ವನ್ಯ ಕೌತುಕಗಳ ಅಕ್ಷರಮಾಲೆ

ವನ್ಯಜೀವಿ ಕಾರ್ಯಕರ್ತ ಸಂಜಯ್ ಗುಬ್ಬಿ ಬರೆದಿರುವ ಹೊಸ ಪುಸ್ತಕ ‘ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು’. ಪರಿಸರ, ವನ್ಯಜೀವಿಗಳು, ಆ ವನ್ಯಜೀವಿಗಳಿಗೆ ಇರುವ ಪುರಾಣರೂಪಿ ಪ್ರಸಿದ್ಧಿ… ಇಂಥವುಗಳ ಬಗ್ಗೆ ಆಸಕ್ತಿ ಇರುವವರಿಗೆ ಎಂದೇ ಈ ಪುಸ್ತಕ ಬರೆದಂತೆ ಇದೆ. ಕಾಡುಗಳಿಂದ ದೂರ ಇದ್ದು, ನಗರವಾಸಿ ಬದುಕಿನ ನಡುವೆಯೇ ವನ್ಯಲೋಕದ ಬಗ್ಗೆ ಕೌತುಕ ಇರಿಸಿಕೊಂಡವರನ್ನು ಮನಸ್ಸಿನಲ್ಲಿ ಕುಳ್ಳಿರಿಸಿಕೊಂಡು, ಈ ಪುಸ್ತಕದ ಅಕ್ಷರಗಳನ್ನು ಅವರು ಪೋಣಿಸಿದ್ದಾರೆ ಎಂಬುದು ಮೊದಲ ಓದಿನಲ್ಲಿ ದಕ್ಕುವ ಅನುಭವ. ಪುಸ್ತಕದಲ್ಲಿ ಇರುವ ‘ಇಬ್ಬನಿಯ ಹುಲಿ’ ಕಥೆಯನ್ನು ಈ ಮಾತಿಗೆ ಉದಾಹರಣೆಯಾಗಿ ಉಲ್ಲೇಖಿಸಬಹುದು. ಇದನ್ನು ಕಥೆಯಾಗಿಯೂ ಓದಿಕೊಳ್ಳಬಹುದು, ವನ್ಯಜೀವಿಗಳಿಗೆ ಸಂಬಂಧಿಸಿದ ಅನುಭವಕಥನದ ಒಂದು ಅಧ್ಯಾಯವಾಗಿಯೂ ಓದಿಕೊಳ್ಳಬಹುದು. ‘ಇಬ್ಬನಿಯ…’ ಅಧ್ಯಾಯವು ಕಾಡಿನಲ್ಲಿ ವನ್ಯಮೃಗಗಳ ಜೊತೆ ನಡೆದ ಮುಖಾಮುಖಿಯ ಕಥೆಯಾದರೆ, ‘ಶಾಲೆಗೆ ಬಂದ ಚಿರತೆ’ ಅಧ್ಯಾಯ (ಅಥವಾ ಸೊಗಸಾದ ಒಂದು ಥ್ರಿಲ್ಲರ್ ಕಥೆ) ವನ್ಯಮೃಗ ಮತ್ತು ಮಾನವನ ಸಂಘರ್ಷದ ಒಂದು ಮುಖವನ್ನು ಸ್ವಾನುಭವದ ಮೂಲಕ ವಿವರಿಸುತ್ತದೆ. ಬೆಂಗಳೂರಿನಲ್ಲಿ 2016ರಲ್ಲಿ ಶಾಲೆಯೊಂದಕ್ಕೆ ಚಿರತೆ ನುಗ್ಗಿದ್ದು, ಅದನ್ನು ಹಿಡಿಯಲು ಹೋದ ಸಂಜಯ್ ಮೇಲೆ ಆ ಚಿರತೆ ಎರಗಿದ್ದು ಈ ಅಧ್ಯಾಯದ ಕಥಾವಸ್ತು. ‘ಆನೆ ಕರಡಿಗಳ ನ್ಯಾಯಾಲಯದಲ್ಲಿ ಕ್ಯಾಮರಾ ಟ್ರಾಪ್‌ಗಳು’ ಕಥೆಯು ತಮ್ಮ ಆವಾಸಸ್ಥಾನದಲ್ಲಿ ಅನೈಸರ್ಗಿಕ ವಸ್ತುವೊಂದು ಕಂಡಾಗ ಪ್ರಾಣಿಗಳು ವರ್ತಿಸುವ ಬಗೆಯನ್ನು ಕಟ್ಟಿಕೊಡುತ್ತದೆ. ಹೀಗೆ, ಪುಸ್ತಕದ ಒಂದೊಂದು ಅಧ್ಯಾಯವೂ ಕಥೆಯ ರೂಪದಲ್ಲಿ ವನ್ಯಜೀವಿಗಳ ಲೋಕದ ಒಂದೊಂದು ಆಯಾಮವನ್ನು ವಿವರಿಸುತ್ತ ಸಾಗುತ್ತದೆ. ‘ಕಥೆಗಳು’ ಎಂಬ ಪದವನ್ನು ಸಂಜಯ್ ಅವರು ಈ ಪುಸ್ತಕದ ಶೀರ್ಷಿಕೆಯಲ್ಲಿ ಬಳಸಿರುವುದನ್ನು ಗಮನಿಸಿದರೆ, ಈ ಪುಸ್ತಕವು ಗಹನ ವಿಚಾರಗಳನ್ನೂ ಸಹಜ ಧಾಟಿಯಲ್ಲಿ ಹೇಳಬೇಕು ಎಂಬ ಉದ್ದೇಶ ಲೇಖಕರದ್ದಾಗಿತ್ತು ಎಂಬುದು ವೇದ್ಯವಾಗುತ್ತದೆ. ಪುಸ್ತಕದಲ್ಲಿ ಬಳಸಿರುವ ಭಾಷೆ ಕೂಡ ಅದೇ ರೀತಿಯಲ್ಲಿ ಇದೆ. ಅಂದಹಾಗೆ, ಈ ಪುಸ್ತಕದಲ್ಲಿ ಇರುವ ಕೆಲವು ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವುವು. ಹಾಗಾಗಿ, ಕೆಲವು ಕಥೆಗಳನ್ನು ಓದುವಾಗ ‘ಎಲ್ಲೋ ಓದಿದ್ದೇನಲ್ಲ’ ಎಂಬ ಸಹಜ ಅನುಮಾನ ಮೂಡಬಹುದು

courtsey:prajavani.net

https://www.prajavani.net/artculture/book-review/vany-kouthuka-668130.html.

Leave a Reply