ಶಿಕ್ಷಣದ ಹಾನಿಗಳು

ಬುಕರಾತರು ಯುವೋಸಿಯಾ ನಗರದ ಒಂದು ಗಲ್ಲಿಯಿಂದ ಹಾದು ಹೋಗುತ್ತಿದ್ದರು, ಆಗ ಕೆಲವರು ಅವರನ್ನು ತಡೆದು ಹೇಳಿದರು, ‘ಬುಕರಾತ್, ನಾವು ನಿಮ್ಮಲ್ಲಿ ಒಂದು ವಿಷಯವನ್ನು ಕೇಳಲು ಬಯಸುತ್ತೇವೆ.’‘ನಿಮಗೆ ಸ್ವಾಗತ’ ಎಂದರು ಬುಕರಾತ್.‘ಬುಕರಾತ್, ನೀವೇಕೆ ಶಿಕ್ಷಣವನ್ನು ವಿರೋಧಿಸುತ್ತೀರಿ? ನೀವು ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮಾಡಿಸಲಿಲ್ಲ. ನೆರೆಹೊರೆಯ ಮಕ್ಕಳು ವಿದ್ಯಾಭ್ಯಾಸವನ್ನು ಮಾಡದಂತೆ ತಡೆದಿರಿ. ನೀವು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಯಾಕೆ ಶತ್ರುವಾಗಿದ್ದೀರ? ನೀವು ಶಾಲೆಗಳನ್ನು ನಾಶ ಮಾಡುತ್ತೀರಿ. ಇದರ ಹಿಂದಿನ ರಹಸ್ಯವೇನು?’ ಜನ ಪ್ರಶ್ನಿಸಿದರು. ಬುಕರಾತ್ ದೀರ್ಘವಾಗಿ ಉಸಿರೆಳೆದುಕೊಂಡರು. ತಮ್ಮ ಉತ್ತಮ ಬಟ್ಟೆಯನ್ನು ಶರೀರದ ಸುತ್ತಮುತ್ತ ಸುತ್ತಿಕೊಂಡರು. ತಮ್ಮದೊಂದು ‘ಸೆಲ್ಫಿ’ ತೆಗೆದುಕೊಂಡು ಹೇಳಿದರು, ‘ನಾನೆಲ್ಲಾ ದೇವರುಗಳನ್ನು ಸಾಕ್ಷಿಯಾಗಿಟ್ಟುಕೊಂಡು ಈ ಮಾತನ್ನು ಹೇಳುತ್ತಿದ್ದೇನೆ. ಯುವೋಸಿಯಾ ನಿವಾಸಿಗಳೇ, ಕೇಳಿ. ನನ್ನ ಮಾತನ್ನು ಸದಾ ನೆನಪಿಟ್ಟುಕೊಳ್ಳಿ; ಯಾಕೆಂದರೆ ಮುಂಬರುವ ಪೀಳಿಗೆಗಳು ನನ್ನ ಮಾತಿನಿಂದ ಲಾಭವನ್ನು ಪಡೆಯಲಿ. ನಾನು ನಿಮಗೆ ಕೆಲವು ನೀತಿ ಕಥೆಗಳನ್ನು ಹೇಳುತ್ತೇನೆ. ಈ ಕಥೆಗಳಿಂದ, ಶಿಕ್ಷಣದ ಹಾನಿಗಳೇನು ಎಂಬುವುದನ್ನು ನೀವು ಅರ್ಥ ಮಾಡಿಕೊಳ್ಳುತ್ತೀರ.’ ಕಥೆ: ಒಂದು ಇಸಕೋಫೋನಿಯಾ ನಗರದಲ್ಲಿ ಅಗಸನೊಬ್ಬ ತನ್ನ ಹೆಂಡತಿಯೊಂದಿಗೆ ಸುಖವಾಗಿ ತನ್ನ ಜೀವನವನ್ನು ಕಳೆಯುತ್ತಿದ್ದ. ಅವನ ಬಳಿ ಇಟಲಿ ಮೂಲದ ಕತ್ತೆಯೊಂದಿತ್ತು. ಅಗಸ ಅದರ ಪ್ರತಿಯೊಂದು ಮಾತನ್ನೂ ಕೇಳುತ್ತಿದ್ದ. ತನಗೆ ಆಸರೆಯಾಗಿದ್ದ ಆ ಕತ್ತೆಯ ಮಾತನ್ನು ಎಂದೂ ಅಲ್ಲಗೆಳೆಯುತ್ತಿರಲಿಲ್ಲ. ಅಗಸನಿಗೆ ಮಕ್ಕಳಿರಲಿಲ್ಲ ಎಂಬುದು ದುರದೃಷ್ಟದ ಸಂಗತಿಯಾಗಿತ್ತು. ಅವನು ಹಗಲಿಡೀ ಇದೇ ಚಿಂತೆಯಲ್ಲಿರುತ್ತಿದ್ದ. ಅದೊಂದು ದಿನ ಅಗಸ ಮತ್ತು ಅವನ ಹೆಂಡತಿ ಒಂದು ಶಾಲೆಯ ಹಿಂಭಾಗದಲ್ಲಿ ಹಾದು ಹೋಗುತ್ತಿದ್ದರು. ಆಗ ಅವರು ಗುರುಗಳ ಧ್ವನಿಯನ್ನು ಕೇಳಿದರು. ಗುರುಗಳು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು, ‘ಕತ್ತೆಗಳಾ, ನಾನು ಎಷ್ಟೆಲ್ಲಾ ಕಷ್ಟಪಟ್ಟು ನಿಮ್ಮನ್ನು ಮನುಷ್ಯರನ್ನಾಗಿ ಮಾಡಿದೆ. ಆದರೆ ನೀವು ನನ್ನ ಮಾತನ್ನೇ ಕೇಳುವುದಿಲ್ಲ.’ ಈ ಮಾತನ್ನು ಕೇಳಿ ಅಗಸ ಮತ್ತು ಅವನ ಹೆಂಡತಿಗೆ ತುಂಬಾ ಖುಷಿಯಾಯಿತು. ನಾವೇಕೆ ನಮ್ಮ ಕತ್ತೆಯನ್ನು ಮನುಷ್ಯನನ್ನಾಗಿ ಮಾಡಿಕೊಳ್ಳಬಾರದೆಂದು ಹಾಗೂ ಆಗ ನಮ್ಮ ಕತ್ತೆ ಮನುಷ್ಯನಾಗುವುದು ಎಂದು ಅವರಿಬ್ಬರು ಯೋಚಿಸಿದರು. ಮರುದಿನ ಅಗಸ ತನ್ನ ಹೆಂಡತಿ ಮತ್ತು ಕತ್ತೆಯೊಂದಿಗೆ ಗುರುಗಳ ಮನೆಗೆ ಬಂದು ಹೇಳಿದ, ‘ಗುರುಗಳೇ, ನಮ್ಮ ಕತ್ತೆಯನ್ನು ಮನುಷ್ಯನನ್ನಾಗಿ ಮಾಡಿ.’‘ಕತ್ತೆ ಮನುಷ್ಯನಾಗಲು ಹೇಗೆ ಸಾಧ್ಯ?’ ಎಂದು ಗುರುಗಳಿಗೆ ಆಶ್ಚರ್ಯವಾಯಿತು.‘ನೀವು ನಮ್ಮನ್ನು ಸಾಗ ಹಾಕುತ್ತಿದ್ದೀರ. ನಿಮಗೆ ಮನುಷ್ಯನನ್ನು ಕತ್ತೆ ಮಾಡುವ ಕಲೆ ತಿಳಿದಿದೆ.’ಗುರುಗಳು ಇದನ್ನು ಅಲ್ಲಗಳೆದರು. ಆಗ ಅಗಸ ಹೇಳಿದ, ‘ನೋಡಿ, ನೀವು ಬೇಕಾದರೆ ನಮ್ಮಿಡೀ ಜೀವನದ ಸಂಪಾದನೆಯನ್ನು ತೆಗೆದುಕೊಳ್ಳಿ, ಆದರೆ ನಮ್ಮ ಕತ್ತೆಯನ್ನು ಮನುಷ್ಯನನ್ನಾಗಿ ಮಾಡಿ. ನಮಗೆ ಮಕ್ಕಳಿಲ್ಲ, ಈ ಕತ್ತೆಯೇ ನಮಗೆ ಮಗನಾಗುವನು.’ ಅಗಸ ಗುರುಗಳಿಗೆ ತಮ್ಮಿಡೀ ಜೀವಮಾನದ ಸಂಪಾದನೆಯ ಬಗ್ಗೆ ಹೇಳಿದ. ಅಗಸನ ಬಳಿ ಸಾಕಷ್ಟು ಬಂಗಾರ, ಬೆಳ್ಳಿ ಮತ್ತು ನಗದು ಹಣವಿತ್ತು. ಗುರುಗಳ ಮನಸ್ಸಿನಲ್ಲಿ ದುರಾಸೆ ಹುಟ್ಟಿತು. ಅವರು ಹಣ ಮತ್ತು ಕತ್ತೆಯನ್ನು ಪಡೆದರು. ಕತ್ತೆಯನ್ನು ಮನುಷ್ಯನನ್ನಾಗಿ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ, ನೀವು ಮೂರು ವರ್ಷಗಳ ನಂತರ ಬನ್ನಿ ಎಂದು ಅಗಸನಿಗೆ ಹೇಳಿದರು. ಅಗಸ ಮತ್ತು ಅವನ ಹೆಂಡತಿ ಸಂತೋಷದಿಂದ ಮನೆಗೆ ಮರಳಿ ಹೋದರು.ನಿಶ್ಚಿತ ದಿನದಂದು ಅಗಸ ಗುರುಗಳ ಬಳಿಗೆ ಬಂದು ಹೇಳಿದ, ‘ಮನುಷ್ಯನಾದ ನಮ್ಮ ಕತ್ತೆಯನ್ನು ನನಗೆ ಮರಳಿ ಕೊಡಿ.’‘ನೀನು ತಡ ಮಾಡಿದೆ. ನಿನ್ನ ಕತ್ತೆ ತುಂಬಾ ಬುದ್ಧಿವಂತನಾಗಿತ್ತು. ಅದು ತುಂಬಾ ಬೇಗನೆ ಮನುಷ್ಯನಾಗಿತ್ತು. ಈಗ ಅವನು ಸಿಯೋಫಾಯಿ ದೇಶದ ರಾಜನಿಗೆ ಪ್ರಧಾನಮಂತ್ರಿಯಾಗಿದ್ದಾನೆ.’‘ನಾವು ಅಲ್ಲಿಗೆ ಹೋಗುವುದು ಹೇಗೆ?’‘ನೀನು ಪಶ್ಚಿಮ ದಿಕ್ಕಿಗೆ ಹೋಗು. ನಿನಗೆ ಸಿಯೋಫಾಯಿ ರಾಜ್ಯ ಸಿಗುವುದು. ನಿನ್ನ ಕತ್ತೆ ಅಲ್ಲಿಯ ಪ್ರಧಾನಮಂತ್ರಿಯಾಗಿದ್ದಾನೆ.’‘ನಾವು ಅವನನ್ನು ಗುರುತಿಸುವುದು ಹೇಗೆ? ’‘ಅವನು ಪ್ರಧಾನಮಂತ್ರಿಯಂತೂ ಆಗಿದ್ದಾನೆ. ಆದರೆ ನೀವು ಅವನನ್ನು ನೋಡಿದಾಗ, ಅವನು ನಿಮಗೆ ಕತ್ತೆಯಾಗಿಯೇ ಕಾಣಿಸುತ್ತಾನೆ. ಇದೇ ಅವನನ್ನು ಗುರುತಿಸುವ ವಿಧಾನ.’ ಗುರುಗಳು ಅಗಸ ಮತ್ತು ಅವನ ಹೆಂಡತಿಗೆ ತಿಳಿಯಪಡಿಸಿದರು. ಯುವೋಸಿಯಾ ನಿವಾಸಿಗಳು ತದೇಕಚಿತ್ತದಿಂದ ಕಥೆಯನ್ನು ಕೇಳುತ್ತಿದ್ದರು. ಅವರು ನಂತರ ಕೇಳಿದರು, ‘ಬುಕರಾತ್, ನಂತರ ಏನಾಯ್ತು?’ ಬುಕರಾತ್ ಮೆಲ್ಲನೆ ಉಸಿರೆಳೆದುಕೊಳ್ಳುತ್ತಾ ಹೇಳಿದರು, ‘ಅಗಸ ಮತ್ತು ಅವನ ಹೆಂಡತಿಗೆ ಕತ್ತೆಯಂತೂ ಸಿಕ್ಕಿತು. ಆದರೆ ಅದು ಅಗಸ ಮತ್ತು ಅಗಸಗಿತ್ತಿಯನ್ನು ಗುರುತಿಸಲು ಒಪ್ಪಲಿಲ್ಲ. ಅಗಸ ಮತ್ತು ಅಗಸಗಿತ್ತಿ ತುಂಬಾ ರೋದಿಸಿದರು, ಎದೆ ಬಡಿದುಕೊಂಡರು. ಆದರೆ ಎಲ್ಲವೂ ವ್ಯರ್ಥ. ಪ್ರತಿಯಾಗಿ ಅವರನ್ನು ಜೈಲಿಗೆ ಹಾಕಲಾಯಿತು. ಕಡೆಗೆ ದೊಣ್ಣೆಯಿಂದ ಹೊಡೆದು-ಬಡಿದು ಓಡಿಸಲಾಯಿತು. ಇಬ್ಬರೂ ನಿರಾಸೆಯಿಂದ ತಮ್ಮ ದೇಶಕ್ಕೆ ಮರಳಿ ಬಂದರು. ಅವರ ಜೀವನವೇ ಹಾಳಾಯಿತು. ‘ನೋಡಿ, ಉತ್ತಮ ಪ್ರಜೆಗಳೇ! ಅಧ್ಯಾಪಕರು ಕತ್ತೆಯನ್ನು ಕತ್ತೆಯಾಗಲು ಬಿಟ್ಟಿದ್ದರೆ, ಅಗಸ ಮತ್ತು ಅಗಸನ ಹೆಂಡತಿಯ ಜೀವನ ಹಾಳಾಗುತ್ತಿರಲಿಲ್ಲ. ಆದ್ದರಿಂದ ಶಿಕ್ಷಣದ ಅತಿ ದೊಡ್ಡ ಹಾನಿ ಎಂದರೆ, ಶಿಕ್ಷಣ ಕತ್ತೆಯನ್ನು ಮನುಷ್ಯನನ್ನಾಗಿ ಮಾಡುತ್ತದೆ.’ ಬುಕರಾತರು ಸ್ಪಷ್ಟ ಪಡಿಸಿದರು. ಕಥೆ: ಎರಡು ಬುಕರಾತರು ಮೆಲ್ಲನೆ ಉಸಿರೆಳೆದುಕೊಂಡು ಎರಡನೆಯ ಕಥೆಯನ್ನು ಆರಂಭಿಸಿದರು: ‘ಒಂದು ನಗರದಲ್ಲಿ ಒಬ್ಬ ಪ್ರಾಮಾಣಿಕನಿದ್ದ. ಅವನು ತುಂಬಾ ಕಷ್ಟದಿಂದ ತನ್ನ ಮಗನಿಗೆ ವಿದ್ಯಾಭ್ಯಾಸವನ್ನು ಮಾಡಿಸಿದ. ಮಗ ವಿದ್ಯಾಭ್ಯಾಸವನ್ನು ಮುಗಿಸಿ ಬಂದು ತನ್ನ ತಂದೆಯನ್ನು ಪ್ರಶ್ನಿಸಲಾರಂಭಿಸಿದ. ಗಲ್ಲಿಯವರನ್ನು ಪ್ರಶ್ನಿಸಲಾರಂಭಿಸಿದ. ನಗರದ ಜನರನ್ನು ಪ್ರಶ್ನಿಸಲಾರಂಭಿಸಿದ. ದೇಶದ ಜನರನ್ನು ಪ್ರಶ್ನಿಸಲಾರಂಭಿಸಿದ. ಅವನು ಒಂದೇ ಪ್ರಶ್ನೆಯನ್ನು ಕೇಳುತ್ತಿದ್ದ, ‘ಎಲ್ಲವನ್ನೂ ದೇವರು, ಅಲ್ಲಾಹ್ ಮತ್ತು ಗಾಡ್ ಸೃಷ್ಟಿಸಿರುವಾಗ ಪ್ರತಿಯೊಂದರ ಮೇಲೆ ಬೇರೆ-ಬೇರೆ ಜನರ ಹಕ್ಕು ಯಾಕಿದೆ?’‘ಅವನ ಈ ಪ್ರಶ್ನೆಯಿಂದ ಮೊದಲು ಜನ ಹೆದರಿದರು, ನಂತರ ತುಂಬಾ ಗಾಬರಿಗೊಂಡರು. ಕಡೆಗೆ ಅವರು ರೇಗಿದರು. ತದನಂತರದಲ್ಲಿ ಜನ ಎಷ್ಟು ರೇಗಿದರೆಂದರೆ, ಜನ ಅವನನ್ನು ಕೊಲೆಗೈದರು. ಅದಕ್ಕೇ ನಾಗರಿಕರೇ, ಒಂದು ವೇಳೆ ಅವನು ವಿದ್ಯಾಭ್ಯಾಸವನ್ನು ಮಾಡದಿದ್ದರೆ, ಅವನ ಕೊಲೆ ಯಾಕಾಗುತ್ತಿತ್ತು?’ ಕಥೆ: ಮೂರು ಸೋನಿಯಾ ಗಣರಾಜ್ಯದಲ್ಲಿ ವಿದ್ಯಾವಂತ ವ್ಯಕ್ತಿಯೊಬ್ಬನನ್ನು ಸೈನ್ಯಕ್ಕೆ ಸೇರಿಸಿಕೊಳ್ಳಲಾಯಿತು. ವಿದ್ಯಾವಂತ ಚೆನ್ನಾಗಿ ಯುದ್ಧವನ್ನು ಮಾಡುತ್ತಾನೆಂದು ಸೈನ್ಯ ಯೋಚಿಸಿತು. ಒಮ್ಮೆ ನೆರೆಯ ರಾಜ್ಯದೊಂದಿಗೆ ಯುದ್ಧ ಸಂಭವಿಸಿತು. ಸೋನಿಯಾ ಗಣರಾಜ್ಯದ ಸೈನ್ಯಕ್ಕೆ, ‘ನೆರೆ ರಾಜ್ಯ ಆಟೋಗುನಿಯಾದ ಸೈನ್ಯದ ಮೇಲೆ ಆಕ್ರಮಣ ಮಾಡಿ’ ಎಂದು ಆದೇಶಿಸಲಾಯಿತು.‘ಯಾಕೆ?’ ಎಂದು ವಿದ್ಯಾವಂತ ಸೈನಿಕ ಎದುರು ಬಂದು ಪ್ರಶ್ನಿಸಿದ.‘ಅವರು ನಮ್ಮ ಶತ್ರುಗಳು.’ ಸೈನ್ಯಾಧಿಪತಿ ಹೇಳಿದ.‘ಅದು ಹೇಗೆ?’‘ಯಾಕೆ ಮತ್ತು ಹೇಗೆ ಎಂಬ ಪ್ರಶ್ನೆಗೆ ಯಾವುದೇ ಅರ್ಥವಿಲ್ಲ. ನೀನು ಅವರ ಮೇಲೆ ಆಕ್ರಮಣ ಮಾಡಿ ಅವರನ್ನು ನಾಶ ಪಡಿಸು.’‘ಯಾಕೆ ಮತ್ತು ಹೇಗೆ ಎಂಬುವುದಕ್ಕೆ ಉತ್ತರ ಸಿಗದವರೆಗೆ, ನಾನು ಆಕ್ರಮಣವನ್ನು ಮಾಡುವುದಿಲ್ಲ.’ಸೈನ್ಯಾಧಿಪತಿ ತನ್ನ ಕತ್ತಿಯನ್ನು ಹೊರತೆಗೆದು, ವಿದ್ಯಾವಂತನನ್ನು ಹತ್ಯೆಗೈದ. ನಗರವಾಸಿಗಳೇ, ಕೇಳಿ ಮತ್ತು ಯೋಚಿಸಿ, ಒಂದು ವೇಳೆ ಸೈನಿಕ ವಿದ್ಯಾವಂತನಾಗಿರದಿದ್ದರೆ, ಅವನನ್ನು ಯಾಕೆ ಹತ್ಯಗೈಯಲಾಗುತ್ತಿತ್ತು? ಕಥೆ: ನಾಲ್ಕು ನಗರವಾಸಿಗಳೇ, ನನ್ನ ಅಣ್ಣ ಸಾಕ್ರೆಟಿಸ್ ವಿಷವನ್ನು ಯಾಕೆ ಕುಡಿಯಬೇಕಾಯಿತು ಎಂಬುವುದು ನಿಮಗೆ ಗೊತ್ತೆ? ಅವರು ತುಂಬಾ ಓದಿದ್ದರು, ತುಂಬಾ ವಿದ್ವಾಂಸರಾಗಿದ್ದರು. ಅವರಿಗೆ ಗಣಿತ, ಖಗೋಳಶಾಸ್ತ್ರ, ಭೌತವಿಜ್ಞಾನ, ಜ್ಯೋತಿಷ ಶಾಸ್ತ್ರ ಮತ್ತು ದರ್ಶನ ಶಾಸ್ತ್ರದಲ್ಲಿ ಅಪಾರ ಹೆಸರಿದೆ.ಅವರ ಸಂಶೋಧನೆಯ ಮಾರ್ಗ ಪ್ರಶ್ನೆ ಮಾಡುವುದು ಮಾತ್ರವಾಗಿತ್ತು. ಅವರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುತ್ತಿದ್ದರು, ಜನರನ್ನು ಪ್ರಶ್ನಿಸುತ್ತಿದ್ದರು, ದೇವರನ್ನು ಪ್ರಶ್ನಿಸುತ್ತಿದ್ದರು, ಅವರ ಪ್ರಶ್ನೆಗಳಿಗೆ ಉತ್ತರ ಅವರ ಬಳಿಯೂ ಇರಲಿಲ್ಲ. ಪ್ರಶ್ನೆ ಮಾಡುವುದು ಅವಶ್ಯವಾಗಿದೆ. ಪ್ರಶ್ನೆಗೆ ಉತ್ತರವನ್ನು ಮುಂದಿನ ಪೀಳಿಗೆಯೂ ಕೊಡಬಹುದು ಎಂದು ಅವರು ಹೇಳುತ್ತಿದ್ದರು. ಆದರೆ ಜನ ಅವರ ಪ್ರಶ್ನೆಗಳಿಂದ ತುಂಬಾ ಉದ್ರೇಕಗೊಳ್ಳುತ್ತಿದ್ದರು. ಅವರು ರೇಗುತ್ತಿದ್ದರು. ಕಡೆಗೆ ಅವರ ಪ್ರಶ್ನೆಗಳ ಬೆಟ್ಟ ಎಷ್ಟು ವಿಶಾಲವಾಯಿತೆಂದರೆ, ದೊಡ್ಡ-ದೊಡ್ಡ ವ್ಯಕ್ತಿಗಳು ಅದರ ಕೆಳಗೆ ಅರಚಿ ಹೋಗಲಾರಂಭಿಸಿದರು, ಆಗ ಅವರ ವಿರುದ್ಧ ಒಂದು ಷಡ್ಯಂತ್ರವನ್ನು ರಚಿಸಲಾಯಿತು. ಬಹುಮತ ಅವರಿಗೆ ವಿಷವನ್ನು ಕುಡಿಯವ ಶಿಕ್ಷೆಯನ್ನು ವಿಧಿಸಿತು. ಜನರೇ ಯೋಚಿಸಿ, ಒಂದು ವೇಳೆ ಸಾಕ್ರೆಟಿಸರು ವಿದ್ಯಾವಂತರಾಗಿರದಿದ್ದರೆ, ಅವರು ವಿಷವನ್ನು ಕುಡಿಯಬೇಕಾದ ಪರಿಸ್ಥಿತಿ ಯಾಕೆ ಬರುತ್ತಿತ್ತು? ಕಥೆ: ಐದು ಒಮ್ಮೆ ವಿಚಿತ್ರ ಘಟನೆಯೊಂದು ಘಟಿಸಿತು. ಬುಕರಾತರು ಪುಸ್ತಕವೊಂದನ್ನು ಓದುತ್ತಿರುವುದನ್ನು ಜನರು ನೋಡಿದರು. ಜನ ಅವರನ್ನು ಸುತ್ತುವರೆದು ಕೇಳಿದರು, ‘ನೀವು ಶಿಕ್ಷಣದ ವಿರೋಧಿಗಳು. ಹೀಗಿರುವಾಗ ಪುಸ್ತಕವನ್ನೇಕೆ ಓದುತ್ತಿದ್ದೀರ? ‘ಇದು ಪುಸ್ತಕವಲ್ಲ.’ ಎಂದರು ಬುಕರಾತ್. ‘ನೋಡಿದರೆ, ಪುಸ್ತಕದಂತೆ ಕಾಣುತ್ತದೆ.’ ‘ಇದು ನನ್ನ ತಂದೆಗೆ, ಅವರ ತಂದೆಯಿಂದ ಸಿಕ್ಕಿತ್ತು. ನನ್ನ ಅಜ್ಜನಿಗೆ, ಅವರ ತಂದೆ ಕೊಟ್ಟಿದ್ದರು. ಅವರಿಗೆ, ಅವರ ಮತ್ತು ಅವರಿಗೆ ಅವರ…’ ‘ಈ ಪುಸ್ತಕ ಎಷ್ಟು ಹಳೆಯದು?’ ‘ನೂರಾರು, ಸಾವಿರಾರು ವರ್ಷ ಹಳೆಯದು…ಜನರಿಗೆ ಬರೆಯಲು ಬರುತ್ತಿರಲಿಲ್ಲ, ಇದು ಆಗಿನ ಪುಸ್ತಕ.’ ‘ಈ ಪುಸ್ತಕದಲ್ಲಿ ಏನು ಬರೆಯಲಾಗಿದೆ?’ ‘ಇದರ ನಂತರ ಬರೆಯಲ್ಪಡುವ ಪುಸ್ತಕಗಳನ್ನು ಓದಬಾರದು, ಅವುಗಳನ್ನು ನಂಬಬಾರದು ಎಂದು ಈ ಪುಸ್ತಕದಲ್ಲಿ ಬರೆಯಲಾಗಿದೆ.

courtsey:prajavani.net

https://www.prajavani.net/artculture/short-story/shikshanada-hanigalu-706936.html

Leave a Reply