ನೋವು ನಿವಾರಕ ರಾಗಗಳು

ನೋವು ನಿವಾರಕಗಳ ಯುಗ ಇದು. ಸ್ಟಿರಾಯಿಡ್ಸ್‌, ಆ್ಯಂಟಿಬಯೋಟಿಕ್ಸ್‌, ಮುಲಾಮು, ಮಾತ್ರೆ, ಕ್ಯಾಪ್ಸೂಲು, ಪೇಯ, ಪುಡಿ, ತೈಲಗಳು ಬದುಕಿನ ಅವಿಭಾಜ್ಯ ಅಂಗವೇ ಆಗಿವೆ. ನಿದ್ರೆ ಮಾಡಲೂ ಮಾತ್ರೆ ಬೇಕು, ಹಾಸಿಗೆಯಿಂದ ಮೇಲೇಳಲೂ ಗುಳಿಗೆ ಬೇಕು. ಎತ್ತರಕ್ಕೆ ಬೆಳೆಯಲು, ದಪ್ಪವಾಗಲು, ಸಣ್ಣಗಾಗಲು, ಕೂದಲು ಬೆಳೆಸಿಕೊಳ್ಳಲು ಮಾತ್ರೆ ಬಂದಿವೆ. ಹೆಣ್ತನ, ಗಂಡಸ್ತನಕ್ಕೆ ಥರಾವರಿ ತೈಲಗಳಿವೆ. ಸೊಂಟ, ತಲೆ, ಮಂಡಿನೋವು, ಮೈಕೈ ನೋವಿಗೆ ಲಕ್ಷಾಂತರ ಮುಲಾಮುಗಳಿವೆ. ನೋವು ನಿವಾರಕಗಳ ಮಾರುಕಟ್ಟೆ ಮಾಫಿಯಾ ರೂಪ ಪಡೆದಿದೆ. ವೈದ್ಯಕೀಯ ವಿಜ್ಞಾನದಲ್ಲಿ ಅಡ್ಡಪರಿಣಾಮಗಳಿಲ್ಲದ ಔಷಧಿಯೇ ಇಲ್ಲ. ನೋವಿಗೆ ತಾತ್ಕಾಲಿಕ ಶಮನ ನೀಡುವ ಈ ಪೇನ್‌ ಕಿಲ್ಲರ್‌ಗಳು ಮನುಷ್ಯ ಜೀವಿಯ ಉತ್ಸಾಹವನ್ನು ನಿತ್ಯವೂ ಕೊಲ್ಲುತ್ತಿವೆ. ದೇಹದಲ್ಲಿರುವ ನೈಸರ್ಗಿಕ ಜೀವಕೋಶಗಳನ್ನು ಕುಗ್ಗಿಸಿ ದೇಹವನ್ನು ರೋಗಗಳ ಗೂಡಾಗಿ ಮಾಡುತ್ತಿವೆ. ಅಡ್ಡ ಪರಿಣಾಮಗಳಿಲ್ಲದ ಮದ್ದು ಎಲ್ಲಾದರೂ ಇದೆಯೇ? ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಉತ್ತರದ ಹುಡುಕಾಟದಲ್ಲಿ ಹಲವು ಸಂಶೋಧನೆಗಳೇ ನಡೆದಿವೆ. ಬದಲಿ ಚಿಕಿತ್ಸಾ ವಿಧಾನಗಳು (ಆಲ್ಟರ್‌ನೇಟಿವ್‌ ಮೆಡಿಸಿನ್‌) ಹುಟ್ಟಿಕೊಂಡಿವೆ. ಆ ಬದಲಿ ಚಿಕಿತ್ಸಾ ವಿಧಾನದಲ್ಲಿ ‘ಸಂಗೀತ ಚಿಕಿತ್ಸೆ’ಯೂ ಒಂದು. ನೋವು ನಿವಾರಕಗಳನ್ನು ಸೇವಿಸುವ ಬದಲು ‘ನೋವು ನಿವಾರಕ ರಾಗ’ಗಳನ್ನು ಆಸ್ವಾದಿಸಿ ನೋವು ಮರೆಯಲು ಸಾಧ್ಯ. ಸ್ವರ ಸ್ಥಾನಗಳಲ್ಲಿರುವ ವೈದ್ಯಕೀಯ ಗುಣ (ಥೆರಪ್ಯಾಟಿಕ್‌)ದಿಂದ ರೋಗ ನಿವಾರಣೆ ಸಾಧ್ಯ ಎಂದು ಹಲವು ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ. ಸಂಗೀತದ ವೈದ್ಯಕೀಯ ಶಕ್ತಿಯ ಬಗ್ಗೆ ಹಲವು ಸಂಶೋಧನೆ ನಡೆದಿವೆ. ಜಗತ್ತಿನ ಯಾವ ಸಂಗೀತ ಪ್ರಕಾರದಲ್ಲೂ ಇಲ್ಲದ ಮನೋಸಂಗಾತ ಶಕ್ತಿ ಭಾರತೀಯ ಸಂಗೀತದಲ್ಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ನಮ್ಮ ಉತ್ತರಾದಿ, ದಕ್ಷಿಣಾದಿ ಸಂಗೀತದ ಸ್ವರ, ಅಲಂಕಾರ, ವರ್ಣ, ಗಮಕಗಳಲ್ಲಿ ಮನಸ್ಸನ್ನು ವಿರೇಚನಗೊಳಿಸುವ ಕಂಪನಗಳನ್ನು ಗುರುತಿಸಿದ್ದಾರೆ.‌ ‘ರೋಗಗಳ ಹುಟ್ಟಿಗೆ ಅಸ್ವಸ್ಥ ಮನಸ್ಥಿತಿಯೇ ಕಾರಣ. ಅಸಮಾಧಾನ, ಒತ್ತಡಕ್ಕೆ ಸಂಗೀತ ಉತ್ತಮ ಮದ್ದು. ಭಾಷೆ ಹುಟ್ಟವುದಕ್ಕೂ ಮೊದಲು ನಾದ ಹುಟ್ಟಿತ್ತು. ಸಂಗೀತಗಾರರು ಶತಶತಮಾನದಿಂದಲೂ ಸಂಗೀತ ಚಿಕಿತ್ಸೆಯ ಬಗ್ಗೆ ಹೇಳುತ್ತಲೇ ಬಂದಿದ್ದರು. ಆದರೆ ಇತ್ತೀಚೆಗೆ ವಿಜ್ಞಾನಿಗಳು, ವೈದ್ಯರು ಈ ಬಗ್ಗೆ ಆಸಕ್ತಿ ಮೂಡಿಸಿಕೊಂಡಿದ್ದಾರೆ’ ಎಂದು ಹಿರಿಯ ವೈಣಿಕ ರಾ. ಸತ್ಯನಾರಾಯಣ ಹೇಳುತ್ತಾರೆ. ರೋಗ ಲಕ್ಷಣಕ್ಕೆ ರಾಗ ಲಕ್ಷಣ: ರೋಗ ಪತ್ತೆಗೆ ರೋಗ ಲಕ್ಷಣ ಶಾಸ್ತ್ರಜ್ಞರ (ಪೆಥಾಲಜಿಸ್ಟ್‌) ವಿಶ್ಲೇಷಣೆ ಬಲುಮುಖ್ಯ. ಅದರಂತೆ ರಾಗ ಲಕ್ಷಣ ಗುರುತಿಸಿ ಸಂಗೀತ ಚಿಕಿತ್ಸೆ ನೀಡುವ ಹಲವು ಮಂದಿ ವೈದ್ಯರು ಇದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪುರಂದರದಾಸರು ಹಾಗೂ ಮುತ್ತುಸ್ವಾಮಿ ದೀಕ್ಷಿತರ ಹಲವು ಕೃತಿಗಳಲ್ಲಿ ವೈದ್ಯಕೀಯ ಶಕ್ತಿ ಇರುವುದನ್ನು ಗುರುತಿಸಲಾಗಿದೆ. ಮಿದುಳಿನ ಸಮಸ್ಯೆಯಿಂದ ಬಳಲುವವರಿಗೆ, ನೆನಪು ಹಾರುವ ಸಮಸ್ಯೆ ಇರುವವರಿಗೆ ‘ಹಿಂದೋಳ ರಾಗ ಚಿಕಿತ್ಸೆ’ ಪ್ರಮುಖ ಪಾತ್ರ ವಹಿಸುತ್ತದೆ. ಹಿಂದೋಳದಲ್ಲಿರುವ ಗ2, ನಿ2 ಸ್ವರ ಸ್ಥಾನಗಳ ಬದಲಾವಣೆ ಮನಸ್ಸಿನ ಭಾವನೆಗಳನ್ನು ಉದ್ದೀಪನಗೊಳಿಸುತ್ತದೆ ಎಂದು ಸಂಗೀತಗಾರರು ಹೇಳುತ್ತಾರೆ. ನಿದ್ರೆ ಸಮಸ್ಯೆ ಇರುವವರಿಗೆ ‘ಕಾಪಿ’, ಖಿನ್ನತೆಯಿಂದ ಬಳಲುವವರಿಗೆ ಕೀರವಾಣಿ, ಹೃದಯ ಸಂಬಂಧಿ ಕಾಯಿಲೆಗಳಿಗೆ ಚಾರುಕೇಶಿ, ಒತ್ತಡ ಸಮಸ್ಯೆ ಇರುವವರಿಗೆ ಆನಂದ ಭೈರವಿ, ಬಲಹೀನತೆಗೆ ಶಿವರಂಜಿನಿ, ತಲೆನೋವಿಗೆ ರೇವತಿ, ಒತ್ತಡ ನಿವಾರಣೆಗೆ ಖರಹರಪ್ರಿಯ ರಾಗಗಳು ಉತ್ತಮ ಮದ್ದೆನಿಸಿರುವುದನ್ನು ಸಂಗೀತಾಸಕ್ತ ವೈದ್ಯರು ಗುರುತಿಸಿದ್ದಾರೆ. ‘ಎರಡು ವರ್ಷಗಳ ಹಿಂದೆ ಆಂಧ್ರಪ್ರದೇಶದಲ್ಲಿ ವಿಪರೀತ ಬರವಿತ್ತು. ವಿಜಯವಾಡದ ಕನಕದುರ್ಗಮ್ಮ ಗುಡಿಯಲ್ಲಿ ನಾನು ಭೈರವಿ ರಾಗದ ಅಂಬಾಕಾಮಾಕ್ಷಿ ಸ್ವರಜತಿಯನ್ನು 108 ಬಾರಿ ನುಡಿಸಿದೆ, ಸಂಜೆಯೇ ಮಳೆ ಸುರಿಯಿತು. ಸಂಗೀತದಿಂದಲೇ ಮಳೆ ಸುರಿಯಿತು ಎಂಬುದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ಅದರಂತೆ ಸಂಗೀತ ಚಿಕಿತ್ಸೆಯಲ್ಲೂ ನಂಬಿಕೆ ಇರಬೇಕು, ಆಗ ಖಂಡಿತಾ ಫಲ ದೊರೆಯುತ್ತದೆ. ಓಂಕಾರ, ಶ್ಲೋಕ ಪಠಣ, ಸೌಂದರ್ಯ ಲಹರಿ ಆಸ್ವಾದದಲ್ಲೂ ಚಿಕಿತ್ಸಕ ಗುಣವಿದೆ. ಅಣ್ಣಮಾಚಾರಿ ಅವರ ಎಲ್ಲಾ ಕೃತಿಗಳಲ್ಲೂ ವೈದ್ಯಕೀಯ ಗುಣವಿದೆ’ ಎಂದು ಖ್ಯಾತ ವೈಲಿನ ವಿದುಷಿ ಕನ್ಯಾಕುಮಾರಿ ವಿವರಿಸುತ್ತಾರೆ. ಭಾವಕ್ಕೆ ಹಿಂದೂಸ್ತಾನಿ: ಭಕ್ತಿ ಪ್ರಧಾನ ಕರ್ನಾಟಕ ಶಾಸ್ತ್ರೀಯ ಸಂಗೀತ, ಭಾವವೇ ವಸ್ತುವಾದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಎರಡರಲ್ಲೂ ಮಾಧುರ್ಯವಿದೆ. ದೇವರ ಅನುಸಂಧಾನದೊಂದಿಗೆ ಸಂಗೀತ ಕೇಳಬಯಸುವವರು ಕರ್ನಾಟಕ ಸಂಗೀತ ಕೇಳುತ್ತಾರೆ. ಕೇವಲ ಸಂಗೀತವನ್ನು ಆಸ್ವಾದಿಸಬಯಸುವವರು ಹಿಂದೂಸ್ತಾನಿಗೆ ಮಾರು ಹೋಗುತ್ತಾರೆ. ‘ರಾಗ ಮ್ಯೂಸಿಕ್‌ ಥೆರಪಿ’ ಸಂಸ್ಥೆ ಹಿಂದೂಸ್ತಾನಿಯ ಹಲವು ರಾಗಗಳಲ್ಲಿರುವ ವೈದ್ಯಕೀಯ ಶಕ್ತಿಯನ್ನು ಗುರುತಿಸಿದೆ. ಅಜೀರ್ಣ, ಗ್ಯಾಸ್ಟ್ರಿಕ್‌ ಸಮಸ್ಯೆಗೆ ಪೂರಿಯಾ ಧನಶ್ರೀ, ಮಧುಮೇಹ ನಿಯಂತ್ರಣಕ್ಕೆ ಭಾಗೇಶ್ರೀ, ಒತ್ತಡ, ಮಿದುಳಿನ ಸಮಸ್ಯೆ ನಿವಾರಣೆಗೆ ದರ್ಬಾರಿ ಕಾನಡ, ಅಧಿಕ ರಕ್ತದೊತ್ತಡಕ್ಕೆ ತೋಡಿ, ಆಹಿರ್‌ ಭೈರವ್‌, ಮಾಲ್‌ಕೌಂಸ್‌. ಹಲ್ಲು ನೋವು, ಅತಿಯಾದ ಶೀತ ನಿವಾರಣೆಗೆ ಭೈರವಿ, ಅಸ್ತಮಾ ನಿವಾರಣೆಗೆ ಮಲ್ಹಾರ್‌, ರಕ್ತದ ಶುದ್ಧೀಕರಣಕ್ಕೆ ಮಾರ್ವಾ ರಾಗಗಳು ಸಹಾಯಕವಾಗುತ್ತವೆ ಎಂದು ಸಂಸ್ಥೆ ಸಂಶೋಧಿಸಿದೆ. ಮಕ್ಕಳ ನಿದ್ರೆಗೆ ಜಲತರಂಗ್‌: ಪಿಂಗಾಣಿ ಬಟ್ಟಲು ಹಾಗೂ ನೀರಿನಿಂದ ನಾದ ಹೊಮ್ಮಿಸುವ ಅಪರೂಪದ ವಾದ್ಯ ‘ಜಲತರಂಗ’ದಲ್ಲಿ ವೈದ್ಯಕೀಯ ಶಕ್ತಿ ಇದೆ. ಅತ್ಯಂತ ಆಪ್ತವಾಗಿರುವ ಜಲತರಂಗ ಮಕ್ಕಳ ಮನಸ್ಸು ಆಕರ್ಷಿಸುತ್ತದೆ. ಮಕ್ಕಳ ನಿದ್ರೆ ಸಮಸ್ಯೆಗೆ ಜಲತರಂಗ್‌ ಉತ್ತಮ ಮದ್ದು ಎಂಬ ಅಭಿಪ್ರಾಯವಿದೆ. ‘ಮನೆಯಲ್ಲಿದ್ದರೆ ನನ್ನನ್ನು ಮಂಡಿ ನೋವು ಕಾಡುತ್ತದೆ. ಆದರೆ ಜಲತರಂಗ್‌ ಜೊತೆ ಕುಳಿತರೆ ಎಲ್ಲಾ ನೋವುಗಳು ಮಾಯವಾಗುತ್ತವೆ. ನಮ್ಮ ಸಂಬಂಧಿಕರ ಮನೆಯಲ್ಲಿ ಮಕ್ಕಳು ಹಠ ಮಾಡಿದರೆ ನನ್ನ ಜಲತರಂಗ್‌ ಸಿ.ಡಿ ಹಾಕಿ ಕೇಳಿಸುತ್ತಾರೆ’ ಎಂದು ಜಲತರಂಗ್‌ವಾದಕಿ ವಿದುಷಿ ಶಶಿಕಲಾ ದಾನಿ ಹೇಳುತ್ತಾರೆ. ಸಂಗೀತ ಚಿಕಿತ್ಸೆ ಇಂದು ನಿನ್ನೆಯದಲ್ಲ, ಪ್ರಾಚೀನ ಕಾಲದಿಂದಲೂ ಇದೆ. ಆಯುರ್ವೇದಾಚಾರ್ಯ ಚರಕ ‘ದೇಹ, ಇಂದ್ರಿಯ, ಪ್ರಜ್ಞೆ, ಆತ್ಮಗಳ ಸಂಗಮಿಸುವ ಸಂಗೀತಕ್ಕೆ ಚಿಕಿತ್ಸಕ ಗುಣವಿದೆ’ ಎಂದು ಹೇಳಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಚಿಕಿತ್ಸಕ ಗುಣ ಕಂಡವರು ವಿದುಷಿ ಎನ್‌.ರಾಜಂ ;ನುಡಿಸಿರುವ ‘ದರ್ಬಾರಿ ಕಾನಡ’ ಪಿಟೀಲು ನಾದದಿಂದ ಪಶ್ಚಿಮ ಬಂಗಾಳದ ಯುವತಿ ಸಂಗೀತಾ ದಾಸ್‌ ಕೋಮಾ ಸ್ಥಿತಿಯಿಂದ ಹೊರ ಬಂದ ಸುದ್ದಿ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ಕೋಲ್ಕತ್ತದ ಎಸ್‌ಎಸ್‌ಕೆಎಂ ಆಸ್ಪತ್ರೆ ವೈದ್ಯ ಡಾ.ಸಂದೀಪ್‌ಕುಮಾರ್‌ ಕಾರ್‌ ಅವರ ಸ್ವರ ಚಿಕಿತ್ಸೆ ಫಲ ಕೊಟ್ಟಿದ್ದು ಸದ್ಯ ಸಂಗೀತಾ ದಾಸ್‌ ಕಾಲೇಜಿಗೆ ತೆರಳುತ್ತಿದ್ದಾರೆ. ಸ್ವತಃ ಪಿಟೀಲುವಾದಕರಾದ ವೈದ್ಯ ಸಂದೀಪ್‌ ಕಾರ್‌ ಇತ್ತೀಚೆಗೆ ಇನ್ನೊಂದು ಸಾಧನೆ ಮೆರೆದಿದ್ದಾರೆ. ಪಾರ್ಶ್ವವಾಯುವಿನಿಂದ ಕೋಮಾ ತಲುಪಿದ್ದ ಜನಾರ್ಧನ ಭಟ್ಟಾಚಾರ್ಯ ಎಂಬ 64 ವರ್ಷದ ವೃದ್ಧರಿಗೆ ಅದೇ ‘ದರ್ಬಾರಿ ಕಾನಡ’ ರಾಗ ಚಿಕಿತ್ಸೆ ನೀಡಿ ಕೋಮಾದಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಜನಾರ್ಧನ ಭಟ್ಟಾಚಾರ್ಯ, ಸಂಗೀತಾ ದಾಸ್ ‘ಜನಾರ್ದನ ಭಟ್ಟಾಚಾರ್ಯ ಅವರು ತ್ರಿಪುರ ರಾಜ್ಯದ ಅಗರ್ತಲ ನಿವಾಸಿ. ನಿವೃತ್ತ ಗೆಜೆಟೆಡ್‌ ಅಧಿಕಾರಿಯಾಗಿರುವ ಅವರು ನಮ್ಮ ಆಸ್ಪತ್ರೆಗೆ ಅವರು ಏರ್‌ಲಿಫ್ಟ್‌ ಆಗಿದ್ದರು. ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸದ ಕಾರಣ ಅವರಿಗೆ ಸ್ವರ ಚಿಕಿತ್ಸೆ ನೀಡಲು ನಿರ್ಧರಿಸಿದೆವು. ಕೆಲವೇ ದಿನಗಳಲ್ಲಿ ಚಿಕಿತ್ಸೆಗೆ ಸ್ಪಂದಿಸಿದರು. 2015ರಿಂದ 34 ರೋಗಿಗಳು ನನ್ನ ಸ್ಪರ ಚಿಕಿತ್ಸೆಗೆ ಸ್ಪಂದನೆ ನೀಡಿದ್ದಾರೆ. ರೋಗಿಯನ್ನು ಬದುಕಿಸುವುದು ಕಷ್ಟ ಎನ್ನುವಂತಹ ಪರಿಸ್ಥಿತಿಯಲ್ಲಿ ಸ್ವರೌಷಧ ಸಂಜೀವಿನಿಯಂತೆ ಕೆಲಸ ಮಾಡಿದೆ’ ಎಂದು ಡಾ.ಸಂದೀಪ್‌ಕುಮಾರ್‌ ಕಾರ್‌ ತಿಳಿಸಿದರು. ಹೈದರಾಬಾದ್‌ ಮೂಲದ ‘ಸಾಮಗಾನ ಧನ್ವಂತರಿ ಟ್ರಸ್ಟ್‌’ ಹಲವು ವರ್ಷಗಳಿಂದ ಸಂಗೀತ ಚಿಕಿತ್ಸೆ ಕುರಿತು ಸಂಶೋಧನೆ ನಡೆಸುತ್ತಿದೆ. ಅವರು ನಡೆಸುವ ಸಂಗೀತ ಕಾರ್ಯಕ್ರಮಗಳಿಗೆ ಮೊಬೈಲ್‌ ಫೋನ್‌ ತರುವಂತಿಲ್ಲ. ಚಿಕಿತ್ಸಕ ಗುಣವುಳ್ಳ ರಾಗಗಳನ್ನೇ ಆಯ್ಕೆ ಮಾಡಲಾಗಿರುತ್ತದೆ. ಸಂಗೀತ ಕೇಳುವ ಪ್ರತಿಯೊಬ್ಬರೂ ಸಮ್ಮೋಹನಗೊಂಡು ಹೊಸ ಅನುಭವ ಪಡೆಯುತ್ತಾರೆ. ಇಲ್ಲಿ ದೇಶದ ಪ್ರಖ್ಯಾತ ಪಂಡಿತ, ವಿದ್ವಾಂಸರು ಸಂಗೀತದ ರಸದೌತಣ ನೀಡಿದ್ದಾರೆ. ಕೇರಳದ ‘ಕಲ್ಲಿಕೋಟೆ ಡಾಕ್ಟರ್‌ ಅಸೋಸಿಯೇಷನ್‌’ ಸದಸ್ಯರು ಪ್ರತಿ ವರ್ಷ ಸಂಗೀತ ಚಿಕಿತ್ಸೆಯ ಬಗ್ಗೆ ವಿಚಾರ ಸಂಕಿರಣ ಆಯೋಜಿಸುತ್ತಾರೆ. ಗಾಯನ–ವಾದ್ಯ ಸಂಗೀತದ ಜೊತೆ ಮಾತುಕತೆ ನಡೆಸುತ್ತಾರೆ. ದೇಶದ ಪ್ರಖ್ಯಾತ ಸಂಗೀತಗಾರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಧಾರವಾಡದ ಖ್ಯಾತ ಸಿತಾರ್‌ ವಾದಕ ಪಂ.ರಫೀಕ್‌ ಪ್ರತೀ ವರ್ಷ ಈ ಸಂಗೀತ ಕಮ್ಮಟದಲ್ಲಿ ಭಾಗವಹಿಸುತ್ತಾರೆ. ‘ಸಂಗೀತವನ್ನು ಪ್ರೀತಿಸುವ ವೈದ್ಯರ ಸಂಘಟನೆ ಹಲವು ವರ್ಷಗಳಿಂದ ರಾಗ ಚಿಕಿತ್ಸೆಯ ಸಂಶೋಧನೆ ನಡೆಸುತ್ತಿದೆ. ಮೂರು ತಿಂಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಮಿಯಾ ಮಲ್ಹಾರ್‌, ಯಮನ್‌ ನುಡಿಸಿ ಬಂದೆ’ ಎಂದು ಪಂ.ರಫೀಕ್‌ ಖಾನ್‌ ತಿಳಿಸಿದರು. ಇದನ್ನೂ ಓದಿ:‘ಸಂಗೀತಕ್ಕೆ ನೋವು ಮರೆಸುವ ಶಕ್ತಿ’ ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಲವು ವಾದ್ಯಗಳ ಪಾರಂಗತರಾಗಿದ್ದು ತಾವೇ ರಚಿಸಿ, ರಾಗ ಸಂಯೋಜನೆ ಮಾಡಿರುವ ಹಲವು ದೇವರ ನಾಮ, ಕೃತಿಗಳಲ್ಲಿ ಚಿಕಿತ್ಸಕ ಗುಣವಿದೆ. ದೇಶ–ವಿದೇಶಗಳಲ್ಲಿ ಅವರು ಸಂಗೀತ ಚಿಕಿತ್ಸಾ ಶಿಬಿರ ನಡೆಸಿದ್ದಾರೆ.ಹೊಸ ತಲೆಮಾರಿನ ಸಂಗೀತ ಕಲಾವಿದ ಹರ್ಷ (ಸರಿಗಮಪ ಖ್ಯಾತಿ) ಮೈಸೂರಿನಲ್ಲಿ ‘ರಾಗಾರೋಗ್ಯ’ ಕಾರ್ಯಕ್ರಮ ಆಯೋಜಿಸುವ ಮೂಲಕ ಔಷಧೀಯ ಗುಣವುಳ್ಳ ರಾಗಗಳನ್ನು ಕೇಳುಗರಿಗೆ ಉಣಬಡಿಸುತ್ತಿದ್ದಾರೆ.

author- ಎಂ.ಎನ್‌.ಯೋಗೇಶ್‌

https://www.prajavani.net/artculture/music/pain-killer-tunes-675071.html‌

courtsey:prajavani.net

Leave a Reply