ವಿಡಿಯೊ ಏಕಮ್ಮ- ಚಂದಿರನಿದ್ದಾನೆ

ವಿಭಾ ಮತ್ತು ಪ್ರಣವ್ ಇಬ್ಬರೂ ಗಲಾಟೆ ಮಾಡುತ್ತಿದ್ದರು. ಅವರಿಬ್ಬರ ಅಮ್ಮ ಮಾತ್ರ ಯಾವುದಕ್ಕೂ ಕಿವಿಗೊಡದೆ ಸುಮ್ಮನೆ, ಅವರಿಬ್ಬರ ಬಟ್ಟೆಗಳನ್ನು ಪ್ಯಾಕ್ ಮಾಡುತ್ತಿದ್ದರು. ವಿಭಾ ಹಿರಿಯವಳು, ಪ್ರಣವ್ ಈಕೆಯ ತಮ್ಮ. ಇಬ್ಬರೂ ಅಜ್ಜ-ಅಜ್ಜಿ ಮನೆಗೆ ಹೋಗಲು ತಯಾರಿ ನಡೆಸಿದ್ದರು. ಆದರೆ ಇಬ್ಬರದೂ ಒಂದೇ ಹಟ. ಏನೆಂದರೆ ಅಜ್ಜ-ಅಜ್ಜಿ ಮನೆ ಹಳ್ಳಿಯಲ್ಲಿದ್ದು, ಅಲ್ಲಿ ಯಾವೊಂದು ನೆಟ್‌ವರ್ಕ್ ಕೂಡ ಬರುತ್ತಿರಲಿಲ್ಲ. ಅದಿಲ್ಲದೇ ಕಾರ್ಟೂನ್ ವಿಡಿಯೊ ಹೇಗೆ ನೋಡೋದು ಎಂಬುದು ಅವರಿಬ್ಬರಲ್ಲಿ ಇದ್ದ ಚಿಂತೆ. ಊಟ ಮಾಡುವಾಗ ಯಾವಾಗಲೂ ಇಂತಹ ವಿಡಿಯೊ ನೋಡುವ ಅಭ್ಯಾಸ ಇದ್ದುದರಿಂದ, ವಿಡಿಯೊ ಇರದೆ ಊಟ ಹೇಗೆ ಮಾಡೋದು ಅನ್ನೋದು ದೊಡ್ಡ ಸಮಸ್ಯೆಯಾಗಿತ್ತು. ಅಕ್ಕ ಏನು ಹೇಳುತ್ತಾಳೋ ಅದನ್ನೇ ತಮ್ಮ ಕೂಡ ಪ್ರತಿಪಾದಿಸುವುದು. ತಾಯಿಯು ಇಬ್ಬರನ್ನೂ ಸಮಾಧಾನಪಡಿಸಿ, ಅಜ್ಜಿ ಮಾಡುವ ಚಕ್ಕುಲಿ, ಕೋಡುಬಳೆ ಆಸೆ ತೋರಿಸಿ ಬಸ್ ಹತ್ತಿದರು. ಇಬ್ಬರೂ ಮಕ್ಕಳು ರಜೆ ಮುಗಿಯುವವರೆಗೆ ಅಜ್ಜ-ಅಜ್ಜಿ ಮನೆಯಲ್ಲಿ ಇರಬೇಕು ಎಂದು ಹೇಳಿ, ಒಳ್ಳೆಯ ಮಕ್ಕಳಾಗಿ ಏನೂ ತೊಂದರೆ ನೀಡಬೇಡಿ ಎಂಬ ಸೂಚನೆ ನೀಡಿ, ತಾಯಿ ಅಂದೇ ಪಟ್ಟಣಕ್ಕೆ ಹಿಂದಿರುಗಿದಳು. ಮಕ್ಕಳು, ತಾಯಿ ಹೇಳಿದ ಮಾತಿಗೆ ಮನಸ್ಸಿಲ್ಲದಿದ್ದರೂ ಸುಮ್ಮನೆ ತಲೆಯಾಡಿಸಿದರು. ಅಜ್ಜ-ಅಜ್ಜಿ ಜೊತೆ ಕಾಲ ಕಳೆಯಲು ಸನ್ನದ್ಧರಾದರು. ವಿಭಾಳಿಗಂತೂ ಇಲ್ಲಿ ಆಟ ಆಡೋಕೆ ಪಾರ್ಕ್‌ ಇಲ್ಲ, ಟಿ.ವಿ ಕೆಬಲ್ಲು ಯಾವಾಗ ಕೈಕೊಡುತ್ತೆ ಎಂದು ಹೇಳಲಾಗದು, ಪಟ್ಟಣದಲ್ಲಿ ಪೇರಿಸಿಟ್ಟ ರಾಶಿಗಟ್ಟಲೆ ಆಟಿಕೆ ಸಾಮಾನುಗಳಿವೆ, ಇಲ್ಲಿರುವ ಆಟಿಕೆ ಸಾಮಾನು ಬೆರಳೆಣಿಕೆಯಷ್ಟು ಎಂಬ ಚಿಂತೆ. ಹೇಗಪ್ಪಾ ದಿನಗಳನ್ನು ಕಳೆಯುವುದು ಎಂಬ ಚಿಂತೆಯಲ್ಲೇ ವಿಭಾ ನಿದ್ದೆಗೆ ಜಾರಿದಳು. ಬೆಳಗಾದೊಡನೆ ಹಕ್ಕಿಯ ಚಿಲಿಪಿಲಿ ಕೇಳಿಸಿತು. ಅದಾಗಲೇ, ತಮ್ಮ ಪ್ರಣವ್ ಎದ್ದು ಅಜ್ಜನ ಜೊತೆಗೂಡಿ ಪಕ್ಷಿಗಳಿಗೆ ಅಕ್ಕಿ ಹಾಕುತ್ತಿದ್ದ. ಗುಬ್ಬಿಗಳಲ್ಲದೇ, ಬ್ರಾಹ್ಮಿಣಿ ಮೈನಾ, ಗೊರವಂಕ, ಪಿಕಳಾರ (ಬುಲ್ ಬುಲ್), ಚೊಟ್ಟಿ ಇರುವ ಪಿಕಳಾರ ಎಲ್ಲವೂ ಒಂದೊಂದಾಗಿ ಬಂದು ಯಾರೂ ಇಲ್ಲವೆಂದು ಭಾವಿಸಿ, ಅಜ್ಜ–ಮೊಮ್ಮಗ ಬೀರಿದ್ದ ಅಕ್ಕಿ ಕಾಳುಗಳನ್ನು ಆಯ್ದು ತಿನ್ನುತ್ತಿದ್ದವು. ಅಲ್ಲಿಯೇ ಪಾತ್ರೆಯಲ್ಲಿ ಅವುಗಳಿಗೆಂದೇ ಇಟ್ಟ ನೀರನ್ನು ಕುಡಿದು ಹಾರಿ ಹೋಗುತ್ತಿದ್ದವು. ಕೆಲವು ಪಕ್ಷಿಗಳು ಪಾತ್ರೆಯ ನೀರಿನಲ್ಲಿ ಮಿಂದೆದ್ದು ಖುಷಿಪಡುತ್ತಿದ್ದವು. ಇಂಥ ದೃಶ್ಯಗಳನ್ನು ಇಲ್ಲಿಯವರೆಗೂ ನೋಡಿರದಿದ್ದ ವಿಭಾ ಮತ್ತು ಪ್ರಣವ್ ಕೇಕೆ ಹಾಕಿ ನಲಿದಾಡಿದರು.ಪ್ರಣವ್ ತಾನೂ ಅವುಗಳಂತೆಯೇ ಸ್ನಾನ ಮಾಡುವೆನೆಂದು ಅಜ್ಜ-ಅಜ್ಜಿ ಹತ್ತಿರ ಹೇಳಿದನು! ವಿಭಾ ಅಜ್ಜಿಯ ಜೊತೆಗೂಡಿ ಸ್ವಲ್ಪ ಹೊತ್ತು ರಂಗೋಲಿ ಬಿಡಿಸಿದಳು. ಆಮೇಲೆ ದಿನನಿತ್ಯದ ಕಾರ್ಯಗಳನ್ನು ಮುಗಿಸಿ ಬಂದೊಡನೆಯೇ, ಅಜ್ಜಿ ಇಬ್ಬರು ಮಕ್ಕಳನ್ನು ಹತ್ತಿರ ಕರೆದು ಕೆಲವೊಂದು ಕೆಲಸಗಳನ್ನು ಅವರಿಗೆಂದೇ ವಹಿಸಿಕೊಟ್ಟರು. ಗಿಡಗಳಿಗೆ ನೀರು ಹಾಕುವುದು, ದೇವರ ಪೂಜೆಗಾಗಿ ಸಿದ್ಧಪಡಿಸುವ ಹಾರಕ್ಕೆ ಹೂವು ಮತ್ತು ತುಳಸಿ ದಳಗಳನ್ನು ಕೀಳುವುದು, ಪಕ್ಷಿಗಳಿಗೆಂದು ಇಟ್ಟ ನೀರಿನ ಪಾತ್ರೆಯನ್ನು ಆಗಾಗ ತುಂಬಿಸುತ್ತಿರುವುದು, ತೊಳೆದ ಪಾತ್ರೆಗಳನ್ನು ಒಪ್ಪ ಓರಣವಾಗಿ ಜೋಡಿಸಿಡುವುದು, ಮನೆಗೆ ಬಂದ ಅತಿಥಿಗಳಿಗೆ ನೀರು ಕೊಡುವುದು, ತಮ್ಮ ಆಟದ ಸಾಮಾನುಗಳನ್ನು ಚೊಕ್ಕಟವಾಗಿ ಇಟ್ಟುಕೊಳ್ಳುವುದು, ಮನೆಯಲ್ಲಿ ಸಾಕಿದ ಬೆಕ್ಕು ನಾಯಿಗಳಿಗೆ ಊಟ ಹಾಕುವುದು ಹೀಗೆ ಹತ್ತು ಹಲವಾರು. ಆದರೆ ಇಬ್ಬರು ಮಕ್ಕಳೂ ಅದಕ್ಕೆ ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ನಾ ಮುಂದು ತಾ ಮುಂದು ಎಂದು ಕೆಲಸ ಮಾಡಲು ಬಯಸಿದರು. ಅವುಗಳನ್ನು ಕೆಲಸವೆಂದು ತಿಳಿಯಲಿಲ್ಲ ವಿಭಾ ಮತ್ತು ಪ್ರಣವ್. ಆಟ ಆಡುತ್ತ ಆಡುತ್ತಲೇ ಕೆಲಸವನ್ನೂ ಮುಗಿಸುತ್ತಿದ್ದರು. ಹೀಗೆ ದಿನವಿಡೀ ಆಟವಾಡುತ್ತಿದ್ದರಿಂದ ಚೆನ್ನಾಗಿ ಹಸಿವೆಯಾಗಿ ಅಜ್ಜಿ ಮಡಿದ ಅಡುಗೆಯನ್ನು ಸವಿಯುತ್ತಿದ್ದರು. ಮನೆ ಹತ್ತಿರ ಹಬ್ಬಿ ನಿಂತ ಮಲ್ಲಿಗೆ ಬಳ್ಳಿಯಲ್ಲಿಯೋ, ಅಥವಾ ಅಮೃತ ಬಳ್ಳಿ ಅಥವಾ ಮನಿಪ್ಲಾಂಟ್ ಬಳ್ಳಿಗಳಲ್ಲಿ ಪಿಕಳಾರ ಗೂಡು ಕಟ್ಟಿತೆಂದರೆ ಇವರಿಬ್ಬರಿಗೂ ಅದನ್ನು ಗಮನಿಸುವುದೇ ನಿತ್ಯ ಕಾಯಕ. ಆಟ, ಊಟ ಎಲ್ಲವೂ ಹೊರಗೆಯೇ ನಡೆಯುತ್ತಿತ್ತು. ಸಂಜೆಯಾದೊಡನೆ ಸ್ವಲ್ಪ ಹೊತ್ತು ಅಜ್ಜನ ಜೊತೆ ವಾಯು ವಿಹಾರ. ಆ ಸಮಯದಲ್ಲಿ ಅಜ್ಜ, ಮೊಮ್ಮಕ್ಕಳಿಗೆ ಹೊಸ ಹೊಸ ಪಕ್ಷಿಗಳನ್ನು ತೋರಿಸಿ ಅವುಗಳ ವಿವರಣೆ ನೀಡುತ್ತಿದ್ದರು. ಅಜ್ಜ ಹೇಳುವ ಕಥೆ ಕೇಳುವುದು ಕೂಡ ಅವರ ದಿನಚರಿಯ ಭಾಗವಾಗಿತ್ತು. ಅಜ್ಜಿಯ ಜೊತೆ ದೇವಸ್ಥಾನಕ್ಕೆ ತೆರಳುವುದು ಆಗೀಗ ಇರುತ್ತಿತ್ತು. ರಾತ್ರಿ ಊಟಕ್ಕೆ ಅಜ್ಜಿ ಕೈತುತ್ತು ಕೊಡುವರು. ಮನೆ ಜಗುಲಿಯ ಮೇಲೆ ಕುಳಿತು ಚಂದಿರನನ್ನು ತೋರಿಸುತ್ತ ಕಥೆ ಅಥವಾ ಹಾಡು ಹೇಳುತ್ತಾ ಊಟ ಮಾಡುವ ಕಾರ್ಯಕ್ರಮ ನಡೆಯುತ್ತಿತ್ತು. ಇದನ್ನೆಲ್ಲಾ ನೋಡುತ್ತಾ ಮಾಮೂಲಿಗಿಂತ ಒಂದು ತುತ್ತು ಹೆಚ್ಚು ಊಟ ಹೊಟ್ಟೆಗೆ ಹೋಗುತ್ತಿತ್ತು. ನೋಡುನೋಡುತ್ತಿದ್ದಂತೆ ರಜೆ ಮುಗಿಯುತ್ತ ಬಂತು. ಇಬ್ಬರು ಮಕ್ಕಳೂ ಪಟ್ಟಣಕ್ಕೆ ಹಿಂದಿರುಗುವ ಹಾಗೂ ತಂದೆ ತಾಯಿಯರನ್ನು ಕೂಡುವ ಸಮಯ ಬಂತು. ತಾಯಿ ತನ್ನ ಮಕ್ಕಳನ್ನು ಕರೆದುಕೊಂಡು ಹೋಗಲು ಬಂದಾಗ ನೋಡುತ್ತಾಳೆ, ಇಬ್ಬರ ಮುಖಗಳೂ ಹೊಸ ಹುರುಪಿನಿಂದ ಗೆಲುವಾಗಿದ್ದವು. ಅಲ್ಲದೇ ಇಬ್ಬರೂ ಒಂದೊಂದು ಇಂಚು ಎತ್ತರವಾಗಿದ್ದರು. ತಾಯಿಯು ಅಜ್ಜಿಗೆ ಕೇಳಿದಳು, ‘ಹೇಗಮ್ಮಾ ಊಟ ಮಾಡಿಸಿದೆ ಇಬ್ಬರಿಗೂ? ತುಂಬಾ ತೊಂದರೆ ಕೊಟ್ಟಿರಬೇಕಲ್ಲಾ’. ಅಜ್ಜಿ ನಗುತ್ತ; ‘ಪೇಟೆಗೆ ಹೋದ ನಂತರ ಅವರನ್ನೇ ಕೇಳು’ ಎಂದಳು. ಪಟ್ಟಣಕ್ಕೆ ಹಿಂದಿರುಗಿದ ನಂತರ ತಾಯಿ ಊಟ ಮಾಡಿಸಲು ಇಬ್ಬರನ್ನೂ ಕರೆದಳು. ಕಾರ್ಟೂನ್ ವಿಡಿಯೊ ಮಕ್ಕಳಿಗೆ ತೋರಿಸಲೆಂದು ತಾಯಿ ಮೊಬೈಲ್ ಹಿಡಿದಾಕ್ಷಣ ವಿಭಾ ಹೇಳಿದಳು, ‘ಅಮ್ಮಾ, ವಿಡಿಯೊ ಬೇಡ. ಮೇಲೆ ಟೆರೇಸಿಗೆ ಹೋಗಿ ಚಂದಿರನನ್ನು ನೋಡುತ್ತಾ ನಾವೇ ಊಟ ಮಾಡುವೆವು’ ಎಂದು. ಇದಕ್ಕೆ ದನಿಗೂಡಿಸಿದ ಪ್ರಣವ್, ‘ಅಮ್ಮಾ, ಅಜ್ಜ-ಅಜ್ಜಿ ಮನೇಲಿ ಏನೇನು ಮಾಡಿದೆವೆಂದು ಹೇಳ್ತೇವೆ. ಬಾ ಅಮ್ಮಾ’ ಎಂದ. ವಿಭಾ ಮತ್ತು ಪ್ರಣವ್ ತಾಯಿಯನ್ನು ಎಳೆದು ಟೆರೇಸಿನತ್ತ ಹೆಜ್ಜೆ ಹಾಕಿದರು. ತಾಯಿಯು ಅವರು ಊಟ ಮಾಡುವುದನ್ನು ನೋಡುತ್ತಾ, ಅಲ್ಲಿ ಕಲಿತಿದ್ದ ಹಾಡು, ಕಥೆಗಳನ್ನು ಕೇಳುತ್ತ, ಮಕ್ಕಳಿಬ್ಬರ ಆರೋಗ್ಯ ಉತ್ತಮವಾಗಿದ್ದಲ್ಲದೇ ಅವರ ಸಂವಹನ ಶೈಲಿ, ಕುಳಿತುಕೊಳ್ಳುವ ಮತ್ತು ನಿಲ್ಲುವ ಶಾರೀರಿಕ ಭಂಗಿ, ಮಾತನಾಡುವ ಶೈಲಿ, ಪ್ರಕೃತಿ ಬಗೆಗೆ ಹುಟ್ಟಿದ ಕಾಳಜಿ, ಆತ್ಮವಿಶ್ವಾಸ, ಒಟ್ಟಾರೆಯಾಗಿ ದೈಹಿಕ ಹಾಗೂ ಮಾನಸಿಕವಾಗಿ ಆದ ಸುಧಾರಣೆಯನ್ನು ಮನಗಂಡಳು. ಸಣ್ಣ ಸಣ್ಣ ವಿಷಯಕ್ಕೂ ಕೋಪ, ಹಟ ಮಾಡುತ್ತಿದ್ದ ಮಕ್ಕಳು ಈಗ ಸಂಪೂರ್ಣವಾಗಿ ಬದಲಾಗಿದ್ದರು. ತಾಯಿಯು, ಅಜ್ಜ-ಅಜ್ಜಿಯರಿಗೆ ಮನದಲ್ಲಿಯೇ ಕೃತಜ್ಞತೆ ಸಲ್ಲಿಸಿದಳು. ವಿಭಾ, ‘ಚಂದಮಾಮ ಓಡಿ ಬಾ…’ ಎಂದು ಹಾಡುತ್ತ ಇದ್ದರೆ, ಪ್ರಣವ್ ಅದಕ್ಕೆ ತಕ್ಕಂತೆ ಡಾನ್ಸ್ ಮಾಡುತ್ತ ಒಂದೊಂದು ತುತ್ತನ್ನು ತಿನ್ನುತ್ತಿದ್ದ!

courtsey:prajavani.net

https://www.prajavani.net/artculture/short-story/video-and-kids-663008.html

Leave a Reply