ವರ್ತಮಾನದ ವಿಶ್ಲೇಷಣೆಯ ಪ್ರಯತ್ನ

‘ಪ್ರಜಾವಾಣಿ’ ಪತ್ರಿಕೆಯಲ್ಲಿ ‘ವಿಜ್ಞಾನ ವಿಶೇಷ’ ಅಂಕಣದಲ್ಲಿ ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ ಅವರು ಬರೆದಿರುವ ಬರಹಗಳ ಪೈಕಿ 25 ಅಂಕಣಗಳ ಗುಚ್ಛವೇ ಈ ಕೃತಿ. ಇಲ್ಲಿನ ಬಹುತೇಕ ಬರಹಗಳು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ಪಠ್ಯಗಳಲ್ಲಿ ಸೇರಿವೆ. ಜನರ ಬದುಕನ್ನು ಪ್ರಭಾವಿಸುವ, ಭವಿಷ್ಯವನ್ನು ಬದಲಿಸಬಲ್ಲವಂಥ ಅನೇಕ ವರ್ತಮಾನಗಳ ವಿಶ್ಲೇಷಣೆಯ ಯತ್ನವಾಗಿ ಇಲ್ಲಿನ ಬರಹಗಳು ಮೂಡಿಬಂದಿವೆ. ಸಮಕಾಲೀನ ಸಮಸ್ಯೆಗಳಿಗೆ ಸೂಕ್ಷ್ಮಸಂವೇದನೆಯುಳ್ಳ ಲೇಖಕ, ವಿಜ್ಞಾನಿಯಾಗಿ ಪ್ರತಿಸ್ಪಂದಿಸಿ ದಾಖಲಿಸಿದ, ಸೂಚಿಸಿದ ಪರಿಹಾರಗಳಂತಿವೆ ಇಲ್ಲಿನ ಎಲ್ಲ ಲೇಖನಗಳು. ಕೃತಿಯ ಆರಂಭದ ‘ಶುಭ್ರ ಬಿಳಿಯ ಉಗ್ರ ವಿಷ’ ಲೇಖನವಂತೂ ಸಿಹಿ ಸಕ್ಕರೆ ದೇಹಕ್ಕೆ ಎಷ್ಟೊಂದು ಕಹಿ ವಿಷ ಎನ್ನುವುದನ್ನು ಮನದಟ್ಟು ಮಾಡಿಸುತ್ತದೆ. ‘ಧರ್ಮಕ್ಷೇತ್ರಕ್ಕೆ ಕಾಲಿಟ್ಟ ಮಂಗನ ಕಾಯಿಲೆ’, ‘ಸಸ್ಯಗಳ ಲೋಕದಲ್ಲಿ ಪ್ರಜ್ಞೆಯ ಪ್ರಶ್ನೆ’ ಚಿಂತನೆಗೆ ಹಚ್ಚುತ್ತವೆ. ‘ಮುಂದಿದೆ: ಮೆಗಾಲೂಟಿಯ ಮಾರಿಹಬ್ಬ’ ಲೇಖನವಂತೂ ಪಶ್ಚಿಮಘಟ್ಟದ ತಪ್ಪಲಿನವರಷ್ಟೇ ಅಲ್ಲ, ಇಡೀ ಮನುಕುಲ ಎಚ್ಚೆತ್ತುಕೊಳ್ಳುವಂತೆ ಎಚ್ಚರಿಕೆಯ ಕರೆಗಂಟೆ ನೀಡಿದಂತಿದೆ. ಸಾಲಮನ್ನಾ ಬೆನ್ನಲೇಕೆ ಸಾಲು ಸಾಲು ಸಾವು?, ಸುಳ್ಳು ಸೃಷ್ಟಿಯ ಮಡುವಿನಲ್ಲಿ ಸತ್ಯಕ್ಕೆಲ್ಲಿ ದಿಕ್ಕು? ಲೇಖನಗಳು ಮಾಧ್ಯಮಗಳಿಗೆ ಇರಬೇಕಾದ ವಿವೇಕವನ್ನು ನೆನಪಿಸುತ್ತವೆ. ಮೊದಲ ಓದಿನಲ್ಲೇ ಈ ಬರಹಗಳನ್ನು ಎಲ್ಲೋ ಓದಿದ್ದೆವಲ್ಲಾ ಎನಿಸುವುದು ಸಹಜ. ಮೊದಲೇ ಹೇಳಿದಂತೆ ಇಲ್ಲಿನ ಎಲ್ಲ ಬರಹಗಳು ಅಂಕಣವಾಗಿ ಪತ್ರಿಕೆಯಲ್ಲಿ ಪ್ರಕಟವಾದಂಥವು. ಆದರೂ ಮರು ಓದಿಗೆ ಒಡ್ಡಿಸಿಕೊಳ್ಳುವ, ಚಿಂತನಮಂಥನಕ್ಕೆ ಒಳಪಡಿಸಿಕೊಳ್ಳುವ ಗುಣಸಾಮರ್ಥ್ಯ ಪ್ರತಿ ಬರಹದಲ್ಲೂ ಇದೆ.

courtsey:prajavani.net

https://www.prajavani.net/artculture/book-review/new-book-science-and-atmosphere-682157.html

Leave a Reply