ಶಿಕಾರಿ ಕಥೆ- ನರಭಕ್ಷಕ ಬಲು ರೋಮಾಂಚಕ

ಹೊಳಲ್ಕೆರೆಯ ನರಭಕ್ಷಕ ಮತ್ತು ಇತರ ಕೆನೆತ್‌ ಆ್ಯಂಡರ್ಸನ್‌ ಕತೆಗಳು ಕನ್ನಡಕ್ಕೆ ಸಾಕ್ಷಿ ಪ್ರ: ಆಕೃತಿ ಪುಸ್ತಕ, ಬೆಂಗಳೂರು ದೂ: 080– 23409479 ನರಭಕ್ಷಕ ಹುಲಿ, ಚಿರತೆಗಳನ್ನು ಶಿಕಾರಿ ಮಾಡಿದ ಕೆನೆತ್‌ ಆ್ಯಂಡರ್ಸನ್‌ನರೋಚಕ ಕಥೆಗಳನ್ನು ಓದುತ್ತಾ ಹೋದಂತೆ ಮೈರೋಮಾಂಚನವಾಗುತ್ತದೆ. ಹಾಗೆಯೇ ಕಾಡು ಅಲೆಯುವ ಆತನ ಸಾಹಸ, ಬರವಣಿಗೆಯಲ್ಲಿನ ಚೆಲುವು, ಹಾಸ್ಯ ಮತ್ತು ಜೀವಂತಿಕೆ ಓದಿನ ಆಹ್ಲಾದವನ್ನು ಹೆಚ್ಚಿಸುತ್ತದೆ. ಕೆನೆತ್‌ ಆ್ಯಂಡರ್ಸನ್‌ ಅವರ ಅತ್ಯುತ್ತಮ ಕಥೆಗಳಲ್ಲಿ ಕೆಲವನ್ನು ಲೇಖಕರಾದ ಸಾಕ್ಷಿ 13 ವರ್ಷಗಳ ಹಿಂದೆ ಅನುವಾದಿಸಿದ್ದರಂತೆ. ಈಗ ಅವುಗಳನ್ನು ಕೃತಿ ರೂಪದಲ್ಲಿ ಹೊರತರಲಾಗಿದೆ. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಕಾಡಿನ ಕಥೆಗಳು’ ಸರಣಿಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಕೆನೆತ್‌ ಆ್ಯಂಡರ್ಸನ್‌ನ ಮೂಲ ಕೃತಿಗೆ ಸಾಧ್ಯವಾದಷ್ಟು ಹತ್ತಿರವಾಗುವಂತೆ ಲೇಖಕಿ ಅನುವಾದಿಸಿದ್ದಾರೆ. ನರಭಕ್ಷಕನ ಕಥೆ, ಮುದಿಯೂರಿನ ದೈತ್ಯ ಚಿರತೆ, ಸಂಗಮದ ನರಭಕ್ಷಕ ಚಿರತೆ, ಗೆರಹಟ್ಟಿಯ ವಿಚಿತ್ರ ನರಭಕ್ಷಕ ಹೀಗೆ ಒಟ್ಟು ಹನ್ನೊಂದು ಕಥೆಗಳು ಈ ಕೃತಿಯಲ್ಲಿವೆ. ಒಂದಕ್ಕಿಂತ ಒಂದು ರೋಚಕವಾಗಿವೆ. ಇವು ಕಾಲ್ಪನಿಕ ಕಥೆಗಳಲ್ಲ; ಒಂದು ಕಾಲದಲ್ಲಿ ಮನುಷ್ಯರನ್ನು ಕಾಡಿದ, ಮನುಷ್ಯನಿಗೆ ಸವಾಲೊಡ್ಡಿದ ನರಭಕ್ಷಕಗಳನ್ನು ಆತ ನಿವಾರಿಸಿದ ಶಿಕಾರಿಯ ಅನುಭವಗಳ ಸಾರ ಸಂಗ್ರಹ ಇದು ಎನ್ನಬಹುದೇನೊ. ಜನ–ಜಾನುವಾರುಗಳನ್ನು, ಶಿಕಾರಿಗೆ ಹೋದವರನ್ನೂ ಶಿಕಾರಿ ಮಾಡಿದ್ದ ಹುಲಿಯನ್ನು ಯೋಗಿ ಬೆಟ್ಟದಲ್ಲಿ ಶಿಕಾರಿ ಮಾಡಿದ ಕೆನೆತ್‌ನ ರೋಚಕ ಅನುಭವವನ್ನು ‘ಹೊಳಲ್ಕೆರೆಯ ನರಭಕ್ಷಕ’ ಕಥೆಯಲ್ಲಿ ಓದುವಾಗ ಮೈಜುಮ್ಮೆನ್ನುತ್ತದೆ. ಲೇಖಕರು, ಬೆಂಗಳೂರಿನಲ್ಲಿ ನೆಲೆಸಿದ್ದ ಕೆನೆತ್‌ ಮಗ ಡೊನಾಲ್ಡ್‌ ಆ್ಯಂಡರ್ಸನ್‌ ಜತೆಗೆ ನಡೆಸಿದ್ದ ಸಂದರ್ಶನದ ಭಾಗವೂ ಆಸಕ್ತಿದಾಯಕವಾಗಿದೆ. ಆದರೆ, ‘ಇಂದು ಬೆಂಗಳೂರಿನಲ್ಲಿ ನೆಲೆಸಿರುವ ಡೊನಾಲ್ಡ್‌ ಆ್ಯಂಡರ್ಸನ್‌’ ಎಂದು ದಾಖಲಿಸಿರುವುದನ್ನು ಓದಿದಾಗ;ಡೊನಾಲ್ಡ್‌ ಇನ್ನೂ ಬದುಕಿದ್ದಾರಾ ಎನಿಸುತ್ತದೆ. ಅವರು ಐದು ವರ್ಷಗಳ ಹಿಂದೆಯೇ ತೀರಿಕೊಂಡಿರುವುದನ್ನು ಎಲ್ಲಾದರೂ ಒಂದು ಕಡೆ ಉಲ್ಲೇಖಿಸಬೇಕಿತ್ತು ಎನಿಸುತ್ತದೆ. ಕೆಲವು ಕಡೆಗಳಲ್ಲಿ ಸಣ್ಣಪುಟ್ಟ ಕಾಗುಣಿತ ದೋಷಗಳನ್ನು ಹೊರತುಪಡಿಸಿದರೆ, ಈ ಕೃತಿ ಕುತೂಹಲದಿಂದ ಓದಿಸಿಕೊಳ್ಳುತ್ತದೆ. ಹಾಗೆಯೇ ಅನುವಾದದಲ್ಲಿ ಇನ್ನೊಂದಿಷ್ಟು ಬಿಗಿಬಂಧವಿರಬೇಕಿತ್ತೆನ್ನಿಸುವುದು ಸಹಜ.

courtsey:prjavani.net

https://www.prajavani.net/artculture/book-review/book-pari

Leave a Reply