ಪೆಟ್ಲು ಎಂಬ ಆಟಿಕೆ
ಗ್ರಾಮೀಣ ಮನರಂಜನೆಯ ಆಟಿಕೆಗಳಲ್ಲಿ ‘ಪೆಟ್ಲು’ಎಂಬ ಆಟದ ಸಾಮಾನು ಮಕ್ಕಳಿಗೆ ಬಹಳ ಖುಷಿ ಕೊಡುವ ಒಂದು ಪರಿಕರ. ಒಂದು ಅಡಿ ಉದ್ದ, ನಾಲ್ಕು, ನಾಲ್ಕೂವರೆ ಇಂಚು ವ್ಯಾಸದ ಚಿಕ್ಕ ಬಿದಿರು ಅಚಿಡಿಯಿಂದ ತಯಾರಾಗುವ ಪೆಟ್ಲು ಒಂದು ರೀತಿಯಲ್ಲಿ ಬಂದೂಕಿನಂತೆ ಕೆಲಸ ಮಾಡುತ್ತದೆ. ಇದರಲ್ಲಿ ಎರಡು ಭಾಗಗಳಿರುತ್ತವೆ. ಒಂದು, ಬಿದಿರಿನ ಕೊಳವೆಯ ಭಾಗ, ಮತ್ತೊಂದು, ಮರದಿಂದ ತಯಾರಾದ ಜಗ ಎಂದು ಕರೆಯುವ, ಒಂದು ತೆಳುವಾದ ಕಡ್ಡಿ. ಇದಕ್ಕೆ ಹಿಡಿಕೆಯನ್ನು ಅಳವಡಿಸಿರುತ್ತಾರೆ. ಮೊದಲು ಬಿದಿರಿನ ಕೊಳವೆಯ ಮುಂಭಾಗದಲ್ಲಿ ಜುಮ್ಮನಕಾಯಿಯನ್ನು(ಮಲೆನಾಡಿನ ಪರಿಸರದಲ್ಲಿ ಬೆಳೆಯುವ ಒಂದು ಜಾತಿಯ ಕಾಡು ಮರದ ಕಾಯಿ) ಇಟ್ಟು, ಕೊಳವೆಯ ತುದಿ ಭಾಗದವರೆಗೂ ಮರದಿಂದ ತಯಾರಿಸಿದ ಕೊಳವೆಯ ಒಳ ತೂರಿಸುವ ಕಡ್ಡಿಯ (ಗಜ) ಸಹಾಯದಿಂದ ತಳ್ಳಲಾಗುತ್ತದೆ. ನಂತರ ಮತ್ತೊಂದು ಕಾಯಿಯನ್ನು ಮುಂಭಾಗದಲ್ಲಿ ಇಟ್ಟು, ಹಿಂದಿನಂತೆಯೇ ಒಳ ತೂರಿಸುವ ಕಡ್ಡಿಯ (ಗಜ) ಸಹಾಯದಿಂದ ಮತ್ತೊಮ್ಮೆ ಜೋರಾಗಿ ತಳ್ಳಬೇಕು. ಈ ಒತ್ತಡದ ಕ್ರಿಯೆಯಿಂದ ಎರಡೂ ಕಾಯಿಯ ಮಧ್ಯದಲ್ಲಿರುವ ಗಾಳಿ, ಕೊಳವೆಯ ತುದಿಯ ಕಾಯಿಯನ್ನು ರಭಸದಿಂದ ಹೊರ ಚಿಮ್ಮಿಸುತ್ತದೆ. ಆಗ ಪಟಾರ್ ಎಂಬ ಶಬ್ದ ಬರುತ್ತದೆ.
ಪೆಟ್ಲಿನಿಂದ ಹೊರಡುವ ಈ ವಿಶಿಷ್ಟ ಶಬ್ದ ಮಕ್ಕಳ ಮನರಂಜಿಸುವುದಲ್ಲದೇ, ಒಂದು ನಿರ್ದಿಷ್ಟ ಕಾಯಿಯನ್ನು ಚಿಮ್ಮಿಸುವ ಕುಶಲತೆಯನ್ನು ಕಲಿಯುವುದಕ್ಕೂ ಕೂಡಾ ನೆರವಾಗುತ್ತದೆ. ಇದರಿಂದ ಮಕ್ಕಳಲ್ಲಿ ಗುರಿಯ ಕುರಿತಾದ ಸ್ಪಷ್ಟತೆ ಮೂಡುತ್ತದೆ. ಜುಮ್ಮನ ಕಾಯಿಯ ಬದಲು ಕೆಸುವಿನ ಎಲೆಯನ್ನು ಸಹ ಬಳಸಿ ಶಬ್ದದ ಆನಂದವನ್ನು ಮಕ್ಕಳು ಆಸ್ವಾದಿಸುತ್ತಾರೆ. ಮಲೆನಾಡಿನಲ್ಲಿ ಮಳೆಯ ಅಬ್ಬರ ಹೆಚ್ಚು. ಹೀಗಾಗಿ ಒಳಾಂಗಣ ಆಟದ ಭಾಗವಾಗಿ ಒಂದೆಡೆ ಕುಳಿತು ಪೆಟ್ಲು ಹೊಡೆಯುವುದು ಒಂದು ಬಗೆಯ ಮೋಜು…! ಈ ಸರಳ ಸುಲಭ ಸಾಧನ ಹೊಲ, ಗದ್ದೆಗಳಲ್ಲಿ ಬೆಳೆದ ಬೆಳೆಗಳಿಗೆ ಅಂಗಳದಲ್ಲಿ ಬಿಸಿಲಿಗೆ ಒಣಗಲು ಹಾಕಿದ ಧಾನ್ಯಗಳಿಗೆ ದಾಳಿ ಮಾಡುವ ಪಕ್ಷಿಗಳನ್ನು ಓಡಿಸುವಲ್ಲಿ ಕೂಡಾ ಬಳಕೆಯಾಗುತ್ತದೆ. ಅಪಾಯಕಾರಿಯಲ್ಲದ , ಪ್ರಾಣಹಾನಿ ಮಾಡದೆ ಈ ಆಟದ ಪರಿಕರ ಪರಿಸರ ಸ್ನೇಹಿಯೂ ಹೌದು.
ಹೊಸ್ಮನೆ ಮುತ್ತು