದೆ ‘ಯುದ್ಧವು ಅದೆಷ್ಟು ಅನ್ಯಾಯದ್ದು ಮತ್ತು ಅಸಹ್ಯವೆಂದರೆ ಯುದ್ಧ ಮಾಡುವವರು ತಮ್ಮೊಳಗಿನ ನೈತಿಕ ಪ್ರಜ್ಞೆಯ ದನಿಯನ್ನು ಮೊದಲು ಹತ್ತಿಕ್ಕಬೇಕಾಗುತ್ತದೆ. ಯುದ್ಧವು ಅದೆಂಥ ಭೀಕರ ಸಂಗತಿಯೆಂದರೆ ಯಾವ ವ್ಯಕ್ತಿಗೂ, ಅದರಲ್ಲೂ ಯಾವ ಕ್ರಿಶ್ಚಿಯನ್ ವ್ಯಕ್ತಿಗೂ ಯುದ್ಧವನ್ನು ಆರಂಭಿಸುವ ಜವಾಬ್ದಾರಿ ಹೊರುವ ಹಕ್ಕು ಇಲ್ಲ‌’‘ಇಡೀ ಚರಿತ್ರೆಯಲ್ಲಿ ಸರಕಾರಗಳೇ ಕುಯುಕ್ತಿಯಿಂದ ಮಾಡದೇ ಇದ್ದ ಒಂದು ಯುದ್ಧವೂ ನಡೆದಿಲ್ಲ. ಸರಕಾರಗಳು ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಹೀಗೆ ಮಾಡುತ್ತವೆ. ಏಕೆಂದರೆ ಯುದ್ಧದಲ್ಲಿ ಗೆದ್ದರೂ ಜನರಿಗೆ ಯುದ್ಧವು ವಿನಾಶಕಾರಿಯೇ ಆಗಿರುತ್ತದೆ. ಸರಕಾರಗಳು ಜನರಿಗೆ ಇನ್ನೊಂದು ದೇಶವು ಆಕ್ರಮಣ ಮಾಡುವ ಅಪಾಯವಿದೆಯೆಂದು ಅಥವಾ ಅವರೊಳಗೇ ಇರುವ ಶತ್ರುಗಳಿಂದ ಅಪಾಯವಿದೆಯೆಂದು ನಂಬಿಕೆ ಹುಟ್ಟಿಸುತ್ತವೆ. ಹಾಗೂ ಈ ಅಪಾಯದಿಂದ ಪಾರಾಗಲು ಇರುವ ಒಂದೇ ಉಪಾಯವೆಂದರೆ ಜನರು ತಮ್ಮ ಸರಕಾರಕ್ಕೆ ಗುಲಾಮರಂತೆ ವಿಧೇಯರಾಗಿರಬೇಕೆಂದು ನಂಬಿಸುತ್ತವೆ.’ ‘ಇದು ಕ್ರಾಂತಿ ಹಾಗೂ ಸರ್ವಾಧಿಕಾರಿ ಪ್ರಭುತ್ವದ ಸಂದರ್ಭಗಳಲ್ಲಿ ಪ್ರಮುಖವಾಗಿ ಕಂಡು ಬರುತ್ತದೆ. ಆದರೆ ಅದು ಯಾವಾಗಲೂ ಎಲ್ಲೆಲ್ಲಿ ಪ್ರಭುತ್ವದ ಅಧಿಕಾರವಿರುತ್ತದೆಯೋ ಅಲ್ಲಿ ಇದ್ದೇ ಇರುತ್ತದೆ. ಪ್ರತಿಯೊಂದು ಸರಕಾರವೂ ತನ್ನ ಅಸ್ತಿತ್ವವನ್ನು ವಿವರಿಸಲು ಮತ್ತು ತನ್ನ ಹಿಂಸಾತ್ಮಕ ಕ್ರಿಯೆಗಳನ್ನು ಸಮರ್ಥಿಸಲು ಬಳಸುವ ವಾದವೆಂದರೆ ತಾನು ಇರದಿದ್ದರೆ ಪರಿಸ್ಥಿತಿಯು ಇನ್ನೂ ಕಷ್ಟಕರವಾಗಿರುತ್ತಿತ್ತು ಎಂದು’.

author”: “ರಾಜೇಂದ್ರ ಚೆನ್ನಿ

courtsey:prajavani.net

https://www.prajavani.net/artculture/book-review/leo-talstoy-war-and-peace-662800.html

Leave a Reply